ಪುರಾಣ ಕಥೆಗಳು

ಗಂಗಾ ಸ್ನಾನದಿಂದ ಸರ್ವ ಪಾಪಹರಣ ಕಾಶಿಯ ಗಂಗಾನದಿಯಲ್ಲಿ ಸಾವಿರಾರು ಜನ ಸ್ನಾನ ಮಾಡುತ್ತಾರೆ. ‘ಗಂಗಾ ತವ ದರ್ಶನಾನ್ ಮುಕ್ತಿ’ ಎಂದು ಹೇಳುತ್ತಾ ಮಂತ್ರ ಹೇಳುತ್ತಾ ಸ್ನಾನ ಮಾಡುತ್ತಾರೆ. ಒಂದು ಸಾರಿ ಪಾರ್ವತಿ ಪರಮೇಶ್ವರರು ಈ ಗಂಗಾಸ್ನಾನದ ಮಹಿಮೆ ತಿಳಿಯಲು ಬಂದರು. ಗಂಗಾನದಿಯ ದಂಡೆಯಲ್ಲಿ ಒಂದು ದೊಡ್ಡ ತಗ್ಗು. ಅದರಲ್ಲಿ ಈಶ್ವರ ಮುದುಕನಾಗಿ ಬಿದ್ದಿದ್ದಾನೆ. ದಂಡೆಯ ಮೇಲೆ ಪಾರ್ವತಿ ಅಳುತ್ತಾಳೆ. ಆಗ ಗಂಗಾ ಸ್ನಾನ ಮಾಡಿ ಬಂದವರು ‘ಏಕಮ್ಮ ಅಳುತ್ತಿಯೇ?’ ‘ಸ್ವಾಮಿ, ಮುದುಕ ಪತಿ ಕಾಲು ಜಾರಿ ಈ ಗುಂಡಿಯಲ್ಲಿ ಬಿದ್ದಿದ್ದಾರೆ. ತರುವವರು ಯಾರೂ ಇಲ್ಲ. ಏನು ಮಾಡುವುದು.’ ಆಗ ಒಬ್ಬ ಧರ್ಮವಂತ ‘ನಾನು ತೆಗೆಯುತ್ತೇನೆ’ ಎಂದು ಗುಂಡಿ ಇಳಿಯಲು ಹೋದ. ಆಗ ‘ಬೇಡ ಬೇಡ ಅದು ಹಾಗಲ್ಲ. ಯಾರು ಯಾವ ಪಾಪ ಮಾಡಿಲ್ಲದವರು ಮಾತ್ರ ಕೆಳಗಿಳಿದರೆ ನನ್ನ ಗಂಡನನ್ನು ತರಬಲ್ಲರು. ಅಲ್ಪ ಸ್ವಲ್ಪ ಪಾಪವಿದ್ದರೂ ಅಲ್ಲಿಯೇ ಸತ್ತು ಹೋಗುತ್ತಾರೆ.’ ಹೀಗೆ ಪಾರ್ವತಿ ಹೇಳಿದಾಗ ಬಂದ ಜನ ನೋಡಿ ನೋಡಿ ಹಾಗೇ ಹೋಗುತ್ತಾರೆ. ಯಾರೂ ಗುಂಡಿಯಲ್ಲಿ ಇಳಿಯುವವರೆ ಇಲ್ಲ. ನೂರಾರು ಜನ ಹೀಗೆ ಬಂದು ನೋಡಿ, ಕೇಳಿ ಹಾಗೇ ಹೋದರು. ಯಾರೂ ಗುಂಡಿಯಲ್ಲಿ ಇಳಿಯಲಿಲ್ಲ. ಕೊನೆಗೆ ಒಬ್ಬ ವೇಶ್ಯಾ ಸ್ತ್ರೀ ಬಹು ದಿವಸ ಪ್ರಯತ್ನ ಪಟ್ಟು ಕಾಶಿ-ಗಂಗೆಗೆ ಬಂದಿರುವವಳು. ಅವಳು ಬಂದು ಇಳಿದು ನಿಮ್ಮ ಯಜಮಾನನನ್ನು ತರುತ್ತೇನೆಂದಳು. ‘ಬೇಡಮ್ಮ ಯಾರಿಗೆ ಯಾವ ಪಾಪವೂ ಇಲ್ಲವೋ ಅವರು ಮಾತ್ರ ಗುಂಡಿಗೆ ಇಳಿದರೆ ನನ್ನ ಪತಿ ಹೊರಗೆ ಬರುತ್ತಾರೆ. ಸ್ವಲ್ಪ ಪಾಪವಿದ್ದರೂ ಅಲ್ಲಿಯೇ ಭಸ್ಮವಾಗಿ ಹೋಗುತ್ತಾರೆ’ ಎಂದಳು. ‘ಏನಮ್ಮ ನಾನು ಈಗ ತಾನೇ ಪವಿತ್ರವಾದ ಗಂಗೆಯಲ್ಲಿ ಸ್ನಾನ ಮಾಡಿ ಬಂದಿದ್ದೇನೆ. ನನಗೆಲ್ಲಿ ಪಾಪ ಇದೆ. ನಾನು ಮಹಾ ಪುಣ್ಯವಂತೆ, ಭಾಗ್ಯವಂತೆ’ ಎಂದು ಗುಂಡಿ ಇಳಿದಳು. ಆಗ ಪಾರ್ವತಿ ಪರಮಾತ್ಮರರು, ಪ್ರತ್ಯಕ್ಷರಾಗಿ ಆಕೆಯನ್ನು ತಮ್ಮ ಜೊತೆಯಲ್ಲಿ ಕೈಲಾಸಕ್ಕೆ ಕರೆದುಕೊಂಡು ಹೋದರು ಇದೆ ಶ್ರದ್ಧೆ. ಒಟ್ಟಾರೆ ನಂಬಿಕೆ, ಶ್ರದ್ಧೆ ಬಹಳ ಮುಖ್ಯ. ಶ್ರದ್ಧೆ ಇಲ್ಲದವರು ಗಂಗೆಯಲ್ಲಿ ಎಷ್ಟು ಮುಳುಗಿದರೂ ಅವರು ಪಾಪಿಗಳೆ. ಶ್ರದ್ಧಾವಂತರಾಗಿರಿ, ‘ಶ್ರದ್ಧವಾನ್ ಲಭತೇ ಜ್ಞಾನಮ್.’ ಶ್ರದ್ಧೆಯಿಂದ ಧ್ರುವ ಶಾಶ್ವತ ಸ್ಥಾನ ಪಡೆದ.