ಮಹಾಭಾರತ ಕಥೆಗಳು

ವೇದವ್ಯಾಸರ ಜೀವನ ರಹಸ್ಯ - ಹೊಸದು ದೇಶಾದ್ಯಂತ ಗುರುಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯೆನ್ನು ಆಷಾಢ ಶುದ್ಧ ಪೂರ್ಣಿಮೆಯಂದು ಆಚರಿಸಲಾಗುವುದು. ಮತ್ತೊಂದು ವಿಶೇಷವೇನೆಂದರೆ ಒಂದು ವರ್ಷದಲ್ಲಿ ನಾಲ್ಕು ವ್ಯಾಸ ಪೂರ್ಣಿಮೆ ಬರುವುದು,
೧) ಆಷಾಢ ಶುದ್ಧ ಪೂರ್ಣಿಮೆ - ಇದು ವೇದವ್ಯಾಸರು ಅವತರಿಸಿದ ದಿನ.
೨) ಕಾರ್ತಿಕ ಶುದ್ಧ ಪೂರ್ಣಿಮೆ - ವ್ಯಾಸರಿಗೆ ಗುರುವಿನ ಅನುಗ್ರಹವಾದ ದಿವಸ.
೩) ಮಾಘ ಶುದ್ಧ ಪೂರ್ಣಿಮೆ - ವೇದಗಳನ್ನು ವಿಂಗಡನೆ ಮಾಡಿದ ದಿವಸ.
೪) ವೈಶಾಖ ಶುದ್ಧ ಪೂರ್ಣಿಮೆ - ವೇದವ್ಯಾಸರು ಅವತಾರ ಸಮಾಪ್ತಿ ಮಾಡಿದ ದಿನ .

ಈ ನಾಲ್ಕು ವ್ಯಾಸ ಪೂರ್ಣಿಮೆಯಲ್ಲಿ ಆಷಾಢ ಶುದ್ಧ ಹುಣ್ಣಿಮೆಯನ್ನು ಎಲ್ಲರೂ ಗುರುಪೂರ್ಣಿಮೆ ಎಂದು ಆಚರಿಸುವ ಸಂಪ್ರದಾಯವಿದೆ. ಈಗ ನೋಡೋಣ ವೇದವ್ಯಾಸರ ಅವತಾರ ರಹಸ್ಯ.

ಹಿಂದೆ ದ್ವಾಪರ ಯುಗದ ಆದಿಯಲ್ಲಿ ಚೇದಿ ದೇಶದಲ್ಲಿ ಕೃತಿ ರಾಜನು ರಾಜ್ಯಭಾರ ಮಾಡುತ್ತಿದ್ದನು, ಇವನಿಗೆ ಒಬ್ಬನೇ ಮಗ ಉಪರಿಚರವಸು ಎಂದು ಹೆಸರು. ಇವನಿಗೆ ಚಿಕ್ಕಂದಿನಿಂದಲೇ ಸತ್ಯ ಧರ್ಮ ಆಚರಣೆಯಿಂದ ವೈರಾಗ್ಯ ಉಂಟಾಯಿತು. ವೈರಾಗ್ಯದಿಂದ ರಾಜ್ಯ ಭಾರವನ್ನೆಲ್ಲ ತನ್ನ ಮಂತ್ರಿಗೆ ವಹಿಸಿ ತಪಸ್ಸು ಮಾಡಲು ಅರಣ್ಯಕ್ಕೆ ಹೊರಟನು ಈ ವಿಷಯವು ದೇವೇಂದ್ರನಿಗೆ ತಿಳಿಯಿತು ಇಂದ್ರಾದಿ ದೇವತೆಗಳು ಮಾನವರನ್ನು ಆತ್ಮ ಜ್ಞಾನ ಪಡೆಯಲು ಬಿಡುವುದಿಲ್ಲ ಅದರಂತೆ ಇಂದ್ರನು ಅಸೂಯೆಯಿಂದ ವಸುವಿನ ತಪಸ್ಸನ್ನು ಕೆಡಿಸಲು ಅವನಲ್ಲಿಗೆ ಬಂದು, "ನೀನು ರಾಜ, ನೀನು ತಪಸ್ಸು ಮಾಡುತ್ತಾ ಕುಳಿತರೆ ನಿನಗೆ ಮದುವೆಯಾಗುವುದಿಲ್ಲ, ಮಕ್ಕಳಾಗುವುದಿಲ್ಲ ,ಮಕ್ಕಳಾಗದೇ ಹೋದರೆ ಪಿತೃಗಳಿಗೆ ತರ್ಪಣ ಕೊಡುವವರು ಯಾರು ಇರುವುದಿಲ್ಲ" ಆದ್ದರಿಂದ ನೀನು ತಪಸ್ಸನ್ನು ನಿಲ್ಲಿಸು ಎಂದ. ನಾನು ನಿನಗೆ ಒಂದು ವಿಮಾನ ಕೊಡುತ್ತೇನೆ ಅದರಲ್ಲಿ ಕುಳಿತು ಮೂರು ಲೋಕಗಳನ್ನು ಸಂಚರಿಸಬಹುದು ಹಾಗೂ ಒಂದು ದಂಡವನ್ನು ಕೊಡುತ್ತೇನೆ ಅದು ಅಪಾರ ಶಕ್ತಿ ಉಳ್ಳದ್ದು, ಅದರಿಂದ ಸರ್ವ ರಾಜರು ನಿನ್ನ ಅಧೀನರಾಗಿ ನೀನು ಹೇಳಿದಂತೆ ಕೇಳುತ್ತಾರೆ ಮತ್ತು ಒಂದು ಹೂ ಮಾಲೆಯನ್ನು ಕೊಡುತ್ತೇನೆ ಅದನ್ನು ಧರಿಸಿದರೆ ಎಲ್ಲರೂ ನಿನ್ನನ್ನು ಪೂಜಿಸುತ್ತಾರೆ, ನಿನಗೆ ಶತ್ರುಗಳೇ ಇರುವುದಿಲ್ಲ ಎಂದು ಹೇಳಿ ವಸುವಿಗೆ ವಿಮಾನ ದಂಡ ಹೂಮಾಲೆ ಕೊಟ್ಟನು. ವಸುವಿಗೆ ತುಂಬಾ ಸಂತೋಷವಾಯಿತು. ವಿಮಾನದಲ್ಲಿ ಕುಳಿತು ಆಕಾಶದಲ್ಲಿ ಹಾರಾಡುವಾಗ ಒಂದು ಪರ್ವತ ಒಂದು ನದಿಗೆ ಅಡ್ಡಲಾಗಿ ಕುಳಿತು ತೊಂದರೆ ಕೊಡುತ್ತಿತ್ತು ಅದನ್ನು ನೋಡಿದ ವಸುವು ಶಕ್ತಿಮತಿ ನದಿಗೆ ಅಡ್ಡಲಾಗಿರುವ ಪರ್ವತವನ್ನು ಪಕ್ಕಕ್ಕೆ ತಳ್ಳಿದ, ಆಗ ಶಕ್ತಿಮತಿಗೆ ಅಪಾರ ಸಂತೋಷವಾಯಿತು ಗರಿಕೆ ಎಂಬ ಕನ್ಯೆಯನ್ನು ವಸುಪದನೆ೦ಬ ಪುತ್ರನನ್ನು ಶಕ್ತಿ ಮತಿಯು ರಾಜ ವಸುನಿಗೆ ಕೊಟ್ಟಳು. ಗರಿಕೆಯನ್ನು ಮದುವೆಯಾದ ವಸು, ರಾಜ್ಯಭಾರ ಮಾಡಲು ವಸುಪದನನ್ನು