ಮಹಾಭಾರತ ಕಥೆಗಳು

ದಾನಶೂರ ಕರ್ಣ ಯಾದವ ಕುಲದಲ್ಲಿ ಶೂರಸೇನ ಎಂಬ ರಾಜನು ಬಹಳ ಪ್ರಸಿದ್ಧನಾಗಿದ್ದನು. ಆ ರಾಜನಿಗೆ ಪೃಥಾ ಎಂಬ ಹೆಸರಿನ ಮಗಳು, ವಸುದೇವ ಎಂಬ ಹೆಸರಿನ ಮಗನು ಇದ್ದರು. ಪೃಥಾ ಬಹಳ ಚೆಲುವೆ. ಶೂರಸೇನನಿಗೆ ಕುಂತಿಭೋಜ ಎಂಬ ರಾಜನು ಸೋದರತ್ತೆಯ ಮಗನಾಗಿದ್ದನು. ಶೂರಸೇನ ಮತ್ತು ಕುಂತಿಭೋಜ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು. ಒಮ್ಮೆ ಗೆಳೆಯರಿಬ್ಬರು ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಆಗ ಶೂರಸೇನನು ತನ್ನ ಮೊದಲನೆಯ ಮಗುವನ್ನು ಕುಂತಿಭೋಜನಿಗೆ ಕೊಡುತ್ತೇನೆಂದು ಮಾತು ಕೊಟ್ಟನು. ಕೊಟ್ಟ ಮಾತಿನಂತೆ ಶೂರಸೇನನು ತನ್ನ ಮೊದಲ ಮಗುವನ್ನು ಕುಂತಿಭೋಜನಿಗೆ ಕೊಟ್ಟು ಬಿಟ್ಟನು. ಸಾಮಾನ್ಯವಾಗಿ ಚೊಚ್ಚಲ ಮಗುವಿನ ಮೇಲೆ ತಂದೆ ತಾಯಿಗಳಿಗೆ ಅತಿಶಯವಾದ ಪ್ರೀತಿಯಿರುತ್ತದೆ. ಹಾಗಿದ್ದರೂ ಶೂರಸೇನನು ಕೊಟ್ಟ ಮಾತಿಗೆ ತಪ್ಪಬಾರದು ಎಂದು ಯೋಚಿಸಿ ತನ್ನ ಮೊದಲ ಮಗುವನ್ನು ಕುಂತಿಭೋಜನಿಗೆ ಕೊಟ್ಟನು. ಹಾಗೆಯೇ ಮೊದಲ ಮಗುವನ್ನು ದತ್ತು ಕೊಡಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಆದರೂ ಶೂರಸೇನನು ಒಂದೇ ಮನಸ್ಸಿನಿಂದ ತನ್ನ ಹಿರಿಯ ಮಗಳನ್ನು ಕುಂತಿಭೋಜನಿಗೆ ಕೊಟ್ಟನು. ಕುಂತಿಭೋಜನು ಬಹಳ ಸಂತೋಷದಿಂದ ಆ ಮಗುವನ್ನು ಸ್ವೀಕರಿಸಿದನು. ಶೂರಸೇನನ ಮಗಳಿಗೆ “ಕುಂತಿ” ಎಂದು ನಾಮಕರಣ ಮಾಡಿ ಬಹಳ ಮುದ್ದಿನಿಂದ ಬೆಳೆಸತೊಡಗಿದನು. ಅವಳು ಪ್ರಾಪ್ತವಯಸ್ಕಳಾಗುತ್ತಿದ್ದಂತೆ ವಿವಾಹದ ಬಗ್ಗೆ ಕುಂತಿಭೋಜನು ಯೋಚಿಸತೊಡಗಿದನು. ಕುಂತಿಯು ಬಾಲ್ಯದಿಂದಲೇ ಸದಾಕಾಲ ದೇವತಾಪೂಜೆಯಲ್ಲಿ ನಿರತಳಾಗಿರುತ್ತಿದ್ದಳು. ತನ್ನನ್ನು ತಾನು ಅತಿಥಿ ಸತ್ಕಾರದಲ್ಲಿ ತೊಡಗಿಸಿಕೊಂಡಳು. ರಾಜಕುಮಾರಿಯಾಗಿದ್ದರೂ ಕುಂತಿಯು ಬಹಳ ವಿನಯವಂತೆ. ಅವಳ ಗುಣವನ್ನು ಎಲ್ಲರೂ ಮೆಚ್ಚಿ ಕೊಂಡಾಡುತ್ತಿದ್ದರು. ಕುಂತಿಭೋಜನು ಮಗಳ ಗುಣದ ಬಗ್ಗೆ ಬಹಳ ಹೆಮ್ಮೆಪಡುತ್ತಿದ್ದನು.

ಒಂದು ದಿನ ದೂರ್ವಾಸ ಮುನಿಗಳು ಕುಂತಿಭೋಜನ ಅರಮನೆಗೆ ಆಗಮಿಸಿದರು. ಅವರನ್ನು ಶಿವನ ಅವತಾರ ಎಂದೇ ಜನ ಕರೆಯುತ್ತಿದ್ದರು. ಆಕಸ್ಮಾತ್ ಕುಂತಿಭೋಜನನ ಅರಮನೆಗೆ ಮುನಿಗಳು ಆಗಮಿಸಿದರು. ಉಭಯಕುಶಲೋಪರಿಯಾದ ನಂತರ ಮುನಿಗಳು ಈ ರೀತಿ ಹೇಳಿದರು : “ಮಹಾರಾಜ! ನಾನು ಕೆಲವು ದಿನಗಳ ಕಾಲ ನಿನ್ನ ಅರಮನೆಯಲ್ಲಿ ತಂಗಲು ಇಚ್ಛಿಸುತ್ತೇನೆ. ಮುನಿಗಳ ಮಾತುಗಳನ್ನು ಕೇಳಿ ಕುಂತಿಭೋಜ ನಸುನಕ್ಕನು. “ಮಹರ್ಷಿಗಳೇ! ನನಗೆ ಕುಂತಿ ಎಂಬ ಹೆಸರಿನ ಮಗಳಿದ್ದಾಳೆ. ಅವಳು ತುಂಬಾ ಗುಣವಂತೆ, ಸುಶೀಲೆ. ಸದಾಕಾಲ ವ್ರತನಿಷ್ಠಳಾಗಿರುತ್ತಾಳೆ ಕುಂತಿ. ನಿಮ್ಮ ನಿಬಂಧನೆಗಳಿಗೆ ತಕ್ಕಂತೆ ನಡೆದುಕೊಳ್ಳಲು ಕುಂತಿ ಸಮರ್ಥಳು. ಅವಳನ್ನೇ ನಿಮ್ಮ ಸೇವೆಗೆ ನಿಯಮಿಸುತ್ತೇನೆ. ನನ್ನ ಮಗಳು ನಿಷ್ಠೆಯಿಂದ ನಿಮ್ಮ ಸೇವೆಯನ್ನು ಮಾಡುತ್ತಾಳೆ. ನೀವು ಅರಮನೆಯಲ್ಲಿ ನಿಮಗೆ ಇಷ್ಟವಾಗುವ ರೀತಿಯಲ್ಲಿ ಇರಬಹುದು.” ದುರ್ವಾಸರ ಸೇವೆಯನ್ನು ಕುಂತಿಯು ಒಂದು ವರ್ಷಗಳ ಕಾಲ ಮಾಡಿ ಮುಗಿಸಿದಳು. ಅತಿಕೋಪಿಷ್ಠರಾದ ದುರ್ವಾಸ ಮುನಿಗಳನ್ನು ಸಂತುಷ್ಟಗೊಳಿಸುವುದು ಸುಲಭದ ಕೆಲಸವಲ್ಲ. ಅವರು ಕುಂತಿಯ ಸೇವೆಯಿಂದ ಪರಮ ಸಂತುಷ್ಠರಾದರು. ಒಂದು ದಿನ ಕುಂತಿಯನ್ನು ಕರೆದು ಈ ರೀತಿ ಹೇಳಿದರು : “ಕುಂತಿ! ನಿನ್ನ ಸೇವೆಯಿಂದ ನಾನು ಸಂತೋಷಗೊಂಡಿದ್ದೇನೆ. ನೀನು ಇಚ್ಛಿಸುವ ವರ ಎಂತಹುದೇ ಆಗಿರಲಿ ನಾನು ನೀಡುತ್ತೇನೆ. ನಿನಗ್ಯಾವ ವರ ಬೇಕೋ ಕೇಳಿಕೋ?” ದುರ್ವಾಸ ಮುನಿಗಳ ಮಾತುಗಳನ್ನು ಕೇಳಿ ಕುಂತಿಗೆ ಬಹಳ ಸಂತೋಷವಾಯಿತು. ಆದರೆ ಕುಂತಿಗೆ ಯಾವ ವರವನ್ನು ಕೇಳಿಕೊಳ್ಳಬೇಕು ಎಂಬ ಇಚ್ಛೆಯುಂಟಾಗಲಿಲ್ಲ.

ಕುಂತಿ! ಮಗಳೇ! ನೀನು ನನ್ನಿಂದ ಯಾವ ವರವನ್ನು ಕೇಳದಿದ್ದರೂ ಚಿಂತೆಯಿಲ್ಲ. ನಾನು ನಿನಗೊಂದು ಮಂತ್ರವನ್ನು ಉಪದೇಶ ಮಾಡುವೆನು. ಈ ಮಂತ್ರದಿಂದ ನಿನಗೆ ಒಳ್ಳೆಯದಾಗುವುದು. ಈ ಮಹಾಮಂತ್ರವನ್ನು ನೀನು ಸ್ವೀಕರಿಸಿದರೆ ದೇವಲೋಕದಲ್ಲಿರುವ ಯಾವ ದೇವತೆಯನ್ನಾದರೂ ಆಹ್ವಾನಿಸಬಹುದು. ಆಗ ದುರ್ವಾಸರು ವಿಧಿವತ್ತಾಗಿ ಮಂತ್ರವನ್ನು ಉಪದೇಶಿಸಿದರು. ನಂತರ ಮುನಿಗಳು ಕುಂತಿಭೋಜನ ಅನುಜ್ಞೆಯನ್ನು ಪಡೆದುಕೊಂಡು ಅರಮನೆಯಿಂದ ಹೊರಟುಬಿಟ್ಟರು.
ದುರ್ವಾಸರು ಅರಮನೆಯಿಂದ ಹೊರಟ ನಂತರ ಕುಂತಿಯು ತನ್ನ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಮುಳುಗಿಹೋದಳು. ಆದಾಗ್ಯೂ ಅವಳ ಮನಸ್ಸು ಮುನಿಗಳು ಉಪದೇಶ ಮಾಡಿದ್ದ ಮಂತ್ರದ ಮಹತ್ವದ ಬಗ್ಗೆಯೇ ಆಲೋಚಿಸುತ್ತಿತ್ತು. “ದೇವತೆಗಳನ್ನು ಬಲವಂತವಾಗಿ ಕರೆದು ತರುವ ಮಂತ್ರ”ದ ಬಗ್ಗೆ ಕುತೂಹಲ ಮೂಡಿತು. ಇದು ನಿಜವೇ? ತಾನು ಪರೀಕ್ಷಿಸಿದರೆ ಹೇಗೆ? ಎಂಬ ಆಸೆ ಮನಸ್ಸಿನಲ್ಲಿ ಮೂಡಿತು. ಒಂದು ದಿನ ಕುಂತಿಯು ಸ್ನಾನ ಮಾಡಿ ಅರಮನೆಯ ಉಪ್ಪರಿಗೆಯಲ್ಲಿದ್ದ ಮಂಚದ ಮೇಲೆ ಮಲಗಿ ಉದಯಿಸುತ್ತಿದ್ದ ಸೂರ್ಯನನ್ನೇ ನೋಡುತ್ತಿದ್ದಳು.

