ಪುರಾಣ ಕಥೆಗಳು

ಚಂದ್ರಹಾಸನ ಕಥೆ - ಮಾರ್ಪಡಿಸಿರುವುದು ಹಿಂದೆ ಕೇರಳ ದೇಶದ ಕುಂತಳಪುರದಲ್ಲಿ ಮೇಧಾವಿ ಎಂಬ ಒಬ್ಬ ರಾಜನಿದ್ದ. ಅವನಿಗೆ ಒಂದು ಗಂಡು ಮಗು ಜನಿಸಿತು. ಮೂಲಾನಕ್ಷತ್ರದಲ್ಲಿ ಹುಟ್ಟಿದ್ದ ಆ ಮಗುವಿಗೆ ಎಡಗಾಲಿನಲ್ಲಿ ಆರು ಬೆರಳುಗಳು ಇದ್ದವು. ಇದ್ದಕ್ಕಿದ್ದಂತೆ ಕುಂತಳಪುರದ ಮೇಲೆ ಶತೃರಾಜರು ಮುತ್ತಿಗೆ ಹಾಕಿದರು. ರಾಜ ಯುದ್ಧದಲ್ಲಿ ಮಡಿದ ರಾಣಿ ಸಹಗಮನ ಪದ್ಧತಿಯನ್ನು ಅನುಸರಿಸಿದಳು. ಮಗು ಅನಾಥ ಆಯಿತು. ಮಗು ಚಂದ್ರನ ಬೆಳದಿಂಗಳಂತೆ ನಗುತ್ತಿದ್ದರಿಂದ ಜನರು ಮಗುವನ್ನು 'ಚಂದ್ರಹಾಸ' ಎಂದು ಕರೆದರು.

ಅನಾಥ ಮಗುವಾದ ಚಂದ್ರಹಾಸನನ್ನು ದಾದಿಯೊಬ್ಬಳು ತಂದು ಪೋಷಿಸುತ್ತಿದ್ದಳು. ಅವರಿವರ ಮನೆಗಳಲ್ಲಿ ಹಾಲು-ಬೆಣ್ಣೆಯನ್ನು ತಂದು ಮಗುವನ್ನು ಪೋಷಿಸುತ್ತಿದ್ದಳು. ಮಗು ಮೂರು, ನಾಲ್ಕು ವಯಸ್ಸಿದ್ದಾಗ ಆ ದಾದಿಯು ದುರಾದೃಷ್ಟಕ್ಕೆ ತೀರಿಕೊಂಡಳು. ಚಂದ್ರ ಮುಖದ ಮುದ್ದು ಹುಡುಗನಿಗೆ ಯಾರು ದಿಕ್ಕಿಲ್ಲದಂತಾಯಿತು. ಪುರನಾರಿಯರೇ ಆ ಅನಾಥ ಹುಡುಗನನ್ನು ಸಾಕುತ್ತಿದ್ದರು. ಒಂದು ದಿನ ಆ ಹುಡುಗನಿಗೆ ಕಪ್ಪನೆಯ ಅಮೃತಶಿಲೆಯ ಸಾಲಿಗ್ರಾಮ ದೊರಕಿತು. ಅವನು ಸದಾಕಾಲ ಸಾಲಿಗ್ರಾಮವನ್ನು ತನ್ನ ನಾಲಿಗೆಯ ಕೆಳಗೆ ಇಟ್ಟುಕೊಂಡಿರುತ್ತಿದ್ದ. ಆ ಸಾಲಿಗ್ರಾಮ ಅವನ ಜೊತೆ ಅಪದ್ಬಾಂಧವನಂತೆ ಇರುತ್ತಿತ್ತು. ಒಂದು ದಿನ ಆ ಊರಿನ ಮಂತ್ರಿ ದುಷ್ಟಬುದ್ಧಿ ಮನೆಯಲ್ಲಿ ಔತಣಕೂಟವಿತ್ತು. ಎಲ್ಲರಂತೆ ಚಂದ್ರಹಾಸನು ಅಲ್ಲಿಗೆ ಊಟಕ್ಕೆ ಹೋಗಿದ್ದನು. ಅಲ್ಲಿ ನೆರೆದಿದ್ದ ಬ್ರಾಹ್ಮಣರು ಆ ಹುಡುಗನ ಮುಖದಲ್ಲಿರುವ ತೇಜಸ್ಸನ್ನು ಕಂಡು 'ಈ ಹುಡುಗನೇ ಈ ರಾಜ್ಯಕ್ಕೆ ಮುಂದೆ ರಾಜನಾಗುತ್ತಾನೆ' ಎಂದು ಹೇಳಿದರು. ಮಂತ್ರಿಗೆ ಬ್ರಾಹ್ಮಣರ ಮಾತು ಹಿತವನ್ನುಂಟು ಮಾಡಲಿಲ್ಲ. ಆ ರಾಜ್ಯದ ರಾಜನ ಮರಣದ ನಂತರ ತನ್ನ ಮಗನನ್ನೇ ರಾಜನನ್ನಾಗಿ ಮಾಡಬೇಕೆಂದು ಯೋಚಿಸುತ್ತಿದ್ದ. ಮಂತ್ರಿಗೆ ಮದನ ಎಂಬ ಮಗನೂ, ವಿಷಯೆ ಎಂಬ ಮಗಳು ಇದ್ದಳು. ಹೇಗಾದರೂ ಮಾಡಿ ಬಾಲಕನನ್ನು ಕೊಲ್ಲಿಸಿಬಿಡಬೇಕು ಎಂದು ಮಂತ್ರಿ ಯೋಚಿಸಿದನು. ಕಟುಕರನ್ನು ಕರೆಯಿಸಿ ಕೈತುಂಬಾ ಚಿನ್ನದ ನಾಣ್ಯಗಳನ್ನು ಕೊಟ್ಟು, 'ಈ ಬಾಲಕನನ್ನು ಕಾಡಿಗೆ ಕರೆದುಕೊಂಡು ಹೋಗಿ ಕೊಂದು, ಅವನ ಶರೀರದ ಯಾವುದಾದರೂ ಭಾಗವನ್ನು ತಂದು ತೋರಿಸಿ' ಎಂದು ಹೇಳಿದನು. ಹುಡುಗರ ಜೊತೆ ಆಟವಾಡುತ್ತಿದ್ದ ಬಾಲಕನನ್ನು ಸಮಯ ಸಾಧಿಸಿ ಎತ್ತಿಕೊಂಡು ಕಾಡಿಗೆ ಹೊರಟರು. ಕಾಡಿನಲ್ಲಿ ಹುಡುಗನನ್ನು ಕೊಲ್ಲಲು ಕತ್ತಿಯನ್ನು ಎತ್ತಿದಾಗ ಮರುಕ ಉಂಟಾಯಿತು. ಆಳುತ್ತಿದ್ದ ಬಾಲಕನನ್ನು ಹಾಗೆಯೇ ಬಿಟ್ಟು ಬಂದರೆ ಮಂತ್ರಿ ಸುಮ್ಮನೆ ಬಿಟ್ಟಾನೆಯೇ? ಎಂದು ಯೋಚಿಸಿ, ಅವನ ಕಾಲುಗಳಲ್ಲಿದ್ದ ಆರು ಬೆರಳುಗಳಲ್ಲಿ ಒಂದನ್ನು ಕತ್ತರಿಸಿ, ಮಂತ್ರಿಗೆ ತಂದು ತೋರಿಸಿದರು. ಮಂತ್ರಿಯು ಚಂದ್ರಹಾಸನೆಂಬ ಬಾಲಕನು ತೀರಿಕೊಂಡ ಎಂದು ಭಾವಿಸಿದ. ತನ್ನ ದುಷ್ಟ ಬುದ್ಧಿಗೆ ತಾನೇ ಹಿಗ್ಗಿದ. ಅವನ ಮನಸ್ಸು ಭ್ರಮೆಯಲ್ಲಿ ತೇಲಾಡಿತು.

ಬಾಲಕನು ಒಂದೇ ಸಮನೆ ರಾತ್ರಿಯೆಲ್ಲಾ ಕಾಡಿನ ಕಾರ್ಗತ್ತಲಲ್ಲಿ ಒಂಟಿಯಾಗಿಯೇ ಕುಳಿತು ಒಂದೇ ಸಮನೆ ರೋಧಿಸುತ್ತಿದ್ದ. ಚಂದನಾವತಿಯ ರಾಜನಾದ ಕುಳಿಂದ ಎಂಬವವನು ಬೇಟೆ ಆಡಲು ಬರುತ್ತಿದ್ದ. ಅಳುತ್ತಿದ್ದ ಈ ಚಂದ್ರಹಾಸನನ್ನು ಕಂಡು ಕುದುರೆಯನ್ನು ನಿಲ್ಲಿಸಿ ವಿಚಾರಿಸಿದ. ಹುಡುಗನ ಅಸಹಾಯಕತೆಯನ್ನು ಕಂಡು ರಾಜನಿಗೆ ನೋವಾಯಿತು. ಅವನ ಬೆಳದಿಂಗಳನಂತಹ ಮುದ್ದು ಮುಖವನ್ನು ನೋಡಿ ಆನಂದ ಉಕ್ಕಿ ಬಂತು. ಆ ರಾಜನಿಗೆ ಮಕ್ಕಳಿರಲಿಲ್ಲ. ಅವನನ್ನು ತನಗೆ ದೇವರೇ ಕರುಣಿಸಿದನೆಂದು ತಿಳಿದು ಅರಮನೆಗೆ ಕರೆ ತಂದ. ರಾಣಿಗೂ ಸಂತೋಷವಾಯಿತು. ಅವನನ್ನು ರಾಜಕುಮಾರನಂತೆಯೇ ಸಾಕುತ್ತಿದ್ದರು. ಚಂದನಾವತಿಯ ಪ್ರಜೆಗಳ ಪ್ರೀತಿ, ವಿಶ್ವಾಸಗಳನ್ನು ಗಳಿಸಿದ ಚಂದ್ರಹಾಸ. ಚಂದ್ರಹಾಸ ದೊಡ್ಡವನಾಗುತ್ತಾ ಬಂದನು. ಅವನು ತನ್ನ ಚುರುಕು ಬುದ್ಧಿಯಿಂದ ರಾಜನಿಗೆ ರಾಜಕಾರ್ಯದಲ್ಲಿ ನೆರವಾಗುತ್ತಿದ್ದನು. ಒಂದು ಬಾರಿ ರಾಜನು ತನ್ನ ಮಗನನ್ನು ಕರೆದು, 'ಚಂದ್ರಹಾಸ, ನಾವು ಕುಂತಳಪುರದ ರಾಜರ ಮಾಂಡಲಿಕರು. ಮಾಮೂಲಿನಂತೆ ಈ ವರ್ಷವೂ ಅವರಿಗೆ ವರ್ಷದ ತೆರಿಗೆ ಹಣ ಒಪ್ಪಿಸಿಬರಬೇಕು. ಈ ಬಾರಿ ನೀನೇ ಹೋಗಿ ಕಪ್ಪವನ್ನು ಒಪ್ಪಿಸಿ ಬಾ' ಎಂದು ಹೇಳಿ ಕಳುಹಿಸಿದ. ರಾಜನ ಅಣತಿಯಂತೆ ಚಂದ್ರಹಾಸ ಕಪ್ಪದ ಹಣದೊಂದಿಗೆ ಕುಂತಳ ಪುರಕ್ಕೆ ಹೋದ. ದುಷ್ಟಬುದ್ಧಿ ಮಂತ್ರಿಗೆ ಅನುಮಾನ ಬಂದಂತಾಗಿ, ಚಂದ್ರಹಾಸ!! 'ಚಂದನಾವತಿಯ ರಾಜನಿಗೆ ಮಕ್ಕಳು ಇರಲಿಲ್ಲ ಅಲ್ಲವೇ? ನೀನು ಹೇಗೆ ಅವನಿಗೆ ಮಗನಾದೆ?' ಮುಗ್ಧ ಮನಸ್ಸಿನ ಚಂದ್ರಹಾಸ ನಡೆದ ವಿಷಯಗಳನ್ನು ಬಿಚ್ಚು ಮನಸ್ಸಿನಿಂದ ಮಂತ್ರಿಯ ಬಳಿ ಹೇಳಿಕೊಂಡ. ದುಷ್ಟಬುದ್ಧಿಗೆ ತಾನು ಕಳುಹಿಸಿದ್ದ ಕಟುಕರು ತನಗೆ ಮೋಸ ಮಾಡಿದ್ದಾರೆ ಎಂಬುದು ಅರಿವಾಯಿತು. ಬ್ರಾಹ್ಮಣರ ಮಾತು ಸುಳ್ಳಾಗದು ಎಂದು ತಿಳಿದು ಒಳಗೊಳಗೇ ಪರಿತಪಿಸುವಂತಾಯಿತು. ಆದರೂ ದುಡುಕದೆ ಚಂದ್ರಹಾಸನನ್ನು ಹೊರನೋಟಕ್ಕೆ ಪ್ರೀತಿ, ವಿಶ್ವಾಸದಿಂದ ಕಂಡು, ಚಂದನಾವತಿಗೆ ಕಳುಹಿಸಿಕೊಟ್ಟ. ಒಂದೆರಡು ವಾರಗಳ ನಂತರ ತಾನೇ ಚಂದನಾವತಿಗೆ ಬಂದ. ಚಂದ್ರಹಾಸನನ್ನು ಏಕಾಂತದಲ್ಲಿ ಕರೆದು ಒಂದು ರಹಸ್ಯ ಪತ್ರವನ್ನು ಅವನ ಕೈಯಲ್ಲಿಟ್ಟು ಹೇಳಿದ. 'ಚಂದ್ರಹಾಸ ಇದರಲ್ಲಿ ತುಂಬಾ ಗುಟ್ಟಾದ ವಿಷಯವಿದೆ. ಇದನ್ನು ಬೇರೆ ಯಾರಿಗೂ ತಲುಪಿಸದೆ ನನ್ನ ಮಗನಾದ ಮದನನಿಗೆ ತಲುಪಿಸು. ಈಗಲೇ ಹೋಗಿ ಮಾರುತ್ತರವನ್ನು ತೆಗೆದುಕೊಂಡು ಬಾ' ಈ ಪತ್ರದಲ್ಲಿ ಹೀಗೆ ಬರೆದಿತ್ತು. "ಮದನಕುಮಾರ, ಈ ಕಾಗದವನ್ನು ತಂದಿರುವವನು ಮುಂದೆ ನಮ್ಮ ದೇಶದ ರಾಜನಾಗುವವನು. ಇವನಿಗೆ ವಿಷವನ್ನು ಕೊಡು".

ಚಂದ್ರಹಾಸ ಹಸುವಿನಂತಹ ಮನುಷ್ಯ. ಅವನು ನಡೆದು ಕುಂತಲಪುರವನ್ನು ತಲುಪಿದ. ಆಗ ವೇಳೆ ಮಧ್ಯಾಹ್ನವಾಗಿತ್ತು. ಅಲ್ಲಿಯೇ ಉದ್ಯಾನವನದಲ್ಲಿ ವಿಹರಿಸಿ, ಕೊಂಚ ವಿಶ್ರಾಂತಿಯನ್ನು ತೆಗೆದುಕೊಳ್ಳಲು ದೊಡ್ಡ ಮರದಡಿ ಮಲಗಿಬಿಟ್ಟ. ಚೆನ್ನಾಗಿ ನಿದ್ರೆ ಬಂದುಬಿಟ್ಟಿತು. ಅದೇ ವೇಳೆಗೆ ಅಲ್ಲಿಗೆ ಮಂತ್ರಿಯ ಮಗಳು ವಿಷಯೆ ತನ್ನ ಸ್ನೇಹಿತೆಯರ ಜೊತೆ ಉದ್ಯಾನವನಕ್ಕೆ ಬಂದಳು. ಮರದಡಿ ಮಲಗಿದ್ದ ಚಂದ್ರಹಾಸನ ಮುದ್ದು ಮುಖವನ್ನು ಕಂಡು ಮೋಹಪರವಶಳಾದಳು. ಹಾಗೆಯೇ ಅವನ ಬಳಿ ಸ್ವಲ್ಪ ಕಾಲ ಕುಳಿತಳು. ಕಂಚುಕದಲ್ಲಿ ಪತ್ರ ಕಾಣಿಸಿತು. ಮೆಲ್ಲಗೆ ತೆಗೆದು, ಓದಿಕೊಂಡಳು. ತಂದೆಯ ಪತ್ರವೆಂದು ತಿಳಿದು ಬೆಚ್ಚಿದಳು !!!. ಹೇಗಾದರೂ ಇವನನ್ನು ಪ್ರಾಣಾಪಾಯದಿಂದ ಪಾರು ಮಾಡಿ, ತನ್ನ ಪ್ರಾಣೇಶ್ವರನನ್ನಾಗಿ ಮಾಡಿಕೊಳ್ಳಬೇಕೆಂದು ಬಯಸಿದಳು. ಹಾಗೆಯೇ ತುಂಬಾ ಸಮಯ ಕುಳಿತು ಯೋಚಿಸಿ, ಒಂದು ಉಪಾಯವನ್ನು ಮಾಡಿದಳು. ಅಲ್ಲಿಯೇ ಇದ್ದ ಕಾಡಿಗೆ ಮರದಿಂದ ಕಡ್ಡಿಯನ್ನು ಮುರಿದು "ವಿಷ ಎಂದು ಇರುವ ಕಡೆ ವಿಷಯೆ" ಎಂದು ತಿದ್ದಿ ಬರೆದಳು. ಪತ್ರವನ್ನು ಮೊದಲಿನಂತೆ ಕಂಚುಕದಲ್ಲಿಟ್ಟು ಕಣ್ತುಂಬಾ ಚಂದ್ರಹಾಸನನ್ನು ನೋಡಿ ತನ್ನ ಸಖಿಯ ಜೊತೆ ತೆರಳಿದಳು.

ಚಂದ್ರಹಾಸನು ಎದ್ದಾಗ ಸಂಜೆಯ ವೇಳೆ ಆಗಿತ್ತು. 'ಅಯ್ಯೋ, ಎಷ್ಟೊಂದು ಸಮಯ ಮಲಗಿಬಿಟ್ಟೆನಲ್ಲಾ' ಎಂದು ಉದ್ಗರಿಸಿ ಸರಸರನೆ ಮಂತ್ರಿಯ ಮನೆಗೆ ಹೋದನು. ಮದನಕುಮಾರನಿಗೆ ಗೌರವದಿಂದ ನಮಸ್ಕರಿಸಿ, ಮಂತ್ರಿಯು ಕೊಟ್ಟ ಪತ್ರವನ್ನು ಕೊಟ್ಟನು. ತಂದೆಯ ಪತ್ರದ ಒಕ್ಕಣೆಯಂತೆ ಮುಂದೆ ನಿಂತು ತನ್ನ ತಂಗಿ ವಿಷಯೆಯನ್ನು ಕೊಟ್ಟು ವಿವಾಹ ಮಾಡಿದ. ಪುರಕ್ಕೆ ಹಿಂದಿರುಗಿ ಬಂದ ಮಂತ್ರಿಗೆ ದುರ್ವಿಧಿ ತನ್ನನ್ನು ಅಣಕಿಸುತ್ತಿರುವುದನ್ನು ಕಂಡು ಮನದಲ್ಲಿಯೇ ಕನಲತೊಡಗಿದ. ಕುಂತಳಪುರದ ರಾಜನಿಗೆ ಚಂದ್ರಹಾಸನ ಸರಳ ಗುಣ ಮೆಚ್ಚಿಗೆಯಾಯಿತು. ಅವನ ಸೌಜನ್ಯದ ಸ್ವಭಾವವನ್ನು ಕಂಡು ತನ್ನ ಮಗಳಾದ ರಾಜಕುಮಾರಿ ಚಂಪಕಮಾಲಿ ಯನ್ನು ಅವನಿಗೆ ಕೊಟ್ಟು ವಿವಾಹ ಮಾಡಲು ನಿಶ್ಚಯಿಸಿದ. ರಾಜನು ಮಂತ್ರಿಯ ಮಗ ಮದನಕುಮಾರನನ್ನುಕರೆಯಿಸಿ, ತನ್ನ ನಿರ್ಧಾರವನ್ನು ತಿಳಿಸಿದ. ಮದನನಿಗೆ ತುಂಬಾ ಸಂತೋಷವಾಯಿತು. ಇದೇ ವೇಳೆಗೆ ದುಷ್ಟಬುದ್ಧಿ ಚಂದ್ರಹಾಸನನ್ನು ಕರೆದು "ಚಂದ್ರಹಾಸ, ಮದುವೆಯ ನಂತರ ನೀನು ಪೂಜಾ ಸಾಮಗ್ರಿಯೊಂದಿಗೆ ಚಂಡಿಕಾ ದೇವಾಲಯಕ್ಕೆ ಹೋಗಿ, ಪೂಜೆ ಮಾಡಿಕೊಂಡು ಬರಬೇಕು, ಈಗಲೇ ಹೋಗಿ ದೇವತಾ ಕಾರ್ಯವನ್ನು ಮುಗಿಸಿಕೊಂಡು ಬಾ".

ದೈವಭಕ್ತನಾದ ಚಂದ್ರಹಾಸ ಬೇಗ ಬೇಗ ಅಲ್ಲಿಗೆ ಹೊರಟ. ರಾಜನ ಸಂದೇಶದಂತೆ ಮದನ ದಾರಿಯಲ್ಲೇ ಪೂಜೆಗೆ ಹೊರಟಿದ್ದ ಚಂದ್ರಹಾಸನನ್ನು ಎದುರುಗೊಂಡ. ಅವನನ್ನು ರಾಜ್ಯಕಾರ್ಯ ನಿಮಿತ್ತ ಅರಮನೆಗೆ ಕಳುಹಿಸಿ, ತಾನೇ ಪೂಜಾ ಸಾಮಾಗ್ರಿಯೊಂದಿಗೆ ದೇವಾಲಯದ ಕಡೆ ಹೊರಟ. ದುಷ್ಟಬುದ್ಧಿ ಕಟುಕರನ್ನು ಅಲ್ಲಿಗೇ ಮೊದಲೇ ಕಳುಹಿಸಿ, "ರಾಜೋಹಿತ ಉಡುಪಿನಲ್ಲಿ ಪೂಜೆಗೆ ಸಂಜೆಯ ವೇಳೆಗೆ ಬರುವವರನ್ನುನಿರ್ದಾಕ್ಷಿಣ್ಯವಾಗಿ ಕಡಿದು ಹಾಕಿ" ಎಂದು ಕಟ್ಟಪ್ಪಣೆ ಮಾಡಿದ್ದ. ಆತುರದ ಬುದ್ಧಿಯ ಕಟುಕರು ಸತ್ಯಾಂಶವನ್ನು ಅರಿಯದೆ ಪೂಜೆಗೆ ಬಂದ ಮದನನನ್ನೇ ಕಡಿದು ಹಾಕಿದರು.

ಚಂದ್ರಹಾಸ ದಾರಿಯಲ್ಲಿ ಬರುತ್ತಿದ್ದಾಗ ದುಷ್ಟಬುದ್ಧಿಯನ್ನು ಕಂಡು, ಆನೆಯನ್ನು ನಿಲ್ಲಿಸಿ, ಅಂಬಾರಿಯಿಂದ ಕೆಳಗಿಳಿದು ಬಂದು, ಮಾವನಿಗೆ ಭಕ್ತಿಯಿಂದ ನಮಸ್ಕರಿಸಿದ. ಗಾಬರಿ ಹಾಗೂ ಭಯಗ್ರಸ್ತನಾದ ಮಂತ್ರಿ ದುಷ್ಟಬುದ್ಧಿ ಆಗಲೂ ದುರುಳತನದಿಂದಲೇ ಪ್ರಶ್ನಿಸಿದ. "ಚಂದ್ರಹಾಸ, ನೀನು ಚಂಡಿಕಾ ದೇವಾಲಯಕ್ಕೆ ಹೋಗಲಿಲ್ಲವಾ?" ಚಂದ್ರಹಾಸ ಮಂದಹಾಸದೊಂದಿಗೆ ಹೇಳಿದ. "ಇಲ್ಲ ರಾಜಕಾರ್ಯಕ್ಕೆಂದು ಮದನನೇ ನನ್ನನ್ನು ಅರಮನೆಗೆ ಕಳುಹಿಸಿ, ತಾನೇ ಪೂಜಾ ಸಾಮಾಗ್ರಿಯೊಂದಿಗೆ ದೇವಾಲಯಕ್ಕೆ ಹೋದ". ತಾನೊಂದು ಬಗೆದರೆ ದೈವವೊಂದು ಬಗೆಯುವುದರ ಸತ್ಯ-ಸತ್ವ ಈಗ ದುಷ್ಟಬುದ್ಧಿಗೆ ಪೂರ್ಣರೂಪದಲ್ಲಿ ಅರಿವಾಯಿತು. ಯಾರಿಗೂ ಹೇಳದೆ-ಕೇಳದೆ ಚಂಡಿಕಾ ದೇವಾಲಯದ ಕಡೆ ಧಾವಿಸಿದ. ದೇಗುಲದ ಮುಂದೆ ಮಗನ ದೇಹ ಎರಡು ಭಾಗವಾಗಿ ಬಿದ್ದಿರುವುದನ್ನು ಕಂಡು, ಹುಚ್ಚನಂತೆ ರೋಧಿಸಿತೊಡಗಿದ. ಮರುದಿನ ಸುದ್ಧಿ ಕಾಳ್ಗಿಚ್ಚಿನಂತೆಎಲ್ಲೆಲ್ಲೂ ಹರಡಿತು. ಚಂದ್ರಹಾಸನಿಗಂತೂ ತನ್ನಿಂದಲೇ ಆದ ಪ್ರಮಾದಕ್ಕಾಗಿ ಹಿಡಿಸಲಾರದಷ್ಟು ದುಃಖ ಆಯಿತು. ದುಃಖಾತಿರೇಕದಲ್ಲಿಯೇ ದೇಗುಲದ ಬಳಿ ಬಂದ. ಮದನಕುಮಾರನ ಶವದ ಮೇಲೆ ಬಿದ್ದು ಹೊರಳಾಡಿದ. ಭಕ್ತಿಯಿಂದ ದೇವರನ್ನು ಮದನನಿಗೆ ಜೀವ ಕೊಡಲು ಪ್ರಾರ್ಥಿಸಿದ. ಭಕ್ತನ ಅಂತರಾಳದ ಭಕ್ತಿಯ ಕೂಗು ಕೇಳಿ, ಭಗವಂತ ಪ್ರತ್ಯಕ್ಷನಾಗಿ ಮದನನಿಗೆ ಜೀವದಾನ ಮಾಡಿ ಅಂತರ್ಧಾನನಾದ. ರುಂಡ-ಮುಂಡಗಳು ತಾವೇ ತಾವಾಗಿ ಸೇರಿಕೊಂಡವು. ನಿದ್ದೆಯಿಂದೆದ್ದವನಂತೆ ಮದನ ಎದ್ದು ಕುಳಿತ. ಸುತ್ತಲೂ ಜನ ನೆರೆದಿರುವುದನ್ನು ಕಂಡು ದುಷ್ಟಬುದ್ಧಿಗೆ ಅಪಾರ ಆನಂದ ಆಯಿತು. ಚಂದ್ರಹಾಸನನ್ನು ಆದರದಿಂದ ಅಪ್ಪಿ, ಕ್ಷಮೆ ಯಾಚಿಸಿದ. ಚಂದ್ರಹಾಸನು ರಾಜಕುಮಾರಿ ಚಂಪಕಮಾಲಿ ಹಾಗು ಮಂತ್ರಿ ದುಷ್ಟಬುದ್ಧಿ ಮಗಳಾದ ವಿಷಯೆ ಯನ್ನು ವಿವಾಹವಾಗಿ ಸಂತೋಷದಿಂದ ರಾಜ್ಯ ಭಾರವನ್ನು ಮಾಡಿದ.