ಭಾಗವತ ಕಥೆಗಳು

ಧ್ರುವಕುಮಾರನ ಕಥೆ ಮನುವಿನ ಮಗನಾದ ಉತ್ತಾನಪಾದನಿಗೆ ಸುರುಚಿ ಮತ್ತು ಸುನೀತಿಯರೆಂಬ ಇಬ್ಬರು ಹೆಂಡಿರು. ಬರಬರುತ್ತಾ ದೊರೆ ಉತ್ತಾನಪಾದನಿಗೆ ಎರಡನೆಯ ಹೆಂಡತಿಯಾದ ಸುರುಚಿಯಲ್ಲೇ ಆಸಕ್ತಿ ಜಾಸ್ತಿಯಾಯಿತು. ಏಕೆಂದರೆ ಅವಳು ವಯಸ್ಸಿನಲ್ಲಿ ಕಿರಿಯಳಾಗಿದ್ದು ಉತ್ತಮ ತಾರುಣ್ಯವನ್ನು ಹೊಂದಿದ್ದಳು. ಇದರಿಂದ ಹಿರಿಯ ರಾಣಿಯಾದ ಸುನೀತಿಗೆ ಬೇಸರವೇನೂ ಇರಲಿಲ್ಲ. ಅವಳು ಸುಗುಣಿಯಾಗಿದ್ದು ಶಾಂತಮೂರ್ತಿಯಾಗಿದ್ದಳು. ಜೀವನದ ಉದಾತ್ತ ಮೌಲ್ಯಗಳಲ್ಲೇ ಅವಳಿಗೆ ಆಸಕ್ತಿ ಜಾಸ್ತಿಯಿತ್ತು. ಅವಳು ಧರ್ಮಾಸಕ್ತಳೂ ಉದಾರಿಯೂ ಆಗಿದ್ದಳು. ಇಬ್ಬರು ರಾಣಿಯರಿಗೂ 5-6 ವರ್ಷಗಳ ಸುಮಾರಿನ ಒಬ್ಬೊಬ್ಬ ಗಂಡು ಮಕ್ಕಳು ಇದ್ದರು. ಸುರುಚಿಯ ಮಗನ ಹೆಸರು ಉತ್ತಮ ಎಂದಾದರೆ ಸುನೀತಿಯ ಮಗನೇ ಧ್ರುವ. ದೊರೆ ಉತ್ತಾನಪಾದನಿಗೆ ಸುರುಚಿಯಲ್ಲಿ ಮೋಹ ಜಾಸ್ತಿಯಾಗಿದ್ದುದರಿಂದ ಅವನಿಗೆ ಉತ್ತಮನಲ್ಲಿಯೇ ಹೆಚ್ಚು ಅಕ್ಕರೆಯಿತ್ತು. ಅವನು ಧ್ರುವನನ್ನು ಕರೆದು ಮುದ್ದಾಡಿದ್ದು ಕಡಿಮೆಯೆಂದೇ ಹೇಳಬೇಕು. ಆ ದಿನ ಸಂಜೆಯ ಸಮಯವಾಗಿತ್ತು. ಉತ್ತಾನಪಾದನು ಸುರುಚಿಯ ಶಯ್ಯಾಗೃಹದಲ್ಲಿದ್ದ. ಉತ್ತಮನು ಅವನ ಮಡಿಲಲ್ಲಿ ಕುಳಿತು ಆಟವಾಡುತ್ತಿದ್ದ. ಅಲ್ಲಿಗೆ ಆಕಸ್ಮಿಕವಾಗಿ ಬಾಲಕ ಧ್ರುವ ಬಂದ. ತಂದೆಯ ತೊಡೆಗಳ ಮೇಲೆ ಉತ್ತಮನನ್ನು ನೋಡಿದ ಅವನಿಗೆ ತನಗೂ ಅಪ್ಪನ ಮಡಿಲಲ್ಲಿ ಕುಳಿತು ಆಟವಾಡಬೇಕು ಅನಿಸಿತು. ಅವನು ಮಂಚವನ್ನೇರಿ ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳಲು ಹೋದ. ಅಷ್ಟರಲ್ಲಿ ಪಕ್ಕದಲ್ಲೇ ಕುಳಿತಿದ್ದ ಚಿಕ್ಕಮ್ಮ ಸುರುಚಿ ಅವನನ್ನು ಆಚೆ ತಳ್ಳಿದಳು. “ನೀನು ರಾಜನ ಮಡಿಲಲ್ಲಿ ಕುಳಿತುಕೊಳ್ಳಲು ಅರ್ಹನಲ್ಲ. ಅದಕ್ಕೆ ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರಬೇಕು. ಅದಾಗಬೇಕಿದ್ದರೆ ಕಠಿಣ ತಪಸ್ಸು ಮಾಡಿ ದೇವರಿಂದ ವರ ಪಡೆಯಬೇಕು. ನನ್ನ ಮಗನಾದರೆ ಮಾತ್ರ ಉತ್ತಮನಂತೆ ಅಪ್ಪನ ಮಡಿಲಲ್ಲಿ ಕುಳಿತುಕೊಳ್ಳಬಹುದು” ಎಂದು ಸುರುಚಿಯು ವ್ಯಂಗ್ಯವಾಗಿ ಹೇಳಿದಳು. ಚಿಕ್ಕಮ್ಮನ ಕ್ರೂರ ಮಾತುಗಳನ್ನು ಕೇಳಿ ಧ್ರುವನಿಗೆ ದುಃಖವಾಯಿತು. ಅವನು ಅಳತೊಡಗಿದ. ಇದನ್ನೆಲ್ಲ ಉತ್ತಾನಪಾದನು ನೋಡುತ್ತಿದ್ದರೂ ಅವನು ಯಾವುದೇ ಪ್ರತಿಕ್ರಿಯೆ ತೋರಿಸದೆ ಕುಳಿತಿದ್ದ. ರಾಣಿಯ ಬಿರುನುಡಿಗಳನ್ನು ತಡೆಯಲೂ ಯತ್ನಿಸಲಿಲ್ಲ. ಅವಳ ಮಾತಿಗೆ ಆಕ್ಷೇಪವನ್ನೂ ಹೇಳಲಿಲ್ಲ.

ಬಾಲಕ ಧ್ರುವನು ಈ ಅಪಮಾನವನ್ನು ತಾಳಲಾರದೆ ಅಳುತ್ತಲೇ ತಾಯಿಯತ್ತ ಹೋದ. ಅವಳು ವಿಷಯವನ್ನು ಅರಿತು ಅವನನ್ನು ಸಮಾಧಾನ ಪಡಿಸಿದಳು. “ಚಿಕ್ಕಮ್ಮನೂ ನಿನ್ನ ಅಮ್ಮನಂತೆಯೇ. ಎಲ್ಲರ ಬಗ್ಗೆಯೂ ಒಳ್ಳೆಯದನ್ನೇ ಎಣಿಸಬೇಕು. ದೇವರನ್ನು ಒಲಿಸಬೇಕೆಂದು ಅವಳು ಹೇಳಿದ್ದು ಸರಿಯಲ್ಲವೇ? ದೇವರಲ್ಲಿ ಭಕ್ತಿಯಿಲ್ಲದವರ ಬಾಳು ವ್ಯರ್ಥವೇ ಸರಿ. ದೇವರ ಭಕ್ತಿಯೇ ಈ ಪ್ರಪಂಚದಲ್ಲಿರುವ ಸತ್ಯ ವಿಚಾರ. ಮಿಕ್ಕಿದ್ದೆಲ್ಲಾ ಮಿಥ್ಯ” ಎಂದು ಸುನೀತಿಯು ಮಗನಿಗೆ ಉಪದೇಶ ಮಾಡಿದಳು.

ತಾಯಿಯ ಮಾತುಗಳಿಂದ ಧ್ರುವಕುಮಾರನಿಗೆ ಸಮಾಧಾನವಾಯಿತು. ಅದರಿಂದ ಭಗವಂತನ ಮೇಲಿನ ಇನ್ನಷ್ಟು ವಿಶ್ವಾಸಕ್ಕೆ ಪ್ರೇರಣೆಯೂ ದೊರೆಯಿತು. ಅವನು ದೇವರ ವಿಷಯದಲ್ಲಿ ಭಾವುಕನಾದ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡ ಅವನಿಗೆ ದೇವರ ಮೇಲಿನ ಭಕ್ತಿ ನೂರು ಮಡಿಯಾಯಿತು. ಅವನು ದೇವರನ್ನು ಒಲಿಸಿಕೊಂಡು ಅವನನ್ನು ಸ್ವತಃ ನೋಡಬೇಕೆಂಬ ಉದ್ದೇಶದಿಂದ ಅರಮನೆಯನ್ನು ತೊರೆದು ಕಾಡನ್ನು ಹೊಕ್ಕ. ಮಾರ್ಗ ಮಧ್ಯೆ ಅವನಿಗೆ ನಾರದ ಮುನಿಗಳು ಎದುರಾದರು. ಬಾಲಕನನ್ನು ನೋಡಿ ಕುತೂಹಲಗೊಂಡ ನಾರದರು ‘ನೀನಾರು’ ಎಂದು ಅವನನ್ನು ಕೇಳಿದರು. ಧ್ರುವನು ತನ್ನ ವಿಚಾರ ತಿಳಿಸಿ ನಡೆದ ಘಟನೆಯನ್ನು ಸಾದ್ಯಂತವಾಗಿ ವಿವರಿಸಿ ತಾನೀಗ ಹೊರಟಿರುವ ಉದ್ದೇಶವನ್ನೂ ಹೇಳಿದ. ನಾರದನಿಗೆ ಬಾಲಕನಲ್ಲಿ ಕನಿಕರವಾಯಿತು. “ಬಾಲಕ, ಕಾಡಿನಲ್ಲಿ ತಪಸ್ಸು ಮಾಡಿ ದೇವರನ್ನು ಒಲಿಸಿಕೊಳ್ಳುವುದು ಹುಡುಗಾಟವಲ್ಲ. ಮಹಾ ಮಹಾ ಋಷಿ, ಮುನಿಗಳಿಗೇ ಅದು ಭಾರಿ ಕಷ್ಟದ ಕೆಲಸ. ನೀನಿನ್ನೂ ಹುಡುಗ, ಈ ಕಾಡಿನಲ್ಲಿ ಕಳ್ಳ ಕಾಕರಿದ್ದಾರೆ. ಹಿಂಸಮೃಗಗಳಿವೆ, ಮಳೆ, ಚಳಿ, ಗಾಳಿ, ಬಿಸಿಲನ್ನು ನೀನು ತಡೆದುಕೊಳ್ಳಲಾರೆ. ಮನೆಗೆ ತಾಯಿ ಬಳಿ ಹೋಗು” ಎಂದು ನಾರದರು ಹಿತವಚನ ಹೇಳಿದರು.

ಧ್ರುವ ಹೇಳಿದ “ಪೂಜ್ಯರೇ, ನಾನೀಗ ವಾಪಸು ಹೋಗಲಾರೆ, ದೇವರನ್ನು ಕಾಣುವ ನನ್ನ ನಿರ್ಧಾರ ಅಚಲ. ಏನೇ ಬಂದರೂ ಈ ನಿರ್ಧಾರದಿಂದ ಹಿಂದೆ ಹೋಗಲಾರೆ.” ಬಾಲಕನ ನಿರ್ಧಾರದ ಶಕ್ತಿಯನ್ನು ನೋಡಿ ನಾರದನಿಗೆ ಸಂತೋಷವೂ ಆಶ್ಚರ್ಯವೂ ಆಯಿತು. “ಮಗೂ, ನಿನ್ನ ನಿರ್ಧಾರವನ್ನು ಕಂಡು ನನಗೆ ಸಂತೋಷವಾಗಿದೆ. ನಿನ್ನ ಯಶಸ್ಸನ್ನು ತಡೆಯಲು ಯಾರಿಗೂ ಅಸಾಧ್ಯ. ನಿನ್ನ ಗುರಿಯನ್ನು ಸಾಧಿಸಲು ನಾನು ನಿನಗೆ ಸಹಾಯ ಮಾಡುವೆ. ಇಲ್ಲಿ ಕೇಳು : ಯಮುನಾ ನದೀ ತೀರದಲ್ಲಿ ‘ಮಧುವನ’ ಎಂಬ ಸ್ಥಳವಿದೆ. ಅಲ್ಲಿ ಹೋಗಿ ಕುಳಿತುಕೊಂಡು “ಓ ನಮೋ ಭಗವತೇ ವಾಸುದೇವಾಯ” ಎಂಬ ಮಂತ್ರವನ್ನು ಜಪಿಸು. ವಾಸುದೇವನು ನಿನಗೆ ಪ್ರತ್ಯಕ್ಷನಾಗುವನು” ಎಂದು ನಾರದ ಕೇಳಿದ. ಆ ನಂತರ ನಾರದರು ದೊರೆ ಉತ್ತಾನಪಾದನ ಅರಮನೆಗೆ ಹೋದಾಗ ದೊರೆಯು “ಪೂಜ್ಯರೇ ನನ್ನ ಮಗ ಧ್ರುವನು ಕಾಡಿಗೆ ಹೋಗಿದ್ದಾನೆ. ಅವನನ್ನು ತಡೆಯುವುದಕ್ಕೆ ನಮ್ಮಿಂದ ಆಗಲಿಲ್ಲ. ಅವನು ಎಲ್ಲಿದ್ದಾನೋ, ಏನು ಮಾಡುತ್ತಿದ್ದಾನೋ ಎಂದು ಚಿಂತೆಯಾಗಿದೆ. ಅವನು ಜೀವಂತ ಇದ್ದಾನೆಯೇ ಅದೂ ತಿಳಿಯದು, ಅದಕ್ಕೆ ಚಿಂತೆಯಾಗಿದೆ” ಎಂದ ಅರಸ.

“ದೊರೆಯೇ ಚಿಂತಿಸದಿರು. ನಿನ್ನ ಮಗ ಧ್ರುವ ಬಲು ಸಮರ್ಥ. ಅವನ ನಿರ್ಧಾರ ಬಂಡೆಯಂತೆ ಗಟ್ಟಿಯಾದುದು. ಈಗ ಅವನು ದೇವರನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಿದ್ದಾನೆ. ದೇವರು ಅವನಿಗೆ ಒಲಿದೇ ಒಲಿಯುವನೆಂಬ ವಿಶ್ವಾಸ ನನಗಿದೆ. ಧ್ರುವನು ವಾಪಸು ಬರುವನು. ಅವನು ಬಲುದೊಡ್ಡ ಸಾಧನೆ ಮಾಡಿ ನಿನಗೂ ನಿನ್ನ ಮನೆತನಕ್ಕೂ ಕೀರ್ತಿ ತರುವನು” ಎಂದು ಹೇಳಿ ನಾರದರು ಹೊರಟು ಹೋದರು. ಅತ್ತ ಕಾಡಿನಲ್ಲಿ ಧ್ರುವ ಕುಮಾರನು ಗಾಳಿ, ಮಳೆ, ಚಳಿ, ಬಿಸಿಲು ಲೆಕ್ಕಿಸದೆ ತಪೋ ನಿರತನಾಗಿದ್ದ. ಅವನನ್ನು ತಪಸ್ಸಿನ ಏಕಾಗ್ರತೆಯಿಂದ ಕದಲಿಸಲು ಯಾವುದರಿಂದಲೂ ಸಾಧ್ಯವಾಗಲಿಲ್ಲ. ಈ ತಪಸ್ಸಿನ ಬಿಸಿ ದೇವಲೋಕಕ್ಕೂ ತಾಕಿತು. ದೇವತೆಗಳಿಗೆ ಚಿಂತೆ ಶುರುವಾಯಿತು. ಅವರೆಲ್ಲ ಸೇರಿ ವಿಷ್ಣುಲೋಕಕ್ಕೆ ಹೋಗಿ ವಿಷ್ಣುವಿಗೆ ದೂರಿತ್ತರು. ಬಾಲಕ ಧ್ರುವನು ತಪಸ್ಸು ಮಾಡಿ ದೇವಲೋಕದ ಸಿಂಹಾಸನವನ್ನು ಪಡೆಯಬೇಕೆಂದು ತಂತ್ರ ಹೂಡಿದ್ದಾನೆ ಎಂದು ಅವರೆಲ್ಲ ಭಾವಿಸಿದ್ದರು.

ಮಹಾವಿಷ್ಣು ದೇವತೆಗಳಿಗೆ ಸಮಾಧಾನ ಹೇಳಿದ. ನಾನು ಬೇಗನೆ ಅವನಿಗೆ ದರ್ಶನ ಕೊಡಲಿದ್ದೇನೆ ಎಂದ ಮಹಾವಿಷ್ಣು. ಧ್ರುವನು ಕಣ್ಣು ಬಿಟ್ಟು ನೋಡಿದಾಗ ಎದುರು ವಾಸುದೇವ ನಿಂತಿದ್ದ. ಧ್ರುವನು ಕೂಡಲೇ ಎದ್ದು ವಿಷ್ಣುವಿನ ಪಾದಕ್ಕೆ ಬಿದ್ದ. ದೇವರ ದರ್ಶನದಿಂದ ಅವನ ಕೊರಳು ತುಂಬಿ ಮಾತೇ ಹೊರಡದಂತೆ ಆಯಿತು. ಬಾಲಕ ಧ್ರುವನ ತಪಸ್ಸಿಗೆ ಮೆಚ್ಚಿ ವಾಸುದೇವ ರೂಪಿಯಾದ ವಿಷ್ಣುವಿಗೆ ಮಹದಾನಂದವಾಯಿತು. ಅವನು ಹರ್ಷ ಚಿತ್ತನಾಗಿ “ಮಗನೇ, ನನಗೆ ತುಂಬಾ ಸಂತೋಷವಾಗಿದೆ. ನಾನು ನಿನಗೆ ಧ್ರುವಲೋಕವನ್ನು ಕೊಡುತ್ತಿದ್ದೇನೆ. ಅದು ಸಪ್ತರ್ಷಿಗಳಿಗೂ ಸಹ ನಿಲುಕಲಾರದ್ದು, ಈಗ ನೀನು ಮನೆಗೆ ಹೋಗು. ಅಲ್ಲಿ ನೂರಾರು ವರ್ಷ ರಾಜ್ಯಭಾರ ಮಾಡು. ಆಮೇಲೆ ವಿಷ್ಣುಲೋಕಕ್ಕೆ ಬಂದು ನನ್ನನ್ನು ಸೇರು. ಭೂಮಂಡಲದಲ್ಲಿ ನಿನ್ನ ಕೀರ್ತಿಯು ಚಿರಂತನವಾಗುವುದು” ಎಂದು ವರವನ್ನು ದಯಪಾಲಿಸಿದ. ಧ್ರುವನು ವಿಷ್ಣುಲೋಕಕ್ಕೆ ಹೋದ. ಅಲ್ಲಿ ವೈಕುಂಠವೆಂಬ ರಾಜಧಾನಿಯಲ್ಲಿ ಅವನಿಗೆ ಸೂಕ್ತ ಸ್ಥಾನವು ದೊರೆಯಿತು. ಇಂದಿಗೂ ಅವನು ಭೂಲೋಕದ ಜನರಿಗೆ ಧ್ರುವ ನಕ್ಷತ್ರವೆಂಬ ಹೆಸರಿನಿಂದ ಕಾಣಿಸಿಕೊಳ್ಳುವನು. ಅವನ ಕೀರ್ತಿಯೂ ಆ ನಕ್ಷತ್ರದ ಪ್ರಭೆಯಂತೆಯೇ ಬೆಳಗುತ್ತಿರುವುದು.