ಉಪನಿಷತ್ತಿನ ಕಥೆಗಳು

ಆರುಣಿ ಧೌಮ್ಯ ಋಷಿಗಳ ಆಶ್ರಮ. ಆಶ್ರಮದ ಪ್ರಾಂಗಣ್ಯದಲ್ಲಿ ಸಾಕಷ್ಟು ಮಂದಿ ಶಿಷ್ಯರು ಕುಳಿತಿದ್ದಾರೆ. ಅವರ ಮುಖಗಳಲ್ಲಿ ಕಲಿಯುವಿಕೆಯ ಬಗ್ಗೆ ಮೂಡಿರುವ ಶ್ರದ್ಧಾಸಕ್ತಿ ಹೊರ ಹೊಮ್ಮುತ್ತಿದೆ. ಅವರೆಲ್ಲರ ಸಮ್ಮುಖದಲ್ಲಿ ಗುರುಗಳಾದ ಧೌಮ್ಯರು ಆಸೀನರಾಗಿದ್ದಾರೆ. ಅವರ ಅತಿಸನಿಹದಲ್ಲಿಯೇ ಅವರ ಪ್ರೀತಿಪಾತ್ರ ಶಿಷ್ಯನಾದ ಆರುಣಿಯೂ ಕುಳಿತಿದ್ದಾನೆ. ಅವನ ಕಣ್ಣುಗಳು ಗುರುವರ್ಯರ ಮುಖಾರವಿಂದದ ಕಡೆಗೇ ನಿಟ್ಟಿಸುತ್ತಿವೆ. ಕಿವಿಗಳು ಗುರುವಿನ ಬಾಯಿಂದ ಬರುವ ಮಾತುಗಳನ್ನು ಆಲಿಸಲೆಂದೇ ತವಕಿಸುತ್ತಿರುವಂತಿವೆ.
ಅಷ್ಟರಲ್ಲಿ ಒಬ್ಬ ಶಿಷ್ಯ ದೂರದಿಂದ ಆಶ್ರಮದ ಕಡೆ ಓಡೋಡಿ ಒಂದೇ ಉಸುರಿಗೆ ಬರುತ್ತಿದ್ದಾನೆ. ಏದುಸಿರು ಬಿಡುತ್ತಾ, ಗುರುವಿನ ಮುಂದೆ ನಿಂತು, ಗಾಬರಿಯ ಮುಖದಲ್ಲಿ ಹೇಳಿದ:
“ಗುರುಗಳೇ, ನಿನ್ನೆ ರಾತ್ರಿ ಮಳೆ ಜೋರಾಗಿ ಬಂದು, ಆಶ್ರಮದ ರಕ್ಷಣೆಗಾಗಿ ಸುತ್ತು ಕಟ್ಟಿರುವ ಗೋಡೆಯಿಂದ ನೀರು ಜೋರಾಗಿ ಜಿನುಗಿ ಬರುತ್ತಿದೆ. ಹಾಗೆಯೇ ಬಿಟ್ಟರೆ ಬಿರುಕು ಅಗಲವಾಗಿ ನೀರು ರಭಸದಿಂದ ಹರಿದು, ಆಶ್ರಮದ ಸುತ್ತಲೂ ಆವರಿಸಿಬಿಡುತ್ತದೆ.
ಧೌಮ್ಯರು ಆರುಣಿಯ ಕಡೆ ಕಣ್ಣರಳಿಸುತ್ತಾ ಹೇಳಿದರು.
“ಹೋಗಿ ನೋಡು ಸ್ಥಿತಿಗತಿ ಬಗ್ಗೆ ಕೂಲಂಕುಷವಾಗಿ ತಿಳಿದು ಬಾ.”

ಆ ಕೂಡಲೇ ಆರುಣಿ ಅಲ್ಲಿಂದ ಹೊರಟು ಸುತ್ತುಗೋಡೆಯ ಒಳಗೆ ಬಂದ. ಆ ಒಂದು ಕಡೆಯಿಂದ ನೀರು ಜೋರಾಗಿ ಹರಿದು ಬರುತ್ತಿದೆ, ನಿಜ. ಎಲ್ಲಿಂದ ಹರಿದು ಬರುತ್ತಿದೆ? ಎಂದು ಕಣ್ಣ ನೋಟವನ್ನು ಚುರುಕುಗೊಳಿಸಿ, ಗೋಡೆಯ ಪಕ್ಕದಲ್ಲಿಯೇ ಸ್ವಲ್ಪ ದೂರ ಹೋಗುತ್ತಿದ್ದಂತೆ ಅಲ್ಲೊಂದು ಕಡೆ ಬಿರುಕು ಬಾಯಿ ಅಗಲಿಸಿರುವುದು ಕಾಣಿಸಿತು. ನೀರು ಅಲ್ಲಿಂದಲೇ ಭೋರಿಡುತ್ತಾ ಬರುತ್ತಿರುವುದೂ ಗೋಚರವಾಯಿತು.
“ಅಯ್ಯಯ್ಯೋ! ಎಂತಹ ಪ್ರಮಾದ ಆಗಿಹೋಗಿದೆ.! ಮಳೆಯ ನೀರು ಆಶ್ರಮದ ಕಡೆಗೇ ರಭಸದಿಂದ ಹರಿದು ಬರುತ್ತಿದೆಯಲ್ಲಾ! ಏನು ಮಾಡಲಿ?”
’ಅಂದುಕೊಳ್ಳುತ್ತಾ ಸುತ್ತಲೂ ನೋಡಿದ, ನೆಲದ ಮೇಲೆ ಬಿದ್ದಿರುವ ಕಲ್ಲು-ಮಣ್ಣಿನಿಂದಲೇ ಬಿರುಕು ಮುಚ್ಚಲು ಯತ್ನಿಸಿದ. ಸಫಲವಾಗಲಿಲ್ಲ. ಹಿಡಿದ ಕೆಲಸವನ್ನು ಪೂರ್ತಿಗೊಳಿಸದೆ ಆಶ್ರಮಕ್ಕೆ ಹಿಂದಿರುಗುವುದು ತರವಲ್ಲ ಅಂದುಕೊಂಡು, ಕ್ಷಣಕಾಲ ಹಾಗೆಯೇ ವೀಕ್ಷಿಸುತ್ತಾ ನಿಂತ – ಥಟ್ಟನೆ ಅವನಿಗೆ ಏನೋ ಹೊಳೆದಂತಾಯಿತು. ಗೋಡೆಯ ತಳದಲ್ಲಿ ಬಿರುಕು ಬಿಟ್ಟಿದ್ದ ಭಾಗಕ್ಕೆ ತನ್ನ ಎದೆಯನ್ನೇ ಬಲವಾಗಿ ಒತ್ತರಿಸಿ, ಮೊಗ್ಗಲು ಮಲಗಿದೆ. ಈಗ ಹರಿಯುತ್ತಿದ್ದ ನೀರಿನ ರಭಸ ಕಡಿಮೆ ಆಯಿತು. ನಿಧಾನವಾಗಿ ನೀರು ಬಿರುಕಿನಿಂದ ಹೊರಕ್ಕೆ ಜಿನುಗತೊಡಗಿತು.
ಸಂಜೆಯಾದುದರ ಪರಿವೆಯೂ ಆರುಣಿಗೆ ಆಗಲಿಲ್ಲ. ಆಶ್ರಮದಲ್ಲಿ ಧೌಮ್ಯರಿಗೆ ಆರುಣಿಯ ನೆನಪಾಯಿತು.
“ಆರುಣೀ”
ಕೂಗಿ ಕರೆದರು.
“ಅವನನ್ನು ಗೋಡೆಯ ಬಿರುಕು ಮುಚ್ಚಿ ಬರಲು ನೀವೇ ಕಳುಹಿಸಿದಿರಲ್ಲ್ಲಾ, ಗುರುಗಳೇ.”
ಶಿಷ್ಯರು ಒಕ್ಕೊರಳಿನಿಂದ ಹೇಳಿದರು.
“ಅವನಿನ್ನೂ ಬರಲಿಲ್ಲವೇನು?”
ಎಂದು ಗಾಬರಿಯಿಂದಲೇ, ಮೇಲೆದ್ದರು. ತಮ್ಮ ಶಿಷ್ಯರನ್ನೂ ಕರೆದುಕೊಂಡು, ಕೈಯಲ್ಲಿ ಕಂದೀಲನ್ನು ಹಿಡಿದುಕೊಂಡು ಸುತ್ತು ಗೋಡೆಯ ಕಡೆ ಧಾವಸಿದರು. ಎಷ್ಟೇ ಹುಡುಕಾಡಿದರೂ ಆರುಣಿ ಕಾಣಲಿಲ್ಲ.
“ಎಲ್ಲಿ ಹೋದ? ಏನಾದ?” ಎಂದು ಗಾಬರಿ ಇನ್ನೂ ಹೆಚ್ಚಿತು. ’ಕತ್ತಲೆಯ ಕೋಟೆಯಲ್ಲಿಯೇ ಜೋರಾಗಿ ಕೂಗಿದರು: “ಆರುಣೀ!” ಗೋಡೆಯ ತಳಭಾಗದಿಂದ ದೂರದ ದನಿ ಕೇಳಿಸಿತು:
“ನಾನು ಇಲ್ಲಿದ್ದೇನೆ, ಗುರೂಜೀ.”
ಧೌಮ್ಯರು ಈಗ ದನಿ ಬಂದ ಕಡೆಗೆ ಹೆಜ್ಜೆ ಹರಿಸಿದರು. ಶಿಷ್ಯರೂ ಹಿಂಬಾಲಿಸಿದರು. ಅವರು ಕಂಡದ್ದೇನು?
ಬಿರುಕಿನ ಭಾಗಕ್ಕೆ ಅಡ್ಡಲಾಗಿ ಅರುಣಿ ಎದೆ ಕೊಟ್ಟು ಮೊಗ್ಗಲು ಮಲಗಿದ್ದಾನೆ. ನೀರು ಅವನ ಮೇಲೆ ನಿಧಾನವಾಗಿ ಹರಿದುಬರುತ್ತಿದೆ. ಕೂಡಲೇ ಆಶ್ರಮದಿಂದ ಸನಿಕೆ, ಮಂಕರಿ ತರಿಸಿದರು. ಕಲ್ಲುಚೂರುಗಳನ್ನು ಗುಡ್ಡೆ ಮಾಡಿಸಿದರು. ಕಲ್ಲು-ಮಣ್ಣನ್ನು ಮಂಕರಿಯಲ್ಲಿ ತುಂಬಿ, ಬಿರುಕಿನ ಬಾಯಿ ಮುಚ್ಚಿಸಿದರು. ನಿಧಾನವಾಗಿ ಆರುಣಿಯನ್ನು ಮೇಲೆತ್ತಿದರು.
ಆರುಣಿಯ ಕರ್ತವ್ಯನಿಷ್ಠತೆಯನ್ನು ಮನಸಾರೆ ಪ್ರಶಂಷಿಸುತ್ತಾ, ಆಶ್ರಮಕ್ಕೆ ಕರೆದೊಯ್ದರು. ಅವನಿಗೆ ಸಕಲ ವಿದ್ಯೆಯನ್ನೂ ಕರುಣಿಸಿ, ಉದ್ದಾಲಕ ಎಂದು ಹೆಸರಿಟ್ಟರು. ಉದ್ಧಾಲಕ ಎಂದರೆ ಅಡ್ಡವಾಗಿ ಮಲಗಿದವನು ಎಂದರ್ಥ. ಮುಂದೆ ಇವರು ದೊಡ್ಡ ಋಷಿಯಾಗಿ ವೇದ ಪುರಾಣದಲ್ಲಿ ಪಾರಂಗತರಾದರು.