ಯಯಾತಿ
ಪುರಾಣ ಕಥೆಗಳಲ್ಲಿ ಅದರಲ್ಲೂ ಭಾಗವತದ ಕಥೆಗಳಲ್ಲಿ ಬರುವ ಪುರೂರವ ಸುಪ್ರಸಿದ್ಧ ಸಾಮ್ರಾಟ. ಈತನ ಮಗ ನಹುಷ ಭಾರತದಲ್ಲಿ ಇತಿಹಾಸ ಪುರುಷನೆಂದು ಕೀರ್ತಿ ಪಡೆದವನು. ನಹುಷನ ಮಗನೇ ಯಯಾತಿ. ತುಂಬಾ ಸುಂದರ ಪುರುಷ, ಧಾರ್ಮಿಕ ಮನೋಭಾವಿ. ಪ್ರಜಾವತ್ಸಲನೆಂದು ಕೀರ್ತಿ ಪಡೆದಿದ್ದ.
ದೈತ್ಯರ ರಾಜಗುರು ಶುಕ್ರಾಚಾರ್ಯ ದೇವತೆಗಳ ಗುರು ಎನಿಸಿದ ಬೃಹಸ್ಪತಿ ಆಚಾರ್ಯರಷ್ಟೇ ಖ್ಯಾತನೆನಿಸಿದ್ದ. ಈತನ ಮಗಳು ದೇವಯಾನಿ. ಬ್ರಾಹ್ಮಣ ಕುವರಿ ಆದರೂ ಸೌಂದರ್ಯ ಶೀಲತೆಯಲ್ಲಿ ರಾಜಕುಮಾರಿಯರಿಗಿಂತಲೂ ಕಡಿಮೆ ಇರಲಿಲ್ಲ.
ಶರ್ಮಿಷ್ಠೆ ವೃಷವರ್ಷ ರಾಜನ ಮಗಳು ರಾಜಕುಮಾರಿಯ ಸಕಲ ಸದ್ಗುಣಗಳನ್ನು ಹೊಂದಿದ್ದಳು. ಮಿಗಿಲಾಗಿ ಸ್ವಾಭಿಮಾನಿ. ತನ್ನ ಆತ್ಮಗೌರವದ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಳು. ದೇವಯಾನಿ, ಶರ್ಮಿಷ್ಠೆ ಈರ್ವರೂ ಅಚ್ಚುಮೆಚ್ಚಿನ ಗೆಳತಿಯರು, ಸಮವಯಸ್ಕರು. ಸಕಲ ರೀತಿಯಲ್ಲೂ ಸಾಮರಸ್ಯತೆಯನ್ನು ಹೊಂದಿದ್ದರು. ಒಂದು ಬಾರಿ ಈರ್ವರೂ ನಲಿಯುತ್ತಾ ರಾಜೋದ್ಯಾನದಲ್ಲಿ ವಿಹರಿಸತೊಡಗಿದರು. ಕೆಲಕಾಲದ ನಂತರ ಅಲ್ಲೇ ಇದ್ದ ಸಿಹಿ-ಸವಿನೀರಿನ ಕೊಳದಲ್ಲಿ ಮಿಂದು ಬರಲು ಅಪೇಕ್ಷಿಸಿದರು. ತಮ್ಮ ದೇಹದ ಮೇಲಿದ್ದ ವಸ್ತ್ರಗಳನ್ನು ಕಳಚಿಟ್ಟು, ಕೊಳದ ನೀರಿನಲ್ಲಿಳಿದು ಜಲಕ್ರೀಡೆಯಲ್ಲಿ ತೊಡಗಿದರು.
ಅದೇ ಸಮಯಕ್ಕೆ ಅದೇ ಸ್ಥಳಕ್ಕೆ ಪಾರ್ವತಿ ಪರಮೇಶ್ವರರು ಬರುತ್ತಿರುವುದನ್ನು ಕಂಡರು. ಲಜ್ಜಿತರಾಗಿ ಬೇಗ ಬೇಗ ಕೊಳದಿಂದ ಹೊರಬಂದರು. ವಸ್ತ್ರಗಳನ್ನು ಧರಿಸಿ ಹಿಂದಿರುಗತೊಡಗಿದರು. ಆತುರದಿಂದ ಈರ್ವರ ವಸ್ತ್ರಗಳೂ ಬದಲಾಗಿದ್ದುವು. ದೇವಯಾನಿ ಬ್ರಾಹ್ಮಣ ಕುವರಿ ತಾನೇ? ಶರ್ಮಿಷ್ಠೆ ತನ್ನ ವಸ್ತ್ರವನ್ನು ಧರಿಸಿರುವುದನ್ನು ಕಂಡು ಕುಪಿತಳಾದಳು. ಕುಲಗೌರವದಲ್ಲಿ ತಾನೇ ಶ್ರೇಷ್ಠಳು ಎಂಬ ಹಮ್ಮೂ ಅವಳಲ್ಲಿತ್ತು. ಶರ್ಮಿಷ್ಠೆ ತನ್ನ ಗೆಳತಿ ಎಂಬುದನ್ನು ಮರೆತು, ಹೀನಾಮಾನವಾಗಿ ಮೂದಲಿಸತೊಡಗಿದಳು.
