ಮಹಾಭಾರತ ಕಥೆಗಳು

ಸತ್ಯವಾನ ಸಾವಿತ್ರಿ ಮಂದ್ರ ದೇಶದ ರಾಜನಾದ ಅಶ್ವಪತಿಗೆ ಬಹಳ ದಿವಸಗಳಿಂದ ಸಂತಾನ ಭಾಗ್ಯ ಇರಲಿಲ್ಲ. ಇದರಿಂದ ಬೇಸರಗೊಂಡ ಅಶ್ವಪತಿ ಮಹಾರಾಜನು ಮಗುವನ್ನು ಬೇಡಿ ಸರಸ್ವತಿಯನ್ನು ಕುರಿತು ತಪಸ್ಸು ಮಾಡಿದನು. ಅದರ ಪರವಾಗಿ ಒಂದು ಹೆಣ್ಣು ಮಗು ಜನಿಸಿತು. ಅದಕ್ಕೆ ಸಾವಿತ್ರಿ ಎಂದು ಹೆಸರಿಡಲಾಯಿತು. ಒಮ್ಮೆ ಅಶ್ವಪತಿ ಮಹಾರಾಜನಲ್ಲಿಗೆ ನಾರದರು ಆಗಮಿಸಿದರು. ಅವರನ್ನು ಭಕ್ತಿಯಿಂದದ ಸ್ವಾಗತಿಸಿ, ಉಪಚರಿಸಿ, ಅಶ್ವಪತಿಯು ತಪಸ್ಸು ಮಾಡಿ ಪಡೆದ ತನ್ನ ಮಗಳಾದ ಸಾವಿತ್ರಿಯನ್ನು ಆಶೀರ್ವದಿಸಬೇಕೆಂದು ಪ್ರಾರ್ಥಿಸಿದನು. ನಾರದರು ಅವಳನ್ನು ಆಶೀರ್ವದಿಸಿ ತೆರಳಿದರು.

ಸಾವಿತ್ರಿಯು ವಿವಾಹದ ವಯಸ್ಸಿಗೆ ಬಂದಾಗ ಅವಳಿಗೆ ಮದುವೆ ಮಾಡುವುದರ ಬಗ್ಗೆ ರಾಜನು ಯೋಚಿಸತೊಡಗಿದನು. ಆಗ ಸಾವಿತ್ರಿಯು ತನ್ನ ತಂದೆಯೊಡನೆ “ತಂದೆಯೇ! ಶಲ್ವ ದೇಶದ ರಾಜಕುಮಾರನಾದ ಸತ್ಯವಾನನ ಬಗ್ಗೆ ನಾನು ನನ್ನ ಸಖಿಯರ ಮೂಲಕ ಕೇಳಿ ತಿಳಿದಿದ್ದೇನೆ. ಅವರನ್ನು ನನ್ನ ಮನಸ್ಸಿನಲ್ಲಿ ಪೂರ್ಣವಾಗಿ ಸ್ಥಾಪಿಸಿಬಿಟ್ಟಿದ್ದೇನೆ. ಅವರನ್ನು ನಾನು ಪತಿಯಾಗಿ ಪಡೆಯಲು ಆಶೀರ್ವದಿಸಬೇಕು” ಎಂದು ಪ್ರಾರ್ಥಿಸಿದಳು. ಅಶ್ವಪತಿಯು ತನ್ನ ಮಗಳ ಆಸೆಯನ್ನು ನೆರವೇರಿಸಲು ಸಿದ್ಧನಾಗಿದ್ದನು. ನಾರದರಲ್ಲಿ ತನ್ನ ಮಗಳ ಅಭಿಪ್ರಾಯವನ್ನು ತಿಳಿಸಿದನು. ಇದನ್ನು ಕೇಳಿದ ನಾರದರು ಆಶ್ಚರ್ಯವನ್ನು ಹೊಂದಿದರು. ಅವರ ಮುಖ ಬಾಡಿದ್ದನ್ನು ಕಂಡು ಅಶ್ವಪತಿಗೆ ಏನೂ ಅರ್ಥವಾಗಲಿಲ್ಲ. “ಸ್ವಾಮೀ! ಇದರಲ್ಲಿ ತಮಗೆ ಇಷ್ಟವಿಲ್ಲವೇ?” ಎಂದು ಕೇಳಿದನು. “ಅಶ್ವಪತಿ! ಇದು ಯಾರ ಇಷ್ಟಕ್ಕೆ ಸಂಬಂಧಿಸಿದ್ದೂ ಅಲ್ಲ. ನಿನ್ನ ಮಗಳು ಇಷ್ಟ ಪಡುವ ಸತ್ಯವಾನನು ಅಲ್ಪಾಯು. ಅವನನ್ನು ಬಯಸುತ್ತಾಳಲ್ಲ ಎಂಬುದೇ ಚಿಂತೆಯಾಗಿದೆ” ಎಂದರು ನಾರದ. ಇದನ್ನು ಕೇಳಿದ ಅಶ್ವಪತಿಯು ತನ್ನ ಮಗಳು ಸಾವಿತ್ರಿಯ ಬಳಿ ಬಂದು ನಾರದರು ಹೇಳಿದ ವಿಷಯವನ್ನು ತಿಳಿಸಿದನು. ಆದರೆ ಅವಳು ಹಟದಿಂದ ತಾನು ಸತ್ಯವಾನನನ್ನೇ ವಿವಾಹವಾಗಲು ಬಯಸುವುದಾಗಿ ದೃಢವಾಗಿ ಹೇಳಿಬಿಟ್ಟಳು.

ಇದನ್ನು ಕೇಳಿದ ರಾಜನು ಮಿತಿ ಮೀರಿದ ಮನೋವೇದನೆಯನ್ನು ಹೊಂದಿದನು. ಸಾವಿತ್ರಿಯು ನೇರವಾಗಿ ನಾರದರ ಬಳಿ ಹೋದಳು. “ಮುನಿವರ್ಯರೇ! ಸತ್ಯವಾನನಿಗೆ ಆಯುಷ್ಯ ಅಲ್ಪವಾದರೂ ನಾನು ದೇವರನ್ನು ಪ್ರಾರ್ಥಿಸಿ ದೀರ್ಘ ಆಯುಸ್ಸನ್ನು ಅವರು ಪಡೆಯುವಂತೆ ಪ್ರಯತ್ನಿಸುತ್ತೇನೆ. ನನ್ನ ಪ್ರಯತ್ನವು ಸಫಲವಾಗಲು ತಾವು ಆಶೀರ್ವದಿಸಬೇಕು” ಎಂದು ಪ್ರಾರ್ಥಿಸಿದಳು. ಸಾವಿತ್ರಿಯ ಮನಸ್ಥೈರ್ಯವನ್ನು ಕಂಡು ನಾರದರು ಆಶ್ಚರ್ಯಗೊಂಡರು. ಅವರು ಅಶ್ವಪತಿಯ ಮನಸ್ಸನ್ನು ಬದಲಾಯಿಸಿ ಸತ್ಯವಾನನಿಗೂ ಸಾವಿತ್ರಿಗೂ ವಿವಾಹವನ್ನು ನೆರವೇರಿಸಿದರು. ವಿವಾಹವಾದೊಡನೆ ಸಾವಿತ್ರಿ ತನ್ನ ಪತಿಯೊಂದಿಗೆ ಅವನ ನಾಡಿಗೆ ಹೋದಳು. ಅವರಿಬ್ಬರೂ ಸಂತೋಷದಿಂದ ಇದ್ದರು. ಈ ಸಮಯದಲ್ಲಿ ಶತ್ರು ರಾಜನು ದಂಡೆತ್ತಿ ಬಂದು ಶಾಲ್ವ ದೇಶವನ್ನು ವಶಪಡಿಸಿಕೊಂಡನು. ರಾಜ್ಯವನ್ನು ಬಲಿಕೊಟ್ಟ ಸತ್ಯವಾನನು ತನ್ನ ಪತ್ನಿ ಸಾವಿತ್ರಿ, ದೃಷ್ಟಿಯನ್ನು ಕಳೆದುಕೊಂಡ ತಂದೆ ತಾಯಿಯರೊಡನೆ ಕಾಡಿಗೆ ನಡೆದನು. ಸತ್ಯವಾನನು ಒಂದು ದಿನ ಕಾಡಿನಲ್ಲಿ ಸೌದೆಯನ್ನು ಕಡಿಯುತ್ತಿದ್ದನು. ಅವನೊಂದಿಗೆ ಸಾವಿತ್ರಿಯೂ ಇದ್ದಳು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಸತ್ಯವಾನನಿಗೆ ಎದೆನೋವು ಬಂದು ನರಳಿದನು. ಮೂರ್ಚಿತನಾಗಿ ಕೆಳಗೆ ಬಿದ್ದನು. ದಿಗ್‍ಭ್ರಮೆಗೊಂಡ ಸಾವಿತ್ರಿ ಅವನನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡಳು. ಆಗ ಲೇಸಾಗಿ ಕಣ್ತೆರೆದ ಸತ್ಯವಾನನು ತನ್ನ ಆಯಸ್ಸು ಮುಗಿಯುತ್ತಿದೆ ಎಂದು ತಿಳಿದುಕೊಂಡನು. ಸಾವಿತ್ರಿಯನ್ನು ನೋಡಿ ಕಣ್ಣೀರಿಟ್ಟನು. ಅವಳನ್ನು ಕುರಿತು “ಸಾವಿತ್ರಿ ನಾನು ಅಲ್ಪಾಯು ಎಂದು ತಿಳಿದೂ ಹಟ ಮಾಡಿ ನನ್ನನ್ನೇ ಮದುವೆಯಾದೆ. ಎಂತಹ ತ್ಯಾಗ ಮನೋಭಾವ ನಿನಗೆ! ನಿನ್ನನ್ನು ನೆನೆಸಿಕೊಂಡಾಗ ನನಗೆ ವೇದನೆ ತಡೆಯಲು ಅಸಾಧ್ಯವಾಗಿದೆ. ನನ್ನ ಆಯುಸ್ಸು ಈಗ ಮುಗಿಯುತ್ತಿದೆ” ಎಂದು ಹೇಳಿದನು. ಕೆಲವೇ ಕ್ಷಣಗಳಲ್ಲಿ ಸತ್ಯವಾನನ ಪ್ರಾಣ ಹೋಯಿತು.

ಆಗ ಸಾವಿತ್ರಿ ಮೇಲೆ ನೋಡಿದಳು. ಕೋಣನ ಮೇಲೆ ಬಂದ ಯಮಧರ್ಮರಾಯನು ಪಾಶದ ಹಗ್ಗವನ್ನು ಬೀಸುತ್ತಿರುವುದನ್ನು ಕಂಡಳು. ತಕ್ಷಣ ಸಾವಿತ್ರಿ ಯಮನನ್ನು ನೋಡಿ, “ಯಮಧರ್ಮರಾಯ” ಎಂದು ಕರೆದಳು. ಇದನ್ನು ಕೇಳಿದ ಯಮನು ಆಶ್ಚರ್ಯಗೊಂಡನು. ಸಾವಿತ್ರಿಯನ್ನು ನೋಡಿದ ಅವನು “ಹೆಣ್ಣೇ! ಮನುಷ್ಯರು ಯಾರೂ ನನ್ನನ್ನು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಮಾತನಾಡಲೂ ಸಾಧ್ಯವಿಲ್ಲ. ನಿನ್ನ ಕಣ್ಣಿಗೆ ಮಾತ್ರವೇ ನಾನು ಕಾಣಿಸಿದ್ದೇನೆ. ನೀನು ಯಾವಾಗಲೂ ಭಗವಂತನನ್ನು ಪೂಜಿಸುವ ನಿಜವಾದ ಭಕ್ತೆಯಾದುದರಿಂದ ನಿನಗೆ ನನ್ನನ್ನು ನೋಡಲು ಸಾಧ್ಯವಾಯಿತು. ಹೆಣ್ಣೇ! ಆಯುಸ್ಸು ಮುಗಿದು ಹೋದವರ ಪ್ರಾಣವನ್ನು ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ” ಎಂದು ಹೇಳಿ ಮುಂದೆ ಸಾಗಿದನು. “ಯಮಧರ್ಮರಾಯನೇ ನಿಲ್ಲು, ದೇವಲೋಕದವರನ್ನು ಮನುಷ್ಯರು ಕಂಡರೆ ಪುಣ್ಯವೆಂದು ನಾನು ಕೇಳಿ ತಿಳಿದಿದ್ದೇನೆ. ಅದರ (ಆ ಪುಣ್ಯದ) ಫಲವನ್ನು ನೀನು ನನಗೆ ಕೊಡಬೇಕು ಎಂದು ಸಾವಿತ್ರಿಯು ಕೇಳಿದಳು. “ನೀನು ಏನು ಹೇಳಿದರೂ ನೀನು ಕೇಳುವುದನ್ನು ನನ್ನಿಂದ ಕೊಡಲು ಸಾಧ್ಯವಿಲ್ಲ” ಎಂದು ಹೇಳಿ ಯಮನು ಹೊರಟನು. ಆದರೂ ಸಾವಿತ್ರಿ ಅವನನ್ನು ಹಿಂಬಾಲಿಸಿದಳು. “ಎಲೈ ಹೆಣ್ಣೇ! ನೀನು ಮನುಷ್ಯಳು ನಿನ್ನಿಂದ ನನ್ನನ್ನು ಹಿಂಬಾಲಿಸಲು ಸಾಧ್ಯವಿಲ್ಲ. ನಿನ್ನ ಪತಿಯನ್ನು ಇನ್ನು ಯಾವ ವಿಧದಲ್ಲಿಯೂ ನೀನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅವನ ದೇಹದ ಸಂಸ್ಕಾರಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡು” ಎಂದು ಯಮಧರ್ಮರಾಯನು ಹೇಳಿದನು. ತಕ್ಷಣ ಸಾವಿತ್ರಿ, “ಯಮರಾಯ! ನಾನು ಪತಿವ್ರತೆ ಎಂಬುದು ಸತ್ಯವಾದರೆ ನಾನು ಬೇಡುವ ವರವನ್ನು ನನಗೆ ಕೊಟ್ಟುಬಿಟ್ಟು ಹೋಗು” ಎಂದು ಸ್ಥಿರವಾಗಿ ಹೇಳಿದಳು. ಇದನ್ನು ಕೇಳಿದ ಯಮನಿಗೆ ಅದನ್ನು ಮೀರಿ ನಡೆಯಲು ಸಾಧ್ಯವಾಗಲಿಲ್ಲ. “ಸರಿ... ನಿನಗೆ ಏನು ಬೇಕು?” ಎಂದು ಕೇಳಿದನು.

ಸಾವಿತ್ರಿಯು “ನನ್ನ ಮಾವನವರಿಗೂ ಅತ್ತೆಯವರಿಗೂ ಕಣ್ಣಿನ ದೃಷ್ಟಿ ಮರಳಿ ಬರಬೇಕು” ಎಂದಳು. ಆಗ ಯಮನು “ಸರಿ... ಹಾಗೆಯೇ ಆಗಲಿ” ಎಂದು ವರವಿತ್ತನು. ಇನ್ನೂ ಸಾವಿತ್ರಿ “ನಾವು ಕಳೆದುಕೊಂಡ ರಾಜ್ಯವನ್ನು ನಾವು ಮರಳಿ ಪಡೆಯಬೇಕು” ಎಂದು ಪ್ರಾರ್ಥಿಸಿದಳು. “ಇಷ್ಟೇ ತಾನೇ! ನಿಮ್ಮಿಂದ ರಾಜ್ಯವನ್ನು ಕಿತ್ತುಕೊಂಡವನೇ ನಿಮ್ಮ ಬಳಿಗೆ ಬಂದು ಅದನ್ನು ಒಪ್ಪಿಸುತ್ತಾನೆ” ಎಂದು ವರವನ್ನು ಕೊಟ್ಟು ಯಮನು ಮುಂದೆ ಸಾಗಿದನು. ಆಗ ಸಾವಿತ್ರಿಯು “ಯಮಧರ್ಮರಾಯ! ಇನ್ನು ಒಂದು ವರವನ್ನು ಮಾತ್ರ ಕರುಣಿಸು” ಎಂದು ಮನಸ್ಸು ಕರಗುವಂತೆ ಕೇಳಿಕೊಂಡಳು. ಆಗ “ನನಗೆ ಸಮಯವಾಯಿತು, ಬೇಗ ಕೇಳು” ಎಂದು ಯಮನು ಅವಸರಪಡಿಸಿದನು. ಸಾವಿತ್ರಿಯು “ನನಗೆ ಸಂತಾನ ಭಾಗ್ಯವು ಬೇಕು” ಎಂದು ಕೇಳಲು ಅವಸರದಲ್ಲಿದ್ದ ಯಮನು “ಅದನ್ನೂ ಕೊಡುತ್ತೇನೆ” ಎಂದು ಹೇಳಿ ಹೊರಟನು. ಆಗ ಸಾವಿತ್ರಿ ಉಚ್ಚ ಧ್ವನಿಯಲ್ಲಿ ಮಾತನಾಡಲು ಪ್ರಾರಂಭಿಸಿದಳು. “ಯಮಧರ್ಮರಾಯ! ತಮ್ಮ ಕರುಣೆಯನ್ನು ಹೇಗೆ ಹೊಗಳುವುದು ಎಂದೇ ತಿಳಿಯುತ್ತಿಲ್ಲ. ನಾನು ಕೇಳಿದ ವರವೆಲ್ಲವನ್ನೂ ಕೊಟ್ಟಿರಿ. ಅದು ಸರಿ... ನನಗೆ ಸಂತಾನಭಾಗ್ಯ ಕರುಣಿಸಿದಿರಲ್ಲಾ! ಪತಿಯಿಲ್ಲದೆ ಸಂತಾನ ಹೇಗೆ ಲಭಿಸುವುದು?” ಇದನ್ನು ಕೇಳಿದ ಯಮನು ಅತ್ಯಾಶ್ವರ್ಯವನ್ನು ಹೊಂದಿದನು. “ಎಲೈ ಹೆಣ್ಣೇ! ನೀನು ಹೇಗೋ ಸುತ್ತಿ ಬಳಸಿ ಮಾತನಾಡಿ ನನ್ನ ತಲೆಯನ್ನೇ ಕೆಡಿಸಿಬಿಟ್ಟೆ. ಇದುವರೆಗೂ ನಾನು ಯಾರಿಗೂ ಯಾವ ವರವನ್ನೂ ಕೊಟ್ಟಿಲ್ಲ. ಮಾರ್ಕಂಡೇಯನ ಪ್ರಾಣವನ್ನು ತೆಗೆದುಕೊಂಡಾಗ ಕೂಡ ಪರಮ ಶಿವನೇ ನೇರವಾಗಿ ಬಂದು ನನ್ನನ್ನು ಎದುರಿಸಿ ಸೋತನು. ಆಗಲೂ ನಾನು ಚಲಿಸಲಿಲ್ಲ. ಆದರೆ, ಮನುಷ್ಯ ಸ್ತ್ರೀಯಾದ ನೀನು ನಿನ್ನ ವಾಕ್‍ಚಾತುರ್ಯದಿಂದ ನನ್ನನ್ನು ಸೋಲಿಸಿಬಿಟ್ಟೆ. ನೀನು ಸುಮಂಗಲಿಯಾಗಿ ಪುತ್ರಭಾಗ್ಯವನ್ನು ಪಡೆದು ಬಹುಕಾಲ ಸಂತೋಷವಾಗಿ ಬಾಳು” ಎಂದು ಆಶೀರ್ವದಿಸಿ ಯಮನು ಸತ್ಯವಾನನಿಗೆ ಪ್ರಾಣದಾನ ಮಾಡಿದನು. ನಿದ್ದೆಯಿಂದ ಎದ್ದವನಂತೆ ಸತ್ಯವಾನನು ಮತ್ತೆ ಜೀವವನ್ನು ಪಡೆದು ಎದ್ದನು. ನಡೆದದ್ದೆಲ್ಲವನ್ನೂ ಸಾವಿತ್ರಿ ಸತ್ಯವಾನನಿಗೆ ವಿವರಿಸಿದಳು. ಅವಳ ಅತ್ತೆ ಮಾವಂದಿರು ದೃಷ್ಟಿಯನ್ನು ಪಡೆದರು. ಯಮನು ಹೇಳಿದಂತೆ ರಾಜ್ಯವು ಬಂದೊದಗಿತು. ಎಲ್ಲಾ ಸೌಭಾಗ್ಯವನ್ನೂ ಪಡೆದು ಅವರು ಬಾಳಿದರು. ನಾರದರು ಅವರಿಗೆ ದರ್ಶನವನ್ನು ಕೊಟ್ಟು ಆಶೀರ್ವದಿಸಿದರು.