ದ-ದ-ದ ಎಂಬ ಬ್ರಹ್ಮದೇವನ ಉಪದೇಶ
ಹಿಂದೊಮ್ಮೆ ಸುರಲೋಕ, ಅಸುರಲೋಕ, ಮಾನವಲೋಕ ಈ ಮೂರೂ ಲೋಕಗಳ ಜನರೂ ಒಬ್ಬರನ್ನೊಬ್ಬರು ಕಲೆಯುವ ಸುಲಭ ಸಂಪರ್ಕ ಇತ್ತು. ಮೂರು ಲೋಕದ ಜನರೂ ಪ್ರಜಾಪತಿ ಬ್ರಹ್ಮದೇವನ ಅಚ್ಚುಮೆಚ್ಚಿನ ಮಕ್ಕಳೆನಿಸಿದ್ದರು.
ಒಂದು ಬಾರಿ ಈ ಮೂರು ಲೋಕದ ಜನರೂ ಅಂದರೆ ಸುರರು, ಅಸುರರು, ಮಾನವರು ಮೂರು ಗುಂಪಿನವರೂ ಬ್ರಹ್ಮನ ಬಳಿಗೆ ಹೋಗಿ ಬ್ರಹ್ಮಚರ್ಯೆಯನ್ನು ಪರಿಪಾಲಿಸುತ್ತಾ ಬ್ರಹ್ಮವಿದ್ಯೆ ಯನ್ನು ಕಲಿಯತೊಡಗಿದರು. ಕಲಿಕೆಯ ಅವಧಿ ಪೂರೈಸುತ್ತಾ ಬಂತು. ಬ್ರಹ್ಮದೇವ ಈಗ ಮೂರು ಗುಂಪಿನವರಿಗೂ ಸಮಾರೋಪದ ಉಪದೇಶ ನೀಡ ಬಯಸಿದ.
ಪ್ರಪ್ರಥಮವಾಗಿ “ತಾವೇ ಮುಂದು” ಎಂಬ ಮನೋಭಾವನೆ ಯಿಂದ ಕೂಡಿದ ಸುರರು ಅಂದರೆ ದೇವತೆಗಳು ಬ್ರಹ್ಮನನ್ನು ಕುರಿತು ಕೇಳಿಕೊಂಡರು:
“ನಮಗೆ ಉಪದೇಶ ನೀಡು.”
ಪ್ರಜಾಪತಿ ಬ್ರಹ್ಮನು ಅವರ ಅಭಿಲಾಷೆಯಂತೆ ಒಪ್ಪಿ, ’ದ’ ಎಂಬ ಉಪದೇಶವನ್ನು ನೀಡುತ್ತಾ ಕೇಳಿದ:
“ನೀವೆಲ್ಲರೂ ಒಂದೇ ಅಕ್ಷರದ ಈ ಉಪದೇಶವನ್ನು ಅರ್ಥಮಾಡಿಕೊಂಡಿರಿ ತಾನೇ?”
ಅವರೆಲ್ಲರೂ ಒಕ್ಕೊರಳಿನಿಂದ ಹೇಳಿದರು:
“ಅರ್ಥಮಾಡಿಕೊಂಡಿದ್ದೇವೆ. ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ನಮ್ಮ ದೇವಲೋಕದಲ್ಲಿ ಸರ್ವೋಪರಿ ಭೋಗ ವಿಲಾಸಪ್ರಿಯತೆ ವೃದ್ಧಿಸಿದೆ. ನಾವೆಲ್ಲರೂ ಅವುಗಳಲ್ಲೇ ಮುಳುಗಿ, ದೇವತ್ವದ ಮಟ್ಟದಿಂದ ಕೆಳಗೆ ಬೀಳುತ್ತಿದ್ದೇವೆ. ಇಂದ್ರಿಯ ನಿಗ್ರಹ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ಆದ್ದರಿಂದ ನಮ್ಮೆಲ್ಲರಿಗೂ ’ದ’ ಅಂದರೆ ದಮನ ಎಂಬ ಭಾವದ ಉಪದೇಶ ನೀಡಿರುವಿರಿ. ಈ ರೀತಿಯ ’ದ’ ಉಪದೇಶದ ಅರ್ಥ ನಮ್ಮಲ್ಲಿರುವ ದುರ್ಭಾವಗಳನ್ನು ದಮನಗೊಳಿಸಿ ಅಂದರೆ ನಾಶಗೊಳಿಸಿ ಇಂದ್ರಿಯ ಸಂಯಮತೆ ಯನ್ನು ಪಡೆಯುವುದೇ ಆಗಿದೆ.”
ಪ್ರಜಾಪತಿ ಬ್ರಹ್ಮ ದೇವತೆಗಳು ಕೊಟ್ಟ ಉತ್ತರವನ್ನು ಆಲಿಸುತ್ತಾ ಪ್ರಸನ್ನವದನನಾಗಿ ಹೇಳಿದ: “ನಿಮ್ಮ ಉತ್ತರ ನೂರಕ್ಕೆ ನೂರೂ ಸರಿ. ನೀವು ನನ್ನ ಒಂದಕ್ಷರದ ಉಪದೇಶವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ.”
ಈಗ ಮಾನವರ ಸರದಿ ಬಂತು ಅವರಿಗೂ ’ದ’ ಎಂದು ಬ್ರಹ್ಮ ಒಂದಕ್ಷರದ ಉಪದೇಶ ನೀಡಿ ಪ್ರಶ್ನಿಸಿದ:
“ನಿಮಗೂ ನನ್ನ ಈ ಉಪದೇಶ ಅರ್ಥ ಆಗಿದೆ ತಾನೇ?”
ಮಾನವರೂ ಸಹ ಒಕ್ಕೊರಳಿನಿಂದಲೇ ಹೇಳಿದರು: “ಆಗಿದೆ ತಂದೆಯವರೇ, ’ದ’ ಅಂದರೆ ದಾನ ಮಾದುವುದು ಎಂಬರ್ಥದಲ್ಲಿ ಮಾನವರಾದ ನಮ್ಮಲ್ಲರಿಗೂ ಸಾಂದರ್ಭಿಕವಾಗಿಯೇ ಉಪದೇಶ ನೀಡಿರುವಿರಿ. ಕಾರಣ ಮಾನವ ಲೋಕದಲ್ಲಿ ಮಾನವರು ಅಂದರೆ ನಾವು ಸದಾಕಾಲ ಸಂಪಾದನೆಯಲ್ಲಿಯೇ ಮುಳುಗಿರುತ್ತೇವೆ. ಬೇರೆ ಯೋಚನೆಯು ನಮಗಿರದು. ಇದರಿಂದ ಪಾರಾಗಲು ನಮಗೆ’ದಾನ’ದ ಉಪದೇಶ ಒಂದೇ ಸೂಕ್ತವಾದುದು. ಈ ಮೂಲಕ ನಮ್ಮೆಲ್ಲರಿಗೂ ಕಲ್ಯಾಣದಾಯಕ ಮಾರ್ಗವನ್ನು ಸೂಚಿಸಿದ್ದೀರಿ. ಇದಕ್ಕಾಗಿ ನಾವೆಲ್ಲರೂ ನಿಮಗೆ ಕೃತಜ್ಞರಾಗಿದ್ದೇವೆ.
ಪ್ರಜಾಪತಿ ಬ್ರಹ್ಮನಿಗೆ ಮಾನವ ವರ್ಗದವರ ಉತ್ತರವನ್ನು ಕೇಳಿ ತುಂಬಾ ಸಂತೋಷವಾಯಿತು. ಅವನು ಅವರೆಲ್ಲರನ್ನೂ ಹೊಗಳುತ್ತಾ ಹೇಳಿದ: “ನೀವೆಲ್ಲರೂ ನನ್ನ ಒಂದು ಉಪದೇಶವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿದ್ದೀರಿ. ನನ್ನ ಅಭಿಪ್ರಾಯವೂ ಈ ಬಗ್ಗೆ ಇದೇ ಆಗಿದೆ.
ಈಗ ಅಸುರರು ಆತನ ಬಳಿ ಸಾರಿ, ಪ್ರಾರ್ಥಿಸಿಕೊಂಡರು:
“ಪ್ರಭೂ, ನಮಗೂ ಈಗ ಸಮಾವರ್ತನೆಯ ಉಪದೇಶವನ್ನು ನೀಡಿ.” ಅವರಿಗೂ ಉಪದೇಶದ ರೂಪದಲ್ಲಿ ’ದ’ ಎಂಬ ಒಂದಕ್ಷರವನ್ನೇ ಬ್ರಹ್ಮ ಹೇಳಿದ.
ಅಸುರರು ಅಂದರೆ ರಾಕ್ಷಸರು ಯೋಚಿಸಿ ಹೇಳಿದರು:
“ಪ್ರಭೂ ನಮಗೂ ಸೂಕ್ತ ರೀತಿಯಲ್ಲಿಯೇ ನೀವು ಉಪದೇಶ ನೀಡಿದ್ದೀರಿ. ನಾವೆಲ್ಲರೂ ಸ್ವಭಾವತ: ಬೇರೆಯವರಿಗೆ ಹಿಂಸೆಯನ್ನು ಉಂಟು ಮಾದುವವರೇ ಆಗಿದ್ದೀವಿ. ಅರಿಷಡ್ವರ್ಗಗಳಾದ ಕಾಮ, ಕ್ರೋಧ ಮೊದಲಾದ ಸಮಾಜಕಂಟಕ ರೂಪದ ದುರ್ಭಾವಗಳಿಂದಲೇ ಕೂಡಿದ್ದೇವೆ.
ಲೋಕದ ಜನರ ಬಗ್ಗೆ ನಿಷ್ಕರುಣಿಗಳಾಗಿ, ನಿರ್ದಯೆಯಿಂದ ವರ್ತಿಸುತ್ತಿದ್ದೇವೆ. ಇದರಿಂದ ನಮ್ಮ ನಾಶಕ್ಕೆ ನಾವೇ ಕಾರಣರಾಗುತ್ತೀದ್ದೇವೆ. ಇದನ್ನು ಮನಗಂಡೇ ನೀವು ನಮ್ಗೆ ’ದ’ ಅಂದರೆ ’ದಯೆ’ ಎಂಬ ಒಂದಕ್ಷರ ಉಪದೇಶವನ್ನು ನೀಡಿದ್ದೀರಿ. ನಾವಿದನ್ನು ಸಾರ್ಥಕಪಡಿಸಲು ಯತ್ನಿಸುತ್ತೇವೆ.
ರಾಕ್ಷಸರ ಮಾತಿನಿಂದಲೂ ಪ್ರಜಾಪತಿ ಬ್ರಹ್ಮ ಪ್ರಸನ್ನನಾದ. ನೀವೂ ಸಹ ನನ್ನ ಉಪದೇಶವನ್ನೂ ಸರಿಯಾಗಿಯೇ ಅರ್ಥಮಾಡಿಕೊಂಡಿದ್ದೀರಿ.
ಇನ್ನು ಮುಂದೆ ಭೋಗಪ್ರಧಾನ ದೇವತೆಗಳೆ, ನೀವೆಲ್ಲರೂ ಮನಸ್ಸನ್ನು ನಿಮ್ಮ ವಶದಲ್ಲಿಟ್ಟುಕೊಂಡು ಇಂದ್ರಿಯ ದಮನ ದೊಂದಿಗೆ ಜೀವಿಸುತ್ತಿರಿ: ಮಾನವರೇ, ನೀವೂ ಸಹ ನಿಮ್ಮ ಭೋಗಸಾಮಗ್ರಿಗಳನ್ನು ದಾನಮಾಡಿ, ಇದರಿಂದ ನಿಮ್ಮ ಜೀವನ ಸಾರ್ಥಕ ಆಗುವುದು. ಕ್ರೋಧಪ್ರಧಾನರೆನಿಸಿದ ರಾಕ್ಷಸರೇ ನೀವು ನಿಮ್ಮಲ್ಲಿರುವ ಕ್ರೋಧಾದಿಗಳಿಂದ ದೂರವಾಗಿ ’ದಯೆ’ ಎಂಬ ಅತ್ಯುತ್ಕೃಷ್ಟ ರೀತಿಯ ಸದ್ಭಾವನೆಯ ವರ್ತನೆಯನ್ನು ಮೈಗೂಡಿಸಿಕೊಂಡು ಜೀವಿಸಿರಿ” ಎನ್ನುತ್ತಾ, ಎಲ್ಲರನ್ನೂ ಕಳುಹಿಸಿಕೊಟ್ಟನು.