ಉಪನಿಷತ್ತಿನ ಕಥೆಗಳು

ಶ್ವೇತಕೇತು ತುಂಬಾ ತುಂಬಾ ಹಿಂದಿನ ಮಾತು. ದಟ್ಟಡವಿಯ ನಡುವೆ ಉದ್ದಾಲಕ ಮಹರ್ಷಿಯ ಆಶ್ರಮದ ಸುತ್ತಲೂ ಸುಂದರವಾದ ಹೂ ಗಿಡಗಳ ಉದ್ಯಾನ. ಉದ್ದಾಲಕ ಮಹರ್ಷಿಯ ಒಬ್ಬನೇ ಮಗ ಶ್ವೇತಕೇತು ಹನ್ನೆರಡು ವರ್ಷದ ಹುಡುಗ. ತುಂಬಾ ತುಂಟನಾಗಿ ಆಶ್ರಮ ವಾಸಿಗಳೆಲ್ಲರನ್ನೂ ಪೀಡಿಸುತ್ತಿದ್ದ. ಅವರೆಲ್ಲರೂ ಉದ್ದಾಲಕ ಮುನಿಯ ಮಗನೆಂದು ಅವನು ಮಾಡುವ ತುಂಟಾಟಗಳನ್ನು ಸಹಿಸಿಕೊಳ್ಳುತ್ತಿದ್ದರು. ಇದು ಉದ್ದಾಲಕ ಮುನಿಗೆ ಗೊತ್ತಾಯಿತು. ಇವನನ್ನು ಇಲ್ಲಿಯೇ ಇಟ್ಟುಕೊಡರೆ ಮುಂದೆ ದೊಡ್ಡ ಕಂಟಕನಾಗುತ್ತಾನೆಂದು ಉದ್ದಾಲಕರು ಅವನನ್ನು ಬಳಿಗೆ ಕರೆದು ಹೇಳಿದರು:
“ಮಗೂ, ನಮ್ಮ ವಂಶದಲ್ಲಿ ಎಲ್ಲರೂ ವೇದಪುರಾಣೋಪನಿಷತ್ತಿನ ವಿಚಾರದಲ್ಲಿ ಪೂರ್ಣಪ್ರಜ್ಞರೆನಿಸಿದ್ದವರೇ, ನೀನೂ ಸಹ ಈಗ ಎಲ್ಲಾದರೂ ಯೋಗ್ಯ ಗುರುವನ್ನು ಹುಡುಕಿ, ಯೋಗ್ಯ ವಿದ್ಯೆಯನ್ನು ಪಡೆದು, ತೇಜಸ್ಸಿನ ಮುಖದೊಂದಿಗೆ ಹಿಂದಿರುಗಬಾರದಾ?”
“ಆಯಿತು ಅಪ್ಪಾಜಿ; ಈಗಲೇ ಹೊರಟೆ. ಹೊರಟಿರುವ ಉದ್ದೇಶ ಪೂರ್ಣಫಲ ಹೊಂದಲೆಂದು ಮನಸಾರೆ ಆಶೀರ್ವದಿಸಿ, ಕಳುಹಿಸಿಕೊಡಿ.”
ಉದ್ದಾಲಕರು ತಮ್ಮ ಕಣ್ಣುಗಳಿಂದ ಆನಂದದ ಹನಿಗಳನ್ನು ಉದುರಿಸುತ್ತಾ, ಆಶೀರ್ವದಿಸಿ ಕಳುಹಿಸಿಕೊಟ್ಟರು.”

ಶ್ವೇತಕೇತು ಯೋಗ್ಯ ಗುರುವನ್ನು ಹುಡುಕುತ್ತಾ ಕಾಲಾನಂತರ ಹಲವಾರು ಪ್ರದೇಶದಲ್ಲಿ ಸುತ್ತಾಡುತ್ತಾ ಬಂದ. ತಿಂಗಳುಗಟ್ಟಲೆ ಅಲೆದಾಡಿದ ನಂತರ ಒಂದು ಜಾಗದಲ್ಲಿ ತನಗೆ ಯೋಗ್ಯನೆನಿಸಿದ, ಗುರುವನ್ನು ಸಂದರ್ಶಿಸಿದ; ನಿಷ್ಠೆಯಿಂದ ಅವರ ಬಳಿಯೇ ಇದ್ದು, ಶ್ರದ್ಧಾಸಕ್ತಿಯಿಂದ ಅಧ್ಯಯನವನ್ನು ಮುಂದುವರಿಸುತ್ತಾ ಬಂದ. ಅವರ ಬಳಿಯೇ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ, ನಿಷ್ಠೆಯಿಂದಿದ್ದು, ಸಕಲಶಾಸ್ತ್ರಪಾರಂಗತನೆನಿಸಿದ.
ಈಗ ಶ್ವೇತಕೇತು ಇಪ್ಪತ್ತನಾಲ್ಕು ವರ್ಷದ ಯುವಕ. ಮುಖದಲ್ಲಿ ಬ್ರಹ್ಮತೇಜಸ್ಸು ಪ್ರಜ್ವಲಿಸುತ್ತಿತ್ತು. ಆಶ್ರಮದಿಂದ ಹೊರಟುಬಂದ ಉದ್ದೇಶ ಫಲಪ್ರದವಾದುದನ್ನು ಕಂಡು, ಆನಂದದ ಅಮಲಿನಲ್ಲಿ ಮುಳುಗುತ್ತಾ,ಅಹಂಕಾರದಿಂದ ಬೀಗುತ್ತಾ ತಂದೆಯ ಬಳಿಗೆ ಹಿಂದಿರುಗಿದ. ಹನ್ನೆರಡು ವರ್ಷ ಮಗನು ಮನೆಯನ್ನು ಬಿಟ್ಟು ವೇದಾಧ್ಯಯನವನ್ನು ಮಾಡಿಕೊಂಡು ಬಂದ ಮೇಲೆ ವಿನಯ ವಿಧೇಯತೆಯಿಂದ ತನ್ನ ತಂದೆಗೆ ನಮಸ್ಕಾರ ಮಾಡಬೇಕಾಗಿತ್ತು. ಆದರೆ ಅವನು ನಮಸ್ಕಾರ ಮಾಡಲಿಲ್ಲ. ಏಕೆಂದರೆ ನನ್ನ ತಂದೆಯೂ ನನ್ನಷ್ಟು ವಿದ್ಯಾವಂತನಾಗಿಲ್ಲ, ಅಷ್ಟೊಂದು ವಿದ್ಯಾವಂತನಾಗಿದ್ದರೆ ನನ್ನನ್ನು ಬೇರೆ ಗುರುಗಳ ಹತ್ತಿರ ವೇದಾಧ್ಯಯನಕ್ಕೆ ಏಕೆ ಕಳುಹಿಸುತ್ತಿದ್ದರು! ಆದ್ದರಿಂದ ನಾನೇ ನಮ್ಮ ತಂದೆಗಿಂತ ಬುದ್ಧಿವಂತನು. ಎಂಬ ಅಹಂಕಾರದಿಂದ ತಂದೆಗೆ ನಮಸ್ಕಾರ ಮಾಡಲಿಲ್ಲ. ಅವನಿಗೆ ಅಹಂಕಾರ ಬಂದಿರುವುದು ತಂದೆಗೆ ತಿಳಿಯಿತು. ಆಗ ತಂದೆಯು ಮಗನ ಅಹಂಕಾರವನ್ನು ತೆಗೆದು ಹಾಕಬೇಕೆಂದು ಮಗನನ್ನು ಮಾತನಾಡಿಸುತ್ತಾನೆ.
“ಯೇನಾ ಶ್ರುತಂ ಶ್ರುತಂ ಭವತಿ,
ಯೇನಾ ವಿಜ್ಞಾತಂ ವಿಜ್ಞಾತಂ ಭವತಿ,
ಏನಾ ಪ್ರಾಪ್ತಂ ಪ್ರಾಪ್ತಂ ಭವತಿ ತತ್ ಶೃಣು”
ಅದೇ ಭಗವಂತ. ಯಾವ ಒಂದನ್ನು ಅರಿತರೆ ಸಕಲವೆಲ್ಲವನ್ನೂ ಅರಿತಂತಾಗುತ್ತದೆಯೋ. ಯಾವ ಒಂದು ವಿದ್ಯೆಯನ್ನು ಕಲಿತರೆ ಸರ್ವ ವಿದ್ಯೆಗಳನ್ನೂ ಕಲಿತಂತಾಗುತ್ತದೆಯೋ, ಯಾವ ಒಂದನ್ನು ವಿಚಾರ ಮಾಡಿದರೆ ಸರ್ವ ವಿಷಯಗಳ ಬಗ್ಗೆ ವಿಚಾರ ಮಾಡಿದಂತಾಗುತ್ತದೆಯೋ ಅಂತಹ ಶ್ರೇಷ್ಠವಾದ ವಿದ್ಯೆಯನ್ನು ಕಲಿತಿದ್ದೀಯಾ?
ಅಪ್ಪಾಜಿ, ಅಂತಹ ವಿದ್ಯೆ ಅದ್ಯಾವುದು? ನನಗದನ್ನು ಯಾರೂ ತಿಳಿಸಿಲ್ಲ. ಕೃಪೆ ಮಾಡಿ ನೀವೇ ಆ ವಿದ್ಯೆಯನ್ನು ಉಪದೇಶಿಸಬೇಕು. ಆಗ ಅವನ ಅಹಂಕಾರ ಇಳಿಯಿತು.
ವಿನಯದೊಂದಿಗೆ ನಮಿಸುತ್ತಾ, ಪ್ರಾರ್ಥಿಸಿದ. ಮನಸ್ಸಿನಲ್ಲಿಯೇ ಮುಸುನಗುತ್ತಾ ಉದ್ದಾಲಕರು ಹೇಳಿದರು:
“ಮಗೂ ನಾವು ಮಣ್ಣಿನಿಂದ ಆಗಿರುವ ಮಡಿಕೆ-ಕುಡಿಕೆ, ಆನೆ-ಕುದುರೆ, ಶುಕ-ಪಿಕ ಮೊದಲಾದುವುಗಳನ್ನು ನೋಡಿದ್ದೇವೆ. ಇವೆಲ್ಲಕ್ಕೂ ಮೂಲ ಅಂದರೆ ಮಣ್ಣು. ಮಣ್ಣಿನ ಮುದ್ದೆಯ ಬಗ್ಗೆ ಕೂಲಂಕುಷವಾಗಿ ಅರ್ಥ ಮಾಡಿಕೊಂಡರೆ, ಅದರಿಂದಾಗುವ ಸಕಲ ವಸ್ತುಗಳ ಪರಿಚಯವೂ ತಾನೇ ತಾನಾಗಿ ಉಂಟಾಗುವುದು.
ಹೀಗೆಯೇ ಮೂಲವಸ್ತುವಾದ ಚಿನ್ನದ ಬಗ್ಗೆ ನಾವು ಸರಿ ರೀತಿಯಲ್ಲಿ ಅರ್ಥಮಾಡಿಕೊಂಡರೆ, ಅದರಿಂದಾಗುವ ಒಡವೆಗಳು, ಪಾತ್ರೆಗಳು ಹೀಗೆ ಸಕಲವನ್ನು ಅರ್ಥಮಾಡಿಕೊಳ್ಳಲು ಸುಲಭ ಸಾಧ್ಯ ಎನಿಸುವುದು. ಅಂದರೆ ನಾವು ಸೃಷ್ಟಿಯ ಸಕಲ ವಸ್ತುಗಳ ಸಾರರೂಪದ ಮೂಲವನ್ನು ಅರಿತಾಗಲೇ ಪೂರ್ಣಜ್ಞಾನಿ ಗಳೆನಿಸುವೆವು.”
“ಮಗೂ, ಆ ಮರವನ್ನು ನೋಡು, ಅದರ ಕಾಂಡದ ಯಾವುದೇ ಭಾಗವನ್ನು ಕೆತ್ತಿದರೂ, ಒಂದು ಬಗೆಯ ದ್ರವ ಹೊರಬರುತ್ತದೆ. ಆದರೆ ಮರ ಬದುಕಿರುತ್ತದೆ. ಅದರ ಒಂದು ಕೊಂಬೆಯನ್ನು ಮುರಿದರೆ, ಕೆಲವೇ ಕಾಲದಲ್ಲಿ ಮುರಿದ ಕೊಂಬೆ ಮಾತ್ರ ಬಾಡಿ, ಒಣಗುವುದೇ ವಿನ: ಮರ ಬಾಡುವುದಿಲ್ಲ. ಒಣಗುವುದೂ ಇಲ್ಲ. ಮರದಲ್ಲಿ ಜೀವ ಎಂಬ ಚೈತನ್ಯ ರಸ ಇಲ್ಲದಂತಾದಾಗ, ಪೂರ್ತಿ ಮರವೇ ಒಣಗುವುದು ಅಲ್ಲವಾ?”
“ಹೌದು” ಎಂಬಂತೆ ಶ್ವೇತಕೇತು ಸಮ್ಮತಿಯ ರೂಪದಲ್ಲಿ ತಲೆ ಆಡಿಸಿದ. “ ಹಾಗೆಯೇ ಮಾನವನ ದೇಹವನ್ನು ಜೀವ ಚೈತನ್ಯವನ್ನೇ ಕಳೆದುಕೊಂಡು, ಒಣಗಿದ ಕಟ್ಟಿಗೆಯಂತಾಗುತ್ತಾನೆ. ಆದರೆ ಆತ್ಮ ಎಂಬ ಚೈತನ್ಯಕ್ಕೆ ಜನನ ಮರಣದ ಬಾಧೆ ಇಲ್ಲ. ಅದು ಅವಿನಾಶಿ, ವಿಶ್ವವ್ಯಾಪಿ, ಆ ಆತ್ಮನೇ ನೀನು. ನಾನು, ನಾವೆಲ್ಲಾ.”
ಶ್ವೇತಕೇತುವಿನ ಕುತೂಹಲ ಈಗ ಇನ್ನಷ್ಟು ಕೆರಳಿತು:
“ಅಪ್ಪಾಜೀ ನಾವೇಕೆ ಆ ಅತ್ಮನನ್ನು ನೋಡಲು ಆಗುತ್ತಿಲ್ಲ?” ಮಗನು ಕಲಿಯುವ ಮಾರ್ಗದಲ್ಲಿ ಸರಿಹೆಜ್ಜೆ ಇಡುತ್ತಿರುವುದನ್ನು ಕಂಡು, ಉದ್ದಾಲಕರಿಗೆ ತುಂಬಾ ಸಂತೋಷ ಉಂಟಾಯಿತು. ಅವರು ದೂರದಲ್ಲಿ ಕಾಣುತ್ತಿದ್ದ ಆಲದ ಮರವನ್ನು ತೋರಿಸುತ್ತಾ ಹೇಳಿದರು.
“ಮಗೂ, ಆ ಮರದ ಬಳಿ ಹೋಗಿ, ಒಂದು ಹಣ್ಣನ್ನು ಕಿತ್ತು ತಾ.” ಶ್ವೇತಕೇತು ಆಜ್ಞಾಕಾರಿ ಮಗನಂತೆ ಬೇಗ ಹೋಗಿ, ಒಂದು ಹಣ್ಣನ್ನು ಕಿತ್ತು ತಂದ.
“ಅದನ್ನು ಎರಡು ಭಾಗ ಮಾಡು.” ತಂದೆ ಉದ್ದಾಲಕರು ಆದರದಿಂದಲೇ ನುಡಿದರು.
ಶ್ವೇತಕೇತು ಅದೇ ರೀತಿ ಎರಡು ಹೋಳು ಮಾಡಿದ. “ಮಗೂ, ಈಗ ಅದರಲ್ಲಿ ಏನು ಕಾಣಿಸುತ್ತಿದೆ ಎಂಬುದನ್ನು ಎಚ್ಚರಿಕೆಯಿಂದ ನೋಡಿ ಹೇಳು.”
“ಅಪ್ಪಾಜಿ, ಇದರಲ್ಲಿ ಎಣಿಸಲಾಗದಷ್ಟು ಸಣ್ಣ ಸಣ್ಣ ಬೀಜಗಳು ಕಾಣಿಸುತ್ತಿವೆ.”
“ಅವುಗಳಲ್ಲಿ ಒಂದು ಬೀಜವನ್ನು ಕತ್ತರಿಸು. ಆ ನಂತರ ನಿನಗೆ ಕಾಣುವುದನ್ನು ಹೇಳು.”
ಶ್ವೇತಕೇತು ಅದರಂತೆಯೇ ಮಾಡಿ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಹೇಳಿದ: “ಅಪ್ಪಾಜಿ, ಈಗ ನನಗೇನೂ ಕಾಣಿಸುತ್ತಿಲ್ಲವಲ್ಲಾ!”
“ಬೀಜದೊಳಗೆ ಈಗ ಕಾಣಿಸದಿದ್ದರೆ, ಅದರಿಂದ ನಿರೀಕ್ಷೆಗೂ ಮೀರಿದ ಈ ದೊಡ್ಡ ಆಲದ ಮರ ಹುಟ್ಟಿದ್ದಾದರೂ ಹೇಗೆ?”
ಶ್ವೇತಕೇತು ಈಗ ಪರಮಾಶ್ಚರ್ಯದೊಂದಿಗೆ ಹೇಳಿದ:
“ಹಾಗಾದರೆ ಈ ಬೀಜದಲ್ಲಿ ನಮ್ಮ ಕಣ್ಣಿಗೆ ಗೋಚರ ಆಗದಂತಹ ಯಾವುದೋ ಸೂಕ್ಷಾತಿಸೂಕ್ಷ್ಮ ವಸ್ತು ಇದ್ದಿರಬೇಕು.”
“ಕುಮಾರ, ನಿನ್ನ ತಿಳುವಳಿಕೆ ಈಗ ಪಕ್ವವಾಗುತ್ತಿದೆ. ನಿನ್ನ ಆಲೋಚನೆ ಸರಿಸಮರ್ಪಕ ಎನಿಸಿದೆ. ಆ ವಸ್ತುವೇ ಜಗತ್ತಿನ ಸಕಲ ವಸ್ತುಗಳ ಸಾರ. ಅದನ್ನೇ ಸತ್ಯ, ಆತ್ಮ ಮೊದಲಾದ ಹೆಸರುಗಳಿಂದ ಕರೆಯುತ್ತೇವೆ. ಇಡೀ ಬ್ರಹ್ಮಾಂಡವೇ ಈ ವಸ್ತುವಿನಲ್ಲಿ ಅಡಗಿದೆ. ನಾವೆಲ್ಲರೂ ಆ ವಸ್ತುವಿನ ಒಂದು ಪರಮಾಣುವಿನಷ್ಟು.”
ತಂದೆಯ ಮಹತ್ವದ ಮಾತಿಗೆ, ಮಗ ಬೆರಗಾದ.
“ಅದೇನೋ ಸರಿ ಅಪ್ಪಾಜಿ, ನಾವು ಅದನ್ನು ನೋಡಲೇ ಆಗದಿದ್ದರೆ ಅದರ ಇರುವಿಕೆಯ ಬಗ್ಗೆ ತಿಳಿಯುದಾದರೂ ಹೇಗೆ?” ಮಗನ ಅಧ್ಯಾತ್ಮಿಕ ಬುದ್ದಿ-ಬೆಳವಣಿಗೆಯನ್ನು ಕಂಡು, ತಂದೆಯಾದ ಉದ್ದಾಲಕರಿಗೆ ತುಂಬಾ ಸಂತೋಷ ಆಯಿತು. ಅವರು ಹೇಳಿದರು:
“ಮಡಕೆಯೊಂದರಲ್ಲಿ ನೀರು ತಾ, ಅದರಲ್ಲಿ ಸ್ವಲ್ಪ ಉಪ್ಪು ಹಾಕು” ಶ್ವೇತಕೇತು ತೀವ್ರಾಸಕ್ತಿಯಿಂದ ಹಾಗೆಯೇ ಮಾಡಿದ. ಮರುದಿನ ಮತ್ತೆ ತಮ್ಮನ್ನು ಬಂದು ನೋಡಲು ತಿಳಿಸಿ, ಕಳುಹಿಸಿಕೊಟ್ಟರು.
ಮರುದಿನ ಕುತೂಹಲದ ಕಣ್ಣುಗಳೊಂದಿಗೆ ಮತ್ತೆ ತಂದೆಯ ಮುಂದೆ ಶ್ವೇತಕೇತು ಬಂದು ನಿಂತ.
ನಗುತ್ತಾ ಉದ್ದಾಲಕರು ಹೇಳಿದರು: “ಮಗನೇ, ನಿನ್ನೆ ಮಡಕೆಯಲ್ಲಿದ್ದ ನೀರಿಗೆ ನೀನೇ ಉಪ್ಪು ಹಾಕಿ ಬಂದಿದ್ದೆ. ಅಲ್ಲವಾ?”
“ಹೌದು!” ಜಿಜ್ಞಾಸೆಯಿಂದಲೇ ಶ್ವೇತಕೇತು ಮಡಕೆಯಲ್ಲಿ ನೋಡಿದ. ಉಪ್ಪೆಲ್ಲಾ ಅದರಲ್ಲಿದ್ದ ನೀರಿನಲ್ಲಿ ಕರಗಿ ಹೋಗಿತ್ತು. ಮಡಕೆಯನ್ನು ಹಾಗೆಯೇ ಎತ್ತಿಕೊಂಡು ಬಂದು, ತಂದೆಯ ಮುಂದಿಟ್ಟು, ಅಚ್ಚರಿಯಿಂದ ತಂದೆಯ ಮುಖವನ್ನೇ ಕಕ್ಕಾಬಿಕ್ಕಿ ಆದವನಂತೆ ನೋಡತೊಡಗಿದೆ. ವ್ಯಂಗ್ಯವಾಗಿಯೇ ಮಗನನ್ನು ತಂದೆ ಪ್ರಶ್ನಿಸಿದರು:
“ಏಕೆ ಉಪ್ಪು ಸಿಗಲಿಲ್ಲವಾ!”
“ಅಪ್ಪಾಜೀ ನೀರಿನಲ್ಲಿ ಉಪ್ಪು ಕಾಣುತಿಲ್ಲ!”
“ಹೌದಾ? ಇರಲಿ ಬಿಡು. ಈಗ ಮಡಿಕೆಯ ಮೇಲ್ಭಾಗದ ನೀರಿನ ಒಂದು ತೊಟ್ಟನ್ನು ಬಾಯಿಗೆ ಹಾಕಿಕೊಂಡು ಅದರ ರುಚಿ ಹೇಗಿದೆ ಹೇಳು. ರುಚಿನೋಡುತ್ತಾ ಶ್ವೇತಕೇತು ಹೇಳಿದ-
“ಉಪ್ಪುಪ್ಪು, ಅಪ್ಪಾಜೀ!’
“ಮಡೆಕೆಯ ಮಧ್ಯಭಾಗದ ನೀರಿನ ರುಚಿ ನೋಡಿ ಹೇಳು.”
ಅದನ್ನೂ ರುಚಿ ನೋಡುತ್ತಾ ಶ್ವೇತಕೇತು ಹೇಳಿದ:
“ಅದೂ ಉಪ್ಪಾಗಿದೆ ಅಪ್ಪಾಜೀ.”
“ತಳಭಾಗದ ನೀರಿನ ರುಚಿ ನೋಡು.”
ರುಚಿ ನೋಡಿ ಶ್ವೇತಕೇತು ಹೇಳಿದ: “ಅದೂ ಉಪ್ಪು ಮಯವೇ!”
“ಈಗ ಹೇಳು, ನೀನು ಹಾಕಿದ ಉಪ್ಪು ಏನಾಗಿದೆ:”
“ಅದು ನೀರಿನಲ್ಲಿ ಕರಗಿಹೋಗಿದೆ. ಆದ್ದರಿಂದಲೇ ಕಾಣಿಸುತ್ತಿಲ್ಲ.”
ಉದ್ದಾಲಕರು ಸಮಾಧಾನದ ಉಸಿರು ಬಿಡುತ್ತಾ ಹೇಳಿದರು.
“ಮಗೂ ಉಪ್ಪು ನೀರಿನಲ್ಲಿ ಕರಗಿ ಹೋಗಿರುವುದು ನಿಜ.
ಅಂದರೆ ಅದು ನೀರಿನಲ್ಲಿ ಇಲ್ಲ. ಎನ್ನುವುದಕ್ಕಾಗುವುದಿಲ್ಲ. ಅದು ಇದ್ದರೂ ಕರಗಿರುವುದರಿಂದ ನಮ್ಮ ಕಣ್ಣುಗಳಿಗೆ ಕಾಣುತ್ತಿಲ್ಲ. ಆದರೂ ಅದರ ಸಾರ ನೀರಿನಲ್ಲಿ ವ್ಯಾಪಕವಾಗಿದೆ. ಆ ’ಸಾರ’ ವನ್ನೇ ನಾವು ’ಆತ್ಮ’ ಎನ್ನುತ್ತೇವೆ. ನೀನೂ ಆತ್ಮನೇ.”
ತಂದೆಯ ಮಾತು ಮಗನಿಗೆ ತುಂಬಾ ಹಿಡಿಸಿತು. ತಿಳಿಯದುದನ್ನು ತಿಳಿಯುವ, ಕೇಳದಿದ್ದನ್ನು ಕೇಳುವ, ಕಾಣದುದನ್ನು ಕಾಣುವಂತೆ ಮಾದಿದ ವಿದ್ಯೆಯನ್ನು ತಂದೆಯಿಂದ ತಿಳಿದು ಅವನಿಗೆ ತುಂಬಾ ಸಂತೋಷ ಆಯಿತು. ಹಾಗೆಯೇ ನಾನೆಲ್ಲಾ ತಿಳಿದಿದ್ದೇನೆ ಅಂದುಕೊಂಡಿದ್ದ, ಅವನಲ್ಲಿದ್ದ ಅಹಂಕಾರವೂ ಅಳಿಯಿತು.
ಶ್ರದ್ಧೆಭಕ್ತಿಯೊಂದಿಗೆ ತಂದೆಯ ಪಾದಗಳನ್ನು ಸ್ಪರ್ಶಿಸಿ, ನಮಸ್ಕರಿಸುತ್ತಾ ಹೇಳಿದ:
“ಆಪ್ಪಾಜಿ, ನಾನು ತಿಳಿಯದಲೇ ಇದ್ದ ನಿಜವಾದ ವಿದ್ಯೆಯನ್ನು ನಿಮ್ಮಿಂದ ತಿಳಿದು ಧನ್ಯನಾದೆ.”
ಸಂತಸದ ಸಂಭ್ರಮದಲ್ಲಿ ತಿಳಿಸಿದ.
ಉದ್ದಾಲಕರಿಗೂ ಮಗನು ಈಗ ನಿಗರ್ವಿ ಎನಿಸಿ ಪಾಂಡಿತ್ಯದಲ್ಲಿ ಪೂರ್ಣಪ್ರಜ್ಞನೆನಿಸಿರುವುದನ್ನು ಕಂಡು, ಆನಂದ ಆಯಿತು.