ಪುರಾಣ ಕಥೆಗಳು

ಕೌಶಿಕನ ವಿಚಾರ ಛಾಂದೋಮಾರ್ಕಂಡೇಯ ಮುನಿಗಳು ಪಾಂಡವರಿಗೆ ಕೌಶಿಕ ಮುನಿಯ ಕಥೆಯನ್ನು ಹೇಳತೊಡಗಿದರು. ಕೌಶಿಕನೆಂಬ ಬ್ರಾಹ್ಮಣನು ಮಹಾನ್ ತಪಸ್ವಿ, ಧರ್ಮಶೀಲನೂ ಎನಿಸಿದ್ದನು. ಒಂದು ದಿನ ಮರದಡಿಯಲ್ಲಿ ಕುಳಿತು ತಪಸ್ಸು ಮಾಡುತ್ತಿರುವಾಗ ಬಲಾಕ ಎಂಬ ಹೆಸರಿನ ಪಕ್ಷಿ, ಬ್ರಾಹ್ಮಣನ ಮೇಲೆ ವಿಸರ್ಜಿಸಿತು. ಕೌಶಿಕನು ಸಿಟ್ಟಿನಿಂದ ಪಕ್ಷಿಯ ಕಡೆ ನೋಡಿದಾಗ, ಪಕ್ಷಿಯು ಸುಟ್ಟು ಹೋಯಿತು. ತನ್ನ ತಪ್ಪಿನ ಅರಿವಾಗಿ ದೇವರನ್ನು ಸ್ಮರಿಸುತ್ತಾ, ಮನೆ, ಮನೆಗಳಲ್ಲಿ ಭಿಕ್ಷೆ ಬೇಡುತ್ತಾ ಜೀವಿಸುತ್ತಿದ್ದನು. ಒಬ್ಬ ಸ್ತ್ರೀ ಕೌಶಿಕನು ಭಿಕ್ಷೆಗೆ ಬಂದಾಗ ಪತಿಯ ಸೇವೆಯನ್ನು ಮಾಡುತ್ತಿದ್ದಳು. “ಕೈ ಬಿಡುವಿಲ್ಲ, ಸ್ವಲ್ಪ ಇರು” ಎಂದು ಸ್ವಲ್ಪ ಸಮಯದ ನಂತರ ಭಿಕ್ಷೆಯನ್ನು ತೆಗೆದುಕೊಂಡು ಬಂದಳು. ಆಗ ಬ್ರಾಹ್ಮಣನು ಕೆಂಗಣ್ಣಿನಿಂದ ನೋಡಿದನು. ಸ್ತ್ರೀಯು ನಗುತ್ತಾ “ತಪಸ್ವಿ ನೀನು ಕೆಂಗಣ್ಣು ಬಿಟ್ಟರೆ ಸುಟ್ಟು ಹೋಗಲು ಪಕ್ಷಿಯೇ? ಧರ್ಮ ಎಂದರೇನು ಎಂದು ಅರ್ಥ ಮಾಡಿಕೊಳ್ಳದ ನೀನೆಂತಹ ಬ್ರಾಹ್ಮಣ? ಧರ್ಮದ ಬಗ್ಗೆ ತಿಳಿಯಬೇಕಾದರೆ ನೀನು ಧರ್ಮವ್ಯಾದನ ಬಳಿಗೆ ಹೋಗು” ಎಂದಳು. ಬ್ರಾಹ್ಮಣನು ಧರ್ಮವ್ಯಾದನನ್ನು ಹುಡುಕುತ್ತಾ ಹೊರಟನು. ಮಿಥಿಲೆಯಲ್ಲಿ ಧರ್ಮವ್ಯಾದನು ಪ್ರಾಣಿಗಳ ಮಾಂಸವನ್ನು ಮಾರುತ್ತಾ ಕುಳಿತಿದ್ದನು. “ಬನ್ನಿ ಸ್ವಾಮಿ, ನಿಮ್ಮನ್ನು ಆ ಸಾಧ್ವಿ ತಾಯಿ ಕಳುಹಿಸಿದಳಲ್ಲವೇ?” ಬ್ರಾಹ್ಮಣನಿಗೆ ಆಶ್ಚರ್ಯವಾಯಿತು. ಧರ್ಮವ್ಯಾದನು ಬ್ರಾಹ್ಮಣನನ್ನು ಕರೆದುಕೊಂಡು ಆದರದಿಂದ ಸತ್ಕರಿಸಿದನು. “ಧರ್ಮವ್ಯಾದ, ನೀನು ಮಾಂಸದ ವ್ಯಾಪಾರ ಮಾಡುತ್ತಿರುವೆ. ಇದು ಪಾಪಕರವಲ್ಲವೇ?” “ಸ್ವಾಮಿ, ನನಗೆ ಹಾಗೆನಿಸುತ್ತಿಲ್ಲ. ಇದು ನನ್ನ ವ್ಯಾಪಾರ. ನಾನು ನನ್ನ ಶಕ್ತಿಗೆ ಮೀರಿ ತಂದೆ, ತಾಯಿಗಳ ಸೇವೆ ಮಾಡುತ್ತಿದ್ದೇನೆ. ನಾನಾಗಲೀ, ನನ್ನ ಮನೆಯವರಾಗಲೀ ಮಾಂಸವನ್ನು ಸೇವಿಸುತ್ತಿಲ್ಲ. ಹಾಗೆಯೇ ನಾನು ಪ್ರಾಣಿಗಳನ್ನು ಕೊಂದು ಮಾಂಸ ಮಾರುತ್ತಿಲ್ಲ. ಯಾರೋ ಕೊಂದ ಪ್ರಾಣಿಗಳ ಮಾಂಸವನ್ನು ಮಾರುತ್ತಿದ್ದೇನೆ. ಇದರಿಂದ ಧರ್ಮದ ಲೋಪವಾಗಿಲ್ಲ. ಇನ್ನು ಪಾಪದ ಮಾತು ಎಲ್ಲಿಂದ ಬರಬೇಕು? ನೀನು ವೃದ್ಧ ತಂದೆ, ತಾಯಿಗಳ ಸೇವೆ ಮಾಡದೆ, ವೃಥಾ ಅಲೆದಾಡಿದೆ. ಈಗ ಹಿಂದಿರುಗಿ ಹೋಗಿ ಅವರ ಸೇವೆ ಮಾಡು” ಎಂದಾಗ ಕೌಶಿಕನಿಗೆ ಜ್ಞಾನೋದಯವಾಗಿ, ತಂದೆ ತಾಯಿಯ ಸೇವೆಯನ್ನು ಮಾಡುವುದಕ್ಕೆ ಮನೆಗೆ ಹೊರಟ.