ಭಾಗವತ ಕಥೆಗಳು

ಗಜೇಂದ್ರ ಮೋಕ್ಷ ತುಂಬಾ ಹಿಂದೆ ಪಾಂಡ್ಯ ರಾಜ್ಯದಲ್ಲಿ ಇಂದ್ರದ್ಯುಮ್ನ ಎಂಬ ರಾಜನಿದ್ದ. ವಿಷ್ಣು ಪರಮಾತ್ಮನ ಪರಮಭಕ್ತ. ಧರ್ಮಪರಿಪಾಲನೆಯ ರೀತಿಯಲ್ಲಿ ಪ್ರಜೆಗಳನ್ನು ಪಾಲಿಸುತ್ತಾ, ರಾಜ್ಯಭಾರ ಮಾಡುತ್ತಿದ್ದ. ಪ್ರಜೆಗಳೆಲ್ಲರೂ ಆತನನ್ನು ತಮ್ಮ ಭಾಗದ ತಂದೆ ಎಂದೇ ಭಾವಿಸಿದ್ದರು. ಒಂದು ಬಾರಿ ತ್ರಿಕೂಟಾಚಲ ಎಂಬ ಕಣಿವೆಯಲ್ಲಿ ತಪೋನಿರತನಾಗಿದ್ದ. ಬಾಹ್ಯ ವ್ಯವಹಾರದ ಜ್ಞಾನವೇ ಒಂದಿಷ್ಟೂ ಇರಲಿಲ್ಲ. ವಿಷ್ಣುವಿನ ಆರಾಧನೆಯಲ್ಲಿ ಧ್ಯಾನಮಗ್ನನಾಗಿದ್ದ. ಅಗಸ್ತ್ಯ ಮಹಾಮುನಿಗಳು ತಮ್ಮ ಪರಿವಾರದವರೊಂದಿಗೆ ಅಲ್ಲಿಗೆ ಬಂದರು. ತಪೋನಿರತನಾದ ರಾಜನಿಗೆ ಅವರ್ಯಾರೂ ಬಂದುದರ ಪರಿವೆಯೇ ಇಲ್ಲ. ಅಗಸ್ತ್ಯರು ತುಂಬಾ ಕಾಲ ಕಾದು ನೋಡಿದರು. ರಾಜನಿಗೆ ಅವರ ಕಡೆ ಗಮನವೇ ಇಲ್ಲ. ಅವರಿಗೆ ರಾಜನ ಮೇಲೆ ಕೋಪ ಬಂತು. ಕೂಡಲೇ ಕೋಪದಲ್ಲಿ ತಮ್ಮ ವಿವೇಕವನ್ನೇ ಕಳೆದುಕೊಂಡು ಶಾಪಕೊಟ್ಟರು:
“ನೀನು ಇದೇ ಸ್ಥಳದಲ್ಲಿ ಆನೆ ಆಗಿ ಹುಟ್ಟು”. ಶಾಪಗ್ರಸ್ತನಾದ ರಾಜ ಇಂದ್ರದ್ಯುಮ್ನ ಈಗ ತ್ರಿಕೂಟಾಚಲದ ಪ್ರದೇಶದಲ್ಲಿಯೇ ಆನೆಯಾಗಿ ಜನಿಸಿದ. ಈ ಪ್ರದೇಶ ಪವಿತ್ರ ತಪೋಭೂಮಿ ಎನಿಸಿತ್ತು. ದೇವತೆಗಳ ವಿಹಾರ ಸ್ಥಳವೆನಿಸಿತ್ತು. ಯಕ್ಷರೂ ಆಗಾಗ ಬೇಸರ ಕಳೆಯಲು ಇಲ್ಲಿಗೆ ಬಂದು ಹೋಗುತ್ತಿದ್ದರು. ಆನೆಗೆ ರಾಜಯೋಗ್ಯ ಗುಣಗಳೆಲ್ಲವೂ ಇದ್ದುದರಿಂದ ತ್ರಿಕೂಟಾಚಲ ಪ್ರದೇಶದ ಆನೆಗಳಿಗೆಲ್ಲಾ ಒಡೆಯನಾಗಿ, ಗಜೇಂದ್ರ ಎಂಬ ಹೆಸರು ಪಡೆಯಿತು. ಒಂದು ದಿನ ಅಲ್ಲಿ ಕೊಳವೊಂದಕ್ಕೆ ಬೇಸಿಗೆಯ ದಿನಗಳಲ್ಲಿ ನೀರಡಿಕೆಯ ನಿವಾರಣೆಗಾಗಿ ತನ್ನ ಬಳಗದವರೊಂದಿಗೆ ಬಂತು. ನೀರು ಕುಡಿಯಲು ಕೊಳದೊಳಗೆ ಕಾಲಿಟ್ಟಾಗ, ಕೊಳದಲ್ಲಿದ್ದ ಒಂದು ಮೊಸಳೆ ಅದರ ಕಾಲನ್ನು ಭದ್ರವಾಗಿ ಕಚ್ಚಿಕೊಂಡಿತು. ಕಾಲನ್ನು ಹೊರತೆಗೆಯಲು ಎಷ್ಟೇ ಯತ್ನಿಸಿದರೂ ಸಾಧ್ಯವಾಗಲಿಲ್ಲ. ನೋವಿನ ಬಾಧೆಯನ್ನು ತಾಳಲಾರದೆ ಘೀಳಿಡತೊಡಗಿತು. ಇತರ ಆನೆಗಳೂ ತಮ್ಮ ಒಡೆಯನನ್ನು ಮೊಸಳೆಯ ಬಾಯಿಂದ ಮುಕ್ತಗೊಳಿಸಲು ತುಂಬಾ ಯತ್ನಿಸಿದುವು. ಅವುಗಳ ಪ್ರಯತ್ನವೂ ನಿರರ್ಥಕ ಎನಿಸಿತು. ಕಡೆಗೆ ಪೂರ್ವಜನ್ಮದ ಸ್ಮರಣೆಯಾಗಿ, ಭಕ್ತಿಯಿಂದ ವೈಕುಂಠಪತಿಯಾದ ಶ್ರೀಮನ್ನಾರಾಯಣನನ್ನು ತದೇಕಚಿತ್ತದಿಂದ ಮುಕ್ತಗೊಳಿಸಲು ಮೊರೆಯಿಟ್ಟಿತು. “ನಾರಾಯಣಾ, ದೀನಬಂಧೂ, ಈಗ ನೀನೇ ನನಗೆ ಆಸೆರೆ, ಬೇಗ ಬಂದು ಕಾಪಾಡು”.
