ನೀತಿ ಕಥೆಗಳು

ದೇವರು ಎಲ್ಲೆಲ್ಲೂ ಇದ್ದಾನೆ ಒಂದು ಊರಿನಲ್ಲಿ ಕೆಲವು ಜನ ನಾಸ್ತಿಕರಿಗೂ ಒಬ್ಬ ಸಾಧುವಿಗೂ ಚರ್ಚೆ ನಡೆಯಿತು. ಅದೇನೆಂದರೆ ನಾಸ್ತಿಕರು ಸಾಧುಗಳನ್ನು ಕುರಿತು ‘ಸ್ವಾಮಿ, ದೇವರು ಇರುವನೇ?’ ಎಂದು ಕೇಳಿದರು. ಅದಕ್ಕೆ ಸಾಧುಗಳು ‘ಇದ್ದಾನೆ’ ಎಂದು ಹೇಳಿದರು. ಆಗ ನಾಸ್ತಿಕರು ‘ನೀವು ನೋಡಿರುವಿರಾ?’ ಎಂದು ಕೇಳಿದರು. ಸಾಧುಗಳು ‘ನೋಡಿದ್ದೇನೆ’ ಎಂದು ಹೇಳಿದರು. ನಾಸ್ತಿಕರು ಅಷ್ಟಕ್ಕೆ ಸುಮ್ಮನಾಗದೆ ‘ಹಾಗಾದರೆ ನಮಗೆ ತೋರಿಸುತ್ತೀರಾ?’ ಎಂದು ಕೇಳಿದರು. ಅದಕ್ಕೆ ಸಾಧುಗಳು ‘ಅಗತ್ಯವಾಗಿ ತೋರಿಸುತ್ತೇನೆ. ಆದರೆ ನನಗೆ ಬಹಳ ಹಸಿವೆಯಾಗಿದೆ. ತಿನ್ನಲಿಕ್ಕೆ ಏನಾದರೂ ಕೊಟ್ಟರೆ ತಿಂದು ತೋರಿಸುತ್ತೇನೆ’ ಎನ್ನಲಾಗಿ. ನಾಸ್ತಿಕರು ಸಂತೋಷಪಟ್ಟು ತಮ್ಮ ಮನೆಗೆ ಹೋಗಿ ಒಂದು ಗಾಜಿನ ಲೋಟದಲ್ಲಿ ಹಾಲು ತಂದುಕೊಟ್ಟರು. ಆಗ ಸಾಧು ಒಂದು ಕಡ್ಡಿಯನ್ನು ತೆಗೆದುಕೊಂಡು ಆ ಲೋಟದ ಒಳಗಡೆಯಲ್ಲಿಟ್ಟು ತಿರುಗಿಸಲು ಪ್ರಾರಂಭ ಮಾಡಿದರು. ಅದನ್ನು ನೋಡಿದ ನಾಸ್ತಿಕರು ‘ಸ್ವಾಮಿ! ಅದರಲ್ಲಿ ಏನು ನೋಡಿದಿರಿ?’ ಎಂದು ಕೇಳಿದರು. ಆಗ ಸಾಧು ‘ಪ್ರಪಂಚದ ಜನರೆಲ್ಲರೂ ಹಾಲಿನಲ್ಲಿ ಬೆಣ್ಣೆ ದೊರೆಯುವುದಾಗಿ ಹೇಳುತ್ತಾರೆ. ಆದ್ದರಿಂದ ಅದು ಎಲ್ಲಿದೆ ಎಂದು ನೋಡುತ್ತಿದ್ದೇನೆ. ನನಗೆ ಕಾಣಲೊಲ್ಲದು’ ಎಂದರು. ಆಗ ನಾಸ್ತಿಕರು ‘ಸ್ವಾಮಿ, ನಿಮಗೆ ಹಾಲಿನಲ್ಲಿ ಬೆಣ್ಣೆಯು ಕಾಣದಿದ್ದರೂ ಅದು ಹಾಲಿನ ಪ್ರತಿಯೊಂದು ಅಣುವಿನಲ್ಲಿಯೂ ಇದೆ’ ಎಂದರು. ಆಗ ಸಾಧು ‘ಇದರಂತೆಯೇ ಪರಮಾತ್ಮನೂ ನಮ್ಮ ಸ್ಥೂಲ ದೃಷ್ಠಿಗೆ ಕಾಣದೆ ಇದ್ದರೂ ಜಗತ್ತಿನ ಪ್ರತಿಯೊಂದು ಅಣುವಿನಲ್ಲಿಯೂ ಇರುತ್ತಾನೆಂದು ತಿಳಿಯಿರಿ’ ಎಂಬುದಾಗಿ ಹೇಳಿ ಪರಮಾತ್ಮನ ಇರುವಿಕೆಯನ್ನು ಸಾಧುವು ಆ ನಾಸ್ತಿಕರಿಗೆ ಪರಿಚಯ ಮಾಡಿ ಕೊಟ್ಟನು. ಅದರಂತೆ ನಾವು, ನೀವೂ ಸಹ ಅನುಭವ ಮಾಡಿಕೊಂಡು ಕೃತಾರ್ಥರಾಗೋಣ.