ಅರ್ಜುನ ಪಾಶುಪತಾಸ್ತ್ರ ಪಡೆದದ್ದು
ಕಾಮ್ಯಕವನದಿಂದ ಪಾಂಡವರು ದ್ವೈತವನಕ್ಕೆ ಬಂದರು. ಒಂದು ಬಾರಿ ಅಲ್ಲಿಗೆ ವೇದವ್ಯಾಸರು ಆಗಮಿಸಿದರು. ಧರ್ಮರಾಜನು ಬಹಳ ಗೌರವದಿಂದ ಅವರನ್ನು ಬರಮಾಡಿಕೊಂಡನು. ಅತಿಥಿ ಸತ್ಕಾರದ ನಂತರ ಮಾತುಕತೆ ನಡೆಯಿತು. “ಪಾಂಡವರೇ, ನಿಮ್ಮ ಸತ್ಯಸಂಧತೆ ಹಾಗೂ ಪ್ರಾಮಾಣಿಕ ಜೀವನವೇ ನಿಮಗೆ ರಕ್ಷಾಕವಚ. ಸತ್ಯಕ್ಕೆ ಚ್ಯುತಿ ಉಂಟೆ? ಅರಣ್ಯವಾಸ, ಅಜ್ಞಾತವಾಸವನ್ನು ನೀವು ನಿರ್ವಿಘ್ನರಾಗಿ ಕಳೆಯುವಿರಿ. ನಿಮ್ಮ ವೈರಿಗಳಿಗೆ ಮುಂದೆ ಮಣ್ಣು ಮುಕ್ಕಿಸಿ, ಸರಿಯಾದ ಪಾಠ ಕಲಿಸುವಿರಿ. ಅಲ್ಲದೆ ಶ್ರೀಕೃಷ್ಣ ಪರಮಾತ್ಮನೇ ನಿಮ್ಮ ಕಡೆ ಇರುವಾಗ ನಿಮಗೆ ಬೇರಾವ ಅಂಜಿಕೆಗೂ ಅವಕಾಶವೇ ಇಲ್ಲವಲ್ಲ.”
ವೇದವ್ಯಾಸರು ಪಾಂಡವರಿಗೆ ಅನುಕೂಲ ಮಾಡಿಕೊಡಲು ಬಂದಿದ್ದರು. ಧರ್ಮರಾಜನನ್ನು ಏಕಾಂತದಲ್ಲಿ ಕರೆದು ಅರ್ಜುನನಿಗೆ ಪಾಶುಪತಾಸ್ತ್ರವನ್ನು ದೊರಕಿಕೊಡುವ ಬೀಜಾಕ್ಷರ ಮಂತ್ರವನ್ನು ಉಪದೇಶಿಸಿದರು. “ಧರ್ಮರಾಜ, ನಿನ್ನ ತಮ್ಮ ಅರ್ಜುನನಿಗೆ ಈ ಮಂತ್ರವನ್ನು ಉಪದೇಶ ಮಾಡು. ಅವನು ಇಂದ್ರಕೀಲ ಪರ್ವತಕ್ಕೆ ಪರಮೇಶ್ವರನನ್ನು ಕುರಿತು ತಪಸ್ಸು ಮಾಡಲು ಕಳುಹಿಸು. ಶಿವನು ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.” ವೇದವ್ಯಾಸರ ಮಾತಿನಂತೆ ಧರ್ಮರಾಜನು ಅರ್ಜುನನಿಗೆ ಷಡಾಕ್ಷರಿ ಮಂತ್ರವನ್ನು ಉಪದೇಶ ಮಾಡಿ ಇಂದ್ರಕೀಲ ಪರ್ವತಕ್ಕೆ ಕಳುಹಿಸಿದನು.
ಅರ್ಜುನನು ಕೈಲಾಸ ಪರ್ವತದಲ್ಲಿ ಬಹಳ ಶ್ರದ್ಧೆಯಿಂದ ಪರಶಿವನನ್ನು ಕುರಿತು ತಪಸ್ಸು ಮಾಡಿದನು. ಆದರೆ ಶಿವನಿಗೆ ಅರ್ಜುನನನ್ನು ಪರೀಕ್ಷಿಸುವ ಬಯಕೆಯಾಯಿತು. ಶಿವನು ಕಿರಾತಕ ರೂಪ, ಪಾರ್ವತಿಯು ಕಿರಾತಿನಿಯ ರೂಪವನ್ನು ಧರಿಸಿದರು. ಶಿವನ ಪರಿವಾರ ಕಿರಾತಕ ಪರಿವಾರವಾಗಿ ಬದಲಾಯಿತು. ಎಲ್ಲರೂ ಬಿಲ್ಲು, ಬಾಣಗಳ ಸಮೇತ ಅರ್ಜುನ ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿದರು. ದೈತ್ಯನೊಬ್ಬ ಮೂಕ ಎಂಬ ಹೆಸರಿನಲ್ಲಿ ಹಂದಿ ರೂಪದಲ್ಲಿ ವಾಸವಾಗಿದ್ದನು. ಪರಮೇಶ್ವರನು ಹಂದಿಗೆ ಒಂದು ಬಾಣವನ್ನು ಹೊಡೆದನು. ಹಂದಿ ಸಾಯಲಿಲ್ಲ. ಅರ್ಜುನ ತಪಸ್ಸು ಮಾಡುತ್ತಿರುವ ಸ್ಥಳಕ್ಕೆ ಬಂದು ಭಯಂಕರ ಶಬ್ದ ಮಾಡಿತು. ಅರ್ಜುನನ ತಪಸ್ಸಿಗೆ ಭಂಗ ಬಂದು, ಕಣ್ಣು ತೆರೆದನು. ದಾನವ ರೂಪದಲ್ಲಿರುವ ಹಂದಿಗೆ ತನ್ನ ಗಾಂಢೀವದಿಂದ ಹೊಡೆದನು. ಹಂದಿಯು ಪ್ರಾಣ ಬಿಟ್ಟಿತು.
ಕಿರಾತಕ ವೇಷದಲ್ಲಿದ್ದ ಶಿವನು ಓಡಿ ಬಂದು ತಾನು ಹಂದಿಯ ಮೇಲೆ ಬಾಣ ಪ್ರಯೋಗ ಮಾಡಿದ್ದರಿಂದ ಸತ್ತಿದೆ. ಅದು ತನಗೆ ಸೇರಬೇಕು ಎಂದು ವಾದಿಸಿದ. ಅರ್ಜುನನೂ ಹಂದಿ ತನಗೆ ಸೇರಬೇಕು ಎಂದು ವಾದಿಸಿದ. ಯಾರು ಯುದ್ಧ ಮಾಡಿ ಗೆಲ್ಲುತ್ತಾರೋ, ಅವರೇ ಹಂದಿಯನ್ನು ತೆಗೆದುಕೊಳ್ಳಬಹುದು ಎಂದು ಒಪ್ಪಂದ ಮಾಡಿಕೊಂಡರು. ಇಬ್ಬರ ನಡುವೆ ಘನ-ಘೋರ ಕದನ ನಡೆಯಿತು. ಅರ್ಜುನನ ಬತ್ತಳಿಕೆಯಲ್ಲಿದ್ದ ಬಾಣಗಳು ಮುಗಿದವು. ಮಲ್ಲಯುದ್ಧ ಪ್ರಾರಂಭವಾಯಿತು. ಆಗ ಶಿವನು ಪಾರ್ವತಿಯನ್ನು ನೋಡಿ ನಗುತ್ತಾ, “ನೋಡು ಇವನ ಸಾಹಸ. ತಪಸ್ಸು ಮಾಡುತ್ತಾ ಅನ್ನಾಹಾರಗಳನ್ನು ತೊರೆದಿರುವನು. ಆದರೆ ಎಷ್ಟೊಂದು ಶಕ್ತಿ” ಎಂದನು. ಆಗ ಅರ್ಜುನನಿಗೆ ಅನುಮಾನ ಬಂತು. “ಮಹಾನುಭಾವ, ಯಾರು ನೀನು? ನೀನು ಬ್ರಹ್ಮ, ವಿಷ್ಣು ಪರಮೇಶ್ವರನೇ ಇರಬೇಕು. ನೀನು ನನ್ನನ್ನು ಪರೀಕ್ಷಿಸಲು ಬಂದಿರಬಹುದು. ನಾನು ಶಿವನ ಪ್ರಾರ್ಥನೆ ಮಾಡಿ ಬರುವೆನು.” ಅರ್ಜುನನು ಶಿವಾರ್ಚನೆಗೆ ಕುಳಿತ. ಪುಷ್ಪಾರ್ಚನೆ ಮಾಡುತ್ತಿದ್ದ ಪುಷ್ಪಗಳು ಬಂದು ಕಿರಾತನ ಕಾಲ ಮೇಲೆ ಬೀಳುತ್ತಿದ್ದನ್ನು ಕಂಡು ಆಶ್ಚರ್ಯಗೊಂಡ. ತಾನು ಯುದ್ಧ ಮಾಡಿದ್ದು ಪರಶಿವನ ಜೊತೆ ಎಂದು ತಿಳಿದು ತನ್ನ ಅವಿವೇಕಕ್ಕೆ ನಾಚಿಕೊಂಡು ಕ್ಷಮೆ ಯಾಚಿಸಿದ. ಶಿವನು ತನ್ನ ಭಕ್ತನನ್ನು ಪ್ರೀತಿಯಿಂದ ಅಪ್ಪಿಕೊಂಡ. “ಅರ್ಜುನ, ನಾನು ನಿನ್ನ ಇಷ್ಟಾರ್ಥವನ್ನು ಪೂರೈಸಿದ್ದೇನೆ. ನಿನಗೆ ಪಾಶುಪತಾಸ್ತ್ರವನ್ನು ಕರುಣಿಸಿದ್ದೇನೆ.” ಪಾರ್ವತಿಯು ತನ್ನ ಬಳಿ ಇದ್ದ ಅಂಜನಾಸ್ತ್ರವನ್ನು ನೀಡಿದಳು.