ಒಂದು ಅಗುಳು ಅನ್ನ
ವನವಾಸಕ್ಕೆ ಹೋದ ಪಾಂಡವರು ಋಷಿ ಮುನಿಗಳ ಜೊತೆ ಸಂತೋಷದಿಂದ ಇದ್ದಾರೆ ಎಂಬುದನ್ನು ಕೇಳಿದ ದುರ್ಯೋಧನನಿಗೆ ಹೊಟ್ಟೆ ಉರಿ ಉಂಟಾಯಿತು. ಅವರಿಗೆ ಕೇಡನ್ನು ಮಾಡುವುದು ಹೇಗೆ ಎಂದು ದುಶ್ಯಾಸನಾದಿಗಳೊಡನೆ ಆಲೋಚನೆ ಮಾಡಿದನು.
ಅದೇ ಸಮಯಕ್ಕೆ 16,000 ಶಿಷ್ಯರೊಡನೆ ದೂರ್ವಾಸ ಮುನಿಗಳು ಅಲ್ಲಿಗೆ ಬಂದರು. ಅವರಿಗೆ ಅಪಾರವಾದ ಸತ್ಕಾರ ಮಾಡಿ ದುರ್ಯೋಧನನು ಭೂರಿ ಭೋಜನವಿತ್ತು ಉಪಚರಿಸಿದನು. ಅವರು ಹೊರಡುವ ವೇಳೆಯಲ್ಲಿ `ದುರ್ಯೋಧನ, ನಿನ್ನ ಪ್ರೀತಿಯೂ, ಉಪಚಾರವೂ ನನಗೆ ಬಹಳ ಸಂತೋಷವನ್ನುಂಟು ಮಾಡಿದೆ. ನಿನಗೆ ಬೇಕಾದ ವರವನ್ನು ಕೇಳು’ ಎಂದರು. ಆಗ ಪಾಂಡವರನ್ನು ಹಿಂಸಿಸುವ ಮನಸ್ಸುಳ್ಳ ದುರ್ಯೋಧನನು, ಅತಿ ವಿನಯವನ್ನು ನಟಿಸುತ್ತಾ `ಮಹಾಮುನಿವರ್ಯರೇ, ಪಾಂಡವರು ಈಗ ಕಾಡಿನಲ್ಲಿದ್ದಾರೆ, ಇಲ್ಲಿ ಬಂದು ಅತಿಥ್ಯವನÀ್ನು ಸ್ವೀಕರಿಸಿದಂತೆ ಅಲ್ಲಿಯೂ ಹೋಗಿ ಅವರಿಂದ ಉಪಚಾರ ಪಡೆದು ನಮ್ಮನ್ನು ಆಶೀರ್ವದಿಸಿದಂತೆ ಅವರಿಗೂ ಕೃಪೆ ಮಾಡಬೇಕು. ಆದರೆ ದ್ರೌಪದಿ ಊಟ ಮಾಡಿ ಮುಗಿಸಿದ ನಂತರ ನಿಮ್ಮ 16,000 ಶಿಷ್ಯರೊಡನೆ ಹಸಿವಿನಿಂದ ಅಲ್ಲಿಗೆ ಹೋಗಬೇಕು.’ ಎಂದು ಪ್ರಾರ್ಥಿಸಿದನು.