ಭಕ್ತನಾದ ಗಜೇಂದ್ರನ ಮೊರೆ ವೈಕುಂಠದಲ್ಲಿದ್ದ ಶ್ರೀ ವಿಷ್ಣುವಿನ ಕಿವಿ ಮುಟ್ಟಿತು. ಆತನು ದೇವತೆಗಳೊಂದಿಗೆ ಯಾವುದೋ ಗಹನವಾದ ವಿಷಯದ ಬಗ್ಗೆ ಚರ್ಚೆಯಲ್ಲಿ ಮುಳುಗಿದ್ದ. ಕೂಗು ಕಿವಿ ಮುಟ್ಟುತ್ತಲೇ ಅಲ್ಲಿಂದ ಎದ್ದು ಹೊರಟೇಬಿಟ್ಟ. ತನ್ನ ವಾಹನವಾದ ಗರುಡನ ಮೇಲೆ ಕುಳಿತು, ಮರುಕ್ಷಣದಲ್ಲೇ ಕೊಳದ ಬಳಿ ಕಾಣಿಸಿಕೊಂಡ. ಗಜೇಂದ್ರನಿಗಾದ ಆನಂದ ಅಷ್ಟಿಷ್ಟಲ್ಲ. ತನ್ನ ಸೊಂಡಿಲನ್ನು ಮೇಲೆತ್ತಿ ಭಕ್ತಿಯಿಂದ ನಮಿಸತೊಡಗಿತು. ಭಕ್ತರ ಅಧೀನನೆನಿಸಿದ ವಿಷ್ಣು ಪರಮಾತ್ಮ ತನ್ನ ಕೈಯಲ್ಲಿದ್ದ ಆಯುಧರೂಪದ ಸುದರ್ಶನ ಚಕ್ರವನ್ನು ಬೀಸಿದ. ಅದು ಮೊಸಳೆಯ ಮೂತಿಯನ್ನೇ ಕತ್ತರಿಸಿ ಹಾಕಿತು. ಮೊಸಳೆಯ ಜೀವ ಹೋಗಿ, ಈಗ ಅವನೊಬ್ಬ ಗಂಧರ್ವನಾದ.
ಅವನೇ ಹೂಹೂ ಎಂಬ ಗಂಧರ್ವ. ದೇವಲ ಮಹರ್ಷಿಗಳ ಶಾಪದಿಂದ ಮೊಸಳೆಯಾಗಿದ್ದ. ಅವನು ಪರಮಾತ್ಮನಾದ ವಿಷ್ಣುವನ್ನೂ, ಗಜೇಂದ್ರನನ್ನೂ ನಮಿಸುತ್ತಾ, ತನ್ನ ಗಂಧರ್ವಲೋಕ ಸೇರಿದ. ಮಹಾವಿಷ್ಣುವನ್ನು ಗಜೇಂದ್ರ ಪರಿಪರಿ ರೀತಿಯಲ್ಲಿ ಸ್ತುತಿಸಿದ. ಸಂತೃಪ್ತನಾದ ಶ್ರೀವಿಷ್ಣು ಗಜೇಂದ್ರನಿಗೂ ದೇವಸ್ವರೂಪವನ್ನು ನೀಡಿ, ತನ್ನ ಲೋಕಕ್ಕೆ ಕರೆದೊಯ್ದ. ಹೀಗೆ ಇಂದ್ರದ್ಯುಮ್ನ ರಾಜನು ಆನೆಯ ರೂಪದಿಂದ ಬಿಡುಗಡೆಹೊಂದಿ, ಮೋಕ್ಷ ಹೊಂದಿ, ಗಜೇಂದ್ರ ಮೋಕ್ಷ ಎಂದು ಪ್ರಸಿದ್ಧಿಯಾಯಿತು.