ಭಾಗವತ ಕಥೆಗಳು

ಭಕ್ತರ ಶ್ರೇಷ್ಟತೆ ಒಂದು ಸಾರಿ ಭಗವಂತನಾದ ಶ್ರೀಕೃಷ್ಣನಿಗೆ ಹಣೆಯ ಮೇಲೆ ಹುಣ್ಣು ಎದ್ದಿದೆ. ಅದು ಯಾವ ಔಷಧಿಯಿಂದಲೂ ಗುಣವಾಗಲಿಲ್ಲ. ನಾರದರೇ ಶ್ರೀ ಕೃಷ್ಣನನ್ನು ‘ಸ್ವಾಮಿ ನೀವೆ ಹೇಳಿರಿ. ನಿಮ್ಮ ಹುಣ್ಣು ಹೇಗೆ ಮಾಯವಾಗಬೇಕು? ಅದಕ್ಕೆ ಭಗವಂತನು ಭಕ್ತರ ಪಾದಧೂಳಿಯಿಂದ ಮಾತ್ರ ನಿವಾರಣೆ ಆಗುತ್ತದೆ ಎಂದ ಕೃಷ್ಣ. ನಾರದ ಹೋಗಿ ಶ್ರೀಕೃಷ್ಣನ ಅಷ್ಟ ಮಹಿಷೆಯರನ್ನು ಆ ಹುಣ್ಣು ಮಾಯವಾಗಬೇಕಾದರೆ ಭಕ್ತರ ಪಾದ ಧೂಳಿಬೇಕಂತೆ. ನಿಮ್ಮ ಪಾದ ಧೂಳಿ ಕೊಡಿರಿ ಎಂದು ನಾರದ ಕೇಳಿದ. ಆಗ ಶ್ರೀ ಕೃಷ್ಣನ ಅಷ್ಟ ಮಹಿಷೆಯರು ಇಲ್ಲಪ್ಪ! ಅಂತಹ ಭಗವಂತನಿಗೆ ನಮ್ಮ ಪಾದ ಧೂಳಿಯೆ ಅದು ಆಗದು ಎಂದು ಹೇಳಿದರು. ನಾರದ ಬಂದು ಸ್ವಾಮಿ ತಮ್ಮ ಅಷ್ಟ ಮಹಿಷೆಯರನ್ನು ತಮ್ಮ ಪಾದ ಧೂಳಿ ಕೊಡಿ ಎಂದು ಕೇಳಿದೆ. ಆ ಭಗವಂತನ ತಲೆಯ ಹುಣ್ಣಿಗೆ ನಮ್ಮ ಪಾದ ಧೂಳಿಯೆ? ಅದಾಗದು ಎಂದು ಹೇಳಿದರು. ಅಷ್ಟು ಕಷ್ಟ ಏಕೆ ನಾರದ. ನೇರವಾಗಿ ಹೋಗಿ ಗೋಕುಲದಲ್ಲಿ ಗೋಪಿಯರಿಗೆ ನಿಮ್ಮ ಶ್ರೀಕೃಷ್ಣನಿಗೆ ಹಣೆಯ ಮೇಲೆ ಹುಣ್ಣಾಗಿದೆ ನಿಮ್ಮ ಪಾದ ಧೂಳಿ ಕೊಡಿ ಎಂದು ಹೇಳು ಎಂದ. ನಾರದ ನೇರವಾಗಿ ಗೋಕುಲಕ್ಕೆ ಹೋಗಿ ಶ್ರೀಕೃಷ್ಣನಿಗೆ ಹಣೆಯ ಮೇಲೆ ಹುಣ್ಣು ಆಗಿದೆ. ನಿಮ್ಮ ಪಾದ ಧೂಳಿಯಿಂದ ಗುಣವಾಗುತ್ತದೆಯಂತೆ ಎಂಬ ನಾರದರ ಮಾತು ಮುಗಿಯುವುದರೊಳಗಾಗಿ ನದಿಯು ಸಾಗರವನ್ನು ಸೇರಲು ಅವಸರವಾಗಿ ಹೋದಂತೆ ಗೋಪಿಕೆಯರು ಓಡೋಡಿ ಬಂದು ತಮ್ಮ ಪಾದವನ್ನೇ ಶ್ರೀಕೃಷ್ಣನ ಹಣೆ ಮೇಲೆ ಇಟ್ಟು ತುಳಿದರು. ಭಕ್ತರಿಗೆ ಭಗವಂತನ ಪಾದವೂ ಒಂದೇ, ತಲೆಯೂ ಒಂದೇ. ಹುಣ್ಣು ಮಾಯವಾಗಿ ಹೋಯಿತು. ಇದು ಭಕ್ತರ ಪರೀಕ್ಷೆ. ಬೇಡರ ಕಣ್ಣಪ್ಪನ ಕಾಲದಲ್ಲಿ ಈಶ್ವರನ ಕಣ್ಣಿಗೆ ಕಾಲಿನ ಬೆರಳ ಗುರುತು ಇಟ್ಟುಕೊಂಡು ಕಣ್ಣನ್ನು ಕಿತ್ತು ಭಗವಂತನಿಗೆ ಇಡಲಿಲ್ಲವೇ? ಭಕ್ತರಿಗೂ ಭಗವಂತನಿಗೂ ಯಾವ ವ್ಯತ್ಯಾಸವೇ ಇಲ್ಲ. ಇದನ್ನೇ ಭಗವಂತನು ‘ನ ಮೇ ಭಕ್ತ ಪ್ರಣ ಶ್ಯತಿ’ ಎಂದಿದ್ದಾನೆ ಭಗವದ್ಭಕ್ತರಾಗಿರಿ.