ಅವಳ ದೃಷ್ಟಿ ಸಂಪೂರ್ಣವಾಗಿ ಬಾಲಸೂರ್ಯನಲ್ಲಿ ನೆಟ್ಟಿತು. ಸುಂದರವಾಗಿರುವ ಬಾಲಸೂರ್ಯನನ್ನು ನೋಡಿದಷ್ಟು ಅವಳ ಮನಸ್ಸು ತಣಿಯಲಿಲ್ಲ. ಹೀಗೆ ಸೂರ್ಯನನ್ನು ನೇರ ದೃಷಿಯಿಂದ ನೋಡುತ್ತಲೇ ಇದ್ದಳು. ಕುಂತಿಯ ದೃಷ್ಟಿಯು ದಿವ್ಯದೃಷ್ಟಿಯಾಗಿ ಪರಿವರ್ತಿತವಾಯಿತು. ಸೂರ್ಯಮಂಡಲದ ಮಧ್ಯದಲ್ಲಿರುವ ಸಾಕ್ಷಾತ್ ಸೂರ್ಯನನ್ನೇ ತದೇಕಚಿತ್ತಳಾಗಿ ನೋಡತೊಡಗಿದಳು ಕುಂತಿ. ಸೂರ್ಯನು ದಿವ್ಯಕವಚಧರನಾಗಿ, ಸುಂದರಕರ್ಣಕುಂಡಲಧರನಾಗಿರುವನು. ಆ ದಿವ್ಯಸುಂದರ ಮೂರ್ತಿಯನ್ನು ಕಂಡೊಡನೆ ಕುಂತಿಗೆ ಮುನಿಗಳು ಉಪದೇಶ ಮಾಡಿದ ಮಹಾಮಂತ್ರದ ನೆನಪಾಯಿತು. ಅವಳು ಕೂಡಲೇ ಮುನಿಗಳು ಹೇಳಿಕೊಟ್ಟ ಮಹಾಮಂತ್ರವನ್ನು ಉಚ್ಚರಿಸಿದಳು. ಸೂರ್ಯದೇವನನ್ನು ಅವಳ ಬಳಿಗೆ ಬರುವಂತೆ ಆಹ್ವಾನಿಸಿದಳು. ಕೂಡಲೇ ಸೂರ್ಯನು ಕುಂತಿಯ ಬಳಿಗೆ ಧಾವಿಸಿ ಬಂದನು. ಸೂರ್ಯನು ನಸುನಗುತ್ತಾ ಕುಂತಿಯನ್ನು ಕುರಿತು ಈ ರೀತಿ ಹೇಳಿದನು : “ಕುಂತಿ! ನನ್ನನ್ನು ಯಾಕೆ ಇಲ್ಲಿಗೆ ಬರುವಂತೆ ಕರೆದೆ? ನನ್ನಿಂದ ಯಾವ ಕೆಲಸವಾಗಬೇಕು? ನಾನು ನಡೆಸಿಕೊಡುವೆನು. ತಿಳಿಸು’ ಕುಂತಿ ಗೊಂದಲಕ್ಕೀಡಾದಳು. “ಸೂರ್ಯದೇವ! ನಾನು ಕೇವಲ ಕುತೂಹಲಕ್ಕಾಗಿ ನಿನ್ನನ್ನು ಕರೆದೆನು. ನನಗೆ ನಿನ್ನಿಂದ ಯಾವ ಕಾರ್ಯವೂ ಆಗಬೇಕಾಗಿಲ್ಲ. ನೀನು ಎಲ್ಲಿಂದ ಬಂದೆಯೋ ಅಲ್ಲಿಗೆ ಪುನಃ ಹಿಂದಿರುಗಿ ಹೋಗು.” ಆಗ ಸೂರ್ಯದೇವನು ಕುಂತಿಗೆ ಈ ರೀತಿ ಹೇಳಿದನು : “ಕುಂತಿ! ನೀನು ಹುಡುಗಾಟವಾಡುತ್ತಿರುವೆ. ದೇವತೆಗಳ ದರ್ಶನ ಲಭ್ಯವಾಗುವುದೇ ದುರ್ಲಭ. ಒಮ್ಮೆ ದೇವತೆಗಳು ಬಳಿ ಬಂದರೆ ಏನನ್ನಾದರೂ ಕೇಳಲೇಬೇಕು. ನೀನು ಕೇವಲ ಕುತೂಹಲಕ್ಕಾಗಿ ಕರೆದೆ ಎಂದು ಹೇಳಿದರೂ, ನಿನ್ನ ಮನಸ್ಸಿನಲ್ಲಿ ಹುಟ್ಟುವಾಗಲೇ ಕವಚವನ್ನೂ ಕುಂಡಲಗಳನ್ನೂ ಧರಿಸಿರುವ ಪ್ರಪಂಚದಲ್ಲೇ ಅಪ್ರತಿಮವೀರನಾದ ಮಗನನ್ನು ಪಡೆಯಬೇಕೆನ್ನುವುದೇ ಆಗಿದೆ. ನಿನ್ನ ಮನಸ್ಸಿನ ಇಚ್ಛೆಯಂತೆಯೇ ನಿನಗೊಬ್ಬ ಮಗನು ಹುಟ್ಟುತ್ತಾನೆ.

ಕುಂತಿಗೆ ತುಂಬಾ ಸುಂದರವಾದ ಕವಚ-ಕುಂಡಲಗಳಿಂದ ಕೂಡಿದ ಸೂರ್ಯನಂತೆಯೇ ಮಹಾತೇಜಸ್ಸಿನಿಂದ ಕೂಡಿದ ಮಗುವು ಜನಿಸಿತು. ಆದರೆ ಕನ್ಯೆ ಕುಂತಿ ಮಾತೆಯಾದ ಸುದ್ದಿ ಲೋಕಕ್ಕೆ ತಿಳಿಯುವಂತಿರಲಿಲ್ಲ. ಹಾಗೇನಾದರೂ ತಿಳಿದರೆ ಲೋಕೋಪವಾದಕ್ಕೆ ಗುರಿಯಾಗಬೇಕಾಗುವುದು. ಅವಳು ಕಂದನನ್ನು ತನ್ನ ಬಳಿ ಇರಿಸಿಕೊಳ್ಳುವಂತಿಲ್ಲ. ಕುಂತಿ ತನ್ನ ಆಪ್ತ ಸಖಿಯೊಡನೆ ಸಮಾಲೋಚನೆ ನಡೆಸಿ ಒಂದು ಪೆಟ್ಟಿಗೆಯನ್ನು ತರಿಸಿದಳು. ಅಂತಹ ಸುಭದ್ರವಾದ ಪೆಟ್ಟಿಗೆಯಲ್ಲಿ ಮಲಗಿಸಿ ಅಶ್ವಾ ನದಿಯಲ್ಲಿ ತೇಲಿಬಿಡಲಾಯಿತು. ತನ್ನ ಕಂದನು ಎಲ್ಲಿಯಾದರೂ ಸುಖವಾಗಿರಲಿ ಎಂದು ಹಾರೈಸಿ ಮನೆಗೆ ಹಿಂದಿರುಗಿದಳು.

ಕುಂತಿಯು ನದಿಯಲ್ಲಿ ತೇಲಿಬಿಟ್ಟ ಮಗುವು ಮುಂದಕ್ಕೆ ಸಾಗಿ ಗಂಗಾನದಿಯನ್ನು ದಾಟಿಕೊಂಡು ಸೂತಜಾತಿಯವರ ಆಳ್ವಿಕೆಗೆ ಒಳಪಟ್ಟ ಚಂಪಾ ಎಂಬ ಪಟ್ಟಣವನ್ನು ಸೇರಿಕೊಂಡಿತು. ಆ ಸಮಯಕ್ಕೆ ಸರಿಯಾಗಿ ಅಥಿರಥ ಎಂಬ ಸೂತನು ತನ್ನ ಪತ್ನಿ ರಾಧೆಯೊಡನೆ ಪುಣ್ಯ ಕಾಲದಲ್ಲಿ ಸ್ನಾನ ಮಾಡಲು ಗಂಗಾನದಿಯ ತೀರಕ್ಕೆ ಬಂದಿದ್ದನು. ರಾಧೆಯು ಅತ್ಯಂತ ರೂಪಸಿಯಾಗಿದ್ದಳು. ಆದರೆ ಅವಳಿಗೆ ಸಂತಾನ ಭಾಗ್ಯವಿರಲಿಲ್ಲ. ಮಕ್ಕಳನ್ನು ಪಡೆಯುವ ಸಲುವಾಗಿ ಆ ದಂಪತಿಗಳು ಅನೇಕ ವ್ರತಗಳನ್ನೂ ಮಾಡಿದ್ದರು. ಹಾಗೆಯೇ ಗಂಗಾನದಿಯ ತೀರಕ್ಕೆ ಪುಣ್ಯಸ್ನಾನ ಮಾಡಲು ಬಂದಾಗ, ಪೆಟ್ಟಿಗೆಯು ನೀರಿನಲ್ಲಿ ತೇಲುತ್ತಾ ರಾಧೆಯ ಕಾಲ ಬಳಿಗೆ ಬಂದಿತು. ರಾಧೆಗೆ ಕುತೂಹಲವುಂಟಾಯಿತು. ಪೆಟ್ಟಿಗೆಯಲ್ಲಿ ಬಾಲಸೂರ್ಯನ ಕಾಂತಿಯಿಂದ ತೇಜೋಪುಂಜವಾಗಿ ಹೊಳೆಯುತ್ತಿದ್ದ ಕಂದನನ್ನು ಕಂಡರು. ಆ ಕಂದನು ಬಂಗಾರದ ಕವಚವನ್ನು ಹೊಂದಿದ್ದನು. ಆ ಕಂದನನ್ನು ಅಥಿರಥನು ಬಹಳ ಅಕ್ಕರೆಯಿಂದ ಎತ್ತಿಕೊಂಡು ತೊಡೆಯ ಮೇಲೆ ಮಲಗಿಸಿಕೊಂಡನು. ರಾಧೆಯನ್ನು ಕರೆದು ಈ ರೀತಿ ಹೇಳಿದನು : “ರಾಧೆ! ನಾವು ಮಾಡಿದ ವ್ರತಗಳು ಫಲ ನೀಡಿವೆ. ದೇವರು ನಮ್ಮ ಕೊರಗನ್ನು ಹೋಗಲಾಡಿಸಲು ಈ ಮಗುವನ್ನು ಕರುಣಿಸಿದ್ದಾನೆ.” ತನ್ನ ತೊಡೆಯ ಮೇಲೆ ಮಲಗಿದ್ದ ಮಗುವನ್ನು ಎತ್ತಿ ರಾಧೆಯ ಕೈಗೆ ಕೊಟ್ಟನು. ರಾಧೆಗೂ ಈ ಕಂದನು ಇಷ್ಟವಾದನು. ಆ ದಂಪತಿಗಳು ಶಾಸ್ತ್ರದ ನಿಯಮದಂತೆ ಮಗುವನ್ನು ದತ್ತು ಸ್ವೀಕರಿಸಿದರು. ಮುಂದಿನ ದಿನಗಳಲ್ಲಿ ಅಥಿರಥ - ರಾಧೆಗೆ ಬೇರೆಯ ಮಕ್ಕಳೂ ಜನಿಸಿದರು. ಪೆಟ್ಟಿಗೆಯಲ್ಲಿ ದೊರಕಿದ ಮಗುವು ಬಂಗಾರದ ಬಣ್ಣದ ಕಾಂತಿಯಿಂದ ಹೊಳೆಯುತ್ತಿತ್ತು. ಬಂಗಾರದ ಕವಚ - ಕುಂಡಲಗಳೊಡನೆ ಹುಟ್ಟಿದ ಮಗುವಿಗೆ ಬ್ರಾಹ್ಮಣರು ವಿಧಿವತ್ತಾಗಿ “ವಸುಷೇಣ” ಎಂದು ನಾಮಕರಣ ಮಾಡಿದರು. “ವಸು” ಎಂದರೆ ಐಶ್ವರ್ಯ. ಎಲ್ಲರು ಅವನನ್ನು “ವೃಷ”ನೆಂದು ಕರೆಯುತ್ತಿದ್ದರು. ಸೂತ ದಂಪತಿಗಳ ಅಕ್ಕರೆಯಲ್ಲಿ ಮಗುವು ಶುಕ್ಲ ಪಕ್ಷದ ಚಂದ್ರನಂತೆ ಉಜ್ವಲವಾಗಿ ಬೆಳೆಯತೊಡಗಿದನು. ವೃಷನು ಬಹಳ ಚೂಟಿಯಾಗಿ ಎಲ್ಲ ವಿದ್ಯೆಗಳನ್ನು ಕಲಿಯಲು ಆಸಕ್ತಿ ತೋರಿಸುತ್ತಿದ್ದನು. ಅವನ ಅದಮ್ಯ ಉತ್ಸಾಹ ಕಂಡು ಅಥಿರಥನು ಮಗನನ್ನು ಒಳ್ಳೆಯ ಕಡೆ ವಿದ್ಯೆ ಕಲಿಸಲು ಕಳುಹಿಸಿಕೊಡಬೇಕು ಎಂದು ಮನದಲ್ಲೇ ನಿಶ್ಚಯಿಸಿಕೊಂಡನು.

ಅಥಿರಥನು ಮಗನಿಗೆ ವಿದ್ಯೆ ಕಲಿಸಲು ಧೃತರಾಷ್ಟ್ರನ ರಾಜಧಾನಿ ಹಸ್ತಿನಾವತಿ ಸರಿಯಾದ ಜಾಗ ಎಂದು ನಿರ್ಧರಿಸಿ ಕಳುಹಿಸಿಕೊಟ್ಟನು. ಆಸ್ಥಾನ ಗುರುಗಳಾದ ದ್ರೋಣಾಚಾರ್ಯರ ಬಳಿ ಕರ್ಣನು ಧನುರ್ವಿದ್ಯೆಯನ್ನು ಅಭ್ಯಾಸ ಮಾಡತೊಡಗಿದನು. ಆ ಗುರುಕುಲದಲ್ಲಿ ಧೃತರಾಷ್ಟ್ರನ ಹಿರಿಯ ಪುತ್ರ ದುರ್ಯೋಧನನ ಜೊತೆ ಕರ್ಣನಿಗೆ ಸ್ನೇಹ ಬೆಳೆಯಿತು. ಕರ್ಣನು ದ್ರೋಣ - ಕೃಪಾಚಾರ್ಯರಲ್ಲಿ ಧನುರ್ವಿದ್ಯೆಯನ್ನು ಅಭ್ಯಾಸ ಮಾಡಿದ ನಂತರವೂ ಇನ್ನೂ ಹೆಚ್ಚು ವಿದ್ಯೆಯನ್ನು ಕಲಿಯಲು ಹಾತೊರೆಯುತ್ತಿದ್ದನು. ದುರ್ಯೋಧನನ ಜೊತೆ ಉಂಟಾದ ಸ್ನೇಹದಿಂದ ಕರ್ಣನು ಪಾಂಡವರನ್ನು ದ್ವೇಷಿಸಲು ಪ್ರಾರಂಭ ಮಾಡಿದನು. ಪಾಂಡವ ಸಹೋದರರಲ್ಲಿ ಅರ್ಜುನನನ್ನು ಮಧ್ಯಮ ಎಂದೇ ಕರೆಯುತ್ತಿದ್ದರು. ಅವನನ್ನು ಕಾಳಗದಲ್ಲಿ ಸೋಲಿಸುವುದೇ ಕರ್ಣನ ಜೀವನದ ಮುಖ್ಯ ಗುರಿ ಎಂಬಂತೆ ಕರ್ಣನು ಭಾವಿಸಿದ್ದನು. ಅರ್ಜುನನನ್ನು ಕಂಡರೆ ಕರ್ಣನಿಗೆ ಅಸಹನೆ. ಅರ್ಜುನನಿಗೂ ಕರ್ಣನನ್ನು ಕಂಡರೆ ಆಗುತ್ತಿರಲಿಲ್ಲ. ಇಬ್ಬರಿಗೂ ಈ ರೀತಿಯ ಸ್ವಭಾವ ಅಭ್ಯಾಸವಾಗಿ ಹೋಯಿತು. ಕರ್ಣನಿಗೆ ತನ್ನ ಪಿತೃ ಸೂರ್ಯನೆಂದು ತಿಳಿದಿರಲಿಲ್ಲ. ಆದರೂ ಅವನು ಪ್ರತಿನಿತ್ಯ ಸೂರ್ಯಾರಾಧನೆಯನ್ನು ನಿಷ್ಠೆಯಿಂದ ಮಾಡುತ್ತಿದ್ದನು. ಅವನು ಮುಂಜಾನೆ-ಮಧ್ಯಾಹ್ನ-ಸಾಯಂಕಾಲಗಳಲ್ಲಿ ಸೂರ್ಯನನ್ನು ಪೂಜಿಸುತ್ತಿದ್ದನು. ಮಧ್ಯಾಹ್ನದ ಸಮಯದಲ್ಲಿ ಕರ್ಣನು ನದಿ ನೀರಿನಲ್ಲಿ ಇಳಿದು ಶುಭ್ರವಾಗಿ ಮಿಂದು ಶುಚಿಯಾಗಿ ನೀರಿನಲ್ಲಿಯೇ ನಿಂತು ಸೂರ್ಯನನ್ನು ಆರಾಧಿಸುತ್ತಿದ್ದನು.

