ಮನನದಿಂದ ಅಪರೋಕ್ಷ ಜ್ಞಾನ
ಭೋಜರಾಜನ ಆಸ್ಥಾನಕ್ಕೆ ಒಬ್ಬ ಶಿಲ್ಪಿ ಮೂರು ಗೊಂಬೆಗಳನ್ನು ತಂದು ರಾಜನ ಮುಂದಿಟ್ಟ. ರಾಜನು ನೋಡುತ್ತಾನೆ. ಮೂರು ಒಂದೇ ಎತ್ತರ, ಒಂದೇ ತೂಕ, ಒಂದೇ ಬಣ್ಣ ಯಾವ ವಿಧದಿಂದಲೂ ವ್ಯತ್ಯಾಸವೇ ಇಲ್ಲ. ಆದರೆ ಒಂದಕ್ಕೆ ಒಂದು ರೂ. ಬೆಲೆ, ಮತ್ತೊಂದಕ್ಕೆ ನೂರು ರೂಪಾಯಿ ಬೆಲೆ, ಮೂರನೆಯದಕ್ಕೆ ಒಂದು ಸಾವಿರ ಬೆಲೆ ಇಟ್ಟಿದ್ದಾನೆ. ಏಕೆ ಇಷ್ಟು ವ್ಯತ್ಯಾಸ, ಅದನ್ನು ಯಾರ ಕೈಯಿಂದಲೂ ನಿರ್ಧರಿಸಲು ಆಗಲಿಲ್ಲ. ಒಬ್ಬ ಬುದ್ಧಿವಂತನಾದ ಮಂತ್ರಿ ಒಂದು ಕಡ್ಡಿ ತೆಗೆದುಕೊಂಡು ಒಂದರ ಕಿವಿಯಲ್ಲಿಟ್ಟ ಕಡ್ಡಿ ಈ ಕಿವಿಯಿಂದ ಹೊರಗೆ ಬಂತು. ಇನ್ನೊಂದು ಗೊಂಬೆಯ ಕಿವಿಯಲ್ಲಿಟ್ಟ ಆ ಕಡ್ಡಿ ಬಾಯಲ್ಲಿ ಬಂದಿತು. ಇದಕ್ಕೆ ನೂರು ರೂಪಾಯಿ ಬೆಲೆ ಸಾರ್ಥಕವಾಯಿತು ಎಂದ. ಮತ್ತೊಂದು ಗೊಂಬೆಯ ಕಿವಿಯಲ್ಲಿಟ್ಟ ಅದು ಪೂರ್ಣ ಹೃದಯಕ್ಕೆ ಹೋಯಿತು. ಇದಕ್ಕೆ ಒಂದು ಸಾವಿರ ರೂಪಾಯಿ ಬೆಲೆ ಸಾರ್ಥಕವಾಯಿತು ಎಂದ. ಅಂದರೆ ಶ್ರೀ ಗುರುಗಳಿಂದ ವೇದಾಂತ ಮಹಾವಾಕ್ಯಗಳನ್ನು ಕೇಳಿ ಅದನ್ನು ಇಲ್ಲಿಯೇ ಬಿಟ್ಟವನಿಗೆ ಒಂದು ರೂಪಾಯಿ ಬೆಲೆ. ಮತ್ತೊಬ್ಬ ಕೇಳಿದವನು ತನ್ನ ಬಾಯಿಂದ ಮತ್ತೊಬ್ಬರಿಗೆ ಹೇಳುತ್ತಾನೆ. ಅವನಿಗೆ ಇನ್ನೂ ಬೆಲೆ ಜಾಸ್ತಿ. ಮೂರನೆಯವನು ಶ್ರೀ ಗುರುಗಳಿಂದ ಕೇಳಿದ್ದನ್ನು ಹೃದಯಕ್ಕೆ ತೆಗೆದುಕೊಂಡು ಬ್ರಹ್ಮವನ್ನು ತಿಳಿದವನಿಗೆ ಅಪಾರ ಬೆಲೆ. ‘ವಿಜಾನತಃ’ ಎಂದರೆ ಹೀಗೆ ಶ್ರೀ ಗುರುಗಳಿಂದ ಶ್ರವಣ ಮಾಡಿದ ಮಹಾ ವಾಕ್ಯಗಳನ್ನು ತನ್ನ ಹೃದಯಕ್ಕೆ ಕಳಿಸಿ ಅಪರೋಕ್ಷ ಜ್ಞಾನಿಯಾಗುವನೇ ವಿಜಾನತಃ.