ನೀತಿ ಕಥೆಗಳು

ದೇಹ ತ್ಯಜಿಸುವಾಗ ವಸ್ತುಗಳ ಚಿಂತನೆ ಒಬ್ಬನಿಗೆ ಸಾವು ಸಮೀಪಿಸಿದೆ. ಅವನ ಇಂದ್ರಿಯಗಳು ಒಂದೊಂದೇ ಹೋಗಿ ಪ್ರಾಣದಲ್ಲಿ ಸೇರಿ ತಮ್ಮ ಚಲನ ವಲನವನ್ನು ನಿಲ್ಲಿಸುವ ಕಾಲ. ಕಣ್ಣು ತೆರೆದಿದ್ದರು. ಆಗ ಕಾಣುವುದಿಲ್ಲ. ಕಿವಿ ಕೇಳುವುದಿಲ್ಲ. ನಾಲಗೆಗೆ ರುಚಿಯನ್ನು ಅರಿಯುವ ಶಕ್ತಿ ಇರುವುದಿಲ್ಲ. ಮೂಗಿಗೆ ವಾಸನೆ ಅರಿಯುವ ಶಕ್ತಿ ಇರುವುದಿಲ್ಲ. ಮನಸ್ಸಿಗೆ ಇಂದ್ರಿಯಗಳ ಮೇಲಿನ ಅಧಿಕಾರ ತಪ್ಪುವ ಕಾಲ. ಇಂದ್ರಿಯಗಳು ಅಂತಃಕರಣ ಮತ್ತು ಪ್ರಾಣಗಳು ಮುಖ್ಯಪ್ರಾಣದಲ್ಲಿ ಸೇರಿ ಈ ದೇಹವನ್ನು ಬಿಟ್ಟು ಪ್ರಾಣ ಪ್ರಯಾಣ ಮಾಡುವ ಕಾಲ. ಆಗ ಕ-ಕ-ಕ ಎಂದ. ಸುತ್ತ ಕುಳಿತು ನಿಂತುಕೊಂಡಿದ್ದ ಮಕ್ಕಳು ಹೆಂಡತಿ ಬಾಂಧವರು ‘ಎಲ್ಲಿಯೋ ಹಣ ಇಟ್ಟಿದ್ದಾನೆ. ಮೊದಲೇ ಹೇಳಲಾರದೆ ಈಗ ಹೇಳಬೇಕೆಂದು ಪ್ರಯತ್ನ ಮಾಡುತ್ತಾನೆ. ಈಗ ಮಾತಾಡುವುದು ಹೇಗೆ?’ ಎಂದರು. ಒಬ್ಬ ಓಡಿ ಉತ್ತಮವಾದ ವೈದ್ಯನನ್ನು ಕಂಡು ತನ್ನ ತಂದೆಯ ಸ್ಥಿತಿಯನ್ನು ಹೇಳಿ ಏನಾದರೂ ಮಾಡಿ ಮಾತಾಡುವಂತೆ ಮಾಡಿದರೆ ನಿಮಗೆ ಎಷ್ಟು ಹಣ ಕೇಳಿದರೂ ಕೊಡುತ್ತೇವೆಂದು ಬೇಡಿದರು. ಆಗ ಆ ವೈದ್ಯರು ‘ನೋಡಿ ನಿಮ್ಮ ತಂದೆಗೆ ಕಾಲ ಸಮೀಪಿಸಿದೆ. ನಾನು ಇಂಜಕ್ಷನ್ ಕೊಡುತ್ತೇನೆ. 1-2 ನಿಮಿಷ ಮಾತ್ರ ಇದ್ದು ಮಾತಾಡಿ ಸಾಯುತ್ತಾರೆ. ಈಗಿನ ಪರಿಸ್ಥಿತಿಯಲ್ಲಿದ್ದರೆ ಇನ್ನು ಒಂದು ಎರಡು ಗಂಟೆ ಇರಬಹುದು’ ಎಂದರು. ಆಗ ಮಕ್ಕಳೆಲ್ಲಾ ‘ಹೇಗೋ ಸಾಯುತ್ತಾನೆ. ಈಗಲೇ ಸಾಯಲಿ ಎಲ್ಲಿ ಹಣ ಇಟ್ಟಿದ್ದಾನೋ ಅದನ್ನು ಹೇಳಿ ಸಾಯಲಿ’ ಎಂದರು. ಡಾಕ್ಟರ್ ಇಂಜಕ್ಷನ್ ಕೊಟ್ಟರು. ಮಾತಾಡಿದ ‘ಹೇ ಮೂರ್ಖರೇ, ನಿಮಗೆ ತಿಳಿಯುವುದಿಲ್ಲವೆ. ಆ ಕರು (ಕ), ಕಸಪರಿಕೆಯನ್ನು (ಕ) ಕಡಿಯುತ್ತಿದೆ (ಕ)’ ಎಂದು ಹೇಳಿ ಸತ್ತನು. ನೋಡಿ ಸಾ ಯುವಾಗ ಒಂದು ಹಳೆ ಕಸಪರಕೆಯೂ ಇವನನ್ನು ಬಿಡುವುದಿಲ್ಲ, ಇದೇ ಬಂಧ. ಸಂಸಾರ ಇಂತಾದ್ದು. ಜಗತ್ತಿನ ಸಂಬಂಧ ಇಂತಹ ಬಿಗಿಯಾದುದು. ಇದರಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟ. ಇದನ್ನೇ ಗೀತೆಯ 8-06ರಲ್ಲಿ
ಯಂ ಯಂ ವಾಪಿ ಸ್ಮರನ್ ಭಾವಂ |
ತ್ಯಜತ್ಯಂತೇ ಕಲೇವರಮ್ |
ತಂ ತಮೇವೈತಿ ಕೌಂತೇಯ |
ಸದಾ ತದ್ಭಾವ ಭಾವಿತಃ |

ಇದರ ಅರ್ಥ ಮರಣ ಕಾಲದಲ್ಲಿ ಯಾವುದನ್ನು ಸ್ಮರಿಸುತ್ತಾ ದೇಹವನ್ನು ಬಿಡುವರೋ ಆಯಾಯ ವಾಸನಾ ಬಲದಿಂದ ಅವರಿಗೆ ಅಂತಹ ಗತಿಯೇ ಆಗುವುದು.