ಅಂತಹ ಸಮಯದಲ್ಲಿ ಯಾರೇ ಬಂದು ಏನೇ ಕೇಳಿದರೂ ಹಿಂದು - ಮುಂದೆ ನೋಡದೆ ದಾನ ಮಾಡುತ್ತಿದ್ದನು. ಕರ್ಣನಿಗೆ ಸದಾಕಾಲ ದುಯೋಧನನಿಗೆ ಹಿತವುಂಟು ಮಾಡುವ ಕೆಲಸದಲ್ಲಿ ಬಹಳ ಆಸಕ್ತಿ. ಕರ್ಣನು ಗುರುಗಳಾದ ದ್ರೋಣಾಚಾರ್ಯರನ್ನು ಭೇಟಿ ಮಾಡಿ ಈ ರೀತಿ ಹೇಳಿದನು : “ಆಚಾರ್ಯ! ನಾನು ಬ್ರಹ್ಮಾಸ್ತ್ರವನ್ನು ಉಪಯೋಗಿಸಿ ನಂತರ ಹಿಂದಕ್ಕೆ ಪಡೆಯುವ ವಿದ್ಯೆಯನ್ನು ಕಲಿಯಬೇಕೆಂದಿರುವೆ. ಅದರ ರಹಸ್ಯವನ್ನು ಕಲಿಯಬೇಕೆಂಬ ಆಸೆ ಉಂಟಾಗಿದೆ. ನೀವು ನಿಮ್ಮ ಸ್ವಂತ ಮಗ ಅಶ್ವಾತ್ಥಾಮ ಮತ್ತು ಬೇರೆ ಶಿಷ್ಯರ ನಡುವೆ ಭೇದವನ್ನು ಎಣಿಸುವುದಿಲ್ಲ. ನನಗೆ ಅರ್ಜುನನ ಜೊತೆ ಸರಿಸಮನಾಗಿ ಯುದ್ಧ ಮಾಡಬೇಕೆಂಬ ಆಕಾಂಕ್ಷೆ ಇದೆ. ನನಗೆ ಬ್ರಹ್ಮಾಸ್ತ್ರದ ವಿದ್ಯೆಯನ್ನು ಕಲಿಯಲು ಅನುಗ್ರಹಿಸಿ.” ಆದರೆ ದ್ರೋಣಾಚಾರ್ಯರಿಗೆ ಅರ್ಜುನನ ಮೇಲೆ ಅಪಾರವಾದ ಪ್ರೀತಿ. ದುರ್ಯೋಧನನಿಗೆ ಪಾಂಡವರ ಬಗ್ಗೆ ಬಹಳ ದ್ವೇಷ ಇದೆ ಎಂಬುದನ್ನು ಆಚಾರ್ಯರು ಮನಗಂಡಿದ್ದರು. “ಮಗು! ಯಾರು ಕಠಿಣವಾದ ಬ್ರಹ್ಮಚರ್ಯೆಯನ್ನು ಆಚರಿಸುತ್ತಾನೋ, ಅವನು ಬ್ರಾಹ್ಮಣನಾಗಿರಬೇಕು. ಅದೇ ರೀತಿ ತಪಸ್ವಿಯಾದ ಕ್ಷತ್ರಿಯನಲ್ಲಿ ಮಾತ್ರ ಬ್ರಹ್ಮಾಸ್ತ್ರವಿರುತ್ತದೆ. ಅಂತಹವರಿಗೆ ಈ ವಿದ್ಯೆ ಗಳಿಸಲು ಸಾಧ್ಯ.” ದ್ರೋಣಾಚಾರ್ಯರು ಕರ್ಣನ ಬೇಡಿಕೆಗೆ ಮಣಿಯಲಿಲ್ಲ. ಕೂಡಲೇ ಕರ್ಣನ ಮಹೇಂದ್ರಪರ್ವತದಲ್ಲಿ ವಾಸವಾಗಿರುವ ಪರಶುರಾಮರ ಬಳಿಗೆ ಹೋದನು. ಅವನು ಪರಶುರಾಮರಿಗೆ ನಮಸ್ಕರಿಸಿದನು. “ನಾನು ಭೃಂಗವಂಶದ ಬ್ರಾಹ್ಮಣ” ಎಂದು ತನ್ನನ್ನು ತಾನು ಪರಿಚಯಿಸಿಕೊಂಡನು. ಭಗವಂತನೆಂದೇ ಖ್ಯಾತಿವೆತ್ತ ಪರಶುರಾಮನು ಕರ್ಣನ ಗೋತ್ರ ಮುಂತಾದ ವಿವರಗಳ ಬಗ್ಗೆ ವಿಚಾರಿಸಿದರು. ನಂತರ ಅವನನ್ನು ತನ್ನ ಶಿಷ್ಯನಾಗಿ ಸ್ವೀಕರಿಸಿದರು. ಪರಶುರಾಮರಿಗೆ ಕರ್ಣನ ಬಗ್ಗೆ ಬಹಳ ಅಕ್ಕರೆ. ಅವನ ಚುರುಕುತನ, ವಿನಯವಂತಿಕೆಯಿಂದ ಬಹಳಷ್ಟು ಆಕರ್ಷಿತರಾಗಿದ್ದರು. ಅವನಿಗೆ ಧನುರ್ವಿದ್ಯೆಯನ್ನು ಹೇಳಿ ಕೊಡಲಾರಂಭಿಸಿದರು.

ಒಮ್ಮೆ ಕರ್ಣನು ತನ್ನ ಆಶ್ರಮದಲ್ಲಿ ಖಡ್ಗ-ಧನುಷ್ಪಾಣಿಯಾಗಿ ನಡೆದಾಡುತ್ತಿದ್ದನು. ಆಶ್ರಮವು ಸಮುದ್ರದ ತೀರದಲ್ಲಿತ್ತು. ಹಾಗೆ ನಡೆದಾಡುತ್ತಿರುವಾಗ ದೂರದಲ್ಲಿ ಅವನ ಕಣ್ಣಿಗೆ ಒಂದು ಪ್ರಾಣಿ ಕಾಣಿಸಿತು. ಆ ಪ್ರಾಣಿಯ ಮೇಲೆ ಕರ್ಣನು ಬಾಣ ಪ್ರಯೋಗ ಮಾಡಿ ಕೊಂದುಬಿಟ್ಟನು. ನಂತರ ಹತ್ತಿರ ಹೋಗಿ ನೋಡಿದಾಗ ಅದು ಕಾಡುಪ್ರಾಣಿಯಾಗಿರಲಿಲ್ಲ. ಒಬ್ಬ ಅಗ್ನಿಹೋತ್ರಿಯಾಗಿದ್ದ ವೇದಪಾಠಿಯಾದ ಬ್ರಾಹ್ಮಣನ ಹೋಮಧೇನುವಾಗಿತ್ತು. ಕರ್ಣನು ಅರಿಯದೇ ಇಂತಹ ಅಪರಾಧವನ್ನು ಮಾಡಿದ್ದನು. ಕರ್ಣನು ತಾನು ತಿಳಿಯದೆ ಮಾಡಿದ ಅಪರಾಧಕ್ಕಾಗಿ ಬಹಳ ಪರಿತಾಪಪಟ್ಟನು. ಅವನು ಆ ಬ್ರಾಹ್ಮಣನನ್ನು ಸಮೀಪಿಸಿ ಕ್ಷಮೆಯನ್ನು ಯಾಚಿಸಿದನು. ಬ್ರಾಹ್ಮಣನಿಗೆ ನಿಜ ಸಂಗತಿಯನ್ನು ತಿಳಿಸಿದನು. “ಪೂಜ್ಯರೇ! ನಾನು ಬೇಕೆಂದು ಇಂತಹ ಕೆಲಸವನ್ನು ಮಾಡಲಿಲ್ಲ. ನಿಮ್ಮ ಹಸುವನ್ನು ನಾನು ಯಾವುದೋ ಕಾಡುಪ್ರಾಣಿ ಎಂದು ಪರಿಗಣಿಸಿ ಬಾಣ ಪ್ರಯೋಗ ಮಾಡಿ ಕೊಂಡುಬಿಟ್ಟೆ. ನನ್ನ ಅಪರಾಧವನ್ನು ಕ್ಷಮಿಸಿ, ಅನುಗ್ರಹಿಸಿ.” ಆ ಬ್ರಾಹ್ಮಣನು ಕೋಪಾವಿಷ್ಠನಾದನು. ಕರ್ಣನು ಪರಿಪರಿಯಾಗಿ ಬೇಡಿಕೊಂಡರೂ ಕರುಣೆ ತೋರಲಿಲ್ಲ. “ಕರ್ಣ! ನೀನು ವಿವೇಕರಹಿತನಾಗಿ ನನ್ನ ಆಶ್ರಮದ ಧೇನುವನ್ನು ಕೊಂದಿರುವೆ. ನೀನು ಮಾಡಿದ ತಪ್ಪಿನ ಅರಿವು ನಿನಗಿದೆಯೇ? ನೀನು ಯಾರ ಜೊತೆ ಸ್ಪರ್ಧಿಸಬೇಕು ಎಂದು ಯತ್ನಿಸುತ್ತಿರುವೆಯೋ, ಯಾರನ್ನು ಕೊಲ್ಲಲು ಹಗಲು-ರಾತ್ರಿ ಪ್ರಯತ್ನಿಸುತ್ತಿರುವೆಯೋ ಅವನೊಂದಿಗೆ ಯುದ್ಧ ಮಾಡುವಾಗ ನಿನ್ನ ರಥದ ಚಕ್ರವು ಭೂಮಿಯಲ್ಲಿ ಹೂತುಹೋಗಲಿ. ಹೇಗೆ ವಿವೇಚನೆಯಿಲ್ಲದೇ ನೀನು ನನ್ನ ಹಸುವನ್ನು ಕೊಂದೆಯೋ ಹಾಗೆಯೇ ನೀನು ಮುಂದೇನು ಮಾಡಬೇಕು ಎಂದು ತೋಚದೆ ನಿಂತಿರುವ ಸಮಯದಲ್ಲಿ ನಿನ್ನ ಶತ್ರುವು ನಿನ್ನ ತಲೆಯನ್ನು ಕತ್ತರಿಸುತ್ತಾನೆ. ಒಂದು ಕ್ಷಣವೂ ನೀನು ನಿಲ್ಲದೆ ಹೊರಟುಹೋಗು.” ಈ ರೀತಿ ಬ್ರಾಹ್ಮಣನು ಶಾಪಕೊಟ್ಟು ಅಲ್ಲಿ ನಿಲ್ಲದೆ ಹೊರಟು ಹೋದನು. ಕರ್ಣನು ಬಹಳ ದುಃಖಪಟ್ಟನು. ನಂತರ ಅವನು ಪರಶುರಾಮನ ಆಶ್ರಮದ ಬಳಿಗೆ ಹೋದನು.

ಪರಶುರಾಮನು ಕರ್ಣನ ನಡವಳಿಕೆ, ಬುದ್ಧಿ ಶಕ್ತಿ, ವಿನಯಗಳಿಂದ ಆಕರ್ಷಿತನಾಗಿದ್ದನು. ಅವನ ಗುರುಭಕ್ತಿಯಲ್ಲಿ ಸ್ವಲ್ಪವೂ ಲೋಪವಿರುತ್ತಿರಲಿಲ್ಲ. ಅವನಿಗಿದ್ದ ಭಕ್ತಿ, ಶ್ರದ್ಧೆ, ಆಸಕ್ತಿಗಳಿಂದ ಭಗವಂತನಾದ ಪರಶುರಾಮನು ಸಂತೃಪ್ತನಾಗಿದ್ದನು. ಪರಶುರಾಮನು ಮಹಾನ್ ತಪಸ್ವಿ. ಅಂತಹ ವ್ಯಕ್ತಿಯನ್ನು ಸಂತುಷ್ಟಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಕರ್ಣನ ಶುಶ್ರೂಷೆಯಿಂದ ತಪಸ್ವಿ ಪರಶುರಾಮನು ಬಹಳ ಸಂತೋಷಗೊಂಡನು. ಅವನಿಗೆ ಸಂಪೂರ್ಣವಾಗಿ ರಹಸ್ಯಸಹಿತ ಬ್ರಹ್ಮಾಸ್ತ್ರವನ್ನು ಉಪದೇಶ ಮಾಡಿದನು. ಕರ್ಣನು ಬಹಳ ದಿನಗಳ ಕಾಲ ಪರಶುರಾಮನ ಆಶ್ರಮದಲ್ಲಿಯೇ ಉಳಿದನು.

