ಭಾಗವತ ಕಥೆಗಳು

ಯಕ್ಷನ ಪ್ರಶ್ನೆಗಳು ಧರ್ಮರಾಜನಿಗೆ ಪಗಡೆ ಆಟವೆಂದರೆ ಮೊದಲಿಂದಲೂ ಆಸಕ್ತಿ. ಇದು ಕೌರವರಿಗೂ ಗೊತ್ತಿತ್ತು. ಕೌರವರ ಮಾವನಾದ ಶಕುನಿ ಪಾಂಡವರ ನಿರ್ಮೂಲನಕ್ಕೆ ಪಗಡೆ ಆಟ ಒಂದು ಸುಲಭೋಪಾಯ ಎಂದು ಬಗೆದು, ಧರ್ಮರಾಯನನ್ನು ಪಗಡೆ ಆಟಕ್ಕೆಂದು ಆಹ್ವಾನಿಸಿದ. ಧರ್ಮರಾಜ ಕಪಟವೆಂಬುದನ್ನು ಅರಿತವನಲ್ಲ. ಆಹ್ವಾನವನ್ನು ಸಮ್ಮತಿಸಿ ಆಡಲು ಕೌರವರಾಜನ ಆಸ್ಥಾನಕ್ಕೆ ಹೋದ. ದುರ್ಯೋಧನನಿಗೂ ಧರ್ಮರಾಜನಿಗೂ ನಡೆದ ಈ ಕಪಟ ದ್ಯೂತದಲ್ಲಿ ಧರ್ಮರಾಜ ತನ್ನ ರಾಜ್ಯ ಹಾಗೂ ಮಡದಿಯಾದ ಪಾಂಚಾಲಿಯನ್ನೂ ಕಳೆದುಕೊಂಡ. ಪಂದ್ಯಕ್ಕೆ ಒಡ್ಡಿದ ಮಾತಿನಂತೆ ರಾಜ್ಯವನ್ನು ಕಳೆದುಕೊಂಡು ತಮ್ಮಂದಿರೊಂದಿಗೆ ಅಡವಿಪಾಲಾದ. ಕಲ್ಲು-ಮುಳ್ಳುಗಳನ್ನು ತುಳಿಯುತ್ತಾ, ಮಳೆ-ಬಿಸಿಲು ಗಾಳಿಗಳನ್ನು ಸಹಿಸುತ್ತಾ ವರ್ಷಗಟ್ಟಲೆ ಅಡವಿಯಲ್ಲಿ ಅಲೆಯುತ್ತಿದ್ದರು. ಒಂದು ದಿನ ಬಿಸಿಲಿನ ಬೇಗೆ ಬಲವಾಗಿತ್ತು. ಪಾಂಡವರು ಒಂದು ಮರದ ಕೆಳಗೆ ಕುಳಿತು ಮುಂದಿನ ಮಾರ್ಗಕ್ಕಾಗಿ ಆಲೋಚಿಸುತ್ತಿದ್ದರು. ಅಷ್ಟರಲ್ಲಿ ಒಬ್ಬ ಬ್ರಾಹ್ಮಣ ಮೇಲುಸಿರು ಬಿಡುತ್ತಾ ಗಾಬರಿ ಹಾಗೂ ಭಯದೊಂದಿಗೆ ಅವರನ್ನು ಸಮೀಪಿಸಿ ಅಂಗಲಾಚಿ ಹೇಳಿಕೊಂಡ: “ಅಯ್ಯಯ್ಯೋ! ಯಾಗಕ್ಕೆಂದು ಇಟ್ಟಿದ್ದ ಅರಣಿಯನ್ನು ಜಿಂಕೆಯೊಂದು ಬಂದು ತನ್ನ ಕೊಂಬಿನಲ್ಲಿ ಸಿಕ್ಕಿಸಿಕೊಂಡು ಓಡಿಹೋಗುತ್ತಿದೆ. ದಯವಿಟ್ಟು ನೀವು ಯಾರಾದರೂ ಅದನ್ನು ತಂದುಕೊಡಿ.”

ಪಾಂಡವರು ಮೊದಲೇ ಕ್ಷತ್ರಿಯರು. ಅದರಲ್ಲೂ ಪ್ರಜೆಗಳಿಗೆ ಏನೇ ತೊಂದರೆಯಾದರೂ ಸಹಿಸರು. ಐದು ಮಂದಿ ಜಿಂಕೆ ಹೋದ ದಿಕ್ಕಿನಲ್ಲಿಯೇ ಬಿಲ್ಲು-ಬಾಣ ಹಿಡಿದು ಧಾವಿಸಿದರು. ಅವರು ಒಂದು ನಿರ್ಜನ ಪ್ರದೇಶದ ದಟ್ಟವಾದ ಕಾಡಿನ ಮುದ್ದೆಯನ್ನು ತಲುಪಿದ್ದರು. ಬಾಯಾರಿಕೆಯಿಂದ ತುಟಿ-ನಾಲಿಗೆ ಒಣಗಿಹೋಗಿತ್ತು. ಧರ್ಮರಾಜ ನಕುಲನಿಗೆ ಎಲ್ಲಾದರೂ ನೀರಿದ್ದರೆ ಹುಡುಕಿ ತರಲು ಹೇಳಿದ. ನಕುಲ ಕೊಂಚ ದೂರ ಆಯಾಸದಿಂದ ಕಾಲೆಳೆಯುತ್ತಾ ಕಾಡಿನಲ್ಲಿ ನುಸುಳಿದ. ಎಲ್ಲೂ ನೀರು ಕಾಣಲಿಲ್ಲ. ಮರವೊಂದರ ಮೇಲೆ ನಿಂತು ಸುತ್ತಲೂ ನೋಡಿದ. ದೂರದಲ್ಲಿ ನೀರು ಹಕ್ಕಿಗಳು ಹಾಗೂ ನೀರಿನ ಮೇಲೆ ಬೆಳೆಯುವ ಹುಲ್ಲು ಕಾಣಿಸಿತು. ಥಟ್ಟನೆ ಇಳಿದು ಅತ್ತ ಹೆಜ್ಜೆ ಹರಿಸಿದ. ಅಲ್ಲೊಂದು ಸುಂದರವಾದ ಕೊಳ. ಪನ್ನೀರಿನಂತಹ ನೀರು, ಮೊದಲೇ ಬಾಯಾರಿದ್ದ ನಕುಲ ಕೊಳದ ಮೆಟ್ಟಿಲುಗಳನ್ನು ಸರಸರನೆ ಇಳಿಯತೊಡಗಿದ. ಥಟ್ಟನೆ ಧ್ವನಿಯೊಂದು ಕೇಳಿಸಿತು: “ನಿಲ್ಲು! ಈ ಕೊಳ ನನ್ನದು. ಮೊದಲು ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಆಮೇಲೆ ನೀರು ಕುಡಿ.” ನಕುಲ ಅಚ್ಚರಿಯಿಂದ ಸುತ್ತಲೂ ಕಣ್ಣರಳಿಸಿದ. ಯಾರೂ ಕಾಣಲಿಲ್ಲ. ಏನು ವಿಚಿತ್ರವೆಂದು ಮತ್ತೆ ಹಲವು ಮೆಟ್ಟಿಲುಗಳು ಕೆಳಗಿಳಿಯತೊಡಗಿದ. ಆಗಲೂ ಅದೇ ಧ್ವನಿ ಕೇಳಿಸಿತು: “ಉತ್ತರ ಕೊಡದೆ ನೀರು ಕುಡಿದರೆ ಪ್ರಾಣವನ್ನೇ ಕಳೆದುಕೊಳ್ಳಬೇಕಾದೀತು.”

ತುಂಬಾ ಬಾಯಾರಿದ್ದ ನಕುಲ ಈ ಮಾತುಗಳು ಯಾವುದನ್ನೂ ಲೆಕ್ಕಿಸದೆ ಕೊಳದ ನೀರಿಗಿಳಿದು ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡ ಒಮ್ಮೆ ಗುಟುಕರಿಸುತ್ತಿದ್ದಂತೆಯೇ ಕೊನೆಯ ಮೆಟ್ಟಿಲಿನ ಬಳಿ ಮೂರ್ಛೆ ತಪ್ಪಿ ಬಿದ್ದ. ಎಷ್ಟೇ ಹೊತ್ತಾದರೂ ನಕುಲ ಹಿಂದಿರುಗದಿದ್ದನ್ನು ಕಂಡು ಪಾಂಡವರಿಗೆ ಅಸಮಾಧಾನವಾಯಿತು. ಏನಾದರೂ ಅಪಾಯ ಸಂಭವಿಸಿರಬಹುದೇ ಎಂದುಕೊಂಡು ಧರ್ಮರಾಯ ಸಹದೇವನನ್ನು ಕಳುಹಿಸಿದ. ಕಾಡಿನಲ್ಲಿ ಸುತ್ತಾಡುತ್ತಾ ಅವನೂ ಕೊಳದ ಬಳಿ ಬಂದ. ನಕುಲನನ್ನು ನೋಡಿದ. ಕೊಳದ ಕೊನೆಯ ಮೆಟ್ಟಿಲಿನ ಮೇಲೆ ಜ್ಞಾನ ತಪ್ಪಿ ಬಿದ್ದಿರುವುದನ್ನು ಕಂಡು ಗಾಬರಿಗೊಂಡ. ಆದರೂ ತುಂಬಾ ಬಾಯಾರಿದ್ದುದರಿಂದ ಮೊದಲು ನೀರು ಕುಡಿದು ಆಮೇಲೆ ಆಲೋಚಿಸಲು ಇಚ್ಛಿಸಿ ನೀರಿಗೆ ಕೈ ಹಾಕಿದ. ಹಾಕುತ್ತಿದಂತೆ ಅದೇ ಧ್ವನಿ, ಅದೇ ಮಾತು ಕೇಳಿಸಿತು. ಇದೇನು ಅದ್ಭುತವೆಂದುಕೊಂಡೇ ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡು ಕುಡಿಯತೊಡಗಿದ. ಕುಡಿಯುತ್ತಿದ್ದಂತೆ ಅವನು ಮೆಟ್ಟಲ ಮೇಲೆ ಪ್ರಜ್ಞೆ ತಪ್ಪಿ ಬಿದ್ದ. ಸಹದೇವನೂ ಹಿಂದಕ್ಕೆ ಬಾರದುದನ್ನು ಕಂಡು ಮತ್ತಷ್ಟು ಗಾಬರಿಯಿಂದ ಧರ್ಮರಾಜ ಅರ್ಜುನನನ್ನು ಕಳುಹಿಸಿದ. ಅವನ ಸ್ಥಿತಿಯೂ ನಕುಲ-ಸಹದೇವರ ಸ್ಥಿತಿಯಂತೆಯೇ ಆಯಿತು. ಕೆಲಕಾಲದ ನಂತರ ಧರ್ಮರಾಯನ ಅಪ್ಪಣೆಯಂತೆ ಭೀಮ ಬಂದ. ತಮ್ಮಂದಿರಿಗೊದಗಿದ ದುಸ್ಥಿತಿಯನ್ನು ಕಂಡು ತುಂಬಾ ಕೋಪ ಬಂತು. ಅವನಿಗೂ ತುಂಬಾ ಬಾಯಾರಿಕೆ ಆಗಿತ್ತು. ನೀರು ಕುಡಿಯಲು ಹೋದಾಗ ಅವನನ್ನೂ ಆ ಧ್ವನಿ ಎಚ್ಚರಿಸಿತು. ಲಕ್ಷಿಸದೆ ನೀರು ಕುಡಿದುದರ ಪರಿಣಾಮವಾಗಿ ಅವನೂ ಮೆಟ್ಟಿಲ ಮೇಲೆ ಮೂವರೂ ತಮ್ಮಂದಿರ ಬಳಿಯೆ ಪ್ರಜ್ಞೆ ತಪ್ಪಿ ಬಿದ್ದ.

ಈಗ ಧರ್ಮರಾಯನಿಗೆ ತುಂಬಾ ಸಂದೇಹವಾಯಿತು. ಭಯವೂ ನೂರ್ಮಡಿಸಿತು. ಏನು ವಿಪತ್ತು ಒದಗಿರಬಹುದೋ ಎಂದು ಶಂಕಿಸುತ್ತಾ ತಮ್ಮಂದಿರು ನಡೆದು ಬಂದ ದಾರಿಯಲ್ಲೇ ಬೇಗ ಬೇಗ ಬಂದು ಕೊಳವನ್ನು ಸಮೀಪಿಸಿದ. ಕೊಳದ ಕೊನೆಯ ಮೆಟ್ಟಿಲಿನ ಮೇಲೆ ನಾಲ್ವರು ತಮ್ಮಂದಿರೂ, ಮೃತಪ್ರಾಯರಂತೆ ಮಲಗಿರುವುದನ್ನು ಕಂಡು ಬೆಚ್ಚಿದ. ಆದರೆ ಧೈರ್ಯ ಕಳೆದುಕೊಳ್ಳದೆ ಹೀಗಾಗಲು ಏನು ಕಾರಣವಿರಬಹುದೆಂದು ಯೋಚಿಸತೊಡಗಿದ. ಏನೂ ಹೊಳೆಯಲಿಲ್ಲ. ನೀರು ಕುಡಿದು ಬಾಯಾರಿಕೆ ನೀಗಿಸಿಕೊಂಡು ಆಲೋಚಿಸಲು ಯೋಚಿಸಿ, ಕೊಳದ ನೀರಿಗೆ ಕೈ ಹಾಕಿದ, ಕೈ ಹಾಕುತ್ತಿದ್ದಂತೆ ಮತ್ತೆ ಅದೇ ಧ್ವನಿ ಕೇಳಿಸಿತು. ಇದೆಲ್ಲಿಯ ಧ್ವನಿ ಎಂದು ಸುತ್ತಲೂ ನೋಡಿದ-ಯಾರೂ ಕಾಣಿಸಲಿಲ್ಲ. ಧ್ವನಿ ಮಾತ್ರ ಕೇಳಿಬರುತ್ತಿತ್ತು: “ಈ ಕೊಳ ನನ್ನದು! ನೀರು ಕುಡಿಯುವ ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು, ಇಲ್ಲವೇ ಮೂರ್ಖರಾದ ನಿನ್ನ ತಮ್ಮಂದಿರಂತೆ ನೀನೂ ಮೃತ್ಯುವನ್ನು ಅಪ್ಪಬೇಡ.” ಧರ್ಮರಾಜ ಯೋಚಿಸಿದ: “ಹೀಗೆ ರೂಪ ತೋರಿಸದೆ ಮಾತಾಡುವವರು ಯಕ್ಷರು ಮಾತ್ರ. ಈ ಧ್ವನಿಯೂ ಯಕ್ಷನದೇ ಇರಬೇಕು. ಇವರ ಬಳಿ ದುಡುಕಿ ಏನನ್ನೂ ಮಾಡಬಾರದು ಎಂದುಕೊಂಡು ವಿನಯದಿಂದ ಕೇಳಿದ: “ಸರಿ, ನಿಮ್ಮ ಪ್ರಶ್ನೆಗಳನ್ನು ಕೇಳಿ, ನಾನು ತಿಳಿದಿರುವ ಮಟ್ಟಿಗೆ ಉತ್ತರಗಳನ್ನು ಕೊಡಲು ಸಿದ್ಧನಿದ್ದೇನೆ.”

ನಿಜಕ್ಕೂ ಆ ಧ್ವನಿಯು ಯಕ್ಷನದೇ ಆಗಿತ್ತು. ಅವನು ಧರ್ಮರಾಜನ ದೂರಾಲೋಚನೆ ಹಾಗೂ ಬುದ್ಧಿಶಕ್ತಿಯನ್ನು ಮನದಲ್ಲಿಯೇ ಮೆಚ್ಚಿಕೊಳ್ಳುತ್ತಾ ಕೇಳಿದ: “ಭೂಮಿಗಿಂತಾ ದೊಡ್ಡ ವಸ್ತು ಯಾವುದು? ಆಕಾಶಕ್ಕಿಂತ ಉನ್ನತ ವಸ್ತು ಏನು?” ಧರ್ಮರಾಜ ಥಟ್ಟನೆ ಉತ್ತರ ಕೊಟ್ಟ: “ಭೂಮಿಗಿಂತ ಉನ್ನತ ವಸ್ತು ತಾಯಿ, ಆಕಾಶಕ್ಕಿಂತ ಉನ್ನತವಾದವನು ತಂದೆ.” ಧರ್ಮರಾಯನ ಉತ್ತರದಿಂದ ಸಮಾಧಾನಗೊಂಡ ಯಕ್ಷ ಮರುಪ್ರಶ್ನಿಸಿದ: “ಗಾಳಿಗಿಂತ ವೇಗವಾದುದು ಯಾವುದು? ಮಾನವನನ್ನು ಬಹಳಷ್ಟು ಕಾಡುವುದು ಏನು?” ಧರ್ಮರಾಯ ನೀರು ಕುಡಿಯುವಷ್ಟು ಸುಲಭವಾಗಿಯೇ ಉತ್ತರಕೊಟ್ಟ: “ಗಾಳಿಗಿಂತ ವೇಗವಾದುದು ಮನಸ್ಸು, ಮಾನವನನ್ನು ಬಹಳಷ್ಟು ಕಾಡುವುದು ಚಿಂತೆ.” ಮತ್ತಷ್ಟು ಸಂತೃಪ್ತನಾದ ಯಕ್ಷ ಮರುಪ್ರಶ್ನಿಸಿದ: “ಯಶಸ್ಸು ದೊರೆಯುವುದು ಯಾವುದರಿಂದ? ಸ್ವರ್ಗ ಪ್ರಾಪ್ತಿ ಯಾವುದರಿಂದ?” “ದಾನದಿಂದ ಯಶಸ್ಸು, ಸತ್ಯಮಾರ್ಗದಿಂದಲೇ ಸ್ವರ್ಗ” ಧರ್ಮರಾಯನು ಮಿಂಚಿನಂತೆ ನುಡಿದ. “ಉತ್ತಮವಾದ ಧನ ಯಾವುದು? ಅತ್ಯುತ್ತಮ ಲಾಭ ಯಾವುದು? ಅತ್ಯುತ್ತಮ ಆನಂದ ಯಾವುದು?” ಯಕ್ಷ ನಾಲ್ಕನೆಯ ಪ್ರಶ್ನೆ ಕೇಳಿದ. “ವಿದ್ಯೆಯೇ ಉತ್ತಮವಾದ ಧನ. ಆರೋಗ್ಯ ಭಾಗ್ಯವೇ ಉತ್ತಮವಾದ ಲಾಭ. ತೃಪ್ತಿಗಿಂತ ಮಿಗಿಲಾದ ಆನಂದ ಇನ್ನೊಂದಿಲ್ಲ” ಎಂದು ಧರ್ಮರಾಜನು ಅಮೃತದಂತಹ ಮಾತಿನ ಉತ್ತರವನ್ನು ಕೊಟ್ಟ. “ನಿಂದ್ಯ ಯಾರು? ವಂದ್ಯ ಯಾರು?” ಯಕ್ಷನ ಕೊನೆಯದಾಗಿ ಪ್ರಶ್ನಿಸಿದ. “ಪರನಿಂದಕನೇ ನಿಂದ್ಯನು; ಪರಹಿತನೇ ವಂದ್ಯನು.” ಧರ್ಮರಾಯನ ಬಾಯಿಂದ ಮಾತಿನ ಮುತ್ತುಗಳು ಉದುರಿದವು. ಯಕ್ಷ ಧರ್ಮರಾಯನ ಮಾತುಗಳಿಂದ ಸಂತುಷ್ಟನಾದ, ಸಂತೋಷಗೊಂಡ, ಪ್ರೀತ್ಯಾದರದಿಂದ ಅವನನ್ನೇ ನೋಡುತ್ತಾ ಕೇಳಿದ: “ಧರ್ಮರಾಯ, ನಿನ್ನ ಉತ್ತರಗಳು ನನ್ನ ಹೃದಯಕ್ಕೆ ಅಮಿತ ಆನಂದವನ್ನುಂಟು ಮಾಡಿದೆ. ಪ್ರಜ್ಞೆ ತಪ್ಪಿರುವ ಈ ಸೋದರರಲ್ಲಿ ಯಾರಾದರೊಬ್ಬರನ್ನು ಬದುಕಿಸಲು ಇಚ್ಛಿಸುತ್ತೇನೆ, ಹೇಳು, ಯಾರನ್ನು ಬದುಕಿಸಲಿ?” ಇದೂ ಸಹ ಯಕ್ಷನ ಬುದ್ಧಿವಂತಿಕೆಯ ಪ್ರಶ್ನೆಯೇ ಆಗಿತ್ತು.

ಧರ್ಮರಾಯನೂ ಸಹ ಅಷ್ಟೇ ಅಸಾಧಾರಣ ಬುದ್ಧಿವಂತನೆನಿಸಿದ್ದ. ಅವನು ಯೋಚಿಸಿ ಹೇಳಿದ: “ನಕುಲನನ್ನು ಬದುಕಿಸಿ.” “ಏಕೆ ನಿನ್ನ ಒಡಹುಟ್ಟಿದ ತಮ್ಮಂದಿರಾದ ಭೀಮಾರ್ಜುನರ ಮೇಲೆ ನಿನಗೆ ಪ್ರೀತಿ ಇಲ್ಲವೇ?” ಧರ್ಮರಾಯ ಸಮಾಧಾನದಿಂದಲೇ ಯಕ್ಷನಿಗೆ ಉತ್ತರ ನೀಡಿದ: “ಹಾಗಲ್ಲ; ನನ್ನ ತಂದೆಗೆ ಇಬ್ಬರು ಪತ್ನಿಯರು. ಮೊದಲನೆಯವಳಾದ ಕುಂತಿಗೆ ನಾನು ಉಳಿದಿದ್ದೇನೆ, ಹಾಗೆಯೇ ಎರಡನೆಯವಳಾದ ಮಾದ್ರಿಯ ಮಕ್ಕಳಲ್ಲೂ ಒಬ್ಬನನ್ನು ಉಳಿಸಿಕೊಳ್ಳುವುದು ಧರ್ಮಸಮ್ಮತವಲ್ಲವೇ?” ಧರ್ಮರಾಜನ ಧರ್ಮರಹಸ್ಯವಾದ ಮಾತನ್ನು ಮೆಚ್ಚಿ ಯಕ್ಷ ತನ್ನ ನಿಜರೂಪವನ್ನು ತೋರಿಸಿ ಹೇಳಿದ: “ನಿನ್ನ ಬುದ್ಧಿಗೆ ಮೆಚ್ಚಿದ್ದೇನೆ; ನಕುಲನನ್ನೇ ಏನು, ಎಲ್ಲರನ್ನೂ ಉಳಿಸುತ್ತೇನೆ” ಎನ್ನುತ್ತಿದ್ದಂತೆ ಎಲ್ಲಾ ತಮ್ಮಂದಿರೂ ನಿದ್ದೆಯಿಂದ ಎದ್ದವರಂತೆ ಎದ್ದು ಕುಳಿತರು. ಯಕ್ಷ ಹೇಳಿದ: “ಧರ್ಮರಾಜ, ನಾನೇ ನಿನ್ನ ತಂದೆ ಯಮ. ನಿನ್ನನ್ನು ಪರೀಕ್ಷಿಸಲು ನಾನೇ ಜಿಂಕೆಯ ರೂಪದಲ್ಲಿ, ಯಕ್ಷನ ರೂಪದಲ್ಲಿ ಬಂದೆ, ನಿನ್ನ ಉತ್ತರಗಳಿಂದ ತುಂಬಾ ಸಂತೋಷಗೊಂಡಿದ್ದೇನೆ. ಕೇಳು, ಇನ್ನೊಂದು ವರ ಕೇಳು.” ಧರ್ಮರಾಜ ಏನೋ ನೆನಪಾದವನಂತೆ ಕೇಳಿದ: “ಹಾಗಾದರೆ ತಾವು ಜಿಂಕೆಯ ವೇಷದಲ್ಲಿ ತೆಗೆದುಕೊಂಡು ಹೋದ ಅರಣಿಯನ್ನು ಕೊಟ್ಟು ಬಿಡಿ. ಬ್ರಾಹ್ಮಣ ಅದಕ್ಕಾಗಿ ನಮ್ಮನ್ನೇ ಕಾಯುತ್ತಿರುತ್ತಾನೆ.” ಯಮ ಅರಣಿಯನ್ನೂ ಕೊಟ್ಟು ಅಂತರ್ಧಾನನಾದನು. ಧರ್ಮರಾಯನು ಅರಣಿಯನ್ನು ಪಡೆದು, ಬ್ರಾಹ್ಮಣನಿಗೆ ಕೊಡಲು, ತಮ್ಮಂದಿರೊಂದಿಗೆ ಬಂದ ದಾರಿಯಲ್ಲಿ ಹಿಂದಿರುಗಿದ.