ಮಹಾಭಾರತ ಕಥೆಗಳು

ಬಬ್ರುವಾಹನನ ಕಥೆ ಕುರುಕ್ಷೇತ್ರ ಯುದ್ಧವೆಲ್ಲಾ ಮುಗಿದ ಮೇಲೆ ಧರ್ಮರಾಜನು ಇನ್ನೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಲು ಅಶ್ವಮೇಧಯಾಗವನ್ನು ಶ್ರೀಕೃಷ್ಣನ ಅಣತಿಯಂತೆ ಮಾಡಿದನು. ಯಾಗಾಶ್ವವು ಮಣೀಪುರಕ್ಕೆ ಬಂದಿತು. ಅರ್ಜುನ ಚಿತ್ರಾಂಗದೆಯನ್ನು ವಿವಾಹವಾದ ದೇಶ. ಅರ್ಜುನನ ಮಗ ಬಬ್ರುವಾಹನ ಯಾಗಾಶ್ವವನ್ನು ಕಟ್ಟಿ ಹಾಕಿದ. ಅವನಿಗೆ ಅರ್ಜುನ ತನ್ನ ತಂದೆ ಎಂದು ತಿಳಿದಿರಲಿಲ್ಲ. ಮರುದಿನವೇ ಅರ್ಜುನನ ಜೊತೆ ಕಾದಾಡಲು ಸೈನ್ಯ ಸಿದ್ಧತೆಯನ್ನು ಮಾಡಿಕೊಂಡ. ವಿಚಾರವನ್ನು ತಿಳಿದ ಚಿತ್ರಾಂಗದೆ ಗಾಬರಿಯಿಂದ ತಾನೇ ಸ್ವತಃ ರಾಜಸಭೆಗೆ ಬಂದಳು. ಬಬ್ರುವಾಹನ ಬೆಕ್ಕಸ ಬೆರಗಾದ. ಮಗನ ಕಡೆ ನೋಡಿ “ಕುಮಾರ, ನಿನ್ನ ದುಡುಕುತನದ ಕಾರ್ಯವನ್ನು ಕಂಡು ನನಗೆ ನಿಜಕ್ಕೂ ತುಂಬಾ ಕೋಪ ಬಂದಿದೆ. ನೀನು ಯುದ್ಧ ಮಾಡಲು ಹೊರಟಿರುವುದು. ಅರ್ಜುನ ಮೇಲೆ ಎಂದು ತಿಳಿಯಿತು. ಆ ಪಾರ್ಥನೇ ನಿನ್ನ ತಂದೆ. ನಾನು ಮತ್ತೊಮ್ಮೆ ಅವರನ್ನು ನೋಡಲು ಕಾತುರದಿಂದ ವ್ರತಗಳನ್ನು ಮಾಡುತ್ತಾ ಕಾಯುತ್ತಿರುವೆ. ನೀನು ಹೋಗಿ, ನಿನ್ನ ಸಕಲ ಐಶ್ವರ್ಯವನ್ನು ಒಪ್ಪಿಸಿ, ನಮಸ್ಕರಿಸಿ, ಅವರನ್ನು ಕರೆದುಕೊಂಡು ಬಾ.”

