ಭಾಗವತ ಕಥೆಗಳು

ಶ್ರೀಕೃಷ್ಣನು ಭಗವತ್ಸ್ವರೂಪನೆ ಶ್ರೀಕೃಷ್ಣನು ಪ್ರತಿದಿನವೂ ತಮ್ಮ ಹಸುಗಳನ್ನು ಮೇಯಿಸಲು ಮಕ್ಕಳ ಜೊತೆಯಲ್ಲಿ ಹೋಗುತ್ತಿದ್ದ. ಮಕ್ಕಳೆಲ್ಲರೂ ಮನೆಯಿಂದ ಬುತ್ತಿ ತರುತ್ತಿದ್ದರು. ಶ್ರೀಕೃಷ್ಣ ತರುತ್ತಿರಲಿಲ್ಲ. ಮಕ್ಕಳೆಲ್ಲಾ ಹಸುಕರುಗಳನ್ನು ಗೋವರ್ಧನಗಿರಿಯಲ್ಲಿ ಮೇಯಲು ಬಿಟ್ಟು ಕೃಷ್ಣನ ಜೊತೆಯಲ್ಲಿ ಮಧ್ಯೆ ಮಕ್ಕಳೆಲ್ಲ ಸುತ್ತು ನಿಂತುಕೊಂಡು ಮನೆಯಿಂದ ತಂದ ಬುತ್ತಿ ತಿನ್ನುತ್ತಿದ್ದರು. ಅವರು ತಂದ ಬುತ್ತಿ ಇವರು, ಇವರು ತಂದ ಬುತ್ತಿ ಅವರು ತಿನ್ನುತ್ತಿದ್ದರು. ಶ್ರೀಕೃಷ್ಣನು ಮಧ್ಯೆ ನಿಂತು ಬುತ್ತಿ ತಿನ್ನುತ್ತಿದ್ದ. ಇವರ ಆಟವನ್ನು ಇಂದ್ರನು ನೋಡಿ ಶ್ರೀಕೃಷ್ಣನು ನಿಜವಾಗಿ ಪರಮಾತ್ಮನ ಅವತಾರವೇ ಇರಲಿಕ್ಕಿಲ್ಲ ಎಂದು ಪರೀಕ್ಷೆ ಮಾಡಲು ಇವರು ಆಟ ಆಡುತ್ತಿರುವಾಗ ಆ ಗೋವುಗಳನ್ನೆಲ್ಲಾ ಗೋವರ್ಧನ ಗಿರಿ ಬೆಟ್ಟದ ಗವಿಯಲ್ಲಿ ಬಚ್ಚಿಟ್ಟ. ಮಕ್ಕಳೆಲ್ಲಾ ಶ್ರೀಕೃಷ್ಣನಿಂದ ದೂರವಾದರು. ತಮ್ಮ ಗೋವುಗಳನ್ನು ಹುಡುಕುವುದಕ್ಕೆ ಹೋದರು. ಆಗ ಇಂದ್ರನು ಆ ಗೋಪಾಲಕರೆಲ್ಲರನ್ನೂ ಆ ಪರ್ವತದ ಮತ್ತೊಂದು ಗವಿಯಲ್ಲಿ ಬಚ್ಚಿಟ್ಟ. ಇದೆಲ್ಲವೂ ದೇವೇಂದ್ರನ ಮೋಸ ಕಾರ್ಯವೆಂದು ತಿಳಿದ ಕೃಷ್ಣನು ಸಾಯಂಕಾಲ ಆದಾಗ ತಾನೆ ಹಸುಗಳಾದ. ತಾನೆ ಬಾಲವಾದ, ಕೊಂಬಾದ, ಕರುಗಳಾದ. ಅಷ್ಟೇ ಅಲ್ಲ, ಗೋಪಾಲಕರೂ ತಾನೆ ಆದ. ಸಾಯಂಕಾಲ ಅವರವರ ಮನೆಗೆ ಹಸುಗಳೆಲ್ಲಾ ಹೋದವು. ಕರುಗಳು ಗೋಪಾಲರು ಅವರವರ ಮನೆಗೆ ಹೋದರು. ಅಂದಿನಿಂದ ಯಥೇಚ್ಛವಾಗಿ ಹಾಲು ಕರೆದರು. ಹೀಗೆ 20 ದಿವಸ ಕಳೆದವು. ಆಗ ಇಂದ್ರನು ಪರಮಾತ್ಮನ ವ್ಯಾಪಕ ಸ್ವರೂಪವನ್ನು ಕಂಡು ನಮಸ್ಕರಿಸಿ ಆ ಹಸುಗಳು, ಆ ಕರುಗಳು, ಆ ಗೋಪಾಲರನ್ನೆಲ್ಲಾ ತಂದುಕೊಟ್ಟರು. ಇದು ಪರಮಾತ್ಮನ ವ್ಯಾಪಕ ಸ್ವರೂಪ. ಹೀಗೆ ಶ್ರೀಕೃಷ್ಣನು ತನ್ನ ಮಾಯಾ ಸ್ವರೂಪವನ್ನು ಯಾವಾಗ ಬೇಡಿದರೂ ಆಗ ತೋರಿಸುತ್ತಿದ್ದ.

