ಮಹಾಭಾರತ ಕಥೆಗಳು

ಭೀಷ್ಮ ಬಹಳ ಹಿಂದೆ ಶಂತನು ಎಂಬ ರಾಜನು ಹಸ್ತಿನಾಪುರವನ್ನು ಆಳುತ್ತಿದ್ದನು. ಅವನು ಪ್ರಜೆಗಳನ್ನು ದೇವರಂತೆ ನೋಡಿಕೊಳ್ಳುತ್ತಾ ಇದ್ದನು. ಅವನ ರಾಜ್ಯವು ಸುಭೀಕ್ಷವಾಗಿತ್ತು. ಒಂದು ದಿವಸ ಶಂತನು ಮಹಾರಾಜ ಬೇಟೆಗೆಂದು ಕಾಡಿಗೆ ಹೋದಾಗ ತನ್ನ ಮಂತ್ರಿ ಹಾಗೂ ಸೈನ್ಯದಿಂದ ಬೇರೆಯಾದಾಗ, ದಾರಿಯನ್ನು ಹುಡುಕುತ್ತಾ ಹುಡುಕುತ್ತಾ ಬರುತ್ತಿದ್ದಾಗ, ಅಲ್ಲಿ ಅಪ್ರತಿಮ ಸುಂದರವಾದ ಹುಡುಗಿಯನ್ನು ಕಂಡನು. ಅವಳನ್ನು ನೋಡಿ ಮೋಹಗೊಂಡು, ನನ್ನನ್ನು ಮದುವೆಯಾಗುತ್ತೀಯಾ ಎಂದಾಗ ಆ ದೇವಕನ್ಯೆಯು ಒಂದು ಷರತ್ತನ್ನು ಇಟ್ಟು, ನಾನು ಯಾರು? ಎಲ್ಲಿಂದ ಬಂದಿದ್ದೇನೆ. ಹಾಗೂ ನನ್ನ ಎಲ್ಲಾ ಚಟುವಟಿಕೆಗಳನ್ನು ಪ್ರಶ್ನಿಸಬಾರದು. ಪ್ರಶ್ನಿಸಿದ ತಕ್ಷಣವೇ ನಿನ್ನನ್ನು ಬಿಟ್ಟುಹೋಗುತ್ತೇನೆ ಎಂದು ಷರತ್ತನ್ನು ಇಟ್ಟಾಗ ಅದಕ್ಕೆ ಶಂತನು ರಾಜ ಒಪ್ಪಿಗೆ ಸೂಚಿಸಿ ಇಬ್ಬರೂ ಗಾಂಧರ್ವ ವಿಧಿಯಿಂದ ಮದುವೆಯಾಗಿ ಸಂತೋಷದಿಂದ ಅರಮನೆಯಲ್ಲಿ ಇದ್ದರು.ಹೀಗೆ ಕಾಲಕ್ರಮೇಣ ಸುಂದರಿಯು ಬಸುರಿಯಾದಾಗ ರಾಜನ ಸಂತೋಷಕ್ಕೆ ಪಾರವೇ ಇರಲಿಲ್ಲ. ತನ್ನ ರಾಜ್ಯದ ಎಲ್ಲಾ ಪ್ರಜೆಗಳಿಗೆ ಅನ್ನದಾನವನ್ನು ಮಾಡಿ ಇಡೀ ರಾಜ್ಯವೇ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಮಗು ಹುಟ್ಟುವ ಸಂದರ್ಭ ಬಂದಾಗ ರಾಜನ ಸಂತೋಷ ಹೇಳಲಾರದಿತ್ತು. ಆದರೆ ಮಗು ಹುಟ್ಟಿದ ತಕ್ಷಣ ಅವನ ಹೆಂಡತಿ ಅದನ್ನು ತೆಗೆದುಕೊಂಡು ಪಕ್ಕದಲ್ಲಿರುವ ಗಂಗಾನದಿಗೆ ಎಸೆದಳು. ರಾಜನಿಗೆ ತುಂಬಾ ಸಿಟ್ಟು ಬಂದರೂ ಅದನ್ನು ತಡೆದುಕೊಂಡ. ಯಾಕೆಂದರೆ ಅವಳು ಹಾಕಿದ್ದ ಷರತ್ತು ನೆನಪಿಗೆ ಬಂದಿತು. ಹೀಗೆಯೇ ಏಳು ಮಕ್ಕಳನ್ನು ಒಂದಾದರೊಂದಂತೆ ನದಿಗೆ ಬಿಸಾಕಿದಳು. ಶಂತನು ರಾಜನಿಗೆ ತುಂಬಾ ದುಃಖವಾಯಿತು. ಅವನು ಈ ವಿಷಯವನ್ನು ಅವಳ ಹತ್ತಿರ ಚರ್ಚಿಸಲಾಗದೆ ಮನಸ್ಸಿನಲ್ಲೇ ತುಂಬಾ ಕೊರಗಿ ಹೋದನು.