ಕ್ಷತ್ರಿಯ ಕುಮಾರಿಯಾದ ಶರ್ಮಿಷ್ಠೆಗೂ ರೇಗಿಹೋಯಿತು. ರಾಜನಾದ ತನ್ನ ತಂದೆಯ ಆಸರೆಯಲ್ಲಿರುವ ಶುಕ್ರಾಚಾರ್ಯರ ಮಗಳಾದ ಇವಳಿಗೆ ಇಷ್ಟೊಂದು ಸೊಕ್ಕಾ? ಎಂದು ಕೋಪದಲ್ಲಿ ಬಿಸಿ ಉಸಿರು ಬಿಡುತ್ತಾ, ದೇವಯಾನಿಯನ್ನು ನಿಂದೆಯ ಮಾತುಗಳಿಂದ ನಲುಗಿಸಿದಳು. ಅಷ್ಟೇ ಅಲ್ಲ, ಕೊಳದೊಳಗೆ ಜೋರಾಗಿ ತಳ್ಳಿ, ತನ್ನ ದಾರಿ ಹಿಡಿದಳು.
ಅದೇ ಸಮಯಕ್ಕೆ ಬೇಟೆ ಆಡುತ್ತಾ, ರಾಜನಾದ ಯಯಾತಿ ಅಲ್ಲಿಗೆ ಬಂದ. ಕೊಳದಲ್ಲಿ ಬಿದ್ದು, ರೋದಿಸುತ್ತಿರುವ ದೇವಯಾನಿಯನ್ನು ಕಂಡ. ಪ್ರಾಣಾಪಾಯದಲ್ಲಿದ್ದ ಅವಳನ್ನು ಮೇಲಕ್ಕೆತ್ತಿದ. ರಾಜನ ಸೌಂದರ್ಯರಾಶಿಯನ್ನು ಕಂಡು, ದೇವಯಾನಿ ಮೈ ಮರೆತಳು. ಮಾರುಹೋದಳು. ರಾಜನೂ ಸಹ ದೇವಯಾನಿಯ ಮುಖ ಸೌಂದರ್ಯಕ್ಕೆ ಪರವಶನಾದ. ಅವಳನ್ನು ವರಿಸಲು ಬಯಸಿದ. ಈರ್ವರ ನಾಲ್ಕು ಕಣ್ಣುಗಳೂ ಕೆಲಕ್ಷಣಗಳ ಕಾಲ ಮಾತಾಡಿದುವು. ಈರ್ವರ ಮದುವೆ ಶುಕ್ರಾಚಾರ್ಯರ ನೇತೃತ್ವದಲ್ಲಿ ನಡೆದೇ ಹೋಯಿತು.
ದೇವಯಾನಿ ಶರ್ಮಿಷ್ಠೆಯಿಂದ ತನಗಾದ ಅವಮಾನದ ಬಗ್ಗೆ ತಂದೆಗೆ ತಿಳಿಸುತ್ತಾ, ರೋದಿಸತೊಡಗಿದಳು. ದೈತ್ಯಗುರು ತನ್ನ ಮಗಳನ್ನು ತನ್ನ ಕಣ್ಣುಗಳಲ್ಲೇ ಇಟ್ಟುಕೊಂಡು ಸಾಕುತ್ತಿದ್ದ. ಅವನಿಗೆ ತುಂಬಾ ದುಃಖ ಆಯಿತು. ದೈತ್ಯರಾಜನಾದ ವೃಷವರ್ಷನ ಮೇಲೆ ಕೋಪವೂ ಬಂತು. ಇನ್ನು ದೈತ್ಯರಿಗೆ ಗುರು ಆಗಿರುವುದೇ ಬೇಡ ಎಂದು ನಿರ್ಧರಿಸಿ, ಮಗಳೊಂದಿಗೆ ದೈತ್ಯರಾಜ್ಯವನ್ನೇ ಬಿಟ್ಟು ಹೊರಟ.
