ಮಹಾಭಾರತ ಕಥೆಗಳು

ಶಿಶುಪಾಲ ವಧೆ ಧರ್ಮರಾಜನ ಯಾಗವು ಸಂಪೂರ್ಣವಾಗಿ ಮುಗಿದ ನಂತರ ಅಗ್ರಪೂಜೆ ಸಲ್ಲಿಸಬೇಕಾದ ಸಮಯ ಬಂದಿತು. ಆಗ ಧರ್ಮರಾಜನು ವಿನಯದಿಂದ ತಾತನಾದ ಭೀಷ್ಮರ ಮುಂದೆ ಯಾರಿಗೆ ಅಗ್ರಪೂಜೆ ಸಲ್ಲಿಸಬೇಕೆಂದು ಕೇಳಿದನು. ಭೀಷ್ಮರು ಕಡ್ಡಿ ತುಂಡು ಮಾಡಿದಂತೆ ಶ್ರೀ ಕೃಷ್ಣನೇ ಅಗ್ರಪೂಜೆಗೆ ಅರ್ಹ ವ್ಯಕ್ತಿ ಎಂದು ಹೇಳಿದರು. ಭೀಷ್ಮರ ಮಾತನ್ನು ಸಭೆಯೂ ಅನುಮೋದಿಸಿತು. ನಾರದ, ವೇದವ್ಯಾಸ, ರೋಮಶಾದಿ ಮಹರ್ಷಿಗಳು ಈ ಮಾತನ್ನು ಸಂತೋಷದಿಂದ ಒಪ್ಪಿದರು. ಧರ್ಮರಾಜನು ಸಂಭ್ರಮದಿಂದ ಶ್ರೀಕೃಷ್ಣನಿಗೆ ಅಗ್ರಪೂಜೆ ಸಲ್ಲಿಸಲು ಮುಂದಾದನು. ಪಾಂಡವರು ಶ್ರೀಕೃಷ್ಣನ ಪಾದಗಳನ್ನು ತೊಳೆದು, ತೊಳೆದ ನೀರನ್ನು ಭಕ್ತಿಯಿಂದ ತಲೆಯ ಮೇಲೆ ಪ್ರೋಕ್ಷಿಸಿಕೊಂಡರು. ಸಭೆಯಲ್ಲಿದ್ದವರು ಸಂಭ್ರಮದಿಂದ ಅಗ್ರಪೂಜೆಯನ್ನು ವೀಕ್ಷಿಸುತ್ತಿದ್ದರು. ಅಂತಹ ಸಮಯದಲ್ಲಿ ಅಂಗಾಧಿಪತಿಯಾದ ಶಿಶುಪಾಲನು ಕ್ರೋಧದಿಂದ ಎದ್ದು ನಿಂತನು. “ಧರ್ಮರಾಜ, ಪಾಂಡವರು ತುಂಬಾ ಜ್ಞಾನಿಗಳು ಎಂದು ಎಲ್ಲರೂ ತಿಳಿದಿದ್ದರು. ಸಭೆಯಲ್ಲಿ ಅನೇಕ ಜನ ರಾಜಾಧಿರಾಜರು ಇದ್ದರೂ, ಒಬ್ಬ ಗೊಲ್ಲನ ಮಗನಾದ ಕಳ್ಳ ಕೃಷ್ಣನಿಗೆ ಅಗ್ರಪೂಜೆಯನ್ನು ಮಾಡಿ ಗೌರವಿಸುತ್ತಿರುವೆ. ನಿನಗೆ ನಾಚಿಕೆಯಾಗುವುದಿಲ್ಲವೇ? ಯಾದವರು ದನ ಕಾಯಲು ಯೋಗ್ಯರೇ ವಿನಃ ಸಿಂಹಾಸನದ ಮೇಲೆ ಕೊಡಲು ಅಯೋಗ್ಯರು. ತಿಳಿದು ತಿಳಿದು ಇಂತಹ ಕೆಲಸ ಮಾಡುತ್ತಿರುವೆ. ಕೃಷ್ಣ ಒಬ್ಬ ತಿಂಡಿಪೋತ, ಉಡಾಳ, ಹೆಣ್ಣು ಮಕ್ಕಳನ್ನು ಛೇಡಿಸುತ್ತಾ ಕಾಲ ಕಳೆಯುವವನು. ಅಂತಹ ಗೊಲ್ಲನನ್ನು ಗೌರವಿಸುವುದು ಅವಿವೇಕ. ಕ್ಷತ್ರಿಯಾದ ನಿನಗೆ ಇಂತಹ ಮಂಕು ಬುದ್ಧಿ ಹೇಗೆ ಕವಿಯಿತು?”
ಶಿಶುಪಾಲನ ತಲೆ ಇಲ್ಲದ ಮಾತುಗಳು ಭೀಮನಿಗೆ ಹಿಡಿಸಲಿಲ್ಲ. ಸಿಟ್ಟಿಗೆದ್ದು ತುಂಬಿದ ಸಭೆಯಲ್ಲಿ ಶಿಶುಪಾಲನನ್ನು ದಂಡಿಸಲು ಮುಂದಾದ. ಸಭೆಗೆ ಬಂದಿದ್ದ ಶ್ರೀಕೃಷ್ಣನ ಕಡೆಯ ಯಾದವರೆಲ್ಲರೂ ಆಯುಧಗಳನ್ನು ಹಿಡಿದು ಕೈಗಳನ್ನು ಎತ್ತಿದನು. ಭೀಮನು ಎಲ್ಲರನ್ನೂ ಶಾಂತಪಡಿಸುತ್ತಾ, ಶಿಶುಪಾಲನ ಕಡೆಗೆ ತಿರುಗಿದನು. “ಶಿಶುಪಾಲ, ಗೊಲ್ಲರು ಕೇವಲ ದನ ಕಾಯಲು ಮಾತ್ರ ಯೋಗ್ಯರಲ್ಲ. ಅವರು ಯಾವ ಪರಾಕ್ರಮಿಗಳಿಗಿಂತ ಕಡಿಮೆ? ಇಲ್ಲಿ ಕುಲ ಮುಖ್ಯವಲ್ಲ ಗುಣ. ಶ್ರೀಕೃಷ್ಣ ಪರಮಾತ್ಮನೇ ಸೃಷ್ಟಿಯಲ್ಲಿ ಬ್ರಹ್ಮನಾಗಿ, ಲಯ ಕಾಲದಲ್ಲಿ ಶಿವನಾಗಿ, ರಕ್ಷಣೆಯ ಕಾಲದಲ್ಲಿ ವಿಷ್ಣುವಾಗಿ ವಿರಾಜಿಸುತ್ತಿದ್ದಾನೆ. ಅವನೇ ಸಕಲ ಲೋಕಗಳಲ್ಲಿಯೂ ಪೂಜ್ಯನು”.
ಶಿಶುಪಾಲನು ಹಿರಿಯರೆಲ್ಲರನ್ನು ಜರಿಯತೊಡಗಿದನು. ಭೀಮನು ಕೋಪೋದ್ರಿಕ್ತನಾಗಿ ಜರಾಸಂಧನನ್ನು ಸೀಳಿದಂತೆ ಸೀಳಲು ತನ್ನ ಗದೆಯನ್ನು ಎತ್ತಿದನು. ಆಗ ಭೀಷ್ಮರು ಅಡ್ಡ ಬಂದರು. “ಭೀಮ, ಇವನನ್ನು ನೀನು ಯಾರೆಂದು ತಿಳಿದಿರುವೆ. ಕೃತಯುಗದ ಹಿರಣ್ಯಾಕ್ಷ. ತ್ರೇತಾಯುಗದ ರಾವಣ. ಈಗ ಶಿಶುಪಾಲನಾಗಿ ಜನಿಸಿದ್ದಾನೆ. ಹುಟ್ಟುವಾಗಲೇ ಇವನಿಗೆ ಚತುರ್ಭುಜಗಳಿದ್ದವು. ಮೂರು ಕಣ್ಣುಗಳಿದ್ದವು. ಯಾರು ಇವನನ್ನು ಎತ್ತಿಕೊಂಡಾಗ ಎರಡು ಭುಜಗಳು, ಒಂದು ಕಣ್ಣು ಉದುರಿ ಹೋಗುವುದೋ ಅವನಿಂದ ಮರಣ ನಿಶ್ಚಯ. ಒಂದು ಬಾರಿ ಶ್ರೀಕೃಷ್ಣನು ಶಿಶುಪಾಲನನ್ನು ಎತ್ತಿಕೊಂಡಾಗ ಹಾಗೆಯೇ ಆಯಿತು. ಶಿಶುಪಾಲನ ತಾಯಿ ಕೃಷ್ಣನಿಗೆ ಸೋದರತ್ತೆ. ಆಗ ಶಿಶುಪಾಲನ ತಾಯಿ ಶ್ರೀಕೃಷ್ಣನಿಂದ ಒಂದು ಮಾತನ್ನು ತೆಗೆದುಕೊಂಡಳು. ನನ್ನ ಮಗ ಏನೇ ತಪ್ಪು ಮಾಡಿದರೂ ಶಿಕ್ಷಿಸಬೇಡ. ಆಗ ಶ್ರೀಕೃಷ್ಣನು ಶಿಶುಪಾಲನ ನೂರು ತಪ್ಪುಗಳನ್ನು ಸಹಿಸಿಕೊಳ್ಳುವುದಾಗಿ, ಮುಂದೆ ಅವನ ಮರಣ ನಿಶ್ಚಿತ ಎಂದು ಅತ್ತೆಗೆ ಹೇಳಿದ್ದನು”. ಶ್ರೀಕೃಷ್ಣನ ಕಣ್ಣುಗಳಲ್ಲಿ ಬೆಂಕಿ ಉರಿಯುತ್ತಿತ್ತು. ಅಲ್ಲಿಗೆ ಅವನ ನೂರೊಂದು ತಪ್ಪುಗಳು ಮುಗಿದಿದ್ದವು. ಶಿಶುಪಾಲನು ಮಾತ್ರ ಶ್ರೀಕೃಷ್ಣನನ್ನು ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದನು. ಶ್ರೀಕೃಷ್ಣನ ಸುದರ್ಶನ ಚಕ್ರ ವೇಗವಾಗಿ ಹೋಗಿ, ಶಿಶುಪಾಲನ ಶಿರವನ್ನು ಛೇದಿಸಿ ಪುನಃ ಮರಳಿ ಬಂದಿತು. ನೆರೆದಿದ್ದ ಜನ ಸಮೂಹ ಭಗವಂತನಿಗೆ ನಮಿಸಿತು.