ಒಂದು ದಿನ ಭಗವಂತನಾದ ಪರಶುರಾಮನು ತನ್ನ ಪ್ರಿಯ ಶಿಷ್ಯ ಕರ್ಣನ ಮೇಲೆ ಸಂಪೂರ್ಣವಾಗಿ ವಿಶ್ವಾಸವಿಟ್ಟು ಕರ್ಣನ ತೊಡೆಯ ಮೇಲೆ ತಲೆ ಇಟ್ಟು ಮಲಗಿ ವಿಶ್ರಾಂತಿ ತೆಗೆದುಕೊಳ್ಳುವಾಗ ಆ ಸಮಯದಲ್ಲಿ ಒಂದು ಕ್ರೂರವಾದ ಹುಳುವೊಂದು ಕರ್ಣನ ಬಳಿಗೆ ಬಂದಿತು. ಅದು ಕೇವಲ ರಕ್ತ, ಮಾಂಸವನ್ನೇ ಆಹಾರವಾಗಿ ಸೇವಿಸುತ್ತಿತ್ತು. ಅವನ ತೊಡೆಯನ್ನು ಕೊರೆಯಲಾರಂಭಿಸಿತು. ಗುರುಗಳು ಗಾಢವಾದ ನಿದ್ರೆಯಲ್ಲಿ ಮುಳುಗಿರುವುದರಿಂದ ಕರ್ಣನಿಗೆ ಆ ಕ್ರೂರವಾದ ಹುಳುವನ್ನು ಎಸೆಯಲಾಗಲೀ, ಓಡಿಸಲಾಗಲೀ ಆಗಲಿಲ್ಲ. ಗುರುಗಳಿಗೆ ಎಲ್ಲಿ ನಿದ್ರಾಭಂಗ ಉಂಟಾಗುವುದೋ ಎಂದು ಹೆದರಿದನು. ಕ್ರಿಮಿಯು ಕರ್ಣನ ತೊಡೆಯನ್ನು ಆಳವಾಗಿ ಕೊರೆಯತೊಡಗಿತು. ಅವನಿಗೆ ವಿಪರೀತವಾಗಿ ರಕ್ತಸ್ರಾವಾಗಿ ನೋವಾಗುತ್ತಿದ್ದರೂ ಸಹಿಸಿಕೊಂಡನು. ಅವನು ಧೈರ್ಯಗೆಡದೆ ಹಲ್ಲು ಕಚ್ಚಿಕೊಂಡು ನೋವನ್ನು ಸಹಿಸಿಕೊಂಡನು. ಆದರೆ ಕ್ರಿಮಿಯನ್ನು ಕೊಲ್ಲಲಿಲ್ಲ. ಅದೇ ರೀತಿ ದೂರ ತಳ್ಳಲೂ ಇಲ್ಲ. ಧೈರ್ಯದಿಂದ ದೃಢ ಮನಸ್ಸಿನಿಂದ ಹಾಗೆಯೇ ಬಂಡೆಯಂತೆ ನಿಶ್ಚಲನಾಗಿ ಕುಳಿತಿದ್ದನು. ಕರ್ಣನ ತೊಡೆಯಲ್ಲಿ ಆಳವಾದ ಗಾಯವಾಗಿ ರಕ್ತವು ಧಾರಾಕಾರವಾಗಿ ಸುರಿಯುತ್ತಿತ್ತು. ರಕ್ತವು ಹರಿದು ಬಂದು ಪರಶುರಾಮರ ಕೆಳಕ್ಕೂ ಹರಿಯಿತು. ಪರಶುರಾಮನು ಎಚ್ಚರಗೊಂಡು ನೋಡುತ್ತಾನೆ. ರಕ್ತದ ಧಾರೆ ಧಾರಾಕಾರವಾಗಿ ಹರಿಯುತ್ತಿದೆ. ರಕ್ತದ ಸ್ಪರ್ಶದಿಂದ ಪರಶುರಾಮನು ಉದ್ವಿಗ್ನಗೊಂಡನು. ಕರ್ಣನ ತೊಡೆಯನ್ನು ಕೊರೆದಿದ್ದ ಕ್ರಿಮಿಯನ್ನು ನೋಡಿದ ಪರಶುರಾಮರು ಅಚ್ಚರಿಗೊಂಡರು. “ನೀನು ಯಾರು? ಯಾವ ಕಾರಣಕ್ಕಾಗಿ ಈ ಕ್ರಿಮಿ ಶರೀರವನ್ನು ಹೊಂದಿದ್ದೆ?” ಎಂದು ಕೇಳಿದಾಗ, “ನಾನು ಹಿಂದೆ ಸತ್ಯಯುಗದಲ್ಲಿ ವಂಶನೆಂಬ ಮಹಾಸುರನಾಗಿದ್ದೆನು. ನಾನು ನಿನ್ನ ಪೂರ್ವಜ ಭೃಗುಮುನಿಯು ಸಮಾನವಯಸ್ಕರು. ಒಂದು ದಿನ ನಾನು ಭೃಗುಮುನಿಯ ಪ್ರೀತಿ ಪಾತ್ರಳಾದ ಪತ್ನಿಯನ್ನು ಅಪಹರಿಸಿಕೊಂಡು ಹೋದೆನು. ನನ್ನ ಕಾರ್ಯದಿಂದ ಕೋಪಗೊಂಡ ಭೃಗುಮುನಿಯು ಈ ರೀತಿ ಶಾಪ ನೀಡಿದನು : “ನೀನು ಮೂತ್ರ - ಕಫಗಳನ್ನು ತಿಂದು ಜೀವಿಸುವ ಕ್ರಿಮಿಯಾಗಿ ನರಕದಲ್ಲಿ ಬಿದ್ದು ಹೊರಳಾಡು.” ನನಗೆ ಆಗ ತಿಳಿದು ಬಂದಿತು. ನಾನು ಮಾಡಿದ ಕುಕೃತ್ಯದಿಂದ ಇಂತಹ ಶಾಪ ನನಗೆ ಲಭಿಸಿತು. ನಾನು ಭೃಗುಮುನಿಯನ್ನು ಅತ್ಯಂತ ದಯನೀಯವಾಗಿ ಬೇಡಿಕೊಂಡೆ.

ಆಗ ಭೃಗುಮುನಿಗಳು ಈ ರೀತಿ ಹೇಳಿದರು : “ಮುಂದೆ ನನ್ನ ವಂಶದಲ್ಲಿ ಭಾರ್ಗವರಾಮನು ಜನಿಸಿ ಬರುತ್ತಾನೆ. ಅವನಿಂದ ನಿನಗೆ ಶಾಪ ವಿಮೋಚನೆ ಯಾಗುತ್ತದೆ.” ಅಂದಿನಿಂದ ಆ ಸುರನು ಇಂತಹ ದೀನಾವಸ್ಥೆಯಲ್ಲಿ ಬದುಕುತ್ತಿದ್ದನು. ಇಂದು ಅವನ ಶಾಪ ವಿಮೋಚನೆಯ ಕಾಲ ಕೂಡಿ ಬಂದಿತು. ಅವನು ಪರಶುರಾಮನ ದಿವ್ಯದರ್ಶನದಿಂದ ಶಾಪವಿಮುಕ್ತನಾಗಿ ತನ್ನ ಕ್ರಿಮಿ ರೂಪದಿಂದ ಹೊರ ಬಂದಿದ್ದನು. ಆಗ ಪರಶುರಾಮನ ದೃಷ್ಟಿ ಕರ್ಣನ ಕಡೆಗೆ ತಿರುಗಿತು. “ಮೂಢ! ಯಾರು ನೀನು? ನಿಜವನ್ನು ಹೇಳು. ಒಬ್ಬ ಬ್ರಾಹ್ಮಣ ಇಂತಹ ನೋವನ್ನು ಸಹಿಸಿಕೊಂಡು ಕುಳಿತುಕೊಳ್ಳಲಾರ. ಅಂತಹ ನೋವನ್ನು ಸಹಿಸುವ ಶಕ್ತಿ ಕ್ಷತ್ರಿಯನಿಗೆ ಮಾತ್ರವಿರುತ್ತದೆ. ಇಂತಹ ಪೀಡೆಯನ್ನು ಸಹಿಸಲು ಅವನಿಗೆ ಮಾತ್ರ ಸಾಧ್ಯ. ಈಗಲಾದರೂ ನೀನು ಬಾಯಿ ಬಿಟ್ಟು ಸತ್ಯವನ್ನು ಹೇಳು.” ಕರ್ಣನಿಗೆ ಹೆದರಿಕೆಯಾಯಿತು. ಸತ್ಯವನ್ನು ಹೇಳದಿದ್ದರೆ ಪರಶುರಾಮನು ತನಗೆ ಶಾಪ ನೀಡುವುದು ಖಚಿತ ಎಂದು ಭಾವಿಸಿ ತಾನು ಏನನ್ನು ಸಾಧಿಸಲು ಪರಶುರಾಮನ ಬಳಿಗೆ ಬಂದ ಎಂಬುದನ್ನು ವಿವರಿಸಿದನು. “ಭಗವಂತ! ನಾನು ಸೂತಪುತ್ರ. ನನ್ನನ್ನು ಕರ್ಣ, ರಾಧೇಯ ಎಂದು ಕರೆಯುತ್ತಾರೆ. ನಾನು ಬ್ರಹ್ಮಾಸ್ತ್ರವನ್ನು ಪಡೆಯಬೇಕು ಎಂಬ ಲೋಭದಿಂದ ಬ್ರಾಹ್ಮಣನ ವೇಷ ಧರಿಸಿ ನಿಮ್ಮಲ್ಲಿಗೆ ಬಂದೆನು. ತನ್ನ ತಪ್ಪನ್ನು ಮನ್ನಿಸುವಂತೆ ಕೇಳಿಕೊಂಡನು. ಆದರೆ ಪರಶುರಾಮನು ಶಾಂತನಾಗಲಿಲ್ಲ. ಕರ್ಣನನ್ನು ಕೋಪದಿಂದ ದಿಟ್ಟಿಸಿ ನೋಡುತ್ತಾ ಹೇಳಿದನು : “ಕರ್ಣ! ನೀನು ಬ್ರಹ್ಮಾಸ್ತ್ರವನ್ನು ಪಡೆಯುವ ಸಲುವಾಗಿ ಸುಳ್ಳು ಹೇಳಿಕೊಂಡು ನನ್ನ ಬಳಿಗೆ ಬಂದೆ. ನೀನು ನಿನ್ನ ಸಮಾನರೊಡನೆ ಯುದ್ಧ ಮಾಡುವಾಗ, ಪ್ರಾಣಾಪಾಯ ಸಂಭವಿಸಿದಾಗ ನಿನಗೆ ಬ್ರಹ್ಮಾಸ್ತ್ರವು ನೆನಪಿಗೆ ಬರುವುದಿಲ್ಲ. ನೀನು ಯುದ್ಧ ಮಾಡುವ ಸಮಯವನ್ನು ಬಿಟ್ಟು ಉಳಿದೆಲ್ಲ ಸಮಯದಲ್ಲೂ ನಿನಗೆ ಬ್ರಹ್ಮಾಸ್ತ್ರವು ನೆನಪಿನಲ್ಲಿ ಉಳಿದಿರುತ್ತದೆ. ಬ್ರಾಹ್ಮಣನಲ್ಲದವನಲ್ಲಿ ಬ್ರಹ್ಮಾಸ್ತ್ರವು ಸ್ಥಿರವಾಗಿ ಉಳಿಯುವುದಿಲ್ಲ. ನೀನು ನನ್ನ ಕಣ್ಣ ಮುಂದಿನಿಂದ ಕೂಡಲೇ ಹೊರಟು ಬಿಡು. ನೀನು ನನ್ನ ಮೇಲೆ ತೋರಿದ ಅಕ್ಕರೆ, ಗೌರವ ವ್ಯರ್ಥವಾಗುವುದಿಲ್ಲ. ನಿನ್ನ ಸಮಾನ ಯುದ್ಧ ಮಾಡುವ ಕ್ಷತ್ರಿಯನು ಪ್ರಪಂಚದಲ್ಲಿ ಹುಟ್ಟುವುದಿಲ್ಲ.” ಈ ರೀತಿ ಪರಶುರಾಮನು ಒಂದು ವರ ಹಾಗೂ ಮತ್ತೊಂದು ಶಾಪ ನೀಡಿದನು. ಕರ್ಣನಿಗೆ ಬಹಳ ದುಃಖವಾಯಿತು. ಅವನು ಗುರುಗಳಿಗೆ ನಮಸ್ಕರಿಸಿ ಹೊರಟುಬಿಟ್ಟನು. ದುರ್ಯೋಧನನ ಅನುಮತಿಯಿಂದ ಚಂಪಾ ಎಂಬ ಪಟ್ಟಣವನ್ನು ಪಾಲಿಸುತ್ತಿದ್ದನು. ಈ ರೀತಿ ದುರ್ಯೋಧನನ ಸ್ನೇಹಿತನಾಗಿ ಕರ್ಣನು ಎಲ್ಲಾ ಅಂತರಂಗಿಕ ವ್ಯವಹಾರಗಳಲ್ಲೂ ಪಾಲ್ಗೊಳ್ಳುತ್ತಿದ್ದನು. ಕರ್ಣ, ದುರ್ಯೋಧನನ ಸ್ನೇಹವನ್ನು ಕಂಡು ಎಲ್ಲರೂ ಹೊಟ್ಟೆಕಿಚ್ಚು ಪಡುತ್ತಿದ್ದರು.