ಎಂಟನೆಯ ಮಗು ಹುಟ್ಟಿತು ಎಂದು ವಿಷಯ ತಿಳಿದು ರಾಜನು ಇದನ್ನಾದರೂ ಬದುಕಿಸಬೇಕು ಎಂದು, ‘ಏ ದುಷ್ಟೆ ಹೆಂಗಸೆ ನಿನಗೆ ಸ್ವಲ್ಪವೂ ಕನಿಕರವಿಲ್ಲವಲ್ಲ. ಹೀಗೆ ಎಳೆ ಹಸುಗೂಸನ್ನು ಕೊಂದರೆ ನಿನಗೆ ಏನು ತೃಪ್ತಿ ಸಿಕ್ಕುತ್ತದೆ. ನೀನು ಯಾರು? ಹೀಗೇಕೆ ಮಗುವನ್ನು ಕೊಲ್ಲುತ್ತಿದ್ದೀಯಾ? ಎಂದು ಪ್ರಶ್ನಿಸಿದಾಗ, ಆಗ ಆ ಸುಂದರಿ ತನ್ನ ವೃತ್ತಾಂತವನ್ನು ಹೇಳುತ್ತಾಳೆ. ಹೇ ರಾಜನ್ ನಾನು ಗಂಗಾದೇವಿ. ಈ ಏಳು ಜನ ಮಕ್ಕಳಿಗೂ ಶಾಪವಿದ್ದುದರಿಂದ ನಾನು ಶಾಪ ವಿಮೋಚನೆಗಾಗಿ ಅವರನ್ನು ನದಿಗೆ ಎಸೆಯುತ್ತಿದ್ದೆ. ಆದರೆ ಈ ಎಂಟನೆಯ ಮಗುವು ನಮ್ಮದಾಗಿ ಸುಖವಾಗಿ ನಾವಿಬ್ಬರೂ ಇರಬಹುದಾಗಿತ್ತು. ಆದರೆ ನೀನು ನನ್ನ ವಚನವನ್ನು ಮುರಿದಿದ್ದಕ್ಕಾಗಿ ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ಮಗುವಿನ ಸಮೇತ ಅದೃಶ್ಯಳಾದಳು. ರಾಜನು ತನ್ನ ಕೃತ್ಯಗಳಾಗಿ ಮರುಕಪಟ್ಟು ಮತ್ತೆ ಒಬ್ಬಂಟಿಯಾದನು.

ಸ್ವಲ್ಪ ವರ್ಷದ ನಂತರ, ರಾಜ ಶಂತನು ಬೇಟೆಗೆಂದು ಹೋದಾಗ ಅಲ್ಲೊಬ್ಬ ಸುಂದರವಾದ ಬಾಲಕ ತನ್ನ ಬಾಣದಿಂದ ನದಿಯ ನೀರನ್ನೇ ವಿರುದ್ಧ ದಿಕ್ಕಿಗೆ ಹರಿಯುವಂತೆ ಮಾಡುವುದನ್ನು ನೋಡಿ ರಾಜನಿಗೆ ತುಂಬಾ ಆಶ್ಚರ್ಯವಾಯಿತು. ಯಾರು ಈ ಬಾಲಕ ಎಂದು ಯೋಚಿಸುವಷ್ಟರಲ್ಲಿ ಗಂಗೆಯು ಪ್ರತ್ಯಕ್ಷಳಾಗಿ ರಾಜನ್ ಈ ಬಾಲಕನೇ ನಮ್ಮ ಎಂಟನೆಯ ಮಗು ಗಾಂಗೇಯ ಅಥವ ದೇವವ್ರತ ಇವನನ್ನು ನಿನ್ನ ಸುಪರ್ದಿಗೆ ಬಿಟ್ಟು ಹೋಗುತ್ತಿದ್ದೇನೆ ಎಂದು ಹೇಳಿ ಅದೃಶ್ಯಳಾದಳು. ರಾಜನು ತನ್ನ ಮಗನನ್ನು ರಾಜ್ಯಕ್ಕೆ ಕರೆದುಕೊಂಡು ಬಂದು ಒಳ್ಳೆಯ ಗುರುಗಳ ಹತ್ತಿರ ವಿದ್ಯಾಭ್ಯಾಸ ಹಾಗೂ ಶಸ್ತ್ರ ಪಾರಂಗತ್ಯವನ್ನು ಕಲಿಸಿದನು. ದೇವವ್ರತನು ದೊಡ್ಡವನಾಗುತ್ತಾ ಸಕಲ ವಿದ್ಯಾ ಪಾರಂಗತನಾಗಿ ಮಹಾಶೂರನಾಗಿ ರಾಜ್ಯದ ಎಲ್ಲಾ ಪ್ರಜೆಗಳ ಜನಾನುರಾಗಿಯಾಗಿ ಬೆಳೆದನು.

ಹೀಗೆಯೇ ಶಂತನು ಚಕ್ರವರ್ತಿ ತನ್ನ ಮುದ್ದು ಮಗನನ್ನು ರಾಜ್ಯದ ಉತ್ತರಾಧಿಕಾರಿಯಾಗಿ ನೇಮಿಸಿ, ಸಂತೋಷದಿಂದ ರಾಜ್ಯವನ್ನು ಆಳುತ್ತಿದ್ದನು. ಹೀಗೆ ಒಂದು ದಿವಸ ಬೇಟೆಗೆ ಹೋದಾಗ ನದಿಯ ತಟದಲ್ಲಿ ಒಬ್ಬಳು ಸುಂದರವಾದ ಹುಡುಗಿ ನಿಂತಿದ್ದಳು. ಯಾರೆಂದು ವಿಚಾರಿಸಲಾಗಿ ಅವಳು ನನ್ನ ಹೆಸರು ಮತ್ಸಗಂಧಿ ಅಥವಾ ಯೋಜನಗಂಧಿ ನನ್ನ ತಂದೆ ಮೀನುಗಾರ ಎಂದು ಪರಿಚಯಿಸಿದಳು. ರಾಜನಿಗೆ ಅವಳಲ್ಲಿ ಸೌಂದರ್ಯವನ್ನು ಕಂಡು ಮೋಹಿತನಾಗಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಾಗ ಅವಳು ತನ್ನ ತಂದೆ ಹತ್ತಿರ ಕರೆದುಕೊಂಡು ಹೋದಳು. ಇವರ ಮದುವೆಗೆ ಅವಳ ತಂದೆಯು ಒಪ್ಪಿಗೆ ಕೊಟ್ಟು ಒಂದು ಷರತ್ತನ್ನು ಹಾಕಿದ. ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟುವ ಮಗನನ್ನೇ ರಾಜ್ಯದ ಉತ್ತರಾಧಿಕಾರಿ ಮಾಡಬೇಕೆಂದು ಇದನ್ನು ಕೇಳಿ ರಾಜನಿಗೆ ಬಹಳ ದುಃಖವಾಗಿ ಭಾರವಾದ ಹೃದಯದಿಂದ ರಾಜ್ಯಕ್ಕೆ ವಾಪಾಸಾಗಿ, ರಾಜ್ಯ ಕಾರ್ಯಗಳಲ್ಲಿ ನಿರಾಸೆ ಹೊಂದಿ ತುಂಬಾ ದುಃಖಿತನಾದ. ಇದನ್ನು ಕಂಡ ಮಗ ದೇವವ್ರತ ತಂದೆಗಾಗಿರುವ ನೋವಿನ ಕಾರಣ ತಿಳಿಯಬೇಕೆಂದು ಮಂತ್ರಿಯನ್ನು ವಿಚಾರಿಸಲಾಗಿ ಎಲ್ಲಾ ವಿಷಯಗಳನ್ನು ತಿಳಿದು, ಸೀದಾ ಮತ್ಸಗಂಧಿ ಅವರ ತಂದೆಯ ಹತ್ತಿರ ಹೋಗಿ ಅವರಿಗೆ, ನಾನು ನನ್ನ ರಾಜ್ಯದ ಉತ್ತರಾಧಿಕಾರಿಯನ್ನು ನಿಮ್ಮ ಮಗಳ ಹೊಟ್ಟೆಯಲ್ಲಿ ಹುಟ್ಟುವ ಮಗನಿಗೆ ವಹಿಸಲು ವಚನವಿತ್ತ. ಹಾಗಲೂ ಅವಳ ತಂದೆ ಇಷ್ಟಕ್ಕೆ ತೃಪ್ತಿಯಾಗಲಿಲ್ಲ. ಮುಂದೆ ನೀನು ಮದುವೆಯಾಗಿ ನಿನ್ನ ಮಕ್ಕಳು ಉತ್ತರಾಧಿಕಾರಿಯಾಗುತ್ತಾರಲ್ಲ ಎಂದಾಗ, ದೇವವ್ರತನು ಲೋಕಪ್ರಖ್ಯಾತವಾದ ಭೀಷ್ಮ ಪ್ರತಿಜ್ಞೆ ಮಾಡಿ ನಾನು ಆಜೀವ ಪರ್ಯಂತ ಬ್ರಹ್ಮಚಾರಿಯಾಗಿ ಉಳಿಯುತ್ತೇನೆಂದ. ಇವನ ಪ್ರತಿಜ್ಞೆಗೆ ಎಲ್ಲಾ ದೇವತೆಗಳು ಆಕಾಶದಿಂದ ಪುಷ್ಪಾರ್ಚನೆ ಮಾಡಿ ಭೀಷ್ಮ, ಭೀಷ್ಮ ಎಂದು ಉದ್ಗರಿಸಿದರು.

ಭೀಷ್ಮನು ಆ ಹೆಣ್ಣು ಮಗಳನ್ನು ಕರೆದುಕೊಂಡು ಬಂದು ತನ್ನ ತಂದೆಗೆ ಮದುವೆ ಮಾಡಿಸಿದನು. ಶಂತನು ಮಹಾರಾಜ ತುಂಬಾ ಸಂತೋಷಪಟ್ಟು ತನ್ನ ಮಗನಿಗೆ ಇಚ್ಛಾ ಮರಣಿಯಾಗು ಎಂದು ವರವಿತ್ತನು. ಹೀಗೆಯೇ ಸಂತೋಷದಿಂದ ಕಾಲ ಕಳೆಯುವಾಗ ಶಂತನು ಹಾಗೂ ಸತ್ಯವತಿಗೆ ವಿಚಿತ್ರವೀರ್ಯ ಹಾಗೂ ಚಿತ್ರವೀರ್ಯ ಎಂಬ ಇಬ್ಬರೂ ಮಕ್ಕಳು ಹುಟ್ಟಿದರು. ಭೀಷ್ಮನೇ ಅವರ ಲಾಲನೆ ಪಾಲನೆ ವಿದ್ಯಾಭ್ಯಾಸ ಕಲಿಸಿ ದೊಡ್ಡವರಾದರು. ಅದರಲ್ಲಿ ಚಿತ್ರವೀರ್ಯ ಯುದ್ಧದಲ್ಲಿ ಮರಣ ಹೊಂದಿದನು. ಶಂತನು ಚಕ್ರವರ್ತಿಯೂ ಮರಣ ಹೊಂದಿದಾಗ, ವಿಚಿತ್ರವೀರ್ಯನಿಗೆ ರಾಜ್ಯದ ಪಟ್ಟ ಕಟ್ಟಿ ಅವನಿಗೆ ಮದುವೆ ಮಾಡಬೇಕೆಂದು ತಾಯಿ ಸತ್ಯವತಿಗೆ ಕೇಳಿದಾಗ ಸತ್ಯವತಿಯು ಒಪ್ಪಿಗೆ ಕೊಟ್ಟಳು. ಆಗ ಕಾಶಿರಾಜನು ತನ್ನ ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಲು ಸ್ವಯಂವರ ಏರ್ಪಡಿಸಿದ್ದನು. ಭೀಷ್ಮ ಅಲ್ಲಿಗೆ ಹೋಗಿ ಎಲ್ಲಾ ರಾಜರನ್ನು ಯುದ್ಧದಲ್ಲಿ ಸೋಲಿಸಿ, ಮೂವರು ಹೆಣ್ಣು ಮಕ್ಕಳಾದ ಅಂಬಿ, ಅಂಬಿಕೆ ಹಾಗೂ ಅಂಬಾಲಿಕೆಯನ್ನು ಹಸ್ತಿನಾಪುರಕ್ಕೆ ಕರೆದುಕೊಂಡ ಬಂದು ವಿಚಿತ್ರವೀರ್ಯನಿಗೆ ಮದುವೆ ಮಾಡಿಸಲು ಏರ್ಪಾಟು ಮಾಡಲಾಗಿ ಅದರಲ್ಲಿ ಅಂಬಿಯು ವಿಚಿತ್ರವೀರ್ಯನನ್ನು ಮದುವೆಯಾಗಲು ಒಪ್ಪಲಿಲ್ಲ. ಅವಳು ಇನ್ನೊಬ್ಬ ರಾಜನನ್ನು ಇಷ್ಟಪಟ್ಟಿದ್ದಳು. ಅದರಂತೆ ಭೀಷ್ಮನು ಅವಳನ್ನು ವಾಪಸ್ ಕಳುಹಿಸಿಕೊಟ್ಟನು. ಅಂಬಿಯು ಆ ರಾಜನನ್ನು ಮದುವೆಯಾಗು ಎಂದು ಕೇಳಿದಾಗ ನಿನ್ನ ಭೀಷ್ಮನು ಕರೆದುಕೊಂಡು ಹೋಗಿದ್ದಕ್ಕೆ ನಾನು ಮದುವೆಯಾಗಲ್ಲ ಎಂದಾಗ ಅಂಬಿಗೆ ಆಕಾಶವೇ ತಲೆ ಮೇಲೆ ಬಿದ್ದಂತೆ ಭಾಸವಾಗಿ, ಭಾರವಾದ ಹೃದಯದಿಂದ ವಾಪಸ್ ಭೀಷ್ಮÀ ಹತ್ತಿರ ಹೋಗಿ ನನ್ನನ್ನು ಮದುವೆಯಾಗು. ಯಾಕೆಂದರೆ ನೀನು ನನ್ನನ್ನು ಸ್ವಯಂವರದಲ್ಲಿ ಗೆದ್ದುಕೊಂಡು ಬಂದಿದ್ದೀಯಾ ಎಂದು ಪರಿಪರಿಯಾಗಿ ವಿನಂತಿಸಿದಾಗ ನಾನು ಆಜೀವ ಬ್ರಹ್ಮಚಾರಿ ಎಂದು ಭೀಷ್ಮನು ನಯವಾಗಿ ಇವಳ ಕೋರಿಕೆಯನ್ನು ತಿರಸ್ಕರಿಸಿದನು. ಅಂಬಿಗೆ ಭೀಷ್ಮನ ಮೇಲೆ ಬಹಳ ಸಿಟ್ಟು ಬಂದು ಅವನನ್ನು ಹೇಗಾದರೂ ಮಾಡಿ ವರಿಸಬೇಕೆಂದು ಭೀಷ್ಮನ ಗುರುಗಳಾದ ಪರಶುರಾಮರಲ್ಲಿ ಹೋಗಿ ನಿವೇದಿಸಿಕೊಂಡಾಗ ಪರಶುರಾಮರು ಭೀಷ್ಮನನ್ನು ಕರೆಯಿಸಿ ಮದುವೆಯಾಗುವಂತೆ ಆಜ್ಞೆ ಮಾಡಿದರು. ಆದರೆ ಭೀಷ್ಮರು ಇದನ್ನು ಒಪ್ಪಲಿಲ್ಲ. ನಾನು ನನ್ನ ಪ್ರತಿಜ್ಞೆಯನ್ನು ಮುರಿಯಲಾರೆ ಎಂದು ಅತ್ಯಂತ ವಿನೀತನಾಗಿ ಗುರುಗಳ ಹತ್ತಿರ ನಿವೇದಿಸಿಕೊಂಡನು. ಕೊನೆಗೆ ಅಂಬಿಗೆ ಏನು ಮಾಡಬೇಕೆಂಬುದು ತೋಚದೆ ಶಂಕರನನ್ನು ಕುರಿತು ತಪಸ್ಸು ಮಾಡಲಾಗಿ ಶಂಕರನು ಪ್ರತ್ಯಕ್ಷನಾಗಿ ನಿನ್ನ ಕೋರಿಕೆಯಂತೆ ಭೀಷ್ಮನನ್ನು ನೀನು ಮುಂದಿನ ಜನ್ಮದಲ್ಲಿ ದ್ರುಪದ ರಾಜನ ಮಗನಾಗಿ ಹುಟ್ಟಿ ಸಾಯಿಸುತ್ತೀಯೆ ಎಂದು ವರ ಕೊಟ್ಟು ಹೋದನು. ಅಂಬೆಯು ತನ್ನ ದೇಹವನ್ನು ತ್ಯಾಗ ಮಾಡಿ ದ್ರುಪದ ರಾಜನ ಮಗನಾಗಿ ಶಿಖಂಡಿ ಎಂಬ ಹೆಸರಿನಿಂದ ಹುಟ್ಟಿದನು.

ಕಾಲಾನಂತರ ವಿಚಿತ್ರವೀರ್ಯನಿಗೆ ಅಂಬಿಕೆಯಿಂದ ಧೃತರಾಷ್ಟ್ರ ಹಾಗೂ ಅಂಬಾಲಿಕೆಯಿಂದ ಪಾಂಡು ಹುಟ್ಟಿದರು. ಧೃತರಾಷ್ಟ್ರ ಹುಟ್ಟಿನಿಂದಲೂ ಕುರುಡ, ಪಾಂಡು, ಸ್ಫುರದ್ರೂಪಿ ಹಾಗೂ ಚರ್ಮವೆಲ್ಲಾ ಬಿಳಿಚಿಕೊಂಡಿತ್ತು. ಇವರಿಬ್ಬರ ಲಾಲನೆ ಪಾಲನೆ ಹಾಗೂ ವಿದ್ಯಾಭ್ಯಾಸದ ಕೆಲಸ ಭೀಷ್ಮನ ಹೆಗಲ ಮೇಲೆ ಬಿತ್ತು. ಇವರಿಬ್ಬರೂ ದೊಡ್ಡವನಾದ ನಂತರ ಧೃತರಾಷ್ಟ್ರನಿಗೆ ಗಾಂಧಾರಿ ಎಂಬ ಹೆಣ್ಣು ಮಗಳನ್ನು ಪಾಂಡುವಿಗೆ ಕುಂತಿಭೋಜನ ಮಗಳಾದ ಕುಂತಿಯನ್ನು ಮದುವೆ ಮಾಡಿಸಿದರು. ಧೃತರಾಷ್ಟ್ರನಿಗೆ 101 ಗಂಡು ಮಕ್ಕಳು ಅದರಲ್ಲಿ ದುರ್ಯೋಧನನೇ ಮೊದಲನೆಯವನು. ಎರಡನೆಯವನು ದುಶ್ಯಾಸನ ಪಾಂಡು ಹಾಗೂ ಕುಂತಿಗೆ ಧರ್ಮರಾಜ, ಭೀಮ ಹಾಗೂ ಅರ್ಜುನನೆಂಬ 3 ಗಂಡು ಮಕ್ಕಳು ಹಾಗೂ ಮಾಧ್ವಿಗೆ ನಕುಲ, ಸಹದೇವ ಎಂಬ 2 ಮಕ್ಕಳು ಹುಟ್ಟಿದರು. ಭೀಷ್ಮನು ಕೌರವರು ಹಾಗೂ ಪಾಂಡವರ ವಿದ್ಯಾಭ್ಯಾಸಕ್ಕೆಂದು ದ್ರೋಣಾಚಾರ್ಯರನ್ನು ನೇಮಿಸಿದನು. ಇವರ ನೇಪಥ್ಯದಲ್ಲಿ ಅರ್ಜುನನು ಬಿಲ್ಲು ಬಾಣ ವಿದ್ಯೆಯಲ್ಲಿ ಸಕಲ ಪಾರಂಗತನಾದನು. ಭೀಮ ಹಾಗೂ ದುರ್ಯೋಧನನು ಗಧಾವಿದ್ಯೆಯಲ್ಲಿ ಪ್ರಖ್ಯಾತರಾದರು. ಕೌರವರು, ಪಾಂಡವರು ದೊಡ್ಡವರಾಗುತ್ತ ಹಗೆತನ ಸಾಧಿಸುವುದಕ್ಕೆ ಶುರು ಮಾಡಿದರು. ಪಾಂಡವರಿಗೆ ಕೊಡಬೇಕಾದ ರಾಜ್ಯವನ್ನು ಕೊಡದೆ ತಾವೇ ಅನುಭವಿಸಕ್ಕೆ ಶುರು ಮಾಡಿದರು. ಮೋಸದ ಪಗಡೆಯಾಟದಿಂದ ಪಾಂಡವರ ಹತ್ತಿರ ಇದ್ದಿದ್ದ ಅಲ್ಪಸ್ವಲ್ಪ ರಾಜ್ಯವನ್ನು ಕಸಿದುಕೊಂಡು 12 ವರ್ಷ ವನವಾಸ ಹಾಗೂ 1 ವರ್ಷ ಅಜ್ಞಾತವಾಸವನ್ನು ಅನುಭವಿಸಬೇಕಾಯಿತು. ಭೀಷ್ಮನು ಇದನ್ನು ತಡೆಯುವುದಕ್ಕೆ ಸಾಧ್ಯವಾಗಲಿಲ್ಲ. ಏಕೆಂದರೆ ಧೃತರಾಷ್ಟ್ರನು ಮಗ ದುರ್ಯೋಧನ ಬಗ್ಗೆ ಮೋಹಾಂಧಕಾರವನ್ನು ಹೊಂದಿದ್ದ.

ಪಾಂಡವರು ವನವಾಸವನ್ನು ಮುಗಿಸಿ ಮತ್ತೆ ರಾಜ್ಯದ ಪಾಲನ್ನು ಕೇಳಿದಾಗ ದುರ್ಯೋಧನನು ಒಂದು ಹಿಡಿ ಮಣ್ಣನ್ನು ಕೊಡಲಾರೆ ರಾಜ್ಯ ಬೇಕಿದ್ದರೆ ಯುದ್ಧವನ್ನು ಮಾಡಿ ಜಯಿಸಿ ಆಮೇಲೆ ತಗೊಳ್ಳಿ ಎಂದು ಖಡಕ್ಕಾಗಿ ಹೇಳಿದಾಗ ಪಾಂಡವರಿಗೆ ಬೇರೆ ಏನು ದಾರಿ ಇಲ್ಲದೆ ಕೃಷ್ಣನ ಅಣತಿಯಂತೆ ಯುದ್ಧಕ್ಕೆ ಅಣಿಯಾದರು. ಭೀಷ್ಮಾಚಾರ್ಯರು ವಿಧಿ ಇಲ್ಲದೆ ಕೌರವರ ಪಕ್ಷದ ಸೇನಾಧಿಪತ್ಯವನ್ನು ವಹಿಸಿದರು. ಆದರೆ ಭೀಷ್ಮಾಚಾರ್ಯರಿಗೆ ಪಾಂಡವರ ಮೇಲೆ ಅಧಿಕವಾದ ಪ್ರೀತಿಯಿತ್ತು. ಆದರೆ ಉಂಡ ಮನೆಗೆ ದ್ರೋಹ ಬಗೆಯಬಾರದೆಂದು ಸೇನಾಧಿಪಥ್ಯವನ್ನು ವಹಿಸಿ ಬಹು ಪರಾಕ್ರಮದಿಂದ 9 ದಿವಸ ಪಾಂಡವರ ಸೈನ್ಯವನ್ನೆಲ್ಲಾ ಧೂಳಿಪಟ ಮಾಡಿದರು. ಪಾಂಡವರಿಗೆ ಬಹಳ ಚಿಂತಾಕ್ರಾಂತರಾಗಿ ಭೀಷ್ಮ ತಾತನನ್ನು ಹೇಗೆ ಯುದ್ಧದಲ್ಲಿ ಸೋಲಿಸಬೇಕೆಂದು ಶ್ರೀಕೃಷ್ಣ ಪರಮಾತ್ಮನನ್ನು ಕೇಳಲಾಗಿ ಅದಕ್ಕೆ ಶ್ರೀಕೃಷ್ಣನು ಪಾಂಡವರನ್ನು ಭೀಷ್ಮನ ಶಿಬಿರಕ್ಕೆ ಯುದ್ಧ ಮುಗಿದ ನಂತರ ಕಳುಹಿಸಿಕೊಟ್ಟು ಭೀಷ್ಮರನ್ನು ಸೋಲಿಸುವ ಬಗೆ ಹೇಗೆ ಎಂದು ಅವರನ್ನೇ ಕೇಳಿ ಎಂದನು. ಅದರಂತೆ ಪಾಂಡವರು ಭೀಷ್ಮಾಚಾರ್ಯರ ಶಿಬಿರಕ್ಕೆ ಹೋಗಿ, ತಾತ ನೀವು ಹೀಗೆ ಯುದ್ಧ ಮಾಡಿದರೆ ನಾವೆಲ್ಲ ಅಪಜಯವಾಗುವುದು ಶತಃಸಿದ್ಧ. ನಿಮ್ಮನ್ನು ಯುದ್ಧದಲ್ಲಿ ಸೋಲಿಸುವ ಬಗೆ ಹೇಗೆ ಎಂದಾಗ ಭೀಷ್ಮಾಚಾರ್ಯರು ಶ್ರೀಕೃಷ್ಣನೇ ನಿಮ್ಮೊಡನಿರುವಾಗ ನಿಮಗೆ ಜಯ ಶತಸಿದ್ಧ. ನಾನು ಶಿಖಂಡಿಯ ಜೊತೆಗೆ ಯುದ್ಧ ಮಾಡಲಾರೆ. ನಾಳೆ ಯುದ್ಧದಲ್ಲಿ ಶಿಖಂಡಿಯನ್ನು ನನ್ನ ಎದುರಿಗೆ ನಿಲ್ಲಿಸಿದರೆ ನಾನು ಶಸ್ತ್ರತ್ಯಾಗ ಮಾಡುತ್ತಾನೆ ಎಂದು ತಮ್ಮ ಸೋಲಿನ ಗುಟ್ಟನ್ನು ಪ್ರೀತಿ ಪಾತ್ರರಾದ ಪಾಂಡವರಿಗೆ ಹೇಳಿದನು.

ಕುರುಕ್ಷೇತ್ರ ಯುದ್ಧದ 10ನೇ ದಿವಸ, ಪಾಂಡವರು ದ್ರುಪದ ರಾಜನ ಮಗನಾಗಿ ಹುಟ್ಟಿದ್ದ ಶಿಖಂಡಿಯನ್ನು ಭೀಷ್ಮರ ಮುಂದೆ ಯುದ್ಧಕ್ಕೆ ನಿಲ್ಲಿಸಿದರು. ಭೀಷ್ಮಾಚಾರ್ಯರು ಶಿಖಂಡಿಯನ್ನು ನೋಡಿ ಹೆಣ್ಣುಮಗಳ ಮೇಲೆ ಯುದ್ಧ ಮಾಡುವುದಿಲ್ಲವೆಂದು ಶಸ್ತ್ರ ತ್ಯಾಗ ಮಾಡಿದರು. ಆಗ ಅರ್ಜುನನು ಶ್ರೀಕೃಷ್ಣನ ಅಣತಿಯಂತೆ ಬಾಣಗಳನ್ನು ಹೊಡೆದು ಅವರನ್ನು ಶರಶಯ್ಯೆ ಮೇಲೆ ಮಲಗಿಸಿದನು. ಭೀಷ್ಮಾಚಾರ್ಯರು ಅಂಗಾತ ಶರಶಯ್ಯೆಯಲ್ಲಿ ಬಿದ್ದರು. ದೇಹ ಜರ್ಜರಿತವಾಗಿತ್ತು. ಪಾಂಡವರು ಹಾಗೂ ಕೌರವರೆಲ್ಲರೂ ಬಂದು ದುಃಖತಪ್ತರಾಗಿ ಅವರ ಸುತ್ತಲೂ ನೆರೆದರು. ಆಗ ಭೀಷ್ಮಾಚಾರ್ಯರು ದುರ್ಯೋಧನನಿಗೆ ನೀತಿ ಹೇಳಿ ಇನ್ನಾದರೂ ಪಾಂಡವರ ಪಾಲನ್ನು ಕೊಟ್ಟು ಬಿಡು. ಇಲ್ಲವಾದರೆ ಧರ್ಮಕ್ಕೆ ಜಯ, ಅಧರ್ಮಕ್ಕೆ ಯಾವತ್ತಿದ್ದರೂ ಅಪಜಯ ನಿನ್ನ ನಾಶವನ್ನು ನೀನೆ ಪಡಿಯುತ್ತೀಯಾ ಎಂದು ಎಷ್ಟು ಪರಿಪರಿಯಾಗಿ ಹೇಳಿದರೂ ದುರ್ಯೋಧನನ ಮನಸ್ಸು ಬದಲಾಗಲೇ ಇಲ್ಲ.
ಭೀಷ್ಮಾಚಾರ್ಯರು ಬಹಳ ದಣಿದವರಂತೆ ಕಂಡು ನೀರು ಕೇಳಲು ಕೌರವರು ನೀರನ್ನು ತರಲು ಅರಮನೆಗೆ ಹೋದರು. ಆದರೆ ಭೀಷ್ಮಾಚಾರ್ಯರು ಅರ್ಜುನನ್ನು ಕುರಿತು ಮಗೂ ನನಗೆ ಪಾತಾಳ ಗಂಗೆಯ ಜಲ ಬೇಕೆಂದಾಗ, ಅರ್ಜುನನು ಭೂಮಿಗೆ ಬಾಣವನ್ನು ಬಿಟ್ಟು ಪಾತಾಳಗಂಗೆಯನ್ನು ಅವರ ಬಾಯಿಗೆ ಬರುವಂತೆ ಮಾಡಿದನು. ಅದನ್ನು ಕಂಡು ಭೀಷ್ಮಾಚಾರ್ಯರು ತುಂಬಾ ಸಂತೋಷಪಟ್ಟರು. ಅವರು ಇಚ್ಛಾಮರಣಿಯಾದುದರಿಂದ, ಒಳ್ಳೆಯ ಕಾಲ ಉತ್ತರಾಯಣ ಪುಣ್ಯಕಾಲ ಬಂದ ಮೇಲೆ ದೇಹತ್ಯಾಗ ಮಾಡಿದರು.