ಮತ್ತೊಂದು ಸಾರಿ ಗೋಪಾಲಕರೊಡನೆ ಹಸು ಕರು ಕಾಯಲು ಹೋಗಿದ್ದಾನೆ. ದೂರದಲ್ಲಿ ಹೊಗೆ ಬರುತ್ತಿದೆ. ಆಗ ಕೃಷ್ಣನು ಆ ಗೋಪ ಬಾಲಕರನ್ನು ಕರೆದು ಅಲ್ಲಿ ಕೆಲವರು ಬ್ರಾಹ್ಮಣರು ಯಜ್ಞ ಮಾಡುತ್ತಿದ್ದಾರೆ. ಅವರಲ್ಲಿ ಹೋಗಿ ಶ್ರೀಕೃಷ್ಣ ಬಂದಿದ್ದಾನೆ. ಅವನಿಗೆ ಬಹಳ ಹಸಿವಾಗಿದೆ ಎಂದು ಹೇಳಿ ಅವರಿಂದ ಊಟವನ್ನು ಕೇಳಿ ತೆಗೆದುಕೊಂಡು ಬನ್ನಿ ಎಂದು ಕಳಿಸಿದ. ಆ ಗೋಪ ಬಾಲಕರು ಯಜ್ಞ ಮಾಡುತ್ತಿರುವ ಬ್ರಾಹ್ಮಣರಲ್ಲಿ ಹೋಗಿ ನಮ್ಮ ಕೃಷ್ಣ ಅಲ್ಲಿ ಇದ್ದಾನೆ. ಹಸಿದಿದ್ದಾನೆ ಅವನಿಗೆ ಸ್ವಲ್ಪ ಊಟ ಕೊಡಿರಿ ಎಂದು ಮಕ್ಕಳು ಬೇಡಿದರು. ಆಗ ಬ್ರಾಹ್ಮಣರು ಹೋಗಿ! ಹೋಗಿ! ಇನ್ನು ಯಜ್ಞ ಮುಗಿದಿಲ್ಲ. ನೈವೇದ್ಯ ಮಾಡಿಲ್ಲ. ಕೃಷ್ಣನಿಗೆ ಊಟವಂತೆ ಎಂದು ಬೈದು ಕಳಿಸಿದರು. ಅವರು ಹೋಗಿ ವಿಷಯವನ್ನು ಕೃಷ್ಣನಲ್ಲಿ ಹೇಳಿದರು. ಅಯ್ಯೋ! ಊಟವಿರುವುದು ಅಮ್ಮನವರಲ್ಲಿ ನೀವು ಹೋಗಿ ಯಜ್ಞ ಮಾಡುವವರನ್ನು ಕೇಳಿ ತಪ್ಪು ಮಾಡಿದಿರಿ. ಈಗ ಹೋಗಿ ಅಮ್ಮನವರನ್ನು ಕೇಳಿ ಪಡೆದು ತೆಗೆದುಕೊಂಡು ಬನ್ನಿರಿ ಎಂದು ಕಳಿಸಿದ. ಗೋಪ ಬಾಲಕರು ಹೋಗಿ ಶ್ರೀಕೃಷ್ಣ ಬಂದಿದ್ದಾನೆ. ಅವನಿಗೆ ಹಸಿವಾಗಿದೆ ಎಂದು ಸ್ವಲ್ಪ ಊಟ ಕೊಡಿ ಎಂದಿದ್ದೇ ತಡ. ಆ ಮಹಿಳೆಯರು ಸಾಕ್ಷಾತ್ ಕೃಷ್ಣನೇ ಬಂದಿರುವಾಗ ಕಲ್ಲಿನಲ್ಲಿ ಮಣ್ಣಿನಲ್ಲಿರುವ ಕೃಷ್ಣನನ್ನು ಪೂಜಿಸಿ ನೈವೇದ್ಯ ಮಾಡುತ್ತಾರೆಂದು ಆ ಆಹಾರ ಪದಾರ್ಥದ ಪಾತ್ರೆಗಳನ್ನು ಹೊತ್ತಿಕೊಂಡು ಓಡೋಡಿ ಶ್ರೀಕೃಷ್ಣ ಸಮೀಪ ಸೇರಿ ಊಟವನ್ನು ಬಾಯಲ್ಲಿ ಇಟ್ಟು ಗೋಪ ಬಾಲಕರಿಗೆಲ್ಲಾ ಕೊಟ್ಟು ಈಗ ನಮ್ಮ ಯಜ್ಞ ಮುಗಿಯಿತು. ಸಾಕ್ಷಾತ್ ಶ್ರೀಕೃಷ್ಣನಿಗೆ ಉಣ ಬಡಿಸಿದೆವೆಂದು ಸಂತೋಷಪಟ್ಟರು. ಆಗ ಯಜ್ಞ ಮಾಡುತ್ತಿರುವ ಪುರುಷರು, ನಮ್ಮ ಹೆಣ್ಣು ಮಕ್ಕಳು ಅಡುಗೆಮನೆÉಯಿಂದ ತುಂಬಿದ ಪಾತ್ರೆ ಹಿಡಿದು ಓಡಿದ್ದನ್ನು, ನೋಡಿ ಅವರೂ ಓಡಿ ಬಂದರು. ಹೌದು ಸಾಕ್ಷಾತ್ ಕೃಷ್ಣನೇ ಬಂದಿರುವಾಗ ನಾವು ಅದನ್ನು ತಿಳಿಯದೇ ಹೋದೆವು. ಹೆಣ್ಣು ಮಕ್ಕಳಿಗಿರುವ ಬುದ್ಧಿವಂತಿಕೆ ನಮಗೆ ಬರಲಿಲ್ಲವಲ್ಲ ಎಂದು ಶ್ರೀಕೃಷ್ಣನಿಗೆ ನಮಸ್ಕರಿಸಿದರು. ನಾವು ಸಹ ಪ್ರತ್ಯಕ್ಷವಾಗಿ ಗುರುಗಳೇ ಎದುರಿಗೆ ಇರುವಾಗ ಅವರನ್ನು ತಿಳಿಯದೆ ಎಲ್ಲಿಲ್ಲಿಯೋ ದೇವರನ್ನು ನೋಡಲು ಹೋಗುವುದು ಅಪಚಾರವಲ್ಲವೆ!