ಬಿಟ್ಟು, ತಾನು ಹಾಯಾಗಿ ಲೋಕಸಂಚಾರ ಮಾಡುವಾಗ ಒಂದು ಸಾರಿ ಆಯಾಸವಾಗಿ ಒಂದು ಮರದ ಕೆಳಗೆ ಮಲಗಿದ್ದಾನೆ. ಅವನಿಗೆ ಸ್ವಪ್ನ ಬಿತ್ತು ಗರಿಕೆಯೊಡನೆ ಸೇರಿದಂತೆ ಆಯಿತು, ವೀರ್ಯಸ್ಖಲನವಾಯಿತು ಎದ್ದು ನೋಡುತ್ತಾನೆ, ಎಂದೆಂದು ಆಗದ ಸ್ವಪ್ನ ಬಿದ್ದಿದೆಯೆಂದು ಆ ವೀರ್ಯವನ್ನು ಒಂದು ಎಲೆಯಲ್ಲಿ ಸಂಪುಟ ಮಾಡಿ ಗಿಡುಗನ ಮುಖಾಂತರ ಗರಿಕೆಗೆ ಕಳುಹಿಸಿದನು. ದಾರಿ ಮಧ್ಯೆ ಗಿಡುಗ ಹೋಗುವಾಗ ಮತ್ತೊಂದು ಗಿಡುಗ ತಿನ್ನುವ ವಸ್ತು ಇದೆಯೆಂದು ಅದರ ಜೊತೆ ಜಗಳ ಮಾಡಿದಾಗ, ವೀರ್ಯವು ಯಮುನಾ ನದಿಯಲ್ಲಿ ಬಿದ್ದಾಗ , ಕೂಡಲೇ ಅದಕ್ಕಾಗಿ ಕಾಯುತ್ತಿದ್ದ ಅದ್ರಿಕೆ ಎಂಬ ಅಪ್ಸರೆ ಬ್ರಹ್ಮನ ಶಾಪದಿಂದ ಮತ್ಸ್ಯಳಾಗಿ ಯಮುನೆಯಲ್ಲಿದ್ದು ವೀರ್ಯವನ್ನು ಬಕ್ಷಿಸಿತು. ಆಕೆಯ ಹೊಟ್ಟೆಯಲ್ಲಿ ಮತ್ಸ್ಯಗಂಧಿನಿ ಎಂಬ ಪುತ್ರಿ, ಮತ್ಸ್ಯಗಂಧ ಎಂಬ ಪುತ್ರನನ್ನು ಪಡೆದು ಶಾಪ ವಿಮುಕ್ತಿಯಾಗಿ ದೇವಲೋಕಕ್ಕೆ ಹೋದಳು.

ದಾಶರಥನೆಂಬ ಬೆಸ್ತನಲ್ಲಿ ಬೆಳೆದ ಮತ್ಸ್ಯಗಂಧಿನಿಯೂ ದೊಡ್ಡವಳಾಗಿ ತಂದೆಯ ಕೆಲಸದಲ್ಲಿ ಸಹಾಯವನ್ನು ಮಾಡುತ್ತಾ ಜನರನ್ನು ಈ ದಡದಿಂದ ಆ ದಡಕ್ಕೆ ದೋಣಿಯಲ್ಲಿ ಬಿಡುತ್ತಿದ್ದಳು. ಒಂದು ದಿವಸ ಧರ್ಮ ಕರ್ಮ ಸಂಯೋಗದಿಂದ ಚಾತುರ್ಮಾಸ್ಯ ವ್ರತವನ್ನು ಮಾಡುವ ನಿಮಿತ್ತ ಪರಾಶರ ಮುನಿಗಳು ಅಲ್ಲಿಗೆ ಬಂದರು ಮತ್ಸ್ಯಗಂಧಿಯನ್ನು ನೋಡಿ ದೋಣಿಯಲ್ಲಿ ನನ್ನನ್ನು ಆ ದಡಕ್ಕೆ ಸೇರಿಸಬೇಕು ಎಂದು ಕೇಳಿದಾಗ ಅದಕ್ಕೆ ಅವಳು ಒಪ್ಪಿದಳು. ದೋಣಿಯಲ್ಲಿ ಹೋಗುವಾಗ ಪರಾಶರ ಮುನಿಗಳು ನನ್ನನ್ನು ಮದುವೆಯಾಗು ಎಂದಾಗ ನನ್ನ ತಂದೆಯ ಅಪ್ಪಣೆಯನ್ನು ಕೇಳಬೇಕು ಎಂದಳು ಆಗ ಮುನಿಗಳು "ನಿನ್ನ ಕನ್ಯತ್ವಕ್ಕೆ ಧಕ್ಕೆ ಬರದಂತೆ ಈ ಲೋಕಕ್ಕೆ ಜಗತ್ಪ್ರಸಿದ್ಧಿಯಾದ ಒಬ್ಬ ವ್ಯಕ್ತಿಯು ಹುಟ್ಟುವವನೆ೦ದು ಹೇಳಿ" ತನ್ನ ಕಮಂಡಲದ ನೀರನ್ನು ಸಿಂಪಡಿಸಿ ಸುತ್ತಲೂ ಕತ್ತಲೆ ಆವರಿಸುವಂತೆ ಮಾಡಿ ಅವಳನ್ನು ಕೂಡಿದ,ಆ ಗರ್ಭ ಶಿಶುವೆ ಮು೦ದೆ ಜಗತ್ಪ್ರಸಿದ್ಧಿ ಯಾದ "ವೇದವ್ಯಾಸ". ಅವನು ನದಿ ಮಧ್ಯದಲ್ಲಿ ಹುಟ್ಟಿದ್ದರಿ೦ದ ಕೃಷ್ಣದ್ವೈಪಾಯನ ಎಂಬ ಹೆಸರು ಬಂದಿತು. ಅವನೇ ಮುಂದೆ ನಾಲ್ಕು ವೇದಗಳನ್ನು ವಿಂಗಡನೆ ಮಾಡಿ, ಹದಿನೆಂಟು ಪುರಾಣಗಳು, ಉಪನಿಷತ್ತು, ಗೀತೆ, ಮಹಾಭಾರತ ಎಲ್ಲವನ್ನೂ ರಚಿಸಿದನು. ಅ೦ತಹ ಮಹಾತ್ಮನು ಅವತರಿಸಿದ ಈ ದಿನವೇ ಗುರುಪೂರ್ಣಿಮೆ ಅಥವ ವ್ಯಾಸ ಹುಣ್ಣಿಮೆ ಎಂದು ಪ್ರಸಿದ್ಧವಾಯಿತು.

ಮುಂದೆ ಈ ವೇದವ್ಯಾಸರೇ ತನ್ನ ತಾಯಿಗೆ ಸತ್ಯವತಿ ಎಂಬ ಹೆಸರಿಟ್ಟರು. ಇವಳೆ ಮು೦ದೆ ಶಂತನು ಎಂಬ ಚಕ್ರವರ್ತಿಯ ಜೊತೆಗೆ ಮದುವೆ ಮಾಡಿಕೊಂಡು, ಕೌರವರು ಪಾಂಡವರ ಕುಲಕ್ಕೆ ನಾಂದಿ ಹಾಡಿದಳು.

ವೇದವ್ಯಾಸರು ಅನೇಕ ಗ್ರಂಥಗಳನ್ನು ರಚಿಸಿ,ನಮ್ಮ ಹಿಂದೂ ಧರ್ಮದ ಭದ್ರ ಬುನಾದಿಯನ್ನು ಹಾಕಿದರು ಆದ್ದರಿಂದಲೇ ಅವರನ್ನು ಗುರು ಎಂದು ಸ್ವೀಕರಿಸಿ ,ಅವರು ಅವತಾರ ಮಾಡಿದ ದಿನದಂದು ವ್ಯಾಸ ಅಥವಾ ಗುರು ಪೂರ್ಣಿಮೆ ಎ೦ದು ಭಾರತಾದ್ಯಂತ, ಈ ದಿನದಂದು ಗುರುವನ್ನು ಭಕ್ತಿಯಿಂದ ಪೂಜಿಸಲಾಗುವುದು.