ಹೀಗೆ ದುರ್ಯೋಧನನು ಕೇಳಲು ಕಾರಣವುಂಟು. ಅದರಲ್ಲಿ ಒಂದು ದೊಡ್ಡ ಸಂಚೇ ಅಡಗಿದೆ. ವನವಾಸದಲ್ಲಿ ಸೂರ್ಯನು ಪಾಂಡವರಿಗೆ ಆಹಾರ ಸೌಕರ್ಯಕ್ಕಾಗಿ ಅಕ್ಷಯ ಪಾತ್ರೆಯನ್ನು ಕೊಟ್ಟಿದ್ದಾನೆ. ಅದರಲ್ಲಿ ಎಷ್ಟು ವಿಧವಾಗಿ ಬೇಕಾದರೂ, ಎಷ್ಟಾದರೂ ಭೋಜನವನ್ನು ಪಡೆಯಬಹುದು. ಆದರೆ ದ್ರೌಪದಿ ಊಟ ಮಾಡಿಬಿಟ್ಟರೆ ಅದರಲ್ಲಿ ಆಮೇಲೆ ಆಹಾರ ದೊರೆಯುವುದಿಲ್ಲ. ಆದ್ದರಿಂದಲೇ ದುರ್ಯೋಧನನು ದ್ರೌಪದಿಯ ಊಟವಾದ ಮೇಲೆÉ ಹಸಿವಿನಿಂದ 16,000 ಶಿಷ್ಯರೊಡನೆ ಹೋಗಬೇಕೆಂದು ತಿಳಿಸಿದ. ಆಗ ದೂರ್ವಾಸರಿಗೆ ಅತಿಥ್ಯ ಮಾಡಲಾದದೆ ಕಷ್ಟಪಡುತ್ತಾರೆ. ಆಗ ಕೋಪಗೊಂಡ ದೂರ್ವಾಸರು ಪಾಂಡವರನ್ನು ಶಪಿಸುತ್ತಾರೆ. ಆಗ ಪಾಂಡವರು ನಾಶವಾಗುತ್ತಾರೆ. ಇದೇ ದುರ್ಯೋಧನನ ತÀಂತ್ರ.
ದುರ್ಯೋಧನನು ತಿಳಿಸಿದಂತೆಯೇ ದೂರ್ವಾಸರು ತನ್ನ ಎಲ್ಲ ಶಿಷ್ಯರನ್ನು ಕರೆದುಕೊಂಡು ಪಾಂಡವರು ವಾಸವಾಗಿದ್ದ ಕಾಡಿಗೆ ಬಂದರು ಮಟ ಮಟ ಮಧ್ಯಾಹ್ನದಲ್ಲಿ ಪಾಂಡವರ ಗುಡಿಸಿಲಿಗೆ ಕಾಲಿಟ್ಟರು. ಧರ್ಮರಾಜನು ಮಹಾಮುನಿಯನ್ನು ಅತ್ಯಂತ ಭಕ್ತಿ ಆದರಗಳಿಂದ. ಎದುರುಗೊಂಡು ಉಪಚರಿಸಿದನು. ಅವನಿಗೆ ಯಾವ ಸಂದೇಹವೂ ಏರ್ಪಡಲಿಲ್ಲ.
ಅನಂತರ ಧರ್ಮರಾಜನು `ಸ್ವಾಮಿ ಮುನಿವರ್ಯರೇ ತಾವು ಸ್ನಾನ ಮಾಡಿ ತಮ್ಮ ಸಂಧ್ಯಾವಂದನೆ ಪೂಜೆ, ಅನುಷ್ಠಾನಗಳೆಲ್ಲವನ್ನೂ ಎಂದುಮಾಡಿಕೊಂಡು ಬರಬೇಕು’ ಎಂದು ಪ್ರಾರ್ಥಿಸಿದನು. ದೂರ್ವಾಸರು ತಮ್ಮ ಶಿಷ್ಯರೊಡನೆ ನದಿಗೆ ಹೊರಟರು. ಅವರೆಲ್ಲರೂ ಹಿಂತಿರುಗಿ ಬರುವಷ್ಟರಲ್ಲಿ ಅವರಿಗೆ ಮಾಡಬೇಕಿದ್ದ ಔತಣದ ಬಗ್ಗೆ ದ್ರೌಪದಿಯೊಡನೆ ಆಲೋಚಿಸಿದನು. ಆಗ ಅವಳು `ಆರ್ಯಪುತ್ರ, ಸೂರ್ಯ ಭಗವಾನನು ನನಗೆ ನೀಡಿರುವ ಅಕ್ಷಯ ಪಾತ್ರೆಯು ನಾನು ಊಟ ಮಾಡುವವರೆಗೆ ಮಾತ್ರವೇ ಭೋಜನವನ್ನು ನೀಡುತ್ತದೆ. ನಾನು ಈಗ ತಾನೇ ಊಟಮಾಡಿ ಮುಗಿಸಿದೆ. ಪಾತ್ರೆಯನ್ನು ತೊಳೆದೂಬಿಟ್ಟೆ. ಇನ್ನು ಮುಂದಿನ ವೇಳೆ ಬರುವವರೆಗೂ ಭೋಜನ ಇಲ್ಲವಲ್ಲ’ ಎಂದು ಬಹಳ ಚಿಂತಿತಳಾದಳು.
