ಕೀಚಕನ ವಧೆ
ನಾರದರ ಆಶೀರ್ವಾದವನ್ನು ಪಡೆದು ಪಾಂಡವರು ವಿರಾಟ ನಗರದ ಕಡೆಗೆ ಪ್ರಯಾಣ ಬೆಳೆಸಿದರು. ಧರ್ಮರಾಜನು ತನ್ನ ಸಹೋದರರನ್ನು ವೇಷ ಬದಲಾಯಿಸಿಕೊಂಡು ವಿರಾಟನ ಅರಮನೆಯನ್ನು ಪ್ರವೇಶ ಮಾಡೋಣ ಎಂದನು. ಉಳಿದ ಪಾಂಡವರು ತಮ್ಮ ಸಹೋದರನ ಮಾತುಗಳಿಗೆ ಒಪ್ಪಿದರು.
ಮಾರನೇ ದಿನ ಧರ್ಮರಾಜನೇ ಮೊದಲಿಗೆ ಬ್ರಾಹ್ಮಣ ವೇಷವನ್ನು ಧರಿಸಿ, ಹಣೆಗೆ ವಿಭೂತಿಯನ್ನು ಬಳಿದುಕೊಂಡ. ವಿರಾಟ ರಾಜನು ಅವನಿಗೆ ಪುರೋಹಿತನ ಕೆಲಸವನ್ನು ಕೊಟ್ಟ. ಭೀಮನು ಬಾಣಸಿಗನಾಗಿ ಕೆಲಸಕ್ಕೆ ಸೇರಿದ. ಅರ್ಜುನ ಬೃಹನ್ನಳೆಯಾಗಿ ಕೆಲಸಕ್ಕೆ ಹಾಜರಾದ. ನಕುಲ, ಸಹದೇವರು ಗೊಲ್ಲ ಹಾಗೂ ಅಶ್ವಪಾಲಕರಾಗಿ ಕೆಲಸಕ್ಕೆ ಸೇರಿದರು. ಆದರೆ ದ್ರೌಪದಿ ಸೈರಂಧ್ರಿಯ ವೇಷದಲ್ಲಿ ಅರಮನೆಗೆ ಬಂದು ರಾಣಿ ಸುದೇಷ್ಣೆಯ ಬಳಿ ಪರಿಚಾರಿಕೆಯಾಗಿ ಕೆಲಸಕ್ಕೆ ಸೇರಿದಳು. ಹೀಗೆ ಪಾಂಡವರ ಬಳಗದ ಐದು ಮಂದಿ ವಿರಾಟರಾಜನ ಆಸ್ಥಾನ ಹಾಗೂ ಅರಮನೆಯಲ್ಲಿಯೇ ದೈವಾನುಗ್ರಹದಿಂದ ಕೆಲಸಗಳನ್ನು ಉಪಾಯಾಂತರದಿಂದ ಒದಗಿಸಿಕೊಂಡು, ದಿನ ಕಳೆಯುತ್ತಿದ್ದರು.
ವಿರಾಟ ರಾಜನು ನೆಪ ಮಾತ್ರಕ್ಕೇ ರಾಜ್ಯವನ್ನಾಳುತ್ತಿದ್ದನು. ಅವನ ಪತ್ನಿ ಸುದೇಷ್ಣೆಯ ತಮ್ಮ ಕೀಚಕನೇ ಪ್ರತಿಯೊಂದು ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದನು. ಅವನು ತುಂಬಾ ಸಾಹಸಿಗ ಹಾಗೂ ಧೀರ. ಪಾಂಚಾಲಿ ಪರಿಚಾರಿಕೆಯಾಗಿ ಕೆಲಸಕ್ಕೆ ಸೇರಿದಾಗ ಕೀಚಕನು ವಿಜಯಯಾತ್ರೆಗೆ ಹೋಗಿದ್ದನು. ಅವನು ದಿಗ್ವಿಜಯಿಯಾಗಿ ಬಂದಾಗ, ಅವನ ಕಣ್ಣಿಗೆ ಸೈರಂಧ್ರಿ ಬಿದ್ದಳು. ಅವಳ ಉಜ್ವಲವಾದ ರೂಪವನ್ನು ಕಂಡು ಕೀಚಕನು ಮೈಮರೆತನು. ಅವಳನ್ನು ಹೇಗಾದರೂ ಪಡೆಯಲೇ ಬೇಕೆಂಬ ಹಂಬಲ ಅವನನ್ನು ಆವರಿಸಿತು. ಅಕ್ಕ ಸುಧೇಷ್ಣೆಯು ತಮ್ಮನಿಗೆ ಹಲವು ರೀತಿಯಲ್ಲಿ ಬುದ್ಧಿ ಹೇಳಿದರೂ ಉಪಯೋಗವಾಗಲಿಲ್ಲ. ಅವನು ಈ ಬಾರಿ ನೇರವಾಗಿ ಸೈರಂಧ್ರಿಯ ಬಳಿಯೇ ಮಾತನಾಡಿದ. “ಸೈರಂಧ್ರಿ, ವೃಥಾ ನಿನ್ನ ಕಾಡಿನ ರೂಪದಲ್ಲಿ ಕಂಗೊಳಿಸುವ ಈ ಯೌವನವನ್ನು ಹಾಳು ಮಾಡಿಕೊಳ್ಳಬೇಡ. ಹೇಳು, ನಿನ್ನ ಬೆಲೆ ಏನು? ನನ್ನ ಅರಮನೆಗೆ ಬರುವೆಯಾ? ನೀನು ಬಯಸುವುದಾದರೆ ನನ್ನ ಪ್ರಾಣವನ್ನೇ ನಿನಗೆ ಅರ್ಪಿಸಲು ಸಿದ್ಧ. ನೀನಾಗಿ ನನ್ನ ಮಾತಿಗೆ ಒಪ್ಪಿಗೆ ಕೊಟ್ಟರೆ ಸಂತೋಷ. ಇಲ್ಲವಾದರೆ...”
ಸೈರಂಧ್ರಿಯು ಕೀಚಕನ ಮಾತುಗಳನ್ನು ಕೇಳಿ ಅಧೀರಳಾದಳು. ತನ್ನ ರೂಪವೇ ತನಗೆಸ ಮುಳುವಾಯಿತೇ ಎಂದು ಪರಿತಪಿಸುತ್ತಾ “ಅಣ್ಣ, ಯಾರದೋ ಭಾಗ್ಯ ಯಾರಿಗೋ ಭೋಗ್ಯ ಆಗಲಾರದು. ನಿನ್ನ ಈ ಕೆಟ್ಟ ಯೋಚನೆ ನನ್ನ ಗಂಡಂದಿರಿಗೆ ತಿಳಿದರೆ ಇಲ್ಲದ ಅನರ್ಥ ಆದೀತು. ಅವರೆಲ್ಲರೂ ಗಂಧರ್ವರಿದ್ದಾರೆ. ಅಲ್ಲದೆ ಪರಸ್ತ್ರೀಯನ್ನು ಕಾಮುಕ ದೃಷ್ಟಿಯಿಂದ ನೋಡುವ ನಿನಗೆ ಕೇಡು ತಪ್ಪಿದ್ದಲ್ಲ” ಎಂದು ಬುದ್ಧಿ ಹೇಳಿ, ಎಚ್ಚರಿಸಿದಳು. ಸೈರಂಧ್ರಿಯ ಮಾತುಗಳು ಕೀಚಕನನ್ನು ಕೆರಳಿಸಿದವು. ಅವನು ಬುಸುಗುಡುತ್ತಾ ಸುಧೇಷ್ಣೆಗೆ ಸೈರಂಧ್ರಿಯನ್ನು ತನ್ನ ಅರಮನೆಗೆ ಕಳುಹಿಸುವಂತೆ ಹೇಳಿ ಹೊರಟನು. ತಮ್ಮನ ಮಾತುಗಳನ್ನು ನಿರಾಕರಿಸಲಾಗದೆ ಬಲವಂತದಿಂದ ಸೈರಂಧ್ರಿಯನ್ನು ತಮ್ಮನ ಬಳಿಗೆ ಹೋಗಿ ಬರುವಂತೆ ಒತ್ತಾಯಿಸಿದಳು. ಸೈರಂಧ್ರಿಯು ಹಲವಾರು ರೀತಿಯಲ್ಲಿ ತಪ್ಪಿಸಿಕೊಳ್ಳಲು ನೋಡಿದರೂ ರಾಣಿಯು ಕಟ್ಟಾಜ್ಞೆಯನ್ನು ವಿಧಿಸಿದಳು. ತಾನು ಏನು ಮಾಡುವುದು ಎಂದು ತೋಚದೆ ಕಂಗಾಲಾದಳು. ಕೊನೆಗೆ ತಾನೇ ಹೇಗಾದರೂ ಮಾಡಿ ಯುಕ್ತಿಯಿಂದ ಕೀಚಕನ ಬಳಿಯಿಂದ ಪಾರಾಗಬೇಕೆಂದು ಸೈರಂಧ್ರಿಯು ನಿರ್ಧರಿಸಿದಳು.
ಕೀಚಕನು ಸೈರಂಧ್ರಿಯ ಆಗಮನದಿಂದ ಹರ್ಷಚಿತ್ತನಾದನು. ಅವನ ಸ್ಥಿತಿ ಮಾರಮ್ಮನ ದೇಗುಲದಲ್ಲಿ ಮಾರಿಗೆ ಕಡಿಯುವ ಕುರಿಯು ಮಾವಿನ ಸೊಪ್ಪನ್ನು ಕಂಡು, ಅದನ್ನು ತಿನ್ನಲು ಹಾತೊರೆಯುತ್ತಿರುವಂತೆ ಆಗಿತ್ತು. ಶ್ಯಾಮಲ ಶರೀರದ ಅವಳ ಸೌಂದರ್ಯ ರಾಶಿಯನ್ನು ಕಂಡು, ಪುಲಕಿತನಾದ. “ಸೈರಂಧ್ರಿ, ನನ್ನ ಮಾತನ್ನು ಮೊದಲೇ ಕೇಳಬಾರದಿತ್ತಾ? ಈಗಲೂ ಕಾಲ ಮಿಂಚಿಲ್ಲ. ವಿರಾಟ ರಾಜ್ಯಕ್ಕೇ ಅಧಿಪತಿಯಂತಿರುವ ನನ್ನ ಹೃದಯ ಸಿಂಹಾಸನಕ್ಕೆ ನೀನು ಅಧಿಪತಿ ಆಗು.” ಕೀಚಕನ ಕಾಮುಕತೆಯ ಮಾತುಗಳನ್ನು ಕೇಳಿ ಸೈರಂಧ್ರಿಗೆ ಅಸಹ್ಯವಾಯಿತು. “ಕೀಚಕ, ನಾನು ನಿನ್ನ ಅಕ್ಕನ ಆಜ್ಞೆಗೆ ಮಣಿದು ಇಲ್ಲಿಗೆ ಬಂದಿರುವೆ. ನೀನು ಹಾವಿನ ಹೆಡೆಯನ್ನು ತುಳಿಯಲು ಯತ್ನಿಸುತ್ತಿರುವೆ. ನಾನು ನಿನ್ನ ಕುಹಕದ ಮಾತುಗಳನ್ನು ಕೇಳಿ ಆನಂದಿಸಲು ಬಂದಿಲ್ಲ.” ಕೀಚಕನು ಅವಳ ಕೈಯನ್ನು ಹಿಡಿದುಕೊಳ್ಳಲು ಯತ್ನಿಸಿದನು. ಕೋಪದಿಂದ ಕನಲಿದ ಸೈರಂಧ್ರಿ ಘಾಸಿಯಿಂದ ಕೈ ಬಿಡಿಸಿಕೊಂಡು, ಅವನನ್ನು ನೆಲದ ಮೇಲೆ ಮುಗ್ಗುರಿಸಿ ಬೀಳುವಂತೆ ಮಾಡಿ ಬಿರಬಿರನೆ ಸಾಗತೊಡಗಿದಳು.
ಕೀಚಕನು ಓಡಿ ಬಂದು ಸೈರಂಧ್ರಿಯನ್ನು ಹಿಡಿದುಕೊಂಡು ತನ್ನ ಕಾಲಿನಿಂದ ಜಾಡಿಸಿ ಓದ್ದ. ಅವನಿಗೆ ಅವಮಾನ ಹಾಗೂ ತೇಜೋಭಂಗ ಆಗಿತ್ತು.
ಕೀಚಕ ಹಾಗೂ ಸುಧೇಷ್ಣೆಯ ಬಲವಂತ ಜಾಸ್ತಿಯಾಯಿತು. ಸೈರಂಧ್ರಿಗೆ ತನ್ನ ಮೊರೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ತೋಚದಾಯಿತು. ಪಾಂಡವರಲ್ಲಿ ಈಗ ತನ್ನ ದುಃಖವನ್ನು ನಿವಾರಿಸುವವನು ಭೀಮನೊಬ್ಬನೆ, ಎಂದು ತಿಳಿದು ಅರ್ಧರಾತ್ರಿಯಾಗುವವರೆಗೂ ಕಾದು ಯಾರಿಗೂ ಕಾಣಿಸದಂತೆ ಭೀಮನ ಕೊಠಡಿಗೆ ಬಂದಳು. ಕತ್ತಲಲ್ಲಿ ಭೀಮನ ಕಾಲುಗಳನ್ನು ಒತ್ತುತ್ತಾ ಕುಳಿತಳು. ನಿದ್ರೆಯಿಂದ ಗಾಬರಿಯಿಂದ ಎಚ್ಚೆತ್ತ ಭೀಮನು ಕತ್ತಲಲ್ಲಿ ಸೈರಂಧ್ರಿಯನ್ನು ಗುರುತಿಸಿದನು. ಆಗ ಅವಳು ಬಿಕ್ಕುತ್ತಾ ತನಗಾಗುತ್ತಿರುವ ತೊಂದರೆಯನ್ನು ಭೀಮನ ಬಳಿ ಹೇಳಿಕೊಂಡಳು. ಮೊದಲು ಭೀಮನು ಎಲ್ಲಾ ಕಷ್ಟಗಳನ್ನು ಪರಿಹರಿಸಲು ನಿನಗೆ ನಾನೊಬ್ಬನೇ ಗಂಡನೇ? ಎಂದು ಛೇಡಿಸಿದನು. ಆಗ ದ್ರೌಪದಿ ತನ್ನ ಕಷ್ಟವನ್ನು ನಿವಾರಿಸಲು ನೀನೊಬ್ಬನೆ ಈಗ ನನಗೆ ದಿಕ್ಕು ಎಂದು ಬೇಡಿಕೊಂಡಳು. ದ್ರೌಪದಿಯ ಪರಿಸ್ಥಿತಿ ನೋಡಿ ಭೀಮನಿಗೆ ಕರುಣೆ ಉಕ್ಕಿತು. ಅವಳನ್ನು ಸಮಾಧಾನಪಡಿಸಿ ಹೇಳಿದನು. “ನೀನು ಧೈರ್ಯವಾಗಿ ಹೋಗು. ನಾಳೆ ಅವನನ್ನು ಗರಡಿಯ ಮನೆಗೆ ಕಳುಹಿಸು. ಅವನನ್ನು ಯಮ ಅಡ್ಡ ಬಂದರೂ ಬಿಡದೆ ಕೊಚ್ಚಿ ಹಾಕುವೆನು.”
ಸೈರಂಧ್ರಿಯು ಕೀಚಕನಿಗೆ ತನ್ನನ್ನು ಗರಡಿಯ ಮನೆಯಲ್ಲಿ ಬಂದು ಕಾಣುವಂತೆ ಹೇಳಿ ಕಳುಹಿಸಿದಳು. ಅವನ ಆನಂದಕ್ಕೆ ಪಾರವೇ ಇಲ್ಲ. ಅವನು ಸೈರಂಧ್ರಿಯ ಮೈಮಾಟವನ್ನು ಊಹಿಸಿಕೊಳ್ಳುತ್ತಾ ಕುಳಿತಿರುವಾಗ, ಸೈರಂಧ್ರಿಯು ಮೆಲ್ಲನೆ ಅಡಿಯ ಮೇಲೆ ಅಡಿಯಿಡುತ್ತಾ ಬರುತ್ತಿರುವುದನ್ನು ಕಂಡು ಮರಣಾನಂದಕ್ಕೆ ಒಳಗಾದ.
“ಸುಂದರಿ, ವೃಥಾ ನನ್ನ ಹೃದಯವನ್ನು ಏಕೆ ಸೂರೆಗೊಳ್ಳುತ್ತಿರುವೆ? ಹೃದಯ ಸಾಗರದಲ್ಲಿ ಇಲ್ಲದ ಅಲೆಗಳನ್ನು ಏಕೆ ಹೀಗೆ ಎಬ್ಬಿಸಿ, ನನ್ನನ್ನು ಹುಚ್ಚನಂತೆ ಮಾಡುತ್ತಿರುವೆ? ಆದದ್ದಾಯಿತು ನನ್ನ ಸನಿಹಕೆ ಬಾ.” ಕೀಚಕನು ತನ್ನ ಕಾಮೋದ್ರೇಕದ ಮಾತುಗಳನ್ನು ಮುಂದುವರಿಸಿದನು. ಆದರೆ ಕತ್ತಲಲ್ಲಿ ಅವನು ಭೀಮನ ಜೊತೆ ಮಾತನಾಡುತ್ತಿದ್ದಾನೆಂಬುದನ್ನು ಅರಿಯದಾಗಿದ್ದ. ಕೀಚಕನು ಕತ್ತಲಲ್ಲಿ ತನ್ನ ಸರಸವನ್ನು ಮುಂದುವರಿಸತೊಡಗಿದ. ಆದರೆ ನಿಧಾನವಾಗಿ ತಾನು ತಾಕುತ್ತಿರುವುದು ಗಂಡಸು ಎಂದು ತಿಳಿದು ರೋಷತಪ್ತನಾದನು.
ಭೀಮ ಹಾಗೂ ಕೀಚಕನಿಗೆ ಮಲ್ಲಯುದ್ಧವಾಯಿತು. ಭೀಮನ ಗುದ್ದುಗಳನ್ನು ತಾಳಲಾರದೆ ಕೀಚಕನು ತೇಲುಗಣ್ಣು ಬಿಡುತ್ತಾ ತನ್ನ ಪ್ರಾಣವನ್ನು ಬಿಟ್ಟನು. ದ್ರೌಪದಿಯು ತುಂಬಾ ಸಂತೋಷದಿಂದ ತನ್ನ ಕೊಠಡಿಗೆ ಬಂದು ನಿದ್ರೆ ಮಾಡಿದಳು.