ಭಾಗವತ ಕಥೆಗಳು

ಕೂರ್ಮ ಅವತಾರ ಒಂದು ಬಾರಿ ದೇವೇಂದ್ರನ ಒಡ್ಡೋಲಗಕ್ಕೆ ಕೋಪಕ್ಕೆ ಹೆಸರುವಾಸಿಯಾದ ದೂರ್ವಾಸ ಮುನಿಗಳು ಬಂದರು. ದೇವೇಂದ್ರ ಮೊದಲಿನಿಂದಲೂ ತನ್ನತನದ ಬಗ್ಗೆ ಜಂಬಪಟ್ಟುಕೊಳ್ಳುತ್ತಿದ್ದವನು. ಅವರು ಬಂದುದನ್ನು ಕಂಡರೂ ಸಹ, ಅಸಡ್ಡೆಯಿಂದ ಅತ್ತ ತಿರುಗಿಯೂ ನೋಡದೆ ಸಿಂಹಾಸನದ ಮೇಲೆ ಕುಳಿತಿರುವುದನ್ನು ಕಂಡು, ದೂರ್ವಾಸರಿಗೆ ತಡೆಯಲಾರದಷ್ಟು ಕೋಪ ಬಂತು.

“ನೀನು ಯಾವ ಸಿರಿಮದದಿಂದ ಗರ್ವಿಷ್ಟನಾಗಿರುವೆಯೋ ಆ ಸಿರಿ ಸಂಪದ ಎಲ್ಲವೂ ನಾಶವಾಗಿ ಹೋಗಲಿ” ಎಂದು ಶಪಿಸಿ ಹೊರಟುಹೋದರು. ತನ್ನ ಸಕಲ ಸಿರಿಸಂಪದವನ್ನೂ ಕಳೆದುಕೊಂಡ ದೇವೇಂದ್ರ ಹಾಗೂ ಅವನ ಪ್ರಜೆಗಳು, ದೇವತೆಗಳು ಭಿಕಾರಿಗಳಂತಾದರು. ದೇವೇಂದ್ರ ಈಗ ತನ್ನ ಅವಿವೇಕಕ್ಕಾಗಿ ಪರಿತಪಿಸುತ್ತಾ, ತನ್ನ ಬಳಗದವರೊಂದಿಗೆ ಸೃಷ್ಟಿಕರ್ತನಾದ ಬ್ರಹ್ಮನ ಬಳಿಗೆ ಬಂದು, ತಮ್ಮ ದುರವಸ್ಥೆಯ ಬಗ್ಗೆ ದೀನಾವಸ್ಥೆಯಲ್ಲಿ ಹೇಳಿಕೊಂಡ. ಮತ್ತೆ ಸಂಪತ್ತನ್ನು ಪಡೆಯುವ ಪರಿಯನ್ನು ತಿಳಿಸಲು ಕೇಳಿಕೊಂಡ. ಬ್ರಹ್ಮನಿಗೂ ಸಮಸ್ಯೆ ಬಗೆಹರಿಯದಂತಾಯಿತು. ಅವನು ಸರ್ವರ ರಕ್ಷಣೆಯ ಹೊರೆ ಹೊತ್ತಿರುವ ವಿಷ್ಣುವಿನ ಬಳಿ ಮೊರೆ ಹೋಗಲು ಸೂಚಿಸಿದ. ಅವನ ಸೂಚನೆಯಂತೆ ಎಲ್ಲರೂ ವಿಷ್ಣುವಿನ ನಿವಾಸ ಸ್ಥಳವಾದ ವೈಕುಂಠಕ್ಕೆ ಬಂದರು. ಕ್ಷೀರಸಾಗರದಲ್ಲಿ ಆದಿಶೇಷನನ್ನೇ ಹಾಸಿಗೆಯನ್ನಾಗಿ ಮಾಡಿಕೊಂಡು ಮಲಗಿದ್ದ ವಿಷ್ಣು ಹಾಗೂ ಶ್ರೀದೇವಿಯನ್ನು ಭಕ್ತಿಯಿಂದ ವಂದಿಸುತ್ತಾ ತಮಗೆ ಒದಗಿರುವ ಆಪತ್ತಿನಿಂದ ಪಾರು ಮಾಡಲು ಪ್ರಾರ್ಥಿಸಿದರು.

ವಿಷ್ಣು ಅವರ ಪ್ರಾರ್ಥನೆಗೆ ಮನ್ನಣೆ ನೀಡುತ್ತಾ ಸಲಹೆ ನೀಡಿದ. “ದೂರ್ವಾಸರು ಕೋಪಿಷ್ಠರೆಂಬುದನ್ನು ಅರಿತಿದ್ದೂ ಸಹ, ನೀವು ನಡೆದು ಕೊಂಡಿರುವ ರೀತಿ ಅಕ್ಷಮ್ಯಕರ. ಈಗ ನಿಮ್ಮ ಮೇಲೆ ಸುಲಭವಾಗಿ ದಾನವರು ದಾಳಿ ಮಾಡಿ, ನಿಮ್ಮೆಲ್ಲರನ್ನೂ ಧ್ವಂಸ ಮಾಡದೆ ಬಿಡರು. ಈ ಮೊದಲೇ ನೀವು ಅವರೊಂದಿಗೆ ಸಮಯ ಸಿಂಧುವಿನಂತೆ ವರ್ತಿಸಿ, ಅವರ ಸ್ನೇಹ ಸಂಪಾದಿಸಿಕೊಳ್ಳಿ. ಇದಕ್ಕೊಂದು ಉಪಾಯ ನನಗೆ ಹೊಳೆಯುತ್ತಿದೆ....” ವಿಷ್ಣು ತನ್ನ ಮಾತನ್ನು ಮುಂದುವರಿಸುವ ಮೊದಲೇ ದೇವೇಂದ್ರ ಆತುರದಲ್ಲಿ ಪ್ರಶ್ನಿಸಿದ: “ಅದೇನು? ಆ ಉಪಾಯವನ್ನು ಬೇಗ ನಮಗೆ ತಿಳಿಸಿ.” ವಿಷ್ಣು ಮಾತು ಮುಂದುವರಿಸಿದ:

“ನೀವು ಹಾಗೂ ದಾನವರು ಮಂದಾರ ಪರ್ವತವನ್ನು ಕಡೆಗೋಲನ್ನಾಗಿ ಮಾಡಿಕೊಳ್ಳಿ.” ಸರ್ಪರಾಜನಾದ ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕ್ಷೀರಸಾಗರವನ್ನು ಕಡೆಯಿರಿ. ಆಗ ಅಮೃತದ ಕಲಶ ಹೊರಬರುವುದು. ಕಲಶದಲ್ಲಿರುವ ಅಮೃತವೆಲ್ಲವೂ ನಿಮಗೇ ದಕ್ಕುವ ಮಾರ್ಗವನ್ನು ನಾನು ತೋರಿಸುತ್ತೇನೆ.” ದೇವೇಂದ್ರನು ವಿಷ್ಣುವಿನ ಸಲಹೆಯಂತೆ ದೈತ್ಯರಾಜನಾದ ವೈರೋಚನಿಯ ಬಳಿಗೆ ಬಂದ. ಅವನೊಂದಿಗೆ ಸಮಯೋಚಿತ ರೀತಿಯಲ್ಲಿ ಮಾತಾಡಿದ: “ದೈತ್ಯರಾಜ, ವೃಥಾ ದೇವದಾನವರು ಕಾದಾಡಿ, ಪ್ರಾಣಗಳನ್ನು ಕಳೆದುಕೊಳ್ಳುವ ಬದಲು ಅನ್ಯೋನ್ಯವಾಗಿರಲು ನಾವೇಕೆ ಯಾವುದಾದರೊಂದು ಮಾರ್ಗವನ್ನು ಹುಡುಕಬಾರದು? ಇದಕ್ಕಾಗಿ ವಿಷ್ಣು ಪರಮಾತ್ಮ ನಮ್ಮೀರ್ವರಿಗೂ ಒಂದು ಸಲಹೆ ನೀಡಿದ್ದಾನೆ.” “ಅದೇನು? ಆ ಸಲಹೆಯ ವಿಚಾರವನ್ನು ಬೇಗ ತಿಳಿಸು. ಸರಿ ತೋರಿದರೆ ನಾವೂ ಸಮ್ಮತಿಸುತ್ತೇವೆ.” ದೇವೇಂದ್ರ ಹೇಳಿದ:

“ನಾವಿಬ್ಬರೂ ಮಂದಾರ ಪರ್ವತವನ್ನು ಕಡೆಗೋಲು, ವಾಸುಕಿಯನ್ನು ಹಗ್ಗ ಮಾಡಿಕೊಂಡು ಕ್ಷೀರಸಾಗರವನ್ನು ಕಡೆದರೆ, ಹಲವಾರು ಅಮೂಲ್ಯ ವಸ್ತುಗಳು ದೊರೆಯುವುವು. ಅಮೃತ ಕಲಶ ಹೊರಬರುವುದು. ಅಮೃತ ಪಾನದಿಂದ ನಾವೆಲ್ಲರೂ ಅಮರರಾಗಬಹುದು.” ವೈರೋಚನನಿಗೂ ಸಲಹೆ ಸೂಕ್ತ ಎನಿಸಿತು. ಅವನು ಹೇಳಿದನು. “ಏನೇ ಪಡೆದರೂ ನಮಗೆ ಸಮಪಾಲು ದೊರಕಿಸಿಕೊಡುವಿ ತಾನೇ?” ದೇವೇಂದ್ರ ಸಂತೋಷದಿಂದ ಸಮ್ಮತಿಸಿದ.

ಎರಡೂ ಗುಂಪಿನವರೂ ಮಂದರಾಚಲ ಪರ್ವತವನ್ನು ಹೊತ್ತು ಕ್ಷೀರಸಾಗರದವರೆಗೆ ಬರುವುದರಲ್ಲಿ ಸುಸ್ತೋ ಸುಸ್ತಾದರು. ಕಡೆಗೆ ವಿಷ್ಣುವೇ ಅವರಿಗೆ ಈ ಕಾರ್ಯದಲ್ಲಿ ಸಹಾಯ ಮಾಡಬೇಕಾಗಿ ಬಂತು. ಕ್ಷೀರಸಾಗರದಲ್ಲಿ ಅದನ್ನು ನಿಲ್ಲಿಸಿ ವಾಸುಕಿಯನ್ನು ಹಗ್ಗವನ್ನಾಗಿ ಅದಕ್ಕೆ ಸುತ್ತಿದರು. ಹೆಡೆಯ ಭಾಗವನ್ನು ದಾನವರೂ ಬಾಲದ ಭಾಗವನ್ನು ದೇವತೆಗಳೂ ಭದ್ರವಾಗಿ ಹಿಡಿದುಕೊಂಡು ರಭಸದಿಂದ ಸಾಗರವನ್ನು ಕಡೆಯತೊಡಗಿದರು. ಮಾಸಗಟ್ಟಲೆ ಕಡೆಯುತ್ತಲೇ ಬಂದರು. ಅಮೃತ ಕಲಶ ಕಾಣಿಸಲಿಲ್ಲ. ಬದಲಾಗಿ ಪರ್ವತ ಅಲುಗಾಡುತ್ತಾ, ಸಾಗರದಲ್ಲಿ ಕುಸಿದು ಮುಳುಗಲಾರಂಭಿಸಿತು. ಭಯ-ಭೀತಿಯಿಂದ ದೇವ ದಾನವರೀರ್ವರೂ ಕೂಗಿಡತೊಡಗಿದರು. ಮಹಾವಿಷ್ಣುವೇ ಆಗ ಕೂರ್ಮ ಅಂದರೆ ದೊಡ್ಡ ಆಮೆಯ ರೂಪ ತಾಳಿದ. ಕುಸಿತದಿಂದ ಮುಳುಗುತ್ತಿದ್ದ ಪರ್ವತವನ್ನು ಮೇಲೆತ್ತಿ ನಿಲ್ಲಿಸಿದ. ಮತ್ತೆ ಕ್ಷೀರಸಾಗರವನ್ನು ಮಥಿಸಲು ದೇವದಾನವರು ಪ್ರಾರಂಭಿಸಿದರು. ಈ ರೀತಿಯ ಮಂಥನದ ಸಮಯದಲ್ಲಿ ಹಗ್ಗವಾಗಿ ಮಂದಾರಪರ್ವತಕ್ಕೆ ಬಿಗಿದಿದ್ದ ಸರ್ಪ, ವಾಸುಕಿಗೆ ತುಂಬಾ ಘಾಸಿ ಆಯಿತು. ಅದರ ಘಾಸಿತನದ ಕಾರಣ ಅದರ ಬಾಯಿಂದ ವಿಷಜ್ವಾಲೆ ವಿಕರಾಳ ರೂಪದಲ್ಲಿ ಹೊರಬರತೊಡಗಿತು. ದೇವದಾನವರನ್ನು ಈ ವಿಷಜ್ವಾಲೆ ಸುಡತೊಡಗಿತು. ಇದನ್ನು ಮನಗಂಡ ಮಹಾವಿಷ್ಣು ವರುಣದೇವನಿಗೆ ಅಪಾರ ಮಳೆ ಸುರಿಸಲು ಅಪ್ಪಣೆ ಮಾಡಿದ. ತತ್‍ಕ್ಷಣವೇ ಕಾರ್ಮೋಡಗಳು ಕವಿದುವು. ಅಪಾರ ಮಳೆ ಸುರಿಯಿತು. ವಿಷಜ್ವಾಲೆ ತಣ್ಣಗಾಯಿತು. ಮಂಥನ ಕಾರ್ಯ ಮುಂದುವರಿಯಿತು.

ಈಗ ಸಮುದ್ರಮಂಥನದ ಸಮಯದಲ್ಲಿ ಕಾಲಕೂಟ ಎಂಬ ಭಯಂಕರ ವಿಷ ಉದ್ಭವಿಸಿತು. ಮತ್ತೆ ಮಂಥಿಸುತ್ತಿದ್ದ ದೇವ-ದಾನವರು ತತ್ತರಿಸಿದರು. ಈ ಬಾರಿ ಪರಶಿವನು ದೇವ-ದಾನವರ ಸಹಾಯಕ್ಕೆ ಬಂದ. ಆ ಕಾಲಕೂಟ ವಿಷದ ಪ್ರವಾಹವನ್ನು ಒಂದು ಗುಳಿಗೆಯ ರೂಪದಲ್ಲಿ ಮಾರ್ಪಡಿಸಿ ಸ್ವತಃ ನುಂಗಿದ. ನುಂಗಿದ ಗುಳಿಗೆಯನ್ನು ಉದರದೊಳಗೆ ಪ್ರವೇಶಿಸಲು ಬಿಡದೆ ತನ್ನ ಕಂಠದಲ್ಲಿಯೇ ನಿಲ್ಲಿಸಿಕೊಂಡ. ಆ ಜಾಗ ನೀಲಿ ಬಣ್ಣ ತಾಳಿತು. ಆದ್ದರಿಂದಲೇ ನೀಲಕಂಠ ಎನಿಸಿಕೊಂಡ. ಇನ್ನೂ ಮುಂದೆ ಕಡೆಯುತ್ತಿದ್ದಂತೆ ದೀರ್ಘಾಯಾಸದಿಂದ ದೇವದಾನವರು ಒದ್ದಾಡತೊಡಗಿದರು. ಅವರ ಕೈಗಳು ಸೋತು ಹೋದುವು. ಸೊಂಟವೇ ಬಿದ್ದುಹೋದಂತಾಯಿತು. ಇವರೆಲ್ಲರ ಒದ್ದಾಟವನ್ನು ಕಂಡು ಮಹಾವಿಷ್ಣು ಮರುಕದಿಂದ ಪೀತಾಂಬರಧಾರಿಯಾಗಿ ಸ್ವತಃ ಕಡೆಯತೊಡಗಿದ. ತುಂಬಾ ಕಾಲದವರೆಗೆ ಒಬ್ಬನೇ ಹೀಗೆ ತನ್ನ ಕೈಗಳಿಂದ ಕಡೆಯುತ್ತಿರುವುದನ್ನು ಕಂಡು ದೇವದಾನವರು ಬೆಕ್ಕಸಬೆರಗಾದರು. ಅವರಿಗೆ ವಿಶ್ರಾಂತಿ ಕೊಡುವ ಸಲುವಾಗಿ ಕರುಣಾಮಯನಾದ ಶ್ರೀಹರಿ ಈ ಜವಾಬ್ದಾರಿಯನ್ನು ತಾನೇ ಹೊತ್ತ.

ಹೀಗೆ ಕಡೆಯುತ್ತಿರುವಾಗ ಅಗ್ನಿಹೋತ್ರಿ ಎಂಬ ಹಸು ತನ್ನ ಕರುವಿನೊಂದಿಗೆ ಕಾಣಿಸಿಕೊಂಡಿತು. ಅವನ್ನು ಋಷಿಮುನಿಗಳ ಸೌಕರ್ಯಕ್ಕಾಗಿ ಶ್ರೀಹರಿಯೇ ದಾನ ನೀಡಿದ. ಇನ್ನೂ ಮುಂದೆ ಹೀಗೆಯೇ ಮಂಥನಕಾರ್ಯ ಮುಂದುವರಿಯುತ್ತಿದ್ದಂತೆ ಉಚ್ಚೈಶ್ರವ ಎಂಬ ಕುದುರೆ, ಐರಾವತ ಎಂಬ ಆನೆ ಉದ್ಭವಿಸಿದುವು. ಅವನ್ನು ದೇವೇಂದ್ರನು ತನಗಾಗಿ ಶ್ರೀಹರಿಯ ಅನುಮತಿಯೊಂದಿಗೆ ಪಡೆದ. ಬಳಿಕ ಉದ್ಭವಿಸಿದ ಪಾರಿಜಾತ ವೃಕ್ಷವನ್ನೂ ಶ್ರೀಹರಿ ದೇವತೆಗಳಿಗೆ ನೀಡಿದ. ಹೀಗೆಯೇ ತಡೆಯುತ್ತಿದ್ದಂತೆ ಹುಟ್ಟಿದ ಚಂದ್ರನನ್ನು ಪರಶಿವನು ತನ್ನ ಶಿರಶಿಖೆಯಲ್ಲಿ ಅಲಂಕರಿಸಿಕೊಂಡ. ಚಂದ್ರನ ಉದ್ಭವದ ಹಿಂದೆಯೇ ಲಕ್ಷ್ಮಿ ಉದ್ಭವಿಸಿದಳು. ಅವಳು ಶ್ರೀಹರಿಯ ಕೊರಳಿಗೆ ವರಮಾಲೆಯನ್ನು ಹಾಕಿ, ಆತನ ವಕ್ಷಸ್ಥಳದಲ್ಲಿ ಆಸೀನಳಾದಳು. ಕಡೆಗೆ ಒಂದು ಕೈಯಲ್ಲಿ ಅಮೃತಕಲಶವನ್ನೂ, ಇನ್ನೊಂದು ಕೈಯಲ್ಲಿ ಅಳಲೆಕಾಯಿಯನ್ನೂ ಹಿಡಿದುಕೊಂಡು ಧನ್ವಂತರಿ (ವೈದ್ಯರಾಜ) ಸಾಗರದಿಂದ ಹೊರಬಂದ. ದಾನವರು ಕೂಡಲೇ ಅವನ ಕೈಲಿದ್ದ ಕಲಶವನ್ನು ಅಪಹರಿಸಿದರು.

ಮತ್ತೆ ದೇವತೆಗಳು ವಿಷ್ಣುವಿನ ಮೊರೆಹೋದರು. ಮಾಯಾವಿಯಾದ ವಿಷ್ಣು ದೇವತೆಗಳ ನೆರವಿಗಾಗಿ ಮೋಹಿನಿಯ ರೂಪತಾಳಿ ದಾನವರ ಮುಂದೆ ನಿಂತ. ಮೋಹಿನಿಯ ರೂಪಕ್ಕೆ ಬೆರಗಾದ ದಾನವರು ಮೋಹಗೊಂಡರು. ಎಲ್ಲರೂ ಅವಳನ್ನು ಬಯಸಿದರು. ಅವಳ ಅಂಗೈ ಮೇಲೆ ಕುಣಿಯತೊಡಗಿದರು. ಮೋಹಿನಿಯು ಅವರಿಂದ ಅಮೃತ ಕಲಶವನ್ನು ಪಡೆದಳು. ತಾನೇ ದೇವದಾನವರೀರ್ವರಿಗೂ ಅಮೃತವನ್ನು ಕುಡಿಸುವುದಾಗಿ ತಿಳಿಸಿ, ಈರ್ವಳ ಕಡೆಯವರನ್ನೂ ಬೇರೆ ಬೇರೆ ಸಾಲಿನಲ್ಲಿ ಕುಳ್ಳಿರಿಸಿದಳು. ಮೊದಲು ದೇವತೆಗಳ ಸಾಲಿಗೆ ಬಂದು ಅವರಿಗೆ ಕಲಶದಲ್ಲಿದ್ದ ಅಮೃತವನ್ನೆಲ್ಲಾ ಕುಡಿಸಿಬಿಟ್ಟಳು. ಹೀಗೆ ಕುಡಿಸುವಾಗ ರಾಹು ಮತ್ತು ಕೇತು ಎಂಬ ದಾನವರು ದೇವತೆಗಳ ಪಂಕ್ತಿಯಲ್ಲಿ ಕುಳಿತಿದ್ದ ಅವರಿಗೆ ಮಾತ್ರ ಅಮೃತಪಾನದ ಪ್ರಾಪ್ತಿ ಆಯಿತು. ಆದರೂ ಸುದರ್ಶನ ಚಕ್ರದ ಹೊಡೆತದಿಂದ ಅವರ ಕುತ್ತಿಗೆ ಕತ್ತರಿಸಿಬಿದ್ದು ಅರೆ ದೇಹಧಾರಿ ಆದರು. ದಾನವರಿಗೆ ಕುಡಿಸುವ ಸಮಯಕ್ಕೆ ಮೋಹಿನಿ ಮಾಯವಾಗಿ ಹೋದಳು. ಹೀಗೆ ಶ್ರೀಹರಿಯ ಕೃಪೆಯಿಂದ ದೇವತೆಗಳು ಅಮೃತಪಾನ ಮಾಡಿ ಅಮೃತತ್ವವನ್ನು ಪಡೆದರು.