ಮನಸ್ಸಿನ ಕೊಳೆ ತೊಳೆದುಕೊಳ್ಳಿ (ಸಂತ ಕಬೀರರ ಕಥೆ)
ಮಹಾತ್ಮ ಕಬೀರ ಒಬ್ಬ ಭಗವದ್ಭಕ್ತ, ಅವನ ತಾಯಿ ಹಿಂದು, ತಂದೆ ಮುಸ್ಲಿಂ, ಗುರುಗಳು ರಾಮಾನಂದರು. ಅವನ ಆರಾಧ್ಯದೇವ ನಿರ್ಗುಣ-ನಿರಾಕಾರನೆನೆಸಿದ ಶ್ರೀರಾಮ. ಒಂದು ಬಾರಿ ಗಂಗಾನದಿಗೆ ಸ್ನಾನ ಮಾಡಲು ಬಂದ. ಕೈಯಲ್ಲಿ ಒಂದು ತಾಮ್ರದ ತಂಬಿಗೆ ತಂದಿದ್ದ, ಅದನ್ನು ಗಂಗೆಯ ನೀರಿನಲ್ಲಿ ಶುಭ್ರಗೊಳಿಸಿದ್ದ, ನದಿಯಲ್ಲಿ ಇಳಿದು ಶುಭ್ರಗೊಳಿಸಿದ ತಂಬಿಗೆಯಿಂದ ನೀರನ್ನು ತುಂಬಿಕೊಂಡು, ಸ್ನಾನ ಮಾಡತೊಡಗಿದ.
ಅದೇ ಜಾಗಕ್ಕೆ ಬ್ರಾಹ್ಮಣಿಕೆಯೇ ತಿಳಿಯದ ಬ್ರಾಹ್ಮಣರು ಸ್ನಾನ ಮಾಡಲು ಬಂದರು. ನದಿ ತುಂಬು ಪ್ರವಾಹದಲ್ಲಿತ್ತು. ಅವರಿಗೆ ಈಜಲೂ ಬರುತ್ತಿರಲಿಲ್ಲ. ಇಳಿದರೆ ಪ್ರವಾಹದಲ್ಲಿ ಕೊಚ್ಚಿ ಹೋಗುವೆನೇನೋ! ಎಂಬ ಭಯ. ಅದೇ ವೇಳೆಗೆ ಸ್ನಾನ ಮುಗಿಸಿ, ಶುಭ್ರವಾದ ತಾಮ್ರದ ತಂಬಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿದ್ದ ಕಬೀರನನ್ನು ಕಂಡರು. ಅವನ ಕೈಲಿದ್ದ, ಶುಭ್ರಗೊಳಿಸಿದ್ದ ತಾಮ್ರದ ತಂಬಿಗೆಯೂ ಅವರ ಕಣ್ಣುಗಳನ್ನು ಆಕರ್ಷಿಸಿತು. ಸಂತ ಕಬೀರ ಉದಾರ ಮನಸ್ಸಿನಿಂದ ಅವರಿಗೆ ಸ್ನಾನ ಮಾಡಲು ತೊಳೆದ ತಂಬಿಗೆ ಕೊಡಲು ಮುಂದೆ ಬಂದ, ಅವನನ್ನು ಕೀಳು ಜಾತಿಯವನೆಂದು ಬಗೆದು, ಬ್ರಾಹ್ಮಣರು ಹಿಂದಕ್ಕೆ ಸರಿದರು. ಅಷ್ಟೇ ಅಲ್ಲ, ತಮ್ಮದೇ ಪವಿತ್ರ ಜಾತಿ ಹಾಗೂ ಪರಿಶುದ್ಧ ಧರ್ಮ, ತಾವೇ ಪರಿಶುದ್ಧ ಧರ್ಮೀಯರು ಎಂಬಂತೆ ಅವನನ್ನೂ, ಅವನ ಜಾತಿಯನ್ನೂ ಅಲ್ಲಗಳೆಯತೊಡಗಿದರು.
ಕಬೀರ ಕೋಪ ಮಾಡಿಕೊಳ್ಳಲಿಲ್ಲ. ಸಹನೆಯಿಂದಲೇ ತಿಳಿ ಹೇಳಿದ: “ಮಿತ್ರರೇ, ತಾವು ಉತ್ತಮ ಕುಲದವರಾಗಿದ್ದೂ, ಹೀಗೆಲ್ಲಾ ಹೀನಾಯವಾಗಿ ದೂಷಿಸುವುದು ತರವೇ? ತಂಬಿಗೆ ತೊಳೆದಿದ್ದೇನೆ. ಶುಚಿಗೊಳಿಸಿದ್ದೇನೆ. ನಿಮಗೆ ಈಗ ಉಪಯೋಗಕ್ಕೆ ಬರುವುದೆಂದು ಭಾವಿಸಿ, ಕೊಡಬಯಸುತ್ತಿದ್ದೇನೆ. ನಿಮಗೆ ಇಷ್ಟವಿಲ್ಲದಿದ್ದರೆ ಮುಟ್ಟಬೇಡಿ. ಆದರೆ ಮಾನವ ಕುಲದಲ್ಲಿ ಹುಟ್ಟಿ, ಮಾನವ ಕುಲದಲ್ಲೇ ಬೆಳೆದಿರುವ ನೀವು, ವೃಥಾ ಹೀಗೆಲ್ಲಾ ಮಾನಹೀನರಂತೆ ಮೂದಲಿಸುವುದು ಸರಿಯೇ? ಬ್ರಾಹ್ಮಣರಿಗೆ ರೇಗಿಹೋಯಿತು, “ಥೂ ಕೊಳಕ, ದೂರ ಸರಿಯೋ, ನಿನ್ನಂತಹ ಕೊಳಕನನ್ನು ಮುಟ್ಟುವುದೇ ಅಲ್ಲ, ನೋಡಿದರೂ ಸಹ ರವರವಾದಿ ನರಕ” ಎಂದು ಒಕ್ಕೊರಳಿನಿಂದ ಕೂಗಿಟ್ಟರು. ಆಗಲೂ ಭಕ್ತ ಕಬೀರ ತಾಳ್ಮೆಗೆಡಲಿಲ್ಲ, ಕೋಪಗೊಳ್ಳಲಿಲ್ಲ. ಶಾಂತ ರೀತಿಯಿಂದಲೇ ತಿಳಿಹೇಳಿದ: “ಕೊಳಕು ಯಾರಲ್ಲಿಲ್ಲ? ಮೈ ಮೇಲೆ ಕಾಣುವ ಕೊಳಕೇ ಕೊಳಕಾ? ನಿಮ್ಮ ಹೊಟ್ಟೆಯಲ್ಲಿ ಕೊಳೆ ಇಲ್ಲವಾ? ಮಲಮೂತ್ರಗಳಿಂದ ತುಂಬಿರುವ ಕಣಜವೇ ನಮ್ಮ-ನಿಮ್ಮ ಎಲ್ಲರ ಹೊಟ್ಟೆಯಲ್ಲೂ ಇಲ್ಲವಾ? ಸ್ನಾನ ಮಾಡುವಾಗ ಈ ಗಂಗೆಯಲ್ಲಿ ಕೊಳೆ ಸೇರುವುದಿಲ್ಲವಾ? ಆ ಕಡೆ ನೋಡಿ ಮಕ್ಕಳ ಮೈ ತೊಳೆಯುತ್ತಿದ್ದಾರೆ. ದನಕರುಗಳ ಮೈ ತೊಳೆಯುತ್ತಿದ್ದಾರೆ. ಅಲ್ಲಿ ನೋಡಿ, ಈ ಗಂಗೆಯಲ್ಲಿ ಹೆಣಗಳು ಹೇಗೆ ತೇಲಿ ಹೋಗುತ್ತಿವೆ?!
ಇದೇ ನೀರನ್ನೇ ನಾವೆಲ್ಲರೂ ಕುಡಿಯುವುದಿಲ್ಲವಾ? ಶುದ್ಧವಾದ ನುಡಿ, ನೆಟ್ಟನೆಯ ನಡೆ ಇರುವವರೆಲ್ಲರೂ ಬ್ರಾಹ್ಮಣರೇ. ಹಾಗಿಲ್ಲದೆ ದೇವರು ಕೊಟ್ಟಿರುವ ಪವಿತ್ರವಾದ ಬಾಯಿಂದ ಹೊಲಸು ಮಾತುಗಳನ್ನು ಆಡುವವರೆಲ್ಲರೂ ಅಬ್ರಾಹ್ಮಣರೇ, ಅಂದರೆ ಕೀಳುಜಾತಿಯವರೇ. ನಾಲಿಗೆಯೇ ಕುಲವನ್ನು ಹೇಳುತ್ತದೆ ಎಂಬ ಗಾದೆಯ ಮಾತನ್ನು ನೀವು ಕೇಳಿಲ್ಲವಾ? ನೀವೇ ಜನರಿಗೆ ಅನೇಕ ಬಾರಿ ಉಪದೇಶಿಸುತ್ತಿಲ್ಲವಾ? ಹೇಳುವುದೊಂದು, ಮಾಡುವುದಿನ್ನೊಂದು-ನಿಮ್ಮ ಧ್ಯೇಯ ಧೋರಣೆ ಆದರೆ, ನೀವೂ ಸಹಾ ಅಬ್ರಾಹ್ಮಣರೇ; ಗಂಗೆಯಲ್ಲಿ ಮಿಂದು, ಮೈಕೈ ತೊಳೆದುಕೊಂಡ ಮಾತ್ರಕ್ಕೇ ನಾವು-ನೀವು ಪರಿಶುದ್ಧರಾಗುವುದಿಲ್ಲ. ಮನಸ್ಸನ್ನು ಪರಿಶುದ್ಧಿಗೊಳಿಸಿಕೊಳ್ಳಿ. ನಿಮ್ಮ ಮನಸ್ಸಿನ ಕೊಳೆ ತೊಳೆದುಕೊಳ್ಳಿ.” ನೆರೆದಿದ್ದ ಬ್ರಾಹ್ಮಣರಿಗೂ ಕಬೀರನ ಮಾತು ಹಿಡಿಸಿತು. ಅವರಲ್ಲಿ ಬಹುಮಂದಿ ಕಬೀರನ ಶಿಷ್ಯರೇ ಆಗಿಹೋದರು.