ಭಾಗವತ ಕಥೆಗಳು

ರಂತಿದೇವ ಭರದ್ವಾಜನಿಂದ ಮುಂದುವರಿಸಲ್ಪಟ್ಟ ಭರತನ ಸಂತತಿಯಲ್ಲಿ ಹುಟ್ಟಿದವನು ರಂತಿದೇವ. ಈತನ ದಿವ್ಯಚರಿತ್ರೆ ಮೂರೂ ಲೋಕಗಳಲ್ಲಿ ಖ್ಯಾತವೆನಿಸಿತು. ರಂತಿದೇವನು ಹುಟ್ಟುವಾಗಲೇ ಬಾಯಲ್ಲಿ ಚಿನ್ನದ ಚಮಚವನ್ನಿಟ್ಟುಕೊಂಡು ಹುಟ್ಟಿದವನು ಎಂದು ವದಂತಿ. ಇಷ್ಟಾದರೂ ಕೊಡುಗೈ ಕರ್ಣನನ್ನು ದಾನದಲ್ಲಿ ಮೀರಿಸಿದವನು ಎಂದೇ ಹೇಳಬಹುದು. ಈತನ ಕೊಡುಗೈ ಮುಂದೆ ಯಾವ ಐಶ್ವರ್ಯವೂ ಸಾಟಿ ಎನಿಸದಂತಾಯಿತು. ಈತನಿಂದ ದಾನ ಪಡೆದವರು ಶ್ರೀಮಂತರಾದರು. ರಂತಿದೇವನೇ ದಟ್ಟದಾರಿದ್ರ್ಯ ಎನಿಸಿದ. ಬಡತನ ಬಲವಾಗಿ ಕಾಡತೊಡಗಿದರೂ ಆ ಬಗ್ಗೆ ಯಾವುದೇ ಕಿರಿಕಿರಿ ಇವನಲ್ಲಿರಲಿಲ್ಲ. ಇವನ ಪುಣ್ಯ ವಿಶೇಷವೆಂದರೆ ಮಡದಿ ಮಕ್ಕಳಿಗೂ ಇವನ ದಾನ-ಕಾರ್ಯಗಳಲ್ಲಿ ಎಂದೂ ಅಡ್ಡಿಬಂದವರಲ್ಲ. ಇವನೊಂದಿಗೆ ಈ ವಿಚಾರದಲ್ಲಿ ಮನೆಮಂದಿ ಎಲ್ಲಾ ಸಂಪೂರ್ಣ ಸಹಕಾರ ನೀಡುತ್ತಿದ್ದರು. ಹೀಗಿರಲು ಒಂದು ಬಾರಿ ಇವನಿಗೂ ಇವನ ಮನೆಮಂದಿಗೂ ನಲವತ್ತೊಂದು ದಿನಗಳವರೆಗೆ ಕುಡಿಯಲು ನೀರು ಸಹ ದೊರೆಯದಂತಾಯಿತು. ನಲವತ್ತೊಂಬತ್ತನೆಯ ದಿನ ಬೆಳಿಗ್ಗೆ ದೇವರ ಕೃಪೆಯಿಂದ ಸ್ವಲ್ಪ ತುಪ್ಪ, ಗೋಧಿ, ಅನ್ನ ಪಾಯಸ ಸಿಹಿನೀರು ಸಿಕ್ಕಿದುವು.

ಊಟಕ್ಕೆ ತೊಂದರೆ ಇದ್ದರೂ ಅನುದಿನದ ಸ್ನಾನ, ಜಪ-ತಪಗಳು ರಂತಿದೇವನಿಂದ ಯಾವ ಅಡ್ಡಿ ಆತಂಕವೂ ಇಲ್ಲದೆ ನಡೆಯುತ್ತಿದ್ದುವು. ನಲವತ್ತೊಂಬತ್ತನೆಯ ದಿನ ರಂತಿದೇವ ಸ್ನಾನಾಹ್ನಿಕಗಳನ್ನು ಮುಗಿಸಿ, ತನ್ನ ಹೆಂಡತಿ ಮಕ್ಕಳೊಂದಿಗೆ ಊಟಕ್ಕೆ ಕುಳಿತ. ಅಷ್ಟರಲ್ಲಿ ಒಬ್ಬ ಬ್ರಾಹ್ಮಣ ಮನೆಬಾಗಿಲ ಬಳಿ ಕಾಣಿಸಿಕೊಂಡ. ರಂತಿದೇವ ಮೊದಲಿಂದಲೂ ಅತಿಥಿಯನ್ನು ದೇವರೆಂದು ಕಾಣುತ್ತಿದ್ದವನು. ಬಾಗಿಲು ಬಳಿ ನಿಂತಿದ್ದ ಬ್ರಾಹ್ಮಣ ಅತಿಥಿಯನ್ನು ಒಳಗೆ ಬರಮಾಡಿಕೊಂಡ. ಭಕ್ತಿಯಿಂದ ಪೂಜಿಸಿ, ತನ್ನ ಪಾಲಿನ ಅನ್ನಪಾಯಸವನ್ನು ಬ್ರಾಹ್ಮಣನಿಗೆ ಅರ್ಪಿಸಿದ. ಬ್ರಾಹ್ಮಣ ತೃಪ್ತಿಯಿಂದ ಸಂತುಷ್ಟನಾಗಿ ಮನೆಮಂದಿಯವರನ್ನೆಲ್ಲಾ ಹೃತ್ಪೂರ್ವಕವಾಗಿ ಹಾರೈಸಿ, ತನ್ನ ದಾರಿ ಹಿಡಿದ. ಮನೆಯಲ್ಲಿ ಈಗ ಉಳಿದಿರುವುದನ್ನೇ ಎಲ್ಲರೂ ಈಗ ಹಂಚಿಕೊಂಡು, ಊಟಕ್ಕೆ ಕುಳಿತರು, ಇನ್ನೇನು ತುತ್ತುಬಾಯಿಗೆ ಹಾಕಿಕೊಳ್ಳಬೇಕು ಅನ್ನುವಷ್ಟರಲ್ಲಿ ಶೂದ್ರನೊಬ್ಬನು ಬಾಗಿಲ ಬಳಿ ಕೂಗಿಟ್ಟ. “ಅಮ್ಮಾ ತಾಯೀ, ಕವಳ ತಾಯೀ” ಹಸಿದು ಬಂದವರಿಗೆ ಅನ್ನ ಹಾಕದಿರುವುದು ರಂತಿದೇವನಿಗೆ ತಿಳಿಯದ ವಿಷಯ. ತಮ್ಮಲ್ಲಿದ್ದುದರಲ್ಲಿ ಅರ್ಧವನ್ನು ಸಂತೋಷದಿಂದ ಶೂದ್ರನಿಗೆ ಉಣಿಸಿದ. ಅವನೂ ಸಹ ತಿಂದು ತೇಗುತ್ತಾ ತನ್ನ ದಾರಿ ಹಿಡಿದ ನಂತರ ಮಿಕ್ಕಿರುವುದನ್ನೇ ಮನೆಮಂದಿ ಎಲ್ಲಾ ಹಂಚಿಕೊಳ್ಳಲು ಯೋಚಿಸುತ್ತಿರುವಷ್ಟರಲ್ಲಿ ಇನ್ನೊಬ್ಬ ನಾಲ್ಕು ನಾಯಿಗಳೊಂದಿಗೆ ಹಾಜರಾದ.

“ಸ್ವಾಮಿ, ಒಂದು ವಾರದಿಂದ ಒಂದಗಳು ಅನ್ನ ಸಿಕ್ಕಿಲ್ಲ. ತುಂಬಾ ಹಸಿದು ಹೋಗಿದ್ದೇನೆ. ಏನಾದ್ರೂ ಇದ್ದರೆ ಕೊಡಿ ಸ್ವಾಮಿ. ಆಲಾಪಿಸಿದ. ಅವನು ಅಂಗಲಾಚುತ್ತಿರುವುದನ್ನು ಕಂಡು, ರಂತಿದೇವನಿಗೆ ಕರುಳೇ ಬಾಯಿಗೆ ಬಂದಂತಾಯಿತು. ಉಳಿದಿದ್ದ ಆಹಾರವನ್ನೆಲ್ಲಾ ಅವನಿಗೂ ಅವನ ನಾಯಿಗಳಿಗೂ ಹಾಕಿಬಿಟ್ಟ. ಈಗ ಸ್ವಲ್ಪ ನೀರು ಮಾತ್ರ ಉಳಿದಿತ್ತು. ಅದನ್ನೇ ಎಲ್ಲರೂ ಕುಡಿದು ಅಂದಿನ ಹಸಿವನ್ನು ಹಿಂಗಿಸಿಕೊಳ್ಳೋಣ ಅನ್ನುವಷ್ಟರಲ್ಲಿ ಒಬ್ಬ ಚಂಡಾಲ ಮನೆ ಮುಂದೆ ಬಂದು ನಿಂತು ಕೂಗಿಕೊಂಡ. “ತುಂಬಾ ಬಾಯಾರುತ್ತಿದೆ. ಸ್ವಲ್ಪ ನೀರು ಕೊಡಿ ತಂದೆ” ಎಂದು ಕೂಗಿಟ್ಟ. ಚಂಡಾಲನ ಕೂಗಿಗೆ ರಂತಿದೇವನ ಮನ ಕರಗಿತು. ಇದ್ದ ನೀರೆಲ್ಲವನ್ನೂ ಅವನಿಗೆ ಕುಡಿಸುತ್ತಾ ಕಣ್ಣು ಮುಚ್ಚಿಕೊಂಡು “ಕೃಷ್ಣಾರ್ಪಣಮಸ್ತು” ಅಂದ. ಕಣ್ಣು ಬಿಡುತ್ತಿದ್ದಂತೆ ಚಂಡಾಲ ಸಾಕ್ಷಾತ್ ಪರಮೇಶ್ವರ ಆಗಿದ್ದ. ದತ್ತಾತ್ರೇಯ ನಾಲ್ಕು ನಾಯಿಗಳೊಂದಿಗೆ ಮುಗುಳು ನಗುತ್ತಾ ನಿಂತಿದ್ದಾನೆ. ಇಂದ್ರ, ಅಗ್ನಿ ಪ್ರತ್ಯಕ್ಷರಾಗಿದ್ದಾರೆ. ರಂತಿದೇವನಿಗೆ ಅಲೌಕಿಕ ಆನಂದ ಉಂಟಾಯಿತು. ಅವರೆಲ್ಲರೂ ಅವನನ್ನು ಹರಿಸಿದರು.