ವಿಷಯ ತಿಳಿದ ರಾಜ, ವೃಷವರ್ಷ ತನ್ನ ಗುರುವಿನ ಬಳಿಗೆ ಧಾವಿಸುತ್ತಾ ಬಂದ. ತನ್ನ ಮಗಳಿಂದ ಆಗಿರುವ ಪ್ರಮಾದಕ್ಕಾಗಿ ಕ್ಷಮೆ ಯಾಚಿಸಿದ. ಶುಕ್ರಾಚಾರ್ಯ ಹೇಳಿದ: “ನಾನೀಗ ವಿವಶತೆಯಲ್ಲಿದ್ದೇನೆ. ನನ್ನ ಮಗಳಿಗಾಗಿರುವ ದುಃಖವನ್ನು ಶಮನ ಮಾಡಿದರೆ ಮಾತ್ರ ನಾನು ಅಲ್ಲಿ ಉಳಿಯಲು ಸಾಧ್ಯ” ಎಂದು ತನ್ನ ಮಗಳ ಕಡೆ ತೋರಿಸಿದ. ರಾಜ ಈಗ ಸ್ವತಃ ಅಸಹಾಯಾಕತೆಯಲ್ಲಿ ಮುಳುಗಿ, ದೇವಯಾನಿಯನ್ನೇ ಪ್ರಾರ್ಥಿಸಿದ. ಅವಳ ಸೇಡುಬುದ್ಧಿ ಮಾತಾಡಿತು:
“ಶರ್ಮಿಷ್ಠೆ ಸಾಯುವವರೆಗೂ ನನ್ನ ಅಡಿಯಾಳಾಗಿದ್ದು, ಸೇವೆ ಸಲ್ಲಿಸಿದರೆ, ನಾನು ನನ್ನ ತಂದೆಯನ್ನು ಗುರುಸ್ಥಾನದಲ್ಲಿ ಇಲ್ಲಿಯೇ ಇರಲು ಸಮ್ಮತಿಸುತ್ತೇನೆ”.
ದೈತ್ಯರಾಜ ವಿಧಿ ಇಲ್ಲದೆ ದೇವಯಾನಿಯ ಕರಾರಿಗೆ ಒಪ್ಪಿದ. ತಂದೆಯ ಮನಸ್ಸನ್ನು ನೋಯಿಸದಿರಲು, ಶರ್ಮಿಷ್ಠೆಯೂ ಮುಂದೆ ಬಂದಳು. ರಾಜ ಶರ್ಮಿಷ್ಠೆಯನ್ನೂ ಯಯಾತಿ ರಾಜನಿಗೇ ಕೊಟ್ಟು ಮದುವೆ ಮಾಡಲು ನಿರ್ಧರಿಸಿದ.
ಆಗಲೂ ದೇವಯಾನಿ ಅಡ್ಡಿ ಬಂದಳು.
“ಶರ್ಮಿಷ್ಠೆ ಮದುವೆ ಆದರೂ ನನ್ನ ಗಂಡನ ಸಂಗ ಬಯಸಬಾರದು. ನಮ್ಮಿಬ್ಬರ ಸಮ್ಮತಿಸುವುದಾದರೆ ಮಾತ್ರ ಈ ಮದುವೆ ಸಾಧ್ಯ”.
ತಂದೆಯ ಮನಸ್ಸಂತೋಷಕ್ಕಾಗಿ ಆಗಲೂ ಶರ್ಮಿಷ್ಠೆ ತಲೆ ಬಾಗಿದಳು. ಯಯಾತಿಯೊಂದಿಗೆ ಶರ್ಮಿಷ್ಠೆಯ ಮದುವೆ ಆಗಿಹೋಯಿತು.
ಕಾಲಾಂತರದಲ್ಲಿ ದೇವಯಾನಿ ಯಯಾತಿಯ ಸಂಪರ್ಕದಲ್ಲಿ ಹಲವಾರು ಮಕ್ಕಳನ್ನು ಪಡೆದಳು. ಶರ್ಮಿಷ್ಠೆಯೂ ಮಕ್ಕಳ ತಾಯಿ ಆಗಲು ಬಯಸಿದಳು. ಗೋಪ್ಯವಾಗಿ ರಾಜನಾದ ಯಯಾತಿಯ ಸಂಗದಲ್ಲಿ ಬೆರೆತು, ತಾನೂ ಇಬ್ಬರು ಗಂಡು ಮಕ್ಕಳನ್ನು ಪಡೆದಳು.
