ಭಾಗವತ ಕಥೆಗಳು

ಜಮದಗ್ನಿ ಪರಶುರಾಮ ಗಾಧಿ ರಾಜ ಒಬ್ಬ ಶೂರ ರಾಜ. ಧರ್ಮಿಷ್ಠನೂ ಹೌದು. ಅವನಿಗೆ ಸತ್ಯವತಿ ಎಂಬ ಸುಂದರಳೂ, ಸುಶೀಲಳೂ ಆದ ಮಗಳು. ಋಚೀಕ ಎಂಬ ಒಬ್ಬ ಬ್ರಾಹ್ಮಣ ಆಕೆಯನ್ನು ತನಗೆ ಕೊಟ್ಟು ಮದುವೆ ಮಾಡಲು ರಾಜನನ್ನು ಕೇಳಿಕೊಂಡ. ಬಡಬ್ರಾಹ್ಮಣನಿಗೆ ಕೊಡಲು ಮನಸ್ಸಿಲ್ಲದೆ ಅವನು ಹೇಳಿದ: “ಅಯ್ಯಾ ಬ್ರಾಹ್ಮಣ, ನನ್ನ ಮಗಳು ಅಷ್ಟೊಂದು ಸುಲಭವಾಗಿ ಯಾರಿಗೂ ದಕ್ಕುವವಳಲ್ಲ. ದೇಹವೆಲ್ಲಾ ಚಂದ್ರನಂತೆ ಬೆಳ್ಳಗಿದ್ದು, ಕಿವಿ ಮಾತ್ರ ಕಪ್ಪಗಿರುವಂತಹ ಒಂದು ಸಾವಿರ ಕುದುರೆಗಳನ್ನು ತಂದುಕೊಡುವವರನ್ನು ಮಾತ್ರ ವರಿಸಲು ಅವಳು ಬಯಸಿದ್ದಾಳೆ.” ಋಚೀಕ ಬಡಬ್ರಾಹ್ಮಣನಾದರೂ ಘನವಿದ್ವಾಂಸ, ಆತನು ವರುಣದೇವರನ್ನು ಭಕ್ತಿಯಿಂದ ಪ್ರಾರ್ಥಿಸಿದ. ವರುಣದೇವನೂ ಪ್ರತ್ಯಕ್ಷನಾದ. ಬ್ರಾಹ್ಮಣನ ಅಭಿಲಾಷೆಯಂತೆ ಅಂತಹುದೇ ಸಾವಿರ ಕುದುರೆಗಳನ್ನು ಕರುಣಿಸಿದ. ಅವನ್ನು ತಂದು ಬ್ರಾಹ್ಮಣ ಗಾಧಿರಾಜನಿಗೆ ಒಪ್ಪಿಸಿದ.

ಈಗ ಗಾಧಿರಾಜ ಮಾತಿಗೆ ತಪ್ಪಲಾಗದೆ, ತನ್ನ ಮಗಳನ್ನು ಋಚೀಕ ಬ್ರಾಹ್ಮಣನಿಗೆ ಕೊಟ್ಟು ಮದುವೆ ಮಾಡಿದ. ಸತ್ಯವತಿಯು ಗಂಡನ ಮನೆಗೆ ಹೊರಟಾಗ, ಅವಳೊಂದಿಗೆ ಅವಳ ತಾಯಿಯೂ ಬಂದಳು. ಅವರಿಬ್ಬರೂ ಋಚೀಕ ಬ್ರಾಹ್ಮಣನನ್ನು ತಮಗೆ ಸತ್ಪುತ್ರರನ್ನು ಕರುಣಿಸಲು ಕೇಳಿಕೊಂಡರು. ಹಾಗೆಯೇ ಆಗಲೆಂದು ಅವನು ಮಂತ್ರಶಕ್ತಿಯಿಂದ ಕ್ಷತ್ರಿಯನು ಹುಟ್ಟುವ ಹವಿಸ್ಸನ್ನೂ, ಬ್ರಾಹ್ಮಣನು ಹುಟ್ಟುವ ಹವಿಸ್ಸನ್ನೂ ಬೇರೆ ಬೇರೆ ತಯಾರಿಸಿದ. ತನ್ನ ಹೆಂಡತಿಗೆ ಹೇಳಿದ: “ಕ್ಷತ್ರಿಯ ಮಗನು ಹುಟ್ಟುವ ಹವಿಸ್ಸನ್ನು ಸೇವಿಸಲು ನಿನ್ನ ತಾಯಿಗೆ ಕೊಡು. ಬ್ರಾಹ್ಮಣ ಮಗನು ಹುಟ್ಟುವ ಹವಿಸ್ಸನ್ನು ನೀನು ಸೇವಿಸು. ಇಬ್ಬರಿಗೂ ಕೀರ್ತಿ ತರುವ ಮಕ್ಕಳೇ ಜನಿಸುವರು.” ಹೀಗೆಂದು ಹೇಳಿ ತಾನು ಸ್ನಾನ ಮಾಡಿಬರಲು ನದಿಗೆ ಹೋದ. ಸತ್ಯವತಿಯ ತಾಯಿಗೆ ಅದೇನು ಮನಸ್ಸಾಯಿತೋ! ಅವಳು ತನ್ನ ಮಗಳಿಗೆ ಹೇಳಿದಳು: “ಸತ್ಯ, ನಾವಿಬ್ಬರೂ ಹವಿಸ್ಸುಗಳನ್ನು ಬದಲಾಯಿಸಿಕೊಳ್ಳುವ.” ಮಗಳು ತಾಯಿಯ ಮಾತನ್ನು ಅನುಮೋದಿಸಿದಳು. ಈರ್ವರು ಅದಲುಬದಲು ಹವಿಸ್ಸನ್ನು ಸೇವಿಸಿದರು. ಸ್ನಾನ ಮಾಡಿ ಹಿಂದಿರುಗಿದ ಗಂಡನಿಗೆ ಸತ್ಯವತಿ ಸತ್ಯಸಂಗತಿಯನ್ನೇ ತಿಳಿಸಿದಳು. ಪಾಪ, ಋಚೀಕ ಈಗ ಏನು ತಾನೇ ಮಾಡಿಯಾನು. ಅವನು ಹೇಳಿದ:

“ಆಯಿತು, ಹೋಗು ನಿಮ್ಮ ಹಣೆಯ ಬರಹಕ್ಕೆ ನಾನು ಕಾರಣಕರ್ತನಲ್ಲ. ನಿನ್ನ ಹೊಟ್ಟೆಯಲ್ಲಿ ಕ್ಷತ್ರಿಯ ರಾಜಕುಮಾರ ಹುಟ್ಟುತ್ತಾನೆ. ನಿನ್ನ ತಾಯಿಯ ಹೊಟ್ಟೆಯಲ್ಲಿ ಬ್ರಾಹ್ಮಣಕುವರ ಹುಟ್ಟುತ್ತಾನೆ.” ಅದರಂತೆ ಸತ್ಯವತಿಗೆ ವಿಶ್ವಾಮಿತ್ರ ಹುಟ್ಟಿದ. ಅವನೇನು ಸಾಮಾನ್ಯನೇ? ಪವಾಡ ಕೃತ್ಯಗಳನ್ನೆಸಗಿ ಬ್ರಹ್ಮರ್ಷಿ ಆದ. ಹಾಗೂ ಸತ್ಯವತಿಯ ತಾಯಿಯ ಹೊಟ್ಟೆಯಲ್ಲಿ ಜಮದಗ್ನಿ ಜನಿಸಿದ. ಜಮದಗ್ನಿ ರೇಣುಕಾ ಎಂಬ ಕನ್ಯೆಯನ್ನು ಮದುವೆ ಆದ. ಅವರಿಬ್ಬರಿಗೂ ಹಲವು ಮಕ್ಕಳಾದರು. ಅವರಲ್ಲಿ ಕಡೆಯವನೇ ಪರಶುರಾಮ. ಹೈಹಯದೇಶದ ರಾಜ ಕಾರ್ತವೀರ್ಯಾರ್ಜುನ. ದತ್ತಾತ್ರೇಯನ ಆರಾಧನೆಯಿಂದ ಸಹಸ್ರ ತೋಳುಗಳನ್ನು ಪಡೆದು ಜಗತ್ತಿನಲ್ಲಿಯೇ ಅತುಲ ಪರಾಕ್ರಮಿ ಎನಿಸಿದ. ತನ್ನ ಆರಾಧ್ಯ ದೇವನ ಕೃಪೆಯಿಂದ ಸಕಲ ಲೋಕಗಳಲ್ಲಿಯೂ ಸಂಚರಿಸುವ ಶಕ್ತಿಯನ್ನು ಪಡೆದಿದ್ದ. ಒಮ್ಮೆ ತನ್ನ ಪರಿವಾರದೊಂದಿಗೆ ಜಮದಗ್ನಿಯ ಆಶ್ರಮಕ್ಕೆ ಬಂದ. ಜಮದಗ್ನಿ ಋಷಿಯ ಬಳಿ ಒಂದು ಕಾಮಧೇನು ಇತ್ತು. ಅದರ ಸಹಾಯದಿಂದ ಎಲ್ಲರಿಗೂ ರಸದೌತಣವನ್ನು ನೀಡಿದ. ಕಾಮಧೇನುವಿನ ಮಹಿಮೆಯನ್ನು ಕಂಡ ರಾಜ ಅದನ್ನು ಒತ್ತಾಯದಿಂದ ತನ್ನ ಅರಮನೆಗೆ ಹೊಡೆದುಕೊಂಡು ಹೋದ.

ಆ ಸಮಯದಲ್ಲಿ ಪರಶುರಾಮ ಮನೆಯಲ್ಲಿ ಇರಲಿಲ್ಲ. ಬಂದ ಕೂಡಲೇ ವಿಷಯವನ್ನು ತಿಳಿದು ರಾಜನ ಬಗ್ಗೆ ಕೆಂಡಾಮಂಡಲವಾದ. ಕೂಡಲೇ ತನ್ನ ಆಯುಧವು ಪರಶು (ಕೊಡಲಿ)ವನ್ನು ತೆಗೆದುಕೊಂಡು ಕಾರ್ತವೀರ್ಯಾರ್ಜುನನ್ನು ಬೆನ್ನಟ್ಟಿದ. ಬೆನ್ನಟ್ಟಿ ಬರುತ್ತಿರುವ ಪರಶುರಾಮನನ್ನು ಕೊಂದು ಹಾಕಲು ರಾಜ ತನ್ನ ಸೈನಿಕರಿಗೆ ಆಜ್ಞೆ ಮಾಡಿದ. ರಾಜನ ಹದಿನೆಂಟು ಅಕ್ಷೋಹಿಣಿ ಸೈನಿಕರೂ ಪರಶುರಾಮನ ಕೊಡಲಿಯ ಪ್ರಹಾರಕ್ಕೆ ಬಲಿ ಆದರು. ವಿಚಾರವನ್ನು ತಿಳಿದ ಕಾರ್ತವೀರ್ಯಾರ್ಜುನ ಈಗ ತಾನೇ ಯುದ್ಧಕ್ಕೆ ಬಂದ. ತನ್ನ ಐನೂರು ಕೈಗಳಲ್ಲಿ ಐನೂರು ಬಿಲ್ಲುಗಳು, ಉಳಿದ ಐನೂರು ಕೈಗಳಿಂದ ಏಕಕಾಲಕ್ಕೆ ಐನೂರು ಬಾಣಗಳನ್ನು ಪರಶುರಾಮನ ಮೇಲೆ ಪ್ರಯೋಗಿಸಿದ. ಆದರೇನು? ಪರಶುರಾಮನ ಒಂದು ಬಾಣ ಅವೆಲ್ಲವನ್ನೂ ಕತ್ತರಿಸಿ ಹಾಕಿದುವು. ಅನಂತರ ರಾಜನ ಮೇಲೆ ಹಸಿದ ಹುಲಿಯಂತೆ ಹಾರಿ, ತನ್ನ ಕೊಡಲಿಯಿಂದ ಅವನ ಸಹಸ್ರ ಕೈಗಳನ್ನು ಕತ್ತರಿಸಿ ಹಾಕಿದ. ಅವನ ತಲೆಯನ್ನು ಕಡಿದು ಹಾಕಿದ. ಇದೆಲ್ಲವನ್ನೂ ಕಂಡ ರಾಜನ ಮಕ್ಕಳು ಪ್ರಾಣಭಯದಿಂದ ದಿಕ್ಕೆಟ್ಟು ಓಡಿಹೋದರು. ಕಾಮಧೇನುವಿನೊಂದಿಗೆ ಆಶ್ರಮಕ್ಕೆ ಹಿಂದಿರುಗಿದ.

ವಿಚಾರವನ್ನು ತಿಳಿದ ಜಮದಗ್ನಿಗೆ ಸಂತೋಷವಾಗಲಿಲ್ಲ. ದುಃಖವೇ ಆಯಿತು. ಅವನು ತನ್ನ ಮಗನಿಗೆ ಹೇಳಿದ: “ರಾಮಾ, ನೀನೆಂತಹ ಅಪರಾಧ ಮಾಡಿಬಿಟ್ಟೆ. ಬ್ರಾಹ್ಮಣನಿಗೆ ಶಾಂತಿಯೇ ಸರ್ವಸ್ವ. ರಾಜನ ವಧೆ. ಬ್ರಹ್ಮಹತ್ಯೆಗಿಂತಲೂ ದೊಡ್ಡ ಅಪರಾಧ. ಹೋಗು, ಈ ಪಾಪಪರಿಹಾರಕ್ಕಾಗಿ ತೀರ್ಥಯಾತ್ರೆ ಮಾಡಿಕೊಂಡು ಬಾ.” ತಂದೆಯ ಆಣತಿಯಂತೆ ತೀರ್ಥಯಾತ್ರೆ ಮುಗಿಸಿಕೊಂಡು ಬಂದ. ಇದಾದ ಕೆಲವು ದಿನಗಳಲ್ಲಿ ಇನ್ನೊಂದು ಪ್ರಸಂಗ ನಡೆಯಿತು. ತಾಯಿ ರೇಣುಕಾ ಎಂದಿನಂತೆ ನೀರು ತರಲು ಗಂಗೆಗೆ ಹೋದಳು. ಅಲ್ಲಿ ಚಿತ್ರರಥ ಎಂಬ ಗಂಧರ್ವ ಅಪ್ಸರೆಯರೊಡನೆ ಜಲಕ್ರೀಡೆ ಆಡುತ್ತಿದ್ದ. ಆ ಗಂಧರ್ವನ ಸೌಂದರ್ಯವನ್ನು ಕಂಡು ಮರುಳಾದಳು. ಅವಳು ತುಂಬಾ ಕಾಲ ಅವನನ್ನೇ ನೋಡುತ್ತಾ ನಿಂತುಬಿಟ್ಟಳು. ಆಗ ಆಶ್ರಮದಲ್ಲಿ ಹೋಮದ ಸಮಯ. ತಡವಾಯಿತಲ್ಲಾ! ಗಂಡನು ತನ್ನ ಮೇಲೆ ಇನ್ನೆಲ್ಲಿ ಕೋಪಿಸಿಕೊಳ್ಳುವನೋ! ಎಂಬ ಭಯದಿಂದಲೇ ಬಿಂದಿಗೆಯಲ್ಲಿ ನೀರು ತುಂಬಿಕೊಂಡು, ಬೇಗಬೇಗ ಆಶ್ರಮಕ್ಕೆ ಹಿಂದಿರುಗಿದಳು. ಆದರೆ ಜಮದಗ್ನಿ ತನ್ನ ಜ್ಞಾನದೃಷ್ಟಿಯಿಂದ ಎಲ್ಲವನ್ನೂ ಕಂಡುಕೊಂಡುಬಿಟ್ಟಿದ್ದ. ಅವಳು ಬರುತ್ತಲೇ ಆಶ್ರಮದ ಹೊರಗೇ ಅವಳನ್ನು ತಡೆದು ತನ್ನ ಮಕ್ಕಳಲ್ಲಿ ಒಬ್ಬೊಬ್ಬರನ್ನೇ ಕರೆದು ಅವರ ತಾಯಿಯ ತಲೆಯನ್ನು ಕತ್ತರಿಸಿ ಹಾಕಲು ತಿಳಿಸಿದ. ಮಾತೃಹತ್ಯೆಗೆ ಹಿಂಜರಿದು, ಎಲ್ಲರೂ ಒಬ್ಬರ ಮುಖವನ್ನೊಬ್ಬರು ನೋಡುತ್ತಾ, ಸುಮ್ಮನೆ ನಿಂತಿದ್ದರು. ಜಮದಗ್ನಿಗೆ ಕೋಪ ಬಂದು ಅವರೆಲ್ಲಾ ಬೂದಿಯಾಗುವಂತೆ ಶಾಪ ಕೊಟ್ಟನು. ಇದೇ ವೇಳೆಗೆ ಎಲ್ಲಿಗೋ ಹೋಗಿದ್ದ ಪರಶುರಾಮನೂ ಬಂದ. ತಂದೆ ಅವನಿಗೆ ಹೇಳಿದ:

“ರಾಮ, ಈ ಕೂಡಲೇ ನಿನ್ನ ತಾಯಿಯ ತಲೆ ಕತ್ತರಿಸಿ ಹಾಕು.” ಆ ಕೂಡಲೇ ರಾಮ ತಂದೆಯ ಆಜ್ಞೆಯನ್ನು ಪರಿಪಾಲಿಸಿದ. ಜಮದಗ್ನಿಗೆ ತುಂಬಾ ಸಂತೋಷ ಆಯಿತು. ಅವನು ಹೇಳಿದ: “ಭಲೇ ರಾಮ, ಮೆಚ್ಚಿದೆ, ನಿನ್ನ ಬುದ್ಧಿಯನ್ನು ಮೆಚ್ಚಿದೆ. ನಿನಗೇನು ವರ ಬೇಕೋ ಕೇಳು.” ಕೂಡಲೇ ರಾಮ ಕೈಜೋಡಿಸಿಕೊಂಡು ಪ್ರಾರ್ಥಿಸಿದ: “ಅಪ್ಪಾಜಿ, ನನ್ನ ಅಣ್ಣಂದಿರು ಹಾಗೂ ತಾಯಿಯನ್ನು ಕೃಪೆ ಮಾಡಿ ಬದುಕಿಸಿಕೊಡಿ.” ಮಗನ ಮಾತಿನಂತೆ ಜಮದಗ್ನಿ ಎಲ್ಲರನ್ನೂ ತನ್ನ ಮಂತ್ರಶಕ್ತಿಯಿಂದ ಮತ್ತೆ ಬದುಕಿಸಿದ. ಇನ್ನೊಮ್ಮೆ ಪರಶುರಾಮ ಆಶ್ರಮದಲ್ಲಿಲ್ಲದ ವೇಳೆಯಲ್ಲಿ ಗತಿಸಿದ್ದ ಕಾರ್ತವೀರ್ಯಾರ್ಜುನನ ಮಕ್ಕಳು ಆಶ್ರಮಕ್ಕೆ ನುಗ್ಗಿ ಜಮದಗ್ನಿಯ ತಲೆಯನ್ನು ಕತ್ತರಿಸಿ ತಮ್ಮೊಂದಿಗೆ ಕೊಂಡೊಯ್ದರು. ಪರಶುರಾಮ ಮನೆಗೆ ಹಿಂದಿರುಗಿದಾಗ ವಿಷಯವನ್ನು ತಿಳಿದು, ತಂದೆ ದುರ್ಮರಣಕ್ಕೆ ಕಾರಣವಾದ ಅವರೆಲ್ಲರನ್ನೂ ಸದೆಬಡೆಯಲು ತನ್ನ ಕೊಡಲಿಯನ್ನು ಎತ್ತಿಕೊಂಡು ಧಾವಿಸಿದ. ಕಾರ್ತವೀರ್ಯಾರ್ಜುನನ ಮಕ್ಕಳಲ್ಲಿ ಯಾರೊಬ್ಬರೂ ಉಳಿಯದಂತೆ ಎಲ್ಲರನ್ನೂ ಕೊಚ್ಚಿ ಹಾಕಿದ. ಕತ್ತರಿಸಿ ಹಾಕಿದ್ದ ತನ್ನ ತಂದೆಯ ಶಿರೋಭಾಗದೊಂದಿಗೆ ಆಶ್ರಮಕ್ಕೆ ಹಿಂದಿರುಗಿದ. ತನ್ನ ತಂದೆಯ ಮೃತದೇಹಕ್ಕೆ ಅದನ್ನು ಸೇರಿಸಿ, ಶತ್ರುಗಳ ನೆತ್ತರಿನಿಂದಲೇ ತರ್ಪಣ ನೀಡಿದ. ಜಮದಗ್ನಿ ಸದ್ಗತಿಯನ್ನು ಪಡೆದು, ಸಪ್ತರ್ಷಿಮಂಡಲದಲ್ಲಿ ಒಬ್ಬನಾಗಿ ಇಂದಿಗೂ ಪ್ರಜ್ವಲಿಸುತ್ತಿದ್ದಾನೆ.