ತಾಟಕಿಯ ವಧೆ
ಮಹರ್ಷಿ ವಿಶ್ವಾಮಿತ್ರನ ಯಾಗದಲ್ಲಿ ಸಾಕಷ್ಟು ಮಂದಿ ರಾಕ್ಷಸರು ವಿಘ್ನಗಳನ್ನು ತಂದೊಡ್ಡುತ್ತಿದ್ದರು. ವಿಶ್ವಾಮಿತ್ರನಿಗೆ ಈ ಕಿರುಕುಳವನ್ನು ಕಂಡು, ಸುಮ್ಮನಿರಲು ಸಾಧ್ಯವಾಗಲಿಲ್ಲ. ಅಯೋಧ್ಯೆಯ ರಾಜನಾದ ದಶರಥನ ಅರಮನೆಗೆ ಬಂದ. ರಾಕ್ಷಸರ ಕಿರುಕುಳಗಳ ಬಗ್ಗೆ ಬಣ್ಣಿಸಿದ. ಅವರನ್ನು ಕೊಂದು ತನಗೆ ನೆರವು ನೀಡಲು ಬಾಲಕ ರಾಮ-ಲಕ್ಷ್ಮಣರನ್ನು ಕಳುಹಿಸಿಕೊಡಲು ಕೇಳಿಕೊಂಡ. ಅವರಿಬ್ಬರೂ ವಯಸ್ಸಿನಲ್ಲಿ ಇನ್ನೂ ಕಿರಿಯರು. ರಾಜನಿಗೆ ಮುಪ್ಪಿನ ವಯಸ್ಸಿನಲ್ಲಿ ಮಕ್ಕಳನ್ನು ಇಂತಹ ಅಪಾಯದ ಕಾರ್ಯಗಳಿಗೆ ಕಳುಹಿಸಿಕೊಡಲು ಮನ ಬರಲಿಲ್ಲ. ತಾನೇ ಬಂದು ರಾಕ್ಷಸರ ಸಂಹಾರ ಕಾರ್ಯದಲ್ಲಿ ಸಹಾಯ ಮಾಡಲು ಮುಂದಾದ. ಆದರೆ ವಿಶ್ವಾಮಿತ್ರ ಒಪ್ಪಲಿಲ್ಲ. ಅವನ ಉದ್ದೇಶವೇ ಬೇರೆ ಆಗಿತ್ತು. ಕಡೆಗೆ ಮಹರ್ಷಿ ವಿಶ್ವಾಮಿತ್ರ ತ್ರಿಕಾಲಜ್ಞಾನಿ ಎಂಬುದನ್ನು ತಿಳಿದು ತನ್ನ ಮುದ್ದಿನ ಮಕ್ಕಳನ್ನು ಮಹರ್ಷಿಯೊಂದಿಗೆ ಲೋಕಕಲ್ಯಾಣ ಕಾರ್ಯದಲ್ಲಿ ನೆರವು ನೀಡಲು ಕಳುಹಿಸಿಕೊಟ್ಟ. ರಾಮ-ಲಕ್ಷ್ಮಣರಿಗೆ ತುಂಬಾ ಸಂತೋಷವಾಯಿತು. ಬಿಲ್ಲುಬಾಣಗಳೊಂದಿಗೆ ಸಿದ್ಧರಾದರು. ತಂದೆಯನ್ನು ಶ್ರದ್ಧೆ-ಭಕ್ತಿಯಿಂದ ವಂದಿಸಿದರು. ತಂದೆಯ ಆಶೀರ್ವಾದವನ್ನು ಪಡೆದು ಮಹರ್ಷಿಯೊಂದಿಗೆ ಆನಂದದಿಂದ ಹೋದರು. ಕಾಲ್ನಡಿಗೆಯಲ್ಲಿಯೇ ಸಾಕಷ್ಟು ದೂರ ಬಂದರು. ಗಂಗೆಯ ದಕ್ಷಿಣ ತೀರದ ಮೂಲಕ ಮೂವರು ಮುನ್ನಡೆದರು. ಸುತ್ತಲೂ ದಟ್ಟವಾದ ಕಾಡುಗಳು. ಮರಗಿಡಗಳ ಅಗಾಧ ನೆರಳಿನಲ್ಲಿ ಸೂರ್ಯನ ಬೆಳಕೂ ಸಹ ಮೊಬ್ಬಾಯಿತು. ತನ್ನದೇ ಆದ ಭಯಂಕರ ಧ್ವನಿಯಿಂದ ಕಾಡಿನ ಜನ-ಜೀವಿಗಳನ್ನು ತತ್ತರಿಸುವಂತೆ ಮಾಡಿತ್ತು.
ಮೌನವ್ರತದಲ್ಲಿಯೇ ಬರುತ್ತಿದ್ದ ರಾಮ ಮಹರ್ಷಿಯನ್ನು ಇದ್ದಕ್ಕಿದ್ದಂತೆ ಪ್ರಶ್ನಿಸಿದ: “ಮುನಿಪುಂಗವರೇ, ಈ ಘೋರಾರಣ್ಯದ ಹೆಸರೇನು? ಇಲ್ಲಿ ಎಲ್ಲೇ ನೋಡಿದರೂ ಯಾವೊಂದು ಜೀವಿಯೂ ಕಾಣಿಸುತ್ತಿಲ್ಲ. ಕ್ರೂರ ಮೃಗಗಳ ಕೂಗೇ ಕೇಳಿಬರುತ್ತಿದೆ! ಮುಳ್ಳುಪೊದೆಗಳಿಂದ ಮಾರ್ಗಗಳು ಮುಚ್ಚಿಹೋಗಿವೆ. ಈ ಅರಣ್ಯ ಮಾರ್ಗದಲ್ಲಿ ಯಾರೂ ತುಂಬಾ ವರ್ಷಗಳಿಂದ ಹೋಗಿ-ಬರುತ್ತಿರುವಂತೆಯೂ ಕಾಣಿಸುತ್ತಿಲ್ಲ! ಈ ಬಗ್ಗೆ ನಮಗೆ ವಿವರವಾಗಿ ತಿಳಿಸಿ”.
ರಾಜಕುಮಾರನ ಮಾತನ್ನು ಕೇಳಿ ಮಹರ್ಷಿಗಳ ತುಟಿ ಅಂಚಿನಲ್ಲಿ ಮಂದಹಾಸ ಮಿನುಗಿತು. ಆತನು ಹೇಳಿದನು: “ವೀರಾಗ್ರಣಿಯಾದ ರಾಜಕುಮಾರನೇ, ನೀನು ಕೇಳುತ್ತಿರುವುದು ಈ ಸಂದರ್ಭದಲ್ಲಿ ಸೂಕ್ತ ಎನಿಸಿದೆ. ಇದೊಂದು ತುಂಬಾ ಭಯಂಕರವಾದ ಕಾಡು. ಆದರೆ ಆದಿಯಲ್ಲಿ ಹೀಗಿರಲಿಲ್ಲ. ಇದೇ ಸ್ಥಳದಲ್ಲಿ ತುಂಬಾ ಹಿಂದೆ ಮಲದ, ಕಾರುಷ ಎಂಬ ಎರಡು ಸಂಪದ್ಯುಕ್ತ ಜನಪದ ರಾಜ್ಯಗಳಿದ್ದವು. “ಹಾಗಾದರೆ ಈ ಜನಪದ ರಾಜ್ಯಗಳನ್ನು ಆಳುತ್ತಿದ್ದ ರಾಜ ಯಾರು?” ರಾಮ ಮರುಪ್ರಶ್ನಿಸಿದ. “ಈ ರಾಜ್ಯಗಳನ್ನು ನಿರ್ಮಿಸಿದವರು ದೇವತೆಗಳು. ಆಗ ಇಲ್ಲಿನ ರಾಜ ದೇವೇಂದ್ರನೇ ಆಗಿದ್ದ” ಮಹರ್ಷಿ ಹೇಳಿದ. ಮಹರ್ಷಿಯ ಮಾತನ್ನು ಕೇಳಿ, ಇಬ್ಬರೂ ಹಾಗೆಯೇ ಕುತೂಹಲ ದೃಷ್ಟಿಯಿಂದ ನೋಡತೊಡಗಿದರು. ಅವರ ಕುತೂಹಲದ ಕಾರಣವನ್ನು ಅರಿತ ಮಹರ್ಷಿ ಹೇಳಿದ: “ಕುಮಾರರೇ, ನೀವೇನು ಯೋಚಿಸುತ್ತಿರುವಿರಿ ಎಂಬುದು ನನಗೆ ಗೊತ್ತು. ದೇವಲೋಕವನ್ನು ಆಳುತ್ತಿದ್ದ ದೇವೇಂದ್ರ ಈ ಭೂಲೋಕಕ್ಕೆ ಏಕೆ ಬಂದ ಎಂಬ ಕುತೂಹಲ ನಿಮ್ಮ ಮನಸ್ಸಿನಲ್ಲಿ ಹೆಚ್ಚಾಗುತ್ತಿದೆ ಅಲ್ಲವೇ?” ಹೌದೆನ್ನುವಂತೆ ತಲೆ ಆಡಿಸುತ್ತಾ ಇಬ್ಬರೂ ಮಹರ್ಷಿಯ ಕಡೆಯೇ ನೋಡಿದರು. ಮಹರ್ಷಿ ಮುಂದೆ-ಮುಂದೆ ನಡೆಯುತ್ತಾ ಹೇಳಿದ: “ರಾಮ, ಈ ಘಟನೆ ನಡೆದು ತುಂಬಾ ದಿನಗಳು ಆಗಿ ಹೋಗಿವೆ. ಇಲ್ಲಿ ಹಿಂದೆ ವೃತ್ರಾಸುರ ಎಂಬ ರಾಕ್ಷಸನಿದ್ದ. ದೇವೇಂದ್ರ ಅವನನ್ನು ಮಾಡಿದ ಸಂಹಾರ ಈ ಪಾಪದ ಕಾರಣ ಇಂದ್ರನ ಮುಖಕಾಂತಿ ಕೆಟ್ಟಿತು. ಅವನು ದೇವತೆ ಆಗಿದ್ದರೂ ಹಸಿವು-ಬಾಯಾರಿಕೆ ಅವನನ್ನು ಬಾಧಿಸತೊಡಗಿತು. ತುಂಬಾ ಮಾನಸಿಕ ದುಃಖದಿಂದ ಪರಿತಪಿಸತೊಡಗಿದ. ಮಹರ್ಷಿಗಳಲ್ಲರೂ ಅವನ ದುಃಖವನ್ನು ದೂರ ಮಾಡಲು ಭೂಲೋಕಕ್ಕೆ ಕರೆತಂದರು. ಯಾಗ ಮಾಡಿಸಿದರು. ಪವಿತ್ರ ನದಿಗಳಲ್ಲಿ ಸ್ನಾನ ಮಾಡಿಸಿದರು. ಇದರಿಂದ ಅವನ ಪಾಪ ನಿವಾರಣೆ ಆಯಿತು. ಈ ಸಂತೋಷದಲ್ಲಿಯೇ ಇಂದ್ರ ಇಲ್ಲಿ ಎರಡು ಜನಪದ ರಾಜ್ಯಗಳನ್ನು ನಿರ್ಮಿಸಿದ. ಇಲ್ಲಿನ ನಿವಾಸಿಗಳು ದೇವೇಂದ್ರನ ಕೃಪೆಯಿಂದ ಕ್ಷಾಮಡಾಮರಗಳ ಭಯ ಇಲ್ಲದೆ ಸುಖವಾಗಿದ್ದರು.” “ಹಾಗಾದರೆ ಇಷ್ಟೊಂದು ಸುಖೀರಾಜ್ಯ ಹೀಗೇಕೆ ಬದಲಾಯಿತು?”ಎಂದು ರಾಮ ಜಿಜ್ಞಾಸೆಯೊಂದಿಗೆ ಪ್ರಶ್ನಿಸಿದ. ವಿಶ್ವಾಮಿತ್ರ ಹೇಳಿದ: “ಕಾಲಚಕ್ರ ಸದಾ ಒಂದೇ ರೀತಿ ಉರುಳುವುದಿಲ್ಲ. ಒಮ್ಮೊಮ್ಮೆ ಚಲನೆಯ ದಿಕ್ಕು ಬದಲಾಗುವುದೂ ಉಂಟು. ಆದದ್ದೂ ಹಾಗೆಯೇ. ಇಲ್ಲಿನ ಸುಖಸಂತೋಷಗಳಿಂದ ಆಕರ್ಷಿತಳಾಗಿ ಕಾಮರೂಪಿಣಿ ಎಂಬ ಯಕ್ಷಿಣಿ ಇಲ್ಲಿರಲು ಬಂದಳು. ಅವಳಿಗೆ ಸಹಸ್ರ ಆನೆಗಳ ಬಲ ಇತ್ತು. ಅವಳನ್ನು ತಾಟಕಿ ಎಂದು ಕರೆಯುತ್ತಿದ್ದರು.” ‘ತಾಟಕಿ ಯಾರು?” ರಾಮ ಕೇಳಿದ.
“ತಾಟಕಿ ಸುಕೇತು ಎಂಬುವವನ ಮಗಳು. ಅವಳ ಪರಾಕ್ರಮಿ ಪುತ್ರನ ಹೆಸರು ಮಾರೀಚ, ತುಂಬಾ ಉದ್ದನೆಯ ತೋಳುಗಳನ್ನು ಹೊಂದಿದ್ದಾನೆ. ವಿಶಾಲವಾದ ಹಣೆ, ಅಗಲವಾದ ಮುಖ, ಇವರಿಬ್ಬರೇ ಈ ಜನಪದ ರಾಜ್ಯವನ್ನು ಹಾಳು ಮಾಡಿದ್ದು” ವಿಶ್ವಾಮಿತ್ರ ವಿವರ ನೀಡಿದ. ಅದೇ ವೇಳೆಗೆ ಸಿಂಹಗರ್ಜನೆಯಂತಹ ಭಯಂಕರ ಕೂಗು ಕೇಳಿಸಿತು. ರಾಮ ಹೇಳಿದ: “ಯಾವುದೋ ಸಿಂಹ ಈ ಕಡೆಯೇ ಬರುತ್ತಿರುವ ಹಾಗಿದೆ. ಲಕ್ಷ್ಮಣ ಬಾಣವನ್ನು ಬಿಲ್ಲಿಗೆ ಹೂಡುತ್ತಿದ್ದಂತೆ. ಮಹರ್ಷಿ ಹೇಳಿದ. “ಇದು ಸಿಂಹದ ಗರ್ಜನೆಯಲ್ಲ ಇಲ್ಲಿಂದ ಸ್ವಲ್ಪ ದೂರದಲ್ಲಿ ತಾಟಕಾ ಮಾರ್ಗಮಧ್ಯದಲ್ಲಿ ಕಾಯುತ್ತ ಕುಳಿತಿದ್ದಾಳೆ. ಬಹುಶಃ ನಾವು ಬಂದಿರುವ ಸುಳಿವು ಅವಳಿಗೆ ಸಿಕ್ಕಿರಬಹುದು. ನಮ್ಮನ್ನು ಭಯಪಡಿಸಲು ಆ ರೀತಿ ಗರ್ಜಿಸುತ್ತಿದ್ದಾಳೆ.” “ಈಗ ನಮ್ಮ ಕರ್ತವ್ಯವೇನು?” ರಾಮ ಮಹರ್ಷಿಯ ಕಡೆಯೇ ನೋಡುತ್ತಾ ಕೇಳಿದ: “ಕ್ಷಮಿಸಿ ಮಹರ್ಷಿಗಳೇ, ಯಕ್ಷರು ಮಾಯಾವಿಗಳೆಂದು ನಾನು ಕೇಳಿದ್ದೇನೆ. ಅವರಲ್ಲಿ ಬಾಹುಬಲಕ್ಕಿಂತಲೂ ಮಾಯೆಯ ಬಲವೇ ಹೆಚ್ಚು. ಹೀಗಿರುವಾಗ ಯಕ್ಷಿಣಿಯಾಗಿದ್ದೂ ತಾಟಕಿ ರಾಕ್ಷಸಿ ಹೇಗಾದಳು?” ವಿಶ್ವಾಮಿತ್ರ ಕೊಂಚ ಕಾಲ ಯೋಚನೆಯಲ್ಲಿ ಮುಳುಗಿ ಹೇಳಿದ: ‘ನಿನ್ನ ಯೋಚನೆ ಸರಿ.. ಅವಳ ವಧೆ ಮಾಡುವ ಮುನ್ನ ಅವಳ ಪೂರ್ವವಿಚಾರವನ್ನೂ ಕೂಲಂಕುಷವಾಗಿ ತಿಳಿಯುವುದು ಅಗತ್ಯ. ಅವಳು ಯಕ್ಷಿಣಿಯೇ ಆದರೂ ಬ್ರಹ್ಮನ ವರದಿಂದ ಬಲವತಿ ಆದಳು. ಅವಳ ತಂದೆ ಮಹಾತಪಸ್ವಿ. ತಪಸ್ಸಿನ ಬಲದಿಂದ ಬ್ರಹ್ಮನನ್ನು ಪ್ರಸನ್ನಗೊಳಿಸಿದ. ಬ್ರಹ್ಮನು ವರ ನೀಡುತ್ತಾ ಹೇಳಿದ: “ನಿನಗೊಬ್ಬ ಸುಂದರ ಕನ್ಯೆ ಜನಿಸುವಳು. ಅವಳು ತುಂಬಾ ಬಲಶಾಲಿಯೂ ಆಗುವಳು.” ತಾಟಕಿ ದೊಡ್ಡವಳಾದ ನಂತರ ಅವಳ ತಂದೆ ಜಂಬು ಎಂಬುವವನ ಮಗನಾದ ಸುಂದರನಿಗೆ ಕೊಟ್ಟು ಮದುವೆ ಮಾಡಿದ. ಇವರಿಬ್ಬರ ಮಗನೇ ಮಾರೀಚ, ಮೊದಲು ತಾಯಿ-ಮಗ; ರಾಕ್ಷಸರಿರಲಿಲ್ಲ. ರಾಕ್ಷಸರಾದಂತೆ ಇವರ ಸುಂದರ ರೂಪ ವಿಕೃತಗೊಂಡಿತು. ಇವರು ಭಯಂಕರ ಆಕ್ರಮಣಕಾರರೂ ಆದರು.”
ಮಹರ್ಷಿಯ ಮಾತಿನಿಂದ ರಾಮನ ಕುತೂಹಲ ಮತ್ತಷ್ಟು ಕೆರಳಿತು. ‘ಅದು ಸರಿ, ಅವರು ರಾಕ್ಷಸರಾದುದು ಹೇಗೆ?” ಮಹರ್ಷಿ ಕಮಂಡಲದ ನೀರಿನಿಂದ ನೆಲವನ್ನು ಚುಮುಕಿಸಿದ. ದಣಿವಾರಿಸಿಕೊಳ್ಳಲು ಕುಳಿತ ರಾಮ-ಲಕ್ಷ್ಮಣರಿಗೂ ಕೂಡಲು ತಿಳಿಸಿದ. ಕುಮಾರರಿಗೆ ರಾಕ್ಷಸರಾದುದರ ಕಥೆ ಹೇಳತೊಡಗಿದ: ‘ಹಿಂದೆ ಇಲ್ಲಿಯೇ ಅಗಸ್ತ್ಯಮುನಿಯ ಆಶ್ರಮ ಇತ್ತು. ತಾಟಕಿ ಗಂಡ ಗರ್ವದಿಂದ ಅಗಸ್ತ್ಯ ಮುನಿಯನ್ನು ಕಾರಣವಿಲ್ಲದೆ ಅವಮಾನಗೊಳಿಸಿದ. ಕೋಪಗೊಂಡ ಮುನಿ ಅವನನ್ನು ತನ್ನ ತಪೋಬಲದಿಂದ ಭಸ್ಮಗೊಳಿಸಿದ. ಪತಿಯ ಮೃತ್ಯುವನ್ನು ಕಂಡು ತಾಟಕಿಗೆ ತುಂಬಾ ಕೋಪ ಬಂತು. ಸೇಡಿನ ಭಾವನೆಯಿಂದ ತಾಯಿ ಮಗ ಇಬ್ಬರೂ ಮುನಿಯ ಮೇಲೆ ಎರಗಲು ಮುಂದಾದರು. ಅಗಸ್ತ್ಯ ಮಾರೀಚನನ್ನು ‘ಹೋಗು, ನೀನು ರಾಕ್ಷಸನಾಗಿ ಹೋಗು ಎಂದು ಶಪಿಸಿದ.
“ತಾಟಕಿಗೆ ಅಗಸ್ತ್ಯರು ಏನು ಹೇಳಿದರು?” ಲಕ್ಷ್ಮಣ ಹೆದೆ ಏರಿಸಿದ ಬಿಲ್ಲನ್ನು ಹಾಗೆಯೇ ಹಿಡಿದು ಕೇಳಿದ. “ಅಗಸ್ತ್ಯ ತಾಟಕಿಗೆ ಹೇಳಿದ- ‘ಇಂದಿನಿಂದ ನಿನ್ನ ರೂಪ ಕುರೂಪಗೊಳ್ಳಲಿ. ನಿನ್ನ ಹಸಿವನ್ನು ನಿವಾರಿಸಿಕೊಳ್ಳಲು ಕಾಡುಮೇಡುಗಳಲ್ಲಿ ಅಲೆಯುತ್ತಿರು. ಹೀಗೆ ತಾಯಿ-ಮಗ ಇಬ್ಬರೂ ರಾಕ್ಷಸಯೋನಿಯನ್ನು ಪಡೆದರು. ಇಬ್ಬರೂ ಮೊದಲೇ ಬಲಶಾಲಿಗಳಾಗಿದ್ದವರು. ರಾಕ್ಷಸರಾಗುತ್ತಲೇ ಇಲ್ಲದ ತೊಂದರೆಗಳನ್ನು ಜನರಿಗೆ ಕೊಡತೊಡಗಿದರು. ಅಗಸ್ತ್ಯರ ಆಶ್ರಮವನ್ನು ಧ್ವಂಸಗೊಳಿಸಿದರು. ಕ್ರಮೇಣ ಜನಪದ ರಾಜ್ಯಗಳನ್ನು ಧ್ವಂಸಗೊಳಿಸಿದರು.” “ಹಾಗಿದ್ದಲ್ಲಿ ಈ ಅತ್ಯಾಚಾರಿಗಳಿಗೆ ಕ್ಷಮೆ ಇಲ್ಲ. ವಧಿಸಲು ಇವರು ಅರ್ಹವೇ ಸರಿ. ಹೀಗಿದ್ದೂ ಇವರನ್ನು ಸಂಹರಿಸುವ ಸಾಮಥ್ರ್ಯವುಳ್ಳ ಕ್ಷತ್ರಿಯರೇ ಹುಟ್ಟಲಿಲ್ಲವಾ?” ರಾಮ ಪೌರುಷದಿಂದ ಹುಬ್ಬುಗಂಟಿಡುತ್ತಾ ಕೇಳಿದ. “ರಘುನಂದನಾ, ಆ ಕಾರ್ಯ ನಿನ್ನಿಂದ ಹೊರತು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಸಿಂಹಿಣಿಯಂತೆ ಗರ್ಜಿಸುತ್ತಿರುವ ಆ ತಾಟಕಿಯನ್ನು ವಧಿಸಿ, ಮತ್ತೆ ಜನಪದ ರಾಜ್ಯಗಳನ್ನು ಸೃಷ್ಟಿಸು ಎದ್ದೇಳು.” ರಾಮ ಎದ್ದು ಮಹರ್ಷಿಯನ್ನು ಶ್ರದ್ಧೆ-ಭಕ್ತಿಯಿಂದ ವಂದಿಸಿ ಧನುಸ್ಸನ್ನು ಕೈಗೆ ತೆಗೆದುಕೊಂಡು ಬಾಣ ಹೂಡಿದ. ತಾಟಕಿ ಕೂಡಾ ಅದೇ ವೇಳೆಗೆ ರಭಸದಿಂದ ಇವರತ್ತ ನುಗ್ಗಿ ಬಂದಳು. ರಾಮ ಲಕ್ಷ್ಮಣರ ಸಮ್ಮುಖದಲ್ಲಿ ಆವೇಶದಿಂದ ನಿಂತಳು. ಅವಳ ವಿಕಾರ ಹಾಗೂ ಕುರೂಪವನ್ನು ಕಂಡು ಅಣ್ಣ-ತಮ್ಮಂದಿರಿಬ್ಬರೂ ಮೊದಲು ಆಶ್ಚರ್ಯಗೊಂಡರು. ಇಂತಹ ವಿಶಾಲಕಾಯದ ಆಕೃತಿಯನ್ನು ಅವರು ಇದುವರೆಗೂ ಎಲ್ಲೂ ಕಂಡಿರಲಿಲ್ಲ. “ಯಾರು ನೀವು? ಇಲ್ಲಿಗೇಕೆ ಬಂದಿರಿ?” ಎಂದು ನಗುತ್ತಾ ತಾಟಕಿ ಅವರನ್ನು ಹಿಡಿದುಕೊಳ್ಳಲು ಧಾವಿಸಿದಳು. ರಾಮ ಒಂದು ಹರಿತವಾದ ಬಾಣವನ್ನು ಅವಳ ಹಣೆಗೆ ಗುರಿ ಇಟ್ಟು ಹೊಡೆದ. ಹಣೆಯಿಂದ ರಕ್ತಧಾರೆ ಚಿಮ್ಮಿತು. ತಾಟಕಿ ಈಗಂತೂ ಮಿತಿಮೀರಿದ ಕೋಪದಿಂದ ಹುಚ್ಚಳಂತಾದಳು. ಅವಳು ಗರ್ಜಿಸುತ್ತ ದೊಡ್ಡ ದೊಡ್ಡ ಕಲ್ಲುಗುಂಡುಗಳನ್ನೇ ಎತ್ತೆತ್ತಿ ಎಸೆಯತೊಡಗಿದಳು. ಅವಳ ರೂಪವನ್ನು ಕಂಡು ರಾಮ ಕನಲಿದ. ಬಾಣಗಳಿಂದ ಅವಳ ಎರಡೂ ಬಾಹುಗಳನ್ನೇ ಕತ್ತರಿಸಿ ಹಾಕಿದ. ತಾಟಕಿ ಕಿರುಚುತ್ತಾ ಮುಖ ತಿರುಗಿಸಿಕೊಂಡು ದಾರಿ ತಪ್ಪಿದವಳಂತೆ ಅಲಾಪಿಸುತ್ತಾ ಅಲೆದಾಡತೊಡಗಿದಳು. “ರಾಮ, ಈಗಲೇ ಇವಳನ್ನು ಮುಗಿಸಿಬಿಡು, ತನ್ನ ಮಾಯೆಯ ಶಕ್ತಿಯಿಂದ ಬೇರಾವುದಾದರೂ ರೂಪ ಧರಿಸದಿರಳು. ಸಂಜೆ ಸಮೀಪಿಸುತ್ತಿದೆ. ರಾತ್ರಿ ಆಗುತ್ತಿದ್ದಂತೆ ರಾಕ್ಷಸಶಕ್ತಿ ಇನ್ನಷ್ಟು ಹೆಚ್ಚುವುದು. ಅನಂತರ ಅವರನ್ನು ಕೊಲ್ಲಲು ಸಾಧ್ಯವಾಗದು” ವಿಶ್ವಾಮಿತ್ರ ಎಚ್ಚರಿಸಿದ.
ರಾಮ ತಡಮಾಡಲಿಲ್ಲ. ಬಾಣಗಳ ಮಳೆಗರೆಯತೊಡಗಿದ. ತಾಟಕಿ ತನ್ನ ನಾಲಿಗೆಯಿಂದ ಬೆಂಕಿಯ ಉರಿಯನ್ನೇ ಹೊರಹಾಕುತ್ತಾ ರಾಮಲಕ್ಷ್ಮಣರ ಕಡೆ ಧಾವಿಸಿದಳು. ಒಂದೇ ಬಾರಿಗೆ ಹನ್ನೊಂದು ಬಾಣಗಳನ್ನು ಒಟ್ಟಿಗೆ ಪ್ರಯೋಗಿಸಿ, ರಾಮನು ಅವಳನ್ನು ಕೊನೆಗಾಣಿಸಿದ. ಧೊಪ್ಪನೆ ಅವಳು ನೆಲದ ಮೇಲೆ ಬಿದ್ದಾಗ ಭೂಮಿಯೇ ನಡುಗಿದಂತಾಯಿತು. “ಮಹರ್ಷಿಗಳೇ, ಮಾರೀಚ ಎಲ್ಲಿದ್ದಾನೆ?” ಕ್ರೋಧದ ಕಣ್ಣಿಗಳಿಂದಲೇ ರಾಮ ವಿಶ್ವಾಮಿತ್ರನನ್ನು ಪ್ರಶ್ನಿಸಿದ. “ರಾಮ, ತಾಟಕಿಯ ವಧೆ ಮಾತ್ರ ಈಗ ನಮ್ಮ ಉದ್ದೇಶ ಆಗಿತ್ತು. ಅದು ಕೈಗೂಡಿತು. ಅವನನ್ನು ಈಗಲೇ ಮುಗಿಸುವುದು ಬೇಡ. ಅದಕ್ಕೂ ಮೊದಲು ಹಾಳುಬಿದ್ದಿರುವ ಈ ಜನಪದ ರಾಜ್ಯದಲ್ಲಿ ರಾಕ್ಷಸರು ಯಾರೊಬ್ಬರೂ ಇಲ್ಲದಂತೆ ಮಾಡು.”
ರಾಮನ ಕೋಪ ಈಗ ಇಳಿಯಿತು. “ತಮ್ಮ ಆಜ್ಞೆಯೇ ನನಗೆ ಅನುಗ್ರಹ” ಎನ್ನುತ್ತಾ ಶಿರಬಾಗಿದ. ಅಷ್ಟರಲ್ಲಿ ದೇವಲೋಕದಿಂದ ದೇವೇಂದ್ರ ಬಂದ. ಮಹರ್ಷಿಯನ್ನು ವಂದಿಸಿದ. ಮಹತ್ಕಾರ್ಯವನ್ನು ಸಾಧಿಸಿರುವ ರಾಜ-ಲಕ್ಷ್ಮಣರನ್ನು ಹಾರೈಸಿದ. ವಿಶ್ವಾಮಿತ್ರನ ಬಳಿಯಿದ್ದ ಅಮೋಘ ಅಸ್ತ್ರಗಳನ್ನೆಲ್ಲಾ ರಾಜಕುಮಾರರಿಗೆ ಕೊಡಿಸಿದ. ರಾಜಕುಮಾರರ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ವಿಚಾರವನ್ನು ತಿಳಿದ ಅಯೋಧ್ಯೆಯ ವೃದ್ಧರಾಜ ದಶರಥನಿಗೂ ಅಷ್ಟೇ ಸಂತೋಷವಾಯಿತು.