ತಾಯಿಯ ಮಾತಿನಂತೆ ಬಬ್ರುವಾಹನ ತನ್ನ ತಂದೆಯನ್ನು ಕಾಣಲು ತಟ್ಟೆಯಲ್ಲಿ ವಜ್ರ, ಬೆಳ್ಳಿ, ಬಂಗಾರ, ಮುತ್ತುಗಳನ್ನು ತೆಗೆದುಕೊಂಡು ಹೊರಟ. ಎದುರು ಬಂದ ಅರ್ಜುನನಿಗೆ ಅನೇಕ ಅಪಶಕುನಗಳಾದವು. ಅವನ ಎಡಗಣ್ಣು ಅದುರತೊಡಗಿತು. ರಥದ ಮೇಲೆ ಕಾಗೆಯು ಕುಳಿತುಕೊಂಡಿತು. ಹಗಲು ಹೊತ್ತಿನಲ್ಲೇ ಗೂಬೆಗಳು ಕೂಗತೊಡಗಿತು. ಹಂಸಧ್ವಜ-ನೀಲಧ್ವಜರು ಮುಂದೆ ಎಂತಹ ಅನಾಹುತಗಳು ಕಾದಿವೆಯೋ ಎಂದು ತಳಮಳಿಸಿದರು. ಬಬ್ರುವಾಹನ ವಿನೀತನಾಗಿ ಮುಂದೆ ಬಂದು “ಅಪ್ಪಾಜಿ, ತಾವು ನನ್ನ ತಂದೆ ಎಂಬುದನ್ನು ತಿಳಿಯದೇ ಯಾಗಾಶ್ವವನ್ನು ಕಟ್ಟಿ ಹಾಕಿದೆ. ನಾನು ಯಾಗದ ಕುದುರೆಯನ್ನು ಕಟ್ಟಿ ಹಾಕಿದ್ದಕ್ಕಾಗಿ ಕ್ಷಮೆ ಯಾಚಿಸುವೆನು” ಎಂದನು. ಅರ್ಜುನ ಯಾವುದೋ ಜ್ಞಾನದಲ್ಲಿ ಗತ ಘಟನೆಗಳ ಕಡೆಗೆ ಅಷ್ಟಾಗಿ ಗಮನ ಕೊಡಲಿಲ್ಲ. “ಛೀ, ನೀನು ನನ್ನ ಮಗನೇ? ನೀನು ನಿಜಕ್ಕೂ ನನ್ನ ಮಗನೇ ಆಗಿದ್ದರೆ ಹೀಗೆ ಕಟ್ಟಿದ ಕುದುರೆಯನ್ನು ಬಿಚ್ಚಿ ಕೊಡುತ್ತೇನೆ ಎನ್ನುತ್ತಿರಲಿಲ್ಲ. ವೀರನಂತೆ ಯುದ್ಧವನ್ನು ಮಾಡುತ್ತಿದ್ದೆ. ನೀನೊಬ್ಬ ಹೇಡಿ ಹೆಣ್ಣಿನ ಮಗ ಇರಬೇಕು. ನಿನ್ನ ರಾಜ ಮರ್ಯಾದೆ ನನಗೇಕೆ? ಸುಡು.”

ಅಲ್ಲಿ ನೆರೆದಿದ್ದ ನೂರಾರು ಜನರ ಮುಂದೆ ತಾಯಿಗಾದ ಅವಮಾನವನ್ನು ಕಂಡು ಬಬ್ರುವಾಹನ ಕನಲಿದನು. ಸಿಟ್ಟಿನಿಂದ ಸಿಡಿಮಿಡಿಗೊಂಡ. “ಎಲವೋ ಅರ್ಜುನ, ನನ್ನ ತಾಯಿಯ ಶೀಲದ ಬಗ್ಗೆ ಮಾತನಾಡಿದ ನಿನ್ನನ್ನು ಸುಮ್ಮನೆ ಬಿಡಲಾರೆ. ಇಂದಿನ ಯುದ್ಧದಲ್ಲಿ ನಾನು ನಿನ್ನ ತಲೆಯನ್ನು ಹಾರಿಸದಿದ್ದರೆ ನಾನು ವೀರ ಮಾತೆಯ ಮಗನೇ ಅಲ್ಲ.” ಬಬ್ರುವಾಹನ ಯುದ್ಧಕ್ಕೆ ಸನ್ನದ್ಧನಾದ. ಇಬ್ಬರೂ ಮಾತಿನ ವೈಖರಿಯೊಂದಿಗೆ ಬಾಣ ಪ್ರಯೋಗದ ವೈಖರಿಯೂ ವೈಭವಿಸತೊಡಗಿದರು. ಪರಸ್ಪರ ಬಾಣಗಳನ್ನು ಪ್ರಯೋಗಿಸಿ, ಆಘಾತವನ್ನುಂಟು ಮಾಡತೊಡಗಿದರು. ಬಾಣದ ಕಿಡಿಗಳು ಮುಗಿಲೆತ್ತರಕ್ಕೆ ಹಾರಿ, ವೀಕ್ಷಿಸುತ್ತಿದ್ದ ದೇವತೆಗಳು ಸಹ ಭಯದಿಂದ ಕಂಗಾಲಾದರು. ಎರಡೂ ಕಡೆ ಲಕ್ಷಾಂತರ ಸೈನಿಕರು ಹತರಾದರು. ಅರ್ಜುನನ ರಥದ ಮೇಲೆ ಹಗಲ ವೇಳೆಯಲ್ಲಿಯೇ ಗೂಬೆ ಕುಳಿತು ಕೂಗತೊಡಗಿತು. ರಣಹದ್ದುಗಳು ಸಮರಾಂಗಣದ ಉದ್ದಗಲಕ್ಕೂ ಹಾರಾಡ ತೊಡಗಿದವು. ಕಿರೀಟಿಯಂತಹ ಕಡುಗಲಿಯೂ ಸಹ ಇಂತಹ ಅಪಶಕುನಗಳಿಂದ ಕೂಡಿದ ಭೀಕರ ಕಾಳಗವನ್ನು ಎಂದೂ ಇದುವರೆಗೂ ಕಂಡಿರಲಿಲ್ಲ. ಅಣ್ಣನು ಕೈಗೊಂಡಿರುವ ಅಶ್ವಮೇಧ ಯಾಗವು ಎಷ್ಟೊಂದು ನರಮೇಧ ಯಾಗದಂತೆ ಪೂರ್ವಭಾವಿಯಾಗಿಯೇ ಕಂಡು ಬರುತ್ತಿದೆ ಎಂದು ಸಣ್ಣಗೆ ನಡುಗತೊಡಗಿದ. ‘ಕೃಷ್ಣ ಪರಮಾತ್ಮ ಎಲ್ಲವೂ ನಿನಗೆ ಅರ್ಪಿತವಾಗಲಿ’ ಎಂದು ಮನದಲ್ಲೇ ದೃಢಭಕ್ತಿಯಿಂದ ಸ್ಮರಿಸುತ್ತಾ, ಬಬ್ರುವಾಹನನ ಮೇಲೆ ಯಥೇಚ್ಛ ಬಾಣಗಳ ಸುರಿಮಳೆಗರೆಯತೊಡಗಿದ. ಬಬ್ರುವಾಹನನೂ ಶೌರ್ಯದಲ್ಲಿ ತಂದೆಗಿಂತಲೂ ಕಡಿಮೆ ಎನಿಸಿರಲಿಲ್ಲ. ಅರ್ಜುನನು ಪ್ರಯೋಗಿಸಿದ ಸರ್ಪಾಸ್ತ್ರಗಳನ್ನು ಅಭಿಮುಖಾಸ್ತ್ರಗಳಿಂದ ಉರುಳಿಸತೊಡಗಿದ. ಕೊನೆಯ ಘಳಿಗೆಯಲ್ಲಿ ರೋಷದಿಂದ ಕಡುವೈರಿಯಾದ ಸರ್ಪಾಸ್ತ್ರ ಈಗ ಕರ್ಣನು ಪ್ರಯೋಗಿಸಿದಾಗ ಮೋಸ ಹೋದಂತೆ ಹೋಗದೆ, ಎಚ್ಚರಿಕೆಯಿಂದ ಅವನ ತಲೆಯನ್ನು ಹಾರಿಸಿತು.