ಅವರು ಹಿಂತಿರುಗಿ ಬಂದ ಒಡನೇ ಔತಣ ನೀಡದಿದ್ದರೆ ಮುನಿಗಳ ಶಾಪಕ್ಕೆ ಗುರಿಯಾಗಬೇಕಾಗುವುದಲ್ಲ, ಏನು ಮಾಡುವುದು ಎಂದು ಸಂಕಟಕ್ಕೆ ಒಳಗಾದರು.
ಆಪತ್ತಿನಲ್ಲೆಲ್ಲಾ ರಕ್ಷಿಸುವ ಕೃಷ್ಣನನ್ನು ಬಿಟ್ಟರೆ ಈಗ ತಮ್ಮ ಸಹಾಯಕ್ಕೆ ಬೇರಾರೂ ಇಲ್ಲ ಎಂದು ಯೋಚಿಸಿದ ದ್ರೌಪದಿ ಕೂಡಲೇ ಮನಸ್ಸಿನಲ್ಲಿ ಭಕ್ತಿಯಿಂದ ಕೃಷ್ಣನನ್ನು ಧ್ಯಾನಿಸಿದಳು. `ಹೇ ಕೃಷ್ಣ, ದುಃಖದಲ್ಲಿರುವವರ ಸಂಕಟವನ್ನು ಓಡೋಡಿ ಬಂದು ಪರಿಹರಿಸುವ ಕರುಣಾ ಸಾಗರನೇ, ಅಂದು ದುರ್ಯೋಧನನ ಖ್ಯಾತ ಸಭೆಯಲ್ಲಿ ನನ್ನ ಮಾನವನ್ನು ರಕ್ಷಿಸಲು ಬಂದವನೇ, ಇಂದಿನ ಈ ಆಪತ್ತಿನಿಂದಲೂ ನೀನೇ ನಮ್ಮನ್ನು ರಕ್ಷಿಸಬೇಕು’ ಎಂದು ಪ್ರಾರ್ಥಿಸಿದಳು.
ತನ್ನ ಭಕ್ತಳಿಗೆ ಒದಗಿದ ಆಪತ್ತನ್ನು ಅರಿತ ಕೃಷ್ಣ ಪರಮಾತ್ಮ ಕೂಡಲೇ ದ್ರೌಪದಿಯ ಮುಂದೆ ಪÀ್ರತ್ಯಕ್ಷನಾದ. ದೂರ್ವಾಸರೂ ಶಿಷ್ಯರೂ ಬಂದಿರುವುದನ್ನು ದ್ರೌಪದಿ ತಿಳಿಸಿದಳು. ಆಗ ಕೃಷ್ಣ ನನಗೂ ಹಸಿವಾಗುತ್ತಿದೆ. ತಿನ್ನುವುದಕ್ಕೆ ಏನಿದೆ ನಿಮ್ಮಲ್ಲಿ? ಎಂದಾಗ ದುಃಖ ತಾಳಲಾರದೆ ದ್ರೌಪದಿ ಬಿಕ್ಕಿ ಬಿಕ್ಕಿ ಅತ್ತಳು. ಆಗ ಕೃಷ್ಣ ಹೇ ದ್ರೌಪದಿ, ನೀನು ತೊಳೆದಿಟ್ಟಿರುವ ಅಕ್ಷಯ ಪಾತ್ರೆಯನ್ನು ತೆಗೆದುಕೊಂಡು ಬಾ ಅದರಲ್ಲಿ ಏನಾದರೂ ಇದ್ದರೂ ಇರಬಹುದು. ಎಂದಾಗ `ಪರಿಹಾಸ್ಯ ಮಾಡುವಿಯಾ ಕೃಷ್ಣ’ ಎಂದು ದ್ರೌಪದಿ ಕೇಳಿದಾಗ `ಇಲ್ಲ ಇಲ್ಲ ನೀನು ತೆಗೆದುಕೊಂಡು ಬಾ’ ಎಂದು ಬಲವಂತ ಮಾಡಿದನು. ಕೃಷ್ಣನ ಮಾತನ್ನು ಮೀರಲಾರದೆ ತೊಳೆದು ಕವುಚಿ ಇಟ್ಟಿದ್ದ ಅಕ್ಷಯ ಪಾತ್ರೆಯನ್ನು ತಂದು ದ್ರೌಪದಿ ಕೃಷ್ಣನ ಕೈಗೆ ಕೊಟ್ಟಳು. ಅದನ್ನು ತಿರುಗಿಸಿ ತಿರುಗಿಸಿ ಸೂಕ್ಷ್ಮವಾಗಿ ನೋಡಿ `ದ್ರೌಪದಿ, ಇದೋ ನೋಡು ಪಾತ್ರೆಯ ಒಂದು ಮೂಲೆಯಲ್ಲಿ ಒಂದು ಅಗುಳು ಅನ್ನವೂ ಸೊಪ್ಪಿನ ಚೂರೂ ಅಂಟಿಕೊಂಡಿದೆ. ಇದು ನನಗೆ ಸಾಕು’ ಎಂದು ಹೇಳಿ ಅದನ್ನು ತನ್ನ ಬಾಯಲ್ಲಿ ಹಾಕಿಕೊಂಡು ತಿಂದುಬಿಟ್ಟನು. `ಲೋಕನಾಯಕನು ಇದರಿಂದ ತೃಪ್ತಿ ಹೊಂದಲಿ’ ಎಂದು ಹೇಳಿದನು.
ಅನಂತರ ಧರ್ಮರಾಜನನ್ನು ಕರೆದು ದೂರ್ವಾಸ ಮುನಿಗಳನ್ನೂ ಶಿಷ್ಯರನ್ನೂ ಭೋಜನಕ್ಕೆ ಕರೆತರುವಂತೆ ತಿಳಿಸಿದನು. ಆಗ ಧರ್ಮರಾಜನು ಸಹದೇವನನ್ನು ಕರೆದು ಮುನಿಗಳನ್ನು ಕರೆದು ತಾ ಎಂದು ಆಜ್ಞಾಪಿಸಿದನು. ಆದರೂ ಭೋಜನವೇ ಇಲ್ಲವಲ್ಲ. ಅತಿಥಿಗಳಿಗೆ ಈ ಕೃಷ್ಣ ಏನು ಔತಣ ಮಾಡುವನೋ’ ಎಂದು ಪಾಂಡವರೂ ದ್ರೌಪದಿಯೂ ವ್ಯಾಕುಲಗೊಂಡರು.
ಅಲ್ಲಿ ನದಿಯಲ್ಲಿ ದೂರ್ವಾಸರೂ ಶಿಷ್ಯರೂ ಸ್ನಾನ ಮಾಡುತ್ತಿದ್ದರು. ಸಹದೇವನು ಅವರ ಬಳಿಗೆ ಹೋದನು. ಆಗ ಮುನಿವರ್ಯರಿಗೂ ಅವರ ಶಿಷ್ಯರಿಗೂ ಅಪಾರವಾಗಿ ತಿಂದು ಹೊಟ್ಟೆ ಭಾರವಾದ ಹಾಗೆ ತೋರಿತು. ಹೊಟ್ಟೆ ಭಾರವನ್ನು ತಡೆಯಲಾರದೆ ಒದ್ದಾಡುವಂತಾಯಿತು. ಆಗ ಅವರೆಲ್ಲರಿಗೂ ಅತ್ಯಂತ ಆಶ್ಚರ್ಯವಾಯಿತು. ಅವರಿಗೆ ಏನು ಮಾತನಾಡುವುದಕ್ಕೂ ತೋಚಲಿಲ್ಲ. ಆಗ ಒಬ್ಬ ಶಿಷ್ಯನು `ಹೇ ಗುರುವೇ, ಧರ್ಮರಾಜನಿಗೆ ಭೋಜನವನ್ನು ಸಿದ್ಧಪಡಿಸುವಂತೆ ಹೇಳಿಬಿಟ್ಟೆವಲ್ಲ. ಈಗ ಹೊಟ್ಟೆ ಅಪಾರವಾಗಿ ತುಂಬಿಹೋಗಿದೆ. ಒಂದು ಸಾಸಿವೆ ಕಾಳಿನಷ್ಟೂ ತಿನ್ನಲು ಸಾಧ್ಯವಿಲ್ಲವಲ್ಲ. ಭೋಜನವು ವ್ಯರ್ಥವಾಗಿ ಹೋಗುವುದಲ್ಲಾ ಏನು ಮಾಡುವುದು’ ಎಂದು ಕೇಳಿದನು.
ಆಗ ದೂರ್ವಾಸರು `ನಾವಲ್ಲಿ ಹೋಗಿ ಊಟ ಮಾಡದಿದ್ದರೆ ಧರ್ಮಪುತ್ರನಿಗೆ ಬಹಳ ಬೇಸರವಾಗುತ್ತದೆ. ಪಾಂಡವರು ಕೋಪಾಗ್ನಿಯಿಂದ ನಮ್ಮನ್ನು ಸುಟ್ಟುಬಿಡುತ್ತಾರೆ. ಅವರು ಸಜ್ಜನರು. ಬಲಿಷ್ಠರು, ಭಕ್ತರು ವಿಶೇಷವಾಗಿ ಶ್ರೀಕೃಷ್ಣನಲ್ಲಿ ಭಕ್ತಿಯುಳ್ಳವರು. ಈಗ ಅವರನ್ನು ಹೋಗಿ ಕಾಣುವುದು ಸರಿಯಲ್ಲ’ ಎಂದು ಕಳವಳದಿಂದ ಹೇಳಿದರು. ಶಿಷ್ಯರೋ ಹೊಟ್ಟೆ ಹಿಡಿದುಕೊಂಡು ಕಷ್ಟಪಡುತ್ತಾ `ಅಯ್ಯೋ ಏಳಲೂ ಆಗುತ್ತಿಲ್ಲ’ ಎಂದು ಒದ್ದಾಡುತ್ತಿದ್ದರು.
ದುಷ್ಟನಾದ ದುರ್ಯೋಧನನಿಗೆ ವರಕೊಟ್ಟದ್ದು ದೊಡ್ಡ ತಪ್ಪು ಎಂದು ದೂರ್ವಾಸರು ತೊಳಲಾಡಿದರು. ಆಗ ಅಲ್ಲಿಗೆ ಬಂದ ಸಹದೇವನು `ಮಹಾ ಮುನಿಗಳೇ, ತಾವು ಶಿಷ್ಯರೊಡನೆ ಭೋಜನಕ್ಕೆ ಬರಬೇಕು ತಮ್ಮನ್ನು ಶ್ರೀಕೃಷ್ಣನೂ ನನ್ನ ಅಣ್ಣಂದಿರೂ ಎದುರು ನೋಡುತ್ತಿದ್ದಾರೆ! ಎಂದನು. ಕೃಷ್ಣನ ಹೆಸರನ್ನು ಕೇಳಿದ ಕೂಡಲೇ ದೂರ್ವಾಸರು ಗಡಗಡ ನಡುಗಿದರು. ಶಿಷ್ಯರನ್ನು ನೋಡಿ `ಹೇಗಾದರೂ ಮಾಡಿ ಎದ್ದು ಬನ್ನಿ ಪಾಂಡವರು ಇರುವ ಸ್ಥಳಕ್ಕೆ ಹೋಗೋಣ, ಬೇರೆ ದಾರಿಯಿಲ್ಲ’ ಎಂದರು. ಎಲ್ಲರೂ ಎದ್ದು ಅತಿ ಕಷ್ಟದಿಂದ ಪಾಂಡವರ ಗುಡಿಸಿಲಿಗೆ ಬಂದರು.
ಧರ್ಮರಾಜನೂ ಉಳಿದವರೂ ಅವರನ್ನು ನಗುಮುಖದಿಂದ ಸ್ವಾಗತಿಸಿದರು. ಕೃಷ್ಣನು ದೂರ್ವಾಸರನ್ನು ನಿಟ್ಟಿಸಿ ನೋಡಿದನು. ದೂರ್ವಾಸರ ಮುಖವು ಭಯದಿಂದ ಬಿಳಿಚಿಕೊಂಡಿತ್ತು. ನಾಚಿಕೆಯಿಂದ ಅವರು ತಲೆ ತಗ್ಗಿಸಿದರು. ಕೃಷ್ಣನನ್ನು ಕುರಿತು ದೀನ ಸ್ವರದಿಂದ, `ಭಗವಂತನೇ ನಾನು ವಂಚನೆಗೆ ಸಹಾಯಕನಾಗಿಬಿಟ್ಟೆ. ಪುಣ್ಯಶಾಲಿಗಳಾದ ಪಾಂಡವರಿಗೆ ದ್ರೋಹ ಮಾಡಲು ಯತ್ನಿಸಿದೆ. ನಿನ್ನ ಪ್ರೇಮ, ಕೃಪೆ ಇರುವವರೆಗೆ ಅವರನ್ನು ಯಾರೂ ಏನೂ ಮಾಡಲೂ ಸಾಧ್ಯವಿಲ್ಲ. ನನ್ನನ್ನು ಕ್ಷಮಿಸಿಬೇಕು’ ಎಂದು ಪ್ರಾರ್ಥಿಸಿದರು.
ಆಗ ದ್ರೌಪದಿ ಕೃಷ್ಣನನ್ನು ನೋಡಿ! ಪರಮಾತ್ಮ, ಈಗ ನಿನ್ನ ಯೋಜನೆಯ ಅರ್ಥವಾಗುತ್ತಿದೆ. ಒಂದು ಅಗುಳು ಅನ್ನಕ್ಕಾಗಿ ಏಕೆ ಹಸಿದು ಬಂದೆ ಎಂದು ತಿಳಿಯುತ್ತಿದೆ. ಆ ಒಂದು ಅಗುಳನ್ನು ನೀನು ಉಂಡದ್ದರಿಂದ ಈ ಮುನಿವರ್ಯರಿಗೂ ಅವರ ಶಿಷ್ಯರಿಗೆ ಅಪಾರವಾದ ತೃಪ್ತಿ ಉಂಟಾಗಿದೆ. ಇದರಿಂದಲೇ ಸಮಸ್ತ ಜೀವಿಗಳೂ ನಿನ್ನಲ್ಲಿ ಅಡಗಿವೆ ಎಂಬುದು ತಿಳಿಯುತ್ತದೆ. ನಮಗೆ ನೀನೇ ಶರಣು ಗುರು. ಗೆಳೆಯ, ಬಂಧು, ಬಾಂಧವ, ತಾಯಿ, ತಂದೆ ಆಗಿದ್ದೀಯೆ ಎಂದು ಹೇಳಿ ಭಕ್ತಿಯಿಂದ ನಮಸ್ಕರಿಸಿದಳು.
ದೂರ್ವಾಸರನ್ನು ಶಿಷ್ಯರನ್ನೂ ಕ್ಷಮಿಸಿ ಶ್ರೀಕೃಷ್ಣನು ಅನುಗ್ರಹಿಸಿದನು. ಎಲ್ಲರೂ ಶ್ರೀಕೃಷ್ಣನನ್ನು ಹಾಡಿ ಕೊಂಡಾಡಿದರು.