ಭಾಗವತ ಕಥೆಗಳು

ವೃತ್ರಾಸುರ ದೇವತೆಗಳು, ದಾನವರು ಅಣ್ಣತಮ್ಮಂದಿರೇ, ಕಾರಣಾಂತರದಿಂದ ಈರ್ವರಲ್ಲೂ ದಾಯಾದಿ ಮಾತ್ಸರ್ಯ ವಂಶಾನುಕ್ರಮವಾಗಿ ವೃದ್ಧಿಸತೊಡಗಿತು. ದೇವತೆಗಳು ಒಂದು ರೀತಿಯಲ್ಲಿ ವಿಷ್ಣುಭಕ್ತರಾದರೆ, ಇನ್ನೊಂದು ರೀತಿಯಲ್ಲಿ ದಾನವರು ಶಿವಭಕ್ತರು. ವಿಷ್ಣು, ಶಿವ, ಬ್ರಹ್ಮ, ಈ ತ್ರಿಮೂರ್ತಿಗಳೂ ಒಬ್ಬರೇ ಎಂಬ ಬೃಹದ್ಭಾವನೆ ಇವರಲ್ಲೂ ಇರಲಿಲ್ಲ. ದೇವತೆಗಳಿಗೆ ಒಡೆಯ ದೇವೇಂದ್ರ. ದೇವಲೋಕದ ರಾಜಧಾನಿ ಅಮರಾವತಿ. ಅತಿ ವೈಭವೋಪೇತ ನಗರ. ಇಲ್ಲಿನ ಅರಮನೆಯಲ್ಲಿ ದೇವೇಂದ್ರ ತನ್ನ ಪರಿಜನರಾದ ದೇವತೆಗಳೊಡನೆ ಆಡಳಿತ ನಡೆಸುತ್ತಿದ್ದ. ಒಂದು ಬಾರಿ ದೇವಸಭೆಯಲ್ಲಿ ದೇವೇಂದ್ರ ತನ್ನ ವೈಭವದ ಮದದಿಂದ ಕಣ್ಣಿದ್ದೂ ಕುರುಡನಾಗಿ ಕುಳಿತಿದ್ದ. ಆ ಸಂದರ್ಭದಲ್ಲಿ ಗುರುಗಳಾದ ಬೃಹಸ್ಪತಾಚಾರ್ಯರು ಬಂದದ್ದೂ ಸಹ ಅವನಿಗೆ ಹೊಳೆಯಲಿಲ್ಲ. ಇದನ್ನು ಗಮನಿಸಿದ ಗುರುವರ್ಯರು ಬೇಸರದ ಬಾಧೆಯಿಂದ ದೇವತೆಗಳೆಲ್ಲರನ್ನೂ ತೊರೆದು ಹೊರಟುಹೋದರು.

ವಿಚಾರವನ್ನು ತಿಳಿದ ದೇವೇಂದ್ರ, ತನ್ನ ನಡವಳಿಕೆಗೆ ತಾನೇ ನಾಚಿದ. ಅವರ ಬಳಿ ಕ್ಷಮೆ ಯಾಚಿಸಲು ಅವರನ್ನು ಹುಡುಕಿಕೊಂಡು ಹೊರಟ. ದಿವ್ಯದೃಷ್ಟಿಯಿಂದ ಇದನ್ನರಿತ ಆಚಾರ್ಯರು ಕಣ್ಮರೆಯಾದರು. ದೇವತೆಗಳ ಗುರು ಬೃಹಸ್ಪತಿ ಇಲ್ಲದಿರುವುದನ್ನು ತಿಳಿದು, ದಾನವರ ದಂಡು ರಾಜಧಾನಿಯಾದ ಅಮರಾವತಿಯ ಮೇಲೆ ಮುತ್ತಿಗೆ ಹಾಕಿತು. ಗುರುಕೃಪೆ ಇಲ್ಲದ ದೇವತೆಗಳು ಈಗ ನೀರಿನಿಂದ ಹೊರಹಾಕಿದ ಮೀನುಗಳಂತಾದರು. ದಾನವರ ಆಕ್ರಮಣ ಅವರನ್ನು ದಿಕ್ಕುದೆಸೆ ಇಲ್ಲದಂತೆ ಮಾಡಿತು. ಎಲ್ಲರೂ ಭಯಾತುರದಿಂದ ದಿಕ್ಕೆಟ್ಟು ಬ್ರಹ್ಮನ ಬಳಿ ಬಂದು ಗೋಗರೆದರು. ಬ್ರಹ್ಮನಿಗೆ ದೇವತೆಗಳ ದಾರುಣ ದುಸ್ಥಿತಿಯನ್ನು ಕಂಡು, ಮರುಕ ಉಂಟಾಯಿತು. ಅವನು ಹೇಳಿದ: “ದೇವೇಂದ್ರ, ಇದು ನೀನೇ ಮಾಡಿಕೊಂಡಿರುವ ಸ್ವಯಂಕೃತಾಪರಾಧ. ಧನಬಲ, ಜನಬಲದ ಮದದಿಂದ, ನಿನ್ನ ಗುರುವರ್ಯರು ನಿನ್ನ ಬಳಿಗೆ ಆಗಮಿಸಿದರೂ, ನಿರ್ಲಕ್ಷ್ಯದಿಂದ ಅವರನ್ನು ಸ್ವಾಗತಿಸದಿದ್ದುದೇ ನಿನ್ನನ್ನು ಈ ಗತಿಗೆ ತಂದಿದೆ. ಈಗಲೂ ಅವರ ಬಳಿ ಸಾರಿ ಕ್ಷಮೆ ಕೋರು.” ದೇವೇಂದ್ರ ತನ್ನ ಎರಡೂ ಕೈಗಳನ್ನೂ, ಬ್ರಹ್ಮನ ಸಮ್ಮುಖದಲ್ಲಿ ದೈನ್ಯದೊಂದಿಗೆ ಜೋಡಿಸಿಕೊಂಡು ಪ್ರಾರ್ಥಿಸಿಕೊಂಡ: “ಆ ಕಾರ್ಯಕ್ಕಾಗಿಯೇ ತುಂಬಾ ಕಾಲಹರಣ ಮಾಡಿದೆ. ಅವರೆಲ್ಲೂ ಕಾಣುತ್ತಿಲ್ಲ. ಅವರ ಕೃಪೆ ನಮಗೆ ಇಲ್ಲದಂತಾಗಿರುವುದನ್ನು ಕಂಡು, ದಾನವರ ದಂಡು ನಮ್ಮನ್ನು ಬೆನ್ನಟ್ಟಿಸಿಕೊಂಡು ಬರುತ್ತಿದೆ.” ದೇವೇಂದ್ರನೊಂದಿಗೆ ದೇವತೆಗಳೆಲ್ಲರೂ ಭಯದಿಂದ ಬೆವತು ಗಾಬರಿಯಿಂದ ಗಡಗಡನೆ ನಡುಗತೊಡಗಿದರು.

ಬ್ರಹ್ಮನಿಗೆ ಅಯ್ಯೋ ಅನ್ನಿಸಿತು. ಅವನು ಸಲಹೆ ನೀಡಿದ: “ನೀವೆಲ್ಲರೂ ಈಗಲೇ ಕೃಷ್ಣನ ಮಗನಾದ ವಿಶ್ವರೂಪನ ಬಳಿ ಹೋಗಿ ಶರಣಾಗಿ, ಅವನ ಕೃಪೆ ನಿಮ್ಮನ್ನು ಈ ಸಂದರ್ಭದಲ್ಲಿ ಕಾಪಾಡುವುದು.” ಎಲ್ಲರೂ ಹಾಗೆಯೇ ಮಾಡಿದರು. ಮೊದಮೊದಲು ತನಗೆ ಅಂತಹ ಅರ್ಹತೆ ಇಲ್ಲವೆಂದು ಅಸಮ್ಮತಿಸಿದ. ಕಡೆಗೆ ಇವರೆಲ್ಲರ ಒತ್ತಾಯಕ್ಕೆ ಮಣಿದು, ಅವರೆಲ್ಲರ ರಾಜಪುರೋಹಿತನಾಗಿ ತಾತ್ಕಾಲಿಕವಾಗಿ ಇರಲು ವಿಶ್ವರೂಪ ಒಪ್ಪಿದ. ವಿಶ್ವರೂಪನೂ ಸಾಮಾನ್ಯನಲ್ಲ. ಪರಮ ವಿಷ್ಣುಭಕ್ತ ದೇವೇಂದ್ರನಿಗೆ ನಾರಾಯಣ ಕವಚ ಮಂತ್ರವನ್ನು ಉಪದೇಶಿಸಿದ. ಇದರ ಬಲದಿಂದ ದಾನವರನ್ನು ಗೆದ್ದು, ಅಮರಾವತಿಗೆ ತನ್ನ ಪರಿವಾರದವರೆಲ್ಲರೊಂದಿಗೆ ಹಿಂದಿರುಗಿದ. ವಿಶ್ವರೂಪನ ನೇತೃತ್ವದಲ್ಲಿಯೇ ಒಂದೆರಡು ಯಾಗಗಳನ್ನು ದೇವೇಂದ್ರ ಮಾಡಿ ಮುಗಿಸಿದ. ಈ ಸಂದರ್ಭದಲ್ಲೂ ವಿಶ್ವರೂಪನು ತನ್ನ ತಾಯಿಯ ಕಡೆಯವರೆಂಬ ವಾತ್ಸಲ್ಯದಿಂದ ಹವಿರ್ಭಾಗವನ್ನು ದೇವತೆಗಳಿಗ್ಯಾರಿಗೂ ಅರಿವಾಗದ ರೀತಿಯಲ್ಲಿ ದಾನವರಿಗೆ ನೀಡಿದ. ವಿಚಾರ ದಿನಕ್ರಮೇಣ ದೇವೇಂದ್ರನಿಗೆ ತಿಳಿಯಿತು. ವಿಶ್ವರೂಪನ ಮೇಲೆ ತೀರದ ಕ್ರೋಧವೂ ಉಂಟಾಯಿತು. ಕ್ರೋಧದ ಭರದಲ್ಲಿ ವಿಶ್ವರೂಪನ ಮೇಲೆ ಬಿದ್ದು, ಅವನನ್ನು ಕೊಂದು ಮುಗಿಸಿದ. ಇದರಿಂದ ಬ್ರಹ್ಮಹತ್ಯೆಯ ದೋಷಕ್ಕೆ ಗುರಿ ಆದ. ಕೃಷ್ಣನಿಗೆ ಇಂದ್ರನು ತನ್ನ ಮಗನಾದ ವಿಶ್ವರೂಪವನ್ನು ಕೊಂದ ಸುದ್ದಿ ತಿಳಿಯಿತು. ದೇವೇಂದ್ರನ ಮೇಲೆ ಕೋಪ ಉಕ್ಕಿತು. ಇಂದ್ರನನ್ನೇ ಕೊಲ್ಲುವಂತಹ ಮಗನನ್ನು ಪಡೆಯಲು ಹೋಮ ಮಾಡತೊಡಗಿದ. ಹೋಮದ ಫಲವಾಗಿ ಒಂದು ಭಯಂಕರ ಸ್ವರೂಪ ಕಾಣಿಸಿಕೊಂಡಿತು. ಭೂಮ್ಯಾಕಾಶದ ಎತ್ತರಕ್ಕೆ ಬೆಳೆದು ನಿಂತಿತು. ದಶದಿಸೆಗಳೂ ಪ್ರತಿಧ್ವನಿಸುವ ರೀತಿಯಲ್ಲಿ ಗರ್ಜಿಸಿತು. ಈ ಮಗನನ್ನೇ ವೃತ್ರ ಎಂದು ಕರೆದ. ವೃತ್ರಾಸುರನ ಉಪಟಲದಿಂದ ಮತ್ತೆ ದೇವತೆಗಳು ದಿಕ್ಕಾಪಾಲಾದರು. ಈಗ ದೇವೇಂದ್ರನನ್ನು ಮುಂದಿಟ್ಟುಕೊಂಡು, ವಿಷ್ಣುಪರಮಾತ್ಮನ ಬಳಿಗೆ ಧಾವಿಸಿದರು. ತಮ್ಮನ್ನು ಕಾಪಾಡಲು ಕಳಕಳಿಯಿಂದ ಪ್ರಾರ್ಥಿಸಿದರು. ವಿಷ್ಣು ಹೇಳಿದ: “ವೃತ್ರಾಸುರನು ಸಾಮಾನ್ಯನಲ್ಲ. ಅವನನ್ನು ಕೊಲ್ಲಲು ತ್ರಿಮೂರ್ತಿಗಳಿಂದಲೂ ಅಸಂಭವವೇ. ನೀವೆಲ್ಲರೂ ದಧೀಚಿ ಮುನಿಗಳ ಬಳಿಗೆ ಹೋಗಿ. ಆತನ ದೇಹದ ಮೂಳೆಗಳಿಂದ ಆಯುಧವನ್ನು ತಯಾರಿಸಿ ಆ ಆಯುಧದಿಂದ ಮಾತ್ರ ವೃತ್ರಾಸುರನನ್ನೂ, ಅವನ ಕಡೆಯವರನ್ನೂ ಕೊಲ್ಲಲು ಸಾಧ್ಯ ಆದೀತು.”

ಅಶ್ವಿನೀ ದೇವತೆಗಳ ಮಧ್ಯಸ್ಥಿಕೆಯಲ್ಲಿ ದೇವೇಂದ್ರ ದಧೀಚಿ ಮುನಿಯ ಬಳಿ ಬಂದ. ಅವರ ಬೆನ್ನು ಮೂಳೆಗಳನ್ನು ತಮ್ಮೆಲ್ಲರ ರಕ್ಷಣೆಗಾಗಿ ಪರಿಪರಿಯಾಗಿ ಯಾಚಿಸಿದ. ಪರೋಪಕಾರದ ಅರ್ಥವನ್ನು ಅರಿತಿದ್ದ ಅವನು ತಮ್ಮ ದೇಹತ್ಯಾಗ ಮಾಡಿದರು. ದೇವತೆಗಳು ಅಂತಹ ಮಹಾಪುರುಷನ ದೇಹದಿಂದ ಬೆನ್ನು ಮೂಳೆಗಳನ್ನು ಹೊರತೆಗೆದ, ಹರಿತವಾದ ಆಯುಧಗಳನ್ನು ತಯಾರಿಸಿದರು. ವೃತ್ರಾಸುರನ ಮೇಲೆ ದೇವತೆಗಳೆಲ್ಲರೂ ಇರುವೆಯ ಮೇಲೆ ಆನೆಗಳ ಹಿಂಡು ಬೀಳುವಂತೆ ಬಿದ್ದರು. ದೇವದಾನವರ ನಡುವೆ ತುಂಬಾ ದಿನಗಳ ಕಾಲ ಘೋರ ಯುದ್ಧ ನಡೆಯಿತು. ವೃತ್ರಾಸುರನು ತನ್ನ ಬಾಯನ್ನು ಅಗಲವಾಗಿ ತೆರೆದು, ದೇವೇಂದ್ರನನ್ನು ಅವನ ವಾಹನವಾದ ಐರಾವತ ಆನೆಯ ಸಮೇತ ನುಂಗಿ ಮುಗಿಸಿದ. ದೇವೇಂದ್ರ ದಧೀಚಿಯ ಬೆನ್ನು ಮೂಳೆಯಿಂದ ಮಾಡಿರುವ ಆಯುಧದಿಂದ ಅವನ ಹೊಟ್ಟೆಯನ್ನೇ ಸೀಳಿ ಹೊರಬಂದ. ಅವನ ಕೊರಳನ್ನು ಘಾಸಿಪಟ್ಟು ಕತ್ತರಿಸಿ ಹಾಕಿದ. ದೇವತೆಗಳೆಲ್ಲರೂ ಹಿರಿಹಿಗ್ಗಿದರು. ವೃತ್ರಾಸುರನ ಮರಣದಿಂದ ಇಂದ್ರನಿಗೆ ಮತ್ತೆ ಬ್ರಹ್ಮಹತ್ಯೆಯ ದೋಷ ಬಂತು. ಈ ದೋಷವು ಹೆಣ್ಣಿನ ರೂಪ ಧರಿಸಿ ಅವನನ್ನು ಅಟ್ಟಿಸಿಕೊಂಡು ಹೋಯಿತು. ಬೆಚ್ಚಿ ಬೆದರಿದ ಇಂದ್ರ ಮಾನಸ ಸರೋವರಕ್ಕೆ ಓಡಿಹೋದ. ಅದರಲ್ಲಿದ್ದ ಕಮಲದಳದ ನಳಿಕೆಯೊಂದರಲ್ಲಿ ಸೇರಿಕೊಂಡ. ತುಂಬಾ ದಿನಗಳ ಕಾಲ ಭಯದಿಂದ ಹೊರಬರಲೇ ಇಲ್ಲ. ಕಂಗೆಟ್ಟ ದೇವತೆಗಳು ಬ್ರಹ್ಮನ ಬಳಿಗೆ ಬಂದರು. ಎಲ್ಲರೂ ತಮ್ಮ ಒಡೆಯನನ್ನು ದೊರಕಿಸಿಕೊಡಲು ಪ್ರಾರ್ಥಿಸಿದರು. ಬ್ರಹ್ಮನೂ ವಿಷ್ಣುವಿನಂತೆ ದೇವತೆಗಳ ಪಕ್ಷಪಾತಿಯೇ. ಅವರೆಲ್ಲರೊಂದಿಗೆ ಮಾನಸ ಸರೋವರದ ಬಳಿಗೆ ಬಂದ. ದೇವೇಂದ್ರನಿಗೆ ಧೈರ್ಯ ಹೇಳಿ ಹೊರಕರೆದ. ಅವನಿಂದ ಅಶ್ವಮೇಧ ಯಾಗ ಮಾಡಿಸಿದ. ನಾರಾಯಣ ವ್ರತವನ್ನು ಸಾಂಗೋಪಾಂಗವಾಗಿ ಅವನಿಂದಲೇ ಮಾಡಿಸಿ, ಪೂರೈಸಿದ ಮೇಲೆ ಬ್ರಹ್ಮಹತ್ಯಾ ದೋಷದಿಂದ ಈಗ ದೇವೇಂದ್ರ ಪಾರಾದ. ಬ್ರಹ್ಮನು ಬೃಹಸ್ಪತಾಚಾರ್ಯರನ್ನೂ ಸಮಕ್ಷಮ ಕರೆಯಿಸಿ, ದೇವೇಂದ್ರನೊಂದಿಗೆ ರಾಜಿ ಮಾಡಿಸಿದ. ಮತ್ತೆ ಬೃಹಸ್ಪತಾಚಾರ್ಯರು ದೇವತೆಗಳ ರಾಜಪುರೋಹಿತರಾದರು.