ಕಬೀರ್ ರಾಮಾನಂದರ ಶಿಷ್ಯ ಆದುದು(ಸಾಧು ಕಬೀರನ ಜೀವನದ ಕಥೆ)
ಸಂತರ ಚರಿತ್ರೆಯಲ್ಲಿ ಕಬೀರದಾಸರ ಹೆಸರು ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದಿದೆ. ಜಾತಿಯಲ್ಲಿ ಸಮಾಜದ ದೃಷ್ಟಿಯಿಂದ ನೇಯ್ಗೆಯವನಾದರೂ, ಶೀಲದಲ್ಲಿ ಅತ್ಯುತ್ಕøಷ್ಟರು, ಹಿಂದೂಧರ್ಮ ಹಾಗೂ ಸಂಸ್ಕøತಿಯ ಬಗ್ಗೆ ಚಿಕ್ಕÀಂದಿನಿಂದಲೂ ಇವರಿಗೆ ತುಂಬಾ ಪ್ರೀತಿ. ಹಿಂದೂ ಧರ್ಮ ಶಾಸ್ತ್ರಗಳ ಬಗ್ಗೆ ತಿಳಿಯಲು ದಿನೇ ದಿನೇ ಇವರ ಮನದಲ್ಲಿ ಕುತೂಹಲ ಹೆಚ್ಚುತ್ತಲೇ ಇತ್ತು. ಇದಕ್ಕಾಗಿ ಯೋಗ್ಯ ಗುರುವನ್ನು ಹುಡುಕುತ್ತಲೇ ಇದ್ದರು. ಆಗಿನ್ನೂ ಇವರ ವಯಸ್ಸು ಕೇವಲ ಏಳು ವರ್ಷಗಳು.
ಅಂದಿನ ಗುರುವರ್ಯರಲ್ಲಿ ಉತ್ತರ ಭಾರತದಲ್ಲಿ ರಾಮಾನಂದರು ತುಂಬಾ ಹೆಸರುವಾಸಿ ಎನಿಸಿದ್ದರು. ಸಂಸ್ಕøತ, ಹಿಂದಿ ಎರಡೂ ಭಾಷೆಗಳಲ್ಲಿಯೂ ಉದ್ದಾಮ ಪಂಡಿತರೆನಿಸಿದ್ದರು. ವೇದ, ಪುರಾಣ, ಉಪನಿಷತ್ತುಗಳ ವಿಚಾರದಲ್ಲಿಯೂ ಸಾಕಷ್ಟು ಅಧ್ಯಯನ ನಡೆಸಿ, ಅವುಗಳ ಬಗ್ಗೆ ಯಾವುದೇ ವಿಚಾರ ಬಂದರೂ ಸ್ಪಷ್ಟವಾಗಿ ತಿಳಿಸಲು ಸಮರ್ಥರು. ಇಷ್ಟೊಂದು ಪಂಡಿತೋತ್ತಮರಾಗಿದ್ದರೂ ಇವರ ಭಾಷೆ ತೀರಾ ಸರಳ. ಭಾಷೆಯೂ ಸರಳ, ಜೀವನವೂ ಸರಳ.
ಎಲ್ಲರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದರು. ತಮಗೆ ಇತರರಿಂದ ನೋವಾದರೂ, ಯಾರೊಬ್ಬರಿಗೂ ತಾವು ನೋವು ಕೊಡಲು ಬಯಸುತ್ತಿದ್ದವರಲ್ಲ. ಜನರ ಮನ-ಮಲಿನತೆಯನ್ನು ತಮ್ಮ ಜ್ಞಾನಾಮೃತದಂತಹ ವಾಣಿಯಿಂದ ತೊಳೆದು, ಪರಿಶುದ್ಧಿಗೊಳಿಸುತ್ತಿದ್ದರು. ಇವರ ಬಳಿ ಸಾಕಷ್ಟು ಮಂದಿ ಶಿಷ್ಯರಿದ್ದರು. ಇಂತಹವರ ಬಗ್ಗೆ ಬಾಲಕ ಕಬೀರ ಅವರಿವರ ಬಾಯಲ್ಲಿ ಕೇಳುತ್ತಿದ್ದ ಇವರ ಶಿಷ್ಯನಾಗಲು ಈ ಬಾಲಕನ ಹೃನ್ಮನ ತವಕಿಸುತ್ತಿತ್ತು.
ಆದರೆ ಅವರನ್ನು ಸಂದರ್ಶಿಸುವುದಾದರೂ ಹೇಗೆ? ಇಂತಹ ಪರಿಪೂರ್ಣ ಜ್ಞಾನವಂತರು ತನ್ನನ್ನು ಶಿಷ್ಯನಾಗಿ ಸ್ವೀಕರಿಸಲು ಸಮ್ಮತಿಸುವರೇ? ಎಂದು ಅವನ ಮನಸ್ಸು ಅಳುಕುತ್ತಿತ್ತು. ಆದರೆ ಇವರ ಶಿಷ್ಯರಾಗಲೇಬೇಕೆಂಬ ತೀರದ ಆಸೆ ಇವನ ಮನಮಂದಿರದಲ್ಲಿ ತುಂಬಿ ತುಳುಕುತ್ತಿತ್ತು. ಇಂತಹ ಆಸೆಯನ್ನು ಹೇಗಾದರೂ ಮಾಡಿ, ಈಡೇರಿಸಿಕೊಳ್ಳುವ ಸಲುವಾಗಿ ತುಂಬಾ ಯೋಚಿಸಿದ.
ರಾಮಾನಂದರ ಆಶ್ರಮ ಇವನಿಗೆ ತಿಳಿಯದು. ರಾಮಾನಂದರನ್ನು ಎಲ್ಲೂ ಕಂಡೂ ಇರಲಿಲ್ಲ. ಇವರ ಮಹಿಮೆಯ ಬಗ್ಗೆ ಮಾತ್ರ ಬಹುಮಂದಿ ಸಾಧುಸಂತರ ಬಾಯಿಂದ ಕೇಳಿದ್ದ. ಅವರು ಕಾಶಿಯಲ್ಲಿ ವಿಶ್ವನಾಥ ಮಂದಿರ ಮುಂದೆಯೇ, ಮುಂಜಾನೆಯೇ ಎದ್ದು, ಗಂಗಾ ನದಿಯಲ್ಲಿ ಸ್ನಾನ ಮಾಡಿ ಬರಲು ಮೆಟ್ಟಲುಗಳಿದು ಬರುವರೆಂದರು. ಸ್ನಾನಾದಿಗಳ ನಂತರ, ಬಂದ ದಾರಿಯಲ್ಲಿಯೇ ಮೆಟ್ಟಿಲುಗಳನ್ನು ಹತ್ತಿ ಹಿಂದಿರುಗುವರೆಂದೂ ಕೇಳಿದ್ದ.
ಬಾಲಕನಿಗೆ ಈಗ ಒಂದು ಯೋಜನೆ ಹೊಳೆಯಿತು. ಅವರು ಬರುವ ಮಾರ್ಗದಲ್ಲಿ ಮೆಟ್ಟಲೊಂದರ ಮೇಲೆ ಬೋರಲು ಮಲಗಿಬಿಟ್ಟರೆ?! ಅವರ ತುಳಿತದ ಪಾದಸ್ಪರ್ಶಕ್ಕೂ ಎಷ್ಟೋ ಪುಣ್ಯ ಮಾಡಿರಬೇಕು ಅಂದುಕೊಂಡ. ಮರುದಿನ ಮುಂಜಾನೆಯ ಸಮಯಕ್ಕೆ ಸರಿಯಾಗಿ ಸ್ನಾನಘಟ್ಟದ ಮೆಟ್ಟಲೊಂದರ ಮೇಲೆ ಮೊದಲೇ ನಿರ್ಧರಿಸಿದ್ದಂತೆ ಮಲಗಿಯೇಬಿಟ್ಟ. ಅವನ ಮನಸ್ಸು ಗುರು ಧ್ಯಾನದಲ್ಲಿ ನಿರತವೆನಿಸಿತ್ತು, ಗುರುಧ್ಯಾನದಲ್ಲಿ ಇಹಲೋಕದ ಪರಿವೆಯನ್ನೇ ಮರೆತಂತಿತ್ತು. ಅಗೋ ಗುರು ಬಂದರು, ಇಗೋ ಗುರು ಬಂದರು ಎಂದು ಕನಸು ಕಾಣುತ್ತಾ, ಛಳಿಗಾಳಿಯ ಬಾಧೆಯನ್ನು ಲೆಕ್ಕಿಸದೆ ಮಲಗಿದ್ದಂತೆ, ಗುರು ರಾಮಾನಂದರು ಅನತಿ ದೂರದಲ್ಲಿ ಮೆಟ್ಟಿಲಿಳಿಯುತ್ತಾ ಬರುತ್ತಿದ್ದುದರ ಪಾದಸಪ್ಪಳ ಕಿವಿಗೆ ಬಿತ್ತು. ಗುರು ಸ್ಪರ್ಶದ ಬಗ್ಗೆ ತದೇಕಚಿತ್ತತೆ ಮತ್ತಷ್ಟು ಹೆಚ್ಚಿತು.
ರಾಮಾನಂದರು ಇನ್ನೂ ಮೊಬ್ಬು ಕತ್ತಲ ವೇಳೆಯಲ್ಲಿಯೇ ಮೆಟ್ಟಲುಗಳ ಮೇಲೆ ಇಳಿಯುತ್ತಾ ಬರುತ್ತಿದ್ದಂತೆ ಅವರ ಪಾದಕ್ಕೆ ಯಾವುದೋ ದೇಹ ತಾಕಿದಂತಾಗಿ “ಹೇ ರಾಮ್” ಅನ್ನುತ್ತಾ ಬಗ್ಗಿ ನೋಡಿದರು. ಬಾಲಕನೋರ್ವ ಗುರುಸ್ಮರಣೆಯಲ್ಲಿಯೇ ಮೈಮರೆತು ಮಲಗಿರುವುದನ್ನು ಮೊಬ್ಬು ಬೆಳಕಿನಲ್ಲಿ ಕಂಡರು.
“ಮಗು, ಯಾರಪ್ಪಾ ನೀನು? ಇಲ್ಲೇಕೆ ಹೀಗೆ ಮಲಗಿದ್ದೀ?” ಅನ್ನುತ್ತಾ ನಯ-ನಿಧಾನದಿಂದ ಅವನ ಮೈದಡವತೊಡಗಿದರು. ಬಾಲಕ ಕಬೀರನಿಗೆ ಗುರುಗಳ ಸ್ಪರ್ಶಮಾತ್ರದಿಂದ ದಿವ್ಯಜಾಗೃತಿ ಉಂಟಾಯಿತು. ಥಟ್ಟನೆ ಎದ್ದು ಕುಳಿತ. ಈತ ಮುಂಜಾನೆಯ ಮುಸುಕು ಮಾಯವಾಗಿ, ಹೊಂಬೆಳಕು ಪೂರ್ವದಿಸೆಯ ಕಡೆಯಿಂದ ಪಸರಿಸತೊಡಗಿತು. ಗುರುಗಳ ಮುಖವನ್ನು ಆನಂದಭಾಷ್ಪಗಳೊಂದಿಗೆ ಕಣ್ಣಾರೆ ನೋಡುತ್ತಾ, ಅಲೌಕಿಕ ಆನಂದ ಪಡೆದ ಭಾವಪರವಶತೆಯಲ್ಲಿ ಗುರುವರ್ಯರ ಪಾದಾರವಿಂದಗಳ ಮೇಲೆ ತಲೆ ಇಟ್ಟು, ಶ್ರದ್ಧೆಭಕ್ತಿಯೊಂದಿಗೆ ನಮಿಸಿದನು. ಗುರು ರಾಮಾನಂದರೂ ಬಾಲಕನ ಚಲನವಲನವನ್ನು ಕಂಡು, ಮೂಕರಂತಾದರು. ನಿಧಾನವಾಗಿ, ಅವನ ತಲೆಯನ್ನು ಮೇಲೆತ್ತುತ್ತಾ, ಮುಗ್ಧ ಮಗುವಿನ ಮನೋಭಾವದಲ್ಲಿ ಪ್ರಶ್ನಿಸಿದರು:
“ಯಾರಪ್ಪಾ ನೀನು? ಯಾವ ಕಾರಣದಿಂದ ಹೀಗೆ ಮೆಟ್ಟಿಲುಗಳ ಮೇಲೆ ಬೋರಲು ಮಲಗಿದ್ದೆ?”
ಕಬೀರ ಸಹ ಬಾಲಮನೋಭಾವನೆಯಿಂದಲೇ ಹೇಳಿದ : “ಕೇವಲ ಗುರುಸಾಕ್ಷಾತ್ಕಾರಕ್ಕಾಗಿ. ಅದು ನನಗೆ ಇಷ್ಟೊಂದು ಸುಲಭವಾಗಿ ಸಲ್ಲುವುದೆಂದು ನಾನು ತಿಳಿದೇ ಇರಲಿಲ್ಲ!” ಅನ್ನುತ್ತಾ, ಭಕ್ತಿಯ ಉನ್ಮಾದತೆಯಲ್ಲಿ ಅವರನ್ನು ಹಲವಾರು ಬಾರಿ ಸುತ್ತಿ, ಪಾದ ಮುಟ್ಟಿ, ಸಾಷ್ಟಾಂಗವಾಗಿ ನಮಸ್ಕರಿಸಿದ. ಅವನಿಗೆ ಶಿಷ್ಯ ವೃತ್ತಿಯಲ್ಲಿರುವ ಉತ್ಸಾಹವನ್ನು ಕಂಡು, ಗುರು ರಾಮಾನಂದರು ಹಿಗ್ಗಿ ಹೋದರು. ಅಲ್ಲಿಯೇ ಅವನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಿದರು. ಗಂಗೆಯಲ್ಲಿ ಮಿಂದು, ತಮ್ಮ ಸ್ನಾನಾಹ್ನಿಕಗಳನ್ನು ಮುಗಿಸಿದರು. ತಮ್ಮೊಂದಿಗೇ ಕಬೀರನನ್ನು ತಮ್ಮ ಆಶ್ರಮಕ್ಕೆ ಕರೆತಂದರು. ಅಂದಿನಿಂದ ಬಾಲಕ ಕಬೀರ್ “ಕಬೀರದಾಸ್” ಅನ್ನಿಸಿದ. ಗುರು ಅನುಗ್ರಹದಿಂದ ದಿವ್ಯಜ್ಞಾನವನ್ನೂ ಪಡೆದ. ಮುಂದೆ ತನ್ನ ಜೀವನವನ್ನೇ ಜನರಲ್ಲಿರುವ ಮೂಢನಂಬಿಕೆಗಳ ಪರಿಹಾರಕ್ಕಾಗಿ ಮುಡುಪಿಟ್ಟ.