ಉಪನಿಷತ್ತಿನ ಕಥೆಗಳು

ಓಂಕಾರ (ಉದ್ಗೀಥಾ) ಉಪಾಸನೆಯ ಮಹತ್ವ ಹಿಂದೆ ಉಪನಿಷತ್ತಿನ ಕಾಲದಲ್ಲಿ ಕುರು ಎಂಬ ದೇಶದಲ್ಲಿ ಉಷಸ್ತಿ ಎಂಬ ಉಪಾಸಕನು ಓಂಕಾರ ಉಪಾಸನೆಯನ್ನು ಮಾಡಿ ಸಿದ್ಧಿ ಪಡೆದಿದ್ದನು. ಇವನು ಚಕ್ರಾಯಣನ ಮಗನಾದುದರಿಂದ ಚಕ್ರಾಯಣ ಎಂದು ಪ್ರಸಿದ್ಧಿಯಾಗಿದ್ದನು. ಅವನು ಇದ್ದದ್ದು ಇಭ್ಯಗ್ರಾಮದಲ್ಲಿ. ಇಭ್ಯಾ ಅಂದರೆ ಆನೆ. ಅವನು ಬಹಳ ಬುದ್ಧಿವಂತ. ಉಪಾಸನೆಯನ್ನು ಮಾಡಿ ಸರ್ವಸಿದ್ಧಿಗಳನ್ನು ಪ್ರಾಪ್ತಿ ಮಾಡಿಕೊಂಡಿದ್ದನು, ಏಕೆಂದರೆ ಎಲ್ಲಿ ಸರಸ್ವತಿ ಇರುತ್ತಾಳೆಯೋ ಅಲ್ಲಿ ಲಕ್ಷ್ಮಿಗೆ ಇರುವಿಕೆ ಕಡಿಮೆ. ಇವನಿಗೆ ವಾಸ ಮಾಡಲಿಕ್ಕೆ ಮನೆ ಇರಲಿಲ್ಲ. ಯಾವುದೋ ಒಂದು ಮುರುಕಲು ಮನೆಯಲ್ಲಿ ವಾಸ ಮಾಡುತ್ತಿದ್ದನು. ಆ ಕಾಲದಲ್ಲಿ ಬಿರುಗಾಳಿ ಹಾಗೂ ಪ್ರವಾಹ ಬಂದು ಎಲ್ಲಾ ಬೆಳೆಗಳು ನಾಶವಾಗಿ ಎಲ್ಲೆಲ್ಲೂ ಊಟಕ್ಕೆ ಹಾಹಾಕಾರ ಎದ್ದಿತು.ಉಷಸ್ತಿಗೆ ಮನೆ ಇಲ್ಲದೆ ಸರಿಯಾಗಿ ಊಟವಿಲ್ಲದೆ ಎಷ್ಟೋ ದಿನ ಕಳೆದನು. ಆಗ ಅವನಿಗೆ ಇಲ್ಲೇ ಇದ್ದರೆ ನಾವು ಬದುಕಲು ಕಷ್ಟವಾಗಬಹುದೆಂದು ಇನ್ನೊಂದು ದೇಶಕ್ಕೆ ಸಂಚಾರ ಹೊರಟನು.
