ಮೂಢನಂಬಿಕೆಯ ವಿರೋಧಿ, ಈ ಚೂಟಿ ಬಾಲಕ(ಮಹರ್ಷಿ ದಯಾನಂದ ಸರಸ್ವತಿ ಅವರ ಜೀವನದ ಕಥೆ)
ಇವನೊಬ್ಬ ಬ್ರಾಹ್ಮಣ ಮನೆತನದ ಹುಡುಗ. ಮನೆಯವರು ನಿಷ್ಠಾವಂತ ವೈದಿಕ ಸಂಪ್ರದಾಯಸ್ಥರು. ವ್ರತನಿಯಮಗಳನ್ನು ಕಾಲಕಾಲಕ್ಕೆ ಚಾಚೂ ತಪ್ಪದೆ ಆಚರಿಸುತ್ತಿದ್ದವರು. ಅಂದು ಶಿವರಾತ್ರಿ, ಶಿವನ ಪೂಜೆಗಾಗಿ ಪೂರ್ವಸಿದ್ಧತೆಗಳೆಲ್ಲವೂ ಮುಗಿದಿದ್ದುವು. ಲಿಂಗ ಪೂಜೆಗೆ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಲಿಂಗಪೂಜೆಗಾಗಿ ವಿವಿಧ ಸುಗಂಧ ಪುಷ್ಪಗಳನ್ನು ಸಿಂಗರಿಸಲಾಗಿತ್ತು. ಹಣ್ಣು ಹಂಪಲು ತುಂಬಿರುವ ತಟ್ಟೆಗಳು ಲಿಂಗ ಮೂರ್ತಿಯ ಮುಂದೆ ಸಜ್ಜಾಗಿದ್ದವು. ಇಷ್ಟೇ ಅಲ್ಲ, ರವೆಉಂಡೆ, ಹುಳಿ ಅವಲಕ್ಕಿ, ಹೋಳಿಗೆ ಮೊದಲಾದ ತಿಂಡಿ-ತಿನಿಸುಗಳೂ ತಟ್ಟೆಗಳಲ್ಲಿ ತುಂಬಿದ್ದುವು. ಶಿವಾರ್ಪಣೆಗೆಂದು ಸಕಲ ವಸ್ತುಗಳನ್ನು ಲಿಂಗದ ಮುಂದೆ ಸಾಲಂಕೃತಗೊಳಿಸಲಾಗಿತ್ತು.
ತುಂಬಾ ಕಾಲ ಪೂಜಾ ವಿಧಿ ಕ್ರಮಗಳು ಶಾಸ್ತ್ರೋಕ್ತವಾಗಿ ನಡೆಯುತ್ತಿದ್ದುವು. ಎಲ್ಲರಿಗೂ ಭಕ್ತಿಯ ಜೊತೆಗೆ ಹಸಿವೂ ಹೆಚ್ಚಿತು. ಆದರೆ ಶಿವರಾತ್ರಿಯಂದು ಉಪವಾಸ ಇದ್ದರೆ, ಶಿವನ ಅನುಗ್ರಹ ಆಗುವುದು ಎಂಬ ಮೂಢನಂಬಿಕೆಯೂ ಜನರಲ್ಲಿ ತುಂಬಿ ತುಳುಕಿತ್ತು. ಭಕ್ತಿಯ ಭಾವ ಕುಂಠಿತಗೊಂಡು, ಕಷ್ಟಪಟ್ಟು ಹಸಿವಿನ ಬಾಧೆಯನ್ನು ತಡೆಯಲು ಯತ್ನಿಸುತ್ತಿದ್ದವರೇ ಬಹಳ ಮಂದಿ.
ಇವರೆಲ್ಲರೂ ವೃಥಾ ಪಡುತ್ತಿದ್ದುದರ ಪಾಡನ್ನು ಈ ಹುಡುಗ ಕಣ್ಣಲ್ಲಿ ಕಣ್ಣಿಟ್ಟು ಅವಲೋಕಿಸುತ್ತಿದ್ದ. ಹುಡುಗನಿಗೂ ಹಸಿವಾಗುತ್ತಿತ್ತು. ಲಿಂಗ ದೇವರ ಮುಂದೆ ಇಟ್ಟಿದ ಹಣ್ಣು-ಹಂಪಲು, ತಿಂಡಿ-ತಿನಿಸುಗಳನ್ನು ಕಂಡು, ಹುಡುಗನ ಬಾಯಲ್ಲಿ ನೀರೂರತೊಡಗಿತು. ಆದರೆ ಉಪವಾಸಭಂಗವನ್ನು ಯಾರೂ ಮಾಡುವ ಹಾಗಿರಲಿಲ್ಲ. ಎಲ್ಲರೂ ಹೇಗೋ ಸಂಜೆ ಆಗುವುದನ್ನೇ ನಿರೀಕ್ಷಿಸುತ್ತಿದ್ದರು. ಕಣ್ಣುಗಳು ಲಿಂಗದ ಕಡೆ ಇತ್ತು, ಮನಸ್ಸು ಹೊಟ್ಟೆಯ ಕಡೆ. ಅದೇ ವೇಳೆಗೆ ಎಲ್ಲಿಂದಲೋ ಒಂದು ಇಲಿ ಅಲ್ಲಿಗೆ ಬಂದು, ಲಿಂಗದ ಮೇಲೆ ಓಡಾಡತೊಡಗಿದ್ದುದು, ಹುಡುಗನ ಕಣ್ಣಿಗೆ ಬಿತ್ತು. ಹುಡುಗನಿಗೂ ಚಪಲಬುದ್ಧಿ ತಾನೇ? ಇವನು ಇಲಿಯ ಚಲನವಲನಗಳನ್ನೇ ಗಮನಿಸತೊಡಗಿದ. ಅದು ಲಿಂಗದ ಶಿರೋಭಾಗದಲ್ಲಿ ಬೆದರಿಕೆಯೇ ಇಲ್ಲದೇ, ಸ್ವತಂತ್ರವಾಗಿ ಸ್ವೇಚ್ಛಾನುಸಾರ ಓಡಾಡತೊಡಗಿತು. ಹಣ್ಣುಹಂಪಲನ್ನು ಸದ್ದಿಲ್ಲದೇ ಬಂದÀು, ತಿನ್ನತೊಡಗಿತು. ಅಷ್ಟೇ ಏನು? ಜನರ ಕಣ್ಣಿಗೂ ಮಣ್ಣೆರಚಿ, ಎಲ್ಲರಿಗೂ ಮೊದಲೇ ತಾನೇ ನೈವೇದ್ಯವನ್ನು ತಿನ್ನತೊಡಗಿತು.
ಈಗ ಹುಡುಗನಿಂದ ಸುಮ್ಮನಿರಲು ಸಾಧ್ಯ ಆಗಲಿಲ್ಲ. ತಾನೂ ಒಂದು ರವೆ ಉಂಡೆಗೆ ಕೈ ಹಾಕಿದ. ಅವನ ತಂದೆ ನಿಷ್ಠಾವಂತ ತಾನೇ? ತಡೆದು ಹೇಳಿದರು:
“ಹಾಗೆಲ್ಲಾ ಮಾಡಬಾರದು, ಮೊದಲು ಶಿವನಿಗೆ ಅರ್ಪಿಸಿ, ಆಮೇಲೆ ನಾವು ತಿನ್ನಬೇಕು.”
ಇಲಿಯ ಕಡೆ ಬೆರಳು ತೋರಿಸುತ್ತಾ, ಹುಡುಗ ಹೇಳಿದ: “ಅಪ್ಪಾಜಿ, ಇಲ್ಲಿ ನೋಡಿ, ಆ ಇಲಿ ಹೇಗೆ ಲಿಂಗದ ಮೇಲೆಲ್ಲಾ ಓಡಾಡುತ್ತಿದೆ! ಅಷ್ಟೇ ಅಲ್ಲ, ದೇವರಿಗಾಗಿ ನೀವು ಇಟ್ಟಿರುವ ನೈವೇದ್ಯವನ್ನೂ ತಿಂದು, ಎಂಜಲು ಮಾಡುತ್ತಿದೆ. ಅದನ್ನು ಓಡಿಸಲು ನಿಮಗ್ಯಾರಿಗೂ ಶಕ್ತಿ ಇಲ್ಲ. ದೇವರು ಆ ಇಲಿಯನ್ನೇಕೆ ಓಡಿಸಬಾರದಿತ್ತು? ಇದೆಲ್ಲಾ ಬರೀ ಮೂಢನಂಬಿಕೆ” ಅನ್ನುತ್ತಾ ಅಲ್ಲಿಂದ ಹೊರಟೇ ಹೋದ.
ಈ ಹುಡುಗನೇ ಮುಂದೆ ದೊಡ್ಡವನಾದ ಮೇಲೆ, ತನ್ನದೇ ಧ್ಯೇಯದ ಧರ್ಮಸಂಸ್ಥೆಯನ್ನು ಸ್ಥಾಪಿಸಿ, ಭಾರತದ ಹಿರಿಮೆಯನ್ನು ಮುಗಿಲೆತ್ತರಕ್ಕೆ ಏರಿಸಿದ ಮಹರ್ಷಿ ದಯಾನಂದ ಸರಸ್ವತಿ.