ಉಪನಿಷತ್ತಿನ ಕಥೆಗಳು

ಉಪಕೋಸಲ ವೇದೋಪನಿಷತ್ತುಗಳ ಬಗ್ಗೆ ನಿಷ್ಣಾತರಾಗಿದ್ದವರು ನಮ್ಮ ಭಾರತದ ಋಷಿ-ಮುನಿಗಳು. ಯಾಜ್ಞವಲ್ಕ್ಯ ಅವರ ತಂಡದಲ್ಲಿ ಪ್ರಮುಖ ಅವನಂತೆಯೇ ಸತ್ಯಜಾಬಾಲಿಯ ಮಗನಾದ ಸತ್ಯಕಾಮನೂ ಬ್ರಹ್ಮಜ್ಞಾನಿ. ಅವನ ಬಳಿ ಸಾಕಷ್ಟು ಮಂದಿ ಋಷಿ ಕುಮಾರರು ಬ್ರಹ್ಮಜ್ಞಾನದ ಬಗ್ಗೆ ಉಪದೇಶ ಪಡೆಯುತ್ತಿದ್ದರು. ಅವರಲ್ಲಿ ಕಮಲ ಮಹರ್ಷಿಯ ಮಗನಾದ ಉಪಕೋಸಲನೂ ಒಬ್ಬ.
ತುಂಬಾ ನಿಷ್ಟಾವಂತ ವಿನಮ್ರ ಮನೋಭಾವಿ. ವ್ಯಾಸಂಗದ ಬಗ್ಗೆ ತುಂಬಾ ಆಸ್ಥೆ ಉಳ್ಳವನು.ಗುರು ಆದ ಸತ್ಯಕಾಮರು ಅವನ ಶ್ರದ್ಧೆ ಹಾಗೂ ನಿಷ್ಠೆಯನ್ನು ತುಂಬಾ ಮೆಚ್ಚಿದರು. ಶಿಕ್ಷಣದ ಅವಧಿ ಹನ್ನೆರಡು ವರ್ಷಗಳ ಕಾಲ. ಇಷ್ಟೊಂದು ದೀರ್ಘಕಾಲವೂ ಉಪಕೋಸಲ ತನ್ನ ಗುರುವರ್ಯರ ಹಾಗೂ ಅಗ್ನಿದೇವನ ಸೇವೆಯನ್ನು ತ್ರಿಕರಣಪೂರ್ವಕವಾಗಿ ಮಾಡಿ ಮುಗಿಸಿದ.
ಅವಧಿ ಮುಗಿಯಿತು. ಸತ್ಯಕಾಮರು ತಮ್ಮ ಬಳಿ ವ್ಯಾಸಂಗ ಮಾಡುತ್ತಿದ್ದ ಶಿಷ್ಯರೆಲ್ಲರಿಗೂ ಸಮಾವರ್ತನ ಸಂಸ್ಕಾರವನ್ನು ಮುಗಿಸಿ, ಅವರವರ ಮನೆಗಳಿಗೆ ಕಳುಹಿಸಿಕೊಟ್ಟರು. ಆದರೆ ಉಪಕೋಸಲನಿಗೆ ಮಾತ್ರ ಈ ಸಂಸ್ಕಾರ ದೊರೆಯಲಿಲ್ಲ.
ಇದರಿಂದ ಅವನು ತುಂಬ್ಗಾ ದು:ಖಿತನಾದ. ಮಾನಸಿಕ ಕ್ಲೇಶದಿಂದ ವಿಲವಿಲನೆ ಒದ್ದಾಡತೊಡಗಿದ. ಈ ಒದ್ದಾಟ ಸತ್ಯಕಾಮರಿಗೆ ಅರಿವಾಗದಿರಲಿಲ್ಲ. ಆದರೂ ಕಾಣದವರಂತೆ ಮೌನವಾಗಿಯೆ ಇದ್ದುಬಿಟ್ಟರು.
ಗುರುಪತ್ನಿ ದಿನವೂ ಶಿಷ್ಯರೆಲ್ಲರ ಚಲನ-ವಲನಗಳ ಬಗ್ಗೆ ಆಸಕ್ತಿಯಿಂದ ಗಮನಿಸುತ್ತಿರುತ್ತಿದ್ದರು. ಅವರಿಗೂ ಉಪಕೋಸಲನ ನಡೆ-ನುಡಿ ತುಂಬಾ ಹಿಡಿಸಿತ್ತು. ಈಗ ಸಮಾವರ್ತನ ಸಂಸ್ಕಾರ ದೊರೆಯದ ಕಾರಣ, ಅವನ ಮನಸ್ಸಿನಲ್ಲಾಗುತ್ತಿದ್ದ ಕಳವಳವನ್ನು ಗುರುತಿಸಿದ್ದರು. ಅವನ ಬಗ್ಗೆ ಅವರಿಗೆ ತುಂಬಾ ಕರುಣೆ ಮೂಡಿತು.
ತಮ್ಮ ಪತಿಯೊಂದಿಗೆ ಈ ವಿಚಾರದ ಬಗ್ಗೆ ಖುದ್ದು ಆಸಕ್ತಿವಹಿಸಿ ತಿಳಿಸಿದರು: ಉಪಕೋಸಲ ನಿಜಕ್ಕೂ ನಿಷ್ಠಾವಂತ ಬ್ರಹ್ಮಚಾರಿ. ತನ್ನ ವಿದ್ಯಾಭ್ಯಾಸ ಕಾಲದಲ್ಲಿ ಬ್ರಹ್ಮಚರ್ಯದ ನಿಷ್ಠೆ-ನಿಯಮಗಳನ್ನು ಯಥಾರೀತ್ಯ ಪಾಲಿಸಿದ್ದಾನೆ. ನಿಮ್ಮ ಹಾಗೂ ಅಗ್ನಿದೇವನ ಸೇವೆಯನ್ನೂ ಸಹ ಕಿಂಚಿತ್ ಲೋಪ ಇಲ್ಲದಂತೆ ವಿಧಿಪೂರ್ವಕವಾಗಿ ಪೂರೈಸಿದ್ದಾನೆ. ಹೀಗಿದ್ದೂ, ನೀವು ಎಲ್ಲಾ ಶಿಷ್ಯರಿಗೂ ಸಮಾವರ್ತನ ಉಪದೇಶ ನೀಡಿದರೂ, ಅವನೊಬ್ಬನನ್ನು ಮಾತ್ರ ನಿರ್ಲಕ್ಷಿಸಿದ್ದೀರಿ. ಇದರಿಂದ ಅವನಿಗೆ ತುಂಬಾ ಮಾನಸಿಕ ಕ್ಲೇಶ ಉಂಟಾಗಿದೆ. ಮೊದಲು ಅವನಿಗೂ ಸಮಾವರ್ತನ ಉಪದೇಶವನ್ನು ನೀಡಿ, ಅವನ ಮನೆಗೆ ಕಳುಹಿಸಿಕೊಡಿ. ಇಲ್ಲವಾದರೆ ಅಗ್ನಿದೇವನೂ ಸಹ ನಿಮ್ಮ ವರ್ತನೆಯ ಬಗ್ಗೆ ಅಸಮಧಾನ ತಾಳಿಯಾನು.
ಈಗಲೂ ಸತ್ಯಕಾಮರು ಈ ವಿಚಾರದ ಬಗ್ಗೆ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಪತ್ನಿಗೂ ಯಾವುದೇ ಉತ್ತರವನ್ನು ಕೊಡದೆ, ಅವಸರದಲ್ಲಿ ಯಾವುದೋ ಪ್ರವಾಸವನ್ನು ಕೈಗೊಂಡರು.
ಈಗ ಉಪಕೋಸಲನಿಗೆ ಇನ್ನಷ್ಟು ಪರಿತಾಪ ಹೆಚ್ಚಿತು. ಅವನು ಉಪವಾಸ ವ್ರತವನ್ನು ಕೈಗೊಂಡ. ಇದನ್ನು ಗಮನಿಸಿದ ಋಷಿಪತ್ನಿ ಅವನಿಗೆ ಎಷ್ಟೇ ಸಮಾಧಾನ ಹೇಳಿದರೂ, ಅವನು ಕೇಳಲಿಲ್ಲ. ಅವನು ಸವಿನಯದೊಂದಿಗೇ ಹೇಳಿದ:
“ಅಮ್ಮಾ ನನ್ನ ಮನಸ್ಸು ಕ್ಲೇಶಬಾಧೆಯಿಂದ ತುಂಬಾ ತಳಮಳಗೊಡಿದೆ. ಉಪವಾಸದ ವಿನ: ಬೇರಾವ ಮಾರ್ಗವೂ ನನಗೆ ತೋಚುತ್ತಿಲ್ಲ. ನನ್ನಿಂದ ಊಟಮಾಡಲಾಗುತ್ತಿಲ್ಲ. ನಾನು ಊಟ ಮಾಡಲಾರೆ.
ಅಗ್ನಿದೇವನೂ ಇದೆಲ್ಲವನ್ನೂ ಗಮನಿಸುತ್ತಿದ್ದ. ಅವನಿಗೂ ಈ ಋಷಿ ಕುಮಾರನ ಬಗ್ಗೆ ಕರುಣೆ ಮೂಡಿತು. ಸ್ವತ: ಪ್ರತ್ಯಕ್ಷನಾಗಿ ಅವನನ್ನು ಸಮಾಧಾನಪಡಿಸಿದ. ಅಷ್ಟೇ ಅಲ್ಲ, ಬ್ರಹ್ಮವಿದ್ಯೆಯನ್ನು ಉಪದೇಶಮಾಡಿ, ಮರೆಯಾದ.
ಉಪಕೋಸಲನಿಗೆ ಈಗ ತುಂಬಾ ಸಂತೋಷ ಹಾಗೂ ಸಮಾಧಾನವಾಯಿತು. ಎಂದಿನಂತೆ ಊಟ ಮಾಡತೊಡಗಿದ. ಇದರಿಂದ ಮುನಿಪತ್ನಿಗೆ ಆದ ಆನಂದ ಅಷ್ಟಿಷ್ಟಲ್ಲ.
ಹಲವು ದಿನಗಳ ನಂತರ ಸತ್ಯಕಾಮರು ಪ್ರವಾಸದಿಂದ ಹಿಂದಿರುಗಿದರು. ಉಪಕೋಸಲ ಶ್ರದ್ಧೆ-ಭಕ್ತಿಯಿಂದ ಪಾದ ಮುಟ್ಟಿ ನಮಸ್ಕರಿಸಿದ. ಸತ್ಯಕಾಮರು ಅವನ ಮುಖದಲ್ಲಿ ಬ್ರಹ್ಮ ತೇಜಸ್ಸು ಪ್ರಜ್ವಲಿಸುತ್ತಿರುವುದನ್ನು ಮನಗಂಡರು. ಆನಂದಿತರೂ ಆದರು.
ಉಪಕೋಸಲ ನಡೆದುದೆಲ್ಲವನ್ನೂ ವರದಿ ಒಪ್ಪಿಸಿದ.
ಸಂತೋಷಗೊಂಡ ಸತ್ಯಕಾಮರು ಹೇಳಿದರು:
“ಈ ಉಪದೇಶಗಳೆಲ್ಲ ಮಿಗಿಲಾದುದು ಬ್ರಹ್ಮೋಪದೇಶ. ಅದನ್ನು ನಾನು ಈಗ ನಿನಗೆ ಉಪದೇಶಿಸುತ್ತೇನೆ.
ಅನ್ನುತ್ತಾ ಬ್ರಹ್ಮತತ್ವದ ರಹಸ್ಯ ವಿಚಾರದ ಬಗ್ಗೆ ಉಪದೇಶಿಸಿದರು. ಸಮಾವರ್ತನ ಸಂಸ್ಕಾರವನ್ನು ಮಾಡಿ ಮುಗಿಸಿ, ಅವನನ್ನು ಮನೆಗೆ ಕಳುಹಿಸಿಕೊಟ್ಟರು. ಈಗ ಉಪಕೋಸಲನಿಗೆ ಆದ ಆನಂದ ಅಷ್ಟಿಷ್ಟಲ್ಲ.