ಸಾಧು ಸಂತರ ಕಥೆಗಳು

ನೈಜ ಗುರು ಭಕ್ತಿ(ಸಂತ ರಾಮದಾಸ ಅವರ ಜೀವನದ ಕಥೆ) ಸಂತ ಬಾಂಧವರಲ್ಲಿ ರಾಮದಾಸ್ ಎಂಬುವವರೂ ಗಣ್ಯರು. ಭಾರತೀಯತೆ, ಭಾವೈಕ್ಯತೆ, ರಾಷ್ಟ್ರೈಕ್ಯತೆಯನ್ನು ಜನಮನದಲ್ಲಿ ಮೂಡಿಸಲು ಕಾಯಾ ವಾಚಾ ಮನಸಾ ಶ್ರಮಿಸುತ್ತಿದ್ದರು. ಅವರ ಆಶ್ರಮ ಊರಿಂದ ಹೊರಗೆ. ಊರಿಂದ ಹೊರಗಿದ್ದರೂ, ಊರಿನ ಹಿತದ ಬಗ್ಗೆಯೇ ಅವರ ಚಿಂತೆ. ಊರ ಹೊರಗೆ ಇವರದೇ ಒಂದು ಆಶ್ರಮ ಇತ್ತು. ಆಶ್ರಮದಲ್ಲಿ ಸಾಕಷ್ಟು ಮಂದಿ ಶಿಷ್ಯರೂ ಇದ್ದರು. ಈ ಶಿಷ್ಯವೃಂದದಲ್ಲಿ ರಾಜ-ಮಹಾರಾಜರೂ ಸೇರಿದ್ದರು. ಎಲ್ಲರಿಗೂ ಸಂತ ರಾಮದಾಸರ ಬಗ್ಗೆ ಅಪರಿಮಿತ ಭಕ್ತಿ, ಅಪಾರ ಶ್ರದ್ಧೆ. ಒಂದು ಬಾರಿ ರಾಮದಾಸರಿಗೆ ಶಿಷ್ಯರ ಗುರುಭಕ್ತಿಯನ್ನು ಪರೀಕ್ಷಿಸಲು ಮನಸ್ಸಾಯಿತು. ತಮ್ಮ ತೊಡೆಯ ಮೇಲೆ ದೊಡ್ಡ ಗುಳ್ಳೆ ಎದ್ದಿರುವಂತೆ ತೋರಿಸುವ ರೀತಿಯಲ್ಲಿ ಪಟ್ಟಿ ಕಟ್ಟಿಕೊಂಡರು. ಕೃಷ್ಣಾಜೀನದ ಮೇಲೆ ನೋವನ್ನು ಅನುಭವಿಸುವ ರೀತಿಯಲ್ಲಿ “ಅಯ್ಯೋ, ಅಯ್ಯಮ್ಮಾ, ಅಯ್ಯಪ್ಪಾ” ಎಂದು ನರಳಾಡುತ್ತಾ ಗುಳ್ಳೆಯ ಮೇಲೆ ಕೈ ಇಟ್ಟುಕೊಂಡು, ನಟನೆ ಎನಿಸದ ರೀತಿಯಲ್ಲಿ ಹೊರಳಾಡತೊಡಗಿದರು. ಶಿಷ್ಯರೆಲ್ಲರೂ ಗಾಬರಿಗೊಂಡು, ಗುರುವರ್ಯರ ಸುತ್ತಲೂ ನೆರೆದರು. ಆಚಾರ್ಯರ ವೇದನೆಯನ್ನು ಕಂಡು, ಅವರೆಲ್ಲರ ಕರುಳು ಮಿಡಿಯಿತು. ಕಣ್ಣುಗಳಿಂದ ಕಣ್ಣೀರು ಬಿಸಿ-ಬಿಸಿಯಾಗಿ, ನಿಧಾನವಾಗಿ ಕೆನ್ನೆಗಳ ಮೇಲೆ ಟಾಪಕ್-ಟಪಕ್ ಎಂದು ಹನಿಹನಿಯಾಗಿ ಉದುರತೊಡಗಿತು. ಗುರುವರ್ಯರು ನರಳುವಿಕೆಯಲ್ಲಿಯೇ ನುಡಿದರು : “ಶಿಷ್ಯರೇ, ನನ್ನನ್ನು ನಿಮ್ಮಲ್ಲಿ ಯಾರೊಬ್ಬರೂ ಉಳಿಸಲಾರಿರಾ?

