ಸಾಧು ಸಂತರ ಕಥೆಗಳು

ಬೇವಿನಕಡ್ಡಿ ಪಾಯಸ(ತುಕಾರಾಮರ ಜೀವನದ ಕಥೆ) ತುಕಾರಾಮರು ವಿಠಲನ ಪರಮಭಕ್ತರು, ಅಷ್ಟೇ ವಿದ್ವಾಂಸರು. ದೇವರು, ಜನರು ಹಾಗೂ ಭಕ್ತಿ ಸೇವೆಯ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಕರ್ತವ್ಯದ ಕಡೆ ಹೆಚ್ಚು ಗಮನ ಕೊಡುತ್ತಿದ್ದರು. ವಿಠಲನ ಸತತ ಆರಾಧನೆಯೇ ಅವರಿಗೆ ಆದ್ಯ ಕರ್ತವ್ಯ ಆಗಿತ್ತು. ವಿಠಲನ ಭಕ್ತರು ಇವರಾದರೆ, ಇವರ ಭಕ್ತರೂ ಸಹ ಸಾಕಷ್ಟು ಮಂದಿ ಇದ್ದರು. ಒಮ್ಮೆ ಇವರ ಭಕ್ತಾದಿಗಳಿಗೆ ಭಾರತಾದ್ಯಂತ ಪುಣ್ಯಕ್ಷೇತ್ರಗಳಲ್ಲಿ ತೀರ್ಥಯಾತ್ರೆ ಮಾಡಿ ಬರಲು ಮನಸ್ಸಾಯಿತು. ತಮ್ಮ ಗುರುಗಳನ್ನೂ ತಮ್ಮೊಂದಿಗೆ ಬರಲು ಪ್ರಾರ್ಥಿಸಿಕೊಂಡರು. “ಪಾಂಡುರಂಗ ಎಲ್ಲಿಲ್ಲ? ಇರುವಲ್ಲಿಯೇ ಆತನನ್ನು ಕಾಣುವುದು ದೊಡ್ಡದು; ನಾನು ಇಲ್ಲಿಯೇ ಇದ್ದು ವಿಠಲನನ್ನು ಭಜಿಸುತ್ತಿರುತ್ತೇನೆ. ನೀವೆಲ್ಲರೂ ಹೋಗಿ ಬನ್ನಿ” ಎಂದು ಸಮಾಧಾನ ಹೇಳಿದರು. ಭಕ್ತಾದಿಗಳಿಗೆ ತುಕಾರಾಮರ ಈ ಮಾತುಗಳಿಂದ ಸಂತೋಷ ಆಗಲಿಲ್ಲ. “ಸ್ವಾಮಿ, ತಮ್ಮ ಪ್ರತಿನಿಧಿಯ ರೂಪದಲ್ಲಿ ಏನಾದರೊಂದು ವಸ್ತುವನ್ನಾದರೂ ಕರುಣಿಸಿ, ಅದನ್ನೇ ಹೋದೆಡೆಯಲ್ಲೆಲ್ಲಾ ನೋಡುತ್ತಾ, ನಿಮ್ಮನ್ನು ನೆನಪು ಮಾಡಿಕೊಳ್ಳುತ್ತಾ ಇರುತ್ತೇವೆ. ಅದನ್ನು ಮತ್ತೆ ಜೋಪಾನವಾಗಿ ಹಿಂದಿರುಗಿಸುತ್ತೇವೆ” ಎಂದು ಕಾಡಿ ಬೇಡಿದರು.

ತುಕಾರಾಮರಿಗೆ ನಗು ಬಂತು. ಅಲ್ಲಿಯೇ ಇದ್ದ ಬೇವಿನ ಮರದ ಕಡ್ಡಿಯನ್ನು ಮುರಿದರು, ಭಕ್ತಾದಿಗಳ ಕೈಯಲ್ಲಿಡುತ್ತಾ ಹೇಳಿದರು : “ನಿಮ್ಮ ಸಂತೋಷಕ್ಕೆ ನಾನು ಪ್ರತಿನಿಧಿಯ ರೂಪದಲ್ಲಿ ಈ ಬೇವಿನ ಕಡ್ಡಿಯನ್ನು ಕಳುಹಿಸುತ್ತಿದ್ದೇನೆ. ಜೋಪಾನವಾಗಿ ತೆಗೆದುಕೊಂಡು ಹೋಗಿ, ಜೋಪಾನವಾಗಿಯೇ ವಾಪಸು ತನ್ನಿ.” ಎಲ್ಲರೂ ತುಕಾರಾಮರಿಗೆ ವಂದಿಸಿದರು. ಬೇವಿನ ಕಡ್ಡಿಯೊಂದಿಗೆ ತೀರ್ಥಯಾತ್ರೆ ಹೊರಟರು. ಎಲ್ಲಾ ತೀರ್ಥಸ್ಥಳಗಳಲ್ಲೂ, ಪುಣ್ಯ ನದಿಗಳಲ್ಲೂ ಸ್ನಾನ ಮಾಡಿದರು. ತೀರ್ಥಸ್ಥಳಗಳಲ್ಲಿ ದೇವರ ದರ್ಶನ ಮಾಡುವಾಗಲೆಲ್ಲಾ ಬೇವಿನ ಕಡ್ಡಿಗೂ ದರ್ಶನ ಮಾಡಿಸಿದರು. ಹೀಗೆಯೇ ತುಂಬಾ ಜೋಪಾನವಾಗಿಟ್ಟುಕೊಂಡು, ಯಾತ್ರೆಗಳೆಲ್ಲಾ ಮುಗಿದ ನಂತರ ಹಿಂದಿರುಗಿದರು. ತುಕಾರಾಮರಿಗೆ ಬೇವಿನ ಕಡ್ಡಿಯನ್ನು ಶ್ರದ್ಧೆ-ಭಕ್ತಿಯೊಂದಿಗೆ ಒಪ್ಪಿಸಿದರು. ತೀರ್ಥಯಾತ್ರೆ ಮಾಡಿ ಬಂದ ನಂತರ ಹತ್ತು ಮಂದಿಗೆ ಭೋಜನ ಸಂತರ್ಪಣೆ ನಡೆಸುವುದು ಸಂಪ್ರದಾಯ. ಅದರಂತೆಯೇ ತುಕಾರಾಮರೂ ಭಕ್ತಾದಿಗಳೆಲ್ಲರನ್ನೂ ಯಾತ್ರೆ ಮಾಡಿ ಬಂದುದರ ಸವಿನೆನಪಿಗಾಗಿ ಊಟಕ್ಕೆ ಕರೆದರು. ಭಕ್ತಾದಿಗಳೆಲ್ಲರೂ ಸಂತೋಷದಿಂದಲೇ ಭೋಜನ ಸಂತರ್ಪಣೆಯ ಸಮಾರಂಭದಲ್ಲಿ ಭಾಗವಹಿಸಿದರು. ಅಡಿಗೆ ಸಿದ್ಧವಾಯಿತು. ಎಲ್ಲರೂ ಸಾಲಾಗಿ ಊಟಕ್ಕೆ ಕುಳಿತರು, ತುಕಾರಾಮರೇ ಸ್ವತಃ ಉಣಬಡಿಸಲು ನಿಂತರು. ಎಲ್ಲರಿಗೂ ವಿಠಲನ ಪ್ರಸಾದವೆಂದು ಸಿದ್ಧಗೊಳಿಸಿದ್ದ ಬೇವಿನ ಪಾಯಸವನ್ನೇ ಉಣಬಡಿಸಿದರು.

ಎಲ್ಲರೂ ಆನಂದದಿಂದ “ಜೈ ಪಾಂಡುರಂಗ ವಿಠಲ” ಎಂದು ಒಕ್ಕೊರಳಿನಿಂದ ಕೂಗುತ್ತಾ ಪಾಯಸವನ್ನು ನಾಲಿಗೆಯ ಮೇಲೆ ಹಾಕಿಕೊಂಡು ಚಪ್ಪರಿಸುತ್ತಿದ್ದಂತೆ, ಕಹಿರುಚಿಯಿಂದ ಕಸಿವಿಸಿಗೊಂಡರು, ಹರಳೆಣ್ಣೆ ಕುಡಿದವರಂತೆ ಮುಖ ಮಾಡುತ್ತಾ, ತುಕಾರಾಮರನ್ನು “ಇದು ಧರ್ಮವಾ?” ಎಂದು ಪ್ರಶ್ನಿಸುವಂತೆ ನೋಡತೊಡಗಿದರು. ತುಕಾರಾಮರಿಗೆ ತಡೆಯಲಾರದಷ್ಟು ನಗು ಬಂತು. ಜೊತೆಗೆ ಕನಿಕರವೂ ಉಂಟಾಯಿತು. ಕೈ ಜೋಡಿಸಿಕೊಂಡು ಕ್ಷಮೆಯಾಚಿಸುತ್ತಾ ಹೇಳಿದರು: “ನೋಡಿ, ನೀವೆಲ್ಲರೂ ಎಲ್ಲಾ ಕ್ಷೇತ್ರಗಳಲ್ಲೂ ಸ್ನಾನ ಮಾಡಿ ಬಂದಿದ್ದೀರಿ, ಎಲ್ಲಾ ಕ್ಷೇತ್ರಗಳ ದೇವರನ್ನೂ ಸಂದರ್ಶಿಸಿ ಬಂದಿದ್ದೀರಿ. ಹಾಗೆಯೇ ನಾನು ನನ್ನ ಪ್ರತಿನಿಧಿಯ ರೂಪದಲ್ಲಿ ಕಳುಹಿಸಿದ್ದ ಬೇವಿನ ಕಡ್ಡಿಗೂ ಸ್ನಾನ ಮಾಡಿಸಿದ್ದೀರಿ, ದೇವರ ದರ್ಶನ ಮಾಡಿಸಿದ್ದೀರಿ. ಇಷ್ಟಾದರೂ ಈ ಕಡ್ಡಿ ತನ್ನ ‘ಕಹಿ’ ಸ್ವಭಾವವನ್ನು ಬಿಟ್ಟೇ ಇಲ್ಲ. ಕೇವಲ ಮೂಢನಂಬಿಕೆಯಲ್ಲಿ ಮುಳುಗಿ, ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ಬಂದ ಮಾತ್ರಕ್ಕೇ ಮನಶುದ್ಧಿ, ಅಂತರಂಗಶುದ್ಧಿ ಲಭಿಸುವುದಿಲ್ಲ; ಇದ್ದಲ್ಲಿಯೇ ಪರಮಾತ್ಮನಾದ ಪಾಂಡುರಂಗನನ್ನು ಅಂತರಾಳದಿಂದ ನಿಷ್ಠೆಯೊಂದಿಗೆ ಭಜಿಸಿದರೆ ಮಾತ್ರ ನಾವು ಶುದ್ಧರಾಗುತ್ತೇವೆ. ವೃಥಾ ತೀರ್ಥಯಾತ್ರೆ ಮಾಡಿದರೆ ಈ ಬೇವಿನ ಕಡ್ಡಿಯಂತೆಯೇ ಸ್ವಭಾವದಲ್ಲಿ ಯಾವ ಮಾರ್ಪಾಡನ್ನೂ ಹೊಂದದೆ ಇರುತ್ತೇವೆ.” ಅನ್ನುತ್ತಾ ತಮ್ಮ ಮಡದಿಯಾದ ಜೀಜಾಬಾಯಿಗೆ ಹೇಳಿದರು: “ಜೀಜಾ, ಇವರೆಲ್ಲರಿಗೂ ಶ್ರದ್ಧೆಯಿಂದ ಉಣಬಡಿಸು. ಜೀಜಾಬಾಯಿ ತಾಯಿಯಂತೆ ಭಕ್ತರೆಲ್ಲರಿಗೂ ಸಿಹಿ-ಸಿಹಿ ಭಕ್ಷ್ಯಗಳನ್ನು ಬಡಿಸಿದರು, ತುಕಾರಾಮರು ಹೇಳಿದ ಕಟುಸತ್ಯದ ಮಾತನ್ನು ಮೆಲುಕುಹಾಕುತ್ತಾ, ಸಂತೋಷದಿಂದ ನಾಲಿಗೆ ಚಪ್ಪರಿಸತೊಡಗಿದರು.