ಅರ್ಜುನನ ಮರಣದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಉಲೂಪಿ, ಚಿತ್ರಾಂಗದೆಯರಂತೂ ದುಃಖದ ಕಡಲಿನ ತಳ ಸೇರಿದರು. ವೈರಿಯನ್ನು ಗೆದ್ದು, ಗೆಲುವಿನ ಮುಖದೊಂದಿಗೆ ಅರಮನೆಗೆ ಬಂದ ಬಬ್ರುವಾಹನ ತಾಯಂದಿರ ದಾರುಣ ದುಃಖವನ್ನು ಕಂಡು ಸಹಿಸಲಾರದೆ ಒದ್ದಾಡತೊಡಗಿದ. ಚಿತ್ರಾಂಗದೆ ಮಗನನ್ನು ಕುರಿತು ಅಯ್ಯೋ ಬಬ್ರೂ, ನಿನಗೇಕೆ ಇಂತಹ ಕೇಡು ಬುದ್ಧಿ ಬಂದಿತು? ನನ್ನ ಪತಿಯನ್ನು ಗೌರವದಿಂದ ಅರಮನೆಗೆ ಕರೆ ತಾ ಎಂದು ಹೇಳಿ ಕಳುಹಿಸಿದರೆ ಕಟುಕನ ರೀತಿ ಅವರನ್ನು ಕೊಂದು ಬಂದಿರುವೆ. ನೀನು ಇಂತಹ ಪುತ್ರ ಎಂದು ತಿಳಿದಿದ್ದರೆ ನಾನು ಬಂಜೆಯಾಗಿಯೇ ಉಳಿಯುತ್ತಿದ್ದೆ. ತಂದೆಯನ್ನು ಕೊಂದ ಧೀರ ಮಗ ಎಂಬ ಬಿರುದನ್ನು ಪಡೆದು ಸಂತೋಷಪಡು. ನನಗೆ ಮುಖ ತೋರಿಸಬೇಡ” ಎಂದಳು. ಬಬ್ರುವಾಹನ ತಾಯಿಯ ಪಾದಗಳನ್ನು ಭದ್ರವಾಗಿ ಹಿಡಿದು, ಕಣ್ಣೀರಿನಿಂದ ಆಕೆಯ ಪಾದಗಳನ್ನು ತೊಳೆದನು. “ಅಮ್ಮ, ನಾನು ಅಂತಹ ಅವಿವೇಕಿ ಮಗನಲ್ಲ. ನಿನ್ನಂತಹ ಪತಿವ್ರತಾ ಶಿರೋಮಣಿಯನ್ನು ಹೇಡಿ ಎಂದು ಜರೆದ ಕಾರಣ ನಾನು ರೋಷಾವೇಶದಿಂದ ಕಾದಾಟ ನಡೆಸಬೇಕಾಗಿ ಬಂದಿತು. ಈಗಲೂ ಹೇಳು, ನನ್ನ ತಂದೆಯನ್ನು ಬದುಕಿಸುವ ದಾರಿ ಯಾವುದಾದರೂ ಇದೆಯಾ?” ಮಗನ ದುಃಖವನ್ನು ಕಂಡು ಚಿತ್ರಾಂಗದೆಯೂ ದುಃಖಿತಳಾಗಿ ಅಳುತ್ತಾ, ನಂತರ ಕಡುಕಷ್ಟದಿಂದ ತನ್ನ ಸಂಕಟವನ್ನು ಹತೋಟಿಗೆ ತಂದುಕೊಂಡಳು.

