ಭಾಗವತ ಕಥೆಗಳು

ಭಗೀರಥ ತುಂಬಾ ಹಿಂದೆ ಇಕ್ಷ್ವಾಕು ವಂಶದಲ್ಲಿ ಸಗರ ಎಂಬ ಅಸಹಾಯಶೂರ ಎನಿಸಿದ ರಾಜ ಇದ್ದ. ನೂರೊಂದು ಅಶ್ವಮೇಧ ಯಾಗಗಳನ್ನು ಮಾಡಿ, ಹೆಸರು ಗಳಿಸಿದ್ದ. ದಿಗ್ವಿಜಯಿ ಎನಿಸಿದ್ದ. ಇವನು ಕಡೆಯ ಯಾಗವನ್ನು ಮಾಡುತ್ತಿದ್ದಾಗ, ಇಂದ್ರನು ಸಗರ ಮಹಾರಾಜನು ತನಗೆ ಸಮಾನಸ್ಕನೆನಿಸುವನೆಂಬ ಅಸೂಯೆಯಿಂದ ಯಾಗದ ಕುದುರೆಯನ್ನು ಕದ್ದೊಯ್ದು, ಕಪಿಲಮುನಿಯ ಆಶ್ರಮದಲ್ಲಿ ಕಟ್ಟಿಹಾಕಿದ. ಯಾಗದ ಕುದುರೆಯನ್ನು ಕಾಣದೆ ಸಗರ ತಲ್ಲಣಿಸಿದ. ತನ್ನ ಅರವತ್ತು ಸಾವಿರ ಮಕ್ಕಳನ್ನೂ ಕುದುರೆಯನ್ನು ಹುಡುಕಿ ತರಲು ಕಳುಹಿಸಿದ. ಅವರೆಲ್ಲರೂ ಸುತ್ತಾಡುತ್ತಾ, ಹುಡುಕಾಡುತ್ತಾ ಬರುತ್ತಿದ್ದಾಗ, ಕಪಿಲ ಮಹರ್ಷಿಯ ಆಶ್ರಮದಲ್ಲಿ ಕುದುರೆಯನ್ನು ಕಂಡರು. ಕುದುರೆಯನ್ನು ಕಪಿಲ ಮಹರ್ಷಿಯೇ ತಂದು ಕಟ್ಟಿರುವನೆಂದು ತಿಳಿದು, ತಪೋಮಗ್ನನಾಗಿದ್ದ ಅವನನ್ನು ಹೀನಾಯವಾಗಿ ಬೈದರು, ಹೊಡೆದರು. ಕುಪಿತಗೊಂಡ ಕಪಿಲ ಕಣ್ಣು ತೆರೆದ. ಅವನ ಕಣ್ಣುಗಳಿಂದ ಕೋಪದ ಕಿಡಿಗಳು ಹೊರಬಂದು, ಅಷ್ಟೊಂದು ಮಂದಿ ರಾಜಕುಮಾರರನ್ನೂ ಸುಟ್ಟು ಬೂದಿ ಮಾಡಿದುವು. ಬೂದಿ ಮುಗಿಲೆತ್ತರಕ್ಕೆ ಪಸರಿಸಿತು. ವಿಷಯವನ್ನು ತಿಳಿಯದ ಸಗರ ರಾಜ ವ್ಯಾಕುಲದಲ್ಲಿ ಮುಳುಗಿದ.

ದಿನಕ್ರಮೇಣ ರಾಜನಿಗೆ ಅಸಮಂಜಸ ಎಂಬ ಮಗನು ಜನಿಸಿದ. ಇವನ ಮಗನೇ ಅಂಶುಮಂತ. ತಾತನ ಯಾಗ ಪೂರೈಸದಿರುವುದನ್ನು ಕಂಡು, ದುಃಖಿತನಾದ ಅವನು ಕುದುರೆಯನ್ನು ಹುಡುಕುತ್ತಾ ಕಪಿಲನ ಆಶ್ರಮಕ್ಕೆ ಬಂದ. ಅಲ್ಲಿ ಮುಗಿಲೆತ್ತರಕ್ಕೆ ಬಿದ್ದಿರುವ ಭಸ್ಮರಾಶಿ ಹಾಗೂ ಕುದುರೆಯನ್ನು ಕಂಡ. ಕಪಿಲ ಮಹರ್ಷಿಯಿಂದ ಸಕಲ ಸಂಗತಿಯನ್ನೂ ತಿಳಿದ. ಋಷಿಯೊಂದಿಗೆ ವಿನಯ ವಿನಮ್ರತೆಯೊಂದಿಗೆ ವರ್ತಿಸಿ ಕುದುರೆಯೊಂದಿಗೆ ರಾಜಧಾನಿಗೆ ಹಿಂದಿರುಗಿದ, ಹಿಂದಿರುಗುವಾಗ ಕಪಿಲ ಹೇಳಿದ:

“ರಾಜಕುಮಾರಾ, ಆದದ್ದಾಯಿತು. ಈಗಲೂ ಈ ಬೂದಿಯ ಮೇಲೆ ಸುರನದಿಯಾದ ಗಂಗೆಯನ್ನು ಹರಿಸಿದರೆ ನಿನ್ನ ಪಿತೃಗಳು ಸದ್ಗತಿ ಹೊಂದುವರು. ಯಾಗಾಶ್ವವನ್ನು ರಾಜಧಾನಿಗೆ ತಂದನಂತರ, ತಾತನಾದ ಸಗರ ಯಾಗವನ್ನೇನೋ ಮಾಡಿ ಮುಗಿಸಿದ. ಆದರೆ ಈಗ ಅವನ ಮನಸ್ಸು ಬೇಸರಿಸಿತು. ರಾಜ್ಯವನ್ನು ತನ್ನ ಮಗನಾದ ಅಸಮಂಜಸನಿಗೆ ವಹಿಸಿದ. ಅಸಮಂಜಸನು ತನ್ನ ಪಿತೃಗಳಿಗೆ ಒದಗಿರುವ ದುರ್ಗತಿಯಿಂದ ವ್ಯಥಿತನಾಗಿ ರಾಜ್ಯಭಾರದ ಹೊರೆಯನ್ನು ತನ್ನ ಮಗನಾದ ಅಂಶುಮಂತನಿಗೆ ವಹಿಸಿ, ತಾನು ತಪಸ್ಸು ಮಾಡಿ ಜೀವ ಕಳೆಯಲು ಕಾಡಿಗೆ ಹೋದ. ಅಂಶುಮಂತನೂ ತನ್ನ ಪಿತೃಗಳಿಗೆ ಸಂಭವಿಸಿರುವ ದುರ್ಗತಿಯ ವಿಚಾರ ಕಾಡುತ್ತಲೇ ಇತ್ತು. ಆ ಗಂಗೆಯನ್ನು ಭೂಲೋಕಕ್ಕೆ ತರಲು ಸಾಕಷ್ಟು ಶ್ರಮಿಸಿದರೂ, ಸಾರ್ಥಕ ಆಗಲಿಲ್ಲ. ಭಗೀರಥ ಅವನ ಮೊಮ್ಮಗ. ಗಂಗೆಯ ಮನ ಒಲಿಸಲು ಆಕೆಯನ್ನು ಕುರಿತು ದೀರ್ಘಾವಧಿಯವರೆಗೆ ಘೋರ ತಪಸ್ಸನ್ನಾಚರಿಸಿದ. ಅವನ ತಪಸ್ಸನ್ನು ಮೆಚ್ಚಿದ ಗಂಗಾದೇವಿ ಪ್ರತ್ಯಕ್ಷಳಾದಳು. ಅವನನ್ನು ಹಾರೈಸುತ್ತಾ ಹೇಳಿದಳು: “ವತ್ಸ, ನಿನಗೇನು ವರ ಬೇಕೋ ಕೇಳು.” ಅವನು ಸಂತೋಷದಿಂದ ಗಂಗಾಮಾತೆಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ನಡೆದಿರುವ ಸಂಗತಿಯನ್ನೆಲ್ಲಾ ತಿಳಿಸುತ್ತಾ ಹೇಳಿದ: “ಮಹಾಮಾತೆ, ನನ್ನ ಮೃತ ಪಿತೃಗಳ ಬೂದಿಯ ಮೇಲೆ ನೀನು ಹರಿದು, ಅವರಿಗೆ ಸದ್ಗತಿಯನ್ನು ಕರುಣಿಸಬೇಕು.” ಗಂಗೆ ಹೇಳಿದಳು:

“ನೀನು ಹೇಳುವುದೇನೋ ಸರಿ. ಆದರೆ ನಾನು ಸುರಲೋಕದಿಂದ ಭೂಲೋಕಕ್ಕೆ ಇಳಿದು ಬರುವಾಗ, ರಭಸದಿಂದ ಧುಮ್ಮಿಕ್ಕುತ್ತಾ ಬರಬೇಕಾಗುವುದು. ಆಗ ಭೂಮಿ ಕೊರೆದು ಸೀಳಿ ಹೋಗಬಹುದು. ಇಲ್ಲದ ಅಪಾಯಕ್ಕೆ ಕಾರಣ ಆಗಬಹುದು. ನನ್ನನ್ನು ತಡೆದು ನಿಲ್ಲಿಸುವ ಶಕ್ತಿ ಸಾಮಥ್ರ್ಯ ಪಾರ್ವತಿಪತಿಯಾದ ಪರಶಿವನೋರ್ವನಿಗೆ ಮಾತ್ರ ಇದೆ. ಅವನು ನನ್ನನ್ನು ತಡೆದಲ್ಲಿ ನಾನು ನಿಧಾನವಾಗಿ ಹರಿದುಬರುತ್ತಾ ನಿನ್ನ ಪಿತಾಮಹರಿಗೆ ಸದ್ಗತಿಯನ್ನು ನೀಡಬಲ್ಲೆ.” ಈಗ ಭಗೀರಥ ಪರಶಿವನನ್ನೇ ಕುರಿತು ಘೋರ ತಪಸ್ಸನ್ನಾಚರಿಸಿದ. ಶಿವನು ಪ್ರತ್ಯಕ್ಷನಾದ. ತನ್ನ ಭಕ್ತನ ಕೋರಿಕೆಯನ್ನು ಈಡೇರಿಸಲು ಸಿದ್ಧನಾದ. ಭಗೀರಥ ಕೂಡಲೇ ಗಂಗಾಮಾತೆಯನ್ನು ಭೂಲೋಕದಲ್ಲಿ ಇಳಿದುಬರಲು ಪ್ರಾರ್ಥಿಸಿದ. ಕೊಟ್ಟ ಮಾತಿನಂತೆ ಗಂಗೆ ಭೋರ್ಗರೆಯುತ್ತಾ ಭೂಮಿಯ ಮೇಲೆ ಧುಮುಕುತ್ತಿರುವಾಗ ಪರಶಿವನು ಅವಳನ್ನು ತಡೆದು ತನ್ನ ಜಟೆಯಲ್ಲಿ ಕಟ್ಟಿಕೊಂಡ. ಗಂಗೆ ಈಗ ನಿಧಾನವಾಗಿ ಹರಿಯತೊಡಗಿದಳು. ಭಗೀರಥನು ಮುಂದೆ ಮುಂದೆ ಸಾಗಿದ. ಗಂಗೆ ಅವನನ್ನೇ ಹಿಂಬಾಲಿಸುತ್ತಾ ಬಂದಳು. ದಾರಿಯಲ್ಲಿ ಜುಹ್ನು ಮಹರ್ಷಿಯ ಆಶ್ರಮ ಗಂಗೆಯ ಧಾರೆಗೆ ಅಡ್ಡ ಬಂತು. ಜುಹ್ನು ಮಹರ್ಷಿ ತನ್ನ ಆಶ್ರಮವನ್ನು ಕೊಚ್ಚಿಕೊಂಡು ಹೋಗಲಿರುವ ಗಂಗೆಯನ್ನು ಒಂದೇ ಆಪೋಶನ ರೂಪದಲ್ಲಿ ನುಂಗಿಬಿಟ್ಟ. ಭಗೀರಥ ಅವನನ್ನು ಪ್ರಾರ್ಥಿಸುತ್ತಾ, ತನ್ನ ದುಃಖದ ಕಥೆಯನ್ನು ಬಣ್ಣಿಸಿದ. ಭಗೀರಥನ ಇಂತಹ ಸಾಹಸದ ಪ್ರಯತ್ನವನ್ನು ಮೆಚ್ಚಿದ ಜುಹ್ನು ತನ್ನ ಕಿವಿಯ ಮೂಲಕ ಆಪೋಶನ ತೆಗೆದುಕೊಂಡ ಗಂಗೆಯನ್ನು ಹೊರಬಿಟ್ಟ. ಈ ಕಾರಣದಿಂದಲೇ ಗಂಗೆ ಜಾಹ್ನವಿ ಎಂದು ಕರೆಯಲ್ಪಟ್ಟಳು.

ಬಳಿಕ ಕಪಿಲಾಶ್ರಮದ ಕಡೆ ಹರಿದು ಬಂದಳು. ಭಸ್ಮದಲ್ಲಿ ಕಲೆತಳು. ಕೂಡಲೇ ನರಕದಲ್ಲಿದ್ದ ಸಗರಪುತ್ರರೆಲ್ಲರೂ ಸದ್ಗತಿ ಪಡೆದು, ಸ್ವರ್ಗ ಸೇರಿದರು. ಭಗೀರಥನ ಸಾಹಸದಿಂದ ಸುರನದಿಯಾದ ಗಂಗೆ ಭೂಲೋಕದಲ್ಲಿ ಹರಿದುಬಂದ ಕಾರಣ, ಈ ಪ್ರಯತ್ನವನ್ನು ಇಂದಿಗೂ ಭಗೀರಥ ಪ್ರಯತ್ನ ಎಂದೇ ಕರೆಯುತ್ತಾರೆ.