ಭಾಗವತ ಕಥೆಗಳು

ಜನಕ ಮಹಾರಾಜನ ಸ್ವಪ್ನ ಜನಕರಾಜ ಒಂದು ದಿನ ಅವನ ಅರಮನೆಯ ಶಯ್ಯ ಗೃಹದಲ್ಲಿ ಮಲಗಿದ್ದಾನೆ. ಅವನಿಗೆ ಒಂದು ಸ್ವಪ್ನ ಬೀಳುತ್ತದೆ. ರಾಜ್ಯಕ್ಕೆ 12 ವರ್ಷ ಬರಗಾಲ ಬಂದಿದೆ. ಜನರಿಗೆ ಆಹಾರ ನೀರಿಗೆ ಬರ. ರಾಜನು, ರಾಜಧಾನಿ ಬಿಟ್ಟು ಎಲ್ಲವನ್ನು ಬಿಟ್ಟು ಅನ್ನಕ್ಕಾಗಿ ಅಲೆಯುತ್ತಾನೆ. ಅವನಿಗೆ ಬಹಳ ಹಸಿವಾಗಿದೆ. ಅಲ್ಲಿ ಒಂದು ಧರ್ಮ ಛತ್ರ. ಅಲ್ಲಿ ಅನ್ನ ಕೊಡುತ್ತಾರೆ. ಅಲ್ಲಿಗೆ ಹೋದ. ಅನ್ನ ಹಾಕಿದರು. ಅದನ್ನೇ ಅಮೃತವೆಂದು ಭಾವಿಸಿ ಎರಡೂ ಕೈಯಲ್ಲಿ ಅನ್ನವನ್ನು ಹಿಡಿದು ಹೋಗುತ್ತಿದ್ದಾನೆ. ಎರಡು ಹೋರಿಗಳು ಒಂದಕ್ಕೊಂದು ಜಗಳವಾಡುತ್ತಾ ಇವನ ಮೇಲೆ ಬಂದವು. ಇವನೂ ಬಿದ್ದ. ಕೈಯಲ್ಲಿರುವ ಅನ್ನ ಕೆಳಗೆ ಬಿತ್ತು. ಎಚ್ಚರವಾಯಿತು. ಪಲ್ಲಂಗದ ಮೇಲೆ ಮಲಗಿದ್ದಾನೆ. ಅವನಿಗೆ ಆಶ್ಚರ್ಯವಾಯಿತು. ಅದು ನಿಜವೆ? ಅಥವಾ ಇದು ನಿಜವೇ? ಎಂದು ಆಸ್ಥಾನದಲ್ಲಿ ಈ ಪ್ರಶ್ನೆಯನ್ನು ಹಾಕಿದ.

ಅದು ನಿಜವೇ? ಇದು ನಿಜವೇ? ಯಾರೂ ಹೇಳಲಿಲ್ಲ. ನಾಳೆ ಹೇಳದೆ ಹೋದರೆ ನಿಮ್ಮನ್ನು ಮಂತ್ರಿ ಪದವಿಯಿಂದ ತೆಗೆಯುತ್ತೇನೆಂದ. ಎಲ್ಲಾ ಮಂತ್ರಿಮಾಗದವರು ಹೆದರಿದರು. ಅವರಲ್ಲಿ ಕಹೋಳ ಎಂಬ ಮಂತ್ರಿ ಇದ್ದ. ಅವನು ಪೆಚ್ಚು ಮೋರೆಯಿಂದ ಮನೆಗೆ ಬಂದು ಯೋಚಿಸುತ್ತಾ ಇರುತ್ತಾನೆ. ಅವನ ಮಗನನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿದ್ದರು.ಏಕೆಂದರೆ ಅವನ ಶರೀರ ಎಂಟು ಸಾರಿ ಸುತ್ತಿದ್ದು ಅಷ್ಟಾವಕ್ರನಾಗಿದ್ದ. ತಂದೆಯ ಚಿಂತೆಯನ್ನು ದೂರದಿಂದ ನೋಡಿ, ‘ಏಕಪ್ಪ ಸುಮ್ಮನೆ ಕುಳಿತಿದ್ದೀಯೆ?’ ಎಂದ. ಬಹಳ ಪೀಡಿಸಿದ ಮೇಲೆ ಹೇಳಿದ. ‘ಅದು ನಿಜವೋ ಇದು ನಿಜವೋ? ಎಂದು ರಾಜ ಕೇಳಿದ. ಯಾರೂ ಉತ್ತರ ಹೇಳಲಿಲ್ಲ. ನಾಳೆ ಉದಯ ಯಾರೂ ಹೇಳದಿದ್ದರೆ ನಿಮ್ಮನ್ನು ಕೆಲಸದಿಂದ ತೆಗೆಯುತ್ತೇನೆಂದು ಹೆದರಿಸಿದ್ದಾನೆ.’ ‘ಹೌದು ಅವನ ಪ್ರಶ್ನೆಗೆ ಉತ್ತರ ಹೇಳದಿದ್ದರೆ ನಿಮ್ಮನ್ನೆಲ್ಲಾ ತೆಗೆಯುವುದೇ ಒಳ್ಳೆಯದು. ನಾನು ನಾಳೆ ಬೆಳಿಗ್ಗೆ ಬಂದು ಉತ್ತರ ಹೇಳುತ್ತೇನೆ ಎಂದು ರಾಜನಿಗೆ ಹೇಳು’ ಎಂದು ತಂದೆÀಯನ್ನು ಕಳಿಸಿದ. ನನ್ನ ಪ್ರಶ್ನೆಗೆ ಉತ್ತರವನ್ನು ಹೇಳುವವನು ಒಬ್ಬನಾದರೂ ನನ್ನ ರಾಜ್ಯದಲ್ಲಿದ್ದಾನಲ್ಲ, ಅದೇ ನನ್ನ ಪುಣ್ಯ ಎಂದುಕೊಂಡ. ಮಾರನೇ ದಿವಸ ರಾಜನ ಪ್ರಶ್ನೆಗೆ ಉತ್ತರ ಹೇಳುವವನು ಇದ್ದಾನೆ. ಏನು ಹೇಳುತ್ತಾನೆ ಕೇಳೋಣವೆಂದು ಭಾರಿ ಸಭೆ ಸೇರಿದೆ.

ಈ ಅಷ್ಟಾವಕ್ರ ತಿರುಗುತ್ತಾ ತಿರುಗುತ್ತಾ ಬರುವುದನ್ನು ನೋಡಿ ಸಭೆಯಲ್ಲಿರುವವರೆಲ್ಲಾ ನಕ್ಕರು. ಆಗ ಅಷ್ಟಾವಕ್ರ ಆಸ್ಥಾನದ ದಾರಿ ಬಿಟ್ಟು ಬೇರೆ ಕಡೆ ಹೊರಟ. ಜನಕನೇ ಹೋಗಿ ನಮಸ್ಕರಿಸಿ ‘ಬನ್ನಿ’ ಎಂದ. ‘ಇಲ್ಲ ನಾನು ಸತ್ಯವಂತ, ಧರ್ಮವಂತ, ಪ್ರಜಾಹಿತಕಾರಿ ಜನಕರಾಜನ ಸಭೆಗೆ ಎಂದು ಬಂದೆ. ಆದರೆ ಆಕಸ್ಮಿಕವಾಗಿ ದಾರಿ ಬಿಟ್ಟು ಚಾಂಡಾಲರ ಸಭೆಗೆ ಬಂದಿದ್ದೇನೆ’ ಎಂದ. ‘ಇಲ್ಲ ಸ್ವಾಮಿ, ಇದೇ ಜನಕರಾಜನ ಸಭೆ’ ಬರಬೇಕೆಂದು ಬೇಡಿದ. ಅಷ್ಟಾವಕ್ರ ಉತ್ತಮ ಸ್ಥಾನದಲ್ಲಿ ಕುಳಿತ. ‘ರಾಜ ನಿನ್ನ ಪ್ರಶ್ನೆ ಏನು?’ ‘ಸ್ವಾಮಿ ನನ್ನ ಪ್ರಶ್ನೆ ಇಷ್ಟೆ. ಈ ವಾಸ್ತವಿಕ ಪ್ರಪಂಚ ನಿಜವೋ ಅಥವಾ ಸ್ವಪ್ನದಲ್ಲಿ ಬಿದ್ದಂತಹ ಪ್ರಪಂಚ ನಿಜವೋ?’ ‘ಇಂತಹ ಸಣ್ಣ ಪ್ರಶ್ನೆಗೆ ಇವರು ಯಾರೂ ಉತ್ತರ ಹೇಳಲಿಲ್ಲವೆ? ಜನಕ ಅದೂ ಸುಳ್ಳು ಇದೂ ಸುಳ್ಳು. ಎರಡೂ ಕಡೆ ಇದ್ದು, ಎರಡನ್ನೂ ನೋಡುವ ನೀನೆ ಸತ್ಯ’ ಎಂದ.

‘ಹೌದು ಜಗತ್ತಿನಲ್ಲಿ ನಾವು ಮಠ-ಮನೆ, ತಂದೆ-ತಾಯಿ, ಗುರು-ಹಿರಿಯರು ಎಂದು ಇರುತ್ತೇವೆ. ಯಾವಾಗ ನಿದ್ದೆ ಬಂದಿತೋ, ಸ್ವಪ್ನ ಬಿದ್ದಿತ್ತು. ಸ್ವಪ್ನದಲ್ಲಿರುವ ಸಂತತಿಯೇ ಬೇರೆ. ಅಲ್ಲಿ ಸೂರ್ಯ ಚಂದ್ರ ನಕ್ಷತ್ರ ಮನೆ ಮಠ ಎಲ್ಲಾ ಇದ್ದಾರೆ. ಸ್ವಪ್ನದಲ್ಲಿ ಈ ಸ್ವಪ್ನ ಪ್ರಪಂಚ ಎಲ್ಲಿಂದ ಬಂತು? ಇದೆಲ್ಲಾ ನಿನ್ನಿಂದಲೇ ಹುಟ್ಟಿ ಬಂತು. ನಿನ್ನಲ್ಲೇ ಇತ್ತು. ನೀನು ಎಚ್ಚರವಾದ ಕೂಡಲೇ ನಿನ್ನಲ್ಲಿ ಒಂದಾಯಿತು. ಈ ನಿದ್ದೆ ಬರುವವರೆಗೆ ಇದು ಜಾಗ್ರತಾವಸ್ಥೆ. ಇದು ಎಲ್ಲಿಯವರೆಗೆ ಇರುತ್ತದೆ? ನಿದ್ದೆ ಬರುವವರೆಗೆ ಮಾತ್ರ ಇರುತ್ತದೆ. ಆಗ ಈ ಜಾಗ್ರತಾವಸ್ಥೆಯಲ್ಲಿ ಕಂಡ ಈ ಪ್ರಪಂಚ ನಿನ್ನಲ್ಲೇ ಒಂದಾಗಿ ಹೋದವು. ಅದ್ದರಿಂದ ನೀನು ಜಾಗ್ರತ. ಸ್ವಪ್ನ ಎರಡಾವಸ್ಥೆಯನ್ನು ಮತ್ತು ನಿದ್ದೆಯಲ್ಲಿ ಏನು ಇಲ್ಲದೆ ಇರುವುದನ್ನೂ ನೋಡುತ್ತೀಯಾ. ಆದ್ದರಿಂದ ನೀನು ಸತ್ಯ. ಈ ಜಾಗ್ರತ-ಸ್ವಪ್ನ-ಸುಷುಪ್ತಿಗಳು ಮೂರಾವಸ್ಥೆಗಳು ಮಿಥ್ಯ. ಮೂರರಲ್ಲಿ ಬೆಳಗುವ ನಾನೊಬ್ಬನೇ ಸತ್ಯ. ಇದೇ ವೇದಾಂತ ಸಿದ್ಧಾಂತ. ನೀನೆ ಮೂರಾವಸ್ಥೆಯಲ್ಲಿರುವ ಸಾಕ್ಷಿ.’