“ಬಬ್ರುವಾಹನ, ವಿಧಿ ನಿಯಮವನ್ನು ಯಾರೂ ತಾನೇ ಉಲ್ಲಂಘಿಸಲು ಸಾಧ್ಯ? ಕೊನೆಯದಾಗಿ ನನ್ನ ಮುತ್ತೈದೆತನವನ್ನು ಉಳಿಸಿಕೊಳ್ಳಲು ನೀನು ಪಾತಾಳ ಲೋಕಕ್ಕೆ ತೆರಳಿ, ನಿನ್ನ ತಾತನಾದ ಶೇಷರಾಜನ ಬಳಿ ಸಂಜೀವ ಮಣಿ ಇದೆ. ಅದನ್ನು ತಂದರೆ ನಿನ್ನ ತಂದೆಯನ್ನು ಬದುಕಿಸಬಹುದು.” ಬಬ್ರುವಾಹನನು ತನ್ನ ತಂದೆಯನ್ನು ಬದುಕಿಸಲು ವೀರಾವೇಶದಿಂದ ಪಾತಾಳ ಲೋಕವನ್ನು ಪ್ರವೇಶಿಸಿದ. ತನ್ನ ಮೊಮ್ಮಗನ ದುಃಖವನ್ನು ನೋಡಲಾರದೆ ಶೇಷರಾಜ ಸಂಜೀವ ಮಣಿಯನ್ನು ಮೊಮ್ಮಗನಿಗೆ ಕೊಡಲು ಹೋದ. ಆದರೆ ಧೃತರಾಷ್ಟ್ರನೆಂಬ ಪ್ರಧಾನಿಯು ಅಡ್ಡ ಬಂದನು. ಇಬ್ಬರ ನಡುವೆ ಘನಘೋರ ಯುದ್ಧ ನಡೆಯಿತು. ಅಷ್ಟರಲ್ಲಿ ಧೃತರಾಷ್ಟ್ರನ ಕುಮಾರಿಯರಾದ ದುರ್ಬುದ್ಧಿ, ದುಃಸ್ವಭಾವಿ ಎಂಬುವವರು ಅರ್ಜುನನ ಶಿರಸ್ಸನ್ನು ಬಕದಾಲ್ಭ್ಯ ಮುನಿಯ ಆಶ್ರಮದಲ್ಲಿ ಬಚ್ಚಿಟ್ಟರು. ಇತ್ತ ಬಬ್ರುವಾಹನ ತಾತನಿಂದ ಅಮೂಲ್ಯವಾದ ಮಣಿಯನ್ನು ಪಡೆದುಕೊಂಡು ತಾಯಿಯ ಬಳಿಗೆ ಬಂದು ಕೈಮುಗಿದ. ಚಿತ್ರಾಂಗದೆಗೆ ತುಂಬಾ ಸಂತೋಷವಾಯಿತು. ಅವಳು ಮಣಿಯನ್ನು ಅರ್ಜುನನ ತಲೆಗೆ ಮುಟ್ಟಿಸಬೇಕಿತ್ತು. ಆದರೆ ಶಿರಸ್ಸೇ ನಾಪತ್ತೆಯಾಗಿತ್ತು. ಎಲ್ಲರೂ ಪುನಃ ಗಾಬರಿಗೊಂಡರು. ಕೃಷ್ಣ ಸೂಕ್ಷ್ಮ ಜ್ಞಾನದಿಂದ ನಡೆದಿರುವುದನ್ನು ಗ್ರಹಿಸಿದನು. ತನ್ನ ಸುದರ್ಶನ ಚಕ್ರವನ್ನು ರೋಷದಿಂದ ಎಸೆದ. ಅದು ದುಃಸ್ವಭಾವಿ ಹಾಗೂ ದುರ್ಬುದ್ಧಿಯನ್ನು ಕೊಂದು ಅರ್ಜುನನ ಶಿರಸ್ಸುಗಳನ್ನು ತಂದು ಕೃಷ್ಣನ ಪಾದದ ಬಳಿ ಕೆಡವಿತು. ಸಂಜೀವ ಮಣಿಯನ್ನು ಸ್ಪರ್ಶಿಸಿದ ಕೂಡಲೇ ಅರ್ಜುನ ಬದುಕಿದನು. ಬಬ್ರುವಾಹನನನ್ನು ಅರ್ಜುನನು ಸಂತೋಷದಿಂದ ಆಲಂಗಿಸಿಕೊಂಡನು. ಚಿತ್ರಾಂಗದೆಯನ್ನು ಕಂಡು ಅತ್ಯಾನಂದಪಟ್ಟನು. ಅಲ್ಲಿಯೇ ಕೆಲಕಾಲ ಇದ್ದು ನಂತರ ಪ್ರಯಾಣವನ್ನು ಮಾಡಿದರು.