ಬಹಳ ದೂರ ನಡೆದು ಹಸಿವಾಗಿ ತಿನ್ನುವುದಕ್ಕೆ ಮಾತ್ರ ಏನೂ ಸಿಗಲಿಲ್ಲ. ಹಾಗೆಯೇ ನೋಡುತ್ತಾ ನೋಡುತ್ತಾ ಹೋಗುತ್ತಿರುವಾಗ ದಾರಿಯಲ್ಲಿ ಒಬ್ಬ ಮಾವುಟಿಗನು ಆನೆಗೆ ಸೊಪ್ಪನ್ನು ಹಾಕಿ ತನ್ನಲ್ಲಿ ಇದ್ದ ಸ್ವಲ್ಪ ಬೇಯಿಸಿದ ಹುರುಳೀಕಾಳನ್ನು ತಿನ್ನುತ್ತಿದ್ದನು. ಆಗ ಉಷಸ್ತಿಯು ಅವನ ಬಳಿ ನಾನು ಎಷ್ಟೋ ದಿವಸದಿಂದ ಊಟವಿಲ್ಲದೇ ಸಾಯುವ ಸ್ಥಿತಿಗೆ ಬಂದಿದ್ದೇನೆ. ನೀನು ತಿನ್ನುವ ಹುರುಳೀಕಾಳನ್ನು ನಮಗೂ ಸ್ವಲ್ಪ ಕೊಡುವೆಯಾ? ಎಂದು ಕೇಳಿದನು. ಆಗ ಮಾವುಟಿಗನು ಸ್ವಾಮಿ, ತಾವು ಶ್ರೇಷ್ಠರೂ, ಮಹಾತ್ಮರೂ ಹಾಗೂ ಉತ್ತಮಕುಲದವರಂತೆ ಕಾಣುತ್ತೀರಾ. ನಾನು ತಿನ್ನುತ್ತಾ ಇರುವ ಹುರಳೀಕಾಳು ಎಂಜಲು ಆಗುವುದೆಲ್ಲವೇ? ಇದನ್ನು ಹೇಗೆ ನಿಮಗೆ ಕೊಡಲಿ! ಅದಕ್ಕೆ ಉಷಸ್ತಿಯು ಊಟವಿಲ್ಲದೇ ಸಾಯುತ್ತಿರುವವನಿಗೆ ಎಂಜಲು ಎಲ್ಲಿಂದ ಬರುತ್ತದೆ. ಊಟ ಇಲ್ಲದವನಿಗೆ ಎಂಜಲು ಎಂಥಾದ್ದು? ಆದ್ದರಿಂದ ಅದನ್ನೇ ಕೊಟ್ಟುಬಿಡು ಎಂದನು. ಆಗ ಮಾವುಟಿಗನು ತಾನು ತಿನ್ನುತ್ತಿರುವ ಕಾಳನ್ನು ಉಷಸ್ತಿಗೆ ಕೊಟ್ಟನು. ಉಷಸ್ತಿ ತನ್ನ ಹೆಂಡತಿಗೂ ಅರ್ಧ ಭಾಗವನ್ನು ಕೊಟ್ಟು ಉಳಿದಿರುವಷ್ಟನ್ನು ತಿಂದು ಮುಗಿಸಿದನು. ಆದರೆ ಅವನ ಪತ್ನಿಯು ಸ್ತ್ರೀ ಸಹಜವಾದ ಮರ್ಯಾದೆಯಿಂದ ಹುರುಳೀಕಾಳನ್ನು ಹಾಗೆಯೇ ಸಂಗ್ರಹಿಸಿದಳು. ನಂತರ ಮಾವುಟಿಗನು ಕುಡಿಯಲು ನೀರನ್ನು ಕೊಡಲು ಹೋದನು. ಆಗ ಉಷಸ್ತಿಯು ಹೇಳುತ್ತಾನೆ : ಈ ನೀರನ್ನು ಕುಡಿದರೆ ನನಗೆ ಎಂಜಲು ಆದೀತು. ಆಗ ಮಾವುಟಿಗನು, ಹುರುಳೀ ಕಾಳನ್ನು ತಿನ್ನುವಾಗ ಇಲ್ಲದ ಎಂಜಲು ಈಗ ನೀರು ಕುಡಿಯುವಾಗ ಬಂದೀತೇ ಎಂದಾಗ, ಉಷಸ್ತಿಯು’ ಹುರುಳೀಕಾಳನ್ನು ತಿನ್ನದೇ ಇದ್ದರೆ, ನಾನು ಬದುಕುವಂತೆಯೇ ಇರಲಿಲ್ಲ. ಆದರೆ ನೀರು ಎಲ್ಲೆಲ್ಲಿಯೂ ದೊರಕುತ್ತದೆ. ಆದ್ದರಿಂದ ನಾನು ನೀರನ್ನು ನಿರಾಕರಿಸಿದ್ದು ತಪ್ಪಲ್ಲ ಎಂದನು.
ಹೀಗೆಯೇ ಸಂಚಾರ ಮಾಡಿ ಕೊನೆಗೆ ದೂರದಲ್ಲಿ ಹೊಗೆ ಕಾಣಿಸುತ್ತಿತ್ತು. ಆಗ ಅವರು ಹೊಗೆ ಬರುತ್ತಿರುವುದರಿಂದ ಅಲ್ಲಿ ಜನರಿರಬಹುದು ಎಂದು ಅದೇ ದಿಕ್ಕಿಗೆ ಹೊರಟರು. ಅಲ್ಲಿ ಆ ದೇಶದ ರಾಜನು ಯಾಗವನ್ನು ಋತ್ವಿಜರ ಸಹಾಯದಿಂದ ಮಾಡುತ್ತಿರುವಂತೆ ಕಂಡಿತು. ಉಷಸ್ತಿಯು ಅವರ ಬಳಿ ಹೋಗಿ ನೀವು ಯಾವ ದೇವತೆಯ ಉಪಾಸನೆಗಾಗಿ ಈ ಯಜ್ಞವನ್ನು ಮಾಡುತ್ತಿರುವಿರಿ? ನಿಮ್ಮನ್ನು ನೋಡಿದರೆ ನೀವು ಉಪಾಸಕರಂತೆ ಕಾಣುತ್ತಿಲ್ಲವಲ್ಲ! ಅರಿತುಕೊಳ್ಳದೆ ಯಜ್ಞವನ್ನು ಮಾಡುವುದಾದರೆ ನಿಮ್ಮ ತಲೆ ಬೀಳಬಹುದು ಎಂದಾಗ ದಕ್ಷಿಣೆಗಾಗಿ ಬಂದಿದ್ದ ಋತ್ವಿಜರು ಏನೂ ಮಾಡದೆ ಸುಮ್ಮನೆ ಕುಳಿತರು. ಆಗ ರಾಜನು ಸೀದಾ ಉಷಸ್ತಿಯ ಬಳಿಗೆ ಬಂದು ಅವನಿಗೆ ನಮಸ್ಕಾರ ಮಾಡಿ, ಪೂಜ್ಯರೆ ತಾವು ಯಾರೆಂದು ತಿಳಿಯ ಬಯಸುತ್ತೇನೆಂದನು. ಆಗ ಉಷಸ್ತಿಯು ನೀನು, ಉಷಸ್ತಿ ಚಕ್ರಾಯಣನೆಂಬ ದೊಡ್ಡ ಉಪಾಸಕನ ಹೆಸರು ಕೇಳಿಲ್ಲವೇ? ಅವನೇ ನಾನು ಎಂದಾಗ, ರಾಜನು ಹೌದು ನಿಮ್ಮನ್ನು ಬಹಳವಾಗಿ ಕೇಳಿರುವೆನು. ನಿಮಗಾಗಿ ಎಲ್ಲಾ ಕಡೆ ಹುಡುಕಿಸಿದೆನು. ಆದರೆ ನೀವು ಸಿಗಲಿಲ್ಲ. ದೇವರ ದಯೆ ನೀವೇ ಇಲ್ಲಿಗೆ ಬಂದಿದ್ದೀರಾ, ನನ್ನ ಎಲ್ಲ ಋತ್ವಿಕ ಕರ್ಮಗಳನ್ನು ತಾವೇ ಮಾಡಿಸಬೇಕು. ನಿಮಗೆ ಎಷ್ಟು ಧನ ಕನಕಗಳು ಬೇಕು, ಅಷ್ಟೆಲ್ಲವನ್ನೂ ಕೊಡುತ್ತೇನೆ ಎಂದನು.
ಉಷಸ್ತಿಯು ಓಂಕಾರ (ಉದ್ಗೀಥಾ) ಉಪಾಸನೆಯನ್ನು ಮಾಡಿ ಅದರ ಮಹತ್ವವನ್ನು ಹೇಳಿದನು. ಪ್ರತಿಯೊಬ್ಬ ಮಾನವನು ನಿತ್ಯ ಸುಖ: ಶಾಂತಿಯನ್ನು ಪಡೆಯಲು ಹಾತೊರೆಯುತ್ತಾರೆ. ಆದರೆ ನಿತ್ಯ ಸುಖ: ಶಾಂತಿ ಬರಲು ಅಂತ:ಕರಣವೇ ಮುಖ್ಯ ಸಾಧನೆ. ಆ ಅಂತ:ಕರಣವು ಶುದ್ಧವಾಗಿರಬೇಕು. ಹಾಲು ಹಾಕುವ ಪಾತ್ರೆಯು ಶುದ್ಧಿಯಾಗಿದ್ದರೆ ಮಾತ್ರ ಹಾಲು ಆರೋಗ್ಯಕ್ಕೆ ಸಹಕಾರಿಯಾಗಿರುತ್ತದೆ. ಅಂತ:ಕರಣವು ಕೋಟ್ಯಾನು ಕೋಟಿ ಜನ್ಮಗಳಲ್ಲಿ ಮಾಡಿದ ಪಾಪ ಪುಣ್ಯ ಸೇರಿ ಕೆಟ್ಟು ಹೋಗಿದೆ. ಈ ಪಾಪ ಪುಣ್ಯಗಳು ಜನ್ಮ, ಮರಣ, ದು:ಖಗಳನ್ನು ಕೊಡುತ್ತವೆಯೇ ವಿನ: ನಿತ್ಯ ಸು:ಖ ಶಾಂತಿಯನ್ನು ಕೊಡಲಾರವು. ಅಂತ:ಕರಣದಲ್ಲಿರುವ ಈ ದೋಷಗಳು ಆತ್ಮ ಜ್ಞಾನಕ್ಕೆ ಪ್ರತಿಬಂಧಕಗಳು. ಇವುಗಳನ್ನು ನಿವಾರಣೆ ಮಾಡಿಕೊಳ್ಳದೆ ಅಂತ:ಕರಣವು ಶುದ್ಧಿ ಆಗಲಾರದು. ಅಂತ:ಕರಣವು ಶುದ್ಧಿಯಾಗದೇ ಆತ್ಮಜ್ಞಾನವು ಪ್ರಾಪ್ತಿಯಾಗುವುದಿಲ್ಲ. ಆದ್ದರಿಂದ ’ಓಂಕಾರ ಉಪಾಸನೆ’ ಮಾಡುವುದರಿಂದ ಪ್ರತಿಬಂಧಕವಾದ ಜನ್ಮ ಜನ್ಮಾಂತರ ದೋಷಗಳು ನಿವಾರಣೆ ಆಗುತ್ತದೆ. ಆಗ ಆತ್ಮ ಜ್ಞಾನವನ್ನು ಶ್ರೀ ಗುರುಗಳ ಮುಖೇನ ಕೇಳಿದರೆ ಅಜ್ಞಾನವು ನಿವಾರಣೆಯಾಗಿ ನಿತ್ಯ ಸು:ಖ ಶಾಂತಿ ರೂಪವಾದ ಆತ್ಮಜ್ಞಾನ (ಬ್ರಹ್ಮಜ್ಞಾನ ಅಥವಾ ಮೋಕ್ಷ) ವು ಪ್ರಾಪ್ತವಾಗುತ್ತದೆ.
ಹೀಗೆ ಉದ್ಗೀಥಾ (ಓಂಕಾರ) ಉಪಾಸನೆಯ ಮಹತ್ವವನ್ನು ಎಲ್ಲರಿಗೂ ತಿಳಿಯಪಡಿಸಿ, ಯಜ್ಞವನ್ನು ಧರ್ಮಕರ್ಮಗಳ ಅನುಸಾರವಾಗಿ ಮುಗಿಸಿ ಯಥೇಚ್ಚ ಧನ ಕನಕವನ್ನು ರಾಜನಿಂದ ಪಡೆದು ಸುಖದಿಂದ ಜೀವನ ಸಾಗಿಸಿದನು.

cheap air max|cheap air jordans|pompy wtryskowe|cheap nike shoes| bombas inyeccion|cheap jordans|cheap jordan shoes|wholesale jordans|cheap jordan shoes|cheap dunk shoes|cheap jordans|wholesale jewelry china|cheap nike shoes|wholesale jordanscheap wholesale jordans|cheap wholesale nike|cheap wholesale jerseys