ಉಪನಿಷತ್ತಿನ ಕಥೆಗಳು

ನಚಿಕೇತನ ಕಥೆ - ಮಾರ್ಪಡಿಸಿರುವುದು ಈ ಕತೆಯು ದಶೋಪನಿಷತ್ ನಲ್ಲಿ ಒಂದಾದ ಕಠೋಪನಿಷತ್ ನಲ್ಲಿ ಬರುತ್ತದೆ.

ಸಹಸ್ರಾರು ವರ್ಷಗಳ ಹಿಂದಿನ ಮಾತು. ಅಲ್ಲೊಂದು ತಪೋವನ. ಸಾಕಷ್ಟು ಮಂದಿ ಋಷಿ-ಮುನಿಗಳು ಆಶ್ರಮ ವಾಸಿಗಳು ಇದ್ದರು. ಉದ್ದಾಲಕ ಅವರಲ್ಲೊಬ್ಬ ಗಣ್ಯ ಋಷಿ. ವಾಜಶ್ರವಸ ಎಂಬ ಹೆಸರಿನಿಂದಲೂ ಅವನನ್ನು ಕರೆಯುತ್ತಿದ್ದರು. ಈ ಹೆಸರಿನ ಅರ್ಥ "ಸಾಕಷ್ಟು ಅನ್ನದಾನ ಮಾಡಿದವನು" ಎಂದು. ಪೂರ್ಣ ಪಂಡಿತ. ಸಾಕಷ್ಟು ಯಜ್ಞ-ಯಾಗಾದಿಗಳನ್ನು ಮಾಡಿ, ಹೆಸರುಗಳಿಸಿದ್ದ. ಸತ್ಪುರುಷನೇ ಆದವನು. ಆದರೆ ಹಠವಾದಿ. ತನ್ನ ಮಾತೇ ಪ್ರಾಧಾನ್ಯ ಎಂದು ಪರಿಗಣಿಸುತ್ತಿದ್ದವನು. ಅಷ್ಟೇ ಮುಂಗೋಪಿ. ಸಣ್ಣ ಸಣ್ಣ ವಿಷಯಕ್ಕೂ ಕೋಪದಲ್ಲಿ ದೂರ್ವಾಸ ಮುನಿ ಎನಿಸಿದ್ದವನು. ವಿಶ್ವವರಾದೇವಿ ಅವನ ಪತ್ನಿ. ಪತಿಗೆ ತಕ್ಕ ಸತಿ. ಗುಣಶೀಲೆ ಹಾಗೂ ಸಾಧ್ವೀಮಣಿ. ಈರ್ವರದೂ ಅನ್ಯೋನ್ಯ ಜೀವನ. ಮಕ್ಕಳಿಲ್ಲದ ಚಿಂತೆ ದಂಪತಿಗಳನ್ನು ದಾರುಣ ದು:ಖಕ್ಕೆ ಈಡುಮಾಡಿತ್ತು. ಇದಕ್ಕಾಗಿಯೇ ತನ್ನ ಪತ್ನಿಯೊಂದಿಗೆ ಪುತ್ರಕಾಮೇಷ್ಟಿ ಯಾಗವನ್ನು ಮಾಡಿದ. ಯಾಗದ ಫಲವಾಗಿ ಒಂದು ಗಂಡು ಮಗು ಆಯಿತು. ವಾಜಶ್ರವಸ ಮಗುವಿಗೆ ನಚಿಕೇತ ಎಂದು ನಾಮಕರಣ ಮಾಡಿದ. ನಚಿಕೇತ ತಾಯ್ತಂದೆಯರ ಲಾಲನೆ-ಪಾಲನೆಯಲ್ಲಿ ಮುದ್ದಾಗಿ ಬೆಳೆದ, ಚಿಕ್ಕಂದಿನಿಂದಲೇ ದೈವಭಕ್ತಿ ಮನದಲ್ಲಿ ಮೂಡಿತ್ತು. ತಂದೆಯ ದಿನನಿತ್ಯದ ಪೂಜಾದಿ ಕಾರ್ಯಗಳಲ್ಲಿ ಸಾಕಷ್ಟು ನೆರವು ನೀಡುತ್ತಿದ್ದ. ವಾಜಶ್ರವಸನೇ ಮೊದಲ ಗುರುವಾಗಿ ನಿಂತು, ಮಗನಿಗೆ ವೇದಾಭ್ಯಾಸವನ್ನು ರೂಢಿಗೊಳಿಸಿದ. ಚಿಕ್ಕ ವಯಸ್ಸಿನಲ್ಲಿಯೇ ಉಪನಯನವನ್ನೂ ಮಾಡಿ ಮುಗಿಸಿದ. ಇನ್ನು ಮುಂದೆ ಮಗನನ್ನು ಯೋಗ್ಯ ಗುರುವಿನ ಬಳಿ ವೇದಾಧ್ಯಯನವನ್ನು ಪೂರೈಸಿ ಬರಲು ಆಶೀರ್ವದಿಸಿ ಕಳುಹಿಸಿಕೊಟ್ಟ. ಗುರುಕುಲಾಶ್ರಮದಲ್ಲಿ ಸೇರಿದ ಕೆಲವೇ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳ ಪ್ರೀತ್ಯಾದರಗಳಿಗೆ ಪಾತ್ರನಾದ; ಗುರುಗಳಿಗೂ ಅಚ್ಚುಮೆಚ್ಚಿನ ಶಿಷ್ಯ ಎನಿಸಿದ.

ಒಂದು ಬಾರಿ ಆಶ್ರಮದಲ್ಲಿ ಒಂದು ಹಸು ಸತ್ತುಹೋಯಿತು. ಆ ಹಸುವನ್ನು ನಚಿಕೇತ ತುಂಬಾ ಪ್ರೀತಿಸುತ್ತಿದ್ದ. ಗುರುಗಳು ಅವನಿಗೆ ಸಮಾಧಾನ ಹೇಳಿದರು: 'ಮಗೂ ಮೃತ್ಯು ಯಾರನ್ನೂ ಬಿಡದು. ನಾವೆಲ್ಲರೂ ಮೃತ್ಯುವಿನ ಅಧೀನರೇ. ಒಂದಲ್ಲಾ ಒಂದು ದಿನ ಮೃತ್ಯುವನ್ನು ಅಪ್ಪಲೇಬೇಕು. ಜಗತ್ತು ಸಿಲುಕಿರುವುದೇ ಮೃತ್ಯುಪಂಜರದಲ್ಲಿ'. ಹತ್ತು ವರ್ಷದ ಬಾಲಕನಿಗೆ ಮೃತ್ಯು ಎಂಬುದರ ಬಗ್ಗೆ ಇನ್ನೂ ಅರಿವು ಮೂಡಿರಲಿಲ್ಲ. ಅವನು ಅಚ್ಚರಿಗೊಂಡವನಂತೆಯೇ ಪ್ರಶ್ನಿಸಿದ. "ಗುರುಗಳೇ, ಹಸು ಸತ್ತುಹೋಗಿದ್ದರೆ, ಅದು ಇಲ್ಲಿಯೇ ಉಳಿದು ಬಿದ್ದಿರಲು ಹೇಗೆ ಸಾಧ್ಯ ಆಗುತ್ತಿತ್ತು?" ಕಿರಿಯ ವಯಸ್ಸಿನ ಹುಡುಗನ ಸೂಕ್ಷ್ಮ ಬುದ್ಧಿಯನ್ನು ಕಂಡು ಬೆರೆಗಾದ ಗುರುಗಳು ಅಷ್ಟೇ ಆನಂದದಿಂದ ಹೇಳಿದರು. "ವತ್ಸಾ, ಹಸುವಿನ ಶರೀರ ಮಾತ್ರ ಇಲ್ಲಿ ಬಿದ್ದಿದೆ. ಆದರೇ ಅದರ ಪ್ರಾಣವನ್ನು ಮೃತ್ಯುದೇವ ಕೊಂಡೊಯ್ದಿದ್ದಾನೆ". ನಚಿಕೇತ ಈಗ ಇನ್ನೂ ಆಶ್ಚರ್ಯದಿಂದ ಪ್ರಶ್ನಿಸಿದ "ಗುರುಗಳೇ ಮೃತ್ಯು ಅಂದರೆ ಯಾರು? ಅದೇನು?" "ಯಮನೇ ಮೃತ್ಯುದೇವ. ಅವನೇ ನಮ್ಮೆಲ್ಲರ ಪ್ರಾಣಗಳನ್ನೂ ಸೆಳೆ ದೋಯ್ಯುವವನು." "ಅಂತಹ ಮಹಾಪುರುಷನನ್ನು ನಾವೂ ನೋಡಲು ಸಾಧ್ಯವಿಲ್ಲವೇ?" "ನೋಡಬಹುದು. ಆದರೆ ಬದುಕಿರುವಾಗ ಅಲ್ಲ. ಸತ್ತನಂತರ ಅವನ ಬಳಿಗೆ ಹೋದವರು ಮತ್ತೆ ಈ ಲೋಕಕ್ಕೆ ಬದುಕಿ ಬರಲಾರರು. "ಬದುಕಿರುವಾಗಲೇ ಯಮನನ್ನು ನೋಡಿ ಬರಲು ಯಾರಿಂದಲೂ ಸಾಧ್ಯವೇ ಇಲ್ಲವೇ?" "ಅಸಾಧ್ಯವಾದುದು ಯಾವುದೂ ಇಲ್ಲ. ತಪಶ್ಯಕ್ತಿಯಿಂದ ಸಕಲವೂ ಸಾಧ್ಯವೇ. ಆದರೆ ಅಂತಹ ಸಾಹಸಕ್ಕೆ ಯಾರೂ ಇನ್ನೂ ಕೈ ಹಾಕಿಲ್ಲ". ನಚಿಕೇತ ಈಗ ಸುಮ್ಮನಾದ. ಆದರೆ ಅವನ ಅಂತರಂಗ ಯಮನನ್ನು ಬದುಕಿರುವಾಗಲೇ ಕಂಡು ಬರಲು ತವಕಿಸತೊಡಗಿತು.

ಇದೇ ಸಮಯದಲ್ಲಿ ವಾಜಶ್ರವಸ ತಾನು ನಡೆಸಲಿದ್ದ ವಿಶ್ವಜಿತ್ ಯಾಗ ಕ್ಕಾಗಿ ಆಹ್ವಾನಿಸಲು ಗುರುಗಳ ಬಳಿ ಬಂದ. ಯಾಗಕ್ಕೆ ಆಗಮಿಸಲು ಆಹ್ವಾನಿಸಿದ. ನಚಿಕೇತನನ್ನು ಜೊತೆಯಲ್ಲಿ ಕರೆತರಲು ಪ್ರಾರ್ಥಿಸಿಕೊಂಡು, ಹಿಂದಿರುಗಿದ. ವಾಜಶ್ರವಸನ ಕೋರಿಕೆಯಂತೆ ಗುರುಗಳು ನಚಿಕೇತನೊಂದಿಗೆ ಆಗಮಿಸಿದರು. ಯಾಗ ಕಾರ್ಯದ ಪೂರ್ವಸಿದ್ಧತೆಗಳು ಭರದಿಂದ ಸಾಗುತ್ತಿದ್ದುವು.

ನಚಿಕೇತ ಗುರುವರ್ಯರನ್ನು ಪ್ರಶ್ನಿಸಿದ:

ಗುರುಗಳೇ, "ವಿಶ್ವಜೀತ್ ಯಾಗ ವನ್ನು ಮಾಡುವುದರ ಉದ್ದೇಶ ಏನು?" ಗುರುಗಳು ಹೇಳಿದರು,

"ವಿಶ್ವಜಿತ್ ಅಂದರೆ ವಿಶ್ವವನ್ನು ಗೆಲ್ಲುವುದು ಎಂದರ್ಥ. ಈ ಯಾಗವನ್ನು ಯಶಸ್ವಿಯಾಗಿ ಪೂರೈಸಿದವರು ವಿಶ್ವ ಶ್ರೇಷ್ಠ ವ್ಯಕ್ತಿ ಎನಿಸುವರು". ಸತ್ತ ನಂತರ ಸ್ವರ್ಗ ಸೇರುವರು. ಈ ಯಾಗದಲ್ಲಿ ಅನ್ನ, ದನ, ಸಿರಿ ಮೊದಲಾದ ಸಂಪತ್ತುಗಳನ್ನು ಅರ್ಹರೆನಿಸಿದವರಿಗೆ ಯಥೋಚಿತವಾಗಿ ದಾನ ಮಾಡಬೇಕಾಗುವುದು. ಅದರಲ್ಲೂ ಅನ್ನದಾನ, ಗೋದಾನಗಳಿಗೆ ಹೆಚ್ಚಿನ ಪ್ರಾಶಸ್ತ್ಯ. "ಇನ್ನೇನನ್ನು ದಾನ ಮಾಡುವರು?"

ಕುತೂಹಲದಿಂದ ನಚಿಕೇತ ಗುರುಗಳ ಮುಖವನ್ನೇ ಅವಲೋಕಿಸುತ್ತಾ ಕೇಳಿದ.

ಗುರುಗಳು ಹೇಳಿದರು: "ತನಗೆ ಯಾವುದು ಅತಿಪ್ರೀತಿಯ ವಸ್ತುವೋ, ಅದನ್ನು ದಾನ ಮಾಡುವುದೇ, ಇಂತಹ ಯಾಗದ ಸಂದರ್ಭದಲ್ಲಿ ಶ್ರೇಷ್ಠದಾನ ಎನಿಸುವುದು". ಗುರುಗಳ ಮಾತನ್ನು ಕೇಳುತ್ತಿದ್ದಂತೆ ನಚಿಕೇತನಿಗೆ ಥಟ್ಟನೆ ಅದೇನೋ ಹೊಳೆದಂತಾಯಿತು. ಅವನು ಪ್ರಶ್ನಿಸಿದ: "ಗುರುಗಳೇ, ನಮ್ಮ ತಂದೆಗೆ ನಾನೇ ಅತಿ ಪ್ರೀತಿಯವನು ನನ್ನನ್ನೂ ಯಾರಿಗಾದರೂ ದಾನ ಮಾಡಬಹುದಲ್ಲಾ!" ಕಿರಿ ವಯಸ್ಸಿನ ಬಾಲಕನ ಬಾಯಿಂದ ಬರುತ್ತಿದ್ದ ಇಂತಹ ಅಸಾಧಾರಣ ಬುದ್ಧಿಶಕ್ತಿಯನ್ನು ಕಂಡು, ತಬ್ಬಿಬ್ಬಾದರು. ಯಾಗದ ಪ್ರಾರಂಭದ ದಿನ. ಸಹಸ್ರಾರು ಮಂದಿ ಋಷಿ-ಮುನಿಗಳು ಕೂಡಲು ಅನುಕೂಲವೆನಿಸುವ ಚಪ್ಪರ ಹಾಕಲಾಗಿತ್ತು. ನಚಿಕೇತ ತನ್ನ ಗುರುಗಳೊಂದಿಗೆ ಯಾಗ ಮಂಟಪದ ಬಳಿ ಬಂದ. ಅವನನ್ನು ಕಂಡ ತಾಯ್ತಂದೆಯರು ಆನಂದದಲ್ಲಿ ಹಿಗ್ಗಿ ಹೋದರು. ಯಾಗ ನಿರ್ವಹಣೆಗಾಗಿ ಬಂದಿದ್ದ ಪುರೋಹಿತರು ವಾಜಶ್ರವಸನಿಗೆ ಪ್ರಾರಂಭದಲ್ಲಿಯೇ ತಾಕೀತು ಕೊಟ್ಟಿದ್ದರು: "ಯಾಗ ಮುಗಿಯುವವರೆಗೂ ಶಾಂತಿಯಿಂದ ಕಾರ್ಯ ನಿರ್ವಹಿಸಬೇಕು. ಕೋಪಕ್ಕೆ ಎಡೆಕೊಡಬಾರದು. ಹಾಗೆ ನಡೆದುಕೊಳ್ಳದಿದ್ದರೆ ಯಾಗ ಸಾರ್ಥಕ ಎನಿಸದು".

ನಚಿಕೇತನಿಗೆ ಗುರೂಪದೇಶದ ಮುಖೇಣ ಯಾಗವು ಪುಣ್ಯದ ಕೆಲಸ. ಅಂತಹ ಪುಣ್ಯಕಾರ್ಯದಲ್ಲಿ ಏನೇ ಅಚಾತುರ್ಯ ಆದರೂ ಸದ್ಗತಿ ದೊರೆಯದೆ, ನರಕ ಪ್ರಾಪ್ತಿ ಆಗುವುದೆಂಬ ವಿಷಯ ತಿಳಿದಿತ್ತು.ಯಾಗ ಶುಭಮಹೂರ್ತದಲ್ಲಿಯೇ ಪ್ರಾರಂಭ ಆಯಿತು. ದಾನಾದಿಗಳ ಕಾರ್ಯ ಒಂದೊಂದಾಗಿ ನಡೆಯತೊಡಗಿದವು. ಗೋದಾನದ ದಿನವೂ ಬಂತು. ನಚಿಕೇತ ದಾನಕ್ಕಾಗಿ ನಿಲ್ಲಿಸಿದ್ದ ಹಸುಗಳನ್ನು ಒಂದೊಂದಾಗಿ ನೋಡುತ್ತಾ ಬಂದ. ಅಲ್ಲಿದ್ದ ಹಸುಗಳೆಲ್ಲವೂ ಹಲ್ಲಿಲ್ಲದವುಗಳು, ಮುದಿಗೊಡ್ಡುಗಳು, ಬಂಜೆಗಳು - ಹೀಗೆ ಅಪ್ರಯೋಜಕವಾದುವುಗಳೇ. ಇಂತಹ ಕೆಲಸಕ್ಕೆ ಬಾರದ ದನಗಳನ್ನು ತನ್ನ ತಂದೆ ದಾನ ಮಾಡಲಿರುವುದನ್ನು ಕಂಡು, ನಚಿಕೇತನ ಮನ ನೊಂದಿತು. ಇಂತಹ ದಾನದಿಂದ ತನ್ನ ತಂದೆಗೆ ಸದ್ಗತಿ ದೊರೆಯದೆಂದು ತಿಳಿದು, ತುಂಬಾ ದು:ಖಿತನಾದ ಹಾಗೂ ಯೋಚಿಸತೊಡಗಿದ: 'ನಮಗೆ ಪ್ರಿಯವಾದುದ್ದನ್ನು ದಾನ ಮಾಡಿದರೆ ಮಾತ್ರ ಯಾಗದಲ್ಲಿ ಸದ್ಗತಿ ದೊರೆಯುವುದೆಂದು ಗುರುಗಳು ಹೇಳಿದ್ದಾರೆ. ನಾನೂ ನನ್ನ ತಂದೆಗೆ ತುಂಬಾ ಪ್ರೀತಿ ಆದವನೇ. ನನ್ನನ್ನೂ ಯಾರಿಗಾದರೂ ನನ್ನ ತಂದೆ ದಾನ ಮಾಡಿದರೆ, ಅದರಿಂದಲಾದರೂ ಅವರಿಗೆ ಸದ್ಗತಿ ದೊರೆಯುವುದು'. ಎಂದು ಯೋಚಿಸುತ್ತಾ ತನ್ನ ತಂದೆಯ ಬಳಿಗೆ ಬಂದು "ಅಪ್ಪಾಜೀ, ನನ್ನನ್ನೂ ಯಾರಿಗಾದರೂ ಈ ಸಂದರ್ಭದಲ್ಲಿ ದಾನ ಮಾಡಬಯಸುವಿರಾ?" ಗೋದಾನದ ಸಿದ್ಧತೆಯ ಗಡಿಬಿಡಿ ಯಲ್ಲಿದ್ದ ತಂದೆಗೆ ಮಗನ ಮಾತು ಕೇಳಿಸಿಯೂ, ಕೇಳಿಸದಂತಿತ್ತು. ಮತ್ತೆ ನಚಿಕೇತ ಅಪ್ಪನಿಗೆ ಅದೇ ಪ್ರಶ್ನೆ ಹಾಕಿದ, ವಾಜಶ್ರವನಿಗೆ ಮಿತಿಮೀರಿದ ಕೋಪ ಬಂತು. ಆದರೂ ಈ ಸಂದರ್ಭದಲ್ಲಿ ಕೋಪಿಸಿಕೊಳ್ಳಬಾರದೆಂದು ಮೌನದ ಪಟ್ಟು ಹಿಡಿದ, ಮತ್ತೆ ನಚೀಕೇತ ಅದೇ ಪ್ರಶ್ನೆ ಹಾಕಿದ. ಈಗ ವಾಜಶ್ರವಸನ ತಲೆ ತುಂಬಾ ಬಿಸಿ ಆಯಿತು. ಕೋಪದ ಭಾರದಲ್ಲಿಯೇ ಉತ್ತರಿಸಿ,

"ನಿನ್ನನ್ನು ಯಮನಿಗೆ ದಾನವಾಗಿ ಕೊಟ್ಟಿರುವೆ, ಹೋಗು."

ವಾಜಶ್ರವಸ ಕೋಪಾವೇಶದ ಮಾತುಗಳನ್ನು ಆಲಿಸಿದ ಋಷಿ-ಮುನಿಗಳು ಗಾಬರಿಯಿಂದ ಮೂಕರಂತಾದರು. ಎಲ್ಲರೂ ವಾಜಶ್ರವಸನನ್ನು ದೂಷಿಸತೊಡಗಿದರು: "ಯಾಗದ ಸಮಯದಲ್ಲಿ ಎಂತಹ ಅವಿವೇಕದ ಮಾತಾಡಿದೆ?ನೀನು ಈಗ ಅದರಂತೆ ನಡೆದುಕೊಳ್ಳಲೇಬೇಕಾಗುವುದು ಇದ್ದ ಒಬ್ಬ ಮುತ್ತಿನಂತಹ ಮಗನನ್ನು ನೀನೇ ನಿನ್ನ ಅವಿವೇಕದಿಂದ ಕಳೆದುಕೊಂಡಂತಾಯಿತಲ್ಲಾ!" ವಾಜಶ್ರವಸನಿಗೂ ಈಗ ಏರಿದ್ದ ಕೋಪ ಇಳಿದಿತ್ತು. ವಿಶ್ವವರಾ ದೇವಿಯೋ, ವಿಚಾರ ತಿಳಿದ ಕೂಡಲೇ ಪ್ರಜ್ಞೆ ತಪ್ಪಿ ಬಿದ್ದಳು. ದಿಕ್ಕು ತೋಚದಂತಾಗಿ ವಾಜಶ್ರವಸ ತಲೆಯ ಮೇಲೆ ಕೈ ಇಟ್ಟುಕೊಂಡು ಕುಳಿತ.

ತಂದೆಯ ಇಂದಿನ ಕರುಣಾಜನಕ ಸ್ಥಿತಿಯನ್ನು ಅರ್ಥಮಾಡಿಕೊಂಡ ನಚಿಕೇತನೇ ತಂದೆಗೆ ಸಮಾಧಾನ ಹೇಳಿದ: "ಅಪ್ಪಾಜಿ, ನೀವು ಹೇಳಿದ್ದು, ನನಗೆ ಒಳ್ಳೆಯದೇ ಆಯಿತು. ನಾನೇ ಯಮದೇವನನ್ನು ಸಂದರ್ಶಿಸಲು ತವಕಿಸುತ್ತಿದ್ದೆ. ನೀವು ಆ ಮಾರ್ಗವನ್ನು ಸುಗಮಗೊಳಿಸಿದ್ದೀರಿ. ನೀವು ನನ್ನ ಬಗ್ಗೆ ಚಿಂತಿಸದಿರಿ. ನಾನು ನನ್ನ ಸದ್ವರ್ತನೆಯಿಂದ ಯಮನನ್ನೂ ಮೆಚ್ಚಿಸುತ್ತೇನೆ. ಅವನ ಅನುಗ್ರಹದಿಂದ ಹಿಂದಿರುಗಿ ಬರುತ್ತೇನೆ." ಅನ್ನುತ್ತಾ ಅಲ್ಲಿಯೇ ಕುಳಿತು, ಯಮಲೋಕವನ್ನು ತಲುಪಲು ಧ್ಯಾನನಿರತನಾದ. ಕೆಲವೇ ಕ್ಷಣ ದಲ್ಲಿ ಯಮಲೋಕ ಸೇರಿದ. ಆ ಲೋಕವೇ ಸಂಯಮಿನೀ ನಗರ ಎಂದು ಹೆಸರು ಪಡೆದಿತ್ತು. ಯಮರಾಜನೇ ಅಲ್ಲಿನ ಒಡೆಯ. ಬಾಲಕನಾದ ಈ ವಟುವನ್ನು ಯಮದೂತರು ಗೌರವದೊಂದಿಗೆ ಅರಮನೆಗೆ ಕರೆತಂದರು. ಆದರೆ ಆ ಸಂದರ್ಭದಲ್ಲಿ ಯಮ ಇರಲಿಲ್ಲ.ಯಮನ ಮಡದಿ ಅನಿರೀಕ್ಷಿತವಾಗಿ ಬಂದಿರುವ ಅಪರಿಚಿತ ಬ್ರಾಹ್ಮಣ ವಟುವನ್ನು ಕಂಡು ಅಚ್ಚರಿ ಗೊಂಡರೂ, ಗೃಹಧರ್ಮಕ್ಕೆ ಲೋಪ ಬಾರದಂತೆ ನೋಡಿಕೊಳ್ಳಲು ನಿರ್ಧರಿಸಿದಳು. ಮನೆಯ ಬಾಗಿಲಿನಲ್ಲಿಯೇ ನಿಂತಿದ್ದ ನಚಿಕೇತನ ಬಳಿ ಸಾರಿ, ಹೃನ್ಮನಪೂರ್ವಕವಾಗಿ ಸ್ವಾಗತಿಸಿದಳು. ಆತಿಥ್ಯ ಸ್ವೀಕಾರಕ್ಕಾಗಿ ಒಳ ಬರಲು ನಚಿಕೇತನಲ್ಲಿ ವಿನಂತಿಸಿಕೊಂಡಳು. ಅಷ್ಟೇ ವಿನಮ್ರತೆಯೊಂದಿಗೆ ನಚಿಕೇತ ಹೇಳಿದ: "ಅಮ್ಮಾ ನಾನು ಈಗ ಯಮರಾಜನ ಅಡಿ ಆಳು, ತನ್ನ ತಂದೆ ಯಾಗದಲ್ಲಿ ಆತನಿಗೆ ಸರ್ವರ ಸಮ್ಮುಖದಲ್ಲಿ ದಾನ ಮಾಡಿದ್ದಾರೆ. ತಮ್ಮ ಪತಿವರ್ಯರಾದ ಯಮರಾಜರ ಅನುಮತಿ ಇಲ್ಲದೇ ನಾನು ಒಳಬರಲಾರೆ."

ಯಮನ ಹೆಂಡತಿ ದೈನ್ಯತೆಯೊಂದಿಗೆ "ಅವರು ಮನೆಯಲ್ಲಿಲ್ಲ. ಹೊರಗೆ ಹೋಗಿದ್ದಾರೆ. ಮನೆಗೆ ಬರಲು ಇನ್ನೂ ಎರಡು ದಿನಗಳಾಗಬಹುದು. ಅದುವರೆಗೂ ಅತಿಥಿಯಾದ ನಿಮ್ಮನ್ನು ಹೊರಗೆ ಹೇಗೆ ಇಟ್ಟಿರಲಿ? ದಯಮಾಡಿ ಒಳಗೆ ಬನ್ನಿ. ಆತಿಥ್ಯ ಸ್ವೀಕರಿಸಿ. ಇದರಿಂದ ನನಗೆ, ನನ್ನ ಪತಿಗೆ ಈರ್ವರಿಗೂ ಸಂತೋಷ ಆಗುವುದು. "ನಚಿಕೇತನ ಮನಸ್ಸು ಒಳಗೆ ಪ್ರವೇಶಿಸಲು ಒಡಂಬಡಲಿಲ್ಲ. ಕ್ಷಮಿಸಲು ಪ್ರಾರ್ಥಿಸುತ್ತಾ ಮನೆ ಬಾಗಿಲ ಬಳಿಯೇ, ತನ್ನ ದಣಿಯಾದ ಯಮನ ನಿರೀಕ್ಷಣೆಯಲ್ಲಿಯೇ ಕುಳಿತ. ಯಮ ನಚಿಕೇತನ ಆಗಮನದ ಎರಡನೆಯ ದಿನ ಬಂದ. ಅವನಿನ್ನೂ ಬರುತ್ತಿದ್ದಂತೆಯೇ ಸೇವಕನೊಬ್ಬನು ಒಂದೇ ಉಸುರಿಗೆ ಹೇಳಿದ: *"ಪ್ರಭುಗಳೇ, ಎರಡು ದಿನಗಳ ಹಿಂದೆ ಇಲ್ಲಿಗೆ ತಮ್ಮ ದರ್ಶನಾರ್ಥವಾಗಿ ಒಬ್ಬ ಬ್ರಾಹ್ಮಣ ವಟು ಬಂದಿದ್ದಾನೆ. ಎಷ್ಟೇ ಹೇಳಿದರೂ, ಮನೆಯೊಳಗೆ ಪ್ರವೇಶಿಸದೆ, ಬಾಗಿಲ ಬಳಿಯೇ ತಮ್ಮ ನಿರೀಕ್ಷಣೆಯಲ್ಲಿ ಕಾಯುತ್ತಾ ಕುಳಿತಿದ್ದಾನೆ. ಅನ್ನ - ನೀರನ್ನೂ ಸಹಾ ಮುಟ್ಟಿಲ್ಲ."* ಯಮದೇವ ಅರಮನೆ ಬಾಗಿಲ ಬಳಿ ಬಂದ. ವಟು ಕಣ್ಣುಮುಚ್ಚಿಕೊಂಡು, ತಪೋಮಗ್ನನಾಗಿದ್ದಾನೆ. ಅವನ ಮುಖದಲ್ಲಿನ ತೇಜಸ್ಸನ್ನು ಕಂಡು ಯಮದೇವ ಬೆಕ್ಕಸ ಬೆರಗಾದ. ಯಮ ನಿಧಾನವಾಗಿ ಅವನ ತಲೆಗೂದಲುಗಳಲ್ಲಿ ಮೆಲ್ಲನೆ ಬೆರಳಾಡಿಸುತ್ತಾ ಕರೆದ:

"ಮಗೂ...." ನಚಿಕೇತ ಕಣ್ತೆರೆದ. ನಚಿಕೇತ ತನಗಿಂತಲೂ ವಯಸ್ಸಿನಲ್ಲಿ ತುಂಬಾ ಚಿಕ್ಕವನಾದರೂ ಸಹ, ಯಮದೇವ ತನ್ನೆರಡೂ ಕೈಗಳನ್ನೂ ಅನನ್ಯ ಭಕ್ತಿಯೊಂದಿಗೆ

"ಬ್ರಾಹ್ಮಣಶ್ರೇಷ್ಠನೇ, ನೀನ್ಯಾರೋ ನಾನರಿಯೇ. ನಾನಿಲ್ಲದ ಸಮಯದಲ್ಲಿ ಅನಿರೀಕ್ಷಿತವಾಗಿ ಬಂದಿರುವೆ. ಮೂರು ದಿನಗಳಿಂದಲೂ ನನ್ನ ನಿರೀಕ್ಷಣೆಯಲ್ಲಿಯೇ ಉಪವಾಸವಿದ್ದು, ತಪೋಮಗ್ನನಾಗಿರುವೆ. ನಮ್ಮಿಂದ ಅಪರಾಧವಾಯಿತು. ಮೂರು ದಿನಗಳ ಕಾಲ ಉಪವಾಸ ಇರಿಸಿದ ಅಪರಾಧಕ್ಕಾಗಿ, ದಿನಕ್ಕೊಂದರಂತೆ ಮೂರು ಅಪೂರ್ವ ವರಗಳನ್ನು ನೀಡಬಯಸುತ್ತೇನೆ. ಏನು ಬೇಕಾದರೂ ಕೇಳು." ನಚಿಕೇತ ಥಟ್ಟನೆ ಎದ್ದು ನಿಂತ. ಶ್ರದ್ಧೆ-ಭಕ್ತಿಯೊಂದಿಗೆ ಯಮರಾಜನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ವಿನಮ್ರತೆಯೊಂದಿಗೆ ನುಡಿದ: "ಒಡೆಯಾ, ನಾನು ವಾಜಶ್ರವಸ ಮಹರ್ಷಿಯ ಮಗ, ಆತನು ನಿರ್ವಹಿಸುತ್ತಿರುವ ವಿಶ್ವಜಿತ್ ಯಾಗದಲ್ಲಿ ನನ್ನನ್ನು ತಮಗೆ ದಾನಮಾಡಿದ್ದಾನೆ. ನಾನು ತಮ್ಮ ಕಿಂಕರ. ಹೀಗಿರುವಾಗ ವರಗಳನ್ನು ಪಡೆಯುವ ಪ್ರಮೇಯವೇ ಬಂದಿಲ್ಲವಲ್ಲಾ!?" ಯಮರಾಜನಿಗೆ ವಟುವರ್ಯನ ಮಾತುಗಳನ್ನು ಕೇಳಿ, ತುಂಬಾ ಸಂತೋಷ ಆಯಿತು. ಮೆಚ್ಚುಮನದೊಂದಿಗೆ ಹೇಳಿದ: “ನಚಿಕೇತ, ನಿಜವಾಗಿ ಯೋಗ್ಯಮಹರ್ಷಿಯ ಯೋಗ್ಯ ಮಗ ಎಂಬುದನ್ನು ನೀನು ನಿನ್ನ ಮಾತುಗಳಿಂದ ತೋರಿಸಿಕೊಟ್ಟಿರುವೆ. ನಾನು ನಿನ್ನ ನಡೆ-ನುಡಿಗೆ ಮಾರುಹೊಗಿದ್ದೇನೆ. ವರಗಳನ್ನು ನೀಡಲು ನಾನು ಮಾತುಕೊಟ್ಟಿರುವುದರಿಂದ, ವಚನಭ್ರಷ್ಠ ಎನಿಸಲಾರೆ. ಕೇಳು, ಯಾವುದಾದರೂ ಮೂರು ವರಗಳನ್ನು ಕೇಳು. ನಾನು ಸಂತೋಷದಿಂದಲೇ ಅನುಗ್ರಹಿಸುತ್ತೇನೆ. ನಚಿಕೇತನಿಗೂ ಈಗ ಸಮಾಧಾನದೊಂದಿಗೆ ಸಂತೋಷವೂ ಉಂಟಾಯಿತು. ಅಲ್ಲದೆ ಯಮರಾಜನೇ ಸಂತೋಷಿಸಿ, ಅನುಗ್ರಹಿಸಲು ಬಂದಿರುವಾಗ ಮೊದಲನೆ ವರಕ್ಕಾಗಿ ವಿನಮ್ರತೆಯಿಂದಲೇ ಬೇಡಿದ:

"ಒಡೆಯಾ, ಕೋಪ ಅನರ್ಥಸಾಧನ ಎಂಬ ವಿಷಯ ನಿಮಗೂ ತಿಳಿದುದೇ ಆಗಿದೆ. ನನ್ನ ತಂದೆ ತುಂಬಾ ಮುಂಗೋಪಿ. ಇದರಿಂದ ಇಲ್ಲದ ಅನರ್ಥಗಳಿಗೆ ಕಾರಣವಾಗುತ್ತಾ ಇದ್ದಾರೆ. ಆದ್ದರಿಂದ ಅವರಲ್ಲಿರುವ ಕೋಪದ ಭಾವೋದ್ರೇಕತೆಯನ್ನು ಹೋಗಲಾಡಿಸಿ, ಸಾತ್ವಿಕ ಮನೋಭಾವವನ್ನು ವೃದ್ಧಿಗೊಳಿಸಿ." ಯಮಧರ್ಮ ಬಾಲಕ ನಚೀಕೇತನ ಮುಂದಾಲೋಚನೆಯನ್ನು ಕಂಡು, ಮನಸಾರೆ ಹೊಗಳುತ್ತಾ ಹೇಳಿದ: "ಆಯಿತು, ಇನ್ನು ಮುಂದೆ ನಿನ್ನ ತಂದೆ ಕೋಪವನ್ನು ತೊರೆದು, ಸನ್ಮನೋಭಾವದಿಂದಲೇ ಕಾಣುತ್ತಾರೆ. ಇನ್ನು ಎರಡನೆಯ ವರವನ್ನು ಕೇಳು."

ನಚಿಕೇತ ಕ್ಷಣಕಾಲ ಯೋಚಿಸಿ, ಹೇಳಿದ:

"ಒಡೆಯ, ದೇವಲೋಕದಲ್ಲಿ ಯಾರಿಗೂ ಜನನ ಮರಣಗಳ ಬಾಧೆ ಇರುವುದಿಲ್ಲ. ಮುಪ್ಪು-ಸಾವುಗಳ ಅಂಜಿಕೆಯೂ ಇರದು. ಅಂತಹ ದೇವತ್ವವನ್ನು ಪಡೆಯಲು ಅಗ್ನಿವಿದ್ಯೆಯನ್ನು ಕಲಿಯುವ ಅವಶ್ಯಕತೆ ಇದೆ ಎಂದು ಕೇಳಿದ್ದೇನೆ. ಕೃಪೆ ಮಾಡಿ ನನಗೆ ಆ ವಿದ್ಯೆಯನ್ನು ಅನುಗ್ರಹಿಸಿ." ಹುಡುಗನ ಇಂತಹ ಅಸಾಧಾರಣ ಬುದ್ಧಿಶಕ್ತಿಯನ್ನು ಕಂಡು, ಯಮದೇವ ಮತ್ತಷ್ಟು ಬೆಕ್ಕಸ ಬೆರಗಾದ. ಇಂತಹ ಅಪೂರ್ವ ವಿದ್ಯೆಯನ್ನು ಕಲಿಯಲು ಈ ಕಿರಿಯ ಬಾಲಕ ಅರ್ಹನಿರುವನೆಂಬುದರ ಅರಿವು ಯಮನ ಅಂತರಾಳದಲ್ಲಿ ಮೂಡಿತು. ಅವನು ಪ್ರಸನ್ನ ವದನನಾಗಿ ಹೇಳಿದ: “ಕುಮಾರ, ನಿನ್ನಲ್ಲಿ ಅಂತಹ ವಿಶೇಷ ವಿದ್ಯೆಯನ್ನು ಕಲಿಯುವ ಶ್ರದ್ಧಾಸಕ್ತಿ ಇರುವುದನ್ನು ಕಂಡು, ನನಗೆ ಅತ್ಯಾನಂದವೇ ಆಗಿದೆ. ನಿನ್ನಂತಹ ಶ್ರದ್ಧಾಳುವಿಗೇ ಅಂತಹ ಜ್ಞಾನ ಲಭ್ಯ. ಇದನ್ನೇ "ಶ್ರದ್ಧಾವಾನ್ ಲಭತೇ ಜ್ಞಾನಂ" ಎಂದೆನ್ನುತ್ತಾರೆ. ನಿನಗೆ ಒಂದು ಸಲ ಹೇಳಿದರೂ, ಗ್ರಹಿಸುವಂತಹ ಬುದ್ದಿ-ಸಾಮರ್ಥ್ಯ ಇದೆ. ಆದ್ದರಿಂದಲೇ ಇದೋ ಉಪದೇಶಿಸುತ್ತಿದ್ದೇನೆ” ಎನ್ನುತ್ತ ಅಗ್ನಿವಿದ್ಯೆಯನ್ನು ಕಲಿಸಿಕೊಟ್ಟನು. ನಚಿಕೇತನು ಯಮನಿಂದ ಅಗ್ನಿವಿದ್ಯೆಯನ್ನು ಪಡೆದು, ಪುನೀತನೆನಿಸಿದ. ಯಮದೇವ ಹೇಳಿದ: "ವತ್ಸ, ನಿಜಕ್ಕೂ ನೀನು ಜ್ಞಾನವಂತ, ಅಗ್ನಿವಿದ್ಯೆಯನ್ನು ತಿಳಿದಿರುವ ನಿನಗೆ ಇನ್ನೊಂದು ವರವನ್ನು ಅನುಗ್ರಹಿಸುತ್ತಿದ್ದೇನೆ. ಅದರಂತೆ ನಾನು ಉಪದೇಶಿಸಿರುವ ಈ ಅಗ್ನಿವಿದ್ಯೆ "ನಚಿಕೇತಾಗ್ನಿ" ಎಂದು ನಿನ್ನ ಹೆಸರಿನಲ್ಲಿಯೇ ಪ್ರಸಿದ್ಧಿ ಪಡೆಯಲಿ. ಈ ವಿದ್ಯೆಯನ್ನು ಕಲಿತವರಿಗೆ ಸ್ವರ್ಗದಲ್ಲಿ ದೇವತ್ವ ದೊರೆಯಲಿ" ಇನ್ನು ನೀನು ಬಯಸುವ ಮೂರನೆಯ ವರವನ್ನು ಕೇಳು." ನಚಿಕೇತ ಹೇಳಿದ:

ಮೂರನೆಯ ವರ ಆತ್ಮನನ್ನು ಕುರಿತುದಾಗಿದೆ. "ಮಾನವ ದೇಹವು ನಶ್ವರವಾದರೂ, ಆತ್ಮ ಅವಿನಾಶಿ ಎನ್ನುತ್ತಾರೆ. ಮಾನವನು ತನ್ನ ಪಾಪ-ಪುಣ್ಯಗಳ ಕೃತ್ಯಗಳ ಕಾರಣ ಮತ್ತೆ ಮತ್ತೆ ಹುಟ್ಟುತ್ತಾ-ಸಾಯುತ್ತಲೇ ಇರುತ್ತಾನೆ. ಈ ರೀತಿಯ ಜನನ-ಮರಣಗಳ ಬಾಧೆಯಿಂದ ಪಾರಾಗಲು ಮಾನವನಿಗಿರುವ ಸುಲಭೋಪಾಯ ಯಾವುದು?" ಇಂತಹ ರಹಸ್ಯಪೂರ್ಣ ವಿದ್ಯೆಯ ಬಗ್ಗೆ ಈ ಪುಟ್ಟ ಬಾಲಕನಿಗೆ ತಿಳಿಸುವುದಾದರೂ ಹೇಗೆ? ಇದನ್ನು ಬಿಟ್ಟು ಬೇರೆ ಯಾವುದಾದರೂ ವರವನ್ನು ಬೇಡಲು ಒತ್ತಾಯಿಸಿದ. ಆದರೆ ನಚಿಕೇತ ತನ್ನ ನಿರ್ಧಾರದಿಂದ ಮಣಿಯದಿರುವುದನ್ನು ಕಂಡು ಬೆರಗಾಗುತ್ತಾ ಹೇಳಿದ: "ಕುಮಾರ, ನಿನ್ನಂತಹ ದಿಟ್ಟ ನಿಲುವಿನ ಬಾಲಕನಿಗೆ ಯಾವುದನ್ನೂ ಗ್ರಹಿಸಲು ಕಷ್ಟ ಆಗದು. ನಿನ್ನಂತಹವನಿಗೆ ಆತ್ಮವಿದ್ಯೆಯನ್ನು ಬೋಧಿಸಲು ನನಗೆ ಹೆಮ್ಮೆ ಆಗುತ್ತಿದೆ. ನನ್ನ ಉಪದೇಶವನ್ನು ಮನಸ್ಸಿಟ್ಟು ಆಲಿಸು.

ನಿನ್ನ ವಿಚಾರ ಮುಕ್ತಿ ಪ್ರಧಾನವಾದುದು. ದು:ಖಗಳಿಂದ ದೂರ ಇರುವುದನ್ನೇ ಮುಕ್ತಿ ಎನ್ನುವರು. ಮುಕ್ತಿಗೆ ಭಕ್ತಿಯೇ ಪ್ರಧಾನವಾದುದು. ದೇವರು ಸಕಲ ಜೀವಿಗಳಲ್ಲೂ ಇದ್ದಾನೆ.ಆತ್ಮ ಸ್ವರೂಪಿಯಾಗಿದ್ದಾನೆ. ಅವನೇ ಚೇತನ. ಅವನ ಇರುವಿಕೆಯಿಂದಲೇ ಈ ದೇಹಕ್ಕೆ ಚೈತನ್ಯ ಬರುವುದು. ಮೂರು ತರನಾದ ಶರೀರವಿರುವುದು, ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಶರೀರ. ಈ ಸೂಕ್ಷ್ಮ ಶರೀರವೇ ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಹೋಗುವುದು. ಅದು ೧೭ ತತ್ವಗಳಿಂದ ಕೂಡಿದೆ. ಅವು ಪಂಚಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಪ್ರಾಣವಾಯುಗಳು, ಮನಸ್ಸು ಮತ್ತು ಬುದ್ಧಿ. ಈ ೧೭ ತತ್ವಗಳೇ ದೇಹವು ಮರಣ ಹೊಂದಿದಾಗ ಈ ಸ್ಥೂಲ ಶರೀರವನ್ನು ಬಿಟ್ಟು, ಇನ್ನೊಂದು ದೇಹಕ್ಕೆ ಅವರವರ ಕರ್ಮಾನುಸಾರವಾಗಿ ಹುಟ್ಟುವುದು. ಈ ಹುಟ್ಟು ಸಾವುಗಳಿಂದ ಬಿಡುಗಡೆ ಹೊಂದಬೇಕಾದರೆ ಈ ಮನುಷ್ಯ ಜನ್ಮದಲ್ಲಿಯೇ ಬ್ರಹ್ಮತ್ವವನ್ನು ಹೊಂದಿದರೆ ಎಲ್ಲಾ ಕರ್ಮಗಳು ನಶಿಸಿ ಹೋಗಿ ಜ್ಞಾನ ಪ್ರಾಪ್ತಿಯಾಗುವುದು ಎಂದು ಹೇಳಿ ಹರಸಿದನು. ಇಂತಹ ಸುಸಂದರ್ಭದಲ್ಲಿ ದೇವತೆಗಳು ಬಾಲಕನ ಮೇಲೆ ಆನಂದದ ಹೂಮಳೆಗರೆದರು.

ಯಮದೇವ ನಚಿಕೇತನನ್ನು ಹರಸುತ್ತಾ, ಅವನ ತಂದೆಯ ಬಳಿಗೆ ಕಳುಹಿಸಿದನು. ಯಮನಿಂದ ವರಗಳನ್ನು ಪಡೆದು ಬಂದ ನಚಿಕೇತನನ್ನು ಕಂಡು, ವಾಜಶ್ರವಸನೇ ಅಲ್ಲ, ನೆರೆದಿದ್ದವರೆಲ್ಲರಿಗೂ ಅತ್ಯಾನಂದವಾಯಿತು. ಯಾಗವೂ ವಾಜಶ್ರವಸನಿಗೆ ಸಾಫಲ್ಯ ನೀಡಿತು. ಈ ಕಥೆಯು ಕಠೋಪನಿಷತ್ತಿನಲ್ಲಿ ಬರುತ್ತದೆ. ಯಮಧರ್ಮರಾಜ ಮತ್ತು ನಚಿಕೇತನ ಸಂವಾದವೇ ಈ ಉಪನಿಷತ್ತಿನ ಸಾರ.

ನೀತಿ: ನಚಿಕೇತ ಪುಟ್ಟ ಬಾಲಕ ನಾದರೂ ಅಸಾಧಾರಣ ಸಾಮರ್ಥ್ಯದಿಂದ ಯಮಲೋಕಕ್ಕೆ ಹೋಗಿ ಯಾವ ಪ್ರಲೋಭನೆಗಳಿಗೆ ಒಳಗಾಗದೆ ಯಮಧರ್ಮರಾಜ ನಿಂದ ಆತ್ಮಜ್ಞಾನವನ್ನು ಪಡೆದು ಕೃತಕೃತ್ಯನಾದನು. ಹಾಗೆಯೇ ನಾವೆಲ್ಲರೂ ಸಹ ದುರ್ಲಭವಾದ, ಈ ಮನುಷ್ಯ ಜನ್ಮದಲ್ಲಿಯೇ ಆತ್ಮಜ್ಞಾನವನ್ನು ಪಡೆದು ಸದ್ಗತಿಯನ್ನು ಹೊಂದುವಂತಾಗಲಿ.

"ಹರಿ ಓಂ ತತ್ಸತ್"