ವಿಷಯ ತಿಳಿದು, ದೇವಯಾನಿ ಕೆಂಡಾಮಂಡಲವಾದಳು. ತಂದೆಯಾದ ಶುಕ್ರಾಚಾರ್ಯರ ಬಳಿಗೆ ಬಂದು, ವಿಚಾರವನ್ನು ತಿಳಿಸಿ, ರೋದಿಸತೊಡಗಿದಳು. ಪುತ್ರಿಯ ಮೇಲಿನ ಮಮತೆಯಿಂದ ಕುರುಡನಂತಾಗಿದ್ದ ದೈತ್ಯಗುರು ಯಯಾತಿಗೆ ಮುದುಕನಾಗಿ ಹೋಗಲು ಶಾಪ ಕೊಟ್ಟ.
ಸುಂದರಕಾಯದ ಯಯಾತಿ ಈಗ ಹಣ್ಣು-ಹಣ್ಣು ಮುದುಕನಾಗಿ ಹೋದ. ಆಗಲೂ ಅವನಿಗೆ ದೇವಯಾನಿ ಸಂಗದ ಅಪೇಕ್ಷೆ ಕಾಡುತ್ತಲೇ ಇತ್ತು. ಮುಪ್ಪು ಅವನಿಗೆ ಹಿಡಿಸಲಿಲ್ಲ. ಮರುಪ್ರಾಯವನ್ನು ಪಡೆಯಲು ಮನಸ್ಸು ಒದ್ದಾಡತೊಡಗಿತು. ದೇವಯಾನಿಯ ಮಕ್ಕಳನ್ನು ಕರೆದು, ಗೋಗರೆದ:
“ನಿಮ್ಮಲ್ಲಿ ಯಾರಾದರೂ ಮುಂದೆ ಬಂದು, ನನ್ನ ವಾರ್ಧಕ್ಯ (ಮುಪ್ಪು)ವನ್ನು ಪಡೆದು, ನಿಮ್ಮ ಯೌವನವನ್ನು ತಂದೆಯಾದ ನನಗೆ ಧಾರೆ ಎರೆಯಲಾರಿರಾ?” ಪ್ರಾಯದ ಮಕ್ಕಳು ಯಾರು ತಾನೇ ಈ ಮುಪ್ಪನ್ನು ಪಡೆಯಲು ಮುಂದೆ ಬಂದಾರು? ಯಾರೊಬ್ಬರೂ ಮುಂದೆ ಬರಲಿಲ್ಲ. ಅಲ್ಲೇ ನಿಂತಿದ್ದ ಶರ್ಮಿಷ್ಠೆಯ ಮಗ, ಪುರುವಿಗೆ ತಂದೆಯ ಮನೋವ್ಯಥೆಯನ್ನು ಕಂಡು, ಮನ ಕರಗಿತು. ತಂದೆಗಾಗಿ ತನ್ನ ಜೀವನ ಸುಖವನ್ನು ತ್ಯಾಗ ಮಾಡಲು ಮುಂದಾದ. ತಾನೇ ತಂದೆಯ ಮುಪ್ಪನ್ನು ಸಂತೋಷದಿಂದ ಸ್ವೀಕರಿಸಿದ. ತಂದೆಗೆ ತನ್ನ ಪ್ರಾಯವನ್ನು ಹೃತ್ಪೂರ್ವಕ ಹರ್ಷದೊಂದಿಗೆ ಧಾರೆ ಎರೆದ. ಯಯಾತಿ ಈಗ ಮೊದಲಿನಂತೆ ಸುಂದರ ಪುರುಷನಾದ.
ಮಗನಾದ ಪುರುವಿನ ಪಿತೃಪ್ರೇಮವನ್ನು ಕಂಡು ಆಶೀರ್ವದಿಸಿದ:
“ಮುಂದೆ ನಿನ್ನ ವಂಶದವರೇ ರಾಜಗದ್ದುಗೆಯನ್ನು ಏರಲಿ. ದೇವಯಾನಿಯ ಮಕ್ಕಳು ರಾಜಾರ್ಹತೆಯನ್ನು ಕಳೆದುಕೊಳ್ಳಲಿ”.
ದೇವಯಾನಿಗೂ ಈ ವೇಳೆಗೆ ಒಳಗಣ್ಣುಗಳು ತೆರೆದಿದ್ದುವು. ವಿವೇಕದ ಬೆಳಕು ಅವಳ ಹೃನ್ಮನಗಳಲ್ಲಿ ಚೆಲ್ಲಾಡತೊಡಗಿತು. ಗಂಡನೊಂದಿಗೆ ತಾನೂ ಗೃಹಸ್ಥಾಶ್ರಮವನ್ನು ತ್ಯಜಿಸಿ, ವಾನಪ್ರಸ್ಥಾಶ್ರಮವನ್ನು ಕೈಗೊಂಡಳು. ಈರ್ವರೂ ದೈವಾನುಗ್ರಹವನ್ನು ಪಡೆದರು