ಉಪನಿಷತ್ತಿನ ಕಥೆಗಳು

ಜಾನಶ್ರುತಿ ಮಹಾರಾಜನ ಅನ್ನದಾನ ಛಾಂದೋಗ್ಯ ಉಪನಿಷತ್ತು ಸರ್ವರಿಗೂ ಆದರ್ಶನೀಯವಾದದು. ಅದರಲ್ಲಿ ಅನೇಕ ಸತ್ಯಕಥೆಗಳು ಬರುತ್ತವೆ. ಐದನೇ ಅಧ್ಯಾಯದಲ್ಲಿ ಅನ್ನದಾನವನ್ನು ನಿರಂತರ ಮಾಡಿದ ಜಾನಶ್ರುತಿಯ ಒಂದು ಕಥೆ ಬರುತ್ತದೆ. ತನ್ನ ರಾಜ್ಯದಲ್ಲಿ ಯಾರಿಗೂ ಅನ್ನವಿಲ್ಲದೆ ಇರಬಾರದೆಂದು ತನ್ನ ರಾಜ್ಯದಲ್ಲಿ ರಸ್ತೆ, ಮರಗಿಡಗಳು ಅಲ್ಲಲ್ಲಿ ಅನ್ನದಾನದ ಛತ್ರಗಳನ್ನು ಮಾಡಿಸಿದ. ಈ ಕೀರ್ತಿ ಸ್ವರ್ಗ ಲೋಕದವರೆಗೂ ವ್ಯಾಪಿಸಿತು. ಜಾನಶ್ರುತಿಯ ಆನಂದಕ್ಕೆ ಪಾರವೇ ಇಲ್ಲ. ಯಾರು ಉತ್ತಮ ಕಾರ್ಯ ಮಾಡುತ್ತಾರೋ ಅವರಿಗೆ ಭಗವಂತನೂ ಸಹಾಯ ಮಾಡುತ್ತಾನೆ. ಒಂದು ದಿವಸ ಜಾನಶ್ರುತಿ ಅರಮನೆಯ ಕೊನೆ ಅಂತಸ್ತಿನಲ್ಲಿ ಕುಳಿತಿದ್ದಾನೆ. ತನ್ನನ್ನೇ ತಾನು ಅನ್ನದಾನದಿಂದ ನನಗೆ ಬಹಳ ಕೀರ್ತಿ ಬಂತು ಎಂದು ಸರ್ವ ಸಂತೋಷದಿಂದ ಇದ್ದಾನೆ. ಯಾರು ಪುಣ್ಯವನ್ನು ಮಾಡಿ ಆ ಪುಣ್ಯವು ಪರಿಪಕ್ವವಾಗುವ ಸಂದರ್ಭದಲ್ಲಿ ಅವರಿಗೆ ಮಾರ್ಗದರ್ಶನ ಮಾಡಲು ಭಗವಂತನೇ ಬರುತ್ತಾನೆ. ಹಾಗೆ ಜಾನಶ್ರುತಿಯು ತನ್ನನ್ನೇ ತಾನು ಪ್ರಶಂಸೆ ಮಾಡುತ್ತ ಉಬ್ಬುತ್ತಾ ಇದ್ದಾನೆ. ಆ ಕಿಟಕಿ ಪಕ್ಕದಲ್ಲಿ ಎರಡು ಬಲ್ಲೂಕ ಪಕ್ಷಿಗಳು ಹಾರುತ್ತಾ ಬಂದವು. ಅದರಲ್ಲಿ ಹಿಂದಿನ ಪಕ್ಷಿ ಮುಂದಿರುವ ಪಕ್ಷಿಗೆ ‘ಹೇ ಬಲ್ಲೂಕ ಮುಂದೆ ಮುಂದೆ ಹಾರುತ್ತಾ ಹೋಗಬೇಡ. ಅಲ್ಲಿ ಜಾನಶ್ರುತಿ ಮಹಾರಾಜ ಅನ್ನದಾನ ಮಾಡಿದ ಕೀರ್ತಿಯು ಸ್ವರ್ಗಲೋಕಕ್ಕೆ ಹೋಗುತ್ತದೆ. ಆ ಕೀರ್ತಿಗೆ ಸಿಕ್ಕು ನಲುಗಿ ಹೋದಿಯ!’ ಎಂದಿತು. ಆಗ ಮುಂದಿನ ಬಲ್ಲೂಕ, ಆ ಜಾನಶ್ರುತಿಯ ಅನ್ನದಾನದ ಕೀರ್ತಿಯನ್ನು ‘ಹೇ ಬಲ್ಲೂಕ, ಹೊಗಳಬೇಡ. ಅವನು ದಾನ ಮಾಡುವ ಅನ್ನ ಯಾರದು? ಭೂಮಿಯಿಂದ ಬೆಳೆದದ್ದು. ಆ ಭೂಮಿಯಲ್ಲಿ ಕಾಲಕಾಲಕ್ಕೆ ಗೊಬ್ಬರ ನೀರು ಹಾಕಿ ಬೆಳೆಸಿದವರು ಯಾರು? ಅದೇ ಆ ಪರಮಾತ್ಮ. ಇದರಲ್ಲಿ ಜಾನಶ್ರುತಿಯ ಯಾವ ಕ್ರಿಯೆಯೂ ಇಲ್ಲ. ಭಗವಂತನಿಂದ ಮಳೆ ಬಂತು. ಗಾಳಿ ಬಿಸಿಲು ವಾತಾವರಣದಿಂದ ಬೆಳೆ ಬೆಳೆಯಿತು. ಇದು ಆ ಪುಣ್ಯ ಜಾನಶ್ರುತಿಗೆ ಹೇಗೆ ಹೋಗುತ್ತದೆ? ಈ ಊರಿನ ಸಂತೆಯಲ್ಲಿ ಒಬ್ಬ ‘ರೈಕ್ವ’ ಎನ್ನುವ ಬ್ರಹ್ಮಜ್ಞಾನಿ ಇದ್ದಾನೆ. ಅವನು ದಿನವೂ ಗಾಡಿ ಎತ್ತಿನಿಂದ ಆ ಕಡೆ-ಈ ಕಡೆ ಸಾಮಾನು ಸಾಗಿಸಿ, ಬಂದ ಹಣದಲ್ಲಿ ಜೀವನ ಸಾಗಿಸುತ್ತಾ ಆ ಗಾಡಿಯ ಕೆಳಗೆ ಮಲಗಿದ್ದಾನೆ. ಆ ಅನ್ನದಾನದ ಪುಣ್ಯವೆಲ್ಲವೂ ಆ ಬ್ರಹ್ಮಜ್ಞಾನಿಗೆ ಹೋಗುತ್ತದೆಂದು ಆ ಹಿಂದಿನ ಬಲ್ಲೂಕ ಹೇಳಿತು.
ಆ ಬಲ್ಲೂಕಗಳ ಮಾತುಕಥೆಯನ್ನು ಕೇಳಿದ ಆ ಜಾನಶ್ರುತಿಯು ತಬ್ಬಿಬ್ಬಾದ ಯಾರು ಯಾರಿಗೆ ಏನು ದಾನ ಮಾಡಿದರೂ ಆ ಫಲವೆಲ್ಲವೂ ಆ ಬ್ರಹ್ಮಜ್ಞಾನಿಗೆ ಹೋಗುತ್ತದೆ ಎಂದು, ರೈಕ್ವ ಎನ್ನುವ ಗಾಡಿಯವನನ್ನು ಕಂಡು ಬ್ರಹ್ಮಜ್ಞಾನ ಕೇಳಲು ಮುತ್ತುರತ್ನದ ಹರಿವಾಣ ಬೇಕಾದಷ್ಟು ಬಟ್ಟೆ, ಬರೆ, ಆಳು, ಕಾಳು, ಸೇವೆ ಮಾಡಲು ತನ್ನ ಮಗಳನ್ನು ಕರೆದುಕೊಂಡು ಆ ರೈಕ್ವನನ್ನು ಕಂಡು ಅವನ ಎದುರಿಗೆ ಇಟ್ಟು ತನಗೆ ಬ್ರಹ್ಮಜ್ಞಾನ ಬೋಧಿಸೆಂದು ಬೇಡಿಕೊಂಡ. ಆಗ ರೈಕ್ವನು ಆ ಹರಿವಾಣ ಮತ್ತು ರತ್ನಗಳನ್ನು ಕಾಲಿನಿಂದ ಒದ್ದು ಬ್ರಹ್ಮಜ್ಞಾನವು ಹಣ, ಮುತ್ತು ರತ್ನಾದಿಗಳಿಗೆ ದೊರೆಯುವುದಿಲ್ಲ. ದಾನಾದಿಗಳಿಗೂ ದೊರೆಯುವುದಿಲ್ಲ. ನಿನ್ನ ಭಕ್ತಿ, ಶ್ರದ್ಧೆ ಇರುವುದಾದರೆ ಆ ಮಾರ್ಗದಲ್ಲಿ ಜ್ಞಾನ ದೊರೆಯುತ್ತದೆ ಎಂದು ಹೇಳಿದನು. ಹಾಗೆ ಜ್ಞಾನವು ಭಕ್ತಿ, ಶ್ರದ್ಧೆ ಇದ್ದರೆ ಮಾತ್ರ ಆ ಕಡೆ ಹರಿಯುತ್ತದೆ. ಹಾಗೆ ಜಾನಶ್ರುತಿಯು ರೈಕ್ವನಿಂದ ಬ್ರಹ್ಮಜ್ಞಾನ ಪಡೆದು ಮುಕ್ತಿ ಹೊಂದಿದನೆಂದು ಛಾಂದೋಗ್ಯ ಉಪನಿಷತ್ತಿನಲ್ಲಿ ಹೇಳಲಾಗಿದೆ.