ಶಿಷ್ಯರು ಒಕ್ಕೊರಲಿನಿಂದ ಮರುಕದ ದನಿಯಲ್ಲಿ ಕೇಳಿದರು : “ಅಪ್ಪಣೆ ಆಗಲಿ ಗುರುಗಳೇ, ನಾವೇನು ಮಾಡಬೇಕು? ಎಂಬುದರ ಬಗ್ಗೆ ಅಪ್ಪಣೆ ಆಗಲಿ. ನಾವೆಲ್ಲರೂ ನಿಮ್ಮ ಸೇವೆಗೆ ಸಿದ್ಧರಿದ್ದೇವೆ. ನಿಮ್ಮ ಪ್ರಾಣವೇ ನಮ್ಮ ಉಸಿರು.” “ನೀವೇನು, ಅಂತಹ ಬೆಟ್ಟ ಹೊರುವ ಕಾರ್ಯವನ್ನು ಮಾಡಬೇಕಿಲ್ಲ. ಯಾರಾದರೂ ಈ ಕೀವು ಕಟ್ಟಿರುವ ಗುಳ್ಳೆಯನ್ನು ಜೋರಾಗಿ ನಿಮ್ಮ ಎರಡೂ ಮುಷ್ಟಿಗಳಿಂದ ಹಿಸುಕಿ, ಬಂದ ಕೀವನ್ನು ಕುಡಿದುಬಿಡಿ. ಕಟ್ಟಿರುವ ಪಟ್ಟಿ ಬಿಚ್ಚಬೇಡಿ.” ಗುರು ಆಜ್ಞೆಯನ್ನು ಕೇಳಿದ ಕೂಡಲೇ ಸಾಕಷ್ಟು ಮಂದಿ ಶಿಷ್ಯರು ಕಸಿವಿಸಿಗೊಂಡು ಹಿಂಜರಿದರು. ಒಬ್ಬ ಶಿಷ್ಯ ಮಾತ್ರ ಮುಂದೆ ಬಂದ. ಗುಳ್ಳೆಯ ಭಾಗಕ್ಕೆ ಬಾಯಿಟ್ಟ. ಎಲ್ಲಿ ಗುರುಗಳಿಗೆ ನೋವಾಗುವುದೋ! ಎಂದು ತಳಮಳಿಸುತ್ತಾ, ಗುಳ್ಳೆಯ ಭಾಗವನ್ನು ನಿಧಾನವಾಗಿ ಹಿಸುಕತೊಡಗಿದ. ಕಟ್ಟಿದ ಪಟ್ಟಿಯಿಂದ ಹೊರಗೆ ಬಂದ ಕೀವನ್ನು ಚೀಪತೊಡಗಿದ, ತುಂಬಾ ಸಿಹಿಯಾಗಿತ್ತು. ಗುರು ಮಹಿಮೆ ಎಷ್ಟೊಂದು ಅಪಾರ! ಅಂದುಕೊಂಡು, ಗುಳ್ಳೆಯ ಭಾಗವನ್ನು ಅದುಮದುಮಿ, ಬೇಗ ಬೇಗ ಹೊರಬಂದ ಕೀವನ್ನು ಸಂತೋಷದಿಂದ ಕುಡಿದು ಮುಗಿಸಿದ. ಗುರುಗಳು ಅವನ ಬೆನ್ನು ತಟ್ಟುತ್ತಾ, ನಗುತ್ತಾ ಹೇಳಿದರು : “ಶಹಬಾಶ್, ನಿನ್ನ ಗುರುಭಕ್ತಿಯನ್ನು ಮೆಚ್ಚಿದೆ. ನಾನು ನಿಮ್ಮನ್ನು ಪರೀಕ್ಷಿಸಲೆಂದೇ ಹಾಗೆ ಮಾಡಿದ್ದೆ. ನನಗೆ ಯಾವ ಗುಳ್ಳೆಯೂ ಆಗಿರಲಿಲ್ಲ. ಒಂದು ತುಂಬಾ ಮಾಗಿದ ಮಾವಿನ ಹಣ್ಣನ್ನು ತೊಡೆಯ ಮೇಲಿಟ್ಟು, ಬಿಗಿಯಾಗಿ ತೆಳುವಾದ ಬಟ್ಟೆಯಿಂದ ಪಟ್ಟಿ ಕಟ್ಟಿಕೊಂಡಿದ್ದೆ.” ಶಿಷ್ಯರೆಲ್ಲರೂ ಗುರುಗಳ ಬಾಯಿಂದ ಬಂದ ಮಾತು ಕೇಳಿ ಬೆರಗಾದರು. ಈ ಪೆದ್ದ ಶಿಷ್ಯ ಯಾರು ಗೊತ್ತಾ? ಮರಾಠಾ ಸಾಮ್ರಾಜ್ಯದ ಸ್ಥಾಪಕ ಎನಿಸಿದ ಛತ್ರಪತಿ ಶಿವಾಜಿ.