ಬಾಲಕ ಭೀಮ
ಕೌರವರು, ಪಾಂಡವರು ಹಸ್ತಿನಾಪುರದ ರಾಜಕುಮಾರರು. ಪಂಚಪಾಂಡವರಲ್ಲಿ ಭೀಮ ಜಟ್ಟಿಮರಿ. ಕೌರವರು ನೂರು ಮಂದಿ ಇದ್ದರೂ ಸಹ ಅವರನ್ನು ತುಂಬಾ ರೇಗಿಸುತ್ತಿದ್ದ, ಚುಡಾಯಿಸುತ್ತಿದ್ದ. ಅವರ ತಲೆಗೂದಲುಗಳನ್ನು ಹಿಡಿದೆಳೆದು, ಒಬ್ಬರಿಗೊಬ್ಬರಿಗೆ ಗಂಟು ಹಾಕುತ್ತಿದ್ದ. ತಲೆ-ತಲೆ ಡಿಕ್ಕಿ ಹೊಡೆಸುತ್ತಿದ್ದ. ಚೆಂಡಿನಂತೆ ಮೇಲಕ್ಕೆ ಎಸೆದು ಕೆಳಗೆ ಬೀಳುವ ಮೊದಲೇ ಸುರಕ್ಷಿತವಾಗಿ ಹಿಡಿದು, ನೆಲದ ಮೇಲೆ ಕಸದ ಬುಟ್ಟಿಯನ್ನು ಕುಕ್ಕುವಂತೆ ಎಸೆಯುತ್ತಿದ್ದ. ಕೌರವರಿಗೆ ಇದರಿಂದಲೇ ಬಾಲಕ ಭೀಮನ ಬಗ್ಗೆ ತುಂಬಾ ದ್ವೇಷ, ಅಸೂಯೆ, ದಾಯಾದಿ ಮಾತ್ಸರ್ಯ ಹೆಚ್ಚಿತು. ಹೇಗಾದರೂ ಭೀಮನನ್ನು ಬಾಲ್ಯದಲ್ಲಿಯೇ ಪೂರೈಸಲು ತುಂಬಾ ಯೋಚಿಸಿದರು. ಭೀಮ ತುಂಬಾ ಹೊಟ್ಟೆಬಾಕ; ಎಷ್ಟು ತಿಂದರೂ ಸಾಲದು. ಕೌರವರಿಗೆ ಈ ವಿಷಯ ಗೊತ್ತಿತ್ತು. ಒಂದು ದಿನ ಅವನೊಬ್ಬನನ್ನೇ ಒಳ್ಳೊಳ್ಳೆಯ ಸಿಹಿತಿಂಡಿ ತಿನ್ನಿಸುವ ಆಸೆ ತೋರಿಸಿ, ಗಂಗಾನದಿಯ ತೀರಕ್ಕೆ ಕರೆತಂದರು. ವಿಷ ಬೆರೆಸಿದ ಲಾಡು, ಬೂಂದಿ ಮೊದಲಾದ ಸಿಹಿ ತಿಂಡಿಗಳನ್ನು ಚೆನ್ನಾಗಿ ತಿನ್ನಿಸಿದರು. ಭೀಮನ ದೇಹದಲ್ಲಿ ವಿಷ ಏರುತ್ತಿದ್ದಂತೆ ಪ್ರಜ್ಞೆ ತಪ್ಪಿತು. ಅವನನ್ನು ಆಗ ಹಿಂಗಟ್ಟು ಮುಂಗಟ್ಟು ಕಟ್ಟಿ, ಗಂಗಾನದಿಯಲ್ಲಿ ಬೇರೆ ಯಾರಿಗೂ ಕಾಣದಂತೆ, ಪ್ರಯಾಸದಿಂದ ಎತ್ತಿ ಎಸೆದರು. ಭೀಮನಿಗೆ ಗೊತ್ತೇ ಇಲ್ಲ.
