ನಾಮದೇವನ ದೈವಭಕ್ತಿ
ಪುಣ್ಯಕ್ಷೇತ್ರ ಎನಿಸಿದ ಪಂಡರಾಪುರದಲ್ಲಿ ದಾಮಾಜಿ, ಗುಣಬಾಯಿ ಎಂಬ ದೈವಭಕ್ತಿ ದಂಪತಿಗಳು. ಪಾಂಡುರಂಗನ ಬಗ್ಗೆ ಅವರಿಗೆ ಅಪಾರ ಶ್ರದ್ಧೆ-ಭಕ್ತಿ. ಒಂದೇ ಒಂದು ಕೊರತೆ ಅಂದರೆ ಅವರಿಗೆ ಮಕ್ಕಳಿಲ್ಲದವರಿಗೆ ಮುಕ್ತಿ ಇಲ್ಲ ಎಂದು ಧರ್ಮ ಹೇಳುತ್ತದೆ; ಕುಲಕ್ಕೆ ಕೀರ್ತಿ ತರುವ ಒಬ್ಬ ಮಗನನ್ನು ಕರುಣಿಸಬಾರದಾ? ಎಂದು ಹಗಲಿರುಳು ಗೋಳಾಡುತ್ತಿದ್ದರು.
ಒಂದು ದಿನ ದಾಮಾಜಿ ಮಲಗಿದ್ದಾಗ ಕನಸಿನಲ್ಲಿ ಪಾಂಡುರಂಗ ಪ್ರತ್ಯಕ್ಷನಾಗಿ ಹೇಳಿದ: “ದಾಮೂ, ನಿನ್ನ ಆಸೆ ಈಡೇರುವ ಸಮಯ ಸಂದಿದೆ. ನಾಳೆ ಬೆಳಗ್ಗೆ ನೀನು ಸ್ನಾನ ಮಾಡಲು ಚಂದ್ರಭಾಗಾ ನದಿಗೆ ಹೋಗು. ನದಿಯ ನೀರಿನಲ್ಲಿ ಒಂದು ದೊಡ್ಡ ಮುತ್ತಿನ ಸಿಂಪು ತೇಲುತ್ತಾ ಬರುತ್ತದೆ. ಅದನ್ನು ನಿಧಾನವಾಗಿ ಎತ್ತಿಕೋ ಅದರಲ್ಲಿ ದಂಪತಿಗಳಾದ ನೀವು ಬಯಸುವ ಒಂದು ಮುದ್ದಾದ ಮಗು ಇರುತ್ತದೆ.”
ದಾಮಾಜೀ ಥಟ್ಟನೆ ಕಣ್ಣು ಬಿಟ್ಟ. ಮುಂಜಾನೆಯ ಕನಸು. ನಿಜವಾಗಿಯೂ ತಮ್ಮ ಮನೋಭಿಲಾಷೆ ಈಡೇರುವುದೆಂದು ಹಿಗ್ಗಿದ, ಗುಣಾಬಾಯಿಗೂ ತಿಳಿಸಿದ. ತಾಯ್ತನ ತನಗೆ ದೊರೆಯುವುದನ್ನು ತಿಳಿದು, ಅವಳೂ ಆನಂದದಲ್ಲಿ ಹಿಗ್ಗಿ ಹೋದಳು. ಮರುದಿನ ದಾಮಾಜೀ ನದಿಯ ಬಳಿಗೆ ಹೋದ, ನದಿಯ ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ನಿಧಾನವಾಗಿ ಮೇಲೇಳುತ್ತಿದ್ದ ಅಲೆಗಳ ಹೊಡೆತದೊಂದಿಗೆ ಒಂದು ದೊಡ್ಡ ಮುತ್ತಿನ ಸಿಂಪು ತೇಲುತ್ತಾ ಬರುತ್ತಿತ್ತು. ಅದು ದಾಮಾಜಿಯ ಸಮೀಪಕ್ಕೆ ಬಂತು. ಭಕ್ತಿ ಹಾಗೂ ಆನಂದಪರವಶತೆಯಲ್ಲಿ ಅದನ್ನು ಕೈಗೆತ್ತಿಕೊಂಡ. ಅದರಲ್ಲಿ ಒಂದು ಮುದ್ದು ಮಗು ಕಿಲಕಿಲನೆ ನಗುತ್ತಾ, ಕೈಕಾಲು ಆಡಿಸುತ್ತಿದೆ! ಪಾಂಡುರಂಗನನ್ನು ಮನದಲ್ಲಿಯೇ ಧ್ಯಾನಿಸಿ, ಮಗುವನ್ನು ತನ್ನ ಮನೆಗೆ ತಂದ. ಗುಣಬಾಯಿಗೂ ತುಂಬಾ ಸಂತೋಷ ಆಯಿತು. ಅಕ್ಕರೆಯಿಂದ ಮಗುವಿಗೆ “ನಾಮದೇವ” ಎಂದು ನಾಮಕರಣ ಮಾಡಿದರು. ತುಂಬಾ ಎಚ್ಚರಿಕೆಯಿಂದ ಪೋಷಿಸತೊಡಗಿದರು.
ವರ್ಷಗಳುರುಳುತ್ತಿದ್ದಂತೆ ಹುಣ್ಣಿಮೆಯ ಪೂರ್ಣಚಂದ್ರನ ರೀತಿಯಲ್ಲಿ ಮಗು ಬೆಳೆದು ದೊಡ್ಡದಾಯಿತು. ಚಿಕ್ಕ ವಯಸ್ಸಿನಲ್ಲಿಯೇ ನಾಮದೇವ ವಿದ್ಯೆ-ಬುದ್ಧಿ ಕಲಿಯತೊಡಗಿದ. ದಾಮಾಜಿ ಈಗ ದಿನವೂ ಪಾಂಡುರಂಗನನ್ನು ಮನೆಯಲ್ಲಿ ಭಕ್ತಿಯಿಂದ ಆರಾಧಿಸುತ್ತಿದ್ದ. ನಿತ್ಯವೂ ಪಾಂಡುರಂಗನಿಗೆ ನೈವೇದ್ಯ ಮಾಡದೆ ಊಟ ಮಾಡುತ್ತಿರಲಿಲ್ಲ. ಒಂದು ಬಾರಿ ಒಂದೆರಡು ದಿನ ಯಾವುದೋ ಕಾರ್ಯನಿಮಿತ್ತ ನೆರೆಯ ಹಳ್ಳಿಗೆ ಹೋಗಬೇಕಾಯಿತು. ಮಗನಿಗೆ ಪೂಜೆಯ ಕಾರ್ಯವನ್ನು ಒಪ್ಪಿಸಿ, ದಾಮಾಜಿ ಹೊರಟುಹೋದ.
ಮಾರನೆಯ ದಿನ ಶುಚಿರ್ಭೂತನಾಗಿ ನಾಮದೇವ ಪೂಜೆಗೆ ಕುಳಿತ. ಭಕ್ತಿಯಿಂದ ಪೂಜೆಯ ನಂತರ ನೈವೇದ್ಯವನ್ನು ದೇವರ ಮುಂದೆ ತಂದಿಟ್ಟು ಶ್ರದ್ಧೆಯಿಂದ ಕೈ ಜೋಡಿಸಿಕೊಂಡು, ಪಾಂಡುರಂಗನ ವಿಗ್ರಹವನ್ನೇ ನೋಡುತ್ತಾ ನಿಂತ. ವಿಟ್ಠಲ ನೈವೇದ್ಯವನ್ನು ಸ್ವೀಕರಿಸಲು ಬರಲೇ ಇಲ್ಲ. ನಾಮದೇವರಿಗೆ ತುಂಬಾ ದುಃಖ ಆಯಿತು. ಮಗುವಿನಂತೆ ಎರಡೂ ಕಣ್ಣುಗಳಲ್ಲಿ ಕಣ್ಣೀರು ಸುರಿಸುತ್ತಾ, ಬಿಕ್ಕಿ ಬಿಕ್ಕಿ ಅಳತೊಡಗಿದ, ಪ್ರಾರ್ಥಿಸತೊಡಗಿದ:
“ವಿಟ್ಠಲಾ, ಇದೆಂತಹ ಪಕ್ಷಪಾತ? ದಿನವೂ ನಮ್ಮ ತಂದೆ ತಂದಿಟ್ಟಾಗ ತೃಪ್ತಿಯಿಂದ ಸ್ವೀಕರಿಸುತ್ತಿದ್ದವನು ಇಂದೇಕೆ ಹೀಗೆ ಸತಾಯಿಸುತ್ತಿದ್ದೀ? ನಾನು ಹುಡುಗನೆಂದು ನಿನಗೆ ಅಸಡ್ಡೆಯಾ? ನನ್ನ ಭಕ್ತಿಯಲ್ಲಿ ಪಾವಿತ್ರ್ಯತೆ ಇಲ್ಲವಾ? ಈಗ ನೀನು ಬಂದು ಸ್ವೀಕರಿಸದಿದ್ದರೆ ನನ್ನ ತಾಯಿ ತೀವ್ರವಾಗಿ ದಂಡಿಸುತ್ತಾಳೆ. ಹೀಗೆ ದಂಡನೆಗೆ ಗುರಿಮಾಡುವುದು ನಿನಗೆ ಧರ್ಮವಾ?”
ಹುಡುಗನ ಕಣ್ಣುಗಳು ಕಣ್ಣೀರಿನ ಕೊಳ ಆದುವು. ದುಃಖದಿಂದ ಮುಖ ಮಲಿನ ಆಯಿತು. ಮುಗ್ಧ ಮನದ ಬಾಲಕನ ಮುಗ್ಧ ಭಕ್ತಿಯನ್ನು ಕಂಡು, ವಿಟ್ಠಲನಿಗೆ ತುಂಬಾ ತುಂಬಾ ಸಂತೋಷ ಆಯಿತು. ಪ್ರತ್ಯಕ್ಷನಾಗಿ, ತಾನೂ ಮಗುವಿನಂತೆಯೇ ಬಂದು, ನೈವೇದ್ಯವನ್ನು ಸ್ವೀಕರಿಸಿದ. ನಗುಮೊಗದಿಂದ ನಾಮದೇವನ ಬಳಿಗೆ ಬಂದ, ಅವನ ತಲೆಯ ಮೇಲೆ ತನ್ನ ಕೋಮಲವಾದ ಹಸ್ತಗಳನ್ನಿಟ್ಟು ಹೇಳಿದ : “ನಾಮದೇವಾ, ನಿನಗೆ ಈಗ ತೃಪ್ತಿ ಆಯಿತಾ? ನಾನು ಹೀಗೆ ಪ್ರತ್ಯಕ್ಷನಾದ ವಿಚಾರ ಬೇರೆ ಯಾರಿಗೂ ತಿಳಿಸಬೇಡ” ಎಂದು ಹೇಳಿ ಮಾಯವಾದ.
ನಾಮದೇವನಿಗೆ ಈಗ ತುಂಬಾ ಸಂತೋಷ ಆಯಿತು. ಕುಣಿದಾಡುತ್ತಾ ಎರಡೂ ಕೈಗಳಿಂದ ಚಪ್ಪಾಳೆ ತಟ್ಟುತ್ತಾ, ಅಮ್ಮನ ಬಳಿಗೆ ಬಂದ, ನಡೆದ ಸಂಗತಿಯನ್ನೆಲ್ಲಾ ಚಾಚೂ ತಪ್ಪದೆ ತಿಳಿಸಿದ. ತಾಯಿಗೂ ತುಂಬಾ ಸಂತೋಷ ಆಯಿತು.
ದಾಮಾಜಿ ಮನೆಗೆ ಹಿಂದಿರುಗಿದ. ಅವನಿಗೂ ವಿಷಯ ತಿಳಿದು, ಆನಂದ-ಆಶ್ಚರ್ಯ ಒಮ್ಮೆಲೇ ಆಯಿತು, “ಮಗೂ, ನಾಳೆ ನೀನೇ ಪೂಜೆ ಮಾಡು. ನಾನು ಮರೆಯಲ್ಲೇ ನಿಂತಿದ್ದು, ನೈವೇದ್ಯವನ್ನು ಸ್ವೀಕರಿಸುವ ಪಾಂಡುರಂಗನನ್ನು ಕಣ್ಣಾರೆ ಕಂಡು ಆನಂದಿಸುವೆ.”
ಮರುದಿನ ನಾಮದೇವ ದೇವರ ಮನೆಗೆ ಬಂದ. ದಾಮಾಜಿ ಮರೆಯಲ್ಲಿಯೇ ನಿಂತ, ಭಕ್ತಿಯಿಂದ ಪೂಜಾದಿಗಳನ್ನು ಮುಗಿಸಿದ ನಂತರ, ನಾಮದೇವ ಈ ದಿನವೂ ಎಂದಿನಂತೆ ಶ್ರದ್ಧೆ-ಭಕ್ತಿಯೊಂದಿಗೆ ನೈವೇದ್ಯವನ್ನು ವಿಗ್ರಹದ ಮುಂದೆ ಇಟ್ಟು ಎರಡೂ ಕೈಗಳನ್ನು ಜೋಡಿಸಿಕೊಂಡು ನಿಂತ. ಎಷ್ಟೇ ಹೊತ್ತಾದರೂ ವಿಟ್ಠಲ ಪ್ರತ್ಯಕ್ಷ ಆಗಲೇ ಇಲ್ಲ. ನಾಮದೇವನಿಗೆ ಮತ್ತೆ ಅಳು ಬರುವಂತಾಯಿತು.
ಗದ್ಗದ ಕಂಠದಿಂದ ಪ್ರಾರ್ಥಿಸತೊಡಗಿದ- “ಪಾಂಡುರಂಗಾ, ನೀನು ಸಮಸ್ತವನ್ನೂ ತಿಳಿದಿರುವವನು, ನಿನಗೆ ನಾನು ಹೇಳುವುದು ಏನು ತಾನೇ ಇದೆ? ಸರ್ವಪ್ರಾಣಿಗಳಲ್ಲಿಯೂ ನಾನೇ ಇದ್ದೇನೆ, ಸರ್ವರನ್ನೂ ಒಂದೇ ರೀತಿ ಪ್ರೀತಿಸಿ, ಅನುಗ್ರಹಿಸುತ್ತೇನೆ ಎಂದು ಗೀತೆಯಲ್ಲಿ ನೀನೆ ಹೇಳಿದ್ದೀ. ಈ ದಿನ ನನ್ನ ತಂದೆಯವರು ಬಂದಿರುವರೆಂದು ಹೀಗೆ ಕಾಣಿಸದಿರುವುದು ನ್ಯಾಯವಾ? ನಿನ್ನ ದರ್ಶನ ಇಲ್ಲದೆ, ನಿಶ್ಚಲ ರೀತಿಯ ಭಕ್ತಿ ಉಂಟಾಗುವುದಾದರೂ ಹೇಗೆ? ಬೀಜದಿಂದ ಗಿಡವೂ, ಗಿಡದಿಂದ ಬೀಜವೂ ಉಂಟಾಗುವ ಹಾಗ್ಗೆ, ನಿಶ್ಚಲಗೊಳಿಸುವ ಭಕ್ತಿ ಇಲ್ಲದೆ ನಿನ್ನ ದರ್ಶನ ದೊರೆಯಲಾರದು. ಅದೇ ರೀತಿ ನಿನ್ನ ದರ್ಶನ ಇಲ್ಲದೆ ನಿಶ್ಚಲ ಭಕ್ತಿಯೂ ಉಂಟಾಗದು. ಆದ್ದರಿಂದ ನಮ್ಮೆಲ್ಲರಲ್ಲೂ ಭಕ್ತಿಯನ್ನು ನಿಶ್ಚಲಗೊಳಿಸುವ ಸಲುವಾಗಿ, ಬೇಗ ಬಾ, ದರ್ಶನವನ್ನು ನೀಡಿ ನೈವೇದ್ಯವನ್ನು ಸ್ವೀಕರಿಸು.”
ಪಾಂಡುರಂಗನಿಗೆ ಪವಿತ್ರವಾದ ಮಗುವಿನ ಹೃದಯದ ನಾಮದೇವನ ಮಾತು ಕೇಳುತ್ತಿದ್ದಂತೆಯೇ ಮನ ಕರಗಿ ಹೋಯಿತು. ಮತ್ತೆ ಮಗುವಿನಂತೆಯೇ ಇಬ್ಬರಿಗೂ ದರ್ಶನವನ್ನು ಕೊಟ್ಟು, ಆನಂದದಿಂದ ನೈವೇದ್ಯವನ್ನು ಸ್ವೀಕರಿಸಿದ, ಎಲ್ಲರನ್ನೂ ಆಶೀರ್ವದಿಸಿ ಮಾಯವಾದ.