ಭಾಗವತ ಕಥೆಗಳು

ನರಕಾಸುರನ ವಧೆ ಅಸುರ (ರಾಕ್ಷಸ) ಶ್ರೇಷ್ಠರಲ್ಲಿ ನರಕಾಸುರನೂ ಯಾರಿಗೂ ಕಡಿಮೆ ಆದವನಲ್ಲ. ಉತ್ತರ ಭಾರತದಲ್ಲಿ ಪ್ರಾಗ್ಜೋತಿಷಪುರದಲ್ಲಿ ಅಸುರೇಂದ್ರನೆನಿಸಿದ್ದರೂ, ಧರ್ಮ-ನಿಷ್ಠೆಯಿಂದ ಪ್ರಜಾಪಾಲನೆಯನ್ನೇ ತನ್ನ ಮುಖ್ಯೋದ್ದೇಶವಾಗಿಟ್ಟುಕೊಂಡು ರಾಜ್ಯಭಾರ ಮಾಡುತ್ತಿದ್ದ. ದಿಗ್ವಿಜಯಿ ಎನಿಸಬೇಕೆಂಬುದು ಇವನ ಜೀವನದ ಮಹತ್ವಾಕಾಂಕ್ಷೆ ಆಗಿತ್ತು. ಭಾರತದ ಬಹು ಪಾಲು ರಾಜರುಗಳನ್ನು ಜಯಿಸಿದ್ದ. ದುರುಳತನವೂ ಇವನಲ್ಲಿ ಇದ್ದಿರಲಿಲ್ಲ ಎನ್ನಲಾಗದು. ತಾನು ಗೆದ್ದ ರಾಜ್ಯಗಳ ರಾಣಿಯರನ್ನು ರಾಜಕುಮಾರಿಯರನ್ನು ಸೆರೆಹಿಡಿದು, ತನ್ನ ರಾಜ್ಯದಲ್ಲಿ ಕೊಳೆ ಹಾಕಿದ್ದ. ಅವರೆಲ್ಲರೂ ಇವನ ದಿಗ್ಬಂಧನದಲ್ಲಿ ಸಿಕ್ಕಿ ಸೊರಗುತ್ತಿದ್ದರು.

ಭೂಲೋಕದಲ್ಲೇ ಹೆಸರು ಗಳಿಸಿದ್ದ ನರಕಾಸುರನು ದೇವ-ದೇವತೆಗಳಿಂದ ಸಾಕಷ್ಟು ಅದ್ಭುತ ರೀತಿಯ ವರಗಳನ್ನೂ ಪಡೆದು, ಬಹುಭುಜ ಪರಾಕ್ರಮಿ ಎಂದು ಬೀಗುತ್ತಿದ್ದ ಭೂಲೋಕದಲ್ಲೇ ಅಲ್ಲದೆ, ದೇವಲೋಕದಲ್ಲೂ ಇವನ ದಾಂಧಲೆ ಅತಿಯಾಯಿತು. ದೇವತೆಗಳೆಲ್ಲರೂ ಇವನ ಹಾಗೂ ಇವನ ಸೈನ್ಯದ ಧಾಳಿಗೆ ತತ್ತರಿಸತೊಡಗಿದರು. ಯುದ್ಧದಲ್ಲಿ ತರಗೆಲೆಗಳಂತೆ ಗಾಳಿಗೆ ತೂರಿ ಹೋಗ ತೊಡಗಿದರು. ದೇವಲೋಕದ ಒಡೆಯನಾದ ದೇವೇಂದ್ರ ಭಯ ಹಾಗೂ ಗಾಬರಿಯಿಂದ ಕಳವಳಿಸುತ್ತಾ, ತನ್ನ ಪರಿಜನರೆಲ್ಲರೊಂದಿಗೆ ಬ್ರಹ್ಮನ ಬಳಿ ಬಂದು, ಮೊರೆ ಇಟ್ಟ. ಬ್ರಹ್ಮ ತುಂಬಾ ಯೋಚಿಸಿ ಹೇಳಿದ: “ನರಕಾಸುರ ಅದ್ಭುತ ವರಗಳನ್ನು ಪಡೆದಿರುವ ಪೌರುಷದಿಂದ ಕೂಡಿರುವುದರಿಂದ ಅವನನ್ನು ಎದುರಿಸಲು ನಮ್ಮಲ್ಲಿ ಯಾರಿಂದಲೂ ಸಾಧ್ಯ ಇಲ್ಲ. ಸಧ್ಯದಲ್ಲಿ ಕೇವಲ ಶ್ರೀಕೃಷ್ಣ ಪರಮಾತ್ಮನಿಂದ ಮಾತ್ರ ಸಾಧ್ಯ. ಆದ್ದರಿಂದ ನೀವೆಲ್ಲರೂ ಆತನ ಬಳಿಗೇ ಹೋಗಿ ಶರಣಾಗಿ.”

ಬ್ರಹ್ಮನ ಸಲಹೆಯಂತೆ ಎಲ್ಲರೂ ಈಗ ದ್ವಾರಕೆಯಲ್ಲಿದ್ದ ಶ್ರೀಕೃಷ್ಣನ ಬಳಿಗೆ ಬಂದರು. ಅವನನ್ನು ಪರಿಪರಿಯಿಂದ ಸ್ತುತಿಸಿದರು. ತಮಗೊದಗಿದ ಆಪತ್ತಿನ ಬಗ್ಗೆ ತಿಳಿಸುತ್ತಾ, ತಮ್ಮೆಲ್ಲರನ್ನೂ ಕಾಪಾಡಲು ಮೊರೆ ಇಟ್ಟರು. ಶ್ರೀಕೃಷ್ಣ ವಿಷ್ಣುವಿನ ಅವತಾರಿ ತಾನೇ? ಅವನು ಅವತರಿಸಿದ್ದುದೇ ದುರುಳರ ಅದರಲ್ಲೂ ಅಸುರರ ದಾಂಧಲೆಯನ್ನು ಕಡಿಮೆ ಮಾಡಿ, ಭೂದೇವಿಗೆ ಹೊರೆಯನ್ನು ಕಡಿಮೆ ಮಾಡಲಿಕ್ಕೋಸ್ಕರ ಅವರೆಲ್ಲರಿಗೂ ಸಮಾಧಾನ ಹೇಳಿಕಳುಹಿಸಿದ. ನರಕಾಸುರನನ್ನು ವಧಿಸಲು ಹಾಗೆಯೇ ಯೋಚಿಸಿದ. ಮನದಲ್ಲಿ ಮೂಡಿದ ಯೋಜನೆಯನ್ನು ಕಾರ್ಯಗತಗೊಳಿಸಲು, ಗರುಡಾರೂಢನಾಗಿ, ದಿವ್ಯಾಸ್ತ್ರಗಳು ಹಾಗೂ ಸುದರ್ಶನ ಚಕ್ರದೊಂದಿಗೆ ಪ್ರಾಗ್ಜೋತಿಷಪುರದತ್ತ ಸಮರ ಪಯಣ ಬೆಳೆಸಿದ. ಪ್ರಾಗ್ಜೋತಿಷಪುರ ತಲುಪಿದ ಕೂಡಲೇ, ಅರಮನೆಯ ಮುಂದೆ ನಿಂತು, ತನ್ನ ಪಾಂಚಜನ್ಯ ಶಂಖವನ್ನು ಜೋರಾಗಿ ಧ್ವನಿ ಮಾಡುತ್ತಾ, ನರಕಾಸುರನಿಗೆ ರಣಆಮಂತ್ರಣ ನೀಡಿದ. ನರಕಾಸುರನಿಗೆ ಶ್ರೀಕೃಷ್ಣ ಯುದ್ಧಸನ್ನದ್ಧನಾಗಿ, ಏಕಾಂಗಿಯಾಗಿ ಬಂದಿರುವ ಸುದ್ದಿ ಮುಟ್ಟಿತು. ಗೊಲ್ಲರ ಸಂಗಾತಿಯಾದ ಇವನೊಂದಿಗೆ ಎಂತಹ ಕಾದಾಟ ಎಂಬ ಹಮ್ಮಿನಿಂದ ತನ್ನ ಆತ್ಮೀಯನಾದ ಮುರಾ ಎಂಬ ಅಸುರನನ್ನು ಅಪಾರ ಸೇನೆಯೊಂದಿಗೆ ಶ್ರೀಕೃಷ್ಣನನ್ನು ಎದುರಿಸಲು ಕಳುಹಿಸಿಕೊಟ್ಟ.

ಮುರಾಸುರನೂ ಪರಾಕ್ರಮದಲ್ಲಿ ಪ್ರತಿಭಾವಂತನೇ. ಕೆಚ್ಚೆದೆಯಿಂದ ಕಾದಾಡುತ್ತಾ ತನ್ನ ಶೂಲದಿಂದ ಗರುಡನನ್ನು ಹೊಡೆದ. ಕೋಪಗೊಂಡ ಕೃಷ್ಣ ತನ್ನ ದಿವ್ಯಾಸ್ತ್ರದಿಂದ ಆ ಶೂಲವನ್ನು ತುಂಡರಿಸಿದ. ಮುರಾಸುರನು ತನ್ನೆಡೆಗೆ ಧಾವಿಸುತ್ತಿರುವುದನ್ನು ಕಂಡು, ತನ್ನ ಸುದರ್ಶನ ಚಕ್ರವನ್ನು ಅವನೆಡೆಗೆ ಬೀಸಿದ. ಮುರಾಸುರನ ಕುತ್ತಿಗೆಯನ್ನು ಚಕ್ರ ತುಂಡರಿಸಿತು. ಕೃಷ್ಣ ಈ ಕಾರಣದಿಂದಲೇ ಮುರಾರಿ ಎಂದು ಕರೆಯಿಸಿಕೊಂಡ. ಮುರಾಸುರನು ಸತ್ತ ಸುದ್ದಿ ನರಕಾಸುರನನ್ನು ಗರಬಡಿಸಿತು. ಈಗ ಸ್ವತಃ ಯುದ್ಧ ಸನ್ನದ್ಧನಾಗಿ ಶ್ರೀಕೃಷ್ಣನನ್ನು ಎದುರಿಸಲು, ಮುಂದೆ ಬಂದು ನಿಂತ. ದೀರ್ಘ ಕಾಲ ಈರ್ವರ ನಡುವೆ ಯುದ್ಧ ಜರುಗಿತು. ಯಾರೊಬ್ಬರೂ ಸೋಲುವರೆಂಬ ಸೂಚನೆಗೆ ಎಡೆಕೊಡಲಿಲ್ಲ. ಕಡೆಗೆ ಶ್ರೀಕೃಷ್ಣ ಇವನ ಮೇಲೂ ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿದ. ನರಕಾಸುರನ ಶಿರವನ್ನು ಕತ್ತರಿಸಿ, ಚಕ್ರ ಮತ್ತೆ ಶ್ರೀಕೃಷ್ಣನ ಕೈಸೇರಿತು.

ಶ್ರೀಕೃಷ್ಣ ಅರಮನೆಯೊಳಗೆ ಪ್ರವೇಶಿಸಿದ. ಸೆರೆಹಿಡಿದಿದ್ದ 16 ಸಾವಿರ ರಾಜಕುಮಾರಿಯರನ್ನೆಲ್ಲಾ ಬಿಡುಗಡೆ ಮಾಡಿದ. ಅವರೆಲ್ಲರೂ ಶ್ರೀಕೃಷ್ಣನಲ್ಲಿ ಪ್ರಾರ್ಥಿಸಿಕೊಂಡರು: “ಪರಮಾತ್ಮ, ನೀನೇ ನಮ್ಮೆಲ್ಲರನ್ನೂ ವರಿಸಿ, ಉದ್ಧರಿಸು.” ಅವರ ಮಾತಿಗೆ ಮನ್ನಣೆ ನೀಡಿ, ಅವರೆಲ್ಲರನ್ನೂ ಪರಿಗ್ರಹಿಸಿ ದ್ವಾರಕೆಗೆ ಕಳುಹಿಸಿಕೊಟ್ಟಾಗ ದೇವತೆಗಳು ಶ್ರೀಕೃಷ್ಣ ಪರಮಾತ್ಮನನ್ನು ಪರಿಪರಿಯಲ್ಲಿ ಸ್ತುತಿಸುತ್ತಾ, ಅಂತರಿಕ್ಷದಿಂದ ಹೂಮಳೆಗರೆದರು. ಆನಂದೋತ್ಸಾಹದಿಂದ ತಮ್ಮ ಲೋಕಕ್ಕೆ ತೆರಳಿದರು. ಶ್ರೀಕೃಷ್ಣನು ನರಕಾಸುರನ ಮಗನಾದ ಭಗದತ್ತನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ, ರಾಜ್ಯಾಭಿಷೇಕ ಮಾಡಿ, ತಾನೂ ಈಗ ದ್ವಾರಕೆಗೆ ಹಿಂದಿರುಗಿದ.