ಪಾಂಡವರು ದುರ್ಯೋಧನನ ಜೊತೆ ಮೋಸದ ಜೂಜಿನಲ್ಲಿ ಸೋತಿದ್ದರು. ಪಾಂಡವರು ಸೋತರೆ ಹನ್ನೆರಡು ವರ್ಷಗಳ ಕಾಲ ವನವಾಸ, ಒಂದು ವರ್ಷದ ಕಾಲ ಅಜ್ಞಾತವಾಸ ಅನುಭವಿಸಬೇಕು ಎಂದು ಷರತ್ತು ಹಾಕಲಾಗಿತ್ತು. ವನವಾಸದ ಸಮಯದಲ್ಲಿ ಅರ್ಜುನನು ವ್ಯಾಸರ ಸಲಹೆಯಂತೆ ಶಿವನನ್ನು ಕುರಿತು ತಪಸ್ಸು ಮಾಡಿದನು. ಆಗ ಶಿವನು ಪ್ರತ್ಯಕ್ಷನಾಗಿ ಪಾಶುಪಶಾಸ್ತ್ರವನ್ನು ನೀಡಿದನು. ಅದೇ ರೀತಿ ಸ್ವರ್ಗಕ್ಕೆ ಹೋಗಿ ಇಂದ್ರನ ಸಂಗಡ ಕೆಲಕಾಲ ವಾಸ ಮಾಡಿದನು. ಆಗ ಇಂದ್ರನು ಲೋಮಶಋಷಿಗಳೊಂದಿಗೆ ಧರ್ಮರಾಜನಿಗೆ ಒಂದು ಸಂದೇಶವನ್ನು ಕಳುಹಿಸಿದನು. ಧರ್ಮರಾಯನಿಗೆ ಕರ್ಣನ ಬಗ್ಗೆ ತುಂಬಾ ಭಯವಿತ್ತು. ಕರ್ಣನು ಕವಚ-ಕುಂಡಲಗಳೊಂದಿಗೆ ಹುಟ್ಟಿದ್ದಾನೆ. ಆಗ ಇಂದ್ರನು ಧರ್ಮರಾಯನಿಗೆ ಭರವಸೆ ನೀಡಿದನು. ಅರ್ಜುನನನ್ನು ಸ್ವರ್ಗದಿಂದ ಪುನಃ ಭೂಮಿಗೆ ಕಳುಹಿಸಿಕೊಟ್ಟನು. ಆಗ ಅರ್ಜುನನು ತನ್ನ ಸಹೋದರ ಧರ್ಮರಾಯನಿಗೆ ಕರ್ಣನ ಬಗ್ಗೆ ಇದ್ದ ಭೀತಿಯನ್ನು ಹೋಗಲಾಡಿಸುವುದಾಗಿ ಭರವಸೆ ನೀಡಿದನು. ಕರ್ಣನ ಕವಚ-ಕುಂಡಲಗಳನ್ನು ಅಪಹರಿಸಲು ಒಂದು ಯೋಜನೆ ಸಿದ್ಧವಾಯಿತು. ಎಲ್ಲರೂ ಸೇರಿ ರೂಪಿಸಿದ ಯೋಜನೆ ಕರ್ಣನ ಜನ್ಮದಾತ ಸೂರ್ಯನಿಗೆ ತಿಳಿಯಿತು. ಇಂದ್ರನು ಕರ್ಣನ ಕವಚ-ಕುಂಡಲಗಳನ್ನು ಅಪಹರಿಸಿ ಭಿಕ್ಷೆಯ ರೂಪದಲ್ಲಿ ಪಡೆಯುವುದಾಗಿ ತಿಳಿಸಿದನು. ಕರ್ಣನನ್ನು ಎಚ್ಚರಗೊಳಿಸಲು ಸೂರ್ಯನು ನಿಶ್ಚಯಿಸಿದನು. ಅವನು ಬ್ರಾಹ್ಮಣನ ವೇಷದಲ್ಲಿ ಬಂದು ಕರ್ಣನ ಕನಸಿನಲ್ಲಿ ಕಾಣಿಸಿಕೊಂಡನು. ಕರ್ಣನು ಮಲಗಿದ್ದಾಗ ಬೆಳಗಿನ ಜಾವ ಸೂರ್ಯನು ಬ್ರಾಹ್ಮಣನ ವೇಷದಲ್ಲಿ ಕಾಣಿಸಿಕೊಂಡನು. ಸೂರ್ಯನು ಈ ರೀತಿ ಹೇಳಿದನು : “ಮಗು! ನಾನು ಹೇಳುವ ಮಾತುಗಳನ್ನು ಬಹಳ ಎಚ್ಚರದಿಂದ ಕೇಳು.

ನೀನು ನನಗೆ ಬಹಳ ಪ್ರಿಯನಾದವನು. ಇಂದ್ರನು ಪಾಂಡವರಿಗೆ ಸಹಾಯ ಮಾಡಲು ಕಪಟ ವೇಷ ಧರಿಸಿಕೊಂಡು ನಿನ್ನಲ್ಲಿಗೆ ಬಂದು ನಿನ್ನ ಕವಚ-ಕುಂಡಲಗಳನ್ನು ದಾನವಾಗಿ ಕೇಳುತ್ತಾನೆ. ಅವನು ಏನೇ ಹೇಳಿದರೂ ನೀನು ಮಾತ್ರ ನಿನ್ನ ಕವಚ-ಕುಂಡಲಗಳನ್ನು ಕೊಡಬೇಡ. ನಿನ್ನ ಕವಚ-ಕುಂಡಲಗಳು ಬಹಳ ಉತ್ತಮವಾದುವು. ಅವು ಅಮೃತದಿಂದಲೇ ಹುಟ್ಟಿವೆ. ಈ ಕವಚ-ಕುಂಡಲಗಳನ್ನು ಧರಿಸಿದವರೂ ಅವಧ್ಯರೇ ಆಗಿರುತ್ತಾರೆ. ನೀನು ಕವಚ-ಕುಂಡಲಗಳನ್ನು ದಾನ ಮಾಡುವುದರಿಂದ ನಿನ್ನ ಆಯುಷ್ಯವು ಕ್ಷೀಣಿಸುತ್ತದೆ. ನೀನು ಇಂದ್ರನ ಮಾತಿಗೆ ಮರುಳಾಗಿ ದಾನ ಮಾಡಬೇಡ.” ಸೂರ್ಯನ ಮಾತುಗಳನ್ನು ಕೇಳಿದ ಕರ್ಣನು ಈ ರೀತಿ ಹೇಳಿದನು : “ಭಗವಂತ! ನೀನ್ಯಾರು? ನನ್ನ ಬಗ್ಗೆ ಇಷ್ಟೊಂದು ವಾತ್ಸಲ್ಯ ತೋರುತ್ತಿರುವ ನೀನು ಯಾರು?” ಕರ್ಣನ ಮಾತಿಗೆ ಸೂರ್ಯನು ಈ ರೀತಿ ಹೇಳಿದನು : “ಮಗು! ನಾನು ಸೂರ್ಯದೇವ. ಸಹಸ್ರ ಕಿರಣಗಳಿಂದ ಭೂಮಿಯನ್ನು ಬೆಳಗುವ ಸೂರ್ಯ. ನೀನು ನನ್ನ ಮಾತನ್ನು ಕೇಳು. ನಾನು ಹೇಳಿದಂತೆ ನಡೆದುಕೋ. ನನ್ನ ಮಾತಿನಂತೆ ನಡೆದುಕೊಂಡರೆ ನಿನಗೆ ಶುಭವಾಗುತ್ತದೆ.” ಅದಕ್ಕೆ ಕರ್ಣನು ಯಾರಾದರೂ ಬಂದು ದಾನವನ್ನು ಕೇಳಿದರೆ ನಿರಾಕರಿಸಲಾರೆ. ಇಂದಿನವರೆಗೂ ಇದೇ ರೀತಿ ಪಾಲಿಸಿಕೊಂಡು ಬಂದಿರುವೆನು. ಬೇಡಿ ಬಂದವರಿಗೆ ಇಲ್ಲವೆನ್ನಲು ನನಗೆ ಸಾಧ್ಯವಿಲ್ಲ. ಪ್ರಾಣ ಬೇಕಾದರೂ ಕೊಟ್ಟು ಬಿಡುತ್ತೇನೆ. ನನಗೆ ಅಂಟಿಕೊಂಡು ಬಂದಿರುವ ದಾನಶೂರ ಕರ್ಣನೆಂಬ ಹೆಸರನ್ನು ಬಿಟ್ಟು ಬದುಕಲಾಗುವುದಿಲ್ಲ. ಇದಕ್ಕಿಂತ ಸೌಭಾಗ್ಯವಿದೆಯೇ? ಈ ಶರೀರವು ಎಂದಾದರೂ ಹುದುರಿ ಹೋಗಲೇಬೇಕಲ್ಲವೇ? ಆದರೆ ಕೀರ್ತಿ ಎಂದೆಂದಿಗೂ ಉಳಿಯುತ್ತದೆ. ಕೀರ್ತಿವಂತನಿಗೆ ಉತ್ತಮ ಲೋಕಗಳು ಲಭಿಸುತ್ತವೆ. ನಾನು ಈ ಲೋಕದಲ್ಲಿಯೂ ಒಳ್ಳೆಯ ಹೆಸರನ್ನು ಗಳಿಸುತ್ತೇನೆ. ನನ್ನನ್ನು ದಾನ ಧರ್ಮದ ಕಾರ್ಯಗಳಿಂದ ಹಿಂತೆಗೆಯುವಂತೆ ಮಾಡಬೇಡ.”

ಕರ್ಣನು ನಿತ್ಯದ ಹಾಗೆ ಅಂದು ಮಧ್ಯಾಹ್ನದ ಸಮಯದಲ್ಲಿ ಸೂರ್ಯನನ್ನು ಸ್ತುತಿಸುತ್ತಾ ನದಿ ನೀರಿನಲ್ಲಿ ನಿಂತಿದ್ದನು. ಆಗ ಇಂದ್ರನು ಬ್ರಾಹ್ಮಣ ವೇಷದಲ್ಲಿ ಬಂದು ಹಿಂದಿನಿಂದ ‘ಭಿಕ್ಷಾಂದೇಹಿ’ ಎಂದು ಕರೆದನು. ಮಧ್ಯಾಹ್ನದ ಸಮಯದಲ್ಲಿ ಬ್ರಾಹ್ಮಣನು ಬಂದು ಏನೇ ದಾನ ಕೇಳಿದರೂ ಕರ್ಣನು ಇಲ್ಲವೆನ್ನದೆ ಕೊಟ್ಟು ಬಿಡುತ್ತಿದ್ದನು. ಇಂದ್ರನು ಅಂತಹ ಸಮಯವನ್ನೇ ಕಾಯುತ್ತಿದ್ದನು. ಈಗ ಇಂದ್ರನು ಬ್ರಾಹ್ಮಣ ವೇಷದಲ್ಲಿದ್ದಾನೆ. ಪ್ರತಿನಿತ್ಯ ಕರ್ಣನ ಬಳಿಗೆ ಬ್ರಾಹ್ಮಣರು ದಾನ ಕೇಳಿಕೊಂಡು ಬರುತ್ತಿದ್ದರು. ಬ್ರಾಹ್ಮಣ ವೇಷದಲ್ಲಿರುವ ಇಂದ್ರನನ್ನು ಕರ್ಣನು ಆದರದಿಂದ ಸ್ವಾಗತಿಸಿದನು. “ಮಹಾನುಭಾವ! ನಿನಗೆ ಏನು ಬೇಕು? ಧನವನ್ನು ಕೊಡಲೇ? ಹಸುಗಳನ್ನು ದಾನವಾಗಿ ನೀಡಲೇ? ನಿಮಗೆ ಭೂಮಿ ಬೇಕೇ? ನಿಮಗೆ ಏನು ಬೇಕು ಎಂಬುದನ್ನು ತಿಳಿಸಿದರೆ ನಾನು ಕೋಡುತ್ತೇನೆ.” ಆಗ ಬ್ರಾಹ್ಮಣ ವೇಷದಲ್ಲಿದ್ದ ಇಂದ್ರನು ಈ ರೀತಿ ಹೇಳಿದನು : “ಕರ್ಣ! ನನಗೆ ನೀನು ಹೇಳುವ ಯಾವ ವಸ್ತುವೂ ಬೇಡ. ನನಗೆ ನಿನ್ನ ಶರೀರದ ಜೊತೆಯೇ ಬಂದಿರುವ ಕವಚ-ಕುಂಡಲಗಳು ಬೇಕು. ನೀನು ದಾನವಾಗಿ ಕೊಡುವೆಯಾ?”

