ರಾಮಾಯಣ ಕಥೆಗಳು

ರತ್ನಾಕರ ಬೇಡ ವಾಲ್ಮೀಕಿ ಆದುದು ತುಂಬಾ ಹಿಂದೆ ಭಾರತದಲ್ಲಿ ಕಿರಾತರ ಒಂದು ರಾಜ್ಯ ಇತ್ತು. ಅಲ್ಲೊಂದು ಪರಿವಾರ. ಪರಿವಾರದಲ್ಲಿ ಒಬ್ಬ ಹುಡುಗ ದರೋಡೆಕೋರರ ಗುಂಪಿನಲ್ಲಿ ಬೆಳೆಯುತ್ತಿದ್ದ. ಅವರ ದುರ್ಬುದ್ಧಿಯೇ ಅವನ ಮನದಲ್ಲೂ ವಿಶಾಲ ವೃಕ್ಷದಂತೆ ಬೆಳೆದು, ಹರಡಿಕೊಂಡಿತ್ತು. ಆ ಹುಡುಗನ ಹೆಸರು ರತ್ನಾಕರ. ಹೆಸರು ರತ್ನಾಕರ ಆದರೂ ನಡೆ-ನುಡಿ ರತ್ನದಂತಿರಲಿಲ್ಲ. ಯಾರೇ ದಾರಿಯಲ್ಲಿ ಬರುತ್ತಿರಲಿ, ಅವರ ಪ್ರಾಣ-ಪದಾರ್ಥಗಳನ್ನು ಕೊಳ್ಳೆ ಹೊಡೆಯುತ್ತಿದ್ದ. ಪರಿಣಿತ ದರೋಡೆಕೋರರೇ ಈ ದರೋಡೆಗಾರನ ಹೆಸರು ಕೇಳಿದರೂ ಸಾಕು, ಥರಥರನೆ ನಡುಗುತ್ತಿದ್ದರು. ದರೋಡೆ ಮಾಡಿದ ಹಣದಿಂದಲೇ ಮಡದಿ-ಮಕ್ಕಳು ಎಲ್ಲರನ್ನು ಸಾಕುತ್ತಿದ್ದ. ಒಂದು ಬಾರಿ ಆ ದಾರಿಯಲ್ಲಿ ನಾರದರು ಬಂದರು. ಯಾರಾದರೇನು? ಅವರನ್ನೂ ಅಡ್ಡಕಟ್ಟಿದ ಗದರಿಸುತ್ತಾ ಗತ್ತಿನಿಂದ ಕೇಳಿದ: “ನಿಲ್ಲಿ, ಮೊದಲು ನಿಮ್ಮ ಬಳಿ ಇರುವುದನ್ನೆಲ್ಲಾ ಇಲ್ಲಿಟ್ಟು ಮುಂದೆ ಹೆಜ್ಜೆ ಇಡಿ”. ನಾರದರು ಗಾಬರಿಗೊಳ್ಳಲಿಲ್ಲ. ಮುಗುಳುನಗೆಯೊಂದಿಗೆ ಅವನನ್ನೇ ನೋಡುತ್ತಾ ವಿನಯದೊಂದಿಗೆ ಕೇಳಿದರು: “ಸೋದರಾ ಹೀಗೆಲ್ಲಾ ಮಾಡುವುದರಿಂದ ಇಲ್ಲದ ಪಾಪಕ್ಕೆ ಗುರಿ ಆಗುವೆ ಅಲ್ಲವಾ?” ರತ್ನಾಕರ ಸಲೀಸಾಗಿ ಹೇಳಿದ: “ಅದಕ್ಕೆ ನಾನೇನು ಮಾಡಲಿ? ನನಗೂ ಹೆಂಡತಿ, ಮಕ್ಕಳು ಇದ್ದಾರೆ. ಅವರೆಲ್ಲರನ್ನೂ ಸಾಕಲು ನನಗಿರುವ ಉದ್ಯೋಗ ಇದೊಂದೇ. ನಾರದರು ಮತ್ತೆ ಪ್ರಶ್ನಿಸಿದರು: “ಅದೇನೋ ಸರಿ, ಅವರಿಗಾಗಿ ನೀನು ಇಂತಹ ಪಾಪಕೃತ್ಯವನ್ನು ಎಸಗಿದರೂ ಸಹ ಪಾಪದ ಫಲವನ್ನು ಅವರ್ಯಾರೂ ಅನುಭವಿಸರು ಬೇಕಾದರೆ ಈಗಲೇ ಹೋಗಿ, ನೀನು ಅವರೆಲ್ಲರನ್ನೂ ವಿಚಾರಿಸಿಕೊಂಡು ಬಾ. ನೀನು ಹಿಂದಿರುಗುವವರೆಗೂ ಇಲ್ಲಿಯೇ ಕುಳಿತಿರುತ್ತೇನೆ.”
ರತ್ನಾಕರ ನಾರದರ ಮಾತನ್ನು ಒಪ್ಪಿದ. ಸರಸರನೆ ಮನೆಗೆ ಬಂದು ಮಡದಿ-ಮಕ್ಕಳನ್ನು ಕೇಳಿದ: “ನಿಮಗಾಗಿ ನಾನು ಈ ದರೋಡೆಯ ಕೆಲಸ ಮಾಡುತ್ತಿದ್ದೇನೆ. ಇದರ ಸಂಪಾದನೆಯಿಂದಲೇ ನಿಮ್ಮೆಲ್ಲರಿಗೂ ಹೊಟ್ಟೆ ತುಂಬಾ ಊಟ ಒದಗಿಸುತ್ತಿದ್ದೇನೆ. ಈಗ ಹೇಳಿ, ಈ ಪಾಪದ ಫಲವನ್ನು ನೀವೆಲ್ಲರೂ ಸಹ ನನ್ನೊಂದಿಗೆ ಅನುಭವಿಸುವುದು ನ್ಯಾಯ ತಾನೇ?” ಅವನ ಹೆಂಡತಿ-ಮಕ್ಕಳು ಯಾರೂ ರತ್ನಾಕರನ ಮಾತುಗಳನ್ನು ಒಪ್ಪಲಿಲ್ಲ. “ಅದು ಹೇಗೆ ಸಾಧ್ಯ? ನಮ್ಮನ್ನು ಸಾಕಿ ಸಲಹುವುದು ನಿನ್ನ ಧರ್ಮ, ಪಾಪಕೃತ್ಯದಿಂದ ನಮ್ಮನ್ನು ಸಾಕು ಎಂದು ನಾವೇನೂ ಹೇಳಿಲ್ಲವಲ್ಲಾ! ನಿನ್ನ ಕರ್ಮ ನಿನ್ನದು, ನಮ್ಮ ಕರ್ಮ ನಮ್ಮದು” ಎಂದು ತಿರಸ್ಕರಿಸಿದರು. ಮಡದಿ-ಮಕ್ಕಳ ಮಾತು ಕೇಳಿ, ರತ್ನಾಕರನ ಮನಸ್ಸು ಮರುಗಿತು. ನನ್ನ ತನ್ನವರೆಂಬ ಮೋಹ ಅಳಿಯಿತು. ವಿರಕ್ತ ಭಾವ ಉಳಿಯಿತು. ಕೂಡಲೇ ಸರಸರನೆ ನಾರದರ ಹತ್ತಿರ ಬಂದ. ತನ್ನನ್ನು ಪಾಪಕೂಪದಿಂದ ಉಳಿಸಲು ಪ್ರಾರ್ಥಿಸಿದ. ಅವರು ಹೇಳಿದರು: “ಈಗಲೂ ಕಾಲ ಮಿಂಚಿಲ್ಲ. ನೀನು ‘ರಾಮ ರಾಮ’ ಅನ್ನುತ್ತಾ ಮರ್ಯಾದಾ ಪುರುಷೋತ್ತಮನಾದ ರಘುರಾಮನ ಸ್ಮರಣೆ ಮಾಡುತ್ತಿರು. ಮಾಯಾ-ಮೋಹದಂತಹ ಮೊಸಳೆಯ ಬಾಯಿಂದ ಅವನು ಸುಲಭವಾಗಿ ಸಂರಕ್ಷಿಸುವನು”.
ರತ್ನಾಕರ ನಿರಾಶೆಯಿಂದ ಹೇಳಿದ: “ನಾನು ಆ ಶಬ್ದವನ್ನೇ ಇದುವರೆಗೂ ಕೇಳಿಲ್ಲ; ಅದರ ಉಚ್ಚಾರಣೆಯೇ ನನಗೆ ಬರದು. ಬೇರಾವುದಾದರೂ ಶಬ್ದ ಹೇಳಿ. ಅದನ್ನೇ ನಾನು ಉಚ್ಚಾರಣೆ ಮಾಡುತ್ತೇನೆ.” ನಾರದರು ಹಾಗೆಯೇ ಯೋಚಿಸಿ ಹೇಳಿದರು: “ನಮ್ಮ ಸುತ್ತಮುತ್ತಲೂ ಕಾಣುತ್ತಿರುವುದೇನು?” ರತ್ನಾಕರ ಥಟ್ಟನೆ ಹೇಳಿದ: “ಮರಗಳು”. “ಹಾಗಾದರೆ ನೀನು ‘ಮರ-ಮರ’ ಎಂದೇ ಉಚ್ಚಾರಣೆ ಮಾಡುತ್ತಿರು. ಕೆಲವೇ ದಿನಗಳಲ್ಲಿ ರಾಮ ನಾಮೋಚ್ಚಾರಣೆ ನಿನ್ನ ನಾಲಿಗೆಯ ಮೇಲೆ ನಲಿಯುವುದು”. ಹೀಗೆಂದು ನಾರದರು ಹೇಳಿ ಹೊರಟುಹೋದರು. ರತ್ನಾಕರ ನಿಂತಿದ್ದ ಜಾಗದಲ್ಲಿಯೇ ಕುಳಿತ. ಅವರ ಉಪದೇಶದಂತೆ ‘ಮರ-ಮರ’ ಎಂದು ಒಂದೇ ಸಮನೆ ಉಚ್ಚಾರಣೆ ಮಾಡತೊಡಗಿದ. ಕೆಲವೇ ದಿನಗಳಲ್ಲಿ ರಾಮನಾಮ ಸ್ಮರಣೆಯಲ್ಲಿಯೇ ಮೈಮರೆತ ಅವನ ಶರೀರದ ತುಂಬ ಧೂಳು ಮುತ್ತಿತು. ಧೂಳಿನ ರಾಶಿ ತುಂಬುತ್ತಿದ್ದಂತೆ ದೊಡ್ಡ ವಾಲ್ಮೀಕಿ (ಹುತ್ತ) ಬೆಳೆಯತೊಡಗಿತು. ಆಗಲೂ ರತ್ನಾಕರ ರಾಮನಾಮ ಸ್ಮರಣೆಯನ್ನು ಬಿಡಲೇ ಇಲ್ಲ. ಎಷ್ಟೋ ವರ್ಷಗಳ ನಂತರ ಅದೇ ದಾರಿಯಲ್ಲಿ ಮತ್ತೆ ನಾರದರು ಬಂದರು. ಹುತ್ತ ಬೆಳೆದಿದ್ದ ಜಾಗದಲ್ಲಿ ರಾಮ ನಾಮೋಚ್ಚರಣೆ ಕೇಳಿಸತೊಡಗಿತು. ದಿವ್ಯ ದೃಷ್ಟಿಯಿಂದ ಹುತ್ತದಲ್ಲಿರುವವನು ರತ್ನಾಕರ ಎಂದು ತಿಳಿದರು. “ರತ್ನಾಕರ, ಮೇಲೆ ಬಾ” ಎಂದು ಹುತ್ತದ ಬಾಯಲ್ಲಿ ಜೋರಾಗಿ ಕೂಗಿ ಕರೆದರು. ರತ್ನಾಕರ ಹುತ್ತವನ್ನು ಒಡೆದುಕೊಂಡು ಹೊರಬಂದ ಅವನನ್ನು ‘ವಾಲ್ಮೀಕಿ’ ಎಂದು ಕರೆದರು. ವಾಲ್ಮೀಕಿ ಮಹರ್ಷಿಯೇ ಮುಂದೆ “ರಾಮಾಯಣ” ಎಂಬ ಪೌರಾಣಿಕ ಬೃಹತ್ ಗ್ರಂಥವನ್ನು ರಚಿಸಿದ.