ನೀರಿನಲ್ಲಿ ಪ್ರಜ್ಞಾಹೀನನಾಗಿ ಮುಳು-ಮುಳುಗುತ್ತಾ ನಾಗಲೋಕಕ್ಕೆ ಬಂದ. ಅಲ್ಲಿನ ಒಡೆಯ, ನಾಗರಾಜನಿಗೆ ಈ ಬಾಲಕನ ದೇಹ ದಾಢ್ರ್ಯತೆಯನ್ನು ಕಂಡು ಆಶ್ಚರ್ಯ, ಆನಂದ ಎರಡೂ ಒಮ್ಮೆಲೇ ಆಯಿತು. ಅವನಿಗೆ ಅಮೃತ ಕುಡಿಸಿದ ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ಬಂತು. ಹಸಿದಿದ್ದ ಭೀಮ ಹಸಿವು ತಾಳಲಾರದೆ ಅಲ್ಲಿದ್ದ ಗಡಿಗೆಗಳಲ್ಲಿದ್ದ ಅಮೃತವನ್ನೆಲ್ಲಾ ಒಂದೇ ಸಮನೆ ಕುಡಿಯುತ್ತಾ ಬಂದ. ನಾಗರಾಜನಿಗೆ ಈಗ ಗಾಬರಿ ಆಯಿತು. ಆದರೂ ಬಾಲಕನ ಮುಖ ತೇಜಸ್ಸು, ಶರೀರ ಸೌಷ್ಟವತೆಯನ್ನು ಕಂಡು, ಮುದಗೊಂಡ, ಅವನನ್ನು ದಂಡಿಸದೆ ಭೂಲೋಕಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಟ್ಟ.
ಇತ್ತ ಸಂಜೆ ಆದರೂ ಮನೆಗೆ ಬಾರದಿರುವುದನ್ನು ಕಂಡು, ತಾಯಿಯಾದ ಕುಂತಿ ಹಾಗೂ ಇತರ ನಾಲ್ವರು ಅಣ್ಣ ತಮ್ಮಂದಿರು ಗಾಬರಿ ಆದರು. ಸುತ್ತ-ಮುತ್ತ ದೂರ ಪ್ರದೇಶದವರೆಗೂ ಹುಡುಕಾಡಿದರು. ಎಲ್ಲೂ ಭೀಮನ ಸುಳಿವೇ ಇಲ್ಲ. ಮೂರು-ನಾಲ್ಕು ದಿನಗಳುರುಳಿದವು. ಈಗಲೂ ಭೀಮ ಹಿಂದಿರುಗಲಿಲ್ಲ. ಎಲ್ಲರೂ ಅನ್ನ-ನೀರು ಬಿಟ್ಟು ದುಃಖದಿಂದ ಮನೆ ಬಾಗಿಲು ಕಾಯುತ್ತಾ ಭೀಮನ ನಿರೀಕ್ಷಣೆಯಲ್ಲಿಯೇ ನಿದ್ರೆ ಇಲ್ಲದೆ ಕುಳಿತರು. ನೂರು ಮಂದಿ ಕೌರವರಿಗೂ ಈಗ ಖುಷಿಯೋ ಖುಷಿ ಆಯಿತು. ಪಾಂಡವರಲ್ಲಿ ಭೀಮನೇ ಅಲ್ಲದೆ ಅವನ ತಮ್ಮನಾದ ಅರ್ಜುನನೂ ಬಾಣ ಪ್ರಯೋಗದಲ್ಲಿ ಪ್ರವೀಣ ಎನಿಸಿದ್ದ. ಕೌರವರಿಗೆ ಇದೂ ಸಹ ಹಿಡಿಸಲಿಲ್ಲ. ಅವನನ್ನೂ ಹೀಗೆಯೇ ಎಂದಾದರೂ ಮುಗಿಸಿಬಿಡಬೇಕು ಎಂದು ಯೋಚಿಸುತ್ತಿದ್ದಂತೆ ಭೀಮ ನಾಗಲೋಕದಿಂದ ಸುರಕ್ಷಿತವಾಗಿ ಮನೆಗೆ ಮರಳಿದ. ಗಾಬರಿಗೊಂಡಿದ್ದ ತಾಯಿ, ಕುಂತಿಯ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಸೋದರರನ್ನು ಅಪ್ಪಿ, ಮುದ್ದಾಡಿದ. ದೂರದಿಂದಲೇ ಇದೆಲ್ಲವನ್ನೂ ನೋಡುತ್ತಿದ್ದ ಕೌರವರು “ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ” ಅನ್ನುವಂತಾಯಿತೇ ಎಂದು ಮುಖವನ್ನು ಹರಳೆಣ್ಣೆ ಕುಡಿದವರಂತೆ ಮಾಡಿಕೊಂಡರು.