ಉಪನಿಷತ್ತಿನ ಕಥೆಗಳು

ಬ್ರಹ್ಮನಿಷ್ಠ ಯಾಜ್ಞವಲ್ಕ್ಯ ಮಿಥಿಲೆಯ ರಾಜ ಜನಕ, ರಾಜರ್ಷಿ ಎಂದು ಹೆಸರು ಪಡೆದಿದ್ದವ. ಬ್ರಹ್ಮತತ್ವದ ಬಗ್ಗೆ ಸಾಕಷ್ಟು ಜ್ಞಾನಿ ಎನಿಸಿದ್ದ. ಹಲವಾರು ಮಂದಿ ಋಷಿ-ಮುನಿಗಳೇ ಈತನ ಬಳಿ ದೀರ್ಘಕಾಲ ಶಿಷ್ಯ ವೃತ್ತಿಯನ್ನು ಅವಲಂಬಿಸಿದ್ದರು.
ಒಂದು ಬಾರಿ ಜನಕ ಮಹಾರಾಜ ದೊಡ್ಡ ಯಾಗ ಒಂದನ್ನು ಮಾಡಿದ. ಯಾಗದ ನಂತರ ನೆರೆದಿದ್ದ ಮುನಿಗಳ ಬ್ರಹ್ಮಜ್ಞಾನದ ಎತ್ತರವನ್ನು ತಿಳಿಯಲೋಸುಗವೇ ಒಂದು ಮಹಾಸಭೆಯನ್ನು ಸ್ಪರ್ಧಾತ್ಮಕ ರೀತಿಯಲ್ಲಿ ಏರ್ಪಡಿಸಿದ.
‘ಸ್ಪರ್ಧೆಯ ಪುರಸ್ಕಾರ ರೂಪದಲ್ಲಿ ಕೊಂಬುಗಳು ಹಾಗೂ ಕುತ್ತಿಗೆಯ ಭಾಗವನ್ನು ಚಿನ್ನಾಭರಣಗಳಿಂದ ಅಲಂಕರಿಸಿದ ಒಂದು ಸಾವಿರ ಗೋವುಗಳನ್ನು ಸಿದ್ಧಗೊಳಿಸಿದ. ಎಲ್ಲವೂ ಸುಧೃಢವಾದವುಗಳೇ. ತುಂಬಾ ತುಂಬಾ ಹಾಲು ಕೊಡುವಂತಹವುಗಳೇ. ಅವುಗಳನ್ನು ನೆರೆದಿದ್ದ ವಿಪ್ರರು ಹಾಗೂ ಋಷಿ-ಮುನಿಗಳಿಗೆ ತೋರಿಸುತ್ತಾ ಹೇಳಿದ:
“ಪೂಜ್ಯರೇ, ಈ ಸ್ಪರ್ಧೆಯ ವಿಷಯ, ನಿಮ್ಮಲ್ಲಿ ತುಂಬಾ ಬ್ರಹ್ಮಜ್ಞಾನಿಯಾದವರು ಯಾರು ಎಂಬುದನ್ನು ತಿಳಿಯುವುದೇ ಆಗಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಈ ಸಹಸ್ರ ಗೋವುಗಳನ್ನೂ ಪುರಸ್ಕಾರರೂಪದಲ್ಲಿ ನೀಡಲಾಗುವುದು.
ಜನಕ ಮಹಾರಾಜನು ಮಾಡಿದ ಘೋಷಣೆಯನ್ನು ಕೇಳಿ, ನೆರೆದಿದ್ದ ವಿಪ್ರರು ಹಾಗೂ ಮುನಿವರ್ಯರು ಚಕಿತರಾದರು, ಕಾರಣ ಅವರಲ್ಲಿ ಯಾರೊಬ್ಬರಿಗೂ ಪೂರ್ಣರೂಪದ ಬ್ರಹ್ಮಜ್ಞಾನ ಲಭ್ಯವಾದಂತೆ ಸ್ವತ: ಅವರಿಗೇ ನಂಬಿಕೆ ಇದ್ದಂತಿರಲಿಲ್ಲ. ಎಲ್ಲರೂ ಜೋಲುಮುಖದೊಂದಿಗೆ ಒಬ್ಬರ ಮುಖವನ್ನೊಬ್ಬರು ನೋಡತೊಡಗಿದರು. ಅವರೆಲ್ಲರ ನಡುವೆ ನಿಂತಿದ್ದ ಯಾಜ್ಞವಲ್ಕ್ಯರಿಗೆ ನಗು ಬಂತು. ಆದರೂ ತೋರ್ಪಡಿಸಲು ಬಯಸದೆ, ಹಾಗೆಯೇ ತಡೆದುಕೊಂಡು, ತಮ್ಮ ಬಳಿಯೇ ನಿಂತಿದ್ದ ಶಿಷ್ಯನಿಗೆ ಹೇಳಿದರು:
“ಸೋಮಶ್ರವ, ದೇವತಾಸ್ವರೂಪಿಗಳಾದ ಈ ಗೋವುಗಳೆಲ್ಲವನ್ನೂ ನಮ್ಮ ಆಶ್ರಮಕ್ಕೆ ಸಾಗಿಸಿಕೊಂಡು ನಡೆ.”
ನೆರೆದಿದ್ದವರು ಯಾಜ್ಞವಲ್ಕ್ಯ ಮುನಿಯ ಮಾತು ಕೇಳಿ, ಬೇಸರಿಸಿದರು. ಕೆಲವರಂತೂ ಕುಪಿತರೂ ಆದರು. ಅವರಲ್ಲೊಬ್ಬ ಧೈರ್ಯಮಾಡಿ, ಯಾಜ್ಞವಲ್ಕ್ಯರನ್ನು ಪ್ರಶ್ನಿಸಿದ:
“ಸ್ಪರ್ಧೆಯೇ ನಡೆಯದೆ ನೀವು ಹೀಗೆಲ್ಲಾ ಯಾಗಮಂಟಪದಲ್ಲಿ ವರ್ತಿಸುತ್ತಿರುವುದು ಅಸಭ್ಯತನದಂತೆ ಕಾಣುತ್ತಿದೆ ಅಲ್ಲವೇ?’
ಯಾಜ್ಞವಲ್ಕ್ಯರು ಕೋಪಗೊಳ್ಳಲಿಲ್ಲ. ಬೇಸರಿಸಲೂ ಇಲ್ಲ. ನಗು ನಗುತ್ತಲೇ ಹೇಳಿದರು:
“ಪೂರ್ವಾಪರದ ವಿಷಯವನ್ನು ಯೋಚಿಸದೆ ನಾನು ಯಾವುದೊಂದು ನಿರ್ಧಾರಕ್ಕೂ ಬರುವುದಿಲ್ಲ ಎಂಬ ವಿಷಯ ನಿಮಗಿನ್ನೂ ತಿಳಿಯದಿದ್ದರೆ, ನೀವೆಲ್ಲರೂ ನನ್ನನ್ನು ಬ್ರಹ್ಮಜ್ಞಾನದ ಬಗ್ಗೆ ಪ್ರಶ್ನಿಸಲು ಪೂರ್ಣ ಸ್ವತಂತ್ರರು. ನಾನು ಅವುಗಳಿಗೆ ಸೂಕ್ತ ಉತ್ತರಗಳನ್ನು ನೀಡಲು ಸಿದ್ಧನಿದ್ದೇನೆ. ಬ್ರಹ್ಮನಿಷ್ಠೆಗೆ ಸದಾಕಾಲದಲ್ಲೂ ನನ್ನ ಶ್ರದ್ದೆಭಕ್ತಿಯ, ಹೃನ್ಮನಪೂರ್ವಕ ಪ್ರಣಾಮಗಳು.”
ಈಗ ಬ್ರಹ್ಮನಿಷ್ಠಾಸಕ್ತರಾದ ವಿಪ್ರರು, ಋಷಿಗಳು ಒಬ್ಬೊಬ್ಬರೇ ಸಂಬಂಧಿತ ವಿಷಯದ ಬಗ್ಗೆ ಪ್ರಶ್ನೆಗಳ ಸುರಿಮಳೆಗೆರೆಯತೊಡಗಿದರು. ಉದ್ದಾಲಕ, ಗಾರ್ಗಿ,ಅಶ್ವಾಲ, ಮೈತ್ರೇಯಿ, ಕಹೋಲ, ಋತಭಾ ಮೊದಲಾದ ಬ್ರಹ್ಮ ಜ್ಞಾನಿಗಳಲ್ಲಿ ಗಣ್ಯರೆನಿಸಿದವರೆಲ್ಲರೂ ಪ್ರಶ್ನಿಸತೊಡಗಿದರು. ನೀರು ಕುಡಿಯುವಷ್ಟು ಸುಲಭವಾಗಿ, ಸರಳ ರೀತಿಯಲ್ಲಿಯೇ ನಿರರ್ಗಳವಾಗಿ ಸರಿ ಉತ್ತರಗಳನ್ನು ಯಾಜ್ಞವಲ್ಕ್ಯರು ನೀಡುತ್ತಿರುವುದನ್ನು ಕಂಡು, ಎಲ್ಲರಿಗೂ ಆನಂದ, ಆಶ್ಚರ್ಯ ಒಮ್ಮೆಲೇ ಉಂಟಾಗತೊಡಗಿತು. ಕಡೆಗೆ ಯಾಜ್ಞವಲ್ಕ್ಯರ ಶಿಷ್ಯಳೇ ಆದ ಗಾರ್ಗಿಯನ್ನು ತಮ್ಮೆಲ್ಲರ ಪರವಾಗಿ ಪ್ರಶ್ನಿಸಲು ಪ್ರತಿನಿಧಿಯ ರೂಪದಲ್ಲಿ ಮುಂದೆ ನಿಲ್ಲಿಸಿದರು.
ಗಾರ್ಗಿ, ಮೈತ್ರೇಯಿ ಈರ್ವರೂ ಯಾಜ್ಞವಲ್ಕ್ಯರ ಶಿಷ್ಯರೇ. ಈರ್ವರೂ ಬ್ರಹ್ಮಜ್ಞಾನದ ವಿಷಯದ ಬಗ್ಗೆ ಧುರೀಣಿಯರೇ, ಗಾರ್ಗಿಗೆ ನೆರೆದವರ ಅಭಿಲಾಷೆಯನ್ನು ತಳ್ಳಿಹಾಕಲು ಮನ ಬರಲಿಲ್ಲ. ಮನದಲ್ಲಿಯೇ ಯಾಜ್ಞವಲ್ಕ್ಯರನ್ನು ತನ್ನ ಶಿಷ್ಯೆಯೇ ವಾದಕ್ಕಿಳಿದಿರುವುದನ್ನು ತಿರಸ್ಕರಿಸಲಿಲ್ಲ. ಪುರಸ್ಕರಿಸುತ್ತಾ, ಎಂದಿಗೂ ನಗುಮುಖದೊಂದಿಗೆ ಪ್ರತಿ ವಾದಿಸಲು ನಿಂತರು. ಗಾರ್ಗಿ ನೆರೆದವರಿಗೆ ಕೈ ಮುಗಿಯುತ್ತಾ ಹೇಳಿದಳು-
“ಮಹಾತ್ಮರೇ, ನಾನೀಗ ಎರಡು ಪ್ರಶ್ನೆಗಳನ್ನು ಸ್ಪರ್ಧೆಗೆ ನಿಂತಿರುವ ಪೂಜ್ಯರ ಮುಂದಿಡುತ್ತೆನೆ. ಅವೆರಡಕ್ಕೂ ಸರಿಸಮರ್ಪಕ ಉತ್ತರಗಳು ಬಂದರೆ, ಬೇರಾರಿಂದಲೂ ಸ್ಪರ್ಧೆಯಲ್ಲಿ ಅವರನ್ನು ಜಯಿಸಲು ಸಾಧ್ಯವಿಲ್ಲವೆಂದೇ ಭಾವಿಸಬೇಕು. ಬ್ರಹ್ಮಜ್ಞಾನದಲ್ಲಿ ಯಾಜ್ಞವಲ್ಕ್ಯರೇ ನಮ್ಮೆಲ್ಲರಿಗೂ ಹಿರಿಯರೆಂದು ತಿಳಿಯಬೇಕು.” ಸರ್ವಸಮ್ಮತಿ ದೊರಕಿತು.
ಈಗ ಗಾರ್ಗಿ ತನ್ನ ಮೊದಲ ಪ್ರಶ್ನೆಯನ್ನು ಮುಂದಿಟ್ಟಳು:
“ಯಾಜ್ಞವಲ್ಕ್ಯರೇ, ಬ್ರಹ್ಮಾಂಡದ ಮೇಲ್ಭಾಗದಲ್ಲಿರುವವನು ಯಾರು? ತಳಭಾಗದಲ್ಲಿರುವವನು ಯಾರು? ಭೂ-ಸ್ವರ್ಗಗಳ ನಡುವೆ ನೆಲೆಸಿರುವವನು ಯಾರು?
ಚಿಟಿಕೆ ಹೊಡೆಯುವಷ್ಟು ಸುಲಭವಾಗಿ ಯಾಜ್ಞವಲ್ಕ್ಯರು ಉತ್ತರ ನೀಡಿದರು:
“ಗಾರ್ಗಿ, ಸರ್ವರೂಪನೂ, ಸರ್ವಶಕ್ತನೂ ಆದ ಪರಬ್ರಹ್ಮನೇ ಸರ್ವಾಂತರ್ಯಾಮಿಯ ರೂಪದಲ್ಲಿ ಸರ್ವೊಪರಿ ಇದ್ದಾನೆ. ಆತನೇ ವರ್ತಮಾನ, ಭೂತ, ಭವಿಷ್ಯರೂಪಿ ಎನಿಸಿದ್ದಾನೆ.”
ಗಾರ್ಗಿ ಈಗ ಇನ್ನೊಂದು ಪ್ರಶ್ನೆ ಮುಂದಿಟ್ಟಳು:
“ಜಗದ್ರೂಪಿಯಾದ ಪರಬ್ರಹ್ಮನು ಯಾವ ಆಕಾಶದಲ್ಲಿ ಹಾಸುಹೊಕ್ಕಾಗಿದ್ದಾನೆ? ಅದೇ ರೀತಿ ಆ ಆಕಾಶ ಯಾವುದರಿಂದ ಓತಪ್ರೋತ ಎನಿಸಿದೆ?”
ಯಾಜ್ಞವಲ್ಕ್ಯ ನಗುಮೊಗದಿಂದಲೇ ಉತ್ತರ ನೀಡಿದರು:
“ಅಂತಹ ಅವ್ಯಾಹೃತ ಆಕಾಶ ಅವಿನಾಶಿ ಎನಿಸಿದ ಅಕ್ಷರ ಬ್ರಹ್ಮದಲ್ಲಿಯೇ ಹಾಸು ಹೊಕಾಗಿದೆ. ಆ ಅಕ್ಷರ ಬ್ರಹ್ಮನೋರ್ವನೇ ಅವಿನಾಶಿ, ಸರ್ವವ್ಯಾಪಿ ಹಾಗೂ ಅಪರಿಚ್ಫಿನ್ನ ಸ್ವರೂಪಿ. ಅಂತಹವನ ಹಿಡಿತದಲ್ಲಿಯೇ ಸೂರ್ಯ, ಚಂದ್ರ, ನಕ್ಷತ್ರಇತ್ಯಾದಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ತತ್ವವನ್ನು ಅರಿತವರು ಬ್ರಹ್ಮ ಸಾನಿಧ್ಯವನ್ನು ಪಡೆದು ಅಮೃತರೆನಿಸುತ್ತಾರೆ. ಗಾರ್ಗಿ ನೆರೆದವರತ್ತ ತಿರುಗಿ, ಪ್ರಶ್ನಿಸಿದಳು: “ನಿಮ್ಮಲ್ಲಿ ಯಾರಿಗಾದರೂ ಈ ಉತ್ತರಗಳ ಬಗ್ಗೆ ಸಂಶಯ ಇದ್ದರೆ ಮರುಪ್ರಶ್ನಿಸಬಹುದು. ಹಾಗಿಲ್ಲದಿದ್ದರೆ ಎಲ್ಲರೂ ಒಮ್ಮತದಿಂದ ಪೂಜ್ಯ ಯಾಜ್ಞವಲ್ಕ್ಯರೇ ನಮ್ಮೆಲ್ಲರಿಗೂ ಮಿಗಿಲೆನಿಸಿದ ಬ್ರಹ್ಮಜ್ಞಾನ ವನ್ನು ಪಡೆದಿದ್ದಾರೆ ಎಂದು ಒಪ್ಪಿಕೊಂಡಂತಾಗುವುದು.” ನೆರೆದಿದ್ದವರಲ್ಲಿ ಯಾರೊಬ್ಬರೂ ಮರುಪ್ರಶ್ನಿಸುವ ಸಾಹಸಕ್ಕೆ ಕೈ ಹಾಕಲಿಲ್ಲ. ಎಲ್ಲರೂ ಸಹ ಹರ್ಷದಿಂದ ಯಾಜ್ಞವಲ್ಕ್ಯರ ಬ್ರಹ್ಮಜ್ಞಾನ ವನ್ನು ಮುಕ್ತ ಕಂಠದಿಂದ ಹೊಗಳಿದರು. ಅವರೇ ತಮ್ಮೆಲ್ಲರಿಗಿಂತಲೂ ಸರ್ವಶ್ರೇಷ್ಠ ಬ್ರಹ್ಮಜ್ಞಾನಿ ಎಂದು ಅನುಮೋದಿಸಿದರು. ಜನಕರಾಜನಿಗೆ ಆದ ಆನಂದ ಅಷ್ಟಿಷ್ಟಲ್ಲ.