ಭಾಗವತ ಕಥೆಗಳು

ಜಡಭರತ ವೃಷಭದೇವನ ಮಗನಾದ ಭರತ ತಂದೆಯಂತೆಯೇ ದೈವಭಕ್ತ. ಇಹದಲ್ಲಿದ್ದುಕೊಂಡೇ ಪಾರಲೌಕಿಕ ವಿಚಾರವಂತಿಕೆಯನ್ನು ಪಡೆದವ. ರಾಜನಾಗಿದ್ದಾಗಲೂ ಪ್ರಜಾಪಾಲಕನೇ ಅಲ್ಲದೆ ಧರ್ಮಪಾಲಕನೂ ಆಗಿದ್ದ. ಪಂಚಜನಿ ಎಂಬ ಸುಂದರಿಯನ್ನು ಕೈಹಿಡಿದು ತನ್ನಷ್ಟೇ ಅಂತಸ್ತಿನಲ್ಲಿ ಸಮಾನಸ್ಕರಾದ ಪಂಚಪುತ್ರರಿಗೆ ಜನ್ಮ ನೀಡಿದ. ಅಷ್ಟೇ ಅಲ್ಲ ಸಾಕಷ್ಟು ಯಜ್ಞಯಾಗಾದಿಗಳನ್ನು ಮಾಡಿದ. ಯಾವುದೇ ಮಹತ್ವಾಕಾಂಕ್ಷೆಯಿಂದ ಯಾಗ ಮಾಡಿದವನಲ್ಲ. ತಾನು ಮಾಡಿದ ಪ್ರತಿಕಾರ್ಯವೂ ಭಗವದರ್ಪಿತ ಎಂಬ ಭಾವನೆಯಿಂದ ಮಾಡಿದವ.

ಪುಲಹಾಶ್ರಮ ಪವಿತ್ರ ಸ್ಥಳ/ ಗಂಡಕೀ ನದಿ ಹರಿಯುವ ಈ ಸ್ಥಳದಲ್ಲಿ ಸಾಕಷ್ಟು ಸಾಲಿಗ್ರಾಮ ಶಿಲೆಗಳೇ ತುಂಬಿರುವುದರಿಂದ ಇದು ಹರಿಕ್ಷೇತ್ರ ಎಂದು ವಿಖ್ಯಾತವಾಗಿದೆ. ರಾಜ್ಯಭಾರ ಅಷ್ಟಾಗಿ ಹಿಡಿಸದೆ ಮಕ್ಕಳಿಗೆ ರಾಜ್ಯವನ್ನು ಒಪ್ಪಿಸಿ, ಇನ್ನೂ ಯೌವನಾವಸ್ಥೆಯಲ್ಲಿಯೇ ಜಡಭರತ ಪಾರಮಾರ್ಥಿಕ ಚಿಂತನೆಯಲ್ಲಿ ಮುಳುಗಿ, ಪುಲಹಾಶ್ರಮಕ್ಕೆ ಬಂದು ಗಂಡಕೀ ನದಿಯ ತೀರದಲ್ಲಿ ತಪೋನಿರತನಾದ. ಒಂದು ದಿನ ಹೀಗೆಯೇ ತಪೋನಿರತನಾಗಿರುವ ಸಮಯದಲ್ಲಿ ಒಂದು ಗರ್ಭಿಣಿ ಜಿಂಕೆ. ನೀರು ಕುಡಿಯಲೆಂದು ನದಿಯ ತೀರಕ್ಕೆ ಬಂತು. ಅದೇ ವೇಳೆಗೆ ಅತಿಸನಿಹದಲ್ಲಿ ಸಿಂಹದ ಗರ್ಜನೆಯ ದನಿಯನ್ನು ಆಲಿಸಿತು. ಗಾಬರಿಗೊಂಡ ಅದು ನೀರನ್ನು ಕುಡಿಯದೆ ಮೇಲಕ್ಕೆ ಹಾರಿ, ನದಿಯ ಜಾಗದಿಂದ ಆಚೆ ಓಡಿಹೋಗಲು ಯತ್ನಿಸುವಾಗ ಗರ್ಭಸ್ರಾವವಾಗಿ, ಮರಿ ಹೊಳೆಯಲ್ಲಿ ಬಿತ್ತು.

ಜಪದಲ್ಲಿ ಕುಳಿತಿದ್ದ ಭರತಮುನಿ ಹೊಳೆಯಲ್ಲಿ ತೇಲಿಹೋಗುತ್ತಿದ್ದ ಜಿಂಕೆ ಮರಿಯನ್ನು ಕಂಡ. ಸ್ವಭಾವತಃ ದಯಾದ್ರ್ರನೆನಿಸಿದ್ದ ಅವನು ಅದನ್ನು ನೀರಿನಿಂದ ಮೇಲಕ್ಕೆತ್ತಿ, ತನ್ನ ಆಶ್ರಮಕ್ಕೆ ಕರೆತಂದ. ತಾನೇ ಅದನ್ನು ಪ್ರೀತ್ಯಾದರದಿಂದ ಸಾಕತೊಡಗಿದ. ತನಗೆ ಕೊನೆಗಾಲ ಸಮೀಪಿಸುತ್ತಿದ್ದಾಗಲೂ ಅವನಿಗೆ ಈ ಜಿಂಕೆ ಮರಿಯ ಯೋಗಕ್ಷೇಮದ ಚಿಂತೆಯೇ ಕಾಡುತ್ತಿತ್ತು. ಅದೇ ಚಿಂತೆಯಲ್ಲಿ ಪ್ರಾಣಬಿಟ್ಟ ಅವನು ಮರುಜನ್ಮದಲ್ಲಿ ಜಿಂಕೆ ಮರಿಯ ಜನ್ಮವನ್ನೇ ತಾಳಿದ. ಈಗಲೂ ಅವನಿಗೆ ಹಿಂದಿನ ಜನ್ಮದ ನೆನಪುಗಳು ಕಾಡುತ್ತಿದ್ದುವು. ಅರೆಹುಚ್ಚನಂತೆ ಕಾಣುತ್ತಿದ್ದ. ಮಾತುಗಳೂ ಹಾಗೆಯೇ ಇದ್ದುವು. ದಿಕ್ಕಿಲ್ಲದವನಂತೆ ಜಿಂಕೆಯ ರೂಪದಲ್ಲಿಯೇ ಅಲೆದಾಡತೊಡಗಿದ. ಹೀಗೆಯೇ ಅಲೆದಾಡುತ್ತಾ ಬರುತ್ತಿದ್ದಾಗ ಒಬ್ಬ ಶೂದ್ರ ನಾಯಕನ ಕಡೆಯವರು ಇವನನ್ನು ಹಿಡಿದರು. ಆ ನಾಯಕನಿಗೆ ಒಂದು ಗಂಡು ಮಗು ಜನಿಸಿತ್ತು. ಅವನು ತನಗೆ ಗಂಡು ಮಗು ಆದರೆ ಕಾಳಿದೇವಿಗೆ ಒಬ್ಬ ಮನುಷ್ಯನನ್ನು ಬಲಿ ಕೊಡುವುದಾಗಿ ಹರಸಿಕೊಂಡಿದ್ದ. ಈಗ ಈ ಜಡಭರತನನ್ನೇ ಕಾಳಿಗೆ ಬಲಿಕೊಡಲು ಆ ನಾಯಕ ಕರೆದೊಯ್ದ.

ಕಾಳಿಮಾತೆಯ ವಿಗ್ರಹದ ಮುಂದೆ ತಂದು ನಿಲ್ಲಿಸಲಾಯಿತು. ಕಡಿಯಲೆಂದು ಕತ್ತಿ ಮೇಲಕ್ಕೆತ್ತುತ್ತಿದ್ದಂತೆ ಮಾತೆಯು ಉದ್ರೇಕಗೊಂಡು, ನಾಯಕನ ತಲೆಯನ್ನೇ ಕತ್ತರಿಸಿ ಹಾಕಿದಳು. ಇನ್ನೂ ಮುಂದೆ ಬರುತ್ತಿದ್ದಾಗ ಸಿಂಧೂದೇಶದ ಅರಸನಾದ ರಹೂಗಣ ಪಲ್ಲಕ್ಕಿಯ ಮೇಲೆ ಬರುತ್ತಿದ್ದ. ಪಲ್ಲಕ್ಕಿಯನ್ನ ಹೊರುತ್ತಿದ್ದ ನಾಲ್ವರಲ್ಲಿ ಒಬ್ಬನು ದಣಿವಿನಿಂದ ಮುಂದೆ ಸಾಗಲಾರದೆ ಕೆಳಗೆ ಬಿದ್ದ. ಈಗ ಅವನ ಬದಲಿಗೆ ಪಲ್ಲಕ್ಕಿ ಹೊರುವವರೇ ಯಾರೂ ಇಲ್ಲವಾಯಿತು. ಅವರಿಗೆ ಈ ಜಡಭರತ ಕಣ್ಣಿಗೆ ಬಿದ್ದ. ಅವನನ್ನೇ ಪಲ್ಲಕ್ಕಿ ಹೊರುವ ಕೆಲಸಕ್ಕೆ ನೇಮಿಸಿಕೊಂಡರು. ಜಡಭರತ ಪಲ್ಲಕ್ಕಿಯನ್ನೇನೋ ಹೊರುತ್ತಾ ಸಾಗಿದ. ಆದರೆ ಕೆಳಗಡೆ ತನ್ನ ಪಾದ ತುಳಿತದಿಂದ ಯಾವ ಕ್ರಿಮಿಕೀಟಕ್ಕೂ ತೊಂದರೆ ಆಗದಂತೆ ನೋಡಿಕೊಳ್ಳುತ್ತಾ ಸಾಗುತ್ತಿದ್ದುದರಿಂದ ನಡಿಗೆಯ ಗತಿ ನಿಧಾನ ಆಯಿತು. ಇದರಿಂದ ಬೇಗ ಬೇಗ ನಡೆಯುತ್ತಿದ್ದ ಆಳುಗಳ ನಡಿಗೆಯಲ್ಲಿ ಸಮತೋಲನ ತಪ್ಪತೊಡಗಿತು. ರಾಜನಿಗೆ ರೇಗಿಹೋಯಿತು. ಜಡಭರತನನ್ನು ಬೈಯತೊಡಗಿದ. ಬಡಿಯತೊಡಗಿದ. ಇದುವರೆಗೂ ಅಷ್ಟಾಗಿ ಯಾರೊಂದಿಗೂ ಮಾತೇ ಆಡದೆ ಹುಚ್ಚನಂತೆ ಬರುತ್ತಿದ್ದ ಜಡಭರತ ಈಗÀ ರಾಜನಾದ ರಹೂಗುಣನ ಕಡೆ ಕನಿಕರದಿಂದ ನೋಡುತ್ತಾ ಪ್ರಶ್ನಿಸಿದ:

“ಯಾರನ್ನು ಬಯ್ಯುತ್ತಿದ್ದೀ? ನಿನ್ನ ಪಲ್ಲಕ್ಕಿಯನ್ನು ಹೊತ್ತಿರುವವರು ಯಾರು?” ರಾಜ ಅಹಂಕಾರದಿಂದಲೇ ಗರ್ಜಿಸಿದ: “ನಾನು ಮಹಾರಾಜ. ನಿನಗಷ್ಟು ತಿಳಿಯದಾ? ಈಗ ನಿನ್ನನ್ನು ದಂಡಿಸುವವನು!” ಜಡಭರತ ಹುಚ್ಚನಂತೆಯೇ ಹೇಳಿದ: “ರಾಜ, ‘ನಾನು’ ಎಂಬ ಅಹಂಕಾರವನ್ನು ಬಿಡು. ಪಲ್ಲಕ್ಕಿಯಲ್ಲಿ ಕುಳಿತಿರುವವನೂ ಪರಮಾತ್ಮನೇ. ಪಲ್ಲಕ್ಕಿಯನ್ನು ಹೊತ್ತಿರುವವನೂ ಅವನೇ. ವೃಥಾ ಹಮ್ಮಿನಿಂದ ಹೀಗೆಲ್ಲಾ ದೇವರು ಬಾಯಿಕೊಟ್ಟಿರುವನೆಂದು ಕೂಗಾಡುತ್ತಿರುವೆಯಲ್ಲಾ!?” ರಾಜನಿಗೆ ಜಡಭರತನ ಮಾತು ಹಿಡಿಸಿತು. ಅವನ ಅಜ್ಞಾನ ನೀಗಿತು. ಅವನಲ್ಲಿದ್ದ ದೇಹಾಭಿಮಾನ ಹಾರಿಹೋಯಿತು. ಪರಮ ಹರುಷದಿಂದ ಜಡಭರತನಿಗೆ ನಮಸ್ಕರಿಸಿ, ತನ್ನ ಪ್ರಯಾಣವನ್ನು ಮುಂದುವರಿಸಿದ. ಜಡಭರತ ಹೀಗೆಯೇ ಜಡಜನರಿಗೆ ಆತ್ಮಜ್ಞಾನದ ಬೆಳಕನ್ನು ಚೆಲ್ಲುತ್ತಾ ತನ್ನ ರಾಜ್ಯಕ್ಕೆ ಹಿಂದಿರುಗಿದ. ಭಗವನ್ನಾಮಸ್ಮರಣೆಯಲ್ಲಿಯೇ ಅಸು ನೀಗಿದ.