ಭಾಗವತ ಕಥೆಗಳು

ಇಂದ್ರಿಯಗಳು ವಿದ್ವಾಂಸನನ್ನೇ ಹಾಳುಮಾಡಬಲ್ಲವು ವಿಸುಂದರವಾದ ಅರಣ್ಯ, ಅಲ್ಲಿ ಒಂದು ಆಶ್ರಮ. ಅದರಲ್ಲಿ ವೇದವ್ಯಾಸರು ಶಿಷ್ಯರೂ ವಾಸ. ದಿನವೂ ವೇದವ್ಯಾಸರು ತಮ್ಮ ಶಿಷ್ಯರಿಗೆ ವೇದಾಂತ ಪಾಠ ಹೇಳಿಕೊಡುತ್ತಿದ್ದಾರೆ. ಒಂದು ಸಾರಿ ಒಂದು ಶ್ಲೋಕದ ಪ್ರವಚನ ಮಾಡುವ ಕಾಲ.

‘ಬಲವಾನ್ ಇಂದ್ರಿಯಗ್ರಾಮೋ ವಿದ್ವಾಂಸ ಮಪಿಕರ್ಷತಿ’ ಈ ಶ್ಲೋಕವನ್ನು ಪಾಠ ಮಾಡಬೇಕು. ಇಂದ್ರಿಯ ಸಮೂಹವು ಬಹಳ ಬಲವಂತವಾದವುಗಳು ಅವು ಎಂತಹ ವಿದ್ವಾಂಸನನ್ನು ಸಹ ಮೋಸ ಮಾಡಿ ಕೆಡವುತ್ತದೆ ಎಂದು ಅದರ ಅರ್ಥ. ಇದನ್ನು ಕೇಳಿ ಜೈಮುನಿಯು ಶಿಷ್ಯನು ಇದನ್ನು ಒಪ್ಪಲಿಲ್ಲ. ಇಂದ್ರಿಯಗಳು ವಿದ್ವಾಂಸರನ್ನು ಕೆಡಿಸುತ್ತವೆ ಎಂಬ ಮಾತು ನನಗೆ ಸರಿ ಎನಿಸುವುದಿಲ್ಲ ಎಂದ. ಆಗ ವೇದವ್ಯಾಸರು ಆ ಶ್ಲೋಕ ಬೇಡವೆ ಬೇಡವೆಂದು ಹೊಡೆದು ಹಾಕಿದರು. ಕೆಲವು ದಿನ ಕಳೆಯಿತು. ವೇದವ್ಯಾಸರು ಯಾವುದೋ ಕೆಲಸದ ನಿಮಿತ್ತ ಮತ್ತೊಂದು ಕಡೆ ಹೋಗಿದ್ದಾರೆ. ಆಶ್ರಮದಲ್ಲಿ ಜೈಮುನಿ ಒಬ್ಬರೇ ಇದ್ದಾರೆ. ಸಾಯಂಕಾಲ ಆಗುತ್ತಾ ಬಂತು. ಸಣ್ಣ ಹನಿಗಳ ಮಳೆ ಬರುತ್ತದೆ. ಆಗ ಆಶ್ರಮದ ಸಂದಿಯಲ್ಲಿ ಒಬ್ಬ ಹೆಣ್ಣು ಮಗಳು ಸಣ್ಣದಾಗಿ ಅಳುತ್ತಾ ಇದ್ದಾಳೆ. ಸ್ವಲ್ಪ ಹೊತ್ತು ಆಯಿತು. ಅಳುವಿನ ಧ್ವನಿ ಜಾಸ್ತಿ ಆಗುತ್ತಾ ಬಂತು. ಅದು ಹೆಣ್ಣು ಸ್ವರ. ಆಗ ಜೈಮುನಿಯು ಹೊರಗೆ ಬಂದು ನೋಡುತ್ತಾನೆ. ಹೆಣ್ಣು ಸ್ವರ ಅಳು ಕೇಳಿಸುತ್ತದೆ. ‘ಯಾರಮ್ಮ?’ ‘ಸ್ವಾಮಿ ನಾನು ಅನಾಥೆ. ಹೆಣ್ಣು ಮಕ್ಕಳ ಜೊತೆಯಲ್ಲಿ ಬಂದೆ. ಆ ಹೆಣ್ಣು ಮಕ್ಕಳು ಆ ಕಡೆ, ಈ ಕಡೆ ಹೋದರು. ಒಬ್ಬಳಾದ ನಾನು ಇಲ್ಲಿ ಆಶ್ರಮ ಇದೆ ಎಂದು ಬಂದೆ’ ಎಂದಳು. ‘ಅಮ್ಮಾ ಇಲ್ಲಿ ಯಾವ ಹೆಣ್ಣು ಮಕ್ಕಳಿಗೂ ಜಾಗ ಸಿಕ್ಕುವುದಿಲ್ಲ’ವೆಂದ. ‘ಇದು ಬರೀ ಸಂನ್ಯಾಸಿಗಳು ಇರುವ ಸ್ಥಳ’ ಎಂದ ಜೈಮುನಿ.

‘ಸ್ವಾಮಿ! ನಾನು ಈ ಕತ್ತಲಲ್ಲಿ ಎಲ್ಲಿ ಹೋಗಲಿ. ಒಂದು ಮೂಲೆಯಲ್ಲಿ ಜಾಗ ಕೊಟ್ಟರೂ ಮಲಗುತ್ತೇನೆಂದಳು. ಜೈಮುನಿಯು ‘ಹಾಗಾದರೆ ಆ ಮೂಲೆಯಲ್ಲಿ ಮಲಗು’ ಎಂದು ಮೂಲೆ ತೋರಿಸಿದರು. ಆ ಮೂಲೆಯಲ್ಲಿ ಮಲಗಿದಳು. ಜೈಮುನಿಗೆ ಒಬ್ಬಳೇ ಇದ್ದಾಳೆ ಪ್ರಾಯದ ಹೆಣ್ಣು ಮಗಳು ಬೇರೆ!, ‘ಅಮ್ಮಾ ಇಲ್ಲಿ ಬಾ’ ಎಂದನು. ‘ಸ್ವಾಮಿ ನಾನು ಹೆಣ್ಣು ಮಗಳು ಪ್ರಾಯದವಳು ಇಲ್ಲೇ ಇರುತ್ತೇನೆ’ ಎಂದಳು. ಇವನು ತಡೆಯಲಾರದೆ ಹೋಗಿ ಆಕೆಯನ್ನು ಹಿಡಿದುಕೊಂಡು ನೋಡುತ್ತಾನೆ, ವೇದವ್ಯಾಸ ಗುರುಗಳು. ‘ಬಲವಾನ್ ಇಂದ್ರಿಯ ಗ್ರಾಮೋ ವಿದ್ವಾಂಸ ಮಪಿ ಕರ್ಷತಿ’ ಎಂದರು. ಅಂತಹ ಜೈಮುನಿಯ ಮನಸ್ಸೇ ಸ್ತ್ರೀಯ ಕಡೆ ಎಳೆಯಿತು. ಆದ್ದರಿಂದ ಸ್ತ್ರೀ ಪುರುಷರು ಬುದ್ಧಿವಂತರಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು.