ಭಾಗವತ ಕಥೆಗಳು

ಮತ್ಸ್ಯಾವತಾರ ಭೂಮಂಡಲದಲ್ಲಿ ಅನ್ಯಾಯ, ಅಕೃತ್ಯಗಳು ಹೆಚ್ಚಾಗಿ ಎಲ್ಲೆಲ್ಲೂ ಅಧರ್ಮದೇವತೆಯೇ ಭೀಕರ ನೃತ್ಯ ಮಾಡುತ್ತಾ ಭೂಮಾತೆಗೆ ಹೊರಲು ಭಾರವೆನಿಸಿದಾಗ ಅಂತಹ ಬಹುಭಾರದ ಹೊರೆಯನ್ನು ಇಳಿಸಿ, ಭೂಮಾತೆಯ ಭಾರದ ಹೃದಯವನ್ನು ಹಗುರಗೊಳಿಸುವ ಸಲುವಾಗಿ, ಪರಮಾತ್ಮನಾದ ವಿಷ್ಣು ಜಗತ್ತೆಲ್ಲವೂ ಲಯವಾಗುವ ರೀತಿಯಲ್ಲಿ ಜಲಪ್ರಳಯವನ್ನುಂಟು ಮಾಡುವನೆಂದು ಪ್ರತೀತಿ. ಕಲ್ಪಾಂತ್ಯದಲ್ಲಿ ಇಂತಹುದೇ ಒಂದು ಸಂದರ್ಭ ಸಂಭವಿಸಿತು. ಬ್ರಹ್ಮಪ್ರಳಯ ಉಂಟಾಗಿ ಮೂರೂ ಲೋಕಗಳೂ (ಭೂ, ಸ್ವರ್ಗ, ಪಾತಾಳ) ಜಲಪ್ರಳಯದಲ್ಲಿ ಮುಳುಗಿಹೋದುವು. ಚತುರ್ಮುಖನೆನಿಸಿದ ಬ್ರಹ್ಮನು ಇದೇ ಸಮಯದಲ್ಲಿ ಯೋಗನಿದ್ರೆಯಲ್ಲಿರುವುದನ್ನು ಕಂಡು, ಸೋಮಕ ಎಂಬ ರಕ್ಕಸನು ಅವನಲ್ಲಿದ್ದ ವೇದಗ್ರಂಥಗಳೆಲ್ಲವನ್ನೂ ಕದ್ದೊಯ್ದ.

ಧರ್ಮಸ್ಥಾಪನೆಗೆ ಮೂಲಾಧಾರವಾದ ವೇದಗಳನ್ನು ಅವನಿಂದ ವಶಪಡಿಸಿಕೊಳ್ಳಲು ವೈಕುಂಠಪತಿ ಆದ ವಿಷ್ಣು ಈಗ ಧರ್ಮ ಸಂಸ್ಥಾಪನಾರ್ಥವಾಗಿ ಮತ್ಸ್ಯಾವತಾರ (ಮೀನಿನ ಅವತಾರ) ವನ್ನು ತಾಳಿದ. ಕೃತಮಾಲಾ ನದಿಯ ತೀರದಲ್ಲಿ ಸತ್ಯವ್ರತ ಎಂಬ ಹೆಸರಿನ ಮಹಾನ್ ಋಷಿ ಕೇವಲ ನೀರನ್ನೇ ಆಹಾರವಾಗಿ ಸೇವಿಸುತ್ತಾ, ಘೋರ ತಪಾಚರಣೆಯಲ್ಲಿ ನಿರತನಾಗಿದ್ದ. ಅವನೊಬ್ಬ ಪರಮ ವಿಷ್ಣುಭಕ್ತ. ಒಂದು ಬಾರಿ ನದಿಯ ನೀರಿನಲ್ಲಿ ಪ್ರಾತಃಕಾಲ ಸ್ನಾನಾಹ್ನಿಕಗಳ ನಂತರ ಸೂರ್ಯದೇವನಿಗೆ ಅಘ್ರ್ಯ ನೀಡುತ್ತಿದ್ದ ಸಮಯದಲ್ಲಿ ಬೊಗಸೆ ನೀರಿನೊಂದಿಗೆ ಒಂದು ಮೀನು ಬಂತು. ಅದನ್ನು ತನ್ನ ಕಲಶದಲ್ಲಿದ್ದ ನೀರಿಗೆ ಬಿಟ್ಟು, ತಪಸ್ವಿ ಆಶ್ರಮಕ್ಕೆ ಕೊಂಡೊಯ್ದ. ಮೀನು ಒಂದೇ ರಾತ್ರಿಯಲ್ಲಿ ಆ ಕಲಶದ ತುಂಬಾ ತುಂಬುವಷ್ಟು ದೊಡ್ಡದಾಗಿ ಬೆಳೆಯಿತು. ಬೆಳಗಾದ ನಂತರ ಈ ವಿಚಿತ್ರ ಮೀನನ್ನು ಕಂಡ ಸತ್ಯವ್ರತ ಅದನ್ನು ಕಲಶದಿಂದ ತೆಗೆದು ಒಂದು ತೊಟ್ಟಿಯಲ್ಲಿ ತುಂಬಿದ್ದ ನೀರೊಳಗೆ ಬಿಟ್ಟ. ಬಿಟ್ಟ ಒಂದೇ ಕ್ಷಣದಲ್ಲಿ ಆ ವಿಚಿತ್ರ ಮೀನು ಮೂರು ಗೇಣುಗಳಷ್ಟು ಉದ್ದವಾಯಿತು. ಅಲ್ಲಿಂದ ಮತ್ತೆ ಅದನ್ನು ತೆಗೆದು, ಸತ್ಯವ್ರತ ಸರೋವರದಲ್ಲಿ ಬಿಟ್ಟ. ಅದು ಬೃಹದ್ರೂಪದಲ್ಲಿ ಬೆಳೆದು, ಇಡೀ ಸರೋವರವನ್ನೇ ವ್ಯಾಪಿಸಿತು.

ಸತ್ಯವ್ರತ ಮಹರ್ಷಿಗೆ ಈ ವೈಚಿತ್ರ್ಯತೆಯನ್ನು ಕಂಡು, ಅತ್ಯಾಶ್ಚರ್ಯ ಆಯಿತು. ಅದನ್ನು ಅಲ್ಲಿಂದ ತೆಗೆದು, ಸಮುದ್ರಕ್ಕೆ ಬಿಡುತ್ತಾ ಪ್ರಶ್ನಿಸಿದ: “ಕ್ಷಣಕ್ಷಣಕ್ಕೂ ಹೀಗೆ ಬೃಹದಾಕಾರವಾಗಿ ಬೆಳೆಯುತ್ತಿರುವ ನೀನು ಯಾರು? ನಮ್ಮ ಬುದ್ಧಿಯನ್ನೇ ಕೆಣಕುತ್ತಿರುವ ನಿನಗೆ ಇಂತಹ ಅಪೂರ್ವ ಶಕ್ತಿ ಹೇಗೆ ಲಭಿಸಿತು? ನೀನು ಸಾಮಾನ್ಯ ಮೀನಿನಂತೆ ನನಗೆ ಕಂಡುಬರುತ್ತಿಲ್ಲ!” ಪರಮಾತ್ಮನಾದ ಶ್ರೀಹರಿಯೇ ಆ ರೂಪದಲ್ಲಿ ಬಂದಿದ್ದ. ತನ್ನ ನಿಜವಾದ ಸ್ವರೂಪವನ್ನು ಪ್ರತ್ಯಕ್ಷವಾಗಿ ತೋರಿಸುತ್ತಾ, ಅವನು ಮಂದಸ್ಮಿತನಾಗಿ ಹೇಳಿದ:

“ಸತ್ಯವ್ರತ ಮಹರ್ಷಿ ಮತ್ಸ್ಯ ಅವತಾರಿಯಾಗಿ ವೈಕುಂಠದಿಂದ ಭೂಲೋಕದಲ್ಲಿ ನಾನೇ ಅವತರಿಸುತ್ತಿದ್ದೇನೆ. ಇಂದಿನಿಂದ ಸರಿಯಾಗಿ ಏಳು ದಿನಗಳಲ್ಲಿ ಪ್ರಬಲರೂಪದ ಜಲಪ್ರಳಯ ಸಂಭವಿಸಿ, ಸಪ್ತ ಸಮುದ್ರಗಳೂ ಒಂದೆಡೆಯಲ್ಲಿ ಸೇರ್ಪಡೆ ಆಗುತ್ತವೆ. ಆ ಅಂದರ್ಭದಲ್ಲಿ ಮೂರೂ ಲೋಕಗಳೂ ಜಲರಾಶಿಯಲ್ಲಿ ಮುಳುಗಿಹೋಗುತ್ತವೆ. ಆಗ ನನ್ನ ಭಕ್ತನಾದ ನಿನ್ನನ್ನು ಕಾಪಾಡುವ ಸಲುವಾಗಿಯೇ ನಾನು ಮೀನಿನ ರೂಪದಲ್ಲಿ ಬಂದಿದ್ದೇನೆ. ಇಂತಹ ಜಲಪ್ರಳಯದ ಸಂದರ್ಭದಲ್ಲಿ ನಿನ್ನ ಬಳಿಗೆ ಒಂದು ದೋಣಿಯನ್ನು ಕಳುಹಿಸುತ್ತೇನೆ. ಅದನ್ನು ನೀನು ಏರಿದ ನಂತರ ವಾಸುಕಿ ನಿನ್ನಲ್ಲಿಗೆ ಬರುತ್ತಾನೆ. ಅವನ ನೆರವಿನಿಂದ ನೀನು ಎಲ್ಲಾ ಸಸ್ಯಾದಿಗಳ ಬೀಜಗಳನ್ನೂ ನಾವೆಯಲ್ಲಿ ಶೇಖರಿಸಿಡು. ಆಗ ದೋಣಿಯನ್ನು ಮೀನಿನ ರೂಪದಲ್ಲಿ ಬಂದಿರುವ ನಾನೇ ಹೊತ್ತುಕೊಂಡು, ನಿನ್ನನ್ನು ಸಂರಕ್ಷಿಸುತ್ತೇನೆ. ಜೊತೆಗೆ ಆತ್ಮಜ್ಞಾನದ ದಿವ್ಯಮಂತ್ರವನ್ನೂ ನಿನಗೆ ಉಪದೇಶಿಸುತ್ತೇನೆ.” ಅನ್ನುತ್ತಾ ತಪಸ್ವಿಯ ಕಡೆ ತನ್ನ ಅಭಯಹಸ್ತವನ್ನು ತೋರಿಸುತ್ತಾ, ಅಂತರ್ಧಾನನಾದ.

ಸತ್ಯವ್ರತನು ಪರಮಾತ್ಮನ ಅಣತಿಯಂತೆ ತನಗೊಪ್ಪಿಸಿದ್ದ ಸಕಲ ಕಾರ್ಯಗಳನ್ನೂ ನಿಷ್ಠೆಯಿಂದ ಪೂರೈಸಿ, ಏಳು ದಿನಗಳೂ ದೋಣಿಗಾಗಿ ಕಾಯುತ್ತಾ ಕುಳಿತ. ಏಳನೆಯ ದಿನ ಜಲಪ್ರಳಯ ಆಯಿತು. ಭೂಮಿಯು ಜಲರಾಶಿಯಲ್ಲಿ ಮುಳುಗುತ್ತಿದ್ದಂತೆ, ಒಂದು ಚಿನ್ನದ ಬಣ್ಣದ ನೌಕೆ ಅಲ್ಲಿಗೆ ಬಂತು. ಸತ್ಯವ್ರತ ಪರಮಾತ್ಮನನ್ನು ಸ್ಮರಿಸುತ್ತಾ ಬೀಜಗಳು, ಔಷಧೋಪಯುಕ್ತ ಮೂಲಿಕೆಗಳು ಮೊದಲಾದುವುಗಳೊಂದಿಗೆ ನಾವೆಯನ್ನು ಏರಿದ. ಅದೇ ಸಮಯಕ್ಕೆ ಮತ್ಸ್ಯರೂಪದ ಮಹಾವಿಷ್ಣು ತೊಂಬತ್ತು ಲಕ್ಷ ಯೋಜನೆಯ ಉದ್ದದ ಚಿನ್ನದ ಬಣ್ಣದ ಮೀನೊಂದು ದೋಣಿಯ ಬಳಿ ಕಾಣಿಸಿಕೊಂಡಿತು. ಸತ್ಯವ್ರತನು ಅದರ ಮೂತಿಗೆ ವಾಸುಕಿ ರೂಪದ ಹಗ್ಗದಿಂದ ನಾವೆಗೆ ಬಿಗಿದ. ಜೊತೆಗೆ ಎರಡೂ ಕೈಗಳನ್ನು ಜೋಡಿಸಿಕೊಂಡು, ಮಹಾವಿಷ್ಣುವನ್ನು ಸ್ತುತಿಸತೊಡಗಿದ.

ಮತ್ಸ್ಯಾವತಾರಿಯಾದ ಮಹಾವಿಷ್ಣು ನಾವೆಯನ್ನು ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ. ಕೊಟ್ಟ ಮಾತಿನಂತೆ ಸತ್ಯವ್ರತನಿಗೆ ಆತ್ಮಜ್ಞಾನದ ಮಂತ್ರವನ್ನೂ ಉಪದೇಶಿಸಿದ. ಪ್ರಳಯ ಮುಗಿಯುತ್ತಿದ್ದಂತೆ ಸೋಮಕ ರಕ್ಕಸನನ್ನು ಹಿಡಿದ. ಅವನ ಉದರವನ್ನೇ ಸೀಳಿ, ವೇದಗ್ರಂಥಗಳನ್ನು ಪಡೆದು ಎಚ್ಚೆತ್ತಿದ್ದ ಬ್ರಹ್ಮನಿಗರ್ಪಿಸಿದ. ಈ ಸತ್ಯವ್ರತ ರಾಜರ್ಷಿಯೇ ಮುಂದಿನ ಯುಗದಲ್ಲಿ ವೈವಸ್ವತಮನು.