ನೀತಿ ಕಥೆಗಳು

ಮಗನಿಗೆ ಕಳ್ಳತನ ಕಲಿಸಿದ ತಾಯಿ ಒಬ್ಬ ತಾಯಿ ತನ್ನ ಮಗನನ್ನು ಹೆಗಲ ಮೇಲೆ ಇರಿಸಿಕೊಂಡು ಪ್ರಯಾಣ ಮಾಡುತ್ತಿದ್ದಾಳೆ. ಪಕ್ಕದಲ್ಲಿ ಒಬ್ಬ ಬಾಳೆಹಣ್ಣು ಚಿಪ್ಪುಗಳನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ತಲೆ ಮೇಲೆ ಹೊತ್ತುಕೊಂಡು ಹತ್ತಿರದ ಸಂತೆಗೆ ಅವಸರ ಅವಸರವಾಗಿ ಹೋಗುತ್ತಿದ್ದಾನೆ. ತಾಯಿಯ ಹೆಗಲ ಮೇಲಿರುವ ಮಗು ಪಕ್ಕದಲ್ಲಿಯೇ ಬಂದ ಆ ಬಾಳೆಹಣ್ಣಿನ ಬುಟ್ಟಿಯಲ್ಲಿಂದ ಒಂದು ಚಿಪ್ಪು ಬಾಳೆಹಣ್ಣು ಕದ್ದು ತೆಗೆದುಕೊಂಡಿತು. ಸ್ವಲ್ಪ ದೂರ ಹೋದ ಮೇಲೆ ಆ ತಾಯಿ ಸಾಕಾಗಿ ಒಂದು ಮರದ ಕೆಳಗೆ ಮಗುವನ್ನು ಇಳಿಸಿದಳು. ಆ ಮಗುವಿನ ಕೈಯಲ್ಲಿ ಬಾಳೆಹಣ್ಣು ಚಿಪ್ಪು ಇದೆ. ‘ಇದು ಎಲ್ಲಿಂದ ಬಂತು?’ ಎಂದಳು. ‘ದಾರಿಯಲ್ಲಿ ಬಾಳೆಹಣ್ಣು ಹೊತ್ತುಕೊಂಡು ಹೋಗುತ್ತಿದ್ದವನು ಪಕ್ಕದಲ್ಲಿಯೇ ಬಂದ. ನಾನು ಒಂದು ಚಿಪ್ಪು ತೆಗೆದುಕೊಂಡೆ’ ಎಂದ ಮಗ. ‘ಆಹಾ! ಎಂತಹ ಬುದ್ಧಿವಂತ ಮಗ. ಬಹಳ ಜಾಣ’ ಎಂದು ತಾಯಿ ಮಗನನ್ನು ಕೊಂಡಾಡಿದಳು.
ತಾಯಿಯ ಉತ್ತಮವಾದ ಜಾಣ್ಮೆ ಮಾತಿನಿಂದ ಕಳ್ಳತನ ಮಾಡಿದ್ದನ್ನು ತಾಯಿ ಹೊಗಳಿದ್ದರಿಂದ ಪ್ರೋತ್ಸಾಹ ಸಿಕ್ಕಂತಾಗಿ ಬರುತ್ತ ಬರುತ್ತ ದೊಡ್ಡ ಕಳ್ಳನಾದ. ಮನೆಯಲ್ಲಿ ಕನ್ನ ಹಾಕಿ ನಗ ನಾಣ್ಯ ದೋಚಲು ಪ್ರಾರಂಭ ಮಾಡಿದ. ಒಂದು ಸಾರಿ ಪೋಲಿಸರ ಕೈಗೆ ಸಿಕ್ಕಿಬಿದ್ದ. ಜೈಲುವಾಸ ಆಯಿತು. ಕೋರ್ಟಿಗೆ ಕರೆತಂದರು. ಅವನು ಮನೆಯಲ್ಲಿರುವ ನಗನಾಣ್ಯ ಕಳ್ಳತನ ಮಾಡಿದ್ದಾನೆಂದು ಅವನಿಗೆ ಪಾರ್ಶಿ ಶಿಕ್ಷೆ-ಗಲ್ಲು ಶಿಕ್ಷೆ ವಿಧಿಸಿದ ಜಡ್ಜ್. ‘ಸ್ವಾಮಿ ನನ್ನದೊಂದು ಬೇಡಿಕೆ. ನಾನು ಗಲ್ಲು ಶಿಕ್ಷೆಗೆ ತಯಾರಾಗಿದ್ದೇನೆ. ಆದರೆ ನಮ್ಮ ಅಮ್ಮನನ್ನು ನೋಡಬೇಕೆಂದ. ತಾಯಿಯನ್ನು ಕರೆಸಿದರು. ಆ ಗಲ್ಲು ಶಿಕ್ಷೆ ನನಗಲ್ಲ, ಮೊದಲು ತಾಯಿಗೆ ಹಾಕಿರಿ. ಹಿಂದೆ ಬಾಳೆಹಣ್ಣು ಕದ್ದಾಗ ಕದಿಯಬಾರದೆಂದು ಒಂದು ಏಟು ಕೊಟ್ಟಿದ್ದರೆ ನಾನು ದೊಡ್ಡವನಾಗಿ ಸುಖ ಸಂಸಾರ ಮಾಡುತ್ತಿದ್ದೆ. ನಮ್ಮ ತಾಯಿ ತನ್ನ ಕಳ್ಳತನಕ್ಕೆ ಪ್ರೋತ್ಸಾಹ ಕೊಟ್ಟಳು. ದೊಡ್ಡ ಕಳ್ಳನಾಗಿ ಕೊಲೆ, ಸುಲಿಗೆ ಮಾನಭಂಗ ಎಲ್ಲಾ ಮಾಡಿದೆ. ಅದರಿಂದ ತಾಯಿ ಸಂತೋಷಪಡುತ್ತಿದ್ದಳು. ಕಳ್ಳತನಕ್ಕೆ ಪ್ರೋತ್ಸಾಹಕೊಟ್ಟ ಆಕೆಗೆ ಗಲ್ಲು ಶಿಕ್ಷೆ ಕೊಡಿ’ ಎಂದ. ನೋಡಿ! ಮಕ್ಕಳು ಮೂರ್ಖರಾಗಲು, ಕಳ್ಳರಾಗಲು, ವಿದ್ಯಾವಂತರಾಗಲು, ಸತ್ಯವಂತರಾಗಲು ತಾಯಿಯೇ ಕಾರಣ. ಸಮಾಜವೂ ಒಂದೊಂದು ಸಾರಿ ಕಾರಣವಾಗಬಹುದು. ಸ್ನೇಹಿತರು ಕಾರಣವಾಗಬಹುದು ಆದ್ದರಿಂದ ಹುಷಾರಾಗಿರಿ.