ಮಹಾಭಾರತ ಕಥೆಗಳು

ಚವನ ಮಹರ್ಷಿ ವಿಪಾಂಡವರು ಬದರಿಕಾಶ್ರಮದಲ್ಲಿ ತಂಗಿದ್ದಾಗ ಈಶಾನ್ಯ ದಿಕ್ಕಿನ ಗಾಳಿಯಿಂದ ಸೌಗಂಧಿಕಾ ಪುಷ್ಪದ ಸುವಾಸನೆ ತೇಲಿ ಬಂದಿತು. ಹಾಗೆಯೇ ಸುಗಂಧ ಪುಷ್ಪವೂ ತೇಲಿ ಬಂದಿತು. ದ್ರೌಪದಿಯು ಪುಷ್ಪದ ವಾಸನೆ ಹಾಗೂ ಸೌಂದರ್ಯಕ್ಕೆ ಮರುಳಾಗಿ, ತನಗೆ ಅಂತಹ ಪುಷ್ಪ ಬೇಕೆಂದು ಭೀಮನನ್ನು ಬೇಡಿದಳು. ಭೀಮನು ಸೌಗಂಧಿಕ ಪುಷ್ಪವನ್ನು ಹುಡುಕಿ ಹೊರಟನು.

ಭೀಮನು ಹಾದಿಯಲ್ಲಿ ಮುದಿ ಮಂಗನನ್ನು ಕಂಡನು. ತಮಾಷೆಗೆಂದು ಅದರ ಮೂತಿಯ ಬಳಿ ಬಾಯಿಟ್ಟು ಸಿಂಹನಾದ ಮಾಡಿದ. ಮಂಗನು ಭೀಮನನ್ನು ಆದರದಿಂದ ಕಾಣುತ್ತಾ, “ಯಾರಪ್ಪಾ ನೀನು?” ಎಂದು ಪ್ರಶ್ನಿಸಿತು. ಆಗ ಭೀಮನು ಜಂಭದಿಂದ “ನಾನು ಯಾರೆಂದು ತಿಳಿದಿರುವೆ. ನಾನು ವಾಯುತನಯನಾದ ಭೀಮ. ಧರ್ಮರಾಜನ ಸಹೋದರ. ಕುಂತಿಯ ಪುತ್ರ. ನಾನು ಮುಂದೆ ಹೋಗಲು ದಾರಿ ಬಿಡು” ಎಂದನು. ಮಂಗನ ರೂಪದಲ್ಲಿರುವ ಮಾರುತಿಗೆ ಭೀಮನನ್ನು ಕಂಡು ವಾತ್ಸಲ್ಯ ಉಕ್ಕಿತು. “ತಮ್ಮಾ, ಈ ಮಂದಿ ಮಂಗನೊಂದಿಗೆ ಆಟಾಟೋಪ ಏಕೆ? ನಿನ್ನ ಪರಾಕ್ರಮದ ಮುಂದೆ ನಾನು ನಿಲ್ಲಬಲ್ಲೆನಾ? ಮುದುಕನಾದ ನನ್ನನ್ನು ಕಾಡಬೇಡ. ನಿಧಾನವಾಗಿ ನನ್ನ ಬಾಲವನ್ನು ಅತ್ತ ಸರಿಸಿಟ್ಟು ಹೋಗು. ಸಧ್ಯ, ನಿನ್ನ ಪರಾಕ್ರಮವನ್ನು ಬಾಲದ ಮೇಲೆ ತೋರಿಸಿ, ಮುರಿದು ಗಿರಿದು ಮಾಡಬೇಡ.”

ಭೀಮನು ತನ್ನ ಶಕ್ತಿಯನ್ನೆಲ್ಲಾ ಪ್ರದರ್ಶಿಸಿ ನೋಡಿದರೂ ಮುದಿಮಂಗನ ಬಾಲದ ತುದಿಯನ್ನು ಸಹ ಅಲ್ಲಾಡಿಸಲಾಗಲಿಲ್ಲ. ಕಡೆಗೆ ಸೋತು ನಡಗುವ ಕೈಗಳಿಂದ “ಮಹಾನುಭಾವ, ನಿಜ ಹೇಳು. ನೀನು ಸಾಮಾನ್ಯ ಮಂಗನಲ್ಲ. ಅಸಾಧಾರಣ ಶಕ್ತಿಯ ಕಪಿಶ್ರೇಷ್ಠ. ನನ್ನನ್ನು ಕ್ಷಮಿಸು” ಎಂದನು. “ತಮ್ಮಾ, ನಾನು ನಿನ್ನ ಸಹೋದರ ಆಂಜನೇಯ” ಎಂದಾಗ ಭೀಮನು ಅಳುತ್ತಾ ತನ್ನ ತಪ್ಪನ್ನು ಕ್ಷಮಿಸುವಂತೆ ಕೇಳಿಕೊಂಡನು. ಇಬ್ಬರು ಪ್ರೀತಿಯಿಂದ ಅಪ್ಪಿಕೊಂಡರು. ಭೀಮನು ತಾನು ಸೌಗಂಧಿಕ ಪುಷ್ಪವನ್ನು ತರಲು ಹೊರಟಿರುವುದಾಗಿ ತಿಳಿಸಿದನು. ಆಂಜನೇಯನು ಸೌಗಂಧಿಕ ಪುಷ್ಪ ಅರಳಿರುವ ಸರೋವರದ ದಾರಿಯನ್ನು ತೋರಿಸಿದ. ಸರೋವರಕ್ಕೆ ಕಾವಲಿದ್ದ ಕಿನ್ನರು ಭೀಮನ ಮೇಲೆ ಹೊಡೆದಾಟಕ್ಕೆ ಬಂದರು. ಅವರನ್ನು ಹೊಡೆದಟ್ಟಿ ತನಗೆ ಬೇಕಾದ ಹೂವನ್ನು ಕಿತ್ತುಕೊಂಡು ದ್ರೌಪದಿಗೆ ಕೊಡಲು ಹೊರಟನು. ಹೂವನ್ನು ಕಂಡು ದ್ರೌಪದಿ ಅತ್ಯಾನಂದಪಟ್ಟಳು.