“ಕರ್ಣ! ನಿನ್ನ ಶರೀರದಿಂದ ಕವಚ-ಕುಂಡಲಗಳನ್ನು ಬೇರ್ಪಡಿಸಿದ ನಂತರ ಗಾಯಗಳು ಉಳಿಯುವುದಿಲ್ಲ. ನೀನು ಸೂರ್ಯದೇವನ ಹಾಗೆ ತೇಜಸ್ವಿಯಾಗಿರುವೆ. ನೀನು ಬಹಳ ಸತ್ಯವಂತ. ನಿನ್ನ ನಿಷ್ಠೆಯಿಂದ ನಿನಗೆ ಮಂಗಳವಾಗಲಿ. ನಿನಗೆ ದಾನಶೂರ ಎಂಬ ಕೀರ್ತಿ ಸದಾಕಾಲ ಉಳಿಯಲಿ.” ಇಂದ್ರನು ಕರ್ಣನಿಗೆ ಆಶೀರ್ವಾದ ಮಾಡಿದನು. ಕರ್ಣನು ಭಕ್ತಿಯಿಂದ ಇಂದ್ರನಿಗೆ ನಮಸ್ಕರಿಸಿದನು. ಪಾಂಡವರು ವನವಾಸ - ಅಜ್ಞಾತವಾಸಗಳನ್ನು ಮುಗಿಸಿದರು. ದುರ್ಯೋಧನನು ಕೊಟ್ಟ ಮಾತಿನ ಪ್ರಕಾರ ಪಾಂಡವರಿಗೆ ರಾಜ್ಯವನ್ನು ಕೊಡಲು ನಿರಾಕರಿಸಿದನು. ಆಗ ಯುದ್ಧ ಅನಿವಾರ್ಯವಾಯಿತು. ಕೊನೆಯ ಬಾರಿ ಪ್ರಯತ್ನ ಮಾಡಲು ಶ್ರೀಕೃಷ್ಣನು ರಾಯಭಾರಿಯಾಗಿ ದುರ್ಯೋಧನನ ಬಳಿಗೆ ಹೊರಟನು. ಕೌರವರು ಶ್ರೀಕೃಷ್ಣನ ಮಾತಿಗೆ ಸ್ವಲ್ಪವೂ ಬೆಲೆ ಕೊಡುವುದಿಲ್ಲ. ತುಂಬಿದ ಸಭೆಯಿಂದ ಶ್ರೀಕೃಷ್ಣನು ಹೊರಬರುವಾಗ ತನ್ನ ಜೊತೆ ಕರ್ಣನನ್ನು ಕರೆದುಕೊಂಡು ಬರುತ್ತಾನೆ. ರಥದಲ್ಲಿ ಕುಳ್ಳಿರಿಸಿಕೊಂಡು ಸ್ವಲ್ಪ ದೂರ ಕರೆದುಕೊಂಡು ಬಂದು ಕರ್ಣನಿಗೆ ಏಕಾಂತದಲ್ಲಿ ಒಂದು ಮಾತನ್ನು ಹೇಳುತ್ತಾನೆ. “ಕರ್ಣ! ನೀನು ತಿಳಿದುಕೊಂಡಿರುವಂತೆ ಅಥಿರಥ, ರಾಧೆಯ ಪುತ್ರನಲ್ಲ. ನೀನು ಕುಂತಿಯಲ್ಲಿ ಸೂರ್ಯನ ವರದಿಂದ ಜನಿಸಿರುವೆ. ಶಾಸ್ತ್ರಗಳ ಪ್ರಕಾರ ಹೇಳುವಂತೆ ನೀನು ಪಾಂಡವರಲ್ಲಿ ಹಿರಿಯನು. ನೀನು ಪಾಂಡವನೇ ಆಗುವೆ. ಪಾಂಡವರು ನಿನ್ನನ್ನು ಹಿರಿಯಣ್ಣ ಎಂದು ಒಪ್ಪಿಕೊಳ್ಳುತ್ತಾರೆ. ಹಸ್ತಿನಾವತಿಗೆ ನೀನೇ ರಾಜನಾಗುವೆ. ಧರ್ಮರಾಜನು ಬಹಳ ಸಂತೋಷದಿಂದ ನಿನಗೆ ನಮಸ್ಕರಿಸಿ ಪಟ್ಟಕಟ್ಟುತ್ತಾನೆ. ನಿನಗೆ ಪಾಂಡವರು ಸಿಂಹಾಸನವನ್ನು ಬಿಟ್ಟು ಕೊಡುತ್ತಾರೆ.

“ಮಾಧವ! ನೀನು ನನ್ನ ಬಗ್ಗೆ ಬಹಳ ಪ್ರೀತಿಯಿಂದ ಈ ಮಾತುಗಳನ್ನು ಹೇಳುತ್ತಿರುವೆ. ನಿನಗೆ ನನ್ನ ಕೃತಜ್ಞತೆ. ಕುಂತಿಯು ನನ್ನನ್ನು ನದಿಯಲ್ಲಿ ತೇಲಿಬಿಟ್ಟಳು. ಆದರೆ ರಾಧೆಯು ತನ್ನ ಹರಿಯುವ ನೀರಿನಿಂದ ತೆಗೆದುಕೊಂಡು ಬಂದು ಬಹಳ ಅಕ್ಕರೆಯಿಂದ ಸಾಕಿದಳು. ರಾಧೆಯು ನನ್ನನ್ನು ಬಾಲ್ಯದಲ್ಲಿ ಬಹಳ ಕಷ್ಟಪಟ್ಟು ಸಾಕಿದಳು. ನನಗೆ ಅನ್ನ-ಆಹಾರ ತಿನ್ನಿಸಿ, ಸ್ನಾನ ಮಾಡಿಸಿ ಬೆಳೆಸಿದಳು. ನನ್ನ ಸಾಕುತಂದೆ ಅಧಿರಥನು ಯಾವ ಕೊರತೆಯೂ ಇಲ್ಲದೆ ನನ್ನನ್ನು ಬೆಳೆಸಿದನು. ಈಗ ಅವರು ವೃದ್ಧರಾಗಿರುವರು. ಈಗ ನಾನು ಕುಂತಿಪುತ್ರ, ಪಾಂಡವರ ಸಹೋದರ ಎಂದು ಹೇಳಿ ಸಿಂಹಾಸನದಲ್ಲಿ ಕುಳಿತುಕೊಳ್ಳುವುದು ನ್ಯಾಯವೇ? ನನ್ನ ವೃದ್ಧ ತಂದೆ-ತಾಯಿಯರನ್ನು ನೋಡಿಕೊಳ್ಳುವವರು ಯಾರು? ನಾನು ಪಾಂಡವರ ಜೊತೆ ಹೊರಟು ಹೋಗುವುದರಿಂದ ಆ ವೃದ್ಧರ ಮನಸ್ಸಿಗೆ ನೋವಾಗುವುದಿಲ್ಲವೇ? ಹಾಗೆಯೇ ನಾನು ದುರ್ಯೋಧನನ ಜೊತೆ ಹದಿಮೂರು ವರ್ಷಗಳಿಂದ ಸ್ನೇಹ-ಸಂಬಂಧವನ್ನು ಬೆಳೆಸಿರುವೆ. ಅವನ ಅರಮನೆಯಲ್ಲಿ ಸುಖವಾಗಿದ್ದೇನೆ. ದುರ್ಯೋಧನನು ನನ್ನ ಮೇಲೆ, ನನ್ನ ಪರಾಕ್ರಮದ ಮೇಲೆ ಭರವಸೆಯಿಟ್ಟು ಪಾಂಡವರ ಜೊತೆ ಯುದ್ಧವನ್ನು ಸಾರಿದ್ದಾನೆ. ಇಂತಹ ಕ್ಲಿಷ್ಟ ಸಮಯದಲ್ಲಿ ನಾನು ಪಾಂಡವರ ಜೊತೆ ಬಂದುಬಿಟ್ಟರೆ ಜನ ನನ್ನ ಬಗ್ಗೆ ಎಂತಹ ಮಾತುಗಳನ್ನು ಆಡಬಲ್ಲರು. ನೀನೇ ಯೋಚಿಸು? ನನ್ನನ್ನು ಇಡೀ ಲೋಕವೇ ಹೀಯಾಳಿಸುತ್ತದೆ. ನಾನು ಸಾಕಿದ ತಂದೆ-ತಾಯಿಗಳನ್ನು, ರಾಜ್ಯ ಅಷ್ಟೈಶ್ವರ್ಯವನ್ನು ನೀಡಿದ ದುರ್ಯೋಧನನನ್ನು ಬಿಟ್ಟು ಬಂದು ಯಾವ ಸೌಭಾಗ್ಯವನ್ನು ಪಡೆಯಲಿ. ನಾನು ಆ ರೀತಿ ಮಾಡಿದರೆ ಶಾಶ್ವತವಾಗಿ ಅಪಕೀರ್ತಿ ಪಡೆಯಬೇಕಾಗುತ್ತದೆ. ಎಲ್ಲರೂ ಕೈಬಿಟ್ಟು ನನ್ನನ್ನು ಹೀಯಾಳಿಸಿದಾಗ ನನಗೆ ರಾಜ್ಯಾಧಿಕಾರವನ್ನು ವಹಿಸಿಕೊಟ್ಟವನು ದುರ್ಯೋಧನ. ಅಂತಹವನನ್ನು ಬಿಟ್ಟು ಬಂದು ಕೃತಘ್ನತಾದೋಷವನ್ನು ಹೊರಲಾರೆ ಎಂದು ವಿನಯಪೂರ್ವಕವಾಗಿ ಕೃಷ್ಣನ ಮಾತನ್ನು ತಿರಸ್ಕರಿಸಿದನು. ಶ್ರೀಕೃಷ್ಣನು ತನ್ನ ಉಪಾಯ ಫಲಿಸದಿದ್ದರಿಂದ, ಕುಂತಿಯನ್ನು ಸಂಧಾನಕ್ಕೋಸ್ಕರ ಕರ್ಣನಲ್ಲಿ ತಿಳಿಸಿದ. ಕುಂತಿಯು ಗಂಗಾನದಿಯ ತೀರದಲ್ಲಿ ಕರ್ಣನು ಸಿಕ್ಕೇ ಸಿಗುವನು ಎಂಬ ನಂಬಿಕೆಯಿಂದ ಹೊರಟಳು. ಕರ್ಣನು ಸೂರ್ಯನನ್ನು ಆರಾಧಿಸುತ್ತಾ ನಿಂತಿದ್ದನು. ಅವನು ತನ್ನೆರಡು ತೋಳುಗಳನ್ನು ಮೇಲತ್ತಿ ಕೈಮುಗಿದುಕೊಂಡು ಪೂರ್ವದಿಕ್ಕಿಗೆ ಮುಖ ಮಾಡಿ ನಿಂತು ಸೂರ್ಯನನ್ನು ಪ್ರಾರ್ಥನೆ ಮಾಡುತ್ತಿದ್ದನು. ಕರ್ಣನು ತನ್ನ ಪ್ರಾರ್ಥನೆಯನ್ನು ಮುಗಿಸುವವರೆಗೂ ಕುಂತಿಯು ಕಾಯುತ್ತಾ ನಿಂತಿದ್ದಳು. ಅದಾದನಂತರ ಕರ್ಣನು ಭಕ್ತಿಯಿಂದ ಕುಂತಿಗೆ ನಮಸ್ಕರಿಸಿದನು. “ದೇವಿ! ನಾನು ಅಧಿರಥ, ರಾಧೆಯ ಮಗ. ನಿನಗೆ ನನ್ನ ಪ್ರಣಾಮಗಳು. ನನ್ನಿಂದ ಏನಾಗಬೇಕು? ತಾವು ಇಲ್ಲಿಯವರೆಗೂ ಆಗಮಿಸಿದ ಕಾರಣವೇನು?” ಕರ್ಣನ ಮಾತುಗಳನ್ನು ಕೇಳಿ ಕುಂತಿಗೆ ಅತೀವÀ ದುಃಖವಾಯಿತು. “ಕರ್ಣ! ನೀನು ನನ್ನ ಮಗ. ನೀನು ಅಧಿರಥ, ರಾಧೆಯರ ಮಗನಲ್ಲ.

ನಾನು ಕನ್ಯೆಯಾಗಿರುವಾಗ ಸೂರ್ಯನ ವರದಿಂದ ನಿನ್ನನ್ನು ಪಡೆದನು. ಆಗ ನೀನು ನನ್ನಲ್ಲಿ ಜನಿಸಿದೆ. ನನ್ನ ಮಕ್ಕಳಲ್ಲಿ ನೀನು ಎಲ್ಲರಿಗಿಂತ ಹಿರಿಯನು. ಸ್ವಲ್ಪ ಸಮಯದ ನಂತರ ಕರ್ಣನು ಚೇತರಿಸಿಕೊಂಡನು. ಅವನು ದೃಢವಾದ ಸ್ವರದಲ್ಲಿ ಹೇಳಿದನು : ಅಮ್ಮ! ನೀನು ಹಿಂದೆ ಮಾಡಿದ ಒಂದು ಕಾರ್ಯದಿಂದ ಇಂದು ನಾನು ಸೂತಪುತ್ರನಾಗಿ ಬಾಳಬೇಕಾಗಿ ಬಂದಿದೆ. ನಾನು ಕ್ಷತ್ರಿಯನಾಗಿ ಜನಿಸಿದರೂ ಇಂದು ಕ್ಷತ್ರಿಯನಾಗಿ ಗುರುತಿಸಲ್ಪಡುತ್ತಿಲ್ಲ. ನೀನು ನನ್ನನ್ನು ಹುಟ್ಟಿದ ಕೂಡಲೇ ನದಿಯಲ್ಲಿ ಬಿಟ್ಟುಬಿಟ್ಟೆ. ಅಂದೇ ನನ್ನ ಕೀರ್ತಿ-ಯಶಸ್ಸುಗಳು ನಾಶವಾದವು. ನೀನು ನನ್ನನ್ನು ಯಾಕೆ ಪರಿತ್ಯಜಿಸಿದೆ? ನನಗೆ ಎಂತಹ ಸಮಯದಲ್ಲಿ ನಿನ್ನ ರಕ್ಷಣೆ ಬೇಕಾಗಿತ್ತೋ, ಅಂತಹ ಸಮಯದಲ್ಲಿ ನೀನು ನನ್ನನ್ನು ದೂರೀಕರಿಸಿದೆ. ನೀನು ನನಗೆ ದಯತೋರದೆ ನಿಷ್ಕರುಣಿಯಾಗಿ ವರ್ತಿಸಿದೆ. ನೀನು ತಾಯಿಯಂತೆ ನಡೆದುಕೊಳ್ಳಲೇ ಇಲ್ಲ. ನನಗೆ ಹಿತ ತೋರುವ ಯಾವ ಕೆಲಸವನ್ನು ನೀನು ಮಾಡಲಿಲ್ಲ. ಅಂತಹುದರಲ್ಲಿ ಈಗ ಬಂದು ‘ನಾನೇ ನಿನ್ನ ತಾಯಿ ಎಂದು ಯಾವ ಪುರುಷಾರ್ಥಕ್ಕಾಗಿ ಹೇಳುತ್ತಿರುವೆ.’ ನೀನು ನನ್ನನ್ನು ಅಂತಹ ಕಾರ್ಯಕ್ಕೆ ಪ್ರೇರೇಪಿಸಿದರೂ ನಾನು ನಿನ್ನ ಮಾತಿನಂತೆ ನಡೆಯಲಾರೆ. ದುರ್ಯೋಧನನು ನನಗೆ ಸ್ವಾಮಿ ಮಾತ್ರವಲ್ಲ. ಅವನು ನನ್ನ ಅಂತರಂಗದ ಮಿತ್ರ, ಆಪ್ತ. ಅವನನ್ನು ಒಂಟಿಯಾಗಿಸಿ ನಿನ್ನೊಂದಿಗೆ ಬರಲಾರೆ. ನೀನು ತಾಯಿಯಾಗಿ ನನ್ನ ಬಳಿಗೆ ಬಂದು ಕೇಳಿಕೊಳ್ಳುತ್ತಿರುವೆ. ನಿನ್ನನ್ನೂ ನಾನು ಬರಿಗೈಯಲ್ಲಿ ಕಳುಹಿಸಲಾರೆ. ನಾನು ಯುದ್ಧ ಮಾಡುವ ಸಮಯದಲ್ಲಿ ನಿನ್ನ ಮಕ್ಕಳಲ್ಲಿ ಅರ್ಜುನನ್ನು ಬಿಟ್ಟು ಯಾರೇ ಎದುರಾದರೂ ಕೊಲ್ಲುವುದಿಲ್ಲ. ಅವರನ್ನು ವಧಿಸುವ ಸಾಧ್ಯತೆ ನನಗೆ ಬಂದರೂ ಅವರನ್ನು ಬಿಟ್ಟು ಬಿಡುತ್ತೇನೆ. ಆದರೆ ಅರ್ಜುನನ ವಿಷಯದಲ್ಲಿ ಈ ಏನಾಯ್ತಿ ದೊರಕುವುದಿಲ್ಲ. ಒಂದು ವೇಳೆ ಯುದ್ಧದಲ್ಲಿ ಅರ್ಜುನನ ಕೈಯಲ್ಲಿ ನಾನು ಹತನಾದರೂ, ನನ್ನ ಕೈಯಲ್ಲಿ ಅರ್ಜುನನು ಹತನಾದರೂ ನಿನಗೆ ಐವರು ಮಕ್ಕಳು ಉಳಿದೇ ಇರುತ್ತಾರೆ. ನಿನ್ನ ಐದು ಜನ ಮಕ್ಕಳು ಪ್ರಪಂಚದಲ್ಲಿ ಉಳಿಯುತ್ತಾರೆ.” ಕರ್ಣನ ಮಾತುಗಳನ್ನು ಕೇಳಿ ಕುಂತಿಗೆ ದುಃಖ ತಡೆಯಲಾಗಲಿಲ್ಲ. ಅವಳು ಕರ್ಣನನ್ನು ಅಕ್ಕರೆಯಿಂದ ತಬ್ಬಿಕೊಂಡಳು.

ಕುಂತಿಗೆ ಬಹಳ ಸಂಕಟವಾಯಿತು. ಕರ್ಣನನ್ನು ತನ್ನ ಮಗನೆಂದು ಹೇಳಿಕೊಳ್ಳಲು ಆಗದಂತಹ ಪರಿಸ್ಥಿತಿ. ಕನ್ಯೆಯಾಗಿರುವಾಗ ಮಾಡಿದ ಒಂದು ಕುತೂಹಲದ ಕೆಲಸ ದುಃಖಕ್ಕೆ ಕಾರಣವಾಯಿತು. ಕರ್ಣನು ಮಾತೃಪ್ರೇಮದ ಮುಂದೆ ಸೋಲದೆ ತನ್ನ ಸ್ವಾಮಿನಿಷ್ಠೆಯನ್ನು ಮೆರೆದನು. ಅಂತಹ ಶ್ರೇಷ್ಠ ವ್ಯಕ್ತಿ ಕರ್ಣ! ಅವನ ಸ್ವಾಮಿನಿಷ್ಠೆ ಎಂದಿಗೂ ಬದಲಾಗಲಿಲ್ಲ. ಮುಂದೆ ಕುರುಕ್ಷೇತ್ರದ ಯುದ್ಧ ಪ್ರಾರಂಭವಾಯಿತು. ಪಾಂಡವರ ಕಡೆ ಶ್ರೀಕೃಷ್ಣನೇ ಸಾರಥಿಯಾಗಿ ನಿಂತನು. ಕೌರವರು, ಪಾಂಡವರು ಕುರುಕ್ಷೇತ್ರದಲ್ಲಿ ಪರಸ್ಪರ ಎದುರಿಸಲು ಸಜ್ಜಾಗಿ ನಿಂತರು. ಒಂದು ಪವಿತ್ರವಾದ ದಿನ ಕುರುಕ್ಷೇತ್ರದ ಯುದ್ಧ ಪ್ರಾರಂಭವಾಯಿತು. ಕೌರವರ ಸೈನ್ಯಕ್ಕೆ ಭೀಷ್ಮನು ಸೇನಾಪತಿಯಾಗಿದ್ದನು. ಹಾಗೆಯೇ ಪಾಂಡವರ ಸೈನ್ಯಕ್ಕೆ ಧೃಷ್ಟದ್ಯುಮ್ನನು ಸೇನಾಪತಿಯಾದನು. ಹತ್ತು ದಿನಗಳ ಕಾಲ ಕುರುಕ್ಷೇತ್ರದ ಯುದ್ಧ ನಡೆದು ಎರಡೂ ಕಡೆಯ ಸೈನ್ಯ ನಾಶವಾಯಿತು. ಯುದ್ಧ ಬಹಳ ಘೋರವಾಗಿ ನಡೆಯಿತು. ಭೀಷ್ಮನು ಶಿಖಂಡಿ - ಅರ್ಜುನರ ಬಾಣಗಳಿಂದ ತೀವ್ರವಾಗಿ ಗಾಯಗೊಂಡನು. ಭೀಷ್ಮನು ರಣರಂಗದಲ್ಲಿ ಬಾಣಗಳನ್ನೇ ಹಾಸಿಗೆಯನ್ನಾಗಿ ಪರಿವರ್ತಿಸಿಕೊಂಡು ಮಲಗಿದನು. ಭೀಷ್ಮರ ನಂತರ ದ್ರೋಣಾಚಾರ್ಯರು ಕೌರವರ ಕಡೆಯ ಸೇನಾಪತಿಯಾದರು. ದೃಷ್ಟದ್ಯುಮ್ನನಿಂದ ದ್ರೋಣರು ಮೃತರಾದರು. ಕೌರವರ ಬೆನ್ನೆಲುಬು ನಾಶವಾಗಿತ್ತು. ದ್ರೋಣರ ಅವಸಾನದ ಸುದ್ದಿ ಕೇಳಿ ದುರ್ಯೋಧನನು ಬಹಳವಾಗಿ ದುಃಖಿಸಿದರು. ಅವರ ಮೃತ ಶರೀರದ ಮೇಲೆ ಬಿದ್ದು ಪ್ರಲಾಪಿಸಿದನು. ಆಚಾರ್ಯರ ಮರಣ ಕೌರವೇಶ್ವರನನ್ನು ಕಂಗೆಡಿಸಿತು. “ಗುರುಗಳೇ! ನೀವು ಯಾವಾಗಲೂ ನನ್ನನ್ನು ಹಳಿಯುತ್ತಾ ಧರ್ಮರಾಜನನ್ನು ಸತ್ಯಸಂಧನೆಂದು ಹೊಗಳುತ್ತಿದ್ದೀರಿ. ಈಗಲಾದರೂ ನಿಮಗೆ ತಿಳಿಯಿತೇ? ಅವನು ಅಸತ್ಯವನ್ನು ನುಡಿಯಬಲ್ಲ. ಅವನ ಒಂದು ಅಸತ್ಯದ ಮಾತಿನಿಂದ ನಿಮಗೆ ಮರಣ ಸಂಭವಿಸಿತು. ಎಂತಹ ಅನ್ಯಾಯ ನಡೆದು ಹೋಯಿತು.” ದುರ್ಯೋಧನನಿಗೆ ಯುದ್ಧದ ಮುಂದಿನ ಕಾರ್ಯಾಚರಣೆಯ ಬಗ್ಗೆ ಚಿಂತೆಯಾಯಿತು. ಈಗ ಕರ್ಣನನ್ನು ಯುದ್ಧಭೂಮಿಗೆ ಕಳುಹಿಸುವ ಸಮಯ ಸನ್ನಿಹಿತವಾಗಿದೆ ಎಂದು ದುರ್ಯೋಧನನಿಗೆ ಅರಿವಾಯಿತು. ಅವನು ಶಲ್ಯನನ್ನು ಕರ್ಣನ ಸಾರಥಿಯಾಗುವಂತೆ ಪ್ರಾರ್ಥಿಸಿದನು. ಕರ್ಣನ ರಥಕ್ಕೆ ಸಾರಥಿಯಾಗುವಂತೆ ಶಲ್ಯನನ್ನು ಒಪ್ಪಿಸಿದನು. ಕರ್ಣನು ಯುದ್ಧಭೂಮಿಗೆ ಆಗಮಿಸಿದನು. ಪಾಂಡವರು ಘೋರವಾಗಿ ಕಾದಾಡುತ್ತಿದ್ದರು. ಕರ್ಣನು ಇಂದ್ರನ ಬಳಿಯಿಂದ ಪಡೆದಿದ್ದ ಶಕ್ತ್ಯಾಯುಧವನ್ನು ಅನಿವಾರ್ಯವಾಗಿ ಭೀಮನ ಪುತ್ರನ ಮೇಲೇ ಪ್ರಯೋಗಿಸಬೇಕಾಯಿತು. ಅವನು ಶಕ್ತ್ಯಾಯುಧವನ್ನು ಅರ್ಜುನನಿಗಾಗಿ ಮೀಸಲಾಗಿಟ್ಟಿದ್ದನು. ಭೀಮನ ಮಗ ಘಟೋತ್ಕಚನ ಮೇಲೆ ಪ್ರಯೋಗಿಸಲಾಯಿತು. ಅವನು ಘೋರಪರಾಕ್ರಮಿ. ಅವನನ್ನು ವಧಿಸಲು ಕರ್ಣನು ಶಕ್ತ್ಯಾಯುಧವನ್ನು ಬಳಸಿದನು. ಇದರಿಂದ ಭೀಮನ ಪುತ್ರನು ಸಾವನ್ನಪ್ಪಿದನು. ಕರ್ಣನು ಪರಶುರಾಮರಿಂದ ಅನೇಕ ಅಸ್ತ್ರಗಳ ವರಗಳನ್ನು ಪಡೆದಿದ್ದನು. ಅವುಗಳ ನೆರವಿನಿಂದ ಪಾಂಡವರ ಸೈನ್ಯವನ್ನು ನಾಶಗೊಳಿಸಿದನು. ಭಾರ್ಗವಾಸ್ತ್ರ- ಅಥರ್ವಣಾಸ್ತ್ರಗಳನ್ನು ಉಪಯೋಗಿಸಿದುದರಿಂದ ಪಾಂಡವರ ಸೈನ್ಯ ಕ್ಷೀಣಿಸಿತು.

ಕರ್ಣನ ಅವಸಾನ ಕಾಲ ಸಮೀಪಿಸಿತು. ಕರ್ಣ-ಅರ್ಜುನರ ನಡುವೆ ಯುದ್ಧ ಮುಂದುವರೆಯಿತು. ಕರ್ಣನು ತನ್ನ ಬತ್ತಳಿಕೆಯಲ್ಲಿ ಉಳಿಸಿಕೊಂಡಿದ್ದ ಅತ್ಯುಗ್ರಹ ಬಾಣಗಳ ಪ್ರಯೋಗ ಮಾಡತೊಡಗಿದನು. ಆಗ ಅರ್ಜುನನ ರಥ ಹತ್ತಾಳು ಹಿಂದಕ್ಕೆ ಸರಿಯಿತು. ಶ್ರೀಕೃಷ್ಣನು ಕರ್ಣನ ಪರಾಕ್ರಮವನ್ನು ಮೆಚ್ಚಿದನು. ಕೃಷ್ಣನ ಹೊಗಳಿಕೆಯ ಮಾತುಗಳು ಅರ್ಜುನನಿಗೆ ಹಿಡಿಸಲಿಲ್ಲ. “ಭಗವಂತ! ಇದೇನು? ನಾನು ಅವನ ರಥವನ್ನು ನೂರಾಳು ಹಿಂದಕ್ಕೆ ದೂಡಿರುವೆ? ಅವನು ಕೇವಲ ನನ್ನ ರಥವನ್ನು ಹತ್ತಾಳು ಮಾತ್ರ ಹಿಂದಕ್ಕೆ ಸರಿಯುವಂತೆ ಮಾಡಿದ್ದಾನೆ. ಆದರೂ ಅವನನ್ನೇ ಹೊಗಳುತ್ತಿರುವೆಯಲ್ಲ.” “ಅರ್ಜುನ! ಬುದ್ಧಿಹೀನನಂತೆ ಮಾತನಾಡಬೇಡ. ನೀನು ಕುಳಿತಿರುವ ರಥ ದೇವೇಂದ್ರನ ಕೊಡುಗೆ. ಆ ರಥವು ಭೂಮಿಯ ಭಾರಕ್ಕೆ ಸಮಾನವಾದುದು. ರಥಕ್ಕೆ ಹೂಡಿರುವ ಅಶ್ವಗಳು ಚತುರ್ವೇದ ಸ್ವರೂಪಗಳು. ನಿನ್ನ ರಥದ ಮೇಲೆ ಮಾರುತಿಯ ಧ್ವಜವಿದೆ. ಆ ಮಾರುತಿಯು ಪರ್ವತಗಳನ್ನೇ ಕಿತ್ತು ತಂದಿರುವನು. ಅಂತಹ ವ್ಯಕ್ತಿಯ ಆಶೀರ್ವಾದವಿದೆ. ಹದಿನಾಲ್ಕು ಲೋಕಗಳನ್ನು ತನ್ನ ಹೊಟ್ಟೆಯಲ್ಲಿ ಹೊತ್ತಿರುವ ಸಾಕ್ಷಾತ್ ವಿಷ್ಣುವು ನಿನ್ನ ರಥಕ್ಕೆ ಸಾರಥಿಯಾಗಿರುವನು. ಇಂತಹ ರಥವನ್ನು ಕರ್ಣನು ಹತ್ತಾಳು ದೂರ ಹಿಂದಕ್ಕೆ ದೂಡಿರುವುದು ಹೆಮ್ಮೆಯ ಸಂಗತಿ ಅಲ್ಲವೇ?

ಯುದ್ಧವು ಬಹಳ ಕಾಲ ಮುಂದುವರೆಯಿತು. ಇಬ್ಬರಲ್ಲಿ ಯಾರು ಸೋಲುವಂತೆ ಕಾಣಲಿಲ್ಲ. ಕರ್ಣನು ತನ್ನ ಬಳಿ ಇದ್ದ ಸರ್ಪಾಸ್ತ್ರವನ್ನು ಅರ್ಜುನನ ಮೇಲೆ ಪ್ರಯೋಗ ಮಾಡಿದನು. ಅ ಸರ್ಪಾಸ್ತ್ರಕ್ಕೆ ಖಾಂಡವ ವನದಲ್ಲಿ ನಡೆದ ಘಟನೆಯಿಂದ ಅರ್ಜುನನ ಮೇಲೆ ಜಿದ್ದು ಇತ್ತು. ಕೃಷ್ಣನು ತನ್ನ ದಿವ್ಯ ದೃಷ್ಟಿಯಿಂದ ಆಗಬಹುದಾದ ಅನಾಹುತವನ್ನು ತಪ್ಪಿಸಿದನು. ಬಾಣವು ಅರ್ಜುನನ ಕುತ್ತಿಗೆಯನ್ನು ಛೇದಿಸಿಕೊಂಡು ಹೋಗುತ್ತಿತ್ತು. ಆಗ ಶ್ರೀಕೃಷ್ಣನು ರಥವನ್ನು ಭೂಮಿಯಿಂದ ಒಂದು ಮೊಳ ಕೆಳಗೆ ಇಳಿಸಿದನು. ಶ್ರೀಕೃಷ್ಣನ ಚಾತುರ್ಯದಿಂದ ಅರ್ಜುನನ ಪ್ರಾಣ ಉಳಿಯಿತು. ಅರ್ಜುನನ ಕುತ್ತಿಗೆಗೆ ತಾಕಬೇಕಾಗಿದ್ದ ಬಾಣ ಅವನ ಕಿರೀಟವನ್ನು ತಾಕಿಕೊಂಡು ಹೋಯಿತು. ಅರ್ಜುನನ ಕಿರೀಟ ಕೆಳಗೆ ಬಿದ್ದಿತು. ಆಗ ಕರ್ಣನನ್ನು ಕುರಿತು ಸರ್ಪಾಸ್ತ್ರವು ಈ ರೀತಿ ಹೇಳಿತು : “ಕರ್ಣ! ನೀನು ಮತ್ತೊಂದು ಬಾರಿ ನನ್ನನ್ನು ಪ್ರಯೋಗ ಮಾಡು. ಈ ಬಾರಿ ನಾನು ಗುರಿ ತಪ್ಪುವುದಿಲ್ಲ. ಖಂಡಿತವಾಗಿ ಪಾರ್ಥನ ಪ್ರಾಣಹರಣ ಮಾಡುತ್ತೇನೆ.” ಆದರೆ ಸರ್ಪಾಸ್ತ್ರದ ಮಾತುಗಳಿಗೆ ಕರ್ಣನು ಒಪ್ಪಿಗೆ ಸೂಚಿಸಲಿಲ್ಲ. “ಸರ್ಪಾಸ್ತ್ರವೇ! ನಾನು ಒಮ್ಮೆ ತೊಟ್ಟ ಬಾಣವನ್ನು ಮತ್ತೊಮ್ಮೆ ತೊಡಲಾರೆ ಎಂದು ಮಾತುಕೊಟ್ಟಿರುವೆ. ನಾನು ನನ್ನ ಮಾತನ್ನು ತಪ್ಪಲಾರೆ.” ಸರ್ಪಾಸ್ತ್ರವು ವಿಧಿ ಇಲ್ಲದೆ ಸುಮ್ಮನಾಗಬೇಕಾಯಿತು. ಕರ್ಣನಿಂದ ಸರ್ಪಾಸ್ತ್ರವು ಬಬ್ರುವಾಹನನ ಬತ್ತಳಿಕೆಯನ್ನು ಸೇರಿಕೊಂಡಿತು. ಆಗ ಅರ್ಜುನನಿಗೆ ಈ ರೀತಿ ಹೇಳಿತು : “ಅರ್ಜುನ! ನನ್ನ ಸೇಡು ತೀರಿತೆಂದು ಭಾವಿಸಬೇಡ. ನಾನು ಮತ್ತೊಮ್ಮೆ ನಿನ್ನನ್ನು ಕೊಲ್ಲಲು ಯತ್ನಿಸುವೆ. ಈ ಬಾರಿ ನೀನು ಶ್ರೀಕೃಷ್ಣನ ಕೃಪೆಯಿಂದ ನನ್ನಿಂದ ತಪ್ಪಿಸಿಕೊಂಡಿರುವೆ.”

ಕರ್ಣ-ಸರ್ಪಾಸ್ತ್ರದ ನಡುವಿನ ಸಂಭಾಷಣೆಯನ್ನು ಕೇಳಿದ ಶಲ್ಯನಿಗೆ ಕೋಪ ಬಂದಿತು. ಶಲ್ಯನು ಕರ್ಣನ ರಥದ ಸಾರಥಿಯಾಗಿದ್ದನು. ದುರ್ಯೋಧನನು ಕರ್ಣನಿಗೆ ತುಂಬಾ ಪ್ರಾಮುಖ್ಯತೆ ನೀಡುತ್ತಾನೆ ಎಂಬ ಕೋಪ ಶಲ್ಯನ ಮನಸ್ಸನ್ನು ಕುದಿಯುವಂತೆ ಮಾಡಿತ್ತು. “ಅವಿವೇಕಿ ಕರ್ಣ! ನೀನು ಮಾಡುತ್ತಿರುವ ಕೆಲಸ ಸರಿಯೇ? ನಿನ್ನನ್ನು ನಂಬಿ ದುರ್ಯೋಧನನು ಕೆಟ್ಟನು. ಸೂತಪುತ್ರನಾದ ನಿನಗೆ ಅಸ್ತ್ರಗಳ ಮಹತ್ವ ಹೇಗೆ ತಿಳಿಯುತ್ತದೆ. ನಿನ್ನಂತಹವನಿಗೆ ಸಾರಥಿಯಾಗಿ ತಪ್ಪು ಮಾಡಿದೆ. ನಿನ್ನ ರಥಕ್ಕೆ ಸಾರಥಿಯಾಗುವುದಕ್ಕಿಂತ ತಲೆ ಮರೆಸಿಕೊಂಡು ಹೋಗುವುದು ಒಳ್ಳೆಯದು.” ಶಲ್ಯನು ರಥದಿಂದ ಇಳಿದು ಯುದ್ಧಭೂಮಿಯಿಂದ ಹೊರಟು ಹೋದನು. ಕರ್ಣನು ಧೈರ್ಯ ಕಳೆದುಕೊಳ್ಳಲಿಲ್ಲ. ತಾನೇ ರಥವನ್ನು ಓಡಿಸುತ್ತಾ ಯುದ್ಧ ಮಾಡುತ್ತಿದ್ದನು. ಯುದ್ಧಭೂಮಿಯಲ್ಲಿ ರಥವನ್ನು ಓಡಿಸುತ್ತಾ ಬರುತ್ತಿರುವಾಗ ರಥದ ಚಕ್ರ ರಕ್ತದ ಮಡುವಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಅಲ್ಲಿಗೆ ಕೃಷ್ಣನು ರಥ ಓಡಿಸುತ್ತಾ ಬಂದನು. ಕೃಷ್ಣನು ಅರ್ಜುನನನ್ನು ಕುರಿತು ಈ ರೀತಿ ಹೇಳಿದನು : “ಅರ್ಜುನ! ನಿನ್ನ ಬತ್ತಳಿಕೆಯಿಂದ ಬಾಣವನ್ನು ತೆಗಿ. ಕರ್ಣನನ್ನು ಕೊಲ್ಲಲು ಸರಿಯಾದ ಸಮಯ ಒದಗಿ ಬಂದಿದೆ. ಕರ್ಣನು ಚಕ್ರವನ್ನು ಮೇಲಕ್ಕೆತ್ತುವ ಮೊದಲೇ ಕರ್ಣನನ್ನು ಸಂಹಾರ ಮಾಡು.”

ಅರ್ಜುನನಿಗೆ ಕೃಷ್ಣನ ಮಾತುಗಳು ಸರಿಯೆಂದು ತೋರಲಿಲ್ಲ. ಕರ್ಣನು ನಿಶಸ್ತ್ರಧಾರಿಯಾಗಿರುವನು. ಅಂತಹವನ ಮೇಲೆ ಬಾಣ ಹೂಡುವುದು ತಪ್ಪಲ್ಲವೇ? ರಣರಂಗದಲ್ಲಿ ಯಾರಿಗೆ ಯಾರೂ ಸ್ನೇಹಿತರಲ್ಲ. ನಿನಗೆ ನಾನು ಪ್ರಾರಂಭದಲ್ಲಿಯೇ ಈ ಮಾತನ್ನು ತಿಳಿಸಿರುವೆ. ನೀನು ಬಾಣವನ್ನು ತೊಟ್ಟು ಯುದ್ಧವನ್ನು ಮುಂದುವರೆಸು.” ಆಗ ಕರ್ಣನು ಶ್ರೀಕೃಷ್ಣ ನೀನೇ ಅಧರ್ಮದ ಯುದ್ಧವನ್ನು ಮಾಡಬೇಕೆಂದು ಅರ್ಜುನನಿಗೆ ಹೇಳುತ್ತೀಯಲ್ಲಾ! “ಕರ್ಣ! ನಿನಗೆ ಈಗ ಧರ್ಮ ನೆನಪಾಯಿತೇ? ಹಿಂದೆ ನೀವೆಲ್ಲರೂ ಸೇರಿಕೊಂಡು ಪಾಂಡವರಿಗೆ ಅನ್ಯಾಯ ಮಾಡಲಿಲ್ಲವೇ? ಆಗ ಧರ್ಮದ ನೆನಪು ಬರಲಿಲ್ಲವೇ? ದುರ್ಯೋಧನ, ದುಶ್ಯಾಸನ, ಶಕುನಿ ಮತ್ತು ನೀನು ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ಎಳೆದುಕೊಂಡು ಬಂದು ಅವಮಾನ ಮಾಡಿದಿರಿ. ಧರ್ಮರಾಯನನ್ನು ಮೋಸದ ಪಗಡೆಯಾಟದಲ್ಲಿ ಸೋಲಿಸಿ ವನವಾಸಕ್ಕೆ ಕಳುಹಿಸುವಾಗ ನಿನಗೆ ಧರ್ಮಪ್ರಜ್ಞೆ ಕಾಡಲಿಲ್ಲವೇ? ವನವಾಸ ಮುಗಿದ ನಂತರ ಬಂದು ರಾಜ್ಯ ಕೇಳಿದರೂ ನೀವು ಧರ್ಮವಾಗಿ ಪಾಂಡವರಿಗೆ ಬರಬೇಕಾದ ರಾಜ್ಯವನ್ನು ಕೊಡಲು ಒಪ್ಪಲಿಲ್ಲ. ಹಿಂದೆ ನೀವು ಮಾಡಿದ ಪಾಪವನ್ನು ಇಂದು ಉಣ್ಣಬೇಕಾಗಿದೆ.”

ಕರ್ಣನು ರಥಚಕ್ರವನ್ನೆತ್ತಲು ಪ್ರಯತ್ನಿಸಿದನು. ಶ್ರೀಕೃಷ್ಣನು ಅರ್ಜುನನನ್ನು ಹುರಿದುಂಬಿಸಿದನು. ಆಗ ಅರ್ಜುನನು ಅಂಜಲಿಕ ಎಂಬ ಬಾಣವನ್ನು ಮನದಲ್ಲೇ ಪ್ರಾರ್ಥಿಸಿಕೊಂಡು ಕರ್ಣನ ಮೇಲೆ ಪ್ರಯೋಗ ಮಾಡಿದನು. ಅರ್ಜುನನು ಪ್ರಯೋಗಿಸಿದ ಬಾಣವು ಕರ್ಣನ ಶಿರಸ್ಸನ್ನು ಛೇಧಿಸಿತು. ಅವನ ಶರೀರದಿಂದ ಹೊರಟ ತೇಜಸ್ಸು ಆಕಾಶಮಾರ್ಗವಾಗಿ ಹೋಗಿ ಸೂರ್ಯಮಂಡಲದಲ್ಲಿ